ಹೊಳಿ ದಂಡಿ ಮ್ಯಾಲಿನ ಹನಿಗಳು
– ದತ್ತು ಕುಲಕರ್ಣಿ
1
ಹೊಳಿಮನಿ ಹಾದಿಗುಂಟ
ಗಿಡಗೋಳ ನೆರಳು
ಜೀವನ ತುಂಬ ಅವ್ವನ ಪ್ರೀತಿಯ ಕರುಳು.
2
ಹರಿಯೂದSS ಹೊಳಿ
ತಡದ ನಿಂತದ್ದSS ದಂಡಿ
ಎರಡು ಕೈ ಸೇರಿಸಿದರss ಚೆಪ್ಪಾಳಿ.
3
ಹಿಂದಿನ ಊರಿನ ರಾಡಿ
ಈ ಊರಿಗೆ ಬರೂದರಾಗ ತಿಳಿ…
ತುಳುಕಿ-ತೊಳದು
ಬಳುಕಿ- ಕಳದು.. ಕಷ್ಟ ಸಹಿಸಿಕೊಂಡರ
ಜೀವನ ಮಾಗಿದ ಹೊಳಿ…

4
ದಂಡಿ ಮೇಲಿನ ಗಿಡದಿಂದ
ಅತ್ತಿ ಹಣ್ಣು ನದಿ ನೀರಾಗ ಬಿತ್ತು
ಮಗನನ್ನ ನೌಕರಿಗಾಗಿ ಬಸ್ಸು ಹತ್ತಿಸಿ ಬಂದ
ಅಪ್ಪ ಅದ ನೀರಾಗ ಮುಖ ತೊಳಕೊಂಡ.
5
ಹೋಳಿ ಉಸುಕಿನ್ಯಾಗಿನ ಹೆಜ್ಜಿ ಗುರುತ
ಹಿಂಗ ಮೂಡುತ್ಲೇ ಹಂಗ ಅಳಕಸ್ತಾವು ಅಲೆಗಳು..
ಹುಟ್ಟು ಮತ್ತು ಸಾವು ಕೂಡೆ ಇರತಾವು
6
ಹರಿವ ನೀರಿಗೆ ತಾನು ಹರಿದಿದ್ದೇ ಹಾದಿ ಅಂಬೋ
ಭ್ರಮೆ
ಕೊರೆಸಿಕೊಂಡ ದಡಗಳಿಗೆ ದಾರಿಯಾದ
ಧನ್ಯತೆ
7.
ತುಂಬಿದ ಹೊಳಿ
ತೇಲುವ ತೆಪ್ಪ
ಜೀವನದಾಗ ಸಾಯುತನಕಾ
ಹುಟ್ಟು ಹಾಕ್ತಾನ ಇರಬೇಕು ಅನ್ನುದು ತತ್ವ.






Hrudayadolage nadi haridange hosa bhava hariyithu.
Swalpa swalpa arthavayithu annisitthu adhere konege namma biddivantigege arthavagilla
Jevan edu holeya teppad hage mahapur bandag Hardu hogale beku. Hage Eden namm Jevan ad karan erotanaka sukhavagi balabeku.ENJOY LIFE