ಅದು ರಾಧೆಯ ಪ್ರೀತಿಯ ರೀತಿ. . .

ಅವಳು ಇಪ್ಪತ್ತೇಳನೇ ವಯಸ್ಸಿಗೆ ಅಕ್ಷರಶಃ ಶತಮಾನದ ಹಿಂದಿನ ಮುದುಕಿಯನ್ನು ಹೋಲುತ್ತಿದ್ದಳು. ನಾನು ಈ ಲೋಕದ ಹುಕುಂ ಪಾಲಿಸುವುದಕ್ಕಾಗಿ ಹೀಗೆ ಸೀರೆಯುಟ್ಟಿದ್ದೇನೆ, ನನ್ನ ತೋರುಗಂಬದ ಲಂಗಗಳು ಮನೆಯಲ್ಲಿ ಈಗಲೂ ಇವೆ ಎನ್ನುವುದನ್ನು ಹೇಳುವುದಕ್ಕಾಗಿ ತಿಣುಕಾಡುತ್ತಿದ್ದೇನೆ ಎನ್ನುವಂತೆ ಆಗಾಗ ಎದ್ದುರಿದ್ದ ನನ್ನನ್ನು ನೋಡುತ್ತಿದ್ದಳು. ಹಾಗೇ ನೋಡುವಾಗೆಲ್ಲ ಹೊಳಪವನ್ನ ಕ್ರಮೇಣವಾಗಿ ಕಳೆದುಕೊಂಡಿದ್ದ ಅವಳ ಕಣ್ಣುಗಳಿಗೆ ಅದೊಂದು ಹನಿ ಭಾರವಾಗಿತ್ತು ಎನ್ನುವಂತೆ ಹೊರಗೆ ತುಳುಕಿಬಿಡುತ್ತಿತ್ತು. ಹಾಗೆ ತುಳುಕಿದ ಕಣ್ಣಹನಿಗಳು ಅವಳ ಬೆಣಚು ಕಲ್ಲಿನಂತಹ ಕೆನ್ನೆಗಳಿಂದ ಸರಾಗವಾಗಿ ಹರಿದು ನೆಲವನ್ನು ಸ್ಪರ್ಶಿಸಿಬಿಡುತ್ತಿದ್ದವು.

ಸುಕ್ಕುಗಟ್ಟಿದ ಮುಖದಲ್ಲಿ ಅನಿರೀಕ್ಷಿತವಾಗಿ ಜೋಡಣೆಯಾದಂತೆ ಕಾಣುತ್ತಿದ್ದ ತುಟಿಗಳಿಂದ ನಗು ಎನ್ನುವುದು ಸಹಜವಾಗಿ ಹೊರಜಾರಿದರೂ, ಪ್ರಾಯಾಸದಿಂದ ನಗುತ್ತಿದ್ದಾಳೆ ಎನ್ನುವ ಅನುಮಾನವನ್ನ ಹುಟ್ಟು ಹಾಕಿಬಿಡುತ್ತಿತ್ತು. ಯಾವತ್ತಿಗೂ ಅರಳುವುದು ಸಾಧ್ಯವಿಲ್ಲದೆ ಮೌನವಾಗಿದ್ದ ಹೆಸರಿಲ್ಲದ ಒಂದಿಷ್ಟು ಹೂಗಳು ಅವಳ ಮಾಸಿದ ಸೀರೆಯ ತುಂಬೆಲ್ಲಾ ಹರಡಿಕೊಂಡಿದ್ದವು. ಈ ಎಲ್ಲದರ ನಡುವೆಯೇ ಎಳೆಯ ದೇವರಂತಹ ಅವಳ ಮೂರು ವರ್ಷದ ಮಗಳು ಚಿತ್ತುಕಾಟಿನ ಹಾಳೆಯಂತಹ ಹಳೆಯ ಮನೆಯ ಅಂಗಳದಲ್ಲಿ ಆಡುತ್ತಿದ್ದರೆ, ಹೊರಗೆ ಅವಳ ಅಮ್ಮ ಅಡಿಕೆಯನ್ನು ಕಲ್ಲಿನಿಂದ ಜೋರಾಗಿ ಕುಟ್ಟುತ್ತ ಚೂರುಗೊಳಿಸುತ್ತಿದ್ದಳು.

***

ದೊಡ್ಡ ಹೆಂಗಸಿನಂತೆ ತೋರುತ್ತಿರುವ ಅವಳು ಮೂರೇ ವರ್ಷಗಳ ಹಿಂದೆ ಮಡಿಕೇರಿಯ ಕಾಫಿತೋಟದಲ್ಲಿ ಓಡಾಡುತ್ತಿರುವಾಗ ನೆಲ್ಲುಗಳನ್ನು ಹಾಯುವ ಹಕ್ಕಿಯಂತೆ ಕಾಣುತ್ತಿದ್ದವಳು. ರೆಕ್ಕೆಗಳಿಲ್ಲ ಎನ್ನುವ ಕಾರಣಕ್ಕಷ್ಟೇ ಹೀಗೆ ಕಾಲುಗಳನ್ನು ಬಳಸಿ ನಡೆಯುತ್ತಿದ್ದೇನೆ ಎನ್ನುವಂತೆ ತೋರುತ್ತಿದ್ದ ಹುಡುಗಿಯಾಗಿದ್ದವಳು. ಅವಳು  ಮುದ್ದುಮುದ್ದಾಗಿ ಮಾತನಾಡುವುದನ್ನು ನೋಡಿದ ಕಾಫಿತೋಟದ ಕೂಲಿಯಾಳುಗಳು ಸೋಜಿಗಪಡುತ್ತ ನಗುತ್ತಿದ್ದರೆ, ಅವಳ ಅಪ್ಪ, ಮಗಳಿಗೆ ವಯಸ್ಸಾಗಿದೆ ಎನ್ನುವುದನ್ನು ತನಗೆ ತಾನೇ ಆರೋಪಿಸಿಕೊಂಡುಬಿಟ್ಟಿದ್ದನು. ಯಾರಿಗೂ ಸುಳಿವು ನೀಡದೆ ಮಗಳಿಗೆ ಮದುವೆ ಮಾಡುವುದಕ್ಕಾಗಿ ಗಂಡಿಗಾಗಿ ತಲಾಶ್ ಆರಂಭಿಸಿದ್ದನು.

ಈ ಹುಡುಗಿ ಎಷ್ಟರವಳು, ಅದೆಷ್ಟು ಮುದ್ದುಮುದ್ದಾಗಿ ಮಾತನಾಡುತ್ತಾಳೆ ಎನ್ನುವಂತೆ ಅವಳ ಮಾತುಗಳನ್ನು ಕೇಳುವಾಗ ಖುಷಿಗೊಳ್ಳುತ್ತಿದ್ದ ಕಾಫಿತೋಟದ ಕೂಲಿಯ ಆಳುಗಳು, ಅವಳ ಮದುವೆಯ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ವಿಚಿತ್ರವಾದ ಗೌರವಸೂಚಕ ನಡೆಗಳನ್ನು ಪ್ರದರ್ಶಿಸುತ್ತ ಅಷ್ಟೇ ವಿಚಿತ್ರವಾದ ಪದ ಪ್ರಯೋಗಗಳಿಗೆ ಇಳಿದುಬಿಟ್ಟಿದ್ದರು. ಮದುವೆ ಗೊತ್ತಾಗುವ ಕಡೆಯ ರಾತ್ರಿಯವರೆಗೂ ಮುದ್ದುಮುದ್ದಾಗಿ ಮಾತನಾಡುವ ಹುಡುಗಿಯಾಗೇ ಇದ್ದವಳ ಮುಖದಲ್ಲಿ, ಅದೊಂದು ರಾತ್ರಿ ಕರಗಿ ಬೆಳಗಾಗುತ್ತಿದ್ದಂತೆ ಹೆಂಗಸಾಗಿ ರೂಪಾಂತರವಾಗಿದ್ದಳು.

ಅನುದಿನವೂ ಕುಡಿಯುತ್ತಾನೆ ಎನ್ನುವ ಕಾರಣಕ್ಕೆ ಕಾಫಿತೋಟದ ಕೆಲಸ ಕಳೆದುಕೊಂಡಿದ್ದ ಹುಡುಗಿಯ ಅಪ್ಪ, ಕಳೆದ ಐದಾರು ವರ್ಷಗಳಿಂದ ಮಡಿಕೇರಿಯ ಬೀದಿಗಳಲ್ಲಿ ಅವನ ಪಾಡಿಗೆ ಅವನು ಓಡಾಡಿಕೊಂಡಿದ್ದ. ಆದರೆ ಅದೊಂದು ದಿನ ಯಾವುದೋ ಕಣ್ಣುಕಟ್ಟಿಗೆ ಒಳಗಾದವನಂತೆ, ಮನೆಗೆ ಬಂದವನು ಹೆಂಡತಿಯೊಂದಿಗೆ ಕಾಫಿತೋಟಕ್ಕೆ ಹೊರಟುಬಿಟ್ಟಿದ್ದ. ಮನೆಯಿಂದ ನಡೆಯುವಾಗ ಕಲ್ಲುಹಾಸಿನ ರಸ್ತೆಯುದ್ದಕ್ಕೂ ಮೌನವನ್ನ ಬೆನ್ನಿಗೆ ಕಟ್ಟಿಕೊಂಡವನಂತೆ ಹೆಜ್ಜೆಹಾಕಿದವನನ್ನು ನಿಲ್ಲಿಸಿ ಏನೊಂದನ್ನು ಕೇಳುವುದು ಸಾಧ್ಯವಾಗದೇ ಹೆಂಡತಿಯೂ ಅವನಷ್ಟೇ ಮೌನವನ್ನು ಅನುಸರಿಸಿ ಹೆಜ್ಜೆಹಾಕಿದ್ದಳು. ನೋಡುನೋಡುತ್ತಿದ್ದಂತೆ ಕಾಫಿತೋಟದವರ ಎದುರು ಕೈ ಮುಗಿದು ನಿಂತುಕೊಂಡಿದ್ದ ಅವನು, ಅದೇ ಮೊದಲು ಎನ್ನುವಂತೆ ಬೇಡುವ ದನಿಯಲ್ಲಿ ಮಾತನಾಡಿದ್ದ. ಗಂಡನ ಈ ಯಾವ ಚಹರೆಗಳ ಪರಿಚಯವೂ ಇರದ ಅವಳು, ಕಾಫಿತೋಟದವರು ಏನಾದರೂ ಕೇಳಿದರೆ ನನಗೆ ಏನು ಗೊತ್ತಿಲ್ಲ ಎಂದು ಸೀದಾ ಅವರ ಕಾಲಿಗೆ ಬೀಳುವುದಕ್ಕೆ ಒಳಗೆ ಅಣಿಯಾಗಿದ್ದಳು.

ಐದಾರು ವರ್ಷಗಳ ನಂತರವೂ ಅದೇ ಖಾಕಿಬಣ್ಣದ ಚಡ್ಡಿಯನ್ನು ತೊಟ್ಟುಬಂದಿದ್ದ ಅವನನ್ನು, ಈ ಹಿಂದಿನ ಧಿಮಾಕನ್ನು ತೋಟದ ಗೇಟಿನ ಬಳಿಯೇ ಬಿಟ್ಟುಬಂದವನಂತೆ ಕೈ ಮುಗಿದು ನಿಂತಿದ್ದ ಕಾಫಿತೋಟದ ಮಾಲೀಕರಾಗಿದ್ದ ಕೊಡವರಿಗೂ ಅನ್ಯವಾಗೇ ಇತ್ತು. ಅವನನ್ನು  ಎದುರು ನಿಲ್ಲಿಸಿಕೊಂಡು ಕೇಳುವ ಯಾವ ಪ್ರಶ್ನೆಯೂ ಇರದೇ ಖಾಲಿಯಾಗಿಸಿದ ಮುಖದಲ್ಲಿ ಅವನನ್ನೇ ನೋಡುತ್ತಿರುವಾಗ, ಇವನೇ ಮಾತುಗಳನ್ನು ಮೊದಲುಮಾಡಿದ್ದ.

“ನೀವು ಕಾಫಿ ಕೊಯ್ಯುವ ಕೆಲಸ ಕೊಟ್ಟರೆ ಮಾಡುತ್ತೇನೆ, ಮೊದಲಿನಂತೆ ಕುಡಿಯುವುದಿಲ್ಲ, ಮಗಳ ಮದುವೆ ಮಾಡಬೇಕು” ಎಂದು ವಿನಂತಿಸಿಕೊಂಡಿದ್ದ. ಅವನ ಮಾತುಗಳು ಕಾಫಿತೋಟದ ಮಾಲೀಕರಿಗಿಂತ, ಅವನ ಹೆಂಡತಿಗೆ ಭ್ರಮೆ ಎನಿಸಿಹೋಗಿದ್ದವು. ಮದುವೆಯಾದ ಮೊದಲಿನಿಂದಲೂ ಮಡಿಕೇರಿಯ ವೈನ್‍ಶಾಪ್‍ಗೆ ಬರುವ ಅಷ್ಟೂ ಹೆಂಡವನ್ನು ಕುಡಿಯುತ್ತೇನೆ ಎನ್ನುವಂತ ಅಸಂಗತ ಮಾತುಗಳನ್ನು ಉದುರಿಸುತ್ತಾ, ಮಡಿಕೇರಿಯ ಪೇಟೆಯ ಬೀದಿಯಲ್ಲಿ ಓಡಾಡುತ್ತಿದ್ದವನು ಐದಾರು ವರ್ಷಗಳ ನಂತರ ಹೀಗೆ ಮುಖತಗ್ಗಿಸಿ ನಿಂತಿದ್ದು, ಅವನನ್ನು ಕ್ಷಮಿಸುವುದಕ್ಕೆ ಸಾಕು ಎನ್ನುವಂತೆ ಕಾಫಿತೋಟದವರೂ ಮರುಗಿ ಹೊರಟುಹೋಗಿದ್ದರು.

ಮಗಳ ಸ್ಲೇಟಿನಂತಹ ಕಪ್ಪುಬೆನ್ನಿನ ಮೇಲೆ ಬಾಸುಂಡೆಗಳು ಮೂಡಿಹೋಗುವಂತೆ ಬಡಿಯುತ್ತಿದ್ದವನು, ಇದೀಗ ಶಾಪವಿಮೋಚನೆಯಾದ ಯಕ್ಷಿಣಿಯಂತೆ ಮಗಳ ಮದುವೆ ವಿಚಾರವನ್ನ ಮಾತನಾಡಿದ್ದು ಅಶ್ಚರ್ಯವಾಗಿ ಅವನ ಹೆಂಡತಿಯೂ ಕ್ಷಮಿಸುವ ಮನಸ್ಸು ಮಾಡಿದ್ದಳು. ಅದುವರೆಗೂ ಅಸಂಖ್ಯಾತ ಶಾಪಗಳಿಂದ ಅವನನ್ನು, ಅವನ ಕುಡಿತವನ್ನು ಶಪಿಸಿಕೊಂಡು ಗೆಲ್ಲು ಕೊಚ್ಚುತ್ತಾ, ಕಾಫಿತೋಟದಲ್ಲಿ ಬರಿಗಾಲಿನಲ್ಲಿ ಓಡಾಡುತ್ತಿದ್ದವಳು ಮಗಳ ಮದುವೆಯಾದರೆ ಸಾಕು ಎನ್ನುವ ನಿಶ್ಚಿತದ ಬೀದಿಗಂಬಕ್ಕೆ ಒರಗಿಬಿಟ್ಟಿದ್ದಳು.

ಮನೆಯ ಋತುವೇ ಬದಲಾಗಿಹೋಗಿತ್ತು. ಕನ್ನಡವನ್ನ ಸ್ಪಷ್ಟವಾಗಿ ಓದುವಷ್ಟು ಮಾತ್ರ ಅಕ್ಷರ ಗಳಿಸಿಕೊಂಡಿದ್ದ ಮಗಳು ಮದುವೆಗೆ ತಯಾರಾಗಿ ನಿಂತಿದ್ದಳು. ಕಾಫಿತೋಟಕ್ಕೆ ಹೋಗುವುದನ್ನೇ ನಿಲ್ಲಿಸಿದ್ದ ಅವಳು ಅಪ್ಪನ ಬದಲಾವಣೆಗೆ ಕಾರಣವನ್ನು ಹುಡುಕುವವಳಂತೆ ತೋರುತ್ತಿದ್ದಳು. ಮಧ್ಯಾಹ್ನದವರೆಗೂ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಅಪ್ಪ ಸಂಜೆಯ ಮೇಲೆ ಅದು ಎಲ್ಲಿಯೋ ಹೋಗಿಬರುವವನಂತೆ ರಾತ್ರಿಯಾದರೂ ಮನೆ ಸೇರುತ್ತಿರಲಿಲ್ಲ.

ದೂರದ ಊರಿನ ಸಂಬಂಧಿಗಳು, ಮಗ್ಗಲ ಕಾಫಿತೋಟದಲ್ಲಿ ಕೂಲಿ ಮಾಡುವ ಅವರದೇ ಕುಲದವರ ಜತೆ ಸದಾಕಾಲವೂ ಮಗಳ ಮದುವೆ ಹಾಗೂ ಗಂಡಿನ ವಿಚಾರವನ್ನೇ ಮಾತನಾಡುತ್ತಿದ್ದ. ಅವನ ಮಾತುಗಳನ್ನು ಕೇಳಿಸಿಕೊಂಡಿದ್ದ ಯಾರಾದರೂ ನಿನ್ನ ಮಗಳನ್ನು ಮದುವೆಯಾವುದಕ್ಕೆ ಯೋಗ್ಯ ಹುಡುಗನಿದ್ದಾನೆ ಎಂದು ಸೂಚಿಸಿದರೆ, ಅವನೇ ಖುದ್ದು ಹೋಗಿಬಿಡುತ್ತಿದ್ದ. ಹುಡುಗನ ಚಾರಿತ್ರ್ಯವನ್ನು ಜರಡಿಹಿಡಿದು ಊರಿಗೆ ಬರುತ್ತಿದ್ದ.

ಹೀಗೆ ಹುಡುಕುತ್ತಾ, ಸವೆಯುತ್ತ ಜರಡಿಯ ಕಾರ್ಯ ಸರಿಯಾಗಿ ಒಂದು ವರ್ಷದ ನಂತರ ಅಂತ್ಯವಾಗಿತ್ತು. ಅವನ ಹಳೆಯ ವೈನ್‍ಶಾಪ್ ಸಹಪಾಠಿಯೊಬ್ಬರು ಬೈಲುಕುಪ್ಪೆಯ ಸೀಮೆಯ ಹುಡುಗನನ್ನು  ಸೂಚಿಸಿದ್ದರು. ಆ ಹುಡುಗ ದುಡಿಯದಿದ್ದರೂ, ಕುಡಿಯುವುದಿಲ್ಲ ಎನ್ನುವ ಒಂದೇ ಕಾರಣಕ್ಕೆ ಒಪ್ಪಿಕೊಂಡಿದ್ದ. ಹುಡುಗ ನಮ್ಮ  ಕುಲದಷ್ಟು ಮೇಲಿನವನಲ್ಲ ಎನ್ನುವ ಅನವಶ್ಯಕ ಮಾತನ್ನು ಅವನೇ ಮೊದಲು ಮಾಡಿ, ಅದಕ್ಕೆ ಯಾರೂ ಪ್ರತಿಕ್ರಿಯಿಸಿದ್ದಾಗ ಅನಿವಾರ್ಯವಾಗಿ ಅವನೇ ಮಾತುಮುಗಿಸಿ ಮನೆಗೆ ಬಂದಿದ್ದ.

ಹುಡುಗಿ ಮುದ್ದುಮುದ್ದಾಗಿ ಮಾತನಾಡುತ್ತ ಕಾಫಿತೋಟದಲ್ಲಿ ಕಾಫಿಬೀಜವನ್ನ ಕೊಯ್ಯುವಾಗ, ಕೂಲಿಯಾಳುಗಳ ಜತೆ ಓಡಾಡಿಕೊಂಡಿದ್ದ ದಿನಗಳನ್ನು ನೆನಪಿಸಿಕೊಂಡಿದ್ದ ಕಾಫಿತೋಟದವರು ಮುದ್ದು ಹುಡುಗಿಗಾಗಿ ಇಪ್ಪತ್ತು ಸಾವಿರ ಹಣವನ್ನು ಕೊಟ್ಟು ಮದುವೆಗೆ ಬರದೆಯೂ ಹರಸಿದ್ದರಂತೆ.

ಕಾಫಿತೋಟದವರು ಇಪ್ಪತ್ತು ಸಾವಿರ ಕೊಟ್ಟಿದ್ದಾರೆ ಎನ್ನುವ ಠೀವಿಯಲ್ಲಿ ಮದುವೆಯ ದಿನ ತನ್ನ ಖಾಕಿಚಡ್ಡಿ ಕಳಚಿಟ್ಟಿದ್ದ ಅವನು, ಬಿಳಿಯ ಪಂಚೆಯನ್ನುಟ್ಟು ಮದುವೆಗೆ ಬಂದಿದ್ದ ಮೂರು ಮತ್ತೊಂದು ಜನರ ಕೈ ಕುಲುಕುತ್ತಾ ಸಂಭ್ರಮಿಸಿದ್ದನು. ಕಾಫಿತೋಟದ ಬಿಸಿಲಿನಲ್ಲಿ ಮಸುಕಾಗದ ಹೂವಿನಂತೆ ಅಲೆಯುತ್ತಿದ್ದ ಹುಡುಗಿ ಅದುವರೆಗೂ ಕೇಳಲು ಮಾತ್ರ ಸಾಧ್ಯವಾಗಿದ್ದ ಅನೂಹ್ಯ ಜಗತ್ತಿಗೆ ಒಳಪಡುತ್ತಿದ್ದೇನೆ ಎನ್ನುವಂತೆ ಮದುವೆಯಾಗಿದ್ದಳು.
ಅವಳನ್ನು ಮದುವೆಯಾಗಿದ್ದ ಬೈಲುಕುಪ್ಪೆಯ ಆ ಹುಡುಗ ಮದುವೆಯ ನಂತರ ಮಡಿಕೇರಿಯಲ್ಲೇ ಕಾಫಿತೋಟದ ಕೆಲಸ ಹಿಡಿಯಲು ಪ್ರಯತ್ನಿಸಿ, ಕಡೆಗೆ ಸೋಮವಾರಪೇಟೆಯಲ್ಲಿ ಯಾವುದೋ ಮತ್ತೊಂದು ಕೆಲಸಕ್ಕೆ ಸೇರಿಕೊಂಡಿದ್ದ. ಹುಡುಗ ಸಿಕ್ಕಿದ್ದ ಕೆಲಸದಲ್ಲೇ ಉಳಿದುಹೋಗಿದ್ದ.

***

ಕನಸಿನಂತೆ ನಡೆದುಹೋದ ಈ ಎಲ್ಲವೂ ಈಗ ಬದಲಾಗಿವೆ. ಚಿತ್ರವೊಂದಕ್ಕೆ ಬಣ್ಣ ಬಳಿಯುವಾಗ ಹದತಪ್ಪಿಹೋಗಿ ಅಸಲಿರೂಪ ಕಳೆದುಕೊಂಡ ವರ್ಣಚಿತ್ರದ ಗೊಂಬೆಗಳಂತೆ ಅವರೆಲ್ಲರೂ ವಿಚಿತ್ರವಾಗಿ ನಿಂತುಬಿಟ್ಟಿದ್ದಾರೆ. ಮುದ್ದುಮುದ್ದು ಮಾತನಾಡುತ್ತಿದ್ದ ಹುಡುಗಿ ಈಗ ಅಪರೂಪಕ್ಕೆ ಮಾತನಾಡುತ್ತ, ತನ್ನ ದೇವರಂತಹ ಮೂರು ವರ್ಷದ ಮಗಳನ್ನು ಸೊಂಟದಲ್ಲಿ ಕೂರಿಸಿಕೊಂಡು ಕಾಫಿತೋಟಕ್ಕೆ ಹೋಗಿಬರುತ್ತಾಳೆ. ಕಾಫಿತೋಟದವರು ಮೈ ಭಾರವಾಗದ ಪೆಪ್ಪರ್ ಕೆಲಸವನ್ನ ಮಾತ್ರ ಮಾಡಿಸುತ್ತಾ ಉಳಿಸಿಕೊಂಡಿದ್ದಾರೆ. ಖಾಕಿ ಚಡ್ಡಿಯ ಅಪ್ಪ ಈಗ ಮೊದಲಿನಷ್ಟೇ ಕುಡಿಯುತ್ತಾನೆ.

ಮದುವೆಯಾಗಿ ಕೆಲವೇ ದಿನಗಳಲ್ಲಿ ಎಲ್ಲವೂ ಸರಿಯಾಗಿದೆ ಎನ್ನುವ ವರ್ತಮಾನಗಳು ಕೇಳಿಬರಲು ಆರಂಭವಾಗಿದ್ದವು. ಮಡಿಕೇರಿಯಲ್ಲಿದ್ದ ಈ ಇಬ್ಬರು ಮಗಳು ಒಂದು ಮನೆಯ ಗರತಿಯಾದಳು ಎನ್ನುವಂತೆ ಉಳಿದುಹೋಗಿರುವಾಗಲೇ ಎಲ್ಲವೂ ಬದಲಾಗಿಬಿಟ್ಟಿತ್ತು. ಹುಡುಗ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಬೆಲೆಬಾಳುವ ಮೆಷಿನ್ ಒಂದು ಕಳ್ಳತನವಾಗಿ ನಾಲ್ಕೈದು ಜನರು ನಾಪತ್ತೆಯಾಗಿದ್ದರು. ಕಳ್ಳತನವನ್ನ ಮಾಡಿ ನಾಪತ್ತೆಯಾದವರನ್ನು ಹುಡುಕುತ್ತಿರುವಾಗಲೇ ಸೋಮವಾರಪೇಟೆಯಲ್ಲಿ ಸಾಮಾನ್ಯನಂತೆ ಉಳಿದುಕೊಂಡಿದ್ದ ಇವನ ಮೇಲೂ ಅನುಮಾನವನ್ನ ವ್ಯಕ್ತಪಡಿಸಿದ್ದರಂತೆ. ಬೈಲುಕುಪ್ಪೆಯಿಂದ ಅದಾಗ ತಾನೇ ಕೆಲಸಕ್ಕೆ ಏಳೆಂಟು ತಿಂಗಳಾಗಿತ್ತು. ಅಷ್ಟು ಪರಿಚಯವಲ್ಲದ ಕಾರಣಕ್ಕೆ ಅವನನ್ನು ಐದಾರು ಪ್ರಶ್ನೆಗಳಿಂದ ಎದುರಿಸಿದ್ದರು.

ವಿಷಯ ತಾರಕ್ಕೇರುತ್ತಿದ್ದಂತೆ ಪೊಲೀಸರ ಭಯಕ್ಕೆ ಹುಡುಗ ಮನೆಯಲ್ಲಿ ನೇಣುಹಾಕಿಕೊಂಡಿದ್ದ. ಯಾವುದನ್ನೂ ತಿಳಿಯದ ಮುದ್ದುಹುಡುಗಿಗೆ ಅಳುವುದಕ್ಕೂ ಸಾಧ್ಯವಾಗದೇ, ಕಿರುಚುವುದಕ್ಕೂ ಸಾಧ್ಯವಾಗದೇ ಕೂತುಬಿಟ್ಟಿದ್ದಳು. ಪೊಲೀಸು, ಕೇಸು, ಮೆಷಿನ್, ಕಳ್ಳತನ ಎನ್ನುವ ಮಾತುಗಳೇ ಪದೇ ಪದೇ ಉಚ್ಛಾರವಾಗಿ ಎಲ್ಲವೂ ಅಂತ್ಯವಾಗಿತ್ತು. ಮಡಿಕೇರಿಯ ಕಾಫಿತೋಟದವರೇ ಎಲ್ಲವನ್ನೂ ಖುಲಾಸೆಗೊಳಿಸಿ ಹುಡುಗಿಯನ್ನು ಮೊದಲಿನಂತೆ ಅವಳ ಮನೆಯವರೊಂದಿಗೆ ಇರುವಂತೆ ಅಣಿಗೊಳಿಸಿದ್ದರು.

ಅಪ್ಪ ಏನನ್ನೂ ಹೇಳದೆ ಕುಡಿದು ಬಂದಾಗ ಅವನ ಹೆಂಡತಿ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲವಂತೆ. ಅವನು ಯಾರೂ ಹೇಳಿದರೂ ಅಷ್ಟೇ ಎನ್ನುವಂತೆ ಕಾಫಿತೋಟದ ಕೆಲಸ ಬಿಟ್ಟು ಮಡಿಕೇರಿಯ ಪೇಟೆ ಬೀದಿಯಲ್ಲಿ ಅಲೆಯಲು ಮರಳಿದ್ದ. ಸ್ಥಿತಿಯನ್ನೇ ಅವಲೋಕಿಸಿದ್ದ ಕಾಫಿತೋಟದ ಮಾಲೀಕರು ಅಮ್ಮಮಗಳಿಗೆ ಕೂಲಿ ಹೆಚ್ಚಿಸಿದ್ದರು. ಬೈಲುಕುಪ್ಪೆಯ ಹುಡುಗ ಸಾಯುವಾಗ ಅವನ ಹೆಂಡತಿಯಾಗಿದ್ದ ಮುದ್ದು ಹುಡುಗಿ ಒಡಲಿನಲ್ಲಿ ಮತ್ತೊಂದು ಜೀವವನ್ನ ಹಿಡಿದಿಟ್ಟುಕೊಂಡಿದ್ದಳು.

ತಿಂಗಳು ತುಂಬಿದ್ದ ನಂತರ, ಅವಳ ಅಮ್ಮನೇ ನಿಂತು ಹೆರಿಗೆ ಮಾಡಿಸಿದ್ದಳು. ಮಗುವನ್ನು ನೋಡುತ್ತಾ, ಲಾಲಿಸಿ ಮಲಗಿಸುತ್ತಿದ್ದ ಅವಳ ಅಮ್ಮ ಕಾಫಿತೋಟಕ್ಕೆ ಹೋಗಿದ್ದ ಅದೊಂದು ಮಧ್ಯಾಹ್ನ, ಮಗು ನೆಲದಹಾಸಿನ ಮೇಲೆ ಅಳುತ್ತಾ ಮಲಗಿತ್ತು. ಅವಳದೇ ಮಗುವಿನ ಅಳು, ದಿಕ್ಕೆಡಿಸಿದಂತಾಗಿ ಕಡೆಗೆ ದಾರಿ ಕಾಣದೇ ಬಾವಿಗೆ ಎಸೆದು ಬರಿಗಾಲಿನಲ್ಲಿ ಹೋಗಿದ್ದಂತೆ. ಆದರೆ ಅದು ಯಾರದೋ ದೆಸೆಯಿಂದ ಸಾಧ್ಯವಾಗಿರಲಿಲ್ಲ.

ಸಾವಿನಿಂದ ಉಳಿದುಕೊಂಡ ಅವಳ ಮೂರು ವರ್ಷದ ಮಗಳು ಈಗ ಬೊಂಬಾಯ್ ಮಿಠಾಯ್ ಬಣ್ಣದ ಫ್ರಾಕ್ ತೊಟ್ಟು ಎಲ್ಲರ ತೊಡೆಯ ಮೇಲೂ ತುಸುಹೊತ್ತು ಉಳಿದು ನೆಲದ ಉರುಳಾಡುತ್ತ ಸಂಭ್ರಮಿಸುತ್ತದೆ. ಮಗುವನ್ನು ಎಳೆದು ಮುದ್ದಿಸಿದರೆ ಕಣ್ಣುಗಳನ್ನು ಮುಚ್ಚುತ್ತ ಥೇಟು ದೇವರಂತೆ ನಿರುಕಿಸುತ್ತದೆ. ತೋರುಗಂಭದ ಲಂಗಗಳನ್ನು ತೊಡುವ ಆ ಮುದ್ದುಹುಡುಗಿ ಇದೀಗ ಬಲವಂತವಾಗಿ ಹೆಂಗಸಾಗಿದ್ದಾಳೆ ಎನಿಸುತ್ತದೆ.

ಸಾವಿರಾರು ಸುಕ್ಕಿನ ಗೆರೆಗಳಿಂದ ಆವೃತವಾಗಿರುವ ಒಂದು ಕಾಲದ ಮುದ್ದುಹುಡುಗಿ ಇನ್ನೂ ಎಳೆಯ ಹುಡುಗಿ ಎನ್ನುವುದನ್ನು ಒಪ್ಪಿಸುವುದಕ್ಕೆ ವಿಜ್ಞಾನದ ನೆರವಿಗೆ ಬೀಳಬೇಕಾಗುತ್ತದೆ. ಈ ಎಲ್ಲವನ್ನೂ ಕೇಳಿಯೂ ಕೇಳದನಂತೆ ನಟಿಸುತ್ತಾ, ಅವಳ ಹಳೆಯ ದಿನಗಳನ್ನು ನೆನೆಯುವುಕ್ಕೆ ಪ್ರಯತ್ನಿಸಿಯೂ ನಾನು ಸೋಲುತ್ತೇನೆ. ಹಾಗೇ ಮರಳಿ ಸೋಲುವಾಗ ಪ್ರತಿಕ್ರಿಯಿಸಲಾರದೆ ಅವರನ್ನೇ ಮಾತಿಗೆ ಬಿಡುಬೇಕು ಎನಿಸುತ್ತದೆ.

ಬೆಂಗಳೂರು ಬಿಟ್ಟು ಸುಮ್ಮನೇ ಊರೂರು ತಿರುಗುವ, ಎದುರಾದರವ ಜತೆ ಮಾತಿಗಿಳಿದು, ಅವರ ಬದುಕಿಗಿಳಿಯುವ ಖಯಾಲಿಯನ್ನು ಕ್ರಮೇಣವಾಗಿಯಾದರೂ ಬಿಡಬೇಕು ಎನಿಸುತ್ತದೆ. ಬಾವಿಯಲ್ಲಿ ಎಸೆದು ಎಂದೋ ನೀರು ಪಾಲಾಗಬೇಕಿದ್ದ ದೇವರಂತಹ ಅವಳ ಮೂರು ವರ್ಷದ ಮಗಳು ಇದೀಗ ಪುಟ್ಟಫ್ರಾಕ್ ತೊಟ್ಟು ಮನೆಯಲ್ಲಿ ಅಲೆಯುತ್ತಿರುವುದಂತೆ ಕನಸಾಗುತ್ತದೆ. . .

‍ಲೇಖಕರು Avadhi

January 21, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: