ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿಕ್ಕಾಡುವ ಬಿಸುಪಿಗೆ ನೆಪ ಹುಡುಕಬೇಕೆ?

ಸಿದ್ದು ಯಾಪಲಪರವಿ

ನಿನ್ನ ನೆನಪಿನ ಗುಂಗಿನ ಹೊಳಪಲಿ
ಮೂಡುವ ಅಕ್ಷರಗಳು
ಶಬ್ದಗಳಾಗಿ ಹೊಚ್ಚ ಹೊಸತು
ಭಾವದಿ ಹೊರಹೊಮ್ಮಲು
ಕಾರಣ ಕೇಳಿ ತಿಳಿಯಬೇಕೆ?

ಮೌನ ಕೌದಿಯ ಮುಸುಕನೆಳೆದು
ನಿಶಬ್ದವೇ ಮಾತಾಗಿ ಆ ಮಾತು
ಮತ್ತೆ ಮತ್ತೆ ಅನುರಣಿಸಿ
ಒಳಗೊಳಗೇ ಸಂಭ್ರಮಿಸುವ ಹೃದಯಕೆ
ಹಾಡಿ ಹೊಗಳಿ ಕೊಂಡಾಡಬೇಕೆ?

‌ಎಲ್ಲೋ ಕುಳಿತ ನಿನ್ನ ಬಿಸಿಯುಸಿರು
ಇಲ್ಲಿ ನನ್ನೆದೆಗೆ ತಾಕಿದ್ದು
ಭ್ರಮೆಯಾದರೂ ವಾಸ್ತವ

ಉಸಿರು ಉಸಿರನೇ ತೀಡಿ
ತಿಕ್ಕಾಡುವ ಬಿಸುಪಿನಲಿ
ಹೊರಳಾಡಿ ಪರಿಮಳ ಬೀರಿ
ಘಮ್ಮೆನಲು ನೆಪ ಹುಡುಕಬೇಕೆ?

ಮನಸು ಬೆರೆತು ಹೃದಯ ಹೊಸೆಯಲು
ಪ್ರೇಮ ಕಾಮದಾಟದ ಪರ್ವತವನೇರುವ
ತವಕ ತಲ್ಲಣ ಗೌಣ

ಅದರಾಚೆಯ ಆಪ್ತ
ಅಪ್ಯಾಯ ಸ್ನೇಹ ಸಿಂಚನದ
ಅಪ್ಪುಗೆಯೊಂದೇ ಸಾಕು

ಸ್ನೇಹದ ಸೂಕ್ಷ್ಮ ಸೆಲೆಯ
ಬಣ್ಣಿಸಲು ಶಬ್ದಗಳೇ ಸಾಲದು
ಅಗೋಚರ ಅನನ್ಯ
ಅನಂತ ಎಂದೆಲ್ಲಾ ಹೇಳಬೇಕೆ?

‍ಲೇಖಕರು Avadhi GK

25 March, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading