ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿಪ್ಪೆಲಕ್ಷ್ಮೀ ಹಬ್ಬದ ಶುಭಾಶಯಗಳು!

ವಳು ತಿಪ್ಪೇಲಕ್ಷ್ಮೀ..

ತಿಪ್ಪೇಲಕ್ಷ್ಮಿಯನ್ನು ಮರೆಯಬೇಡಿರಿ – ಮರೆತರೆ ನಿಮಗೆ ಅನ್ನ ಸಿಕ್ಕುವುದಿಲ್ಲ

vaddagere2

ಡಾ ವಡ್ಡಗೆರೆ ನಾಗರಾಜಯ್ಯ

ಈ ತಿಪ್ಪೆಲಕ್ಷ್ಮಿಯು ರೈತಾಪಿಗಳ ಮತ್ತು ದುಡಿಯುವ ರೈತಕೂಲಿಗಳ ಲಕುಮಿ; ಲಕ್ಷಮಿ. ಲಕ್ಷಮಿ- ಲಚ್ಚಮಿ- ಲಚ್ಮಿಯಾದ ಈ ಲಕ್ಷ್ಮಿಯನ್ನು ತಿಪ್ಪೇಲಕ್ಷ್ಮಮ್ಮ, ತಿಪ್ಪೇಲಕ್ಕವ್ವ, ತಿಪ್ಪಮ್ಮ, ತಿಪ್ಪೇರಂಗಪ್ಪ, ತಿಪ್ಪೇಸ್ವಾಮಿ, ತಿಪ್ಪೇಶ, ತಿಪ್ಪೇನಾಗ, ತಿಪ್ಪಯ್ಯ ಮುಂತಾದ ಹೆಸರುಗಳಿಂದ ಪುರುಷ-ಸ್ತ್ರೀ ಎಂಬ ಭೇದಗಳಿಲ್ಲದೆ ಕರೆಯಲಾಗುತ್ತದೆ.

ಬುಡಕಟ್ಟು ಕಾಡುಗೊಲ್ಲರ ಜಾನಪದ ಕಥೆಯೊಂದರ ಪ್ರಕಾರ ಗೊಲ್ಲರಿಗೆ ಲಕ್ಷ್ಮಿ ಮತ್ತು ರುದ್ರ ಇಬ್ಬರೂ ಕುರಿಪಿಚ್ಚಿಗೆಯ ರೂಪದಲ್ಲಿ ಸಿಕ್ಕಿದರು. ಅವರೇ ತಿಪ್ಪೇಲಕ್ಷ್ಮಿ ಮತ್ತು ತಿಪ್ಪೇರುದ್ರ!

warliಕಾಪಾಲಿಕ ನಾಥಪಂಥದ ನಾಥಸಿದ್ಧರು ನಂಬುವಂತೆ ಗೋರಖನಾಥ ತಿಪ್ಪೆಯಲ್ಲಿ ಹುಟ್ಟಿದವನು. ದಕ್ಕಲ ಜನಾಂಗದ ಆದಿಪುರುಷನಾದ ದಕ್ಕದ ಮಹಾಮುನಿಯು ತಿಪ್ಪೆಯಲ್ಲಿ ಹುಟ್ಟಿದನೆಂದು ಆದಿಜಾಂಬವ ಪುರಾಣ ಹೇಳುತ್ತದೆ.

ಚಮ್ಮಾರ ಸಂತ ರವಿದಾಸ ಹೇಳುವಂತೆ ಲಕ್ಷ್ಮೀ ಮತ್ತು ಗಂಗಮ್ಮ ಇದೇ ಚಮ್ಮಾರನ ಮಕ್ಕಳು. ಸಿಂದೋಳ್ಳು-ಗೋಸಂಗಿ-ದಕ್ಕಲರು- ಮಾಷ್ಟೀಕರು ಮುಂತಾದ ಅಲೆಮಾರಿಗಳು ಹೇಳುವಂತೆ ಮೊದಲಿಗೆ ಲಕ್ಷ್ಮಿಯು ಮಾದಿಗರ ಮನೆಮಗಳಾಗಿ ಗಲ್ಲೆಬಾನಿಯ ಕರಿಜಲದಲ್ಲಿ ಹುಟ್ಟಿದವಳು. ಆ ನಂತರದಲ್ಲಿ ಕೋಮಟಿಶೆಟ್ಟರ ಮನೆಯಲ್ಲಿ ವಸ್ತಿ ಮಾಡಿದಳು.

ಮಲೆಮಹದೇಶ್ವರನ ಕಾವ್ಯದಲ್ಲಿರುವಂತೆ ಮಲೆಯ ಮಹದೇವ ಹುಟ್ಟಿಬರುವುದೇ ತಿಪ್ಪೆಯಿಂದ. ತಿಪ್ಪೆಗುಂಡಿಯಿಂದ ಎದ್ದುಬಂದ ಮಹದೇವ ತನ್ನ ಮೈತುಂಬಾ ಕೀವು-ರಕ್ತ-ರಸಕ ತುಂಬಿಕೊಂಡು, ಮೈಮೇಲೆ ಸತ್ತೆಮ್ಮೆ ಕರುವಿನ ಚರ್ಮ ಹೊದ್ದುಕೊಂಡು ಕಲ್ಯಾಣಪಟ್ಟಣ ಪ್ರವೇಶಿಸುತ್ತಾನೆ. ಮಂಟೇಸ್ವಾಮಿ ಕಾವ್ಯದಲ್ಲಿ ವ್ಯಕ್ತವಾಗಿರುವಂತೆ ಕಲ್ಯಾಣದಲ್ಲಿ ತನಗೆ ಶರಣರು ಪ್ರವೇಶ ನಿರಾಕರಿಸಿದ ಬಳಿಕ, ಮಂಟೇಸ್ವಾಮಿಯು ತನ್ನ ಮೈಮೇಲೆ ಸತ್ತೆಮ್ಮೆ ಕರುವಿನ ಚರ್ಮ ಹೊದ್ದುಕೊಂಡು ಮಾದಿಗರ ಘನಶರಣನಾದ ಹರಳಯ್ಯನ ತಿಪ್ಪೇಗುಂಡಿ ಸೇರಿಕೊಳ್ಳುತ್ತಾನೆ. ಹರಳಯ್ಯನ ತಿಪ್ಪೇಗುಂಡಿಯಲ್ಲಿದ್ದ ಮಂಟೇಸ್ವಾಮಿಯನ್ನು ಬಸವಣ್ಣ ಮತ್ತು ನೀಲಮ್ಮನವರು ಪ್ರಾರ್ಥಿಸಿ ಮರಳಿ ಕಲ್ಯಾಣ ಪಟ್ಟಣಕ್ಕೆ ಕರೆದುಕೊಂಡು ಹೋಗುತ್ತಾರೆ.

ದೇಶಿ ಯೋಗಿ ನಾಯಕನಹಟ್ಟಿ ತಿಪ್ಪೇಸ್ವಾಮಿಯು ಸತ್ತೆಮ್ಮೆಯನ್ನು ಬದುಕಿಸುವ ಪವಾಡ ಮಾಡಿ, ತಿಪ್ಪೆಗೆ ಸೆಗಣಿ ಮನೆಮಕ್ಕಳಿಗೆ ಹಾಲುಕೊಡುವ ಎಮ್ಮೆಗಳನ್ನು ಬದುಕಿಸಿ ಅನ್ನ ಬೆಳೆಯುವ ರೈತರಿಗೆ ನೆರವಾಗುತ್ತಾನೆ. ಈ ದಿನ ಪುರೋಹಿತಶಾಹಿ ವ್ಯವಸ್ಥೆಯು ಸೃಷ್ಟಿಸಿರುವ “ವರಮಹಾಲಕ್ಷ್ಮಿ”ಗಿಂತಲೂ ನಮ್ಮ ದುಡಿಯುವ ಜನರ ತಿಪ್ಪೇಲಕ್ಷ್ಮಿ ದೊಡ್ಡವಳು!

ಇಂತಹ ತಿಪ್ಪೇಲಕ್ಷ್ಮಿಯನ್ನು ಮರೆಯಬೇಡಿರಿ- ಮರೆತರೆ ನಿಮಗೆ ಅನ್ನ ಸಿಕ್ಕುವುದಿಲ್ಲ.

‍ಲೇಖಕರು Admin

13 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading