ಮ ಶ್ರೀ ಮುರಳಿ ಕೃಷ್ಣ
ಇತ್ತೀಚೆಗೆ ಸುಚಿತ್ರಾ ಫಿಲ್ಮ್ ಸೊಸೈಟಿ ಇಸ್ರೇಲಿ ಚಲನಚಿತ್ರ ನಿರ್ದೇಶಕ ಡ್ಯಾನ್ ವುಲ್ಮನ್‍ರೊಡನೆ ಒಂದು ಸಂಜೆ- ‘ಟೈಡ್ ಹ್ಯಾಂಡ್ಸ್’ ಚಲನಚಿತ್ರ ಪ್ರದರ್ಶನ- ಸಂವಾದ ಎಂಬ ಕಾರ್ಯಕ್ರಮವನ್ನು ಅಯೋಜಿಸಿತ್ತು.
‘ಟೈಡ್ಹ್ಯಾಂಡ್ಸ್’ (2006)ನ ಸ್ಥೂಲವಾದ ಕಥನ ಹೀಗಿದೆ: ಯುಝಿ ಒಬ್ಬ ಹೆಸರುವಾಸಿ ನೃತ್ಯಪಟು, ಸಲಿಂಗಕಾಮಿ(ಗೇ) ಹಾಗೂ ಏಡ್ಸ್ ರೋಗಿಯಾಗಿರುತ್ತಾನೆ. ತನ್ನ ಜೀವನದ ಅಂತಿಮ ಘಟ್ಟದಲ್ಲಿರುವ ಆತನಿಗೆ ಅಸಾಧ್ಯ ನೋವುಕಾಡುತ್ತಿರುತ್ತದೆ. ಅದರ ಶಮನಕ್ಕೆ ಆತ ಮಾದಕವಸ್ತು-ಮಾರಿಹ್ವಾನ (Marijuana)ವನ್ನು ಬಳಸುತ್ತಿರುತ್ತಾನೆ. ಒಮ್ಮೆ ಅದು ಮುಗಿದು ಹೋಗಿರುತ್ತದೆ. ತನ್ನ ತಾಯಿಗೆ ಅದು ಅಂದೇ ಬೇಕೆಂದು ದುಂಬಾಲು ಬೀಳುತ್ತಾನೆ. ಆತನ ತಾಯಿಪಕ್ಕದ ಫ್ಲಾಟ್‍ನ ಒಬ್ಬ ಸಹಾಯಕನ ಮೇಲ್ವಿಚಾರಣೆಯಲ್ಲಿ ಮಗನನ್ನು ಬಿಟ್ಟು, ಮಾರಿಹ್ವಾನಕ್ಕಾಗಿ ಹುಡುಕಾಟ ನಡೆಸುತ್ತಾಳೆ. ದಾರಿಯಲ್ಲಿ ತನ್ನ ಮಗನ ಗೆಳೆಯರು ಭೇಟಿಯಾಗುತ್ತಾರೆ. ಅವರು ಆತನನ್ನು ಭೇಟಿ ಮಾಡಲು ತವಕಿಸುತ್ತಿದ್ದೇವೆ ಎಂದು ತಿಳಿಸುತ್ತಾರೆ. ಆದರೆ ಆಕೆ ತನ್ನ ಮಗ ಯಾರನ್ನು ಭೇಟಿ ಮಾಡಲು ಇಚ್ಛಿಸುವುದಿಲ್ಲ ಎಂದು ಉತ್ತರಿಸುತ್ತಾಳೆ.
ನಂತರ ಸಲಿಂಗಕಾಮಿಗಳ ಅಡಗುತಾಣಕ್ಕೆ ಭೇಟಿ ನೀಡುತ್ತಾಳೆ. ಪೋಲಿಸರ ದಾಳಿಗೆ ಸಿಲುಕಿಠಾಣೆಗೂ ಹೋಗುತ್ತಾಳೆ. ವಿಚಾರಣೆಯ ನಂತರ ಆಕೆ ಅಮಾಯಕಳೆಂದು ತಿಳಿದು ಬಿಟ್ಟುಬಿಡುತ್ತಾರೆ. ತನ್ನ ಪ್ರಯತ್ನವನ್ನು ಕೈಬಿಡದ ಆಕೆಯ ಮೇಲೆ ಹಲ್ಲೆಯೂ ಆಗುತ್ತದೆ. ಕೊನೆಗೆ ತನ್ನ ಮಗನ ಪ್ರಿಯ ಸ್ನೇಹಿತೆಯ ಬಳಿ ಮಾರಿಹ್ವಾನದೊರಕುತ್ತದೆ. ಮನೆಗೆ ಧಾವಿಸಿ ಮಗ ಅದನ್ನು ಸೇವಿಸಲು ನೆರವಾಗುತ್ತಾಳೆ. ಮಗ ಆಕೆಗೂ ಸೇವಿಸು ಎಂದು ಹೇಳುತ್ತಾನೆ! ನಂತರ ಏನಾಗುತ್ತದೆ ಎಂಬುದು ಚಲನಚಿತ್ರದ ಅಂತಿಮ ದೃಶ್ಯದಲ್ಲಿ ಅನಾವರಣಗೊಳ್ಳುತ್ತದೆ. ತಾಯಿಯ ಈಹುಡುಕಾಟದಲ್ಲಿ ಮಗನನ್ನು ಬೆಳೆಸುವಲ್ಲಿ ಆಕೆ ಮಾಡಿರುವ ತಪ್ಪುಗಳು ಮತ್ತು ಮಗನ ಬದುಕಿನ ಆಸೆಗಳು ಆಕೆಗೆ ತಿಳಿಯುತ್ತಾ ಹೋಗುತ್ತವೆ.

ಚಲನಚಿತ್ರದ ಎಸ್ಟಾಬ್ಲಿಷಿಂಗ್ ಶಾಟ್‍ನಲ್ಲೇ ಒಬ್ಬ ನೃತ್ಯಪಟು ತನ್ನ ನೃತ್ಯದ ಮೂಲಕ ವೀಕ್ಷಕರಿಗೆ ಮೋಡಿ ಹಾಕುತ್ತಾನೆ. ನಂತರದ ಶಾಟ್‍ನಲ್ಲಿ ಆತ ತನ್ನ ಮನೆಯ ಕೋಣೆಯೊಂದರಲ್ಲಿ ಊರುಗೋಲನ್ನು ಬಳಸಿ ಹೆಜ್ಜೆಯಿಡಲುಹರಸಾಹಸ ಪಡುವುದನ್ನು ತೋರಿಸುತ್ತಾ ನಿರ್ದೇಶಕರು ನೃತ್ಯವನ್ನು ರೂಪಕವಾಗಿ ಬಳಸುತ್ತಾರೆ. ಚಿತ್ರದುದ್ದಕ್ಕೂ ಆಗಾಗ ಬರುವ ನೃತ್ಯವು ಕತೆಯ ಅರ್ಥ ವಿಸ್ತರಿಸಲು ಬಳಕೆಯಾಗುತ್ತಾ ಹೋಗುತ್ತದೆ.
ಒಂದು ರಾತ್ರಿ ನಡೆಯುವ ಘಟನೆಗಳ ಸುತ್ತ ಚಿತ್ರಕಥನವನ್ನು ಹೆಣೆಯಲಾಗಿದೆ; ಅದು ಬಿಗಿಯಾಗಿದೆ ಕೂಡ. ಚಲನಚಿತ್ರದಲ್ಲಿ ಹುಡುಕಾಟ ಒಂದು ಮನಕಲಕುವ ಸ್ಥಾಯಿ ರೂಪಕವಾಗಿ ಹೊರಹೊಮ್ಮಿದೆ. ಯುಝಿಯ ತಂದೆ ಒಬ್ಬ ಖ್ಯಾತಕಲಾವಿದನಾಗಿರುತ್ತಾನೆ. ಆತ ಬೇರೆ ದೇಶಗಳಲ್ಲಿ ತನ್ನ ಕಲೆಯನ್ನು ಪ್ರದರ್ಶಿಸುತ್ತಿರುತ್ತಾನೆ. ಆದುದರಿಂದ ಮಗನನ್ನು ಬೋರ್ಡಿಂಗ್ ಶಾಲೆಯಲ್ಲಿ ಸೇರಿಸಲಾಗುತ್ತದೆ. ಆ ರಾತ್ರಿಯೇ ತಾಯಿ ತನ್ನ ಮಗನ ಶಾಲೆಯ ಜೀವನದವಿವರಗಳನ್ನು ಆತನ ಕೆಲವು ಸಹಪಾಠಿಗಳಿಂದ ತಿಳಿಯಲು ತುಡಿಯುತ್ತಾಳೆ. ಒಂದೆಡೆ ಮಾರಿಹ್ವಾನಗಾಗಿ ಹುಡುಕಾಟ ಮತ್ತೊಂದೆಡೆ ತಾಯಿಯಿಂದ ಮಗನನ್ನು ಅರಿಯುವ ಹುಡುಕಾಟದ ಹೆಜ್ಜೆಗಳು!
ಚಿಕ್ಕಂದಿನಲ್ಲಿ ಯುಝಿಯ ತಂದೆ ಆತನನ್ನೇ ಒಬ್ಬ ರೂಪದರ್ಶಿಯಾಗಿ ಮಾಡಿಕೊಂಡಿರುತ್ತಾನೆ. ಮಗನ ಹೆಣ್ಣಿನ ನಡವಳಿಕೆಗಳು, ಹಾವಭಾವಗಳಿಂದ ರೋಸಿ ಹೋಗಿ ಆತನ ಕೈಗಳನ್ನು ಕಟ್ಟಿ ಹಾಕಿರುತ್ತಾನೆ(ಹಿಂದುಗಡೆ). ಅಂದರೆ ಮಗನಕಸಿವಿಸಿಯ ಸ್ಥತಿಯಲ್ಲೇ ತಂದೆ ಚಿತ್ರವನ್ನು ಬಿಡಿಸಿರುತ್ತಾನೆ! ಈ ಕಲಾಕೃತಿಯನ್ನೇ ಯುಝಿ, ಕೊನೆಗೆ ಆತನ ತಾಯಿಗೆ ಮಾರಿಹ್ವಾನವನ್ನು ನೀಡುವ ಪ್ರಿಯ ಗೆಳತಿಗೆ ಆಕೆಯ ವಿವಾಹ ವಾರ್ಷಿಕೋತ್ಸವದಂದು ಉಡುಗರೆಯಾಗಿನೀಡಿರುತ್ತಾನೆ! ಟೈಡ್ ಹ್ಯಾಂಡ್ಸ್ ಕಲಾಕೃತಿಯೇ ಯುಝಿಯ ಹಾಗೂ ಆತನ ತಾಯಿಯ ಅಸಹಾಯಕತೆಯನ್ನು ಸಂಕೇತಿಸುತ್ತದೆ.
ಒಂದಾದ ಮೇಲೆ ಒಂದರಂತೆ ಆ ರಾತ್ರಿ ಜರಗುವ ಘಟನೆಗಳು ಯುಝಿಯ ತಾಯಿಯನ್ನು ಜಜ್ಜರಿತಗೊಳಿಸುತ್ತವೆ. ಮಾರಿಹ್ವಾನ ಹುಡುಕಾಟ ಆಕೆಯಲ್ಲಿ ತಾಯ್ತನದ ಸಂವೇದನೆಗಳನ್ನು ಹುಟ್ಟುಕಾಕುತ್ತದೆ! ಇದುವರೆಗೆ ತಾನು ತನ್ನ ಮಗನನ್ನು ಅರಿಯಲಾಗಲಿಲ್ಲವಲ್ಲ ಎಂಬ ಬೇಗುದಿಯಲ್ಲಿ ಆಕೆ ಬೇಯುತ್ತಾಳೆ; ವಿಹ್ವಲಗೊಳ್ಳುತ್ತಾಳೆ. ಅಲ್ಲದೆ ಇದುವರೆಗೆ ಆಕೆಯ ಗ್ರಹಿಕೆಗೆ ದೂರವಾಗಿದ್ದ ಮಗನ ಒಡನಾಡಿಗಳ ಸಲಿಂಗಕಾಮ ಲೋಕದ ಅರಿವೂ ಆಗುತ್ತದೆ!
ನಿರ್ದೇಶಕರು ಸಂಯಮದಿಂದ ಈ ಚಲನಚಿತ್ರದ ಸೂಕ್ಷ್ಮ ವಸ್ತುವನ್ನು ಕಟ್ಟಿಕೊಟ್ಟಿದ್ದಾರೆ. ಅತಿರೇಕದ ಯಾವ ದೃಶ್ಯಗಳೂ ಇಲ್ಲ. ತಾಯಿ-ಮಗನ ಸಂಬಂಧದ ಸೆಂಟಿಮೆಂಟಾಲಿಟಿಯ ಹೈಪ್ ಇಲ್ಲ. ಮುಖಗಳ ಮೇಲೆ ಬೀಳುವ ನೆಳಲು-ಬೆಳಕಿನ ವಿನ್ಯಾಸಗಳು, ಕ್ಲೋಸ್-ಅಪ್ ಶಾಟ್‍ಗಳ ಬಳಕೆ ಪಾತ್ರಗಳಿಂದ ಹೊರಹೊಮ್ಮುವ ಭಾವಗಳಿಗೆ ಪೂರಕವಾಗಿವೆ. ಸಿನಿಮಾದಲ್ಲಿನ ದೃಶ್ಯಗಳ ಮೀಸ್ ಆನ್ ಸೆನ್(Mise en scene) ಸಹ ಕೇವಲ ಕತೆ ಹೇಳುವಷ್ಟಕ್ಕೆ ನಿಲ್ಲದೆಬದುಕಿನ ಅನೇಕ ಧ್ವನಿಗಳನ್ನು ಕಾವ್ಯಾತ್ಮಕವಾಗಿ ಬಿಚ್ಚಿಡುತ್ತವೆ. ನಟನೆಯಲ್ಲಿ ತಾಯಿಯ ಪಾತ್ರವನ್ನು ಮಾಡಿರುವ ಗಿಲಾ ಅಲ್ಮಗೋರ್ ಮತ್ತು ಯುಝಿಯಾಗಿ ಇಡೊ ಟಾಡ್‍ಮೊರ್(ಈತ ನಿಜ ಜೀವನದಲ್ಲಿ ಖ್ಯಾತ ನೃತ್ಯಪಟು ಮತ್ತುಹೋಮೋಸೆಕ್ಷುಯಲ್) ‘‘ಭೇಷ್ “ ಎನ್ನಿಸಿಕೊಳ್ಳುತ್ತಾರೆ.
ಈ ಚಲನಚಿತ್ರದಲ್ಲಿ ಯುಝಿ ಮಾದಕವಸ್ತುವಿನ ವ್ಯಸನಿಯಾಗಿ ಚಿತ್ರಿತಗೊಂಡಿಲ್ಲ. ಆತ ಅದಕ್ಕಾಗಿ ಹಪಹಪಿಸುವುದು ತನ್ನ ನೋವಿನ ಶಮನಕ್ಕಾಗಿ ಮಾತ್ರ. ಅಲ್ಲದೇ, ಮಾದಕವಸ್ತುವಿಗಿಂತ ಮಿಗಿಲಾಗಿ ವೀಕ್ಷಕರಿಗೆ ತಲುಪುವುದುನೊಂದ ತಾಯಿಯೋರ್ವಳ ತಾಯ್ತನದ ಸ್ಪಂದನ ಹಾಗೂ ಆಕೆಯ ಹೃದಯವೈಶಾಲ್ಯ! ಇವು ತಾಯಿಯೊಬ್ಬಳ ಸಾರ್ವತ್ರಿಕ ಗುಣಗಳು; ಮೌಲ್ಯಗಳು. ನಿರ್ದೇಶಕರಾದ ಡ್ಯಾನ್ ಈ ನಿಟ್ಟಿನಲ್ಲಿ ಸಫಲರಾಗಿದ್ದಾರೆ.
ಯುಝಿ ಯಾರನ್ನೂ ಭೇಟಿಯಾಗಲು ಇಚ್ಛಿಸುವುದಿಲ್ಲವೆಂದು ತಿಳಿದೂ, ಅತನ ಕಸಿನ್(ಮಹಿಳೆ) ಯುಝಿ ಒಂದರ್ಥದಲ್ಲಿ ಬಿಡುಗಡೆ(ಆತನೊಳಗಿರುವ ಒಳಗುದಿಗಳಿಗೆ ಸಂಬಂಧಿಸಿದಂತೆ) ಹೊಂದಲು ಸಹಕರಿಸುತ್ತಾಳೆ. ಹೀಗಾಗಿ ಆತ ಸ್ವಲ್ಪನಿರಾಳನಾಗುತ್ತಾನೆ. ಆತನ ತಾಯಿ ಮಾರಿಹ್ವಾನಕ್ಕಾಗಿ ನಡೆಸುವ ಹುಡುಕಾಟದ ಪಡಿಪಾಟಲುಗಳ ಕೊನೆಯಲ್ಲಿ ಕಾಲೆಳೆದುಕೊಂಡು ಸಮುದ್ರ ಕಿನಾರೆಯನ್ನು ತಲುಪುತ್ತಾಳೆ. ಆ ರಾತ್ರಿಯಲ್ಲಿ ಅಲ್ಲಿರುವ, ಮಾನಸಿಕವಾಗಿ ಹಾಗೂದೈಹಿಕವಾಗಿ ಘಾಸಿಗೊಂಡಿರುವ ಕೆಲವು ಹೆಂಗಸರು ಯುಝಿಯ ತಾಯಿಯಲ್ಲಿ ತಮ್ಮ ಪರಿಸ್ಥಿತಿಯ ಪ್ರತಿಬಿಂಬವನ್ನು ಕಂಡು ಆಕೆಯನ್ನು ಸಂತೈಸುವ ನಿಟ್ಟಿನಲ್ಲಿ ಬಿಸಿ ಪಾನೀಯವನ್ನು ನೀಡುತ್ತಾರೆ! ಯುಝಿಯ ಕೆಲವು ಗೆಳೆಯರು, ಆತನತಾಯಿ ಮಾರಿಹ್ವಾನದ ಹುಡುಕಾಟಕ್ಕೆ ಹೋಗುವಾಗ ಆತನನ್ನು ನೋಡಿಕೊಳ್ಳುವ ಸಹಾಯಕ, ಇಂತಹ ಪುಟ್ಟ ಪಾತ್ರಗಳೂ ಮಾನವತೆಯನ್ನು ಪ್ರದರ್ಶಿಸುತ್ತವೆ; ವೀಕ್ಷಕರ ಮನದಲ್ಲಿ ನಿಲ್ಲುತ್ತವೆ.
ಸುಮಾರು ಐದು ದಶಕಗಳ ಕಾಲ ಇಸ್ರೇಲಿ ಚಲನಚಿತ್ರರಂಗದ ಮೇಲೆ ತಮ್ಮ ಛಾಪನ್ನು ಮೂಡಿಸಿರುವ ಡ್ಯಾನ್ ವುಲ್ಮನ್‍ರ ಚಲನಚಿತ್ರಗಳು ಜಗತ್ತಿನ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ವಿಮರ್ಶಕರು ಮತ್ತು ವೀಕ್ಷಕರಮನ್ನಣೆಯನ್ನು ಗಳಿಸಿವೆ. ಅವರು ಸುಮಾರು 20 ಫೀಚರ್ ಫಿಲ್ಮ್‍ಗಳಿಗೆ ಚಿತ್ರಕಥೆಗಳನ್ನು ಬರೆದು, ನಿರ್ದೇಶಿಸಿದ್ದಾರೆ. ಡ್ಯಾನ್‍ರ ನಿರ್ದೇಶನದಲ್ಲಿ ಅನೇಕ ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು ಹೊರಹೊಮ್ಮಿವೆ. ಅವರ ಚಲನಚಿತ್ರಗಳವಸ್ತುಗಳು ಚರ್ವಿತ ಚರ್ವಣವಾಗಿರದೆ, ಭಿನ್ನವಾಗಿ, ಸಾಮಾಜಿಕ ವಾಸ್ತವಗಳನ್ನು ಒಳಗೊಂಡಿರುವುದು ಅವುಗಳ ಹೆಗ್ಗಳಿಕೆ. ಸ್ವತಂತ್ರ ಚಲನಚಿತ್ರ ನಿರ್ದೇಶಕ ಎಂದೇ ಗುರುತಿಸಲ್ಪಡುವ ಡ್ಯಾನ್‍ಗೆ 2018ರ ಗೋವಾ ಅಂತರರಾಷ್ಟ್ರೀಯಚಲನಚಿತ್ರೋತ್ಸವದಲ್ಲಿ ಜೀವಮಾನದ ಸಾಧನೆ ಪ್ರಶಸ್ತಿ ಲಭಿಸಿತು. ಭಾರತದ ಇತರ ಕೆಲವು ಚಲನಚಿತ್ರೋತ್ಸವಗಳಲ್ಲಿ ಅವರು ಜ್ಯೂರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಟೈಡ್ ಹ್ಯಾಂಡ್ಸ್‍ಗೆ ದಿ ಪಾಮ್ ಬೀಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ(2006) ಅತ್ಯುತ್ತಮ ಫೀಚರ್ ಫಿಲಂ ಪ್ರಶಸ್ತಿ ಲಭಿಸಿತು. ಅಲ್ಲದೇ ತಾಯಿಯ ಪಾತ್ರ ವಹಿಸಿದ ಗಿಲಾ ಅಲ್ಮೊರ್‍ಗೆ ಇದೇ ಚಲನಚಿತ್ರೋತ್ಸವದಲ್ಲಿ ಮತ್ತುಜೆರುಸಲೆಂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ(2006) ಅತ್ಯುತ್ತಮ ನಟಿ ಪ್ರಶಸ್ತಿ ಭಾಜನವಾಯಿತು.
ಈ ಚಲನಚಿತ್ರದ ಪ್ರದರ್ಶನದ ತರುವಾಯ ಜರುಗಿದ ಸಂವಾದ ಕಾರ್ಯಕ್ರಮವನ್ನು ಸುಚಿತ್ರಾ ಫಿಲ್ಮ್ ಸೊಸೈಟಿಯ ಸ್ಥಾಪಕ ಸದಸ್ಯರಲ್ಲೊಬ್ಬರಾದ ಶ್ರೀ ಹೆಚ್ ಎನ್ ನರಹರಿರಾಯರು ನಡೆಸಿಕೊಟ್ಟರು. ಅದರಲ್ಲಿ ಡ್ಯಾನ್ ತಮ್ಮಸಿನಿಮಾಯಾನದ ಝಳಕನ್ನು ನೀಡಿದರು. ನೋಡುಗರ ಪ್ರಶ್ನೆಗೆ ಉತ್ತರಿಸುತ್ತಲೇ ಡ್ಯಾನ್ ಉಲ್ಮನ್ ತಮ್ಮ ಚಿತ್ರ ತಯಾರಿಕೆ ಹೇಗೆ ಆಗುತ್ತದೆ, ಹಣವೇ ಇಲ್ಲದೆ ತನ್ನಂತಹವರು ಹೇಗೆ ಸಿನಿಮಾ ಮಾಡುತ್ತಾರೆ ಎಂಬ ವಿವರಗಳನ್ನುತಿಳಿಸಿದರು. ಅವರಾಡಿದ ಅನೇಕ ಮಾತುಗಳು ಭಾರತೀಯ ಚಲನಚಿತ್ರ ರಂಗದಲ್ಲಿ ದುಡಿಯುತ್ತಿರುವ ಹೊಸಬರಿಗೆ ಉಪಯುಕ್ತವಾದುದ್ದಾಗಿತ್ತು.






0 Comments