ಅಂತರ್ ಪಿಶಾಚಿ
ಅನುಪಮಾ ಪ್ರಸಾದ್
ರಾಜೀವನನ್ನು ಆಫೀಸ್ನತ್ತ ಮಗನನ್ನು ಶಾಲೆಯತ್ತ ದಬ್ಬಿ ಮುಂಬಾಗಿಲು ಹಾಕಿಕೊಳ್ಳುವ ಹೊತ್ತಿಗೆ ಗಡಿಯಾರದ ಮುಳ್ಳು ಬೆಳಗಿನ ಒಂಭತ್ತು ಗಂಟೆ ತೋರಿಸಿತು. ಒಂದೈದು ನಿಮಿಷ ಕುಳಿತು ಪತ್ರಿಕೆ ತಿರುವಿ ಹಾಕೋಣ ಅಂದುಕೊಂಡು ಸೋಫಾದಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಗೇಟಿನಾಚೆ `ರದ್ದೀ ಪೇಪರ್…ರದ್ದೀ ಪೇಪರ್…ಅನ್ನುವ ಕೂಗು. ಶೆಲ್ಪ್ಗಳಲ್ಲಿ ವರ್ಷಗಳಿಂದ ಪೇರಿಸಿಟ್ಟ ಪತ್ರಿಕೆಗಳಿವೆ. ಅಪರೂಪಕ್ಕೆ ರದ್ದಿಯವ ಮನೆಯೆದುರು ಬಂದಿದ್ದಾನೆ. ಸುಲಭದಲ್ಲಿ ಖಾಲಿ ಮಾಡಬಹುದು ಅನಿಸುತ್ತಿದ್ದಂತೆ ಆತ ಮುಚ್ಚಿದ ಬಾಗಿಲು ನೋಡಿ ಮುಂದೆ ಹೋಗುವುದು ಬೇಡ ಅಂದುಕೊಂಡು ಪಟ್ಟನೆ ಬಾಗಿಲು ತೆರೆದೆ. ಅದಕ್ಕಾಗೇ ಕಾಯುತ್ತಿದ್ದಂತೆ ಗೇಟು ತೆರೆದು ಒಳ ಬಂದವನೇ ಮೆಟ್ಟಿಲ ಮೇಲೆ ಕುಳಿತು ತಲೆಗೆ ಕಟ್ಟಿಕೊಂಡಿದ್ದ ಮುಂಡಾಸು ಬಿಚ್ಚಿ ಕುಡುಗಿ ಮತ್ತೆ ತಲೆಗೆ ಸುತ್ತಿಕೊಳ್ಳುತ್ತ ; ನೀವು ಪೇಪರಿನ ಕಟ್ಟವನ್ನು ಈ ಗೋಣಿ ಮೇಲೆ ಹಾಕಿಡಿ. ನಾನು ಹೆಬ್ಬಾರರ ಮನೆವರೆಗೆ ಹೋಗಿ ಬರ್ತೇನೆ.
ಕಾಸು-ತೂಕ ಸರಿಯಿದ್ದರೆ ಮಾತ್ರ ನಿಂಗೆ ಹಾಕ್ತೇನೆ. ಗತ್ತಿನಲ್ಲಿ ಹೇಳಿದೆ.
ಆತ ಕುಳಿತಲ್ಲಿಂದ ಎದ್ದು ಅಂಗಳದ ಬದಿಗೆ ಹೋಗಿ ಕ್ಯಾಕರಿಸಿ ತುಪ್ಪಿ ಸೊಂಟದ ಬಳಿ ಜಾರಿದ ಮುಂಡು ಕಟ್ಟಿಕೊಳ್ಳುತ್ತ
ಈ ಅಂದುಕುಞಿ ಮೋಸ ಮಾಡಿದರೆ ಅಲ್ಲನ ಮೇಲೆ ಆಣೆ ಅಮ್ಮ. ನೀವು ಎಲ್ಲ ತೆಗೆದಿಡಿ. ನಾನು ಹೆಬ್ಬಾರರ ಮನೆಯಲ್ಲಿ ಒಂದು ದನ ಕೊಡ್ತಾರಂತೆ. ನೋಡಿ ಬರ್ತೇನೆ. ಅವನು ಅತ್ತ ಹೋಗುತ್ತಿದಂತೆ ಬೇಗ ಬೇಗ ಶೆಲ್ಪ್ನಲ್ಲಿದ್ದ ಪತ್ರಿಕೆಗಳ ರಾಶಿ ಇಳಿಸಲಾರಂಭಿಸಿದೆ. ಯಾವತ್ತೋ ನೋಡಿದ ಪತ್ರಿಕೆಯಾಗಿದ್ದರೂ ಏನಾದರೂ ವಿಚಾರಗಳು ಬಾಕಿಯಾಗಿದೆಯೋ ನೋಡುವುದು ಅಥವಾ ಆಸಕ್ತಿಯ ವಿಷಯವಾಗಿದ್ದರೆ ಮತ್ತೊಮ್ಮೆ ಓದುವುದು ನನ್ನ ದುರ್ಬುದ್ದಿಯಾದ್ದರಿಂದ ಪತ್ರಿಕೆಗಳನ್ನು ಹಾಗಿಂದ ಹಾಗೆ ಹೊರ ಸಾಗಿಸಲು ಮನಸಾಗಲಿಲ್ಲ. ರದ್ದಿಯ ಅಂದುಕುಞಿ ಮತ್ತೆ ಬಂದು ಕೂಗಿದಾಗಲೇ ಹೊತ್ತು ಸರಿದಿದ್ದು ಗೊತ್ತಾಗಿದ್ದು. ಸ್ಟೂಲ್ ಮೇಲೆ ಹತ್ತಿ ನಿಂತು ಮೇಲಿನ ಶೆಲ್ಪ್ನಲ್ಲಿ ಬಾಕಿಯಿದ್ದ ಪೇಪರ್ಗಳನ್ನು ಇಳಿಸಿದೆ. ಕೈ ಜಾರಿ ಒಂದಷ್ಟು ಪೇಪರ್ ಕೆಳ ಬಿತ್ತು. ಮೂರ್ನಾಲ್ಕು ಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಶ್ರದ್ಧಾಂಜಲಿ ಕಾಲಂನಲ್ಲಿ ಎರಡು ಜಡೆ ಹಾಕಿದ ಮುದ್ದಾದ ಹುಡುಗಿಯ ಭಾವಚಿತ್ರ. ಅದು ಯಾರೆಂದು ನೋಡುವ ಅಗತ್ಯವೇ ಇಲ್ಲ. ಅಷ್ಟರ ಮಟ್ಟಿಗೆ ನನ್ನ ಮನದಲ್ಲಿ ಅವಳ ಮುಗ್ದ ಮುಖ ಅಚ್ಚಾಗಿತ್ತು. ಆಕೆ ವರ್ಷಗಳ ಹಿಂದೆ ಮನೆಯಿಂದ ಪರೀಕ್ಷೆಗೆಂದು ಹೊರಟು ದಾರಿ ಮಧ್ಯೆ ಪುಂಡರ ಕೈಗೆ ಸಿಕ್ಕಿ ದುರಂತ ಅಂತ್ಯ ಕಂಡ ವಿಂದ್ಯ ಶರ್ಮ. ಆ ದಿನಗಳ ಪತ್ರಿಕಾ ವರದಿಗಳು, ಟಿ.ವಿ. ವಾರ್ತೆಗಳು ಮತ್ತೆ ಹಸಿಯಾಗಿ ಕಾಡಲಾರಂಭಿಸಿತು. ಆ ಪತ್ರಿಕೆಗಳನ್ನು ಎತ್ತಿಟ್ಟುಕೊಂಡು ಉಳಿದಿದ್ದನ್ನೆಲ್ಲ ಅಂದುಕುಞಿಯ ಮುಂದೆ ಸುರಿದೆ. ತೂಕವನ್ನೂ ಗಮನಿಸದೆ ಅವನು ಕೊಟ್ಟ ಕಾಸು ಇಸಿದುಕೊಂಡು ಒಳ ಸರಿದವಳಿಗೆ ಕೆಟ್ಟ ನೆನಪು ಮರುಕಳಿಸಿ ಗಂಟಲೊಳಗೆ ಉಂಡೆ ಉರುಳಿದಂತಾಗಿ ಎದೆಯೊಳಗೆ ತಿದಿಯೊತ್ತಿದ ಅನುಭವ. ಮೈ ನಡುಗಿತು. ಇಪ್ಪತ್ತು ವರ್ಷಗಳ ಹಿಂದಿನ ಆ ದಿನ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಈ ವಿಂದ್ಯ ಶರ್ಮಳಂತೆ ಅಮವಾಸ್ಯೆಯೊಳಗೆ ಕಳೆದು ಹೋಗಿಬಿಡುತ್ತಿದ್ದೆನಲ್ಲ. ಆ ಶಂಕರಭಟ್ಟ ಯಾವ ಮಾಯಕದಲ್ಲಿ ಮನೆಯೊಳಗೆ ಬಂದುಬಿಟ್ಟಿದ್ದನೊ! ಪರಿಚಿತ ನೆಂಟನಾದ್ದರಿಂದ ಅಂಗಳದಲ್ಲಿದ್ದ ನಾಯಿಯೂ ಬಾಲವಾಡಿಸಿರಬೇಕು. ಅಕ್ಕನನ್ನ ಹೆರಿಗೆಗಾಗಿ ಆಸ್ಪತ್ರೆಗೆ ಅವನ ಕಾರಿನಲ್ಲೇ ಕರೆದೊಯ್ದು ಅಡ್ಮಿಟ್ ಮಾಡಿದ್ದರಿಂದ ಅಮ್ಮ ಅವಳೊಂದಿಗಿದ್ದಿದ್ದು ಅವನಿಗೆ ಗೊತ್ತೇಇತ್ತಲ್ಲ. ಸದಾ ಮುಂಬಾಗಿಲು ತೆರೆದೇ ಇರುತ್ತಿದ್ದ ಹಳ್ಳಿ ಮನೆ. ಅಪ್ಪಯ್ಯ ಆಳುಗಳೊಂದಿಗೆ ತೋಟದಲ್ಲಿರುವ ಹೊತ್ತು ಅನ್ನುವುದೂ ಅವನಿಗೆ ಗೊತ್ತಿದ್ದಿದ್ದಕ್ಕೇ ಸದ್ದಿಲ್ಲದೆ ಒಳ ಬಂದು ಕಸಗುಡಿಸುತ್ತಿದ್ದವಳನ್ನು ಹಿಂದಿನಿಂದ ಬಿಗಿಯಾಗಿ ಹಿಡಿದು ಬಿಟ್ಟಿದ್ದನಲ್ಲ. ಅವತ್ತಿನ ಅವಮಾನದಿಂದ ರಕ್ಷಿಸಿದ್ದು ಕೈಯಲ್ಲಿದ್ದ ಪೊರಕೆ. ಅದೆಷ್ಟು ರಭಸದಿಂದ ಪೊರಕೆ ಮೇಲಕ್ಕೆತ್ತಿದ್ದೆನೆಂದರೆ ಮಡಲ ಕಡ್ಡಿ ಅವನ ಕಣ್ಣಂಚಿಗೆ ಬಲವಾಗಿ ಗೀರಿದ್ದರಿಂದ ತಾನೇ ತಾನಾಗಿ ಕೈ ಬಿಟ್ಟು ಪೆಚ್ಚು ಪೆಚ್ಚಾಗಿ ನಗುತ್ತ `ಹೆದರಿಕೆ ಆಯ್ತಾ? ಇದು ನಾನು ಮಾರಾಯ್ತಿ.’ ಅನ್ನುತ್ತ ಹೊರ ನಡೆದಿದ್ದ. ಇವತ್ತಿಗೂ ಅವನ ಹಿಡಿತದಲ್ಲಿದ್ದ ತೆವಲಿಗೆ ಅಸಹ್ಯ,ಅವಮಾನದಿಂದ ಜೀವ ಕುದಿಯುತ್ತಿದೆ. ಅಂತಾದ್ದರಲ್ಲಿ ಆ ಹುಡುಗಿ ಎಂತಹ ಸಂಕಟ ಅನುಭವಿಸಿರಬಹುದು. ಯಾಕೆ ಹೆಣ್ತನಕ್ಕೆ ಇಂತಹ ಅವಮಾನ?. ನನ್ನ ಏಕಾಂತದ ತಲ್ಲಣಗಳಿಗೆ ಸಾಂತ್ವನ ಹೇಳುವಂತೆ ಸಮುದ್ರದ ಭೋರ್ಗರೆತ ಕಿವಿಗಪ್ಪುವ ಪಡುವಣದ ಬಾಲ್ಕನಿಗೆ ಹೋಗಿ ಕುಳಿತೆ. ಎಲ್ಲಿಂದಲೋ ಸುತ್ತಿಕೊಂಡು ಬಂದ ಸುಳಿಗಾಳಿಯ ಸುರುಳಿಯೊಳಗೆ ತರಗೆಲೆಗಳು, ಚಲ್ಲಾಪಿಲ್ಲಿಯಾಗಿದ್ದ ಪ್ಲಾಸ್ಟಿಕ್ಗಳು. ಕಣ್ಣೊಳಗೆ ಧೂಳಿನ ಕಣಗಳು ಸೇರಿಕೊಳ್ಳುವ ಭಯದಿಂದ ಬಿಗಿಯಾಗಿ ಕಣ್ಣಮುಚ್ಚಿದೆ. ಆಗ ತೇಲಿ ಬಂತು ಆ ಧ್ವನಿ.
`ಶಶಿಯಕ್ಕ…’ ಮುಗ್ದ ಧ್ವನಿ. ವೇದನೆಯ ಧ್ವನಿ. ಪ್ರೀತಿ ಬೇಡುವ ಧ್ವನಿ.
`ಏನು ಪುಟ್ಟಿ?’. ಪುಂಗಿಯ ನಾದಕ್ಕೆ ತೂಗುವ ಹಾವಿನಂತೆ ಹೇಳಿದೆ.
`ಅಂತರ ಪಿಶಾಚಿಯಾಗಿದ್ದೀನಿ ಶಶಿಯಕ್ಕ. ಯಾವುದನ್ನೂ ಬಿಡದೆ ಎಲ್ಲ ಹೇಳಬೇಕು. ಹೇಳಲಾ?’
`ಹೇಳು ಪುಟ್ಟಾ’. ಅಂದೆ. ಅವಳು ಹೇಳಲಾರಂಭಿಸಿದಳು.
*******
`ಆ ದಿನ ಅಮ್ಮ ನನ್ನನ್ನ ನಾಲ್ಕು ಘಂಟೆಗೇ ಎಬ್ಬಿಸಿ ಓದಲು ಕೂರಿಸಿದ್ದಳು. ಅವಳು ಬಚ್ಚಲೊಲೆಗೆ ಉರಿ ಹಾಕಿ ನನಗೆ ಸ್ನಾನಕ್ಕೆ ನೀರು ಕಾಯಿಸಿಟ್ಟಿದ್ದಳು. ಏಳು ಘಂಟೆಯಾಗುತ್ತಿದ್ದಂತೆ ಓದುತ್ತಿದ್ದ ನನ್ನನ್ನೆಬ್ಬಿಸಿ ಸ್ನಾನಕ್ಕಟ್ಟಿದ್ದಳು. ಸ್ನಾನ ಮಾಡಿ ಬರುತ್ತಿದ್ದಂತೆ ದೇವರಿಗೆ ತುಪ್ಪದ ದೀಪ ಹಚ್ಚಿ ನಮಸ್ಕಾರ ಮಾಡು ಅಂದಳು. ಜಡೆ ಹೆಣೆಯುವಾಗ `ಪರೀಕ್ಷೆಗೆ ಬರೆಯುವಾಗ ಗಡಿಬಿಡಿ ಮಾಡಿಕೊಳ್ಳಬೇಡ ವಿಂದ್ಯ. ಚೆನ್ನಾಗಿ ಬರೆದು ಬಾ’ ಅಂದಿದ್ದಳು. ಮೂವರು ಅಕ್ಕಂದಿರ ನಂತರ ಹುಟ್ಟಿದವಳು ನಾನು. ಓದಿನಲ್ಲಿ ತುಂಬ ಚುರುಕಿದ್ದೆ. ಕೈಯಲ್ಲಿ ಕಾಸಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಅನ್ನುತ್ತಾರಲ್ಲ ಹಾಗೆ ಅಪ್ಪನಿಗೆ ನನ್ನನ್ನು ವೈದ್ಯಕೀಯ ಓದಿಸುವ ಆಸೆ. ನನಗೆ ವೈದ್ಯೆಯಾಗಿ ಹಳ್ಳಿಯಲ್ಲಿ ಸೇವೆ ಮಾಡಬೇಕೆಂಬ ಆಸೆ. ಅದಕ್ಕೆ ಕಾರಣವೂ ಇತ್ತು ಶಶಿಯಕ್ಕ. ನಮ್ಮ ಹಳ್ಳಿಯಲ್ಲಿ ಸರಿಯಾದ ಆಸ್ಪತ್ರೆ ಇರಲಿಲ್ಲ. ನನ್ನ ಚಿಕ್ಕಪ್ಪ ಖಾಯಿಲೆ ಬಿದ್ದು ಸರಿಯಾದ ಚಿಕಿತ್ಸೆ ದೊರೆಯದೆ ತೀರಿಕೊಂಡಾಗ ಅಪ್ಪ ಅಮ್ಮನ ಬಳಿ `ಎಷ್ಟೇ ಕಷ್ಟವಾದರೂ ನಮ್ಮ ವಿಂದ್ಯಳನ್ನು ವೈದ್ಯೆಯನ್ನಾಗಿ ಮಾಡಿಯೇ ತೀರುತ್ತೇನೆ’ ಅಂದಿದ್ದರು. ಹೇಳಿದ್ದು ಮಾತ್ರವಲ್ಲ ಶಶಿಯಕ್ಕ. ಅದೊಂದೇ ಜೀವನದ ಗುರಿ ಅನ್ನುವಂತೆ ದುಡಿಯುತ್ತಿದ್ದರು. ಅಕ್ಕಂದಿರ ಮದುವೆಯಾದ ಮೇಲೆ ಅಮ್ಮ ಅಪ್ಪನ ಹತ್ತಿರ `ಇನ್ನು ಆ ಭಾಷೆ ಬಾರದ ಊರಲ್ಲಿ ಆ ಡಬ್ಬಿ ಹೋಟೆಲ್ನಲ್ಲಿ ಒಲೆ ಉರಿಸಿದ್ದು ಸಾಕು. ಇಲ್ಲೇ ಏನಾದರೂ ಮಾಡಿದರಾಯ್ತು.’ ಅಂದಿದ್ದಳು. ಅಪ್ಪ ಒಪ್ಪಲಿಲ್ಲ.
`ಮಗಳೇ, ಮೆರಿಟ್ ಸೀಟ್ ಗಿಟ್ಟಿಸಿಕೊಳ್ಳುವುದು ನಿನ್ನ ಕರ್ತವ್ಯ. ಅದರ ಮುಂದಿನದು ನನ್ನ ಜವಾಬ್ದಾರಿ.’ ಅಂದುಬಿಟ್ಟಿದ್ದ.
ನನ್ನ ಆಸೆ, ಕನಸುಗಳೂ ಅದೇ ಆಗಿತ್ತು. ಆದರೆ ಆಸೆ, ಕನಸುಗಳ ಮೊಟ್ಟೆ ಒಡೆದು ಮಣ್ಣಿಗೆ ಸೇರಿಸಿಬಿಟ್ಟರಲ್ಲ ಶಶಿಯಕ್ಕ. ಇದರಲ್ಲಿ ನನ್ನ ತಪ್ಪಿತ್ತೆ? ವರ್ಷಾವಧಿ ಪರೀಕ್ಷೆ ಆರಂಭವಾಗುವ ದಿನ. ಪಾಠಗಳನ್ನು ನೆನಪು ಮಾಡಿಕೊಳ್ಳುತ್ತ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೆ. ವರ್ಷಗಳಿಂದ ನಡೆದ ದಾರಿ. ಅಲ್ಲಲ್ಲಿ ಕುರುಚಲು ಪೊದೆ, ಗಿಡ-ಮರಗಳಿದ್ದ ಆ ಪ್ರದೇಶದ ಕಾಲು ದಾರಿಯಲ್ಲಿ ನಡೆಯುತ್ತಿದ್ದಾಗ ದುತ್ತನೆ ಪ್ರತ್ಯಕ್ಷರಾಗಿದ್ದರವರು. ಎಂದೂ ಈ ದಾರಿಯಲ್ಲಿ ಕಾಣಿಸದವರು ಇಂದೇಕೆ ಇಲ್ಲಿ ಅನಿಸಿದರೂ ಕಾಲೇಜಿನಲ್ಲಿ ಕಂಡ ಪರಿಚಿತ ಮುಖಗಳಾದ್ದರಿಂದ ನನ್ನಷ್ಟಕ್ಕೆ ನಾನು ಮುಂದುವರಿದೆ. ಆದರೆ ಅವರ ಬೇಟೆ ನಾನೇ ಅನ್ನುವುದು ಅರ್ಥವಾಗುವ ಹೊತ್ತಿಗೆ ಪರಿಸ್ಥಿತಿ ಕೈ ಜಾರಿತ್ತು ಶಶಿಯಕ್ಕ. ಅವರ ತೆವಲಿನ ಮಾತು, ಅಸಭ್ಯ ವರ್ತನೆ ನನ್ನನ್ನು ರೊಚ್ಚಿಗೆಬ್ಬಿಸಿದ್ದು ಸುಳ್ಳಲ್ಲ.
`ನಂಗೆ ತೊಂದ್ರೆ ಕೊಟ್ಟ್ರೆ ಪ್ರಿನ್ಸಿಪಾಲರಿಗೆ ದೂರು ಕೊಡ್ತೇನೆ’ ಅಂದುಬಿಟ್ಟೆ. ಗಬಕ್ಕನೆ ಅದುಮಿ ಎಳೆದೊಯ್ದರು ಆಲದ ಮರದ ಹಿಂದಿನ ತರಗೆಲೆಗಳ ರಾಶಿಗೆ. ತಪ್ಪಿಸಿಕೊಳ್ಳಲು ಹೆಣಗಿದ್ದೆ. ಸಿಕ್ಕ ಸಿಕ್ಕ ಹಾಗೆ ಕಚ್ಚಿದ್ದೆ. ಹೇಗಾದರೂ ತಪ್ಪಿಸಿಕೊಂಡು ಪರೀಕ್ಷೆಗೆ ಹೋಗುವ ಆಸೆ ಆ ಕ್ಷಣದಲ್ಲೂ ಇತ್ತು ಶಶಿಯಕ್ಕ.
`ನೀನು ನಮ್ಮ ಮೇಲೆ ದೂರು ಕೊಡುತ್ತಿಯೇನೆ? ಅದು ಹೇಗೆ ಕೊಡ್ತೀಯೊ ನೋಡ್ತೇನೆ.’ ಅವನ ಧ್ವನಿಯಲ್ಲಿದ್ದ ಕ್ರೌರ್ಯದಷ್ಟೆ ಅವನ ಹಿಡಿತ ನನ್ನ ಕುತ್ತಿಗೆಯ ಮೇಲೆ ಬಿಗಿಯುತ್ತಿತ್ತು. ಆ ಕ್ಷಣದಲ್ಲಿ ಮೊದಲ ಬಾರಿಗೆ ಅಪ್ಪ-ಅಮ್ಮನ ಮೇಲೆ ಸಿಟ್ಟು ಉಕ್ಕಿತ್ತು. ನಯ-ವಿನಯ ಕಲಿಸಿದರು. ತಗ್ಗಿ ಬಗ್ಗಿ ನಡೆಯಲು ಹೇಳಿದರು. ಒಳ್ಳೆಯವಳಾಗಿರು ಅಂದರು. ದಿನವೂ ದೇವರ ನೆನೆ. ಅವನು ನಂಬಿದವರ ಕೈ ಬಿಡುವುದಿಲ್ಲ ಅಂದರು. ಬೆಳಗ್ಗೆ ಅವನಿಗೆ ತುಪ್ಪದ ದೀಪ ಹಚ್ಚಿದ್ದೆ. ಅಮ್ಮ ಕೊಟ್ಟ ತಿಂಡಿಗೆ ಎಣ್ಣೆ ಹಾಕಿ ತಿಂದಿದ್ದೆ. ತುಪ್ಪದ ದೀಪ ಅವನೆದುರು ಬಚ್ಚಗೆ ಉರಿಯುತ್ತಿದ್ದ ಘಳಿಗೆಯಲ್ಲೆ ನಾನು ಉರಿದು ಹೋದೆ. ಬಂದನಾ ಅವನು? ಕನಸುಗಳು ಸಾಯುತ್ತಿವೆ. ಉಳಿಸಿಕೊ ಅಮ್ಮಾ ಅಂತ ಕಿರುಚಬೇಕೆನಿಸುತ್ತಿತ್ತು. ಆಗ ಇದ್ದಕ್ಕಿದ್ದಂತೆ ಎಲ್ಲ ಹಗುರಾಯ್ತು.
ನಾನು ಎದ್ದು ನಾಗಾಲೋಟದಲ್ಲಿ ಕಾಲೇಜಿನತ್ತ ಓಡಿದ್ದೆ. ಅದಾಗಲೇ ಪರೀಕ್ಷೆ ಆರಂಭವಾಗಿತ್ತು. ನನ್ನ ಸೀಟಲ್ಲಿ ಕುಳಿತು ಪ್ರಶ್ನೆ ಪತ್ರಿಕೆ ಕೇಳಿದರೆ ಆ ಎಕ್ಸಾಮಿನರ್ ಕೆಪ್ಪನಂತೆ, ಕಿವುಡನಂತೆ ನಿಂತು ಬಿಟ್ಟಿದ್ದ. ಅವನು ಮಾತ್ರವಲ್ಲ. ಅಲ್ಲಿದ್ದ ಯಾರೂ ನನ್ನತ್ತ ನೋಡಲೇ ಇಲ್ಲ. ಆದರೂ ಆಸೆಯಿಂದ ಕುಳಿತೇ ಇದ್ದೆ. ಉತ್ತರ ಪತ್ರಿಕೆ ಕೊಟ್ಟು ಒಬ್ಬೊಬ್ಬರೇ ಹೊರಟಾಗ ಕಾಲೆಳೆಯುತ್ತ ಪ್ರಿನ್ಸಿಪಾಲರ ರೂಮಿಗೆ ಹೋದರೆ ಮತ್ತದೇ ಪುನರಾವರ್ತನೆ. ಎದುರಾದ ಗೆಳತಿಯರೂ ಮುಖ ತಿರುಗಿಸಿ ನಿಂತುಬಿಟ್ಟಿದ್ದರು. ಅಳುತ್ತ ಮನೆ ದಾರಿ ಹಿಡಿದಿದ್ದೆ. ಅಮ್ಮ ಅಂಗಳದಲ್ಲೇ ಇದ್ದಳು. ಅವಳಿಗೆ ತೆಕ್ಕೆ ಬಿದ್ದು ಎದೆ ಒಡೆಯುವಂತೆ ಅತ್ತರೂ ಸುಮ್ಮನೆ ನಿಂತೇ ಇದ್ದಳು. ಇನ್ನೂ ಯಾಕಪ್ಪ ಈ ವಿಂದ್ಯ ಬರಲಿಲ್ಲ!? ಅಂತ ಗೊಣಗುತ್ತಿದ್ದಳು. ಸಂಜೆಯಾಗುತ್ತಿದ್ದಂತೆ ಅವಳು ಅಳುತ್ತ ಕಾಲೇಜಿನತ್ತ ಓಡಿದ್ದಳು. ನಾನೂ ಅಮ್ಮಾ ಅನ್ನುತ್ತ ಓಡಿದ್ದೆ. ಕೇಳಿಸಿಕೊಳ್ಳಲೇ ಇಲ್ಲ. ಎಲ್ಲರೂ ನನ್ನ ಬಗ್ಗೇ ಮಾತಾಡಲಾರಂಭಿಸಿದ್ದರು. ರಾತ್ರಿಯಾಗುತ್ತಿದ್ದಂತೆ ಮನೆ ಹತ್ತಿರ ಒಬ್ಬೊಬ್ಬರೇ ಬಂದು ವಿಚಾರಿಸಲಾರಂಭಿಸಿದ್ದರು. ನಾನು ಅತ್ತು ಅತ್ತು ಸೋತು ಹೋಗಿ ಜಗಲಿಯಲ್ಲಿದ್ದ ಬೆಂಚಿನ ಮೇಲೇ ಮಲಗಿಬಿಟ್ಟೆ. ಎಚ್ಚರಾಗುವಾಗ ಬೆಳಕು ಹರಿದಿತ್ತು. ಪೋಲಿಸರು ಅಮ್ಮನನ್ನು ಕರೆದುಕೊಂಡು ಎಲ್ಲಿಗೊ ಹೊರಟಿದ್ದರು. ನಾನೂ ಓಡಿದ್ದೆ. ಹೆತ್ತವರಿಗೆ ರಣ ಯಾತನೆ ನೀಡುವಂತೆ ಹರಿದ ಅರಿವೆಯಲ್ಲಿ ಮೈ ತುಂಬ ಗಾಯದೊಂದಿಗೆ ಅಲ್ಲೊಂದು ಹುಡುಗಿಯ ಹೆಣ ಬಿದ್ದಿತ್ತು. ಅಮ್ಮ ಅದನ್ನು ನೋಡಿದವಳೇ ಎದೆ ಬಿರಿಯುವ ರೋದನದೊಂದಿಗೆ ಕುಸಿದು ಬಿದ್ದಳು. ಹತ್ತಿರ ಹೋಗಿ ನೋಡಿದರೆ ಆ ಹೆಣದ ಕೈಯಲ್ಲಿ ನನ್ನ ವಾಚು! ನನ್ನ ಕೈ ನೋಡಿಕೊಂಡೆ. ಕೈ ಇರಬೇಕಾದ ಜಾಗದಲ್ಲಿ ಏನೂ ಕಾಣಲಿಲ್ಲ. ಬಗ್ಗಿ ಹೆಣದ ಮುಖ ನೋಡಿದೆ. ಬಾತುಕೊಂಡ ಹೆಣದ ಮೂಗಿನಲ್ಲಿ ನನ್ನ ಮೂಗಿನಲ್ಲಿರಬೇಕಾದ ನತ್ತು!. ನನ್ನ ಶರೀರದಿಂದ ನಾನು ಹೊರದಬ್ಬಲ್ಪಟ್ಟಿದ್ದೇನೆ. ಜೀವಿಗಳ ಲೋಕದಲ್ಲಿ ಅಸ್ಥಿತ್ವ ಕಳೆದುಕೊಂಡಿದ್ದೇನೆ ಅಂತ ಆಗ ಅರ್ಥವಾಯ್ತು ಶಶಿಯಕ್ಕ. ಪೋಲೀಸರು ಆ ಶವಕ್ಕೆ ವಸ್ತ್ರ ಮುಚ್ಚಿ ವಾಹನದಲ್ಲಿ ಸಾಗಿಸುವಾಗ ಹುಚ್ಚಿಯಂತೆ ಓಡಿದೆ ಅವರ ಹಿಂದೆ. ಮೊಣಕಾಲಿಗಿಂತ ಕೆಳಗೆ ಮೂರು ಇಂಚು ಉದ್ದ ಇರುವಂತೆ ಅಂಗಿ ಹೊಲಿಸುತ್ತಿದ್ದಳು ಅಮ್ಮ. ಆದರೆ, ಆಸ್ಪತ್ರೆಯ ಟೇಬಲ್ ಮೇಲೆ ಹುಟ್ಟುಡುಗೆಯಲ್ಲಿ ಅಂಗಾತ ಮಲಗಿಸಿ ಉಬ್ಬರಿಸಿದ ದೇಹದ ಅಂಗಾಂಗವನ್ನು ಶ್ವೇತ ವಸ್ತ್ರದಾರಿಗಳು ಗೀರಿ ಗೀರಿ ಕೊಯ್ಯುತ್ತಿದ್ದರೆ ನಾಚಿಕೆ, ಹೇಸಿಗೆ, ಅವಮಾನದಿಂದ ಮುಖ ಮುಚ್ಚಿಕೊಂಡೆ. ಗಂಡು ಸಂತಾನವನ್ನೆಲ್ಲ ಎಳೆದು ತಂದು ಆ ಹೆಣದ ಮೇಲೆ ಹಾಕಿ ಮುಕ್ಕಿಸಬೇಕು ಎಂಬಷ್ಟು ರೋಷ ಉಕ್ಕುತ್ತಿತ್ತು ಶಶಿಯಕ್ಕ. ಅಷ್ಟರಲ್ಲಿ ಸ್ಪೋಟಗೊಂಡಂತೆ ಕಿವಿಗಪ್ಪಳಿಸಿತ್ತು ಅಪ್ಪನ ರೋದನ. ಹೊರಗೋಡಿದೆ. ಗುರುತು ಹಿಡಿಯುತ್ತಾನೆನ್ನುವ ಆಸೆಯಿಂದ ಹೊರಗೋಡಿದೆ. ಅಪ್ಪನ ಕಾಲು ತಬ್ಬಿ ಕುಳಿತೆ. ಪೋಲೀಸರ ವಿಚಾರಣೆ ನಡೆಯುತ್ತಿತ್ತು. ದಾರಿ ತಪ್ಪಿಸುವ ಕೆಲಸ ಜೋರಾಗಿ ನಡೆಯುತ್ತಿತ್ತು. ನನ್ನ ದುರಂತಕ್ಕೆ ಕಾರಣರಾದವರ ಹೆಸರನ್ನು ನಾನು ಗಂಟಲೊಡೆಯುವಂತೆ ಕೂಗಿ ಹೇಳಿದರೂ ಯಾರ ಕಿವಿಗೂ ಅದು ಬೀಳಲೇ ಇಲ್ಲ. ನಾನು ನೋಡುತ್ತಿದ್ದಂತೆ ರಾಜಕೀಯದಾಟ ಸುರುವಾಗಿತ್ತು. ಶವ ಯಾತ್ರೆ ನಡೆದಿತ್ತು. ಕಪ್ಪು ವಸ್ತ್ರ ಧರಿಸಿ ಮೆರವಣಿಗೆಯೂ ಆಯ್ತು. ಬಿಳಿ ವಸ್ತ್ರದಲ್ಲಿ ಸುತ್ತಿ ತಂದ ದರಿದ್ರ ಹಿಡಿದ ನನ್ನ ಹೆಣದ ಮೂಟೆಯನ್ನು ಮನೆ ಜಗಲಿಯಲ್ಲಿ ಮಲಗಿಸಿದ್ದರು. ನನ್ನನ್ನು ಸ್ವರ್ಗಕ್ಕೆ ಸೇರಿಸುವ ಮುಂದಿನ ಕರ್ಮಗಳನ್ನು ನಡೆಸಲು ಪುರೋಹಿತರು ಬಂದು ಕುಳಿತಿದ್ದರು. ಇಂದಿನಿಂದ ಹನ್ನೊಂದು ದಿನಗಳ ಕಾಲ ಯಾರಾದರೂ ಗರುಡಪುರಾಣ ಓದಿದರೆ ಪ್ರೇತಾತ್ಮಕ್ಕೆ ಶಾಂತಿ ಸಿಗುತ್ತದೆ ಅಂದರು. ನನ್ನದು ಶಾಂತಿ ಸಿಗುವಂತ ಸಾವೇ ಶಶಿಯಕ್ಕ? ಉಸಿರಾಡುವುದನ್ನೂ ಮರೆತು ಅವಳ ಮಾತಿಗೆ ಕಿವಿಯಾಗಿದ್ದ ನಾನು `ಇಂದು ನನ್ನೊಡನೆ ಹೇಳಿಕೊಂಡಿದ್ದನ್ನು ನೀನು ಅಂದೇ ನಿನ್ನ ಹೆತ್ತವರೊಡನೆ ಹೇಳಿಕೊಳ್ಳಬಹುದಿತ್ತಲ್ಲ. ಅಪರಾಧಿಗಳನ್ನು ತೋರಿಸಿಕೊಡಬಹುದಿತ್ತಲ್ಲ!?.’ ಅನ್ನುತ್ತ ಅವಳ ಮಾತಿಗೆ ತಡೆಯೊಡ್ಡಿದೆ. `ನಾನು ಪ್ರಯತ್ನಿಸುತ್ತಲೇ ಇದ್ದೆ. ಇನ್ನಿಲ್ಲದಂತೆ ಪ್ರಯತ್ನಿಸಿದ್ದೆ. ಅಪ್ಪ ನನ್ನ ಶವಕ್ಕೆ ಕಿಚ್ಚಿಡುವ ಹೊತ್ತಲ್ಲಿ `ಎತ್ತಿ ಆಡಿಸಿದ ಕೈಗಳಿಂದ ನಿನಗೆ ಕಿಚ್ಚು ಹಚ್ಚುತ್ತಿದ್ದೇನಲ್ಲ ಮಗಳೇ ಅಂತ ರೋದಿಸಿದ ಆ ಕ್ಷಣದಲ್ಲಿ ನಾನವರನ್ನು ಮುಟ್ಟುವ ಹಂತದಲ್ಲಿದ್ದೆ. ಅಷ್ಟರಲ್ಲಿ `ಆ ದುರಾತ್ಮರಿಗೆ ನೀನೇ ಬೇಕಿತ್ತ ಮಗಳೆ.’ ಅನ್ನುತ್ತ ಅಪ್ಪ ಮತ್ತೆ ಕುಸಿದು ಕುಳಿತರು. ಅವರ ಮಾತಲ್ಲೆಲ್ಲೊ ಸ್ವಾರ್ಥದ ನೆರಳಾಡಿತ್ತು. ನನ್ನ ತಂದೆ ಸ್ತ್ರೀತ್ವಕ್ಕಾದ ಅವಮಾನಕ್ಕಾಗಿಯೋ ಒಂದು ನಿಶ್ಪಾಪ ಜೀವಿಯ ದಾರುಣ ಅಂತ್ಯಕ್ಕಾಗಿಯೊ ಮರುಗುವುದಕ್ಕಿಂತ ಹೆಚ್ಚಾಗಿ ಅವರ ಮಗಳಿಗಾಗಿ ಪರಿತಪಿಸಿದ್ದರು
ಶಶಿಯಕ್ಕ. ಹಾಗಾಗಿ ನಾನವರನ್ನು ತಲುಪಲಿಲ್ಲ. ಅಲ್ಲಿ ನನ್ನ ಹೆಣ ಕರಕಲಾಯಿತು. ನಾನು ಮಾತ್ರ ಅಲ್ಲಿಂದ ದೂರ ಸರಿದು ಅಲೆಮಾರಿಯಾದೆ. ಸಾಯುವ ಕ್ಷಣದಲ್ಲಿ ನಾನುಭವಿಸಿದ ಅವಮಾನ, ನೋವುಗಳನ್ನು ಯಾವುದೇ ಸಂಬಂಧವಿಲ್ಲದೆಯೂ ತಾವೇ ಅನುಭವಿಸಿದಂತೆ ಬೇಯುತ್ತಾರಲ್ಲ. ಅಂತವರೊಡನೆ ಆ ಘಳಿಗೆಯಲ್ಲಿ ಮಾತ್ರ ನನಗೆ ಸಂವಾದ ನಡೆಸಲು ಸಾಧ್ಯವಾಗುವುದು. ನಾನು ಮಾತ್ರವಲ್ಲ ಶಶಿಯಕ್ಕ ನನ್ನಂತೆ ಬಲಿಯಾದವರೆಲ್ಲ ತಲುಪದೆ ಉಳಿದಿರುವ ಮೊಬೈಲ್ ಸಂದೇಶಗಳಂತೆ ಅಲೆದಾಡುತ್ತಿದ್ದಾರೆ. ಅಂದಿನಿಂದ ಇಂದಿನವರೆಗು ನನ್ನ ಸಂಕಟ, ಅವಮಾನ, ಯಾತನೆಗಳನ್ನು ತಮ್ಮದಾಗಿಸಿಕೊಂಡು ಹೋರಾಡುವವರಿಗಾಗಿ ಹುಡುಕುತ್ತ ಅಲೆಯುತ್ತಿದ್ದೇನೆ. ಅವಳ ಮಾತಿನ ಇಂಗಿತ ಅರ್ಥವಾಗಿ ನನ್ನೆದೆ ನಡುಗಿತು. ವಿಂದ್ಯ ಶರ್ಮಳ ಬರ್ಬರ ಅಂತ್ಯ ಅದಾಗಿ ವರ್ಷದೊಳಗೆ ಮತ್ತೊಂದು ಕಡೆ ಕಾಲೇಜಿಗೆ ಹೊರಟ ಹುಡುಗಿ ಲೈಂಗಿಕ ಹಿಂಸೆಗೊಳಗಾಗಿ ಕೊಲೆಯಾದ ವಿಚಾರ ಮಾಧ್ಯಮಗಳಲ್ಲಿ ನೋಡಿದಾಗ ಆಕ್ರೋಶದಿಂದ ಮೈ ಉರಿದಿದ್ದು ಮಾತ್ರವಲ್ಲ. ಇಂದಿಗೂ ಅಂತಹ ಸಾವಿಗೊಳಗಾದ ಜೀವ ಅಂತಿಮ ಕ್ಷಣದಲ್ಲಿ ಅನುಭವಿಸಿರಬಹುದಾದ ಯಾತನೆ ನನ್ನದೇ ಅನಿಸುವಷ್ಟು ಸಂಕಟವಾಗುತ್ತಿದೆ. ಆದರೆ, ಹೋರಾಟದ ಹಾದಿಯೆಂದರೆ ಮನೆಯೊಳಗೆ ಕುಳಿತು ಮೈ ಪರಚಿಕೊಂಡಂತಲ್ಲ ಅನ್ನುವ ಸತ್ಯ ಕಣ್ಣಿಗೆ ರಾಚುವಾಗ ಧ್ವನಿಗೆ ಧ್ವನಿ ಸೇರಿಸುವ ಸ್ಥೈರ್ಯ ಉಡುಗಿತು.
`ನನಗೆ ನನ್ನದೇ ಮಿತಿಗಳಿವೆಯಲ್ಲ ಹುಡುಗಿ. ನನ್ನಂತವಳಿಗೆ ಇದು ಹೇಳಿದ್ದಲ್ಲ.’ ಅಪ್ರಯತ್ನವಾಗಿ ಆ ಮಾತು ನನ್ನಿಂದ ಹೊರ ಬಿತ್ತು. ಪ್ರತಿಕ್ರಿಯೆ ಬರಲಿಲ್ಲ. ಕಣ್ಣು ತೆರೆದರೆ ವೇಗ ಕಳೆದುಕೊಂಡ ಸುಳಿಗಾಳಿಯ ಹಿಡಿತ ತಪ್ಪಿ ನೆಲದತ್ತ ಸರಿಯುತ್ತಿದ್ದ ಕಸದ ರಾಶಿ ನೆಲೆ ತಲುಪುತ್ತಿತ್ತು. ಅದರೊಳಗೆ ಭದ್ರವಾಗಿ ಶಂಕರ ಭಟ್ಟ ನಿಂತಿದ್ದ. ಹೊಸಕಿ ಹಾಕುವ ಛಲದಿಂದ ನನ್ನ ಕೈ ಪೊರಕೆ ಹುಡುಕಿತು.






ಮೇಡಂ,
ನಿಮ್ಮ ಪೊರಕೆ ಹಿಡಿದ ಕೈ, ಮನಸ್ಸಿನ ಆಕ್ರೋಶ, ಅತೃಪ್ತ ಆತ್ಮದೊಂದಿಗಿನ ನಿಮ್ಮ ಸಂಭಾಷಣೆ ಎಲ್ಲವೂ ಸೂಪರ್.
ಆದರೆ ಆ ವಿಷಯಗಳು ಮಾತ್ರ ಯಾಕೋ ಬಹಳ ಬೇಸರವುಂಟು ಮಾಡಿವೆ.
ಕೆಲವು ಮನುಷ್ಯರೂ ಅದ್ಯಾಕೆ ಮೃಗಗಳಾಗಿಬಿಡುತ್ತಾರೋ ಅನ್ನುವುದಂತೂ ಅರ್ಥವಾಗದ ಸಂಗತಿ.
ಕಣ್ಣಾಲಿಗಳು ಹರಿದು ನೀರಾದವು. ವಿಂದ್ಯಾಳ ಮಾನಸಿಕ ತೊಳಲಾಟಗಳನ್ನು ನೀವೇ ಅನುಭವಿಸಿ ಬರೆದಂತಿದೆ ಈ ಬರಹ. ಆ ಕ್ರೂರ ಮೃಗಗಳ ಮೃಗೀಯ ವರ್ತನೆಯನ್ನು ಮತ್ತು ಅಂತಹ ಅಮಾನವೀಯ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ವಿಂದ್ಯಾಳ ಮನಸ್ಥಿತಿಯನ್ನು ಪದಗಳ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದೀರಿ ಅಕ್ಕಾ. ಆ ರಾಕ್ಷಸರು ಬದುಕಲು ಅರ್ಹರಲ್ಲ. ಅತ್ಯಾಚಾರದಂತಹ ಮೃಗೀಯ ವರ್ತನೆಗೆ ಕ್ರೂರವಾದ ರೀತಿಯ ಮರಣದಂಡನೆಯೇ ಸರಿಯಾದ ಶಿಕ್ಷೆ!
odi nittusiritte….
manushyana kroora maanasika vikrutigalige moola berige chikitse agatya.spandanaa jote jotege kai kai jodisida horata..
anupama prasad