‘ತುಂಗಾ’ ಓದುತ್ತಿದ್ದೆ.. ಹೀಗೊಂದು ಘಟನೆ ನೆನಪಾಯಿತು

ರೇಣುಕಾ ರಮಾನಂದ

ಕಳೆದ ವರ್ಷ ಈ ಶಾಲೆಗೆ ಡೆಪ್ಯೂಟೇಶನ್ ಮೇಲೆ ಬಂದ ಶೀತಲಕ್ಕೋರು ಮರಳಿ ಮೂಲ ಶಾಲೆಗೇ ಹೋದಮೇಲೆ ಪಿಂಟು ಅನಾಥವಾಗಿತ್ತು.. ಅದೇ ಶಾಲೆಯಲ್ಲಿ ಹಿಂದಿನಿಂದಲೂ ಇದ್ದ ಕೆಲ ಅಕ್ಕೋರ ಬೆನ್ನು ಕಾಲು ಸುತ್ತಿ ಶೇಕ್ ಹ್ಯಾಂಡ್ ಕೊಡಲು ಮುಂದಾಗಿ ತಕ್ಕ ರೆಸ್ಪಾನ್ಸ್ ಬರದೇ ಮತ್ತೆ ಅಲ್ಲೆಲ್ಲೋ ಮೂಲೆಯಲ್ಲಿ ಬಿದ್ದಿರೋದು, ಬಿಸಿಯೂಟದ ಟೈಮ್‌ಗಾಗಿ ಕಾಯೋದು.. ಇಷ್ಟನ್ನೇ ಕಾಯಕವಾಗಿಸಿಕೊಂಡಿತ್ತು…

ಇಂಥ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ ಮೇಲಿನ ವರ್ಗಗಳಿಗೆ ಪಾಠ ಮಾಡೋರು ಯಾರೂ ಇಲ್ಲ ಹೋಗ್ತೀರಾ ನೀವು ಇದೊಂದು ವರ್ಷ ಅಲ್ಲಿಗೆ ಅಂತ ಕೇಳಿಕೊಂಡ ಶಿಕ್ಷಣ ಇಲಾಖೆಯ ಮನವಿ ಒಪ್ಪಿಕೊಂಡು ನಾನು ಆ ಶಾಲೆಗೆ ಬರುವವರೆಗೂ ಇದ್ಯಾವುದೂ ನನಗೆ ಗೊತ್ತಿರಲಿಲ್ಲ.

ಗೊತ್ತಿರಬೇಕಾದ ವಿಷಯವೂ ಅಲ್ಲ ಅನ್ನಿ.. ನನ್ನ ಮೆಸ್ಟ್ರೋ ನಿಲ್ಲಿಸಲಾರಂಭಿಸಿದ ಜಾಗದಲ್ಲೇ ಅದು ಮಲಗಿರುತ್ತಿತ್ತು. ಶಾಲೆಗಳಲ್ಲಿ ಬಿಸಿಯೂಟ ಪ್ರಾರಂಭವಾದಾಗಿನಿಂದ ಆಯಾ ಊರಿನ ಎಲ್ಲ ಬೀಡಾಡಿ ನಾಯಿಗಳೂ ಶಾಲೆಯಲ್ಲೇ ಮೊಕ್ಕಾಂ ಹೂಡುವ ಸಂಗತಿ ಸುಮಾರು ವರ್ಷಗಳಿಂದ ನೋಡುತ್ತ ಬಂದಿರುವ ಕಾರಣಕ್ಕೆ ಅದೇನು ನಮ್ಮಂತಹ ಶಿಕ್ಷಕರಿಗೆ ವಿಶೇಷತೆಯ ವಿಷಯವಲ್ಲ.. ಸರಿ ಈ ಪಿಂಟು ಕೂಡ ಉಳಿದೆಲ್ಲ ನಾಯಿಗಳಂತೆ ವಾಸನೆ ಬೀರುವ ಒಂದು ಮಾಮೂಲಿ ಬೀದಿ ನಾಯಿಯಾದ ಕಾರಣ ನಾನೂ ಕೂಡ ಅದರೆಡೆಗೆ ಅಲಕ್ಷ್ಯವಹಿಸಿದೆ.

ಆರಂಭದ ಒಂದೆರಡು ದಿನ ಹತ್ತಿರ ಬರಲು ಪ್ರಯತ್ನಿಸಿದ, ಮುಂಗೈ ಮುಂದು ಮಾಡಿ ನನ್ನ ಕಾಲ ಮೇಲೆ ಇಡಲು ಪ್ರಯತ್ನಿಸುತ್ತಿದ್ದ, ನನ್ನ ಸೀರೆ ಮೂಸಿ ನೋಡಲು ಪ್ರಯತ್ನಿಸುತ್ತಿದ್ದ, ಗಾಡಿ ನಿಲ್ಲಿಸಿದ ಜಾಗದಿಂದ ಕ್ಲಾಸ್ ರೂಮಿನವರೆಗೂ ಹಿಂಬಾಲಿಸಿಕೊಂಡು ಬರುತ್ತಿದ್ದ ಅದಕ್ಕೆ ಹಚಾ ಹಚಾ ಅಂದೆ..

ಆದರೂ ಯಾಕೋ ಏನೋ ಇದೆ ಅನ್ನಿಸತೊಡಗಿತ್ತು. ನೋಡಿದ ಮೊದಲ ದಿನವೇ ನಾವು ಸಲಿಗೆ ತೋರದೇ ಹೀಗೆ ಯಾವ ನಾಯಿಗಳೂ ಹತ್ತಿರ ಬರಲಾರವು. ಇದ್ಯಾಕೋ ಉಪರಾಟಿ ಕಾಣ್ತದೆಯಲ್ಲ ಅನ್ನಿಸತೊಡಗಿತ್ತು.. ಟೀಚರ್ ತಲೇಲಿ ಏನೇ ಇರಲಿ ಹೇಳದೆಯೂ ಗೊತ್ತುಮಾಡಿಕೊಂಡು ಬಿಡುವ ಮಕ್ಕಳು ಅವರೊಂದಿಗೆ ತೀರ ಸಲಿಗೆ ಇರುವ ನನ್ನೊಂದಿಗೆ –

*ಹಿಂದೆ ಶೀತಲಕ್ಕೋರು ಅದಕ್ಕೆ ಮನೆಯಿಂದ ಬಿಸ್ಕೇಟು ಬ್ರೆಡ್ಡು ತಂದು ಹಾಕುತ್ತಿದ್ದದ್ದು
*ಪಿಂಟು ಅಂತ ಹೆಸರಿಟ್ಟದ್ದು
*ಅವರ ಹಿಂದೆಯೇ ಅದು ಇರುತ್ತಿದ್ದದ್ದು
*ಶಾಲೆಯ ವಠಾರಕ್ಕೆ ದನ ಬಂದರೆ ಅಟ್ಟಲು ನೆರವಾಗುತ್ತಿದ್ದದ್ದು
*ಶೇಕ್‌ಹ್ಯಾಂಡ್ ಕೊಡಲು ಕಲಿತಿದ್ದು
*ಅವರ ಕೋಣೆಯ ಮುಂದೇ ಕುಳಿತು ಅಪರಿಚಿತರು, ಮೇಲಧಿಕಾರಿಗಳು ಬಂದರೆ ಗುರ್ ಅಂತಿದ್ದು

ಹೀಗೆ ಎಲ್ಲವನ್ನೂ ಹೇಳಿಕೊಂಡರು. ಜೊತೆಗೆ “ಟೀಚರ್ ಪಾಪ ಪಿಂಟು..! ಈಗ ಶೀತಲಕ್ಕೊರು ಇಲ್ಲದೇ ಅನಾಥವಾಗಿದೆ.. ಶಾಲೆಗೆ ಸೀರೆ ಉಟ್ಟ ಯಾರೇ ಹೊಸಬರು ಬಂದ್ರೂ ಹತ್ತಿರ ಹೋಗಿ ಮೂಸಿ ನೋಡ್ತದೆ.. ಶೇಕ್‌ಹ್ಯಾಂಡ್ ಕೊಡಲು ಪ್ರಯತ್ನಿಸುತ್ತದೆ” ಅಂದರು

ಮತ್ತೂ ಮುಂದುವರಿದು “ಟೀಚರ್ ಅದು ದಿನಾ ನೀವು ಗಾಡಿ ನಿಲ್ಲಿಸೋ ಜಾಗದಲ್ಲೇ ಮಲಗ್ತಿತ್ತು.. ನೀವು ಬಂದು ಅದರ ಜಾಗ ತಪ್ಪಿಸಿಬಿಟ್ರಿ…” ಅಂದ್ರು ಕುಶಾಲು ಮಾಡುತ್ತ..
ನನಗೆ ಒಳಗೆ ಚುಚ್ಚಿದಂತಾಯ್ತು

ಛೆ ಪಾಪ…!! ನಾನು ಹೊಸದಾಗಿ ಬಂದ ಎರಡು ದಿನ ಓಡಿ ಬಂದಿತ್ತು. ನಾನ್ಯಾಕೆ ಹಾಗೆ ನಡೆದುಕೊಂಡೆ ಅನ್ನಿಸಿ ಇಡೀ ದಿನ ಒಂಥರಾ ಮಂಕು ಮಂಕು ಅನ್ನಿಸತೊಡಗಿತು. ಮನೇಲಿ ಮೂರು ನಾಯಿ ಸಾಕುತ್ತಿದ್ದೇನಾದರೂ ಇದು ಬೀದಿನಾಯಿ.. ಹೇಗೋ ಏನೋ.. ಕಚ್ಚಿಬಿಟ್ರೆ ಕಷ್ಟ ಅನ್ನೋ ಕಾರಣಕ್ಕೆ ದಿನಾಲೂ ಹಚಾ ಹಚಾ ಅಂದ ಮೇಲೆ ಅದು ನಾನು ಗಾಡಿ ನಿಲ್ಲಿಸುವ ಜಾಗ ಬಿಟ್ಟು ಸುಮಾರು ದಿನವಾಗಿತ್ತು.

ಮರುದಿನ ಅದಕ್ಕಾಗಿ ಏನನ್ನಾದರೂ ಹಿಡಿದುಕೊಂಡು ಬರಬೇಕು ಎಂಬ ನಿರ್ಧಾರ ಮನೆಗೆ ಹೋದದ್ದೇ ಮರೆತೇ ಹೋಯಿತು.. ಹೀಗೆ ಮರೆಯುವ ಪ್ರಕ್ರಿಯೆ ನಾಲ್ಕೈದು ದಿನ ನಡೆದ ಮೇಲೆ ಅಂತೂ ಗಟ್ಟಿ ನೆನಪಿಟ್ಟು ಒಂದಿನ ಅದಕ್ಕಾಗಿ ಬಿಸ್ಕೆಟ್ಟೂ ಸ್ವಲ್ಪ ಕೇಕೂ ತಂದು ಆ ದಿನ ಮೊದಲೇ ಬಂದು (ಮೊದಲೇ ಯಾಕೆ ಅಂದರೆ ಉಳಿದೆಲ್ಲ ಶಿಕ್ಷಕರು ನನ್ನ ಈ ಕೆಲಸವನ್ನು ಹುಚ್ಚಾಟ ಎಂದು ನಗುವ ಸಂಭವನೀಯತೆಯ ಕಾರಣಕ್ಕೆ) ಪಿಂಟೂ ಪಿಂಟೂ ಅಂತ ಕರೆದೆ. ಎಲ್ಲೂ ಇಲ್ಲ ಪಿಂಟು.. ನಾನು ಪಿಂಟೂಗಾಗಿ ಬಿಸ್ಕೆಟ್ಟೂ ಕೇಕೂ ತಂದಿರುವ ಸುದ್ದಿ ತಿಳಿದು ಮಕ್ಕಳೆಲ್ಲ ಉತ್ಸಾಹಿತರಾದರು..

ನೀವೂ ಸ್ವಲ್ಪ ತಿನ್ನಿ ಎಂದ್ರೂ ತಿನ್ನದೇ ಬೇಡ ಟೀಚರ್ ಅಂಕೋಲೆಗೆ ಹೋದಾಗ ನಮಗೆ ನೀವು ಚಾಕ್ಲೇಟೂ ಪೆನ್ನೂ ಇನ್ನೂ ಏನೇನೋ ತರ್ತೀರಿ.. ಅವೆಲ್ಲ ಪಿಂಟೂಗೆ ಕೊಡ್ತೇವಾ ನಾವು? ಇಂದು ಪಿಂಟುಗೆ ತಂದದ್ದು ಅದಕ್ಕೇ ಇರಲಿ. ಅಂತ ಇಡೀ ಶಾಲೆಯ ವಠಾರ ಸುತ್ತಿದರು .(ಬರೋಬ್ಬರಿ ಹತ್ತು ಎಕರೆ ತೆಂಗು ಮಾವು ತೋಟ) ಅಂತೂ ಇಂತೂ ಬಂತು ಪಿಂಟು.. ಹಾಕಿದ್ದು ತಿಂತು ಯಾಂತ್ರಿಕವಾಗಿ.ಕೊಂಚ ಬಾಲ ಅಲ್ಲಾಡಿಸಿತು.. ಮದ್ಯಾಹ್ನಕ್ಕೂ ಕೊಂಚ ಹಾಕಿದೆ. ಸಂಜೆ ಮತ್ತೊಂಚೂರು.. ಗೆಲುವಾಯ್ತು ಪಿಂಟು..

ಆಟಕ್ಕೆ ಬಿಟ್ಟಾಗ ಕೊಂಚ ಅಂತರ ಕಾಯ್ದುಕೊಂಡು ನನ್ನ ಹಿಂದೆ ಮುಂದೆ ಸುತ್ತಲಾರಂಬಿಸಿತು.. ಸಂಜೆ ಗಾಡಿವರೆಗೂ ಬಂತು.. ಈಗ ಮತ್ತದೇ ಹಳೆಯ ಶೀತಲಕ್ಕೋರ ರೂಢಿಗೆ ಮರುಕಳಿಸಿದೆ ಅದು.. ನನ್ನ ಮೆಸ್ಟ್ರೋ ಸೌಂಡ್ ಕೇಳಿದ್ದೇ ತಡ ಗೇಟಿಗೆ ಓಡಿ ಬರುತ್ತದೆ.. ಕ್ಲಾಸ್‌ರೂಮಿನವರೆಗೂ ಓಡೋಡುತ್ತಲೇ ಹಿಂಬಾಲಿಸುತ್ತದೆ.. ತಡಿಯೋ ನಿಲ್ಲೋ ಸ್ಟ್ಯಾಂಡಾದರೂ ಹಾಕುವೆ ಗಾಡಿಗೆ ಅಂದರೂ ತಡಿಯದೇ ಅಲ್ಲಿಯವರೆಗೆ ಸೀರೆ ನೆರಿಗೆ ಮೇಲೆ, ಪಾದದ ಮೇಲೆ ಹತ್ತಾರು ಬಾರಿ ಶೇಕ್‌ಹ್ಯಾಂಡ್ ಮಾಡಿಯಾಗಿರುತ್ತದೆ. ಪಾಠ ಶುರುವಾಗುವವರೆಗೂ ಕ್ಲಾಸ್ ರೂಮಿನ ಮುಂದೆ ಕುಳಿತಿರುತ್ತದೆ. ಹೊರಸಂಚಾರಕ್ಕೆ ನಾನೂ ಮಕ್ಕಳೂ ಹೊರಟಾಗ ಬೆಂಗಾವಲಾಗಿ ಮುಂಗಾವಲಾಗಿ ಜೊತೆಯಿರುತ್ತದೆ.

ಉಳಿದ ಅಕ್ಕೋರೆಲ್ಲ ಶೀತಲಕ್ಕೋರ ಚಾರ್ಜು ನೀ ತಕೊಂಡೀಯೇನು ರೇಣುಕಾ ಅಂತ ಚಾಷ್ಟಿ ಮಾಡಿದರು ಎರಡು ದಿನ… ಈಗ ಮಕ್ಕಳಿಗೊಂಚೂರು ಸಮಾಧಾನ .. ತಮ್ಮ ಜೊತೆ ಪಿಂಟೂನ ದೇಖಬಾಲ್ ಮಾಡೋರೊಬ್ಬರು ಬಂದಾರಲ್ಲ ಈಗ ಅಂತ..
ಹೀಗೆ.. ಶಿಕ್ಷಕ ವೃತ್ತಿ ಅಂದರೆ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕೆಲಸಮಾಡೋ ನಮ್ಮಂತವರಿಗೆ ದಿನಕ್ಕೊಂದು ಅನುಭವಗಳು. ಸಂಗಾತಗಳು. ಕಣ್ಣಲ್ಲಿ ಎರಡು ಹನಿ ಜಿನುಗುವಿಕೆಗಳು ಎಲ್ಲವೂ ನಡೆದೇ ಇರ್ತವೆ.

ಮೇಲಿನ ಕ್ಲಾಸಿನ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ಬಹುಕಾಲದಿಂದ ಅನ್ಯಮನಸ್ಕರಾಗಿದ್ದರೆ, ಅಳುತ್ತಿದ್ಧರೆ ಉಪಾಯದಿಂದ ಸಮಸ್ಯೆ ತಿಳಿದುಕೊಂಡು, ಅವರೊಂದಿಗೆ ಪ್ರೀತಿಯಿಂದ, ಸಲುಗೆಯಿಂದ ನಡೆದುಕೊಂಡು ಅವರ ಅಪ್ಪ ಅಮ್ಮಂದಿರಿಗೆ ಮೊದಲು ಕೌನ್ಸಿಲಿಂಗ್ ನಡೆಸುವ ತಿಳಿವಳಿಕೆ ಹೇಳುವ ನನ್ನ ಎಷ್ಟೋ ಕೆಲಸ ಕಾರ್ಯಗಳು ಇತರೆ ಶಿಕ್ಷಕರಿಗೆ ಹಾಸ್ಯಾಸ್ಪದವಾಗಿ, ಬೇಕಾರು ಕೆಲಸವಾಗಿ ಎಷ್ಟೋ ಬಾರಿ ಕಾಣಿಸಿದ್ದಿದೆ. ಆದರೆ ಅದರಲ್ಲಿ ನನಗೆ ನೂರಕ್ಕೆ ತೊಂಭತ್ತೊಂಭತ್ತರಷ್ಟು ಯಶ ಸಿಕ್ಕಿದೆ.. ಬೇಕಾರು ಕೆಲಸ ಎಂದವರೇ ಬೆನ್ನು ತಟ್ಟಿದ್ದಾರೆ. ಸದಾ ಅಳುವ ಮಕ್ಕಳು ತಿಂಗಳಲ್ಲೇ ಗೆಲುವಾದ, ಶಾಲೆಬಿಟ್ಟು ನಾಲ್ಕೈದು ವರ್ಷ ಮನೆಯಲ್ಲೇ ಇದ್ದ ಮಗು ಶಾಲೆಗೆ ನಿರಂತರವಾಗಿ ಬಂದ ಉದಾಹರಣೆಗಳಿವೆ..

ಇವತ್ತು ಪುರಸೊತ್ತಿದೆಯಂತ ‘ಬಹುರೂಪಿ’ಯಿಂದ ಪ್ರಕಟಿತ ಗಾಯತ್ರಿಯವರ “ತುಂಗಾ” ಓದುತ್ತಿದ್ದೆ…

ಅದಾಗ ತಾನೇ ಸ್ಕೂಲಿಗೆ ಬರುತ್ತಿರೋ ಒಂದು ಮುಗ್ಧ ಮಗುವಿಗೆ ಓರ್ವ ಶಿಕ್ಷಕ ಮಾರ್ಗದರ್ಶಕನಾಗಿ, ಪಾಲಕನಾಗಿ, ಅಮ್ಮನಾಗಿ ಅಪ್ಪನಾಗಿ, ಸದಾ ಕೇಳಿಸಿಕೊಳ್ಳುವಂಥವನಾಗಿ, ಇದ್ದುದನ್ನು ಇದ್ದಂತೆ ಒಪ್ಪಿಕೊಳ್ಳಬಲ್ಲವನಾಗಿ ಹೇಗೆಲ್ಲ ಇದ್ದರೆ ಮಗುವಿಗೆ ಆಪ್ತನಾಗಬಲ್ಲ. ಮನಸ್ಸು ಮೆದುಳಿನ ವಿಕಾಸಕ್ಕೆ ನೆರವಾಗಬಲ್ಲ.. ಮಗುವಿನ ಭವಿಷ್ಯಕ್ಕೆ ಬುನಾದಿಯಾಗಬಲ್ಲ ಎಂಬುದಕ್ಕೆ ಮಾದರಿ ಬಹುರೂಪ ಇದರಲ್ಲಿ ಸಿಕ್ಕಿತು..

ಎಲ್ಲ ಶಾಲೆಯೂ ಹೀಗೇ ಇದ್ದರೆ ಎಷ್ಟು ಚನ್ನ.. ಎಲ್ಲ ವಿಭಿನ್ನತೆಯ ಹಲವು ಚಾಚುಗಳ ಬಗ್ಗೆ ಶಿಕ್ಷಕರಿಗೆ ಮಾರ್ಗದರ್ಶಿಯಾದ ‘ತುಂಗಾ’ ಪುಸ್ತಕ ಶಿಕ್ಷಕ ಹಾಗೂ ಮಗುವಿನ ಹೃದಯ ತುಂಬುತ್ತದೆ.. ನೀವೂ ಶಿಕ್ಷಕರಾಗಿದ್ದರೆ ನಿಮಗೂ ಈ ಪುಸ್ತಕವನ್ನೋದುವಾಗ ಇಂತಹ ಕೆಲ ಘಟನೆಗಳು ನೆನಪಿಗೆ ಬರುತ್ತವೆ..

‍ಲೇಖಕರು avadhi

September 6, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Anand

    it is always a great feeling to spread and share happiness. Thank you for sharing your experience

    ಪ್ರತಿಕ್ರಿಯೆ
  2. Yamuna

    ತಮ್ಮ ಅಭಿಪ್ರಾಯ ತಡವಾಗಿ ಓದಿದೆ. ಜನ
    ಶಿಕ್ಷಣ ಹಾಗೂ ಶಿಕ್ಷಣ ಮಾನವೀಯತೆ ಕಲಿಸ್ತದೆ, ನಾವು ಆ ಮಾನವೀಯತೆಯ ವಾರಸುದಾರರು, ವಾರಸುದಾರಿಕೆ ಬಿಟ್ಟು ಹೋದಾಗ ಅದನ್ನು ಅರಿಯಲು, ಅರಿತಂತೆ ಮುಂದುವರೆಸಲು ಇದೇ ಶಿಕ್ಷಣ ಕಲಿಸ್ತದೆ. ಕಲಿಸುವಂತಾಗಬೇಕು. ಅದರ ಸುತ್ತ ನಿಮ್ಮ ಶಾಲಾ ಜೀವನಾನುಭವದ ಅನಿಸಿಕೆ ಖುಷಿ ಕೊಟ್ಟಿದೆ. ಶಿಕ್ಷಕರಾಗಿ ನೀವು ಗೆಲುವಿನತ್ತಲೇ ಇದ್ದೀರಿ… ಮಕ್ಕಳನ್ನು ಪ್ರೀತಿಯಿಂದ ನಿಮ್ಜೊತೆ ಕರ್ಕೊಂಡ್ಹೋಗ್ತಿದ್ದೀರಿ.
    ಒಳಿತು.
    ಯಮುನಾ ಗಾಂವ್ಕರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: