‘ತರಾಸು’ ಎಂದರೆ..

ಗೊರೂರು ಶಿವೇಶ್

ಚಕ್ರತೀರ್ಥ, ಚಂದವಳ್ಳಿಯ ತೋಟ, ಚಂದನದ ಗೊಂಬೆ, ಗಾಳಿಮಾತು, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಹಂಸಗೀತೆ, ಮಸಣದ ಹೂವು, ನಾಗರಹಾವು… ಇವೆಲ್ಲವೂ ಕನ್ನಡ ಚಿತ್ರರಸಿಕರ ಮನಸ್ಸಿನಲ್ಲಿ ಅಳಿಯದೆ ಉಳಿದ ಹೆಸರುಗಳು. ಕಾದಂಬರಿಯಾಧಾರಿತ ಈ ಯಶಸ್ವಿ ಚಿತ್ರಗಳ ಕತೃ ತರಾಸುರವರಿಗೆ ಇದು ಜನ್ಮಶತಾಬ್ದಿಯ ವರ್ಷ (ಜನನ 21 ಏಪ್ರಿಲ್ 1920- ಮರಣ ಏಪ್ರಿಲ್ 10 1984).

ಕನ್ನಡ ಸಾಹಿತ್ಯ ಚರಿತ್ರೆಯ ಪ್ರಮುಖ ಘಟ್ಟವಾದ 20ನೇ ಶತಮಾನದ ನವೋದಯ ಕಾವ್ಯ ಸಂದರ್ಭದ ನಂತರ ಕಾಣಿಸಿಕೊಂಡ ಪ್ರಗತಿಶೀಲ ಚಳುವಳಿಯ ಪ್ರಮುಖ ಕಾದಂಬರಿಕಾರರು ತ ರಾ ಸು (ತಳುಕಿನ ರಾಮಸ್ವಾಮಯ್ಯ ಸುಬ್ಬರಾಯ). ಅನಕೃ, ನಿರಂಜನ, ಬಸವರಾಜ ಕಟ್ಟಿಮನಿ ಇತರೆ ಪ್ರಮುಖ ಲೇಖಕರು. ತರಾಸು ಈ ಎಲ್ಲ ಲೇಖಕರಿಗಿಂತ ಹೆಚ್ಚು ಜನ ಪ್ರೀತಿಯನ್ನು ಪಡೆಯಲು ಇವರ ಅನೇಕ ಕಾದಂಬರಿಗಳು ಚಲನಚಿತ್ರವಾಗಿಯೂ ಯಶಸ್ಸನ್ನು ಸಾಧಿಸಿದ್ದು ಪ್ರಮುಖ ಕಾರಣವೆನ್ನಬಹುದು. ಆ ಕಾಲದಲ್ಲಿ ಚಲನಚಿತ್ರದ ಜೊತೆಜೊತೆಗೆ ಕಾದಂಬರಿಕಾರರ ಹೆಸರನ್ನು ಪ್ರಕಟಿಸುತ್ತಿದ್ದ ಕಾರಣಕ್ಕಾಗಿ ಕಾದಂಬರಿಕಾರರಿಗೆ ಚಿತ್ರದ ನಿರ್ದೇಶಕ, ನಟರ ಸಮಾನವಾಗಿ ಗೌರವ  ಸಲ್ಲುತ್ತಿತ್ತು.

ನಾನು ಬಾಲ್ಯದಲ್ಲಿ ಅವರ ಕಾದಂಬರಿಗಳನ್ನು ಬಹಳ ಆಸ್ಥೆಯಿಂದ ಓದುತ್ತಿದ್ದೆನಾದರೂ ಇವರ ಕಾದಂಬರಿಗಳ ದುರಂತ ಅಂತ್ಯ ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಒಮ್ಮೊಮ್ಮೆ ಆ ದುರಂತವನ್ನು ಬಲವಂತವಾಗಿ ತುರುಕಿದಂತೆ ಭಾಸವಾಗುತ್ತಿತ್ತು. ಅದರಲ್ಲೂ ಬೆಂಕಿಯ ಬಲೆ ಕಾದಂಬರಿಯಲ್ಲಿ ಕಥೆಯ ನಾಯಕಿ ಗೌರಿ ಹತಾಶಳಾಗಿ ನೋವಿನಿಂದ ತನ್ನ ಕೈ ಬಳೆಗಳನ್ನು ನೆಲಕ್ಕೆ ಬಡಿಯುವ ದೃಶ್ಯ ಸಾಂಕೇತಿಕವಾಗಿ ಆಕೆ ವಿಧವೆಯಾಗುವುದನ್ನು ಸೂಚಿಸುವುದಾದರೂ ಮೊದಲಿನಿಂದಲೂ ಬರೆ ನೋವನ್ನೇ ಉಂಡ ಕಥಾನಾಯಕಿಗೆ ಕೊನೆಯಲ್ಲಿ ಸುಖಾಂತ್ಯವನ್ನು ನೀಡದೆ ಇದ್ದದ್ದು ಓದುವ ಕಾಲಕ್ಕೆ ಬೇಸರ ಮೂಡಿಸಿತ್ತು. ಬಹುಶಃ ಕನ್ನಡದಲ್ಲಿ ಇಷ್ಟೊಂದು ದುರಂತ ಅಂತ್ಯಗಳ ಕಾದಂಬರಿಕಾರ ಮತ್ತೊಬ್ಬರು ಇಲ್ಲವೇನು ಅನಿಸುತ್ತಿತ್ತು. ಸುಖಾಂತ್ಯವನ್ನು ಕಂಡಿದ್ದ ನಮ್ಮ ಮನಸುಗಳಿಗೆ ಆ ಚಿತ್ರಗಳು ವಿಭಿನ್ನ ಅನ್ನಿಸಿರಬೇಕು.

ಆದರ್ಶ ಭಾರತದ ಕನಸು ಹಾಗೇ ಗ್ರಾಮ ಭಾರತದಲ್ಲಿ ಮನೆಮಾಡಿದ್ದ ಮೌಢ್ಯ, ಶೋಷಣೆ, ಮೇಲು-ಕೀಳು, ಅಸಮಾನತೆ, ಸ್ತ್ರೀ ಶೋಷಣೆ, ಬಾಲ್ಯ ವಿವಾಹ… ಮುಂತಾದ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಮೂಲವಾಗಿಟ್ಟುಕೊಂಡು ರಚಿಸಿದ ಕಾದಂಬರಿಗಳು ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟವು. ಅವಿಭಕ್ತ ಕುಟುಂಬದ ಪತನದ ಕಥೆಯ ‘ಚಂದವಳ್ಳಿಯ ತೋಟ’, ಸಂಗೀತಗಾರನ ಏಳುಬೀಳಿನ ಕಥೆಯ ‘ಹಂಸಗೀತೆ’, ಗುರುಭಕ್ತಿ ಸ್ವಾಭಿಮಾನದ ಸಂಘರ್ಷದ ‘ನಾಗರಹಾವು’, ತಂದೆ-ಮಗಳ ವ್ಯಕ್ತಿ ಸಂಘರ್ಷದ ‘ಚಕ್ರತೀರ್ಥ’, ವೇಶ್ಯಾವೃತ್ತಿ ಸಮಸ್ಯೆಯ ‘ಮಸಣದ ಹೂವು’ ಮುಂತಾದ ಕೆಲವು ಕಾದಂಬರಿಗಳ ಜೊತೆಗೆ ಅವರ ಸ್ತ್ರೀ ಕೇಂದ್ರಿತ ಕಾದಂಬರಿಗಳು ಮತ್ತು ಆ ಕಾದಂಬರಿಗಳಿಗೆ ನಟಿ ಲಕ್ಷ್ಮಿ ಹೇಳಿಮಾಡಿಸಿದಂತೆ ಹೊಂದಿಕೆಯಾಗುತ್ತಿದ್ದದ್ದು ವಿಶೇಷ. ಎಂಬತ್ತರ ದಶಕದ ಸ್ತ್ರೀಯರ ಅದರಲ್ಲೂ ಮಧ್ಯಮ ವರ್ಗದ ಸ್ತ್ರೀಯರ ನಾಡಿಮಿಡಿತವನ್ನು ಅರಿತಿದ್ದ ದೊರೆ-ಭಗವಾನ್ ನಿರ್ದೇಶಕ ನಿರ್ಮಾಪಕದ್ವಯರು ತರಾಸು ಕಾದಂಬರಿಗಳನ್ನು ತೆರೆಗೆ ತಂದು ಸಾಕಷ್ಟು ಲಾಭ ಗಳಿಸಿದರು. ಈ ಸರಣಿಯ ಕೊನೆಯ ಚಿತ್ರ ʼಬಿಡುಗಡೆಯ ಬೇಡಿʼ ಯಶಸ್ವಿಯಾಗಿದ್ದರೆ ತರಾಸು ಕಾದಂಬರಿಗಳ ನಾಗಾಲೋಟ ಮುಂದುವರಿಯುತಿತ್ತು ಎನಿಸುತ್ತದೆ.

ನನ್ನ ಬಾಲ್ಯದ ಕಾಲಕ್ಕೆ ಕಾದಂಬರಿಗಳ ಓದು ದೊಡ್ಡ ಮನರಂಜನೆಯಾಗಿದ್ದ ಸಂದರ್ಭದಲ್ಲಿ ತರಾಸು, ಎಸ್ ಎಲ್ ಭೈರಪ್ಪ, ತ್ರಿವೇಣಿ, ನರಸಿಂಹಯ್ಯ, ಟಿ..ಕೆ.ರಾಮರಾವ್ ಮುಂತಾದವರ ಕಾದಂಬರಿಗಳಿಗೆ ಅತಿ ಹೆಚ್ಚು ಬೇಡಿಕೆ. ಹಣಕ್ಕೆ ಅತಿ ಕಷ್ಟವಿದ್ದ ಕಾಲ. ಆದರೆ ಅದು ಹೇಗೋ ಇವರ ಕಾದಂಬರಿಗಳು ನಮ್ಮ ಬೀದಿಯಲ್ಲಿ ಅಕ್ಕ-ಪಕ್ಕದ ಮನೆಯಲ್ಲಿ ಓಡಾಡುತ್ತಿದ್ದವು. ಜೊತೆಗೆ ಸುಲಭವಾಗಿ ಕೈಗೆ ಸಿಗುತ್ತಿದ್ದವು. ಆದರೆ ತರಾಸು ಕಾದಂಬರಿಗಳನ್ನು ಓದುವಾಗ ಒಂದು ತೊಡಕು ಎದುರಾಗುತ್ತಿತ್ತು. ಅವರ ಕಾದಂಬರಿಗಳು ಒಂದೇ ಹೊತ್ತಿಗೆಯಲ್ಲಿ ಸಿಗದೆ ಮೂರು ಇಲ್ಲವೇ ನಾಲ್ಕು ಪುಸ್ತಕಗಳ ಸರಣಿಯಲ್ಲಿ ಬರುತ್ತಿದ್ದುದರಿಂದ ಆ ಕೃತಿಗಳು ಸರಣಿಯಲ್ಲಿ ಸಿಗದೆ ಒಮ್ಮೊಮ್ಮೆ ಕೊನೆಯ ಇಲ್ಲವೇ ಮೂರನೇ ಭಾಗ ಮೊದಲಿಗೆ ಓದಿ ಒಂದನೇ ಭಾಗವನ್ನು ಕೊನೆಗೆ ಓದಬೇಕಾದ ಪರಿಸ್ಥಿತಿ ಬರುತ್ತಿದ್ದರಿಂದ ಕಥೆಯನ್ನು ಸರಿಯಾಗಿ ಗ್ರಹಿಸಲಾಗದೆ ಇರುಸು ಮುರುಸಾಗುತ್ತಿತ್ತು.

ʼನಾಗರಹಾವುʼ, ʼಸರ್ಪ ಮತ್ಸರʼ, ʼಒಂದು ಗಂಡು ಎರಡು ಹೆಣ್ಣುʼ -ಈ ಮೂರು ಕೃತಿಗಳು ಮುಂದೆ ಪುಟ್ಟಣ್ಣ ಕಣಗಾಲರ ನಿರ್ದೇಶನದಲ್ಲಿ ನಾಗರಹಾವು ಸಿನಿಮಾವಾಗಿ ಅಪಾರ ಖ್ಯಾತಿಯನ್ನು ಗಳಿಸುತ್ತದೆಯಾದರೂ ಆ ಕಾದಂಬರಿಗಳನ್ನು ಓದುವ ಸಂದರ್ಭದಲ್ಲಿ ಅವು ಅನುಕ್ರಮವಾಗಿ ಸಿಗದೇ ಅಂತ್ಯವನ್ನು ಮೊದಲೇ ಓದಿ ಆರಂಭವನ್ನು ಕೊನೆಗೆ ಓದುವ ಪ್ರಸಂಗದಿಂದಾಗಿ ಕಾದಂಬರಿ ಓದುವ ಕುತೂಹಲದ ತೀವ್ರತೆ ಕಡಿಮೆಯಾಗಿತ್ತು. ಇದೇ ರೀತಿ ಪ್ರಸಂಗ ಎದುರಾಗಿದ್ದು ʼಕಂಬನಿಯ ಕುಯಿಲುʼ, ʼರಕ್ತರಾತ್ರಿʼ, ʼತಿರುಗುಬಾಣʼ  ಕೃತಿಗಳನ್ನು ಓದುವಾಗ. ಚಿತ್ರದುರ್ಗದ ನಾಯಕರ ಚರಿತ್ರೆಗಳನ್ನು ರಸವತ್ತಾಗಿ ಬಣ್ಣಿಸಿದ ಕಾದಂಬರಿಗಳು ಅವು.

ʼಹೊಸ ಹಗಲುʼ, ʼವಿಜಯೋತ್ಸವʼ, ʼರಾಜ್ಯದಾಹʼ, ʼಕಸ್ತೂರಿ ಕಂಕಣʼ, ʼದುರ್ಗಾಸ್ತಮಾನʼ ಚಿತ್ರದುರ್ಗ ಪಾಳೆಯಗಾರರ ಕುರಿತು ತರಾಸು ರಚಿಸಿದ ಇನ್ನಿತರ ಕಾದಂಬರಿಗಳು. ಪೌರುಷ, ತ್ಯಾಗ-ಬಲಿದಾನ, ದ್ವೇಷ-ಮತ್ಸರ, ಸಂಚು-ಪ್ರತಿ ಸಂಚು, ಯುಕ್ತಿ–ಕುಯುಕ್ತಿ, ಸ್ವಾಭಿಮಾನ, ವಿಶ್ವಾಸ ಘಾತಕತನ, ರಾಗದ್ವೇಷಗಳ ಈ ಕಥಾನಕಗಳನ್ನು ಓದುತ್ತಿದ್ದರೆ ಮೈನವಿರೇಳುತ್ತಿತ್ತು. ಆದರೂ ಈ ಕೃತಿಗಳನ್ನು ಅನುಕ್ರಮವಾಗಿ ಓದಲಾಗದೆ ಓದಿದ ಕಾದಂಬರಿಗಳ ನಡುವಿನ ಸಮಯ ಕಾಲದ ಅಂತರದಿಂದಾಗಿ ಗೊಂದಲಗಳು ಉಂಟಾಗುತ್ತಿತ್ತು. ನಾನು ಪಿಯುಸಿಯಲ್ಲಿದ್ದಾಗ ತರಾಸು ಅವರ ʼಸಿಡಿಲ ಮೊಗ್ಗುʼ ನಮಗೆ ಪಠ್ಯವಾಗಿತ್ತು. ಇದು ಕೂಡ ಕಾದಂಬರಿಯ ಮೊದಲ ಭಾಗವಾಗಿದ್ದು ಎರಡನೆಯ ಭಾಗವನ್ನು ಓದಲು ಸಾಧ್ಯವಾಗಲಿಲ್ಲ. ಹೊಯ್ಸಳ ಅರಸ ವಿಷ್ಣುವರ್ಧನ ಮತ್ತು ಶಾಂತಲರ ಪ್ರೇಮ ಪ್ರಸಂಗಗಳು ಆಗಿನ ಯೌವ್ವನ ಕಾಲಕ್ಕೆ ತುಂಬಾ ಖುಷಿಯಾಗಿ ಕುತೂಹಲದಿಂದ ಓದುವಂತೆ ಮಾಡಿತ್ತು. ಮೊದಲನೇ ಭಾಗದ ಕೊನೆಯಲ್ಲಿ ಬರುವ ‘ಬರುತ್ತೇವೆ ಬಂದೇ ಬರುತ್ತೇವೆ, ಆದರೆ ಅತ್ತು ಹಿಂದಿರುಗುವುದಕ್ಕಲ್ಲ, ಗೆದ್ದು ಆಳುವುದಕ್ಕೆ’ ನಲವತ್ತು ವರ್ಷ ಕಳೆದರೂ ಇಂದಿಗೂ ನೆನಪಿನಲ್ಲಿ ಉಳಿದಿದೆ.

ಪತ್ತೇದಾರಿ, ಸಾಮಾಜಿಕ ಇಲ್ಲವೇ ಕಾಲ್ಪನಿಕ ಕಾದಂಬರಿಗಳ ರಚನೆಗಿಂತ ಐತಿಹಾಸಿಕ ಕಾದಂಬರಿಗಳನ್ನು ರಚಿಸುವುದು ಹೆಚ್ಚು ಶ್ರಮದಾಯಕ. ಅಧ್ಯಯನ, ಸಂಶೋಧನೆ, ಸನ್ನಿವೇಶಗಳ ನಿಖರತೆ, ಆ ಕಾಲಘಟ್ಟದ ಜನಜೀವನ… ಇವುಗಳೆಲ್ಲವನ್ನು ಚಿತ್ರಿಸಬೇಕಾಗಿರುವ ಸಂದರ್ಭ ಲೇಖಕನ ಶ್ರಮ ಹಾಗೂ ಸಮಯವನ್ನು ಬಯಸುತ್ತದೆ. ನನಗೆ ತಿಳಿದಂತೆ ಇಂತಹ ಪ್ರಯತ್ನ ಮಾಡಿದ ಲೇಖಕರು ಅಪರೂಪ. ದೇವುಡು, ಕೊರಟಿ ಶ್ರೀನಿವಾಸರಾವ್, ಬಿ.ಎಲ್.ವೇಣು, ಕೆ.ವಿ.ಅಯ್ಯರ್, ಅನಕೃ ಸದ್ಯಕ್ಕೆ ನೆನಪಿಗೆ ಬರುತ್ತಿರುವ ಹೆಸರುಗಳು. ಚಿತ್ರದುರ್ಗ, ಚಿತ್ರದುರ್ಗದ ಕೋಟೆ, ಅಲ್ಲಿನ ಜನಜೀವನ ಇವುಗಳನ್ನು ಕನ್ನಡಿಗರಿಗೆ ಪರಿಚಯಿಸಿದ ಕೀರ್ತಿ ತರಾಸು ಮತ್ತು ನಾಗರಹಾವಿನ ಮೂಲಕ  ಅವುಗಳನ್ನು ಕಣ್ಣು ತುಂಬಿಸಿದ ಶ್ರೇಯ ಪುಟ್ಟಣ್ಣ ಕಣಗಾಲರಿಗೆ ಸಲ್ಲುತ್ತದೆ.

ಘನವಿದ್ವಾಂಸರ ಪರಂಪರೆಯ ಕುಟುಂಬದಲ್ಲಿ ಜನಿಸಿದ ತರಾಸುರವರಿಗೆ ಸಾಹಿತ್ಯ ರಕ್ತಗತವಾಗಿ ಬಂದದ್ದು. ಕುವೆಂಪುರವರು ತಮ್ಮ ಮಹಾನ್ ಕಾವ್ಯ ʼಶ್ರೀರಾಮಾಯಣದರ್ಶನಂʼ ಅನ್ನು ಅರ್ಪಿಸಿದ ಟಿ.ಎಸ್.ವೆಂಕಣ್ಣಯ್ಯನವರು ತರಾಸು ಅವರ ದೊಡ್ಡಪ್ಪ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅಶ್ವಿನಿ ದೇವತೆಗಳೆಂದು ಕರೆಯಲ್ಪಡುವ ಟಿ.ಎಸ್.ವೆಂಕಣ್ಣಯ್ಯನವರು ಮತ್ತು ತ.ಸು.ಶಾಮರಾಯರು, ಕಾದಂಬರಿಗಾರ್ತಿ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ಸಂಬಂಧಿಗಳು. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಧುಮುಕಿ, ಶಿಕ್ಷಣವನ್ನು ತೊರೆದು ನಂತರ ಪತ್ರಕರ್ತರಾಗಿ ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಮುಂದೆ ಬರವಣಿಗೆಯನ್ನು ತಮ್ಮ ದುಡಿಮೆಯನ್ನಾಗಿಸಿಕೊಂಡ ತರಾಸು ಬರೆದೇ ಬದುಕಿದವರು.

ಪತ್ರಕರ್ತ ಜೀವನವನ್ನಾಧರಿಸಿ ಬರೆದ ಅವರ ಮೊದಲ ಕೃತಿ ʼಮುಂಜಾವಿನಿಂದ ಮುಂಜಾವಿಗೆʼ ಪತ್ರಕರ್ತ ಜೀವನದ ಆದರ್ಶ ಮತ್ತು ವಾಸ್ತವಗಳ ನಡುವಿನ ಸಂಘರ್ಷವನ್ನು ಉತ್ತಮವಾಗಿ ಕಟ್ಟಿ ಕೊಟ್ಟಿತ್ತು. ಬರೆದು ಬದುಕಬೇಕಾದ ಅನಿವಾರ್ಯತೆ ಮತ್ತು ಅವರ ಕಾದಂಬರಿಗಳ ಜನಪ್ರಿಯತೆ ಈ ಕಾರಣಕ್ಕಾಗಿ ಪ್ರಕಾಶಕರು ಅವರ ಮನೆಯ ಬಳಿ ತಮ್ಮ ಕಡೆಯವರನ್ನು ಬಿಟ್ಟು ತರಾಸುರವರು ಅಧ್ಯಾಯಗಳನ್ನು ಬರೆದ ತಕ್ಷಣ ಅದನ್ನು ತಂದು ಮೊಳೆ ಜೋಡಿಸುವವರ ಬಳಿ ನೀಡುತ್ತಿದ್ದರೆಂದು ಆ ಕಾಲದಲ್ಲಿ ಒಂದು ವದಂತಿ ಹರಡಿತ್ತು. ಪ್ರಕಾಶಕರ ಬಳಿ ಮುಂದಿನ ಕೃತಿಗಾಗಿ ಅಡ್ವಾನ್ಸ್ ಪಡೆದಿದ್ದ ಅವರು ನಿರಂತರವಾಗಿ ಬರೆಯಬೇಕಾದ ಅನಿವಾರ್ಯತೆಯ ಒತ್ತಡಕ್ಕೆ ಸಿಲುಕಿದ್ದರು. ಇದೇ ಕಾರಣಕ್ಕಾಗಿಯೋ ಏನೋ ಸಿಗರೇಟು ಮತ್ತು ಕುಡಿತದ ಹವ್ಯಾಸಕ್ಕೆ ಬಿದ್ದ ತರಾಸು ಅವರ ಆರೋಗ್ಯ ಕುಸಿಯಿತು. ಅಂಥ ಒಂದು ಸಂದರ್ಭದಲ್ಲಿ ಚಿತ್ರದುರ್ಗದ ಜನ ಇವರನ್ನು ಸನ್ಮಾನಿಸಿದಾಗ ಅವರ ಅಭಿಮಾನವನ್ನು ಕಂಡು ಸೋತ ತರಾಸು ಮದಕರಿ ನಾಯಕನ ಕುರಿತಾಗಿ ಕಾದಂಬರಿ ರಚಿಸುವುದಾಗಿ ಆಶ್ವಾಸನೆ ನೀಡಿ ಅಂತೆಯೇ ಶ್ರಮ ಬಿದ್ದು ನಾಲ್ಕು ತಿಂಗಳಲ್ಲಿ ರಚಿಸಿದ ʼದುರ್ಗಾಸ್ತಮಾನʼ ಅವರ ಕೊನೆಯ ಕಾದಂಬರಿ. ಅಪಾರ ಜನಮೆಚ್ಚುಗೆಯನ್ನು ಗಳಿಸಿದ್ದು ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿತು.

ತಮ್ಮ 64ನೇ ವಯಸ್ಸಿನಲ್ಲಿ ತೀರಿಕೊಂಡ ತರಾಸುರವರಿಗೆ ಇದು ಜನ್ಮಶತಾಬ್ದಿಯ ವರ್ಷ. ಕನ್ನಡ ಪರ ಹೋರಾಟದಲ್ಲಿ ಅ.ನ.ಕೃ, ಮ.ರಾಮಮೂರ್ತಿ ಅವರ ಜೊತೆ ಸಕ್ರಿಯವಾಗಿ ಭಾಗವಹಿಸಿದರು. ಅಮೋಘವರ್ಷ ನೃಪತುಂಗನ ಕುರಿತಾದ ನೃಪತುಂಗ, ಶ್ರವಣಬೆಳಗೊಳದ ಇತಿಹಾಸ ಹಾಗೂ ಚಾವುಂಡರಾಯರ ಕುರಿತಾದ ʼಶಿಲ್ಪಶ್ರೀʼ ಮುಂತಾಗಿ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಚಿತ್ರದುರ್ಗದ ಕಲ್ಲು ಕಲ್ಲುಗಳ ಕಥೆಯನ್ನು ಹೇಳುತ್ತಾ ಕನ್ನಡದಲ್ಲಿ ಬಹುದೊಡ್ಡ ಓದುಗ ವಲಯವನ್ನು ಸೃಷ್ಟಿಸಿದ ತರಾಸುರವರು ತಮ್ಮ ಕಾದಂಬರಿಗಳ ಮೂಲಕ ಚಿರಸ್ಥಾಯಿಯಾಗಿದ್ದಾರೆ.

‍ಲೇಖಕರು nalike

July 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Nalini

    ಲೇಖನ ಇಷ್ಟವಾಯಿತು! ಕನ್ನಡದ ಒಬ್ಬ ಶ್ರೇಷ್ಠ ಕಾದಂಬರಿಕಾರನ ಪರಿಚಯವನ್ನು ಚೆನ್ನಾಗಿ ಮಾಡಿ ಕೊಟ್ಟಿದ್ದೀರಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: