ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಂಬಿದ ಹೊಗೆಯಲ್ಲಿ ಅಸಂಖ್ಯ ನೆರಳುಗಳು..

ಪ್ರವರ ಕೊಟ್ಟೂರು 

ರೆಡ್ಡಾಕ್ಸೈಡ್ ಬಳಿದ ಜಗುಲಿಗೆ
ಮಧ್ಯಾಹ್ನದ ಬಿಸಿಲು ಕಂಡರಾಗುವುದಿಲ್ಲ
ನಿಷ್ಕರುಣ ಬೇಸಿಗೆ
ಹೊಟ್ಟೆಗೆ ಬೆಂಕಿಯಿಕ್ಕುತ್ತದೆ

ಸಣ್ಣಗೆ ಬೀಸುವ ಗಾಳಿಗೆ
ಬಣ್ಣ, ರುಚಿ, ಆಕಾರ ಎಂಥದ್ದೂ ಇಲ್ಲ
ಹೆಸರೂ ಕೂಡ
ಬೇವಿನ ಹೂವು ನಾಜೂಕಿಂದ ಬೀಳುತ್ತಲೇ
ಬೊಗಸೆಗೆ ಘಮಲ ಎಸೆಯುತ್ತದೆ

ಕೊಂಬೆಯಿಂದ ನೆಲಕ್ಕೆ
ಗಾಳಿಯಿಂದ ಮೂಗಿನ ಹೊಳ್ಳೆಗಳಿಗೆ
ಎದೆಗೆ ಇಳಿಯುತ್ತಲೇ ಹೋಗುತ್ತದೆ
ಸಾಂಕ್ರಾಮಿಕ ಒಳ್ಳೆಯದೇ

ಗದ್ದೆ ಬದುವಿನಲ್ಲಿ ನಿಲ್ಲಿಸಿದ
ಬೆರ್ಚಪ್ಪನ ಅಂಗಿ ಹರಿದಂತಿದೆ,
ಗುಬ್ಬಿಗಳು ಈಗೀಗ ಹೆದರುತ್ತಿಲ್ಲ
ಕಂಕುಳಲ್ಲೇ ಗೂಡು, ಮೊಟ್ಟೆ
ಸಂಸಾರ

ಮೂಗು ಬಾಯಿ ಕಣ್ಣು
ಬಿಸಿಲಿಗೆ ಮಾಸಲಾಗಿ
ಮಾತುಕತೆ ನಿಂತು ಹೋದಂತಿದೆ

ಮುದುಕಿ ಸಿದ್ದವ್ವ ಜಗಲಿಗೆ
ಚೌಕಾಬಾರಾದ ಮನೆಗಳ ಬರೆದುಕೊಂಡಿದೆ,
ತೇಯ್ದ ಹುಣಸೆಬೀಜ, ಒಡೆದ ಗಾಜಿನ ಬಳೆ ಚೂರು, ಕಲ್ಲುಗಳು, ಸೀಮೆ ಸುಣ್ಣ
ಮಳೆಗಾಲ ಸಮೀಪಿಸುವವರೆಗೂ
ಕಾಯಿಂದ ಹಣ್ಣಾಗಿ ಇನ್ನೇನೋ ಆಗಿ
ಗೆಲ್ಲುತ್ತಾ ಸೋಲುತ್ತಾ ಇರುತ್ತವೆ

ನಾಲ್ಕು ಬೆರಳಗಲದ ಮನೆಗಳಲ್ಲಿ
ಏನೆಲ್ಲಾ ಯುದ್ಧ, ಎಷ್ಟೆಲ್ಲಾ ಕೊಲೆ
ತುಕ್ಕಿಡಿದ ಡಬ್ಬಿಯಲ್ಲಿ
ಒಟ್ಟಿಗೇ ಕಳೆದು ಹೋಗುತ್ತವೆ
ಕೊನೆಗೆ

ತಟ್ಟೆಯನ್ನಕ್ಕೆ
ಜಂತಿ ಮಣ್ಣು ಉದುರುವ ಹೆದರಿಕೆ,
ಜಗಲಿಯಲ್ಲಿ ಕುಂತು ಉಂಡರೆ
ಕಾಗೆಗಳು ನಾಯಿಗಳು ದುರುಗುಟ್ಟಿ ನೋಡುತ್ತವೆ,
ಬೊಚ್ಚು ಬಾಯಿಯಲ್ಲಿ ಅನ್ನ ನುಣುಪಾಗಲಿಕ್ಕೆ
ತುಸು ಸಮಯ ಹಿಡಿಯುತ್ತದೆ

ಅನ್ನವಿಕ್ಕಿಯೂ ದುರುಗುಟ್ಟುತ್ತವೆ
ಕಾಗೆಗೆ ಗಂಡನ ಹೆಸರಿಕ್ಕಿದ್ದಾಳೆ
ನಾಯಿಗೆ ಸವತಿಯ

ಮುದುಕಿ ಸೆರಗು ಮುಚ್ಚಿಕೊಂಡು
ಅಗಿಯುತ್ತದೆ

ಕೆಚ್ಚಲಿಂದ ಹಾಲು ಕರೆವ ಸದ್ದು
ಜಗುಲಿ ದಾಟಿ
ಸೀಮೆಣ್ಣೆಬುಡ್ಡಿ ಬೆಳಕು ಅಪ್ಪಿಕೊಂಡ ಕಂಬಗಳಿಗೆ
ಬಡಿದು ಅಂಗಾತ ಬೀಳುತ್ತದೆ
ಆಮೆಯಂತೆ

ಒಲೆ ಮುಂದೆ ಮುದುಕಿ
ಹಸಿ ಕಟ್ಟಿಗೆ ತುರುಕಿ ಉರುಬುತ್ತಿದೆ,
ತುಂಬಿದ ಹೊಗೆಯಲ್ಲಿ ಅಸಂಖ್ಯ ನೆರಳುಗಳು
ಅನ್ನದ ಗಂಜಿಗೆ ತಡಕಾಡುತ್ತವೆ

‍ಲೇಖಕರು avadhi

23 January, 2019

2 Comments

  1. R D K

    ಏನಿದು ??

  2. Bidaloti Ranganath

    Super pravara kootururavare

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading