ತಟ್ಟೆಯ ಪೀಠದ ಮೇಲೆ ತಾಲಿಪಟ್ಟು ತಟ್ಟುತ್ತ..

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ರಾತ್ರಿ ಒಂಚೂರು ಅನ್ನ ಉಳದ್ರ ಸಾಕು, ಮರುದಿನ ಥಾಲಿಪಟ್ಟಿನ ತಿಂಡಿಗೆ ಅನ್ನೂದು ಖಾತ್ರಿ ಆಗ್ತಿತ್ತು. ಒಂದಿಷ್ಟು ಅನ್ನ ಅಂದ್ರ ಒಬ್ಬರಿಗೆ ಒಂಚೂರು ಹೆಚ್ಚು, ಇಬ್ಬರಿಗೆ ಕಡಿಮಿ.. ಅಥವಾ ಒಬ್ಬರ ಹೊಟ್ಟಿ ತುಂಬಲಾರದಷ್ಟು, ಮುಸುರಿಗೆ ಚೆಲ್ಲಲಾರದಷ್ಟು ಅನ್ನ ಉಳದ್ರ ಅವೊತ್ತು ಥಾಲಿಪಟ್ಟಿ ಮಾಡೂದೆ. ಇಂಥದ್ದೊಂದು ನಿರ್ಣಯ ತೊಗೊತಿದ್ದಿದ್ದು ಸರಳ ಇತ್ತು. ನಮ್ಮ ಕಡೆಯೆಲ್ಲ ಬ್ರಾಹ್ಮಣರ ಮನ್ಯಾಗಷ್ಟೆ ಥಾಲಿಪಟ್ಟಿ ಮಾಡ್ತಾರ ಅನ್ನೂ ನಂಬಕಿನೂ ಇತ್ತು. ಲಿಂಗಾಯ್ತರು ಒಕ್ಕಲುತನ ಮಾಡೋರು. ಮನಿತುಂಬಾ ಆಳುಕಾಳು ಇರ್ತಾರ. ಇಲ್ಲಾಂದ್ರ ಆಕಳಾ ಕರು ಇರ್ತಾವ. ನಾಯಿ, ಬೆಕ್ಕು ಇರ್ತಾವ. ಯಾರದ್ದರೆ ಹೊಟ್ಟಿಗೆ ಆ ಉಳದ ಅನ್ನ ಹೋಗ್ತದ. 

ಬ್ರಾಹ್ಮಣರ ಮನಿ ಹತ್ರ ನಾಯಿನೂ ಸುಳಿಯೂದಿಲ್ಲ. ಅನ್ನಬ್ರಹ್ಮ ಚಲ್ಲೂದು ಪಾಪ ಅನ್ನುವ ಪಾಪಪ್ರಜ್ಞೆ ಬ್ಯಾರೆ. ಹಂಗಂತ ತಂಗಳನ್ನ ಒಬ್ರೇ ಉಣ್ಣೂದು ಅನ್ಯಾಯ. ಅದಕ್ಕ ಈ ಥಾಲಿಪಟ್ಟು ಮಾಡಾಕ ಕಲತ್ರು ಅಂತ ಒಂದು ನಂಬಿಕಿ ಅಷ್ಟೆ. ಅಥವಾ ರೂಢಿಗತ ನಂಬಿಕಿ ಇದು. 

ಉಳಿದಿರುವ ಅನ್ನನ್ನ ಕಿವುಚಿ, ಕಡಲಿಹಿಟ್ಟು, ಗೋದಿಹಿಟ್ಟು, ಜೋಳದ ಹಿಟ್ಟು, ಹೆಸರು ಹಿಟ್ಟು.. ಅಕ್ಕಿ ಹಿಟ್ಟು, ಒಟ್ನಾಗ ಮನ್ಯಾಗಿರುವ ಎಲ್ಲ ಹಿಟ್ಟನ್ನೂ ಒಂದೊಂದು ಹಿಡಿ ಹಾಕ್ಕೊಂತ ಹೋಗೂದು. ಆಮೇಲೆ ಹಸಿಮೆಣಸಿನಕಾಯಿ, ಜೀರಗಿ, ಹರಳುಪ್ಪು, ಕೊತ್ತಂಬ್ರಿ ಸೊಪ್ಪು, ಕರಿಬೇವು ಸೊಪ್ಪು, ಸಣ್ಣಗೆ ಉಳ್ಳಾಗಡ್ಡಿ ಹೆಚ್ಚಿ ಹಿಟ್ಟು ನಾದ್ಕೊಬೇಕು. ತೊಪ್ಪಲು ಉಳ್ಳಾಗಡ್ಡಿ ಇದ್ದರ ಹಸಿ ತೊಪ್ಪಲಿನ ಜೊತೆನೆ ಕಲಸಬಹುದು. ಹಿಂಗ ಹಿಟ್ಟು ನಾದೂಮುಂದ ನೀರು ಬಳಸಲೇಬೇಕಿಲ್ಲ. ಉಳ್ಳಾಗಡ್ಡಿ, ಉಪ್ಪು ಕೂಡಿ ಒಟ್ಗೆ ಒಂಚೂರು ತೇವ ಬಂದಿರ್ತದ. ಅದೆಷ್ಟು ಗಟ್ಟಿಯಾಗಿ, ಮಿದ್ದತೀರಿ (ನಾದುವ ಮುನ್ನ ಮಿದುಮಾಡಿಕೊಳ್ಳೂದು) ಅದರ ಮ್ಯಾಲೆ ಹಿಟ್ಟಿನ ಹದ ಇರ್ತದ.

ಇದೊಂಚೂರು ಅಳ್ಳಕಾದರ ಹರೀತದ. ಬಿಗಿಯಾದ್ರ ಮೂಗು ಸೀಳ್ತಾವ. ಹಿಂಗ ಮೂಗು ಸೀಳುವ ರೊಟ್ಟಿ, ಥಾಲಿಪಟ್ಟಿಗೆ ಹೆಚ್ಚು ಬೆಲಿ ಇರೂದಿಲ್ಲ. ತಟ್ಟೂದು ನಿಮ್ಮ ಬೆರಳಿಗೆ ಬರೂದಿಲ್ಲ. ನಾದೂದು ನಿಮ್ಮ ಅಂಗೈಗೆ ಗೊತ್ತಿಲ್ಲ ಅನ್ನೂಹಂಗ ಮಾಡ್ತಾವ. ಹಂಗಾಗಿ ಹಿಟ್ಟಿನ ಹದ ಬರೋಬ್ಬರಿ ಇರಬೇಕು.

ಈಗ ಒಂದು ತಾಟು ತೊಗೊಂಡು, ಅದನ್ನು ಉಲ್ಟಾ ಮಾಡಿಡಬೇಕು. ಬುಡಕ್ಕ ಎಣ್ಣಿ ಸವರಬೇಕು. ಅಂಗೈಗೆ ನೀರು ಚಿಮುಕಿಸಿಕೊಂಡು, ಹಿಟ್ಟಿನ ಉಂಡಿ ಮಾಡ್ಕೊಬೇಕು. ಮೊದಲು ಉಂಡಿ ಮಾಡ್ಕೊಂಡು, ಅಂಗೈ ನಡುವಿಗೆ ಚಕ್ರ ಉರುಳಿಸಬೇಕು. ಹಿಂಗ ಮಾಡೂದ್ರೊಳಗ ಒಂದು ಹಂತಕ್ಕ ದುಂಡಕ ಆಗಿರ್ತದ. ಆಮೇಲೆ ಅದನ್ನು ಆದಷ್ಟು ಅಂಗೈಯ್ಯಾಗ ತಟ್ಕೊಳ್ಳೂದು.

ಅಂಗೈಗೆ ಸಾಲೂದಿಲ್ಲ ಅನಿಸಿದಾಗ ಬೋರಲಿಟ್ಟ ತಟ್ಟೆ ಬೆನ್ನಿಗೆ ಹಾಕಿ, ಅಂಗೈಯಿಂದ ಮೆತ್ಗ ತಟ್ಕೊಂತ ಹೋಗೂದು. ಅದೆಷ್ಟು ಮೆತ್ಗಂದ್ರ ಎಳೀಕೂಸಿನ ನಡುನೆತ್ತಿಗೆ ಎಣ್ಣಿಯುಣಿಸಿ, ತಟ್ತಾರಲ್ಲ.. ಪ್ರೀತಿಲೆ, ಕಾಳಜೀಲೆ ಹಂಗ ತಟ್ಟಬೇಕು. 

ಜೋರೆ ಮಾಡಿದ್ರ, ಜಿಡ್ಡು ಹಿಡದಂಗ ತಾಟಿಗೆ ಅಂಟ್ಕೊತಾವ. ಹಂಚಿಗಿಳಿಯುದಿಲ್ಲ. ಹಿಂಗ ತಟ್ಟಿ, ಒಂದು ಹಂತಕ್ಕ ಇನ್ನದು ಅಗಲ ಆಗೂದಿಲ್ಲ ಅನ್ನೂದು ನಿಮ್ಮ ಅಂಗೈನಿಂದ ಮೆದುಳಿಗೊಂದು ಸಂದೇಶ ರವಾನೆ ಆಗ್ತದ. ಆಗ ಅದನ್ನು ಅಂಗೈಗೆ ತೊಗೊಂಡು, ಹಂಚಿಗೆ ಹಾಕಿ, ಎಣ್ಣಿ ಸವರಿ ಬೇಯಿಸಬೇಕು. ಎಣ್ಣೀಹಾಕಿ ಬೇಯಿಸೂಮುಂದ ಇಡೀ ಮನಿ ಕಮರ ಆಗ್ತದ. ಕಮರು ಮನಿತುಂಬ್ತದ. ಮಗ್ಗುಲಮನಿಯೋರಿಗೂ ನಿಮ್ಮನ್ಯಾಗ ಥಾಲಿಪಟ್ಟಿ ಮಾಡ್ಯಾರ ಅಂತ ಈ ಹೊಗಿ ಹೇಳ್ಕೊಂತ ಹೋಗ್ತದ. 

ಹೊಗಿಯಾಡುವ ಮನ್ಯಾಗಿನ ಎಲ್ಲ ಗುಟ್ಟೂನು ಹಿಂಗ ಹೋಗ್ತಾವೇನೋ ಅನ್ನೂದೊಂದು ಸಣ್ಣ ಸಂಶಯ ಉಳೀತದ. ಯಾಕಂದ್ರ ಮಂದಿಮನಿ ಸುದ್ದಿ ಬೇಕನ್ನೋರು, ರಾತ್ರಿ ಶಾಂತಾನ ಗಂಡ ಉಣ್ಲಿಲ್ಲ ಅನಸ್ತದ. ಶಾಂತಕ್ಕನ ಮನ್ಯಾಗ ಇವೊತ್ತ ಥಾಲಿಪಟ್ಟಿ ಮಾಡಾತಾರ. ಇಲ್ಲ, ಶಾಂತವ್ವಂದ ಉಪವಾಸ ಇತ್ತು ಅನಿಸ್ತದ, ಇಲ್ಲ, ಮಾಮಾರಿಗೆ ಥಾಲಿಪಟ್ಟಿ ಸೇರ್ತದಂತ ಒಂದರ್ದ ಬಟ್ಟಲ ಹೆಚ್ಚಗಿನ ಅನ್ನ ಮಾಡ್ತಾಳ ಆಗಾಗ.. ಹಿಂಗ ತಮ್ಮ ಮೂಗಿನ ನೇರಕ್ಕ ಮಾತುಗಳು ಸಾಗ್ತಿರ್ತಾವ. ಆದ್ರ ಥಾಲಿಪಟ್ಟಿ ಮಾಡಿದೋರ ಮನ್ಯಾಗ ಮಾತ್ರ, ಒಳ್ಳಕಲ್ಲಾಗ ಕುಟ್ಟಿದ ಹಸಿಕೊಬ್ಬರಿ ಚಟ್ನಿ, ಮೊಸರು, ಬಿಸಿ ಥಾಲಿಪಟ್ಟಿ ಸಮಾರಾಧನೆ ಮಸ್ತ್‌ ನಡೀತದ. ಹಂಚಿನಿಂದ ಸೀದಾ ಅದು ತಾಟಿಗೆ ಬೀಳ್ತದ.

ಮನ್ಯಾಗ ಹಾಲು ಹೈನು ಇದ್ರ ಮೊದಲು ಥಾಲಿಪಟ್ಟಿ ಎರಡೂ ಮೈ ಸುಟ್ಟ ಮ್ಯಾಲೆ ಒಂದುಕಡೆ ಬೆಣ್ಣಿ ಮುದ್ದಿ ಒಗೀತಾರ. ಅದು ಬ್ಯಾಲೆ ನರ್ತಕಿಯ ಹಂಗ ಡಾನ್ಸ್‌ ಮಾಡ್ಕೊಂತ, ರೊಟ್ಟಿ ಮ್ಯಾಲೆಲ್ಲ ಮುದವಾಗಿ ಹರಡ್ತದ. ಅದರ ಮ್ಯಾಲೆ ಸೇಂಗಾಪುಡಿ, ಪುಠಾಣಿ ಹಿಂಡಿ, ಗುರೆಳ್ಳು, ಅಗಸಿ ಹಿಂಗ ಯಾರಿಗೆ ಯಾವುದು ಪ್ರೀತಿನೋ ಆ ಹಿಂಡಿ ಹಾಕಿ ಕೊಡ್ತಾರ. 

ಇಲ್ಲಾಂದ್ರ ಅದರ ಜೊತಿಗೆ ಕೆಂಪುಚಟ್ನಿ, ರಂಜಕನೂ ಸವರಿ ಕೊಟ್ರ ಆಹಹಾ… ಥಾಲಿಪಟ್ಟಿಯ ರುಚಿನೆ ಬ್ಯಾರೆ. ಇವ್ಯಾವೂ ಬ್ಯಾಡಂದ್ರ ಮೊಸರು ಅಂತೂ ಇದ್ದ ಇರ್ತದ. ಹಂಗ ಪಸಂದಗೆ ಮಾಡ್ಕೊಂಡು ತಿನ್ಬೇಕು ಅನ್ನೋರು, ಮೆಂತ್ಯ ಸೊಪ್ಪು, ಇಲ್ಲಾಂದ್ರ ಸಬ್ಬಸಿಗಿ ಸೊಪ್ಪುನೂ ಹಾಕಿ ಹಿಟ್ಟು ನಾದ್ಕೊಂತಾರ. ಹಂಚಿಗೆ ಹಾಕಿದ ಕೂಡಲೆ ಮೆಂತ್ಯ, ಸಬ್ಬಸಗಿ ಏನು ಹಾಕಿರ್ತೀರೊ, ಅದು ತನ್ನ ಹಟ ಬಿಟ್ಟಂಗ ಸುವಾಸನೆ ಹರಡಾಕ ಶುರು ಮಾಡ್ತದ. 

ಹಂಗ ಥಾಲಿಪಟ್ಟು, ಮಹಾರಾಷ್ಟ್ರ ಮೂಲದ್ದು. ಥಾಲಿಪೀಠ್‌ ಅದರ ಮೂಲ ಹೆಸರು. ತಟ್ಟೆಯ ಪೀಠದ ಮೇಲೆ ತಟ್ಟುವುದರಿಂದ ಈ ಹೆಸರು. ಇದೀಗ ಬಟರ್‌ ಪೇಪರ್‌, ಅಂಗವಸ್ತ್ರದ ಮೇಲೆನೂ ತಟ್ಟಿ ಹಾಕ್ತೇವಿ. ಆದ್ರ ಹೆಸರು ಮಾತ್ರ ಅದೇ ಉಳದದ. ಬಾಳಿ ಎಲಿಮ್ಯಾಲೂ ತಟ್ಟಿ ಹಾಕೂ ರೂಢಿಯದ. ಹಿತ್ತಲದಾಗ ಬಾಳಿ ಬಗಿ ಇರಬೇಕು ಅಷ್ಟೆ. 

ಉಳಿದನ್ನ, ತಂಗಳನ್ನ ಇದ್ರಷ್ಟೆ ಮಾಡುವ ಖಾದ್ಯ ಇದು ಅನ್ನುವ ಕುಖ್ಯಾತಿಯೊಂದದ ಇದಕ್ಕ. ಆದ್ರ ಅನ್ನ ಬ್ಯಾಡನ್ನೋರು, ಅಕ್ಕಿಹಿಟ್ಟು ಹೆಚ್ಗಿ ಹಾಕಿ, ಹಿಟ್ಟು ನಾದ್ಕೊಂತಾರ. ಎಲ್ಲ ಧಾನ್ಯಗಳ ಹಿಟ್ಟು ಇರೂದ್ರಿಂದ, ಬಿಸಿಬಿಸಿ ತಿನ್ನೂಮುಂದ, ಮೂರರಿಂದ ನಾಲ್ಕು ಹೊಟ್ಟಿಗಿಳೀತಾವ. ತಿನ್ನೂಮುಂದ ಏನು ಅನಸೂದಿಲ್ಲ. ಆದ್ರ ತಿರುಗಿ ಸಂಜೀತನಾ ಹಶಿವಿ ಅನಸೂದಿಲ್ಲ.

ಮೊದಲು ಒಂದ್ನೆದ್ದು ಬೆಣ್ಣಿ, ಚಟ್ನಿಪುಡಿ, ಎರಡನೇದ್ದು ಬೆಣ್ಣಿ, ಕೊಬ್ಬರಿ ಚಟ್ನಿ, ಮೂರನೇದ್ದು ಮೊಸರು, ಚಟ್ನಿ ಜೊತಿಗೆ. ಈಗೀಗ ಸಾಸ್‌ ಸೈತ ಜೊತಿಯಾಗ್ತದ. ನಾಲ್ಕನೇದ್ದು ತಿನ್ನೂಮುಂದ ಬಿಸಿಬಿಸಿ ಚಾ ಬೇಕನಿಸ್ತದ. ಹಂಗ ಚಾ ಗುಟುಕರಿಸುಮುಂದ ಇನ್ನೊಂದು ಥಾಲಿಪಟ್ಟು, ಪಟ್ಟು ಬಿಡದೆ ತಿಂದೆಬಿಡ್ತೇವಿ. 

ಬಿಟ್ಟೆನೆಂದರೂ ಬಿಡದೀ ಮಾಯೆ ಅನ್ನೂಹಂಗ ಆಗೂದು ಈ ಥಾಲಿಪಟ್ಟು ತಿನ್ನೂಮುಂದ ನೋಡ್ರಿ. ಯಾಕಿಷ್ಟು ರುಚಿ ಈ ಥಾಲಿಪಟ್ಟಿಗೆ? ಎಣ್ಣಿ ಹಾಕಿ ಬೇಯಿಸೂದ್ರಿಂದ, ಗುಳುಂಗುಳಂ ಅಂತ ಹೊಟ್ಟಿಗಿಳೀತಾವೇನು ಅಂತ ಅನ್ಕೊಂತಿದ್ದೆ. ಆಮೇಲೆ ಅದರ ಹಕೀಕತ್ತು ಗೊತ್ತಾಯಿತು. ಥಾಲಿಪಟ್ಟು, ಕಡಲಿಹಿಟ್ಟಿನ ಮೃದುತ್ವ, ಗೋದಿಹಿಟ್ಟಿನ ಜಿಗಿ, ಜೋಳದ ಹಿಟ್ಟಿನ ರುಚಿ, ಹೆಸರು ಹಿಟ್ಟಿನ ಒಗರುತನ, ಹಿಂಗ ಎಲ್ಲ ಹದದೊಳಗ ಮಿಳಿತ ಆಗ್ತಾವ. ಹಿಂಗ ಸಮ್ಮಿಳಿತವಾದಾಗ ಅವು ತಮ್ಮ ರುಚಿ ಕಳ್ಕೊಂತಾವ. ಹೊಸತೊಂದು ರುಚಿನೆ ಕೊಡ್ತಾವ.

ನಾವು ನಮ್ಮೆಲ್ಲ ಗುಣಗಳನ್ನು ಪ್ರತ್ಯೇಕವಾಗಿಟ್ಟುಕೊಂಡ್ರೂ, ಬಾಂಧವ್ಯದ ರುಚಿಯುಣ್ಣಬೇಕಂದ್ರ ಎಲ್ಲ ರುಚಿಗಳನ್ನೂ ಹದವಾಗಿ ಸಮ್ಮಿಳಿತಗೊಳಸಬೇಕು. ಒಂದೇ ಒಂದು ಹೆಚ್ಚಾದರೂ, ಕಡಿಮಿ ಆದ್ರೂ ಥಾಲಿಪಟ್ಟು, ಪೀಠ ಬಿಟ್ಟು ಏಳೂದಿಲ್ಲ. ಹಂಗೆನೆ ಬಾಂಧವ್ಯನೂ.

ಉಳದ್ಹಂಗ ಚಟ್ನಿಪುಡಿಗಳು, ಚಟ್ನಿ, ಮೊಸರು, ಬೆಣ್ಣಿ ಇವೆಲ್ಲ ನಮ್ಮ ಬದುಕಿನಾಗ ಬರುವ ಪ್ರಸಂಗಗಳಿದ್ದಂಗ. ಎಲ್ಲಕ್ಕೂ ಯಾವುದು ಎಷ್ಟು ಬೇಕೊ ಅಷ್ಟನ್ನು ನಂಜಿಕೊಂಡರೆ ಎಲ್ಲವೂ ರುಚಿಕಟ್ಟು ಆಗ್ತದ. ಥಾಲಿಪೀಠ ಅನ್ನುವ ತಾಲಿಪಟ್ಟಿನೊಳಗ ಇಷ್ಟೆಲ್ಲ ತಾಳು ಪಟ್ಟುಗಳಾದವಂತ ಗೊತ್ತೇ ಆಗಿರಲಿಲ್ಲ. ತಿಂದು ಚಹಾ ಕುಡಿಯುವ ಸುಖದೊಳಗ ಎಲ್ಲ ಮರೀಯಾಗ್ತಿತ್ತು. ಹಂಗೆನೆ ಬದುಕೂನು!

‍ಲೇಖಕರು ಅನಾಮಿಕಾ

December 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ತಾಲಿಪಿಟ್ಟಿನಷ್ಟೇ ರುಚಿಕರ ಲೇಖನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: