ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿಯನ್ನು ಹುಡುಕುತ್ತಾ : ಮೂಡ್ಗೆರೆ ಮೇಲ್ ಮಂಜು!

ಭಾಗ ೪

(ಇಲ್ಲಿಯವರೆಗೆ)

ಬೆಳಿಗ್ಗೆ ಎದ್ದಾಗ ೮ ಗಂಟೆ. ಚಳಿ ಮೈಕೊರೆಯುತ್ತಿತ್ತು. ನಾವಿದ್ದ ರೂಮಿನ ಕಿಟಕಿ ತೆಗೆದು ತೇಜಸ್ವಿಯವರ ಮೂಡಿಗೆರೆಯ ಮೊದಲ ದರ್ಶನ ಪಡೆದುಕೊಂಡೆ. ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ, ಮೈತುಂಬಾ ಮಂಜು ಹೊದ್ದು ಮಲಗಿದ್ದ ಮೂಡಿಗೆರೆ ಯಾವುದೋ ಭ್ರಮಾಲೋಕದ ಊರೊಂದರಂತೆ ನನಗೆ ಭಾಸವಾಯಿತು. ಅಷ್ಟಕ್ಕೆ ತೃಪ್ತಿಯಾಗದೇ ಕೋಣೆಯಿಂದ ಹೊರಬಿದ್ದು ಹೋಟೆಲಿನ ಮುಂಬಾಗದ ರಸ್ತೆಯಲ್ಲಿ ನಿಂತು ಮೂಡಿಗೆರೆಯ ಚೆಲುವನ್ನು ಕಣ್ತುಂಬಿಕೊಳ್ಳತೊಡಗಿದೆ. ಚಿಕ್ಕಮಗಳೂರಿನಿಂದ ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿಯ ಮಾರ್ಗವಾಗಿ ಮಂಗಳೂರಿಗೆ ಹೋಗುವ ಕೆ.ಎಂ ರಸ್ತೆ, ಜೋರಾಗಿ ಕೊಡವಿ ನೀಟಾಗಿ ಹಾಸಿದ ಕರಿ ಕಂಬಳಿಯಂತೆ ನನ್ನೆದುರಿಗೆ ತಣ್ಣಗೆ ಮಲಗಿತ್ತು. ಮೂಡಿಗೆರೆಯ ಪಾಲಿನ ಆಕಾಶದ ತುಂಬೆಲ್ಲಾ ದಟ್ಟೈಸಿದ್ದ ಮೋಡಗಳು ಸೂರ್ಯನ ಕಿರಣಗಳು ಮೂಡಿಗೆರೆಯ ಮೇಲೆ ಬೀಳದಂತೆ ಹಿಡಿದಿಟ್ಟಿದ್ದವು. ಸುತ್ತಲೂ ಒಮ್ಮೆ ಕಣ್ಣಾಡಿಸಿದೆ.

ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ, ಮೋಡ ಮುಸುಕಿ, ಮಂಜು ಕವಿಸಿಕೊಂಡು ಕುಳಿತಿದ್ದ ಮೂಡಿಗೆರೆ, ಕನ್ಯೆ ನೋಡಲು ಬಂದ ಸುರಸುಂದರಾಂಗ ವರನ ಮುಂದೆ ನಾಚಿ ನೀರಾಗಿ ತಲೆತಗ್ಗಿಸಿ, ಮುದುಡಿ ಕುಳಿತ ಸಹಜ ಸುಂದರಿ ಹೆಣ್ಣೊಬ್ಬಳಂತೆ ನನಗೆ ಭಾಸವಾಗತೊಡಗಿತು. ಹಾಲಿನವರು, ಪೇಪರ್ ಹಾಕುವ ಹುಡುಗರು, ಅಲ್ಲೇ ಒಂದು ಮೂಲೆಯಲ್ಲಿ ಗಾಡಿಯ ಮೇಲೆ ಬಿಸಿಬಿಸಿ ಟೀ ಕಾಯಿಸುತ್ತ ಗಿರಾಕಿಗಳನ್ನು ಕಾಯುತ್ತಿದ್ದ ಚಹಾದವನು, ಬಸ್ಸುಗಳ ಡ್ರೈವರ್ ಕಂಡಕ್ಟರುಗಳು, ಅತುರಾತುರದಲ್ಲಿ ಶಾಲೆಗೆ ಹೊರಟ ಮಕ್ಕಳು, ಜಗತ್ತಿಗೆಲ್ಲ ಹಂಚಿದರೂ ಉಳಿಯುವಷ್ಟು ಉತ್ಸಾಹ, ಆತ್ಮವಿಶ್ವಾಸ, ಲವಲವಿಕೆ ಹೊತ್ತು ತಮ್ಮ ತಮ್ಮಲೇ ಹಾಸ್ಯ ಚಟಾಕಿ ಹಾರಿಸುತ್ತಾ ಗುಂಪಾಗಿ ಸಾಗುತ್ತಿದ್ದ ಕಾಲೇಜು ತರುಣ ತರುಣಿಯರು, ಬೆಳಗೆದ್ದು ಏನುಮಾಡಬೇಕೆಂದು ತೋಚದೇ ಆಕ್ಷೇಪಾರ್ಹ ಹಾಗು ಅತಿಸೂಕ್ಷ್ಮ ವಲಯವೆಂದು ಗುರುತಿಸಬಹುದಾದ ಜಾಗಗಳನ್ನು ಪರಪರ ಕೆರೆದುಕೊಂಡು ಸುಖ ಅನುಭವಿಸುತ್ತಾ, ಹೋಗಿ ಬರುವವರನ್ನು ನಿರುದ್ದೇಶಪೂರ್ವಕವಾಗಿ ನೋಡುತ್ತಾ ನಿಂತ ಆದರೆ ವೇಸ್ಟ್ ಬಾಡಿಗಳು ಎಂದರೆ ತಕ್ಷಣ ಕೋಪಿಸಿಕೊಳ್ಳುವ ಕೆಲವರು, ಹೀಗೆ ಮೂಡಿಗೆರೆಯ ಜನಜೀವನ ಯಾವುದೇ ಧಾವಂತವಿಲ್ಲದೆ ಅದರ ಪಾಡಿಗೆ ಅದು ನಿರುಮ್ಮಳವಾಗಿ ಸಾಗುತಿತ್ತು.
ಹಾಗೆ ಕೆಲವು ನಿಮಿಷ ಮೈಮರೆತು ನಿಂತಿದ್ದವನಿಗೆ ತಕ್ಷಣ ಅಂದು ಪೂರೈಸಬೇಕಾಗಿದ್ದ ಕೆಲಸಗಳು ನೆನಪಾಗಿ ಆತುರಾತುರವಾಗಿ ರೂಮಿಗೆ ಬಂದು “ಈ ಲೋಕ ಬೇಡ, ಆ ಸ್ವರ್ಗ ಬೇಡ” ಎಂಬಂತೆ ಮಲಗಿ ನಿದ್ರೆ ಹೊಡೆಯುತ್ತಿದ್ದ ಹೇಮಂತನನ್ನು ಎಬ್ಬಿಸಿದೆ. ಸಾಕ್ಷ್ಯಚಿತ್ರದ ಪೂರ್ವ ತಯಾರಿಯ ಮೊದಲ ಆದ್ಯತೆಯಾಗಿ ಅಂದು ಮುಖ್ಯವಾಗಿ ತೇಜಸ್ವಿಯವರ ‘ನಿರುತ್ತರ’ಕ್ಕೆ ಹೋಗುವ ಕಾರ್ಯಕ್ರಮವಿತ್ತು. ನಮ್ಮ ಮೂಡಿಗೆರೆಯ ಭೇಟಿ ಎರಡೇ ದಿನಗಳದಾದ್ದರಿಂದ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೇಜಸ್ವಿಯವರ ಒಡನಾಡಿಗಳನ್ನು ಭೇಟಿಯಾಗಿ ಸಾಕ್ಷ್ಯಚಿತ್ರಕ್ಕೆ ಬೇಕಾದ ಮಾಹಿತಿ ಸಂಗ್ರಹಿಸಬೇಕೆಂಬುದು ನಮ್ಮ ಉದ್ದೇಶವಾಗಿತ್ತು.
ಹಾಗಾಗಿ ಹತ್ತೇ ನಿಮಿಷದಲ್ಲಿ ತಯಾರಾಗಿ ಇಬ್ಬರೂ ಅತಿಥಿ ಲಾಡ್ಜಿನ ಕೋಣೆಯಿಂದ ಹೊರಬಿದ್ದೆವು. ಕಾಲೇಜಿಗೆ ಹೊರಟಿದ್ದ ಕನ್ಯಾಮಣಿಗಳ ಗುಂಪೊಂದು ಕಿಲಕಿಲ ನಗುತ್ತಾ ನಮ್ಮ ಕಣ್ಣೆದುರಿಗೆ ಹಾಗೇನಡೆದು ಹೋಯಿತು. ನನ್ನಂತೆ ಹೇಮಂತನೂ ಆ ಕ್ಷಣವೇ ಮೂಡಿಗೆರೆಯ ಚೆಲುವಿಗೆ ಮಾರು ಹೋದ. ಮೊದಲು ತಿಂಡಿ ಮುಗಿಸಿ ನಂತರ ‘ನಿರುತ್ತರ’ದ ಕಡೆ ಹೋಗೋಣ ಎಂದು ನಿರ್ಧರಿಸಿ ತಿಂಡಿಗೆ ಹೋಟೆಲ್ ಹುಡುಕಿಕೊಂಡು ಹೊರಟೆವು. ಒಂದು ಹತ್ತು ಮಾರು ನಡೆಯುವಷ್ಟರಲ್ಲೇ ಹೋಟೆಲ್ ಬೋರ್ಡ್ ಕಾಣಿಸಿತು. ಇಬ್ಬರೂ ಹಿಂದೆ ಮುಂದೆ ನೋಡದೇ ಒಳ ಹೋದೆವು. ಬಿಸಿಬಿಸಿ ದೋಸೆ, ಸಾಗೂ, ಚಟ್ನಿ ತಿಂದು ಹಬೆಯಾಡುವ ಕಾಫಿ ಕುಡಿದು ತೃಪ್ತಿಪಟ್ಟೆವು. ಹೋಟೆಲಿನಲ್ಲಿ ತಿಂಡಿ ತಿನ್ನುತ್ತಾ ನಾವು ಮಾತನಾಡುತ್ತಿರಬೇಕಾದರೇ ಆ ನಮಗೆ ದೋಸೆ ತಂದು ಹಾಕುತ್ತಿದ್ದ ವ್ಯಕ್ತಿ ನಮ್ಮ ಬಳಿ ಬಂದು ‘ನೀವು ಯಾರು’ಮೂಡಿಗೆರೆಗೆ ಏಕೆ ಬಂದಿದ್ದೀರಿ? ಎಂದೆಲ್ಲಾ ಶಂಕಿತ ಉಗ್ರರನ್ನು ವಿಚಾರಿಸುವಂತೆ ವಿಚಾರಿಸಲು ಪ್ರಾರಂಭಿಸಿದರು.
ನಾವು ಅವರಿಗೆ ನಮ್ಮ ಮೂಡಿಗೆರೆ ಭೇಟಿಯ ಉದ್ದೇಶ ತಿಳಿಸುವ ಮೊದಲು ‘ಏಕೆ ಈ ರೀತಿ ಪ್ರಶ್ನಿಸುತ್ತಿದ್ದೀರಿ?’ ಎಂದು ಕೇಳಿದೆವು. ಅವರು ನಮಗೆ ‘ತಪ್ಪು ತಿಳಿಯಬಾರದೆಂದು, ಮಾತಿನ ಮಧ್ಯದಲ್ಲಿ ನಾವು ತೇಜಸ್ವಿ, ಮೂಡಿಗೆರೆ, ನಿರುತ್ತರ, ರಾಜೇಶ್ವರಿ ತೇಜಸ್ವಿಯವರು, ಎಂದೆಲ್ಲಾ ಮಾತನಾಡುತ್ತಿದ್ದುದ್ದರಿಂದ ಅವರಿಗೆ ಕುತೂಹಲ ಉಂಟಾಗಿ ಹಾಗೆ ಪ್ರಶ್ನಿಸಿದ್ದೆಂದು ತಿಳಿಸಿದರು. ‘ತೇಜಸ್ವಿಯವರ ಹೆಸರು ಕೇಳಿ ಕುತೂಹಲಗೊಂಡರು ಎಂದರೆ ಇವರಿಗೆ ತೇಜಸ್ವಿಯವರ ಪರಿಚಯ ಇದ್ದಿರಬೇಕು’ ಎಂದುಕೊಂಡ ನಾನು ಅವರಿಗೆ ‘ನಿಮಗೆ ತೇಜಸ್ವಿ ಗೊತ್ತಾ?’ ಎಂದು ಪ್ರಶ್ನಿಸಿದೆ. ಅದಕ್ಕವರು ‘ಓಹೋ ಗೊತ್ತಿಲ್ದೆ ಏನು, ಚೆನ್ನಾಗಿ ಗೊತ್ತು!’ ಎಂದು ಉತ್ತರಿಸಿ ‘ಮೊದಲು ನೀವು ಯಾರು? ಯಾಕೆ ಬಂದಿರೋದು ಹೇಳಿ’ ಎಂದರು. ನಾವು ನಮ್ಮ ಪರಿಚಯ ಮಾಡಿಕೊಂಡು ‘ತೇಜಸ್ವಿಯವರ ಬಗ್ಗೆ ಡಾಕ್ಯುಮೆಂಟರಿ ಮಾಡುವ ಉದ್ದೇಶದಿಂದ ಮೂಡಿಗೆರೆಗೆ ಎರಡು ದಿನಗಳ ಮಟ್ಟಿಗೆ ಬಂದಿರುವುದಾಗಿ’ ಅವರಿಗೆ ವಿವರಿಸಿದೆವು.
ನಮ್ಮ ಉದ್ದೇಶ ಅವರಿಗೆ ಅರ್ಥವಾಯಿತೆಂದು ಕಾಣುತ್ತದೆ ಅವರು ನಿಧಾನವಾಗಿ ಮಾತನಾಡಲು ಪ್ರಾರಂಭಿಸಿದರು. ‘ನನ್ನ ಹೆಸರು ಇಬ್ರಾಹಿಂ.ಸಿ.ಕೆ ಅಂತ ಈ ಹೋಟೆಲ್ ನಂದೆ. ತೇಜಸ್ವಿಯವರು ನನಗೆ ಗೊತ್ತು! ದೊಗಳೆ ಷರ್ಟು, ಕೆಳಗಡೆ ಮಡಚಿರುವ ಜೀನ್ಸ್ ಪ್ಯಾಂಟು ಹಾಕಿಕೊಂಡು ಆ ಹಳೇ ಸ್ಕೂಟರ್ ಮೇಲೆ ಇದೇ ದಾರೀಲಿ ಓಡಾಡ್ತಿದ್ರು. ಎಷ್ಟೋ ಸಲ ನಮ್ಮ ಹೋಟೆಲಿಗೆ ಬಂದಿದ್ದಾರೆ’ಎಂದರು. ನಿಜವಾದ ತೇಜಸ್ವಿಯನ್ನು ಹುಡುಕಬೇಕಾಗಿರುವುದು ಆ ಹೋಟೆಲಿನವನಂತಹ ಸಾಮಾನ್ಯರ ಮಧ್ಯದಲ್ಲೇ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ನಾನು ಮೈಯೆಲ್ಲಾ ಕಿವಿಯಾಗಿ ಅವರ ಮಾತು ಕೇಳಿಸಿಕೊಳ್ಳುತ್ತಿದ್ದೆ.ಏಕೆಂದರೆ ತೇಜಸ್ವಿ ಇಂತಹ ಸಾಮಾನ್ಯರ ಮಧ್ಯದಲ್ಲಿ ಸಾಮಾನ್ಯನಂತೆ ಬದುಕುತ್ತಲೇ ಅಷ್ಟು ಎತ್ತರಕ್ಕೇರಿದವರು. ಡಿವಿಜಿಯವರ ಕಗ್ಗದ ಸಾಲುಗಳಂತೆ ‘ಎಲ್ಲರೊಳಗೊಂದಾಗಿದ್ದುಕೊಂಡೇ’ ಎಲ್ಲವನ್ನೂ, ಎಲ್ಲರನ್ನೂ ಮೀರುವ ಬದುಕಿನ ಮಾರ್ಗವನ್ನು ಅನ್ವೇಷಿಸಿ ನಮಗೆಲ್ಲರಿಗೂ ತಿಳಿಸಿಕೊಟ್ಟವರು.
ಅಷ್ಟರಲ್ಲಿ ‘ಅವರ ಜೊತೆ ಯಾವಾಗ್ಲಾದ್ರು ಮಾತಾಡಿದ್ದೀರ?’ಎಂದು ಹೇಮಂತನ ಕಡೆಯಿಂದ ಪ್ರಶ್ನೆಯೊಂದು ತೂರಿಬಂತು. ‘ಯಾವಾಗ್ಲು ಅಲ್ಲ, ಆದರೆ ಕೆಲವು ಸಲ ಮಾತಾಡ್ಸಿದ್ದೀನಿ. ಅವರು ಒಂಥರಾ ಸೈಲೆಂಟ್ ಮನ್ಷ. ಮೂಡ್ ಇದ್ದರೇ ಅವರೇ ಮಾತಾಡಿಸ್ತಿದ್ರು. ಇಲ್ಲಾಂದ್ರೆ ಬಂದ್ ಕೆಲಸ ಮುಗುಸ್ಕೊಂಡು ಸುಮ್ನೆ ಹೊರಟು ಹೋಗ್ತಿದ್ರು’ ಎಂದು ಉತ್ತರಿಸಿದರು. ‘ಯಾಕ್ ಬರ್ತಿದ್ರು ನಿಮ್ಮ ಹೋಟೆಲಿಗೆ’ ಮತ್ತೆ ಹೇಮಂತನ ಪ್ರಶ್ನೆ. ‘ಇಲ್ಲಿ ಹಿಂದುಗಡೆ ಒಬ್ಬರದು ಅಂಗಡಿ ಇತ್ತು. ಆಗಾಗ ಅವರು ಅಲ್ಲಿಗೆ ಹೋಗ್ತಿದ್ರು. ಆಗಾಗ ಇಲ್ಲಿಗೂ ಬರ್ತಿದ್ರು. ನಾನು ಎದುರಿಗೆ ಸಿಕ್ಕರೆ ಹಾಗೇ ‘ಏನ್ರಿ’ ಅಂತಾ ಮಾತಾಡುಸ್ತಾನೇ ಹೋಗ್ತಿದ್ರು. ಎಂದರು. ನಿಮ್ಮ ಹೋಟೆಲಿನಲ್ಲಿ ಊಟಕ್ಕೆ ಬರ್ತಿರ್ಲಿಲ್ವ? ಎಂದು ನಾನು ಪ್ರಶ್ನಿಸಿದೆ. ಇಲ್ಲ. ‘ಅವರಿಗೆ ಚಿಕನ್ ಬಿರ್ಯಾನಿ ಬೇಕಾಗಿತ್ತು. ಆದರೆ ನಾನು ನಮ್ಮ ಹೋಟೆಲಿನಲ್ಲಿ ಚಿಕನ್ ಬಿರ್ಯಾನಿ ಮಾಡಲ್ಲ. ಬರೀ ಮಟನ್ ಬಿರ್ಯಾನಿ ಮಾತ್ರ ಮಾಡ್ತಿದ್ದೆ. ಡಾಕ್ಟು ಅವರಿಗೆ ಮಟನ್ ತಿನ್ಬಾರ್ದು ಅಂತ ಹೇಳಿದ್ರಂತಲ್ಲ ಅದಕ್ಕೆ ಅವರು ಯಾವಾಗ್ಲೂ ನನಗೆ ‘ನೀನು ಯಾವಾಗ್ಲೂ ಮಟನ್ ಬಿರ್ಯಾನಿನೇ ಮಾಡ್ತೀಯ. ಚಿಕನ್ ಮಾಡಿದಾಗ ಹೇಳು’ ಅಂತ ಹೇಳ್ತಿದ್ರು. ನಾನು ಆಯ್ತು ಅಂತಿದ್ದೆ.ಆದರೆ ಇಲ್ಲಿ ಮುಬಾರಕ್ ಅಂತ ಒಬ್ಬರು ನಮ್ಮವರದ್ದೇ ಒಂದು ಹೋಟೆಲ್ ಇತ್ತು. ಈಗ್ಲೂ ಇದೆ. ಆ ಹೋಟೆಲಿಗೆ ತೇಜಸ್ವಿಯವರು ರೆಗ್ಯುಲರಾಗಿ ಹೋಗ್ತಿದ್ರು. ಅಲ್ಲಿ ಆ ಹೋಟೆಲಿನಲ್ಲಿ ಚಿಕನ್ ಬಿರ್ಯಾನಿ ಮಾಡ್ತಾರೆ’ ಎಂದರು.
ನಮಗೆ ಒಂದು ಕ್ಷಣ ಆಶ್ಚರ್ಯವಾಯಿತು,‘ಅದ್ಯಾವ ಡಾಕ್ಟ್ರು ಇವರಿಗೆ ಕೇವಲ ಚಿಕನ್ ಬಿರ್ಯಾನಿ ಮಾತ್ರ ತಿನ್ನಿ ಅಂತ ಹೇಳಿದವರು ಮತ್ತು ಯಾಕೆ ಹಾಗೆ ಹೇಳಿದರು?’ ಎಂದು. ತಕ್ಷಣ ಇಬ್ರಾಹಿಂರವರ ಮುಂದೆ ನನ್ನ ಮನಸ್ಸಿನಲ್ಲಿನ ಪ್ರಶ್ನೆಯನ್ನು ಇಟ್ಟೆ. ಅವರು ‘ಅವರಿಗೇನೊ ಹೆಲ್ತ್ ಪ್ರಾಬ್ಲಂ ಇತ್ತಂತಲ್ಲ, ನಂಗೊತ್ತಿಲ್ಲ ಗೊತ್ತಿದ್ದವರು ಹೇಳ್ತಾರೆ, ಅವರ ಮನೆಯವರನ್ನ ವಿಚಾರಿಸಿ ಗೊತ್ತಾಗುತ್ತೆ’ ಎಂದು ಉತ್ತರ ಕೊಟ್ಟು ಸುಮ್ಮನಾದರು. ಅವರೊಂದಿಗಿನ ಮಾತುಕತೆಯನ್ನೆಲ್ಲ ಮುಗಿಸಿ ಅವರಿಗೆ ಧನ್ಯವಾದ ಹೇಳಿ ನಾವು ಅಲ್ಲಿಂದ ಹೊರಡಲನುವಾದೆವು. ಆಗ ಅವರು ‘ಇಲ್ಲೇ ದತ್ತಣ್ಣ ಅಂತ ಒಬ್ಬರಿದ್ದಾರೆ. ತೇಜಸ್ವಿಯವ್ರಿಗೆ ತುಂಬಾ ಪರಿಚಯದವ್ರು, ಅವರ ನಂಬರಿದು. ಅವರನ್ನ ಮೀಟ್ ಮಾಡಿ. ನಿಮಗೆ ಹೆಲ್ಪ್ ಆಗಬಹುದು’ ಎಂದು ಹೇಳಿ ಆ ದತ್ತಣ್ಣ ಎನ್ನುವವರ ನಂಬರ್ ಕೊಟ್ಟರು. ಅದಕ್ಕಾಗಿ ಅವರಿಗೆ ಧನ್ಯವಾದ ತಿಳಿಸಿ ಹೋಟೆಲಿನಿಂದ ಹೊರಬಿದ್ದೆವು.
ನಾನು ಇಬ್ರಾಹಿಂ.ಸಿ.ಕೆ ಕೊಟ್ಟಿದ್ದ ನಂಬರಿಗೆ ಫೋನ್ ಮಾಡಿದೆ. ಆ ಕಡೆಯಿಂದ ಕರೆ ಸ್ವೀಕರಿಸಿದ ವ್ಯಕ್ತಿಗೆ ನಮ್ಮ ಪರಿಚಯ ಮಾಡಿಕೊಂಡು ವಿಷಯ ತಿಳಿಸಿದೆ. ಅವರು ತಾನೇ ದತ್ತಣ್ಣನೆಂದು ‘ಈಗ ಕೆಲಸದ ನಿಮಿತ್ತ ಹೊರಗೆ ಹೋಗಬೇಕಾಗಿರುವುದರಿಂದ ಸಂಜೆ ಬರಬೇಕೆಂದು’ ತಿಳಿಸಿದರು. ನಂತರ ಹೇಮಂತನಿಗೆ ದತ್ತಣ್ಣನವರು ಸಂಜೆ ಅವರ ಮನೆಗೆ ಬರಬೇಕೆಂದು ಹೇಳಿದ್ದರೆಂದು ತಿಳಿಸಿ ಮೂಡಿಗೆರೆಯ ಹ್ಯಾಂಡ್ ಪೋಸ್ಟಿನಲ್ಲಿರುವ ತೇಜಸ್ವಿಯವರ ‘ನಿರುತ್ತರ’ದ ಕಡೆ ಹೊರಡಲನುವಾದೆವು.ಸೂರ್ಯ ಇನ್ನು ಮೂಡಿಗೆರೆಯ ಮೇಲೆ ಮುನಿಸಿಕೊಂಡು ಮೋಡಗಳ ಮರೆಯಲ್ಲೇ ಇದ್ದ.
ಸಮಯ ನೋಡಿಕೊಂಡೆ, ಬೆಳಿಗ್ಗೆ ೯.೩೦ ಆಗಿತ್ತು.
ಮೂಡಿಗೆರೆ ಪೇಟೆಯಿಂದ ಹ್ಯಾಂಡ್ ಪೋಸ್ಟಿ ತಿರುವಿನ ಬಳಿಯಿರುವ ‘ನಿರುತ್ತರ’ಕ್ಕೆ ಸುಮಾರು ಎರಡು ಕಿಲೋಮೀಟರ್ ಆಗುತ್ತದೆ. ನಡೆದೇ ಹೋಗಬಹುದಾದರು ಆದಷ್ಟು ಬೇಗ ಅಲ್ಲಿಗೆ ತಲುಪಿಕೊಳ್ಳುವ ಉದ್ದೇಶದಿಂದ ಆಟೋವೊಂದನ್ನು ಹಿಡಿದು ಅದರಲ್ಲಿ ‘ನಿರುತ್ತರ’ದ ಕಡೆ ಹೊರಟೆವು. ಆಟೋ ಹತ್ತುವಾಗ ಆಟೋದದವನಿಗೆ ‘ಹ್ಯಾಂಡ್ ಪೋಸ್ಟ್’ ಎಂದಷ್ಟೇ ಹೇಳಿ ಆಟೋ ಹತ್ತಿಕೊಂಡಿದ್ದೆವು. ಆದರೆ ಅಟೋ ಚಲಿಸಿದ ನಂತರ ಆ ಆಟೋದ ಚಾಲಕನಿಗೆ ‘ಹ್ಯಾಂಡ್ ಪೋಸ್ಟ್ ಹತ್ರ ತೇಜಸ್ವಿಯವರ ಮನೆ ಇದೆ. ಗೊತ್ತಾ ನಿಮಗೆ’ ಎಂದು ಕೇಳಿದೆ. ಆತ ಆಟೋ ನಡೆಸುತ್ತಲೇ ಒಮ್ಮೆ ತನ್ನ ಕಣ್ಣ ಮುಂದಿದ್ದ ಪುಟ್ಟ ಕನ್ನಡಿಯಲ್ಲಿ ನಮ್ಮ ಮುಖ ನೋಡಿ ಗೊತ್ತು ಸಾರ್! ಎಷ್ಟ್ ಜನಾನ ಕರ್ಕೊಂಡು ಹೋಗಿ ಬಿಟ್ಟಿದ್ದೀನಿ ಅವರ ಮನೆ ಗೇಟಿಗೆ’ ಎಂದುತ್ತರಿಸಿ ಆಟೋದ ವೇಗವನ್ನು ಹೆಚ್ಚಿಸಿ ಐದೇ ನಿಮಿಷಗಳಲ್ಲಿ ನಿರುತ್ತರದ ಹಳದಿ ಗೇಟಿನ ಮುಂದೆ ನಮ್ಮನಿಳಿಸಿ ಹಣ ಪಡೆದು ಹೊರಟು ಹೋದ. ಮೊದಲ ಬಾರಿಗೆ ತೇಜಸ್ವಿಯವರ ‘ನಿರುತ್ತರ’ದ ಆ ಹಳದಿ ಗೇಟು ಸ್ಪರ್ಷಿಸಿದಾಗ ನನಗೊಂದು ರೀತಿಯ ರೊಮಾಂಚನವಾದಂತೆ ಅನುಭವ.
ನಾನು ಹೇಮಂತ ಇಬ್ಬರು ಗೇಟು ತೆಗೆದು ತೇಜಸ್ವಿಯವರ ತೋಟದೊಳಗೆ ನಿಧಾನವಾಗಿ ಹೆಜ್ಜೆ ಹಾಕುತ್ತಾ, ಸುತ್ತಲೂ ಬೆರಗು ಕಣ್ಣುಗಳಿಂದ ನೋಡುತ್ತಾ, ತೇಜಸ್ವಿ ಓಡಾಡಿದ ಈ ಜಾಗಗಳಿವು ಎಂದು ನೆನೆದು ಪುಳಕಗೊಳ್ಳುತ್ತಾ, ಎನೇನೊ ಮಾತಾಡಿಕೊಳ್ಳುತ್ತಾ ಅವರ ಮನೆಯ ಕಡೆ ಮುಂದುವರೆಯುತ್ತಿದ್ದೆವು. ಹಿಂದಿನ ದಿನ ಬೆಂಗಳೂರು ಬಿಡುವ ಮೊದಲು ತೇಜಸ್ವಿಯವರ ಪತ್ನಿ ಶ್ರೀಮತಿ ರಾಜೇಶ್ವರಿ ತೇಜಸ್ವಿ ಅಮ್ಮನಿಗೆ ಫೋನ್ ಮಾಡಿ ನಾಳೆ ಮೂಡಿಗೆರೆಗೆ ಬರುತ್ತಿರುವ ವಿಷಯ ತಿಳಿಸಿದ್ದೆ. ಅಮ್ಮ ಬೆಳಿಗ್ಗೆ ೧೦ ಗಂಟೆಯ ಹೊತ್ತಿಗೆ ಬನ್ನಿ ಎಂದು ತಿಳಿಸಿದ್ದರು. ಹಾಗಾಗಿ ಅವರು ಹೇಳಿದ ಸಮಯಕ್ಕೆ ಅಲ್ಲಿದ್ದೆವು. ನಾವಿಬ್ಬರು ಹೀಗೆ ನಮ್ಮ ಪಾಡಿಗೆ ನಾವು ಮಾತನಾಡುತ್ತಾ ತೋಟದ ಮಧ್ಯೆ ಬೈತಲೆಯಂತೆ ಸೀಳಿದ್ದ ಕಾಲುದಾರಿಯ ಮೂಲಕ ನಡೆದು ಹೋಗುತ್ತಿರಬೇಕಾದರೆ ಅಲ್ಲೇ ಆ ದಾರಿಯ ಮಧ್ಯದ ಹುಲ್ಲಿನ ಮೇಲೆ ಮಲಗಿತ್ತೆಂದು ಕಾಣುವ ಹಸಿರು ಹಾವೊಂದು ನಮ್ಮಿಬ್ಬರ ಕಾಲುಗಳಿಗೆ ಅತಿ ಸಮೀಪದಲ್ಲೇ ಮಿಂಚಿನಂತೆ ಹರಿದು ಹೋಯ್ತು. ನಮ್ಮದೇ ಲೋಕದಲ್ಲಿ ವಿಹರಿಸುತ್ತಾ ಮೈಮರೆತಿದ್ದ ನಮಗೆ ಸಣ್ಣಗೆ ಕಡ್ಡಿಯಂತ ಆ ಹಸಿರು ಹಾವು ನಮ್ಮ ಮುಂದೆ ಹಾಗೆ ಸರ್ರನೆ ಹರಿದು ಹೋದದ್ದು ಕಂಡು ಜೀವ ಬಾಯಿಗೆ ಬಂದ ಹಾಗಾಯಿತು. ಒಂದರೆಕ್ಷಣ ಏನು ಮಾಡಲು ತೋಚದೆ ಹಾಗೆ ಹಿಂದಕ್ಕೆ ಓಡಿದೆವು. ನಂತರ ನಿಂತು ಸಾವರಿಸಿಕೊಂಡು ಮುಂದುವರಿದೆವು. ನಮಗೆ ಆ ಹಸಿರು ಹಾವು ವಿಷಯುಕ್ತ ಹಾವೋ ಅಲ್ಲವೋ ಗೊತ್ತಿರಲಿಲ್ಲ. ಬೆಂಗಳೂರಿಗರಾದ ನಮಗೆ ಹಾವೆಂದರೆ ಹಾವಷ್ಟೇ. ಅದು ಕಚ್ಚಲಿ ಬಿಡಲಿ. ಹಾವು ನೋಡಿದ ತಕ್ಷಣ ಓಡಿ ಹೋಗಬೇಕೆಂಬುದೊಂದೇ ಹಾವುಗಳ ನಮಗೆ ಗೊತ್ತಿದ್ದ ವಿಚಾರ.
ಈ ಹಸಿರು ಹಾವಿನ ಪ್ರಕರಣದ ನಂತರ ನಾವಿಬ್ಬರೂ ಮೈಯೆಲ್ಲಾ ಕಣ್ಣಾಗಿ ಸುತ್ತಲೂ ಸೂಕ್ಷ್ಮವಾಗಿ ಗಮನಿಸುತ್ತಾ ಈ ತೋಟದಲ್ಲಿ ಇನ್ನೆಷ್ಟು ಹಾವುಗಳು ನಮಗೆ ಈ ರೀತಿ ಭೀತಿಯುಂಟುಮಾಡಲು ಕಾಯುತ್ತಿವೆ ಎಂದು ಮನಸ್ಸಿನಲ್ಲೇ ಲೆಕ್ಕ ಹಾಕಿಕೊಳ್ಳುತ್ತಾ ಮುಂದುವೆರೆದೆವು. ನಮ್ಮ ಸುತ್ತಾ ಯಾವುದಾದರೂ ತರಗೆಲೆ ಅಲುಗಾಡಿದರೆ ಸಾಕು ಅದು ಹಾವೇ ಇರಬೇಕು ಎಂದು ಭ್ರಮಿಸುತ್ತಾ ಬೇಗ ಬೇಗ ನಡೆದು ತೇಜಸ್ವಿಯವರ ಮನೆ ತಲುಪಿಕೊಂಡೆವು. ಅವರ ಮನೆಯ ಮುಂದಿನ ಹೊರಾಂಗಣದ ಕಟ್ಟೆಯಂತಹ ಜಾಗದಲ್ಲಿ ನಿಂತಾಗಲಷ್ಟೇ ನಮಗೆ ಹಾವುಗಳ ಭೀತಿ ತೊಲಗಿದ್ದು. ತೇಜಸ್ವಿಯವರ ಮನೆ ಅವರ ತೋಟದ ತಗ್ಗಿನಲ್ಲಿದೆ. ಮಲೆನಾಡಿನ ಮನೆಗಳಿಗೆ ಹೋಲಿಸಿದರೆ ಕೊಂಚ ಆಧುನಿಕ ಎನ್ನಬಹುದಾದ ಆ ಮನೆ ವಿಶಾಲವಾಗಿ ಆಚ್ಚುಕಟ್ಟಾಗಿದೆ. ಅವರ ಮನೆಯ ಎದುರಿಗೆ ಗೋಡೌನಿನಂತಹದೊಂದು ಮಲೆನಾಡಿನ ಹೆಂಚಿನ ಮನೆ ಇದೆ. ಅಲ್ಲಿ ಹಳೆಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಆದರೆ ನಮಗೆ ಅವೆಲ್ಲಕ್ಕಿಂತಲೂ ಹೆಚ್ಚಾಗಿ ಆಕರ್ಷಿಸಿದ್ದು ಆ ಹಳೆಯ ಮನೆಯ ಒಂದು ಮೂಲೆಯಲ್ಲಿ ನಿಂತಿದ್ದ ತೇಜಸ್ವಿ ಎಂದ ತಕ್ಷಣ ನೆನಪಿಗೆ ಬರುವ ತೇಜಸ್ವಿಯವರ ಅಚ್ಚುಮೆಚ್ಚಿನ ಜೊತೆಗಾರ! ಆತನ ಹೆಸರು MEN 6625!! ಅವರ ಬಜಾಜ್ ಸ್ಕೂಟರ್!!!
ತೇಜಸ್ವಿಯವರ ಸ್ಕೂಟರ್ ಬಗ್ಗೆ ತುಂಬಾ ಓದ್ದಿದ್ದೆವು, ಕೇಳಿದ್ದೆವು. ಆದರೆ ಕಣ್ಣಾರೆ ಕಂಡಿರಲಿಲ್ಲ. ಈಗ ಅವರ ಹಲವು ವರ್ಷಗಳ ಈ ಜೊತೆಗಾರನನ್ನು ಕಂಡು ನಮಗೆ ಕೋಹಿನೂರು ವಜ್ರ ಕಂಡಷ್ಟೇ ಸಂತೋಷವಾಯಿತು. ನಾವಿಬ್ಬರೂ ಬಂದ ಕೆಲಸವನ್ನು ಸಂಪೂರ್ಣ ಮರೆತು ನೇರ ಸ್ಕೂಟರ್ ಬಳಿಗೆ ಹೋಗಿ ಅದರ ಹಲವು ಅಂಗಾಂಗಗಳನ್ನು ಮುಟ್ಟಿ, ನೋಡಿ ಆನಂದಪಡುತ್ತಿದ್ದೆವು. ಹೇಮಂತ ನನ್ನನ್ನು ಆ ಸ್ಕೂಟರಿನ ಮೇಲೆ ಕೂರಿಸಿ ಫೋಟೊ ತೆಗೆದ. ಅವನದ್ದೂ ಒಂದು ಫೋಟೋ ಸ್ಕೂಟರಿನ ತೆಗೆಸಿಕೊಂಡ. ನಾವಿಬ್ಬರು ಹೀಗೆ ಮಕ್ಕಳು ಸಂತೆಯನ್ನು ಬೆರಗುಗಣ್ಣಿನಿಂದ ನೋಡುವಂತೆ ತೇಜಸ್ವಿಯವರ ಸ್ಕೂಟರನ್ನು ನೋಡುತ್ತಾ ಮೈಮರೆತಿರುವಾಗ ಹಿಂದಿನಿಂದ ‘ಅಮ್ಮ ಕರೀತಾ ಇದಾರೆ, ನೋಡಿ’ ಎಂಬ ಧ್ವನಿ ಕೇಳಿಸಿ ಹಿಂತಿರುಗಿ ನೋಡಿದೆವು. ಬಣ್ಣ ಮಾಸಿದ ಹಳೆಯ ಟೀ ಷರ್ಟ್ ತೊಟ್ಟು, ಕೊಳಕಾದ ಹಸಿರು ಲುಂಗಿಯನ್ನು ಮೊಳಕಾಲವರೆಗೂ ಎತ್ತಿಕಟ್ಟಿ, ಕೈಯಲ್ಲಿ ಮಚ್ಚು ಹಿಡಿದು ನಿಂತಿದ್ದ ಕಬ್ಬಿಣದ ಮೈಕಟ್ಟಿನ ವ್ಯಕ್ತಿಯೊಬ್ಬರು ನಮ್ಮೆದುರಿಗೆ ನಿಂತಿದ್ದರು. ನಾನು ಹೇಮಂತ ಇಬ್ಬರು ‘ಯಾರಯ್ಯ ಈ ಪ್ರಜೆ? ಮಚ್ಚು ಹಿಡ್ಕೊಂಡು ನಿಂತಿದ್ದಾನೆ’. ಎಂದುಕೊಳ್ಳುತ್ತಾ ತೇಜಸ್ವಿಯವರ ಮನೆಕಡೆ ಹೊರಟೆವು. ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಮನೆಯಿಂದ ಹೊರಬಂದು ನಿಂತು ನಮಗಾಗಿ ಕಾಯುತ್ತಿದ್ದರು. ಶ್ರೀಮತಿ ರಾಜೇಶ್ವರಿ ತೇಜಸ್ವಿಯವರೊಂದಿಗೆ ಹಲವು ಸಲ ಫೋನಿನಲ್ಲಿ ಮಾತನಾಡಿದ್ದೆನಾದರೂ ಅವರನ್ನು ಒಮ್ಮೆಯೂ ಫೋಟೋದಲ್ಲೂ ಸಹ ನೋಡಿರಲಿಲ್ಲ. ಮೊದಲಿಗೆ ನಾನೇ ನನ್ನ ಪರಿಚಯ ಮಾಡಿಕೊಂಡೆ. ನಂತರ ಹೇಮಂತನ ಪರಿಚಯವನ್ನು ಮಾಡಿಸಿದೆ. ಅಮ್ಮ ನಗು ಮುಖದಿಂದಲೇ ನಮ್ಮಿಬ್ಬರನ್ನೂ ಮನೆಯೊಳಕ್ಕೆ ಸ್ವಾಗತಿಸಿದರು. ಆ ಮನೆ ಒಳಗಿನಿಂದ ಅಷ್ಟು ವಿಶಾಲವಲ್ಲದಿದ್ದರೂ ಮನೆಯಲ್ಲಿ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು ಮತ್ತು ಆ ಮನೆಯಲ್ಲಿ ನಾನು ಗಮನಿಸಿದ ಅತಿಮುಖ್ಯ ಅಂಶವೆಂದರೆ ಆ ಮನೆಯ ಸರಳತೆ,ಆಡಂಬರ, ಅದ್ದೂರಿತನದ ಲವಲೇಷವೂ ಆ ಮನೆಯಲ್ಲಿ ಎಲ್ಲಿಯೂ ಕಂಡುಬರಲಿಲ್ಲ, ಥೇಟ್ ತೇಜಸ್ವಿಯವರ ಬದುಕಿನ ಹಾಗೆ.
ಒಳಗಿನಿಂದಲೇ ಮೆಟ್ಟಿಲು ಇರುವ ಎರಡು ಅಂತಸ್ತಿನ ಆ ಮನೆಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ವಸ್ತುಗಳಾಗಲಿ, ಪೀಠೋಪಕರಣಗಳಾಗಲಿ ಅಥವ ಬೇಡವಾದ ಯಾವುದೇ ಅಲಂಕಾರಗಳಾಗಲಿ ಹುಡುಕಿದರೂ ಸಿಗಲಿಲ್ಲ. ಪ್ರತಿಯೊಂದು ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟೇ! ಮೂರು ಬೆತ್ತದ ಕುರ್ಚಿಗಳು, ನಡುವೆ ಒಂದು ಟೀಪಾಯಿ, ಮೆಟ್ಟಿಲಿನ ಮೂಲೆಯಲ್ಲೊಂದು ಫೋಟೋ ಅಥವ ಹೂದಾನಿ ಇಡುವಂಥದ್ದೊಂದು ಪುಟ್ಟ ಟೇಬಲ್, ಅದರ ಮೇಲೆ ತೇಜಸ್ವಿಯವರದ್ದೊಂದು ಪೆನ್ಚಿಲ್ ಸ್ಕೆಚ್ಚಿನಂತಹ ಒಂದು ಪುಟ್ಟ ಫೋಟೋ, ಇವಿಷ್ಟೇ ಮನೆಯ ಹಾಲ್ ನಲ್ಲಿ ಇದ್ದ ವಸ್ತುಗಳು. ಸರಳತೆಯನ್ನು ಬೋಧಿಸದೇ ಹಾಗೆ ಬದುಕಿ ತೋರಿಸಿದ್ದರಿಂದಲೇ ಇರಬೇಕು ತೇಜಸ್ವಿ ಪರ್ವತದಂತಹ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದ್ದು ಎಂದು ಯೋಚಿಸುತ್ತಲೇ ಅಲ್ಲಿದ್ದ ಬೆತ್ತದ ಕುರ್ಚಿಯ ಮೇಲೆ ಕುಳಿತೆವು.ಅಮ್ಮ ನಮ್ಮ ಎದುರಿಗಿನ ಕುರ್ಚಿಯ ಮೇಲೆ ಆಸೀನರಾದರು.
ನಾನು ಮಾತು ಪ್ರಾರಂಭಿಸಿದೆ. ಮೊದಲಿಗೆ ನಾವು ಮಾಡಲು ಹೊರಟಿರುವ ತೇಜಸ್ವಿಯವರ ಬದುಕನ್ನು ಕುರಿತ ಸಮಗ್ರ ಸಾಕ್ಷ್ಯಚಿತ್ರದ ಬಗ್ಗೆ ಅವರಿಗೆ ವಿವರಿಸಿದೆ. ಅದಕ್ಕಾಗಿ ನಾವು ಮಾಡಿಕೊಂಡಿರುವ ತಯಾರಿ, ಕೈಗೊಂಡಿದ್ದ ಅಧ್ಯಯನ, ರಿಸರ್ಚ್ ಬಗ್ಗೆ ಅವರಿಗೆ ವಿವರವಾಗಿ ಹೇಳಿದೆ. ನಾವು ಮಾಡಿಕೊಂಡಿದ್ದ ಅಷ್ಟೆಲ್ಲಾ ತಯಾರಿಗಳ ಬಗ್ಗೆ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಮೆಚ್ಚುಗೆ ಸೂಚಿಸಿ ಒಂದು ಘಟನೆಯ ಬಗ್ಗೆ ಹೇಳಿದರು ‘ಒಂದ್ಸಾರಿ ಯಾವ್ದೋ ಪತ್ರಿಕೆಯ ರಿಪೋರ್ಟರ್ ಒಬ್ಬರು ಇವರ ಇಂಟರ್ವ್ಯೂ ಮಾಡ್ಬೇಕು ಅಂತ ಬಂದಿದ್ದರು. ಅವರು ಪ್ರಶ್ನೆ ಕೇಳೋಕೆ ಮೊದಲೇ ಇವರೇ ಅವರಿಗೆ ಒಂದು ಪ್ರಶ್ನೆ ಕೇಳಿದ್ರು, ‘ನಾನು ಬರೆದಿದ್ದನ್ನು ಓದಿದ್ದೀ’ ಅಂತ. ಆತ ಇಲ್ಲ, ಆದರೆ ನನಗೆ ತುಂಬಾ ಇಂಟರ್ವ್ಯೂ ಮಾಡಿದ ಅನುಭವ ಇದೆ, ಆಫ಼ೀಸಿನಿಂದ ಪ್ರಶ್ನೆಗಳನ್ನ ಕೊಟ್ಟಿದ್ದಾರೆ ಇಂಟರ್ವ್ಯೂ ಮಾಡಬಲ್ಲೆ ಎಂದಾಗ ಇವರಿಗೆ ಕೋಪ ಬಂದು ಮೊದಲು ನಾನು ಬರೆದಿದ್ದನ್ನ ಓದ್ಕೊಂಡು ಬನ್ನಿ, ಇಲ್ಲ ಅಂದ್ರೆ ಯಾರಾದ್ರು ಓದ್ಕೊಂಡಿರೋರನ್ನ ಕರ್ಕೊಂಡ್ ಬನ್ನಿ, ಆಗ ನಿಮ್ಮ ಪ್ರಶ್ನೆಗೆ ಉತ್ತರ ಕೊಡ್ತಿನಿ, ಈಗ ನೀವು ನನ್ನ ಇಂಟರ್ವ್ಯೂ ಮಾಡೋಕ್ ಆಗಲ್ಲ, ನೀವು ಹೋಗಬಹುದು” ಅಂತ ಹೇಳಿ ಕಳಿಸಿದ್ರು. ಹಾಗಾಗಿ ನೀವು ಮೊದಲು ಫೋನ್ ಮಾಡಿ ತೇಜಸ್ವಿ ಬಗ್ಗೆ ಡಾಕ್ಯುಮೆಂಟರಿ ಮಾಡ್ತೀವಿ ಅಂದಾಗ ತಕ್ಷಣ ಆ ಘಟನೆ ನೆನಪು ಬಂತು. ಆದರೆ ನೀವು ಇಷ್ಟು ಆಳವಾಗಿ ತೇಜಸ್ವಿ ಬಗ್ಗೆ ಅಧ್ಯಯನ ಮಾಡಿದ್ದೀರಿ ಅಂತ ಕೇಳಿ ಸಂತೋಷ ಆಯ್ತು. ಚೆನ್ನಾಗಿ ಮಾಡಿ ಎಂದು ಹೇಳಿ ನಮ್ಮ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ಎರಡು ಗಂಟೆಗಳ ಕಾಲ ಶ್ರೀಮತಿ ರಾಜೇಶ್ವರಿತೇಜಸ್ವಿಯವರಿಂದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಹಾಗೆ ಬೇಕಾಗಿದ್ದ ವಿವರಗಳನ್ನು, ಮಾಹಿತಿಗಳನ್ನು ಕೇಳಿ ನೋಟ್ಸ್ ಮಾಡಿಕೊಂಡೆ. ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಸಾಕ್ಷ್ಯಚಿತ್ರಕ್ಕಾಗಿ ಮಾತನಾಡಿಸಲೇಬೇಕಾದ ತೇಜಸ್ವಿಯವರ ಇನ್ನೂ ಕೆಲವು ಒಡನಾಡಿಗಳ ಬಗ್ಗೆ ಹೇಳಿ ಅವರ ಫೋನ್ ನಂಬರುಗಳನ್ನು ನಮಗೆ ಕೊಟ್ಟರು. ಆಗ ಇದ್ದಕ್ಕಿದ್ದಂತೆ ಮೇಲೆಲ್ಲೋ ಯಾರೋ ಕಿಟಕಿಯ ಗಾಜಿಗೆ ಚೂಪಾದ ವಸ್ತುವಿನಿಂದ ಗಟ್ಟಿಯಾಗಿ ಬಡಿದ ಸದ್ದು ಕೇಳಿ ಬೆಚ್ಚಿಬಿದ್ದು ‘ಏನದು ಸದ್ದು?’ ಎಂದು ವಿಚಾರಿಸಿದಾಗ ರಾಜೇಶ್ವರಿ ತೇಜಸ್ವಿಯವರು ನಮಗೆ ಮಾತಾಡಬಾರದೆಂದು, ಸದ್ದು ಮಾಡದೇ ನಿಧಾನವಾಗಿ ಮೆಟ್ಟಿಲು ಹತ್ತಿ ಮೇಲೆ ಹೋಗಿ ಮರೆಯಲ್ಲಿ ನಿಂತು ನೋಡಬೇಕೆಂದು ಹೇಳಿದರು. ಇವರ ಮಾತು ಕೇಳಿ ನನಗೆ ಕುತೂಹಲ ತಡೆಯಲಾಗಲಿಲ್ಲ. ಅವರು ಹೇಳಿದಂತೆ ನಿಧಾನವಾಗಿ ಎದ್ದು ಸದ್ದಾಗದಂತೆ ಪುಟ್ಟ ಪುಟ್ಟ ಹೆಜ್ಜೆಗಳನಿಡುತ್ತಾ ದೇಹವನ್ನು ಆದಷ್ಟು ಕುಗ್ಗಿಸಿಕೊಂಡು ಮೆಟ್ಟಿಲು ಹತ್ತಿ ಮೇಲೆ ಹೋಗುತ್ತಿದ್ದೆ. ಮಹಡಿ ಮೇಲಿನ ಕಿಟಕಿ ನನ್ನ ಎದುರಿಗೆ ನೇರವಾಗಿ ಕಾಣುತ್ತಿತ್ತು. ನಾನು ಹೀಗೆ ಕಳ್ಳನಂತೆ ನಿಧಾನವಾಗಿ ಮೇಲೆ ಹತ್ತುತ್ತಿರಬೇಕಾದರೆ ಕಿಟಕಿನ ಗಾಜಿನ ಹಿಂದೆ ಏನೋ ಅತ್ತಿಂದಿತ್ತ ಇತ್ತಿಂದತ್ತ ಕುಪ್ಪಳಿಸುತ್ತಿರುವಂತೆ ಕಾಣುತಿತ್ತು. ಮನೆಯ ಸೂರಿನ ನೆರಳಲ್ಲಿದ್ದು ಕಾಣುತ್ತಿದ್ದ ಅದು ಏನೆಂದು ನನಗೆ ಸರಿಯಾಗಿ ಗುರುತಿಸಲಾಗಲಿಲ್ಲ. ಹಾಗಾಗಿ ಇನ್ನೆರಡು ಮೆಟ್ಟಿಲು ಹತ್ತಿ ಸ್ವಲ್ಪ ಮೇಲಕ್ಕೆ ಹೋದೆ. ತಕ್ಷಣ ಮರಕುಟುಕ ಹಕ್ಕಿಯೊಂದು ಕಿಟಕಿಯ ಗಾಜಿಗೆ ಚೂಪಾದ ಕೊಕ್ಕಿನಿಂದ ಬೆಚ್ಚಿಬೀಳುವ ಹಾಗೆ ‘ಠಪಾರ್’ ಎಂದು ಕುಟುಕಿ ಹಾರಿ ಹೋಯಿತು. ನಾನು ಆ ದೃಶ್ಯ ಕಂಡು ಒಂದು ಕ್ಷಣ ಸ್ತಂಭೀಭೂತನಾಗಿ ಹೋದೆ.
‘ಪರಿಸರದ ಕತೆ’ಯಲ್ಲಿ ಹಕ್ಕಿಯೊಂದು ಬಂದು ಗೋಡೌನಿನಲ್ಲಿನ ಗಾಜನ್ನು ಕುಟ್ಟುವ ಬಗ್ಗೆ ತೇಜಸ್ವಿ ಬರೆದಿದ್ದನ್ನು ಓದಿದ್ದ ನನಗೆ ಈಗ ಕಣ್ಮುಂದೆಯೇ ಇಂತಹದ್ದೊಂದು ದೃಶ್ಯ ನಡೆದದ್ದು ನೋಡಿ ಪರಮಾಶ್ಚರ್ಯವಾಯಿತು. ಕೆಳಗಿಳಿದು ಬಂದೆ. ರಾಜೇಶ್ವರಿ ತೇಜಸ್ವಿಯವರು ನಗುತ್ತಾ ನಿಂತಿದ್ದರು. ಅವರು ನನಗಾಗುತ್ತಿದ್ದ ಆಶ್ಚರ್ಯವನ್ನು ಗ್ರಹಿಸಿ ‘ಈ ಹಕ್ಕಿ ಪ್ರತಿದಿನ ಬಂದು ಹೀಗೆ ಕುಟ್ಟಿ ಹೋಗುತ್ತೆ’ ಎಂದು ಹೇಳಿದರು. ‘ಪರಿಸರದ ಕತೆ’ಯಲ್ಲಿ ಬರುವ ಇದೇ ರೀತಿಯ ಪ್ರಸಂಗದ ಬಗ್ಗೆ ನಾನು ಅವರಿಗೆ ಹೇಳಿದೆ. ಅವರು ಹೌದು ಎಂದು ನಗೆಯಾಡಿದರು.
ಈ ಘಟನೆಯ ಬಗ್ಗೆ ಸೋಜಿಗಪಡುತ್ತಾ, ಮಾತನಾಡುತ್ತಾ ಕುಳಿತಿದ್ದಾಗ, ತೇಜಸ್ವಿ ಸ್ಕೂಟರ್ ನೋಡುತ್ತಿದ್ದಾಗ ಮಚ್ಚು ಹಿಡಿದು ನಮ್ಮ ಹಿಂದೆ ಬಂದು ನಿಂತಿದ್ದ ಆ ವ್ಯಕ್ತಿ ಬಂದು ಶ್ರೀಮತಿ ರಾಜೇಶ್ವರಿ ತೇಜಸ್ವಿಯವರಿಗೆ ತೋಟದ ಆಳುಗಳ ಬಗ್ಗೆ ಏನೋ ಹೇಳಿದರು. ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ನಮ್ಮನ್ನು ಆತನಿಗೆ ತೇಜಸ್ವಿಯವರ ಬಗ್ಗೆ ‘ಡಾಕ್ಯುಮೆಂಟರಿ ಮಾಡಬೇಕೆಂದು ಬಂದಿರುವವರೆಂದು’ ಪರಿಚಯಿಸಿದರು. ‘ಇವ್ನು ಶಿವ ಅಂತ, ನಮ್ ತೋಟದವನು’ ಎಂದು ಆತನನ್ನು ನಮಗೆ ಪರಿಚಯಿಸಿದರು. ಶಿವ ಮುಗ್ಧವಾಗಿ ನಗುತ್ತಾ ನಮಗೆ ನಮಸ್ಕರಿಸಿ ಬಂದ ಕೆಲಸ ಮುಗಿಯಿತು ಎನ್ನುವಂತೆ ಅಲ್ಲಿಂದ ನಡೆದು ತೋಟದೊಳಗೆಲ್ಲೊ ಮರೆಯಾಗಿ ಹೋದ.ನಾವು ಮನೆಯ ಹಿಂದಿನ ವಿಶಾಲ ಅಂಗಳದಲ್ಲಿ ಹಾಕಿದ್ದ ಕುರ್ಚಿಗಳ ಮೇಲೆ ಕುಳಿತೆವು. ಆಗ ಅಷ್ಟು ಹೊತ್ತಿನವರೆಗು ಅದೆಲ್ಲಿತ್ತೊ ನಾಯಿಯೊಂದು ಓಡಿ ಬಂದು ನಮ್ಮ ಗಮನ ಸೆಳೆಯಲೆಂಬಂತೆ ಅಂಗಳದಲ್ಲಿ ಬಿದ್ದು ಆಕರ್ಷಕವಾಗಿ ಒದ್ದಾಡತೊಡಗಿತು. ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ‘ಏಯ್ ಗುಂಡ ಸುಮ್ನಿರೊ, ಹೋಗು ಆ ಕಡೆ’ಎಂದು ಅದಕ್ಕೆ ಗದರಿಸಿ ಸುಮ್ಮನಾಗಿಸುವ ಪ್ರಯತ್ನ ಮಾಡಿದರು. ಆ ಅದರೆ ಅವರ ಮಾತು ಕಿವಿಗೆ ಹಾಕಿಕೊಳ್ಳದೇ ಹಾಗೇ ಹೊರಳಾಡುತ್ತಿತ್ತು.‘ಇದು ಗುಂಡ ಅಂತ. ನಾವು ಕಿವಿ, ಮರಿ (ತೇಜಸ್ವಿಯವರು ಸಾಕಿದ್ದ ನಾಯಿಗಳ ಹೆಸರು) ಎಲ್ಲಾ ತೀರ್ಕೊಂಡ ನಂತರ ನಾಯಿ ಸಾಕೋದೇ ಬೇಡ ಅಂತ ತೀರ್ಮಾನಿಸಿದ್ವಿ. ಇರೋವರೆಗೂ ಮುದ್ದಾಗಿ ಮನೆ ಸದಸ್ಯರ ಥರ ಇರ್ತವೆ. ಆದ್ರೆ ಸಾಯೋವಾಗ ತುಂಬಾ ನೋವಾಗ್ತದೆ ಅಂತ ಹಾಗೆ ನಿರ್ಧಸಿದ್ವಿ. ಹಾಗಾಗಿ ತುಂಬಾ ದಿನ ನಮ್ಮ ಮನೆಯಲ್ಲಿ ಯಾವುದೇ ನಾಯಿಗಳು ಇರಲಿಲ್ಲ. ಆದರೆ ತೇಜಸ್ವಿ ಬೆಳಿಗ್ಗೆ ವಾಕ್ ಹೋಗ್ತಿದ್ದಾಗ ಇದು ಪ್ರತಿದಿನ ಅವರನ್ನೇ ಹಿಂಬಾಲಿಸ್ಕೊಂಡು ಗೇಟಿನವರೆಗು ಬಂದು ಅಮೇಲೆ ವಾಪಸ್ ಹೋಗ್ತಾ ಇತ್ತಂತೆ. ಅವತ್ತು ಕೂಡ ಇದು ಹಾಗೆ ಗೇಟಿನವರೆಗು ಬಂದಿದೆ. ಆಗ ಇವರು ಗೇಟ್ ತೆಗೆದು ‘ಬರ್ತಿಯ ಒಳಗೆ’ ಅಂತ ಕೇಳಿದ್ರಂತೆ. ಇದು ನೇರ ಗೇಟ್ ದಾಟಿ ಒಳಗಡೆ ಬಂದೇ ಬಿಡ್ತು. ಅವತ್ತಿನಿಂದ ಇದು ನಮ್ಮ ಮನೆಯ ಮತ್ತೊಬ್ಬ ಸದಸ್ಯನಾಗಿದೆ’ ಎಂದು ಗುಂಡನ ಕಥೆ ಹೇಳಿದರು. ನಾವು ಗುಂಡನ ಕಡೆ ನೋಡಿದೆವು. ಅದು ಹಾಗೇ ಸ್ವಲ್ಪ ಹೊತ್ತು ಹೊರಳಾಡುತ್ತಿದದ್ದು ತೋಟದ ಕಡೆಯಿಂದ ಕೇಳಿ ಬಂದ ಯಾವುದೋ ಸದ್ದಿನ ಜಾಡು ಹಿಡಿದು ಆ ಕಡೆ ಓಡಿ ಹೋಯ್ತು.
ಗಡಿಯಾರ ೧೨ ಗಂಟೆ ತೋರಿಸುತ್ತಿತ್ತು.ನಮಗೆ ಬೇಕಿದ್ದ ಮಾಹಿತಿಗಳು ಸಿಕ್ಕಿದ್ದರಿಂದ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರಿಗೆ ಹೊರಡುವುದಾಗಿ ಹೇಳಿದೆವು. ಅವರು ಅದೇ ಮುಗ್ದತೆಯಲ್ಲಿ ನಗುತ್ತಾ ‘ಒಳ್ಳೆದಾಗ್ಲಿ’ ಎಂದು ಹಾರೈಸಿದರು. ನಮ್ಮ ರಿಸರ್ಚ್ ಕೆಲಸವೆಲ್ಲ ಮುಗಿಸಿ ಸಾಧ್ಯವಾದಷ್ಟು ಬೇಗ ಚಿತ್ರೀಕರಣಕ್ಕೆ ಬರುತ್ತೇವೆ ಎಂದು ಅವರಿಗೆ ತಿಳಿಸಿ ತೇಜಸ್ವಿಯವರ ‘ನಿರುತ್ತರ’ದ ಮನೆಯಿಂದ ಹೊರಟು ಬಂದೆವು. ತೋಟದ ಮಧ್ಯದ ಕಾಲುದಾರಿಯಲ್ಲಿ ನಡೆದು ಬರುತ್ತಿದ್ದಾಗ ‘ಯಾರೋ ನಮ್ಮನ್ನು ಹಿಂಬಾಲಿಸುತ್ತಿದ್ದಾರೆ’ ಎನ್ನಿಸಿ ಹಿಂತಿರುಗಿ ನೋಡಿದರೆ ತೇಜಸ್ವಿಯವರ ‘ಗುಂಡ’ ನಮ್ಮ ಹಿಂದೆ ಮೌನವಾಗಿ ಹೆಜ್ಜೆ ಹಾಕುತ್ತಾ ಬರುತ್ತಿದ್ದ. ‘ನಿರುತ್ತರ’ದ ಹಳದಿ ಗೇಟಿನವರೆಗೂ ಬಂದ ಗುಂಡ ನಾವು ಗೇಟು ದಾಟಿ ರಸ್ತೆಗೆ ಬಂದದ್ದನ್ನು ನೋಡಿ ಹಿಂತಿರುಗಿ ತೋಟದೊಳಗೆ ಹೊರಟು ಹೋದ. ಹಿಂತಿರುಗಿ ಹೋಗುತ್ತಿದ್ದ ಗುಂಡನನ್ನೇ ನೋಡುತ್ತಾ ನಿರುತ್ತರದ ಮನೆ, ಅವರ ಪತ್ನಿ, ಅವರ ನಾಯಿ, ಸ್ಕೂಟರ್ರು, ಗಾಜು ಕುಟ್ಟುವ ಹಕ್ಕಿ, ಬೆತ್ತದ ಕುರ್ಚಿ, ಮನೆಯ ಹಿಂದಿನ ಅಂಗಳ, ತೋಟದ ಶಿವ, ಹಳದಿ ಗೇಟು ಎಲ್ಲದ್ದರಲ್ಲೂ ತೇಜಸ್ವಿಯನ್ನೇ ಕಂಡಂತಾಗಿ ಒಂದುಕ್ಷಣ ಭಾವುಕನಾದಂತಾಗಿ ಕಣ್ಣು ತುಂಬಿ ಬಂದವು. ಹಿಂತಿರುಗಿ ನೋಡಲಾಗದೇ ಹೇಮಂತನೊಂದಿಗೆ ರಸ್ತೆ ಕಡೆ ಹೆಜ್ಜೆ ಹಾಕಿದೆ.
(ಮುಂದುವರೆಯುವುದು…)

‍ಲೇಖಕರು avadhi

14 July, 2013

3 Comments

  1. kirana

    ಸೊಗಸಾದ ನಿರೂಪಣೆ… ತುದಿಗಾಲಲ್ಲಿ ನಿಂತು ಕಾಯೋ ಹಾಗೆ ಮಾಡಿದ್ದೀರಿ
    ಒಟ್ಟಿಗೆ ಪ್ರಕಟಿಸಿಬಿಡಿ ಎಲ್ಲಾ ಭಾಗಗಳನ್ನು

  2. Anonymous

    ತುಂಬಾ ಚೆನ್ನಾಗಿದೆ, ನಮ್ಮೆಲ್ಲರ ತೇಜಸ್ವಿ ಸರ್ ಭೌತಿಕವಾಗಿ ಇಲ್ಲವಾದ ಮೇಲೆ ಅವರ ನೆನಪನ್ನು ನಿಮ್ಮ ಬರಹ ಮತ್ತಷ್ಟು ಆಪ್ತವಾಗಿಸುತ್ತದೆ. ತುಂಬಾನೇ ಧನ್ಯವಾದಗಳು ನಿಮಗೆ.

  3. ಮುರಳಿಮೋಹನ್ ಎಂ

    ನಮ್ಮೆಲ್ಲರ ತೇಜಸ್ವಿ ಸರ್ ಭೌತಿಕವಾಗಿ ಇಲ್ಲವಾದ ಮೇಲೆ ಈ ನಿಮ್ಮ ಬರಹ ಅವರ ನೆನಪನ್ನು ಮತ್ತಷ್ಟು ಆಪ್ತವಾಗಿಸುತ್ತದೆ. ತುಂಬಾ ಕುತೂಹಲಕಾರಿಯಾಗಿದೆ ನಿಮ್ಮ ಬರಹ ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading