ಹೀಗೊಂದು ಪ್ರೀತಿ…
ಶಶಿಧರ ಭಟ್
ತಪ್ಪು ತಿಳಿಯಬೇಡ. ಆಡುವ ಮಾತನ್ನು ಆಡಲೇಬೇಕು.
ಒಳಗೆ ಇರುವುದನ್ನು ಹೊರಹಾಕಲೇಬೇಕು.
ಒಳಗಿರುವುದು ಹೊರಗೆ ಬರದಿದ್ದರೆ, ಹೊರಗಿರುವುದನ್ನು ಸ್ವೀಕರಿಸುವುದು ಹೇಗೆ ?
ನೀನೆಂದೆ, ನೀನು ನನ್ನನ್ನು ಪ್ರೀತಿಸುತ್ತೀಯಾ ?
ನಾನು ನಕ್ಕು ಬಿಟ್ಟೆ.
ಹೌದು ಎನ್ನಲಿಲ್ಲ, ಇಲ್ಲ ಎನ್ನಲಿಲ್ಲ.
ನೀನು ಹೌದು ಎಂದುಕೊಂಡೆ
ನಾನು ಇಲ್ಲ ಎನ್ನಲಿಲ್ಲ.
ನಿನಗೆ ಹೌದಾದರೆ ನನಗೆ ?
ಇಲ್ಲ ಎಂದಿರಬಹುದೆ ? ಗೊತ್ತಿಲ್ಲ
ನನಗೆ ಹೌದು ಇಲ್ಲ ಎನ್ನುವುದು ಮುಖ್ಯವಾಗಿರಲಿಲ್ಲ.

ಪ್ರೀತಿ ಎನ್ನುವುದೇ ಹಾಗೆ.
ನೀನು ನಂಬಿದೆ. ನಾನು ?
ನಂಬಿಲ್ಲ ಎಂದು ಹೇಳುವುದು ಹೇಗೆ ?
ನೀನು ಕೇಳಿದೆ, ನನಗಾಗಿ ತಾಜ್ ಮಹಲ್ ಕಟ್ಟಿಸುತ್ತೀಯಾ ?
ನಿನಗೆ ಕಟ್ಟಿಸುತ್ತೇನೆ ಎಂಬ ಉತ್ತರ ಬೇಕಾಗಿತ್ತು.
ನನಗೆ ಆ ಉತ್ತರ ಉತ್ತರವೇ ಆಗಿರಲಿಲ್ಲ..
ಆಗಲೂ ನಾನು ಸುಮ್ಮನೆ ನಕ್ಕು ಬಿಟ್ಟೆ.
ನಿನಗೆ ಎಲ್ಲ ಪ್ರಶ್ನೆಗಳಿಗೂ ಹೌದು ಎಂಬ ಉತ್ತರ ಬೇಕಾಗಿತ್ತು.
ನನ್ನ ಬಳಿ ಆ ಉತ್ತರ ಇರಲಿಲ್ಲ.
ತಾಜ್ ಮಹಲ್ ಕಟ್ಟಿದವನದು ಮಾತ್ರ ಪ್ರೀತಿಯಾ ?
ಗುಡಿಸಲು ಕಟ್ಟಿದವನು ?
ನಾನು ಕೇಳಬೇಕಿತ್ತು, ಕೇಳಲಿಲ್ಲ.
ಪ್ರೀತಿಯ ಪ್ರಮಾಣ ಯಾವುದು ? ಈ ಪ್ರಶ್ನೆಗೆ ಉತ್ತರ
ನನಗಿನ್ನೂ ಗೊತ್ತಿಲ್ಲ.
ಏನು ಬೇಕು ? ಪ್ರೀತಿಸುವವರ ಸಂರಕ್ಷಣೆಯಾ ?
ಎಲ್ಲವನ್ನು ಕೊಡುವ ವರದ ಹಸ್ತವಾ ?
ನಾನು ಕೇಳಬೇಕಿತ್ತು ಕೇಳಲಿಲ್ಲ.
ನನಗೆ ಪ್ರೀತಿ ಎಂದರೆ ಬರೀ ಪ್ರೀತಿ
ನಿನ್ನ ನಗು ನನಗೆ
ನನ್ನ ನಗು ನಿನಗೆ.
ನಾನೆಂದುಕೊಂಡಿದ್ದೆ.
ನೀನು ನನ್ನೆದುರು, ನಾನು ನಿನ್ನೆದುರು
ನಡೆದು ಬರುತ್ತಿದ್ದೆವಲ್ಲ, ಹತ್ತಿರ ಇನ್ನೂ ಹತ್ತಿರ.
ನೀನು ನನ್ನನ್ನು ದಾಟಿ ನಡೆದು ಬಿಟ್ಟೆ, ನಾನೂ ಸಹ.
ಸಮಾನಾಂತರ ರೇಖೆಗಳು
ಕೂಡವುದು ಹೇಗೆ ? ಪ್ರೀತಿ ಅರಳುವ ಹಾಗೆ.






Simply superb Sir!
ಇಷ್ಟವಾಯಿತು … ಹಂಚಿಕೊಂಡೆ ….. ಅಭಿನಂದನೆಗಳು .. ಸರ್ …
preeti ondu aloukika anubhava ashte.
adu yaava loukikatege svaarthakke
sikkuvantha vastuvalla.
kavana chennagide.
Adbhuthavaagide sir …
ತಾಜ್ ಮಹಲ್ ಕಟ್ಟಿದವನದು ಮಾತ್ರ ಪ್ರೀತಿಯಾ ?
ಗುಡಿಸಲು ಕಟ್ಟಿದವನು ?
ನಾನು ಕೇಳಬೇಕಿತ್ತು, ಕೇಳಲಿಲ್ಲ.
Awesome lines