ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಂಬಿಕೊಳ್ಳುತ್ತಿರುವುದು ಭಕ್ತಿಯಾ ಪ್ರೇಮವಾ?

ನಂದಿನಿ ಹೆದ್ದುರ್ಗ

…..

ಅಂಗೈ ಮೇಲೆ ಇಷ್ಟಲಿಂಗವಿದೆ. ವಿಭೂತಿ ಧರಿಸಿ ಗಂಧ ಅಕ್ಷತೆ ಕುಂಕುಮವಿಟ್ಟು ತುಂಬೆ ಹೂವಿರಿಸಿದರೆ ಭಕ್ತಿಗಿಂತಲೂ ಹೆಚ್ಚಿಗೆ ಅಕ್ಕರೆ ಹರಿಯುತ್ತದೆ.

ನಾನು ನಿನಗೂ ಅಮ್ಮನೇ ನನ್ನ ಶಿವನೆ?

ತುಂಬಿಕೊಳ್ಳುತ್ತಿರುವುದು ಭಕ್ತಿಯಾ ಪ್ರೇಮವಾ?

ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಎದುರಿಗೆ ಕಳಶ.ಇನ್ನು ಅಲಂಕರಿಸಲು ಸಾಧ್ಯವೇ ಇಲ್ಲ ಎನಿಸುವಂತಿದ್ದಳು ದೇವಿ.

ಪೂರ್ಣಮದಮ್ ಪೂರ್ಣಮಿದಮ್ ಪೂರ್ಣತ್ಪೂರ್ಣ…

ಬಲಹಸ್ತ ವಸ್ತ್ರದೊಳಗಿಟ್ಟು ಪಂಚಾಕ್ಷರಿ ಹೇಳಿ ನೈವೇದ್ಯ ಮಾಡಿಯಾದ ಮೇಲೆ ಅನಿಸುತ್ತಿದೆ.

ಇದು ಭಕ್ತಿಯಾ ನಟನೆಯಾ?

ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಬೇಳೆ ಬೇಯಿಸಿ ಮಸಾಲೆ ಸೇರಿಸಿ  ಕುದ್ದು ಪರಿಮಳಿಸಿದ ಹುಳಿಯ ಉರಿ  ಆರಿಸಿ ಇಂಗಿನೊಗ್ಗರಣೆ ಕೊಟ್ಟು ಒಂದೆರಡು ಹನಿ ನಾಲಿಗೆಗಿಟ್ಟೆ.ಮೆಂತ್ಯ ಹಾಕಿದ್ದರೆ ಇನ್ನೂ ರುಚಿಯಾಗುತ್ತಿತ್ತಾ?

ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಒಪ್ಪುವ ಬಣ್ಣದ ಸೀರೆ ,ಡಿಸೈನರ್ ಕುಪ್ಪಸ ಮ್ಯಾಚಿಂಗ್ ಕಿವಿಯೋಲೆ.ಕಾಡಿಗೆ ತೀಡಿಕೊಂಡು ಮಲ್ಲಿಗೆಯನ್ನು ತುರುಬಿಗೆ ಸುತ್ತಿ ಕನ್ನಡಿ ನೋಡಿಕೊಂಡರೆ ಯಾಕೋ ಸರಿಯಾಗುವುದಿಲ್ಲ.ಬೊಟ್ಟು ಬದಲಿಸಿದರೂ ಸಮಾಧಾನವಾಗಲಿಲ್ಲ. ನಾನಿರುವುದೇ ಹೀಗಾ?

ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಬೆಳೆದ ಮಕ್ಕಳು ಬಿಡುವಿನಲ್ಲಿ ಮಾತಾಡಿಕೊಳ್ಳುತ್ತಾರೆ.ಅಮ್ಮ ಹೇಗೆಲ್ಲ ಹೊಡೆದಳು ಚಿಕ್ಕಂದಿನಲ್ಲಿ,ಅಕ್ಷರ ಕಲಿಸಲು ಪೆನ್ಸಿಲಿನಲ್ಲೆ ಚುಚ್ಚಿದಳು.ಎಲ್ಲೊ ಅಪರೂಪಕ್ಕೆ ಮೈಸೂರುಪಾಕು ಕೇಳಿದಾಗ ಹೇಗೆ ರಣರಕ್ಕಸಿಯಾಗಿದ್ದಳು.

ನಗುತ್ತಾರೆ ಹೇಳಿಕೊಂಡು.

ನೆನಪುಗಳ ಮಾತು ಮಧುರ ಅವರಿಗೆ.

ಅವರು ಮುಂದುವರೆಸಿದಂತೆಲ್ಲ ಕುಗ್ಗುತ್ತೇನೆ.

ಒಳ್ಳೆಯ ಅಮ್ಮನಾಗಲಿಲ್ಲವಾ ನಾನು?

ಈಗ ನೋಯುತ್ತಿದ್ದಾರಾ ಅವರು?

ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಎಷ್ಟೊಂದು ಸಲುಗೆಯಿತ್ತು. ತುಂಬುವ ಮುನ್ನವೇ ಹೇಳಿಕೊಳ್ಳುವ ಉಮೇದಿತ್ತು.ತಾಸು ಮಾತಾಡಿದರೂ ಮುಗಿಯದ ಸರಕಿದ್ದವು. ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದವಳ ಮನಸ್ಸು ಕಹಿಯಾಯಿತಾ ಖಾಲಿಯಾಯಿತಾ? ಮೊದಲಿಗೆ ನಾನೇ ಮೌನ ಮುರಿಯಬೇಕಾ ಅಥವಾ ಹೊಸ ಸಂಜೆಯೊಂದು ಬಂದು ಹಳೆಯ ಅವಳು ಎದುರಾಗುವ ನಂಬಿಕೆ ಸಲಹಬೇಕಾ?

ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಹೊಸ ಪರಿಚಯದ ಅವರೊಡನೆ ಇನ್ನಷ್ಟು ಆತ್ಮವಿಶ್ವಾಸದಿಂದ ಮಾತಾಡಬಹುದಿತ್ತಾ?

ಇನ್ನೂ ರೆಫರೆನ್ಸ್ ಮಾಡಿದ್ದರೆ ಮಾತುಗಳ ಮೌಲ್ಯ ಹೆಚ್ಚಿಸಬಹುದಿತ್ತಾ?ಅಷ್ಟೊಂದು ವಾದಿಸುವ ಅಗತ್ಯ ಇತ್ತಾ?ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ದಿನ ಚೆನ್ನಾಗಿರಲಿ ಅಂತ ಬೇಡಿಕೊಂಡಿದ್ದಷ್ಟೆ. ಬಯಸಿ ಬಯಸಿ ಯಾರೂ ಕರೆ ಮಾಡಲಿಲ್ಲ. ಎದೆಯೊಳಗಿದ್ದ ಖಾಲಿ ಭಿತ್ರಿಯ ಮೇಲೆ ಚಿತ್ತಚಿತ್ತಾರ ಮೂಡಲಿಲ್ಲ.

ಮೂಡಿಸುವುದು  ಮೂಡಿನಲ್ಲಿರಿಸುವುದು ಬೇರೆಯವರ ಕೈಲಿರುವುದಿಲ್ಲ. ನಮ್ಮ ಹಾದಿ ಬದಿಗೆ ನಾವೇ ಹೂಬೀಜ ಬಿತ್ತಿಕೊಳ್ಳಬೇಕು,ಹೊಸಿಲು ತೊಳೆದು ಹೊಸ ಹಸೆಯ ಹಾಕಿ ತೋರಣ ಕಟ್ಟಿಕೊಳ್ಳಬೇಕು. ಬೆಳಗುತ್ತೇನಾ ಬಳಲುತ್ತೇನಾ ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಬಯಸಿ ಬಯಸಿ ಭೆಟ್ಟಿಯಾದಾಗ ಒಂದು ಮುತ್ತಿಗಾಗಿ ಹಾಗೆ ಹಂಬಲಿಸಬಾರದಿತ್ತು.ಏನೆಂದುಕೊಂಡನೊ.

ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಹಕ್ಕೊತ್ತಾಯದಲ್ಲಿ ಬರೆಸಿಕೊಳ್ಳುವ‌ ಅಕ್ಷರಗಳ ತಿದ್ದಿ ಛಂದಸ್ಸು ಬಂಧ ತುಂಬಿ ಲಾಲಿತ್ಯ ಲೇಪಿಸಿ

ಲಯಕ್ಕೆ ಕೂರಿಸಿ ಹೊರಕ್ಕೆ ಬಿಟ್ಟೆ.

ಎಡವಿ ಗಾಯಮಾಡಿಕೊಂಡು ಬಿಕ್ಕುತ್ತ ಹೊಸಿಲಲ್ಲೇ ಕೂತವು. ಮುದ್ದಿಸಿ ಉಪ್ಪುತುಪ್ಪ ತಿನ್ನಿಸಿ ಅವು ಹೇಗೆ ಬಯಸಿದ್ದವೋ ಹಾಗೇ ಕೂರಿಸಿದೆ.ಕುಣಿಯುತ್ತ ಹೊರಗೋಡಿದವು.ಬುದ್ದಿಪೂರ್ವಕ ತಿದ್ದದಿದ್ದರೆ ಕವಿತೆ ಬಾಳಿಕೆ ಬರುವುದಿಲ್ಲವಾ?

ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಇಷ್ಟು ತುಂಬುಪ್ರೀತಿಯ ಪಡೆದ ಮೇಲೂ ಅವನೆದೆಗೆ ಕೊರತೆ ಹೇಗಾಯಿತು? ಗಂಡಿಗೆ ಒಂದು ಹೆಣ್ಣಿನ ಪ್ರೇಮ ಸಾಕಾಗುವುದಿಲ್ಲವಾ ಹಾಗಿದ್ದರೆ? ನಿನ್ನಾಣೆಗೂ  ಏನಿಲ್ಲ ಎನ್ನುವ ಅವನ ಸ್ವರದಲ್ಲಿಣುಕಿದ ಸಣ್ಣ ಉನ್ಮಾದವೆ ಎಲ್ಲ ಹೇಳುವಾಗ ಒಪ್ಪಿದಂತೆ ನಟಿಸಬೇಕಾ? ಹಂಬಲಿಸಿ ದುಂಬಾಲುಬಿದ್ದು ಕಂಬಕ್ಕೆ ಸುತ್ತಿದ ಹೂಬಳ್ಳಿ ನಾನು ಅಂತೇನೊ ಬರೆದು ಒಲುಮೆ ಉಳಿಸಿಕೊಳ್ಳಬೇಕಾ?  ಹಾದಿ ಮುಳ್ಳಾಗಲಾರದೆ ಮೆಲ್ಲಗೆ ಸರಿದು ಅವನ ಹೊಸ ಪ್ರೇಮಕ್ಕೆ ಅನುವು ಮಾಡಿಕೊಡಬೇಕಾ?

ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಮುಡಿಯೇರಿದ ಗಂಗೆ ಬಿಕ್ಕುತ್ತಾಳೆ

‘ಹೀಗೇ ಸಿಕ್ಕವನು ನೀನು.ಮಿಕ್ಕಂತೆ ಹಕ್ಕೆಲ್ಲಿಯದು ನನಗೆ’ ಅವಳ ಒದ್ದೆ ಕೆನ್ನೆ ಒರೆಸಬೇಕೆನಿಸುತ್ತದೆ ಮುದ್ದು ಲಯಕಾರನಿಗೆ. ನನ್ನ ಶಿವನೂ ಅಸಹಾಯಕ.ಅವನು‌ ಹಾಗೇ ಇರಬೇಕಾ? ಎಲ್ಲ ಕೊಡವಿ‌ ಬಿಕ್ಕುವವಳ ತಬ್ಬಿ ಸಂಭಾಳಿಸಬೇಕಾ?

ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಇಷ್ಟುಕಾಲವೂ‌ ಘಲ್ಲನೆ ಪುಳಕ ಹೊಮ್ಮಿಸುತ್ತಿದ್ದ ಈ ಪ್ರೇಮ ಈಗ ತುಂಬುತ್ತಲೇ ಇಲ್ಲ. ದೀರ್ಘ ಗೈರಿನ ನಂತರವೂ ಪ್ರವಾಸ ಕಥನವನ್ನಷ್ಟೇ  ಹೇಳುತ್ತಿರುವವನ ಆತ್ಮದಲ್ಲಿ ಪ್ರೇಮ ರಾಜಿನಾಮೆ ಹೇಳಿದೆಯಾ?  ನಾನವನ ನೋಡಿ  ತುಳುಕುತ್ತಿದ್ದೇನಾ  ಅಥವಾ? ಎಲ್ಲ ಸಂಬಂಧಗಳು ಒಂದಾನೊಂದು ದಿವಸ ಮುಗಿಯುತ್ತವಾ? 

‘ನಾವು ಹಳತಾಗುವುದು ಯಾವಾಗ?’  ಹೆಗಲಿಗೆ ಜೋತುಬಿದ್ದು ಕೇಳುತ್ತಿದ್ದ ಪ್ರಶ್ನೆಗೆ ವಿಧಿ ‘ಈಗಲೇ‌’ ಅಂತೇನಾದರೂ ಶಾಪ ಹಾಕಿತಾ? ಒಪ್ಪಂದ ನೆನಪಿಸಬೇಕಾ ಒಪ್ಪಿ ಹೊರಳು ಹಾದಿಯಲ್ಲಿ ಮುಂದೆ ಸಾಗಬೇಕಾ? ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ಮೊನ್ನೆ ಹೊಸ ಭರವಸೆ ಹುಟ್ಟಿಸಿದವ ನಿನ್ನೆ ಗೈರಾದ ಯಾಕೊ. ಒಂದಾದರೂ ಸುದೀರ್ಘ ಸಲ್ಲಾಪಕ್ಕಾಗಿ ಬೇಡಿಕೆ ಇಡುತ್ತಿದ್ದವಳು ನಾನು. ಕರುಣೆಯುಕ್ಕಿದ ವಿಧಿ  ಕಾರ್ಯಾಚರಣೆಗೆ ಕೇವಲ ಒಂದು ದಿನದ ಮಾತು ಸಾಕೆಂದು ಹರಸಿತ್ತಾ? 

ಗೈರಾಗುವುದು ಇಲ್ಲಿ ನಿಷಿದ್ಧವೆಂದು ಫರ್ಮಾನು ಕಳಿಸಬೇಕಾ? ಪ್ರಭಾರಿ ಹುದ್ದೆಯದು ಅಂತ ಸಮಾಧಾನ ಪಡಬೇಕಾ? ಸ್ಪಷ್ಟವಾಗುವುದಿಲ್ಲ ಎಂದಿನಂತೆ.

ನೀನು ಬೇಕು.

ಪ್ರೇಮ ಕೊಡುವ ಪುಳಕವೂ ಬೇಕು.

ಏನು ಮಾಡಲಿ..ಸ್ಪಷ್ಟವಾಗುವುದಿಲ್ಲ ಎಂದಿನಂತೆ.

‍ಲೇಖಕರು avadhi

3 July, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading