ಪಳೆಯುಳಿಕೆಗಳು
-ನಾ. ಬಾಲಕೃಷ್ಣ
1
ದ್ವಾಪರದಿ ವಿದುರ ನೆಟ್ಟ ಅಶ್ವತ್ಥ
ಒಣ ಒಣಗಿ ಲೊಡ್ಡಾಗಿ
ನೊಣಮುತ್ತ ನಾಗಬನ ಜಡ್ಡಾಗಿ
ಗೋಳಿಟ್ಟ ಗಾಳಿ;
ಮನದಿಚ್ಛೆ ಪೂರೈಸದೆಯೆ ಬಯಬಯಸಿ
ಹೆರಕೆ ಹೊತ್ತರು ಗಬ್ಬ ಕಟ್ಟದು
ಬಂಜೆ ಬದುಕಿಗೆ;
ನಾಯಿ ನರಿ ಊಳಿಟ್ಟ ಮೇಳ
ಕುಟುಕುಟುಕು ಮರಕುಟುಕದ ತಾಳ.
ಅತ್ತತ್ತ ಏಳುಗಿರಿ ಉಪ್ಪರಿಗೆ ವಾಸಿಗೂ
ಕೊಪ್ಪರಿಗೆ ತುಂಬಿಸುವ ಮಹದಾಸೆ,
ಇತ್ತಿತ್ತ ಜೋಪಡಿಯ
ಉಂಬದ ಬಡತನಕ್ಕೆ
ಹೊತ್ತಿನ ತುತ್ತಿಲ್ಲದೆ ಹತಾಶೆ.
ಕಂಡವರ ಕಿಸೆಯಲ್ಲಿ ಕೈಯಿಟ್ಟು
ಬಾಗಿ ಹೊತ್ತವರ ತಲೆಮೇಲೆ ಕಾಲಿಟ್ಟು
ಗಿರಿಯೇರಿ ಮೆರೆವವರ
ನೆರೆದ ಸಿರಿ ನೆರೆಯಾಗಿ ಉಕ್ಕಿದರೂ
ನೆಲದಾಳದಲ್ಲಿ ಜಲವಿಲ್ಲ
ಜಲವಿಲ್ಲದಾ ನೆಲವೆಂತು ಉಗ್ಗೀತು
ಬರವಿಲ್ಲದಾ ಸುಗ್ಗಿ.
2
ಮೆರೆದ ಪವಾಡಗಳ
ಬಾಬಾಗಳೊಡಲು ಮುರುಮುರುಟಿ
ಸುಡುಗಾಡ ಧೂಳಾಗಿ
ರಾಚುತ್ತ ಕಣ್ಣ ಕಿಸುರಾಯ್ತು
ಸತ್ತ ಯತಿಗಳ ಸುತ್ತ ಕಟ್ಟೆ ಕಟ್ಟಿ
ಧೂಪ ದೀಪಗಳ ಪ್ರೇತಾರಾಧನೆ;
ಭೂಯಿಷ್ಠ ನುಡಿಯ ಲೊಟ ಲೊಟದಲ್ಲಿ
ತಟವಟ ವಂಚನೆ
ಪುಕ್ಕಟ್ಟೆಯುಂಡ ಪಿಂಡಾನ್ನಗಳ
ಉಚ್ಛಿಷ್ಟದಲ್ಲಿ ಹೊರಹೊರಳಿ
ರೋಗ ರುಜಿನಗಳ ಕಳೆವ
ತಳವಿಲ್ಲದಾಸೆಗೂ ತತ್ವ ತಳವಾರಿಕೆಯ ಚೌಕಟ್ಟು.
ತಲೆತುಂಬ ಹೊತ್ತು ತಂಬಿಟ್ಟು
ಕಂಡದೈವಗಳಿಗೆಲ್ಲ ಎಡೆಯಿಟ್ಟು
ಪಳೆಯುಳಿಕೆ ಪರಂಪರೆಯ ಜತನವಾಗಿಸುವ
ಮುಗುದೆ ಪ್ರಮದೆಯರ ಸಾಲು
ಕಾಲ ಕಳೆದರೂ ಕಾಲಾನುಕಾಲಕ್ಕು
ಅಳಿಯದೇ ಉಳಿದು
ಮದವೇರಿ ಮಲೆತು
ಮಾನವತೆ ಮರೆತ
ಮನುವಾದದ ದುಂಬಾಲು.







ಅದ್ಭುತ ಪದಗಳ ಹಿಡಿತವಿದೆ ಕವಿತೆಯಲ್ಲಿ.ಒಡ್ಡೊಡಲಾಗಿ ಹಾರುವ ಭಾವದ ರೆಕ್ಕೆಗಳಿಗೆ ಅಂಕುಶವಿಟ್ಟ ಹಾಗೆ. ನೀವು ತುಂಬ ಪಕ್ವ ಮತ್ತು ಕಾವ್ಯಕ್ಕೆ ತನ್ನದೇ ಆದ ಭಾಷೆಯಲ್ಲಿ ಗುರುಗಳ ಸ್ಥಾನದಲ್ಲಿ ನಿಲ್ಲಬಲ್ಲಿರಿ. ಹಂಚಿಕೊಂಡ ಕವಿಗೂ ಮತ್ತು ಅವಧಿಗೂ ಅನಂತ ಧನ್ಯವಾದಗಳು.
uttam pratimegaLu..