ಹಳೆಯ ವಾಸನೆ
ವಿದ್ಯಾಶಂಕರ್ ಹರಪನಹಳ್ಳಿ

ತಿರುವಂತಪುರಂ ರಸ್ತೆಯಲ್ಲಿ
ಅಂಡೆಲೆಯುವಾಗ
ಗೆಳತಿಯೊಬ್ಬಳು ಹೇಳಿದಳು
ಪರಮಹಂಸರು ಹೇಳಿದ
ಮೀನು-ಸಂಪಿಗೆ ವಾಸನೆಯ ಕತೆಯ
ಕೇಳಿದ್ದೆ, ಓದಿದ್ದೆ ಹಲವೊಮ್ಮೆ
ಅದರೂ ಹೊಸ ಅರ್ಥ ಹೊಳೈಯಿಸಿ
ಸೆಳೆಯಿತು ತನ್ನ ಗರ್ಭದೊಳಗೆ,
ಕೆದಕಿತು ಹಳೆಯ ವಾಸನೆಯ…
~ *~
ಹುಡುಗನೆಂಬ ಬಿಗುಮಾನ ಬಿಟ್ಟು
ಕಣ್ಣು ತುಳುಕ್ಕಿತ್ತು ಅಂದು…
ಒಣಗಿ ಬತ್ತಿದ ಕಣ್ಣುಗಳೊಂದಿಗೆ
ಹೇಳಿದೆ ಅಂದು ನಿನ್ನ ವ್ಯಥೆಯ
ಅಳುವೆಯೇನೋ ಎಂದುಕೊಂಡೆ,
ಅಪ್ಪಿ ಸಮಾಧಾನಿಸ ಬೇಕೆಂದುಕೊಂಡೆ…
ಅಳಬಾರದು ಎಂಬ ದಾಷ್ಟ್ಯ ನಿನಗೆ
ತುಳುಕಿದ ಕಣ್ಣೀರು
ಇಂಗಿಹೋಯಿತು ಬಾಯಿಬಿರಿದ ಭೊಮಿಯೊಳಗೆ
ಬೇರೆ ಬೇರೆ ಸಂಕಟವ ಹೊತ್ತು
ಬೇರೆಯಾದೆವು ಅಂದು
ಕೂಡಲಿಲ್ಲ ಮತ್ತೆ ನಮ್ಮ ದಾರಿ
~*~

ಸರ್ವರೂ ಒಪ್ಪುವ ಸಂಪಿಗೆಯ ಪ್ರೀತಿ
ನಿನಗೋ ಮುಚ್ಚಟೆಯ ಮೀನೇ ಪ್ರೀತಿ
ಅರ್ಥವಾದೆವಾ ನಾವು ನಮಗೆ?
ಸ್ಪಷ್ಟವಾದೆವಾ ನಾವು ನಮಗೆ?
ಇಂದೇಕೋ ಎಲ್ಲಾ ಕಲಸುಮೇಲೋಗರ
~*~
ಕೊಂಚ ಬೆಳೆದಿದ್ದೇನೆ ಇಂದು ನಾನು
ಅರ್ಥವಾಗದಿದ್ದರೂ ಗೌರವ
ಸುಖವಾಗಿರಲಿ ಎಂಬ ಹಾರೈಕೆ
ಅದರೂ… ಕೆಲವೊಮ್ಮೆ ಕನಸಿನಲಿ
ಮತ್ತದೇ ದುಷ್ಟ ಬಯಕೆ
ಮುಂದೆಯೆಂದಾದರೂ…
ಒಂದಾದೆವು ಎಂಬ ಹಳಹಳಿಕೆ
ಊಹ್ಮ್ ಇದು ಈ ಜೀವನದ ಗಳಿಕೆ…






hrudayangama..sir.