ತುಳು ಸಂಸ್ಕೃತಿಯ ಕಿರೀಟಕ್ಕೆ ನವಿಲು ಗರಿ..

ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರ ವಿಶಿಷ್ಟ ಕೃತಿ -ಕರಾವಳಿಯ ೧೦೦೧ ದೈವಗಳು.

ಈ ಕೃತಿಗೆ ಖ್ಯಾತ ಸಾಹಿತಿ ಡಾ ನಾ ಮೊಗಸಾಲೆ ಅವರು ಬರೆದ ಮುನ್ನುಡಿ ಇಲ್ಲಿದೆ-

ಡಾ ನಾ ಮೊಗಸಾಲೆ

ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ತಂದೆ ವೇದಮೂರ್ತಿ ನಾರಾಯಣ ಭಟ್ಟರು ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು.

ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ನೂರ ಐವತ್ತನಾಲ್ಕು ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.

ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ. ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಹದಿನೇಳು ದೈವಗಳನ್ನು ಗುರುತಿಸಿದ್ದರೆ, ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ. ಚಿನ್ನಪ್ಪಗೌಡರು ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು ದೈವಗಳ ಅಸ್ತಿತ್ವವನ್ನು ಕಂಡರಿಸಿದ್ದಾರೆ.. ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2014) ನಾಲ್ಕು ನೂರ ಏಳು ದೈವಗಳನ್ನು ಉಲ್ಲೇಖಿಸಿದರು.

ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ನೂರ ಐವತ್ತನಾಲ್ಕು ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.

ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧಾನ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ.

ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! ಡಾ. ಲಕ್ಷ್ಮೀ ಪ್ರಸಾದ್ ಅವರು ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು ಎಂ.ಫಿಲ್ ಪದವಿ ಹಾಗೂ ಎರಡು ಪಿ.ಹೆಚ್.ಡಿಯ ಗರಿಯೂ ಅವರ ಸಾಧನೆಗೆ ದಕ್ಕಿದೆ. ಸಂಸ್ಕೃತ ಎಂ.ಎಯಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ಅವರು ಕನ್ನಡ ಎಂ.ಎ.ಯಲ್ಲಿ ನಾಲ್ಕನೇ ರ್ಯಾಂಕಿಗೂ ಭಾಜನರಾಗಿದ್ದಾರೆ.

ಬದುಕನ್ನು ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳಿಗೆ ಮೀಸಲಿಟ್ಟಿರುವ ಅವರ ಈ ಇಪ್ಪತ್ತ ಮೂರನೆಯ ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ. ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ ತನಗೆ ತಾನೇ ಸ್ವಯಂಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಅಪರೂಪದಲ್ಲಿ ಅಪರೂಪದ್ದು.

ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟ ಅವರ ಸಂಶೋಧನೆಯಲ್ಲಿ ಆಯ್ದ ಸಾವಿರದ ಇನ್ನೂರ ಏಳು ದೈವಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ.

ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ. ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.

‍ಲೇಖಕರು Admin

August 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: