ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಂಬು ತಿಂಗಳಿನ ಹಾಲು ಬೆಳದಿಂಗಳು ನೀ

ಪ್ರಕಾಶ.ಬಿ ಉಪ್ಪನಹಳ್ಳಿ

ಕನಸುಗಳ ಕಟ್ಟಿದ ಹಟ್ಟಿ
ಕೊರಳು ಹೊಟ್ಟೆ ಬಟ್ಟೆ ಕಟ್ಟಿ
ನಿಂತ ಹೆಜ್ಜೆಗಳು ಗುರುತಾಗುವಂತೆ
ಲೋಕದೆದುರು ತಲೆ ಎತ್ತಿ ನಡೆಯುವಂತೆ
ಜನ್ಮ ಕೊಟ್ಟು ಸಾಚಾತನವನ್ನು
ಕಲಿಸಿದವಳು ನೀನು.

ನುಚ್ಚಕ್ಕಿ ತಿಂದು ತಲೆಗೆ ಹರಳೆಣ್ಣೆ ಹಚ್ಚಿ
ತಡಿಕೆ ಹೊದಿಕೆಯ ಅಪ್ಪುಗೆಯಲ್ಲಿ ಬೆಳೆಸಿದವಳು
ಗಾಯವಾದ ಮಂಡಿಗೆ ಮುಲಾಮು ಸವರಿ
ತಲೆಗೆ ಮುತ್ತಿಕ್ಕಿ ಬಿಕ್ಕಿ ಬಿಕ್ಕಿ ಅತ್ತು ದನಿಯರ ಮುಂದೆ
ನಕ್ಕವಳು ನೀನು.

ಜೋಪಡಿಯ ಮಳೆನೀರು ಮನೆಯಲ್ಲ ತುಂಬಿರಲು
ಬಾಚಿ ತಬ್ಬಿ ಚಳಿಯಲಿ ನಡುಗಿದವಳು
ಸಂತೆ ಚೊಗವಿಕ್ಕಿ ಪತ್ತಲು ಚಡ್ಡಿಯ ಹೊಲಿದು
ತೊಡೆ ಮೇಲೆ ಕೂರಿಸಿ ಮುಖ ದಿಟ್ಟಿಸಿ
ಮೌನದಲ್ಲಿ ಮಂದಹಾಸ
ಬೀರಿದವಳು ನೀನು.

ಅಪ್ಪನಿಗೆ ನಾವಿಕಳು ಮಕ್ಕಳಿಗೆ ಹರಿಗೋಲು
ತುಂಬು ತಿಂಗಳಿನ ಹಾಲು ಬೆಳದಿಂಗಳು
ರಾತ್ರಿ ನೀನಾಗಿ ಹಗಲು ನಾವಾಗಲು
ಬೀಜ ಹೀಚಾಗಿ,
ಕಾಯಾಗಿ, ಹಣ್ಣು ಗೊಬ್ಬರ ನೀರು ಹಾಕಿ ಬೆಳೆಸಿದವಳು
ಕವಿಯೂ ನೀನು
ಕವಿತೆಯೂ ನೀನು
ಪತ್ರದ ಸಾವಿರ ಪದಗಳು ನೀನು.

‍ಲೇಖಕರು Avadhi

24 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading