ಡೈಲಿ ಬುಕ್ : ಜಿ ಪಿ ಬಸವರಾಜು ಅವರ ’ಬೆತ್ತಲೆಯ ಬೆಳಕನುಟ್ಟು’

ಪುಸ್ತಕದ ಮುನ್ನುಡಿ, ಬೆನ್ನುಡಿ ಮತ್ತು ಲೇಖಕರ ಮಾತು ’ಅವಧಿ’ ಓದುಗರಿಗಾಗಿ :

ಮುನ್ನುಡಿ


ಗೆಳೆಯ ಜಿ.ಪಿ.ಬಸವರಾಜು ಅವರ ಕಥಾಸಂಕಲನ ‘ಬೆತ್ತಲೆಯ ಬೆಳಕನುಟ್ಟು’ ವಿನಲ್ಲಿರುವ ಕಥೆಗಳನ್ನು ಓದುತ್ತಿದ್ದರೆ ಆಗುವ ಅನುಭವ ವಿಶಿಷ್ಟವಾದುದು. ಸಂಕಲನದ ಉದ್ದಕ್ಕೂ ತತ್ಕಾಲದ ದರ್ಶನವೊಂದು ಹಾಜರಾಗುತ್ತಲೇ ಇರುತ್ತದೆ. ಇಲ್ಲಿ ‘ದರ್ಶನ’ವೆಂದಾಕ್ಷಣ ಭಾರವಾದ ಪರಿಕಲ್ಪನೆಗಳು ತಲೆಯ ಮೇಲೆ ಬೀಳುತ್ತಿವೆ ಎಂದುಕೊಳ್ಳಬೇಕಾಗಿಲ್ಲ. ಈ ದರ್ಶನವು ಆಧುನಿಕ ಕಾಲಮಾನವನ್ನು, ಸಮಾಜವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಅತ್ಯಾಧುನಿಕ ಕಾಲ-ದೇಶದಲ್ಲಿ ಇನ್ನೂ ರೂಪಗೊಳ್ಳುತ್ತಿರುವ ದರ್ಶನ. ಈ ನವ ದರ್ಶನವನ್ನು ಅತ್ಯಂತ ನಾಜೂಕಿನಿಂದ ಹಿಡಿಯುವ ಯತ್ನವಾಗಿ ಈ ಕಥೆಗಳು ಓದುಗರನ್ನು ಆಕಷರ್ಿಸುತ್ತವೆ. ಈ ಸಂಕಲನದ ವಸ್ತುಗಳು-ಜಾಗತೀಕರಣ, ಐ.ಟಿ., ಪಟ್ಟಣಗಳು ಮತ್ತು ಹಳ್ಳಿಯ ಬದುಕು-ಇವುಗಳನ್ನು ಮಾನವೀಯತೆಯ ಹಿನ್ನೆಲೆಯಲ್ಲಿ ಹಿಡಿಯುವ ಯತ್ನವಾಗಿವೆ ಇಲ್ಲಿನ ಕಥೆಗಳು. ಇಲ್ಲಿ ‘ದರ್ಶನ’ ಇನ್ನೂ ಮೈದಾಳುತ್ತಿದೆ. ಇದು ಭೂತವಲ್ಲ; ವರ್ತಮಾನದಲ್ಲಿ ಹಾಜರಾಗುತ್ತಲೇ ಇರುವಂಥದ್ದು- ಭವಿಷ್ಯವೂ ಅಲ್ಲ.
ಜಿ.ಪಿ.ಗೆ ಕಥೆ ಹೇಳುವ ಕಲೆ ಕರಗತವಾಗಿಬಿಟ್ಟಿದೆ; ಕಥೆಗಳು ಇಲ್ಲಿ ಸಹಜವಾಗಿ ಮೂಡುತ್ತವೆ. ಕತೆಗಾರ ಇಲ್ಲಿ ತಾಳ್ಮೆಯಿಂದ ಕಥೆಗಳನ್ನು ಬೆಳೆಸುತ್ತಾರೆ. ಈ ಕಥೆಗಳಲ್ಲಿ ನಯಗಾರಿಕೆ ಎಷ್ಟಿದೆ ಎಂದರೆ, ಕಥೆಗಳನ್ನು ಭದ್ರವಾಗಿ ಬೆರಳುಗಳಲ್ಲಿ ಹಿಡಿದರೆ ಅವು ಮುರಿದೇ ಹೋಗಿಬಿಡಬಹುದು. ಓದುಗರಿಗೆ ಈ ಎಚ್ಚರಿಕೆ ಅವಶ್ಯವಾಗಿ ಬೇಕಾಗುತ್ತದೆ; ಇವು ಮನಸ್ಸಿನಲ್ಲಿ ಮೂಡಿಸುವ ಆಕಾರಕ್ಕೆ ಅವಕಾಶ ಕೊಡುತ್ತಲೇ ಹೋಗಬೇಕು. ಇದು ಸ್ವಾಭಾವಿಕವಾಗಿಯೇ ಆಗುವ ಕ್ರಿಯೆ.
ಈ ಕಥಾಸಂಕಲನಕ್ಕೆ ಹೆಸರು ಕೊಟ್ಟಿರುವ ಕಥೆ-‘ಬೆತ್ತಲೆಯ ಬೆಳಕನುಟ್ಟು’. ಮೇಲ್ನೋಟಕ್ಕೆ ಬೆತ್ತಲೆ ಪೂಜೆಯ ಹರಕೆ ತೀರಿಸಲು ಹೋಗುವ ತಾಯಿ-ಮಗಳ ಕತೆಯಂತೆ ಕಂಡು ಬಂದರೂ ಇದು ಸಂಕೀರ್ಣವಾದ ಕಥೆ. ಇಲ್ಲಿಯ ಸಂಕೀರ್ಣತೆ ಇರುವುದು ಕತೆಯ ಬಹುಕೇಂದ್ರಿತ ನೆಲೆಯಲ್ಲಿ; ಬಹುಕೇಂದ್ರಿತ ದೃಷ್ಟಿಕೋನದಿಂದ ನೋಡುವಂತೆ ಕಥೆಗಾರ ಈ ಕಥೆಯನ್ನು ಹೆಣೆಯುತ್ತಾರೆ. ಕಥೆ ತಾಯಿಯು ತನ್ನ ಮಗಳ ಮೇಲೆ ಹೊತ್ತ ಹರಕೆಯನ್ನು ತೀರಿಸಲು, ಬಟ್ಟೆ ಕಳಚಿಕೊಂಡಂತೆ ನಿಂತಿರುವ ಕಾಡಿನ ಚಂದ್ರಾವತಿ ನದಿ ದಂಡೆಯಲ್ಲಿರುವ ಯಲ್ಲಮ್ಮನ ಗುಡ್ಡಕ್ಕೆ ಹೋದಾಗ; ಅಲ್ಲಿ ಬತ್ತಲಾದವರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ನಂಬಿಕೆಯ ಹರಕೆಯನ್ನು ಹೊತ್ತ ತಾಯಿ ದ್ಯಾಮವ್ವನೋ, ಹರಕೆ ತೀರಿಸದೆ ಪ್ರಿಯಕರ ಗ್ರಾಮಸೇವಕ ಗೋವಿಂದದಾಸ್ನೊಡನೆ ತನ್ನವ್ವನನ್ನು ಬಿಟ್ಟು ಓಡಿಹೋದ ರತ್ನಿಯೋ, ಮಗಳು ರತ್ನಿಯಂತೆ ಕಂಡುಬರುವ ಪ್ರಗತಿಪರ ಹುಡುಗಿಯೋ- ಏಕೆಂದರೆ ಇವಳ ಭಾಷಣ ಕೇಳಿ ಕೆರಳಿ ಇವಳನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸಿದ ಮೂಲಭೂತವಾದಿಗಳೋ, ಅವರ ಕಾಲ್ತುಳಿತಕ್ಕೆ ಸಿಕ್ಕು ತನ್ನ ವಡವೆ, ವಸ್ತ್ರ, ಸಾಮಾನುಗಳನ್ನು ಕಳೆದುಕೊಂಡು, ತನ್ನ ಉಟ್ಟ ಸೀರೆ ಕುಪ್ಪಸವನ್ನು ಹರಿಸಿಕೊಂಡು ದೌರ್ಜನ್ಯಕ್ಕೊಳಗಾದ ದ್ಯಾಮವ್ವನೋ?-ಹೀಗೆ ಬಹುಮುಖೀ ಕೇಂದ್ರವುಳ್ಳ ಈ ಕಥೆ ಜಿ.ಪಿ.ಯವರ ಕಲೆಗಾರಿಕೆಯ ವೈಶಿಷ್ಟ್ಯವನ್ನು ನಿರೂಪಿಸುತ್ತದೆ.
ಜಾಗತೀಕರಣದ, ಮಾಹಿತಿ ತಂತ್ರಜ್ಞಾನ ಮತ್ತು ಸ್ಥಳೀಯತೆಯ ಹಿನ್ನೆಲೆಯಲ್ಲಿ ನಿರೂಪಿತವಾಗಿರುವ ಕಥೆ-‘ಕ್ಯಾನ್ವಾಸ್.’ ಚಿತ್ರಕಲಾಕಾರನೊಬ್ಬ ತನ್ನ ಹಳ್ಳಿಯನ್ನೇ ಕೇಂದ್ರವಾಗಿಟ್ಟುಕೊಂಡು ಜಗತ್ತಿಗೆ ತೆರೆದುಕೊಳ್ಳುತ್ತಾನೆ. ಅವನ ಮುಂದಿನ ತಲೆಮಾರಿನ ಮಕ್ಕಳು ಸಾರ್ವತ್ರಿಕವಾಗಿ ಅನ್ವಯವಾಗುವ ಕೆಲಸ ಮಾಡುತ್ತಾ, ಸ್ಥಳೀಯತೆಯನ್ನು ಮರೆಯುತ್ತಾರೆ. ಅಂದರೆ, ಅಮೆರಿಕದಲ್ಲಿರುವ ಮಗಳಾಗಲೀ, ಮುಂಬೈನಲ್ಲಿರುವ ಮಗನಾಗಲೀ ತಮ್ಮ ಸೃಜನಾತ್ಮಕತೆಯನ್ನು ಪಡೆಯದೆ ಆಧುನಿಕ ಜಗತ್ತಿಗೆ ಯಂತ್ರಮಾನವರಾಗುತ್ತಾರೆ. ಹಾಗಾಗಿ ಖಿನ್ನತೆಗೊಳಗಾಗುವುದು ಕಥಾನಾಯಕ ತಾಳಿತ್ತಾಯರೆ. ಇವರ ಪ್ರಪಂಚದಲ್ಲಿ ಬಣ್ಣಗಳೇ ಮೂಡದೆ, ‘ಕ್ಯಾನ್ವಾಸ್’ ಖಾಲಿಯಾಗಿಯೇ ಉಳಿದುಬಿಡುವ ಚಿತ್ರಣ ಮಾಮರ್ಿಕವಾಗಿ ಮೂಡಿಬಂದಿದೆ.
‘ಸ್ನಾನ’ ಕಥೆಯು ಸದಾ ಎಚ್ಚರಿರುವ, ಜನ ಜಂಗುಳಿಯ, ಸದಾ ಚಲನೆಯಲ್ಲೇ ಇರುವ ಮೆಗಾ ಸಿಟಿಯಿಂದ ಬಿಡಿಸಿಕೊಳ್ಳುವ ಸಲುವಾಗಿ ಪ್ರಕೃತಿಯೊಡನೆ ಬೆರೆಯುವ ಮನಸ್ಸುಳ್ಳ ಯುವಕರ ಕಥೆ. ಇವರು ಪ್ರಕೃತಿಯಿಂದ ನಾಲ್ಕುಪಟ್ಟು ದೂರವಾದವರು; ಮಾನವನ ನಾಗರಿಕತೆಯಲ್ಲಿ ಬುಡಕಟ್ಟು ಮನಸ್ಸಿನಿಂದ ಬೇಸಾಯದ ಮನಸ್ಥಿತಿಗೆ, ನಂತರ ಯಂತ್ರನಾಗರಿಕತೆಯ ಸ್ಥಿತಿಯಿಂದ ಸೈಬರ್ ಯುಗಕ್ಕೆ ಕಾಲಿಟ್ಟವರು. ಈ ಸ್ಥಿತಿಗಳನ್ನು ಕಳಚಿ ಮತ್ತೆ ಪ್ರಕೃತಿಯ ಕಡೆಗೆ-ಮಾನವನ ಮೂಲಸ್ಥಿತಿಗೆ-ಇವರನ್ನು ಎಳೆದು ತರುವವನೊಬ್ಬ ಹಳ್ಳಿಗಾಡಿನ ಪೋರ. ಈ ಪೋರನಿಗೆ ಪ್ರಕೃತಿ, ಪ್ರಾಣಿ-ಪಕ್ಷಿಗಳೊಡನೆ ಸ್ವಾಭಾವಿಕವಾಗಿಯೇ ‘ಇರು’ವ ಜ್ಞಾನ, ಈ ಸೈಬರ್ ಯುಗದವರನ್ನು ಚಕಿತಗೊಳಿಸುತ್ತದೆ. ಕಾಡಿನ ಜ್ಞಾನದ- ಅಂದರೆ ಪ್ರಕೃತಿಯ ಜ್ಞಾನದ ಆಕರವಾಗಿರುವ ಚಿಕ್ಕ ಪೋರ-ಸೈಬರ್ ಮನಸ್ಸಗಳಿಗೆ ಸಂಪೂರ್ಣವಾಗಿ ‘ಗ ‘ ತಿರುವನ್ನು ಕೊಡುವುದು ಅದ್ಭುತ ರೀತಿಯಲ್ಲಿ ಕತೆಯಾಗಿದೆ.
ಉಪಯೋಗಕ್ಕೆ ಬಾರದ, ನಡೆಯಲೂ ಸಾಧ್ಯವಾಗದ, ಕಡೆಗಣಿಸಿದ ಕುದುರೆಯೊಂದು ಸೂಕ್ತ ಆರೈಕೆಯ ನಂತರ ಎಲ್ಲರ ಆಕರ್ಷಣೆಯ ಕೇಂದ್ರವಾಗುವುದರ ಸುತ್ತ ಹೆಣೆದ ಕತೆ-ಕುದುರೆ. ಕುದುರೆಯೇ ಕೇಂದ್ರವಾಗಿ ಈ ಕತೆ ಪಡೆದುಕೊಳ್ಳುವ ವಿಭಿನ್ನ ಆಯಾಮಗಳು, ನಮ್ಮ ಸಾಮಾಜಿಕ ವ್ಯವಸ್ಥೆ, ಪೊಲೀಸು, ಪ್ರಾಣಿದಯಾ ಸಂಘ, ಮಾಧ್ಯಮಗಳ ಕಾರ್ಯನಿರ್ವಹಣೆಯ ವೈಖರಿ ಇತ್ಯಾದಿ ಅನೇಕ ಸಂಗತಿಗಳ ಸುತ್ತ ಈ ಕುದುರೆ ಓಡುವ ಪರಿ ಭಿನ್ನವಾಗಿದೆ. ನಿಜವಾದ ಪ್ರೀತಿಯ ಸೆಲೆ ಎಲ್ಲಿದೆ ಎಂಬುದನ್ನು ಈ ಕತೆ ಅತ್ಯಂತ ಸೂಕ್ಷ್ಮವಾಗಿ ಶೋಧಿಸುತ್ತದೆ.
ಇದರಂತೆಯೇ ‘ಜೀವ ಕೋಟಿ’ ಕಥೆಯೂ. ಹಾವಿನಂಥ ಪ್ರಾಣಿಯ ಜೊತೆ, ತನ್ನ ಮನೆಯಲ್ಲಿ ತಂದೆ-ತಾಯಿ, ಹೆಂಡತಿ-ಮಕ್ಕಳ ಜೊತೆ ಸಹಜವಾಗಿಯೇ ಸಹಬಾಳ್ವೆ ನಡೆಸುವ ಯುವಕನೊಬ್ಬ ತನ್ನ ಜೆಸಿಬಿ ಯಂತ್ರದಿಂದ ಒಂದು ನಾಗರ ಹಾವಿನ ಸಂಸಾರವನ್ನೇ ಕೊಲ್ಲುತ್ತಾನೆ. ಕೊಲ್ಲುವಾಗ ಆತ ನಿಲರ್ಿಪ್ತ. ಆದರೆ ಮನೆಗೆ ಬಂದು ರಾತ್ರಿ ರಾತ್ರಿ ಊಟಮಾಡುವಾಗ ಅನ್ನದ ತಟ್ಟೆಯಲ್ಲಿ ಕಾಣುವುದು ರಕ್ತಸಿಕ್ತ ಹಾವಿನ ಚಿತ್ರಣವೇ. ಅವನಿಗೆ ಅರಿವು ಮೂಡುವುದು ತತ್ವಪದಕಾರನ ಅನುಭವದ ಮಾತೊಂದು ಅನುರಣಿಸಿದಾಗ:
‘ಇರುವೆ ಎಂಭತ್ತೆಂಟು ಕೋಟಿ ಜೀವರಾಶಿಗಳನ್ನು ಆ ಪರಮಾತ್ಮ ಸೃಷ್ಟಿಸಿ ಈ ಭೂಮಿಗೆ ಕಳಿಸಿದ್ದಾನೆ. ಈ ಭೂಮಿಯ ಮೇಲೆ ಆ ಎಲ್ಲ ಜೀವಿಗಳೂ ಇದ್ದಾವೆ. ಒಂದೊಂದು ಪ್ರಾಣಿಗೂ ಒಂದೊಂದು ಜಾಗ. ಮನುಷ್ಯ, ಇರುವೆ, ಹಾವು, ಚೇಳು, ಹುಲಿ, ಕತ್ತೆ, ಕಿರುಬ ಎಲ್ಲ ಜೀವಕ್ಕೂ ಜಾಗ ಇದ್ದೇ ಇದೆ. ಅವುಗಳಿಗೆ ಅನ್ನ ಇದೆ; ನೀರು ಇದೆ. ಸಂಸಾರ, ಮಕ್ಕಳು ಮರಿ ಎಲ್ಲವೂ ಇದೆ. ಈ ಲೋಕದ ಆಟವೂ ಇದೆ. ಪ್ರತಿಯೊಂದು ಜೀವದ ಆಟವೂ ಮುಗಿದ ಮೇಲೆ ಆ ಪರಮಾತ್ಮ ಮೇಲಕ್ಕೆ ಕರೆದುಕೊಳ್ಳುತ್ತಾನೆ…; ಅದು ಪರಮಾತ್ಮನ ಇಚ್ಛೆ, ಅದು ಅವನ ಕೈಯ್ಯಲ್ಲಿದೆ…’
ಈ ತತ್ವ ಅರಿವಾಗಿ, ಜೀವಜಗತ್ತಿನ ಚಕ್ರದ ಇರವು ನಾಯಕನ ಅರಿವಾಗಿ ಮೂಡುವುದು, ಈ ಅರಿವು ಪರ್ಯಾವರಣದ ಅರಿವಾಗುವುದು ಈ ಕತೆಯ ವಿಶೇಷ.
‘ಅಂಕಲ್, ನಿಮ್ಮ ಬೈಕು’ ಕಥೆಯ ಹುಡುಗಿಯೊಬ್ಬಳು ಮಗುವಾಗಿದ್ದಾಗ ಅಂಕಲ್ ಮೂಡಿಸಿದ ಅದ್ಭುತ ಕಲ್ಪನೆ; ಆ ಕಲ್ಪನಾ ಲೋಕದಲ್ಲಿ ವಿಹರಿಸಿದ ಮಲೆನಾಡ ಪರಿಸರ; ಅಂಕಲ್ ಮತ್ತು ಅವರ ಬೈಕ್; ಆಕೆ ಮಗುವಾಗಿದ್ದಾಗ ಸೃಷ್ಟಿಯಾದ ಮನಸ್ಸಿನ ಕೋಶ. ತನ್ನ ತಂದೆಯನ್ನು ಅಪಘಾತದಲ್ಲಿ ಕಳೆದುಕೊಂಡು ಇನ್ನು ಶಿವಮೊಗ್ಗೆಗೆ ಹೋಗಲೇ ಆಗದಂಥ ವಾತಾವರಣದಲ್ಲಿ, ತಾಯಿ ಬೆಂಗಳೂರಿಗೆ ಬಂದು ನೆಲಸಿ, ಆಕೆಯನ್ನು ಅಮೆರಿಕದ ಸಾಫ್ಟ್ವೇರ್ ಇಂಜಿನಿಯರ್ ಮದುವೆಯಾಗಿ, ತಾನೂ ಸಾಫ್ಟ್ವೇರ್ ಇಂಜಿನಿಯರ್ ಆಗಿ, ಇಡೀ ವಿಶ್ವವನ್ನೇ ಸುತ್ತಿದರೂ ಮಗುವಾಗಿದ್ದಾಗ ಅಂಕಲ್ ಸೃಷ್ಟಿಸಿದ ಮನೋಕೋಶ ಬರಿದಾಗಿಯೇ ಉಳಿದುಬಿಡುವ ಕಥೆ; ಜಾಗತಿಕ ಹಳ್ಳಿಯಲ್ಲಿ ನೋಡದೇ ಉಳಿದ ಕೇರಿಯಾಗಿಬಿಡುತ್ತದೆ. ವಿವರಗಳಲ್ಲಿ ಈ ಕಥೆ ನಿಲರ್ಿಪ್ತವಾಗಿ ಚಿತ್ರಿಸಿಕೊಳ್ಳುತ್ತದೆ.
ಮನುಷ್ಯನ ಮನಸ್ಸು ಎಲ್ಲಿ ಒಳ್ಳೆಯದನ್ನು ಮಾಡಲು ಬಯಸುತ್ತದೆಯೋ ಅಲ್ಲೇ ಕೆಡುಕನ್ನೂ-ಸಾವನ್ನೂ ಮಾಡಲು ಬಯಸುತ್ತದೆ; ಪ್ರೀತಿದ್ವೇಷಗಳು ಒಟ್ಟೊಟ್ಟಿಗೇ ಕೆಲಸಮಾಡುತ್ತಿರುತ್ತವೆ. ‘ಪಿಸ್ತೂಲು’ ಎಂಬ ಕತೆಯನ್ನೇ ನೋಡಿ: ಇಲ್ಲಿ ಗಂಡನೇ ಹೆಂಡತಿಯ ಕೊಲೆಗೆ ಯತ್ನಿಸಿದ್ದು- ನ್ಯಾಯಾಲಯದಲ್ಲಿ ಕುತೂಹಲ ಘಟ್ಟದಲ್ಲಿ ಹೆಂಡತಿ ಕೇಸನ್ನು ವಾಪಸ್ಸು ಪಡೆಯುತ್ತಾಳೆ. ಇದು ಪತ್ತೇದಾರಿ ಕತೆಯಂತೆ ಬೆಳೆಯಲು ಸಾಧ್ಯವಿದ್ದರೂ, ಜಿಪಿ ಅದನ್ನು ಬಿಟ್ಟುಕೊಟ್ಟು ಬೇರೆ ವಾಸ್ತವದ ಕಡೆಗೆ ಕತೆಯನ್ನು ನಡೆಸುತ್ತಾರೆ. ನಿಜ ಜೀವನದಲ್ಲಿ ಸತ್ಯವನ್ನು ಮುಚ್ಚಿಡಲಾರದೆ ಬಿಚ್ಚಿಟ್ಟ ಕಥೆ ಇದು. ಸತ್ಯದ ಮುಖಗಳು ಹಲವಾರು. ಇಲ್ಲಿ ನಿಜವನ್ನು ನುಡಿಸುವುದು ದೇವರಲ್ಲ, ನ್ಯಾಯಾಲಯವಲ್ಲ, ಒಳ ಮನಸ್ಸಿನ ಸಾಕ್ಷಿಪ್ರಜ್ಞೆ!
ಒಂದು ಸಣ್ಣ ಹಳ್ಳಿಗೆ ಹೊಲಿಗೆಯಂತ್ರವೊಂದು ಬಂದು ಇಡೀ ಹಳ್ಳಿಯನ್ನು ಆಕಷರ್ಿಸಿ, ಬದಲಾಯಿಸುವ ಚಿತ್ರಣದೊಂದಿಗೆ ಕಥಾನಾಯಕ ಆನಂದಮೂತರ್ಿ ಬೆಳೆಯುತ್ತಾನೆ. ಒಂದು ಮನೆಯ ಜಗಲಿ ಇಡೀ ಊರಿನ ಜನರನ್ನು ಒಟ್ಟುಗೂಡಿಸುತ್ತದೆ. ಕತ್ತರಿಸುವ ಮತ್ತು ಬೇಕಾದ ಆಕಾರ ಕೊಟ್ಟು ಹೊಲಿದು ಸೇರಿಸುವ ಕ್ರಿಯೆ ಹೊಲಿಗೆ ಯಂತ್ರದ ಮೂಲಕ ನಡೆಯುತ್ತದೆ. ಅಂತೆಯೇ ರಾತ್ರಿ ಕತ್ತಲನ್ನು ಓಡಿಸಿ ಬೆಳಕನ್ನು ಕೊಡುವ ಕೆಲಸವನ್ನು ಗ್ಯಾಸ್ಲೈಟ್ ಸಾಂಕೇತಿಕವಾಗಿ ಮಾಡುತ್ತದೆ. ಇಲ್ಲಿ ಬೇರೆ ಜಾತಿಯ ರತ್ನಿಯಲ್ಲಿ ಆನಂದಮೂತರ್ಿ ಅಥವಾ ಆನಂದಮೂತರ್ಿಯಲ್ಲಿ ರತ್ನಿಯ ಪ್ರೀತಿಗೆ ಹೊಲಿಗೆಯಾಗುತ್ತದೆ; ಅಷ್ಟೇ ಅಲ್ಲ ಇಬ್ಬರು ತಂದೆ-ತಾಯಿಯರ ಪ್ರೀತಿಯನ್ನು ‘ಹೊಲಿಯುವ’ ಯಂತ್ರವಾಗಿ ಪರಿವತರ್ಿತವಾಗುವ ಕ್ರಿಯೆ ಕಥೆಯಲ್ಲಿ ಮಾಮರ್ಿಕವಾಗಿ ಮೂಡಿಬಂದಿದೆ. ಹೀಗೆ ‘ಹೊಲಿಗೆಯಂತ್ರ’ ಕಥೆ ಮತ್ತೊಂದು ಒಳ್ಳೆಯ ಕಥೆ.
ಭೂಕಂಪವಾದ ಲಾತೂರಿನ ಕಷ್ಟನಷ್ಟಗಳ ಛಾಯಾಗ್ರಹಣ ಮಾಡಲು ಬಂದ ಛಾಯಾಗ್ರಾಹ ಒಂದು ರಾತ್ರಿಯನ್ನು ಕಳೆಯಲು ಭಾಷೆ ಬಾರದ ತಾಲ್ಲೂಕು ಕೇಂದ್ರಕ್ಕೆ ಬರುತ್ತಾನೆ. ಊರ ಹೊರಗಿನ ಕಾಲೋನಿಯಂಥ ಊರಿಗೆ ಬರುತ್ತಾನೆ. ಗುಡಿಸಿಲಿನಲ್ಲಿ ಕನ್ನಡ ಬರುವ, ಮಕ್ಕಳೊಂದಿಗೆ ಹಬ್ಬದಡಿಗೆ ಮಾಡಿಟ್ಟುಕೊಂಡಿರುವ ಮಹಿಳೆಯ ಪರಿಚಯವಾಗುತ್ತದೆ. ಆಕೆಯು ತನ್ನ ಹಸಿದ ಮಕ್ಕಳಿಗೂ ಹಬ್ಬದೂಟವನ್ನು ನೀಡದೆ, ಆಗಂತುಕನನ್ನು ಕರೆದು ಹಬ್ಬದೂಟವನ್ನು ಬಡಿಸುತ್ತಾಳೆ. ಅಂತಃಕರಣದ ಹೆಣ್ಣುಮಗಳು. ಇನ್ನೇನು ಊಟಮಾಡಬೇಕೆನ್ನುವಾಗ ಅವಳ ಕುಡಿದ ಗಂಡ ಬಂದು ತಟ್ಟೆಯೊಳಗೆ ಕಾಲನ್ನು ಬಡಿಯುತ್ತಾನೆ. ಆಗ ಕಥಾನಾಯಕನಿಗೆ ನಿಜವಾದ ಭೂಕಂಪದ ಅರಿವಾಗುತ್ತದೆ-‘ಅಂತರಾಳ’ ಕಥೆಯಲ್ಲಿ.
ಮಾನವೀಯತೆಯ ಮತ್ತೊಂದು ಮಗ್ಗುಲು ಅರ್ಥವಾಗುವುದು ‘ಮತ್ತೆ ಬಂದ ಮಳೆ’ ಕಥೆಯಲ್ಲಿ.
ಅತ್ಯಂತ ಪ್ರಭಾವಶಾಲಿಯಾದ ಕಥಾನಕದ ಸ್ವರೂಪವನ್ನು ತಿಳಿಯಬೇಕೆಂದರೆ ಜಿಪಿಯವರ ‘ಚಿಯರ್ಸ್’ ಕತೆಯನ್ನು ನೋಡಬೇಕು. ಒಂದು ನಿಲುವಿನಿಂದ ಪ್ರಾರಂಭವಾಗುವ ಈ ಕಥೆ, ತದ್ವಿರುದ್ಧವಾದ ನಿಲುವಿಗೆ ಬಂದು ನಿಲ್ಲುತ್ತದೆ. ಕಥೆ ಪ್ರಾರಂಭವಾಗುವುದು ‘ನರಹಂತಕ’ ವೀರಪ್ಪನ್ಗೆ ವಿರುದ್ಧವಾದ ನಿಲುವಿನಿಂದ. ಇದು ಬೆಳೆಯುತ್ತ ಬೆಳೆಯುತ್ತ ಇನ್ನೊಂದು ನಿಲುವಿಗೆ ಚಾಚಿಕೊಂಡು ಅದನ್ನೇ ಪಡೆಯುತ್ತಾ ಕೊನೆಗೊಳ್ಳುತ್ತದೆ. ಒಂದೇ ಮನಸ್ಸಿನ ಪಾತಳಿಯಲ್ಲಿ ಎರಡು ಬಗೆಯ ಆಲೋಚನೆಗಳು-ಒಳಿತು ಮತ್ತು ಕೆಡುಕು-ಸುಳಿಯುವಂತೆ ಮಾಡುವುದು ಪರಿಣಾಮಕಾರಿಯಾದ ಕಥಾನಕದಿಂದ ಸಾಧ್ಯವಾಗುವಂಥದು. ಹೊರಟ ನಿಲುವಿನಿಂದ ತನಗೆ ತಾನೇ ವಿರುದ್ಧವಾದ ದಿಕ್ಕಿನಲ್ಲಿ ಚಲಿಸಿ ಇನ್ನೊಂದು ನಿಲುವನ್ನು ಮುಟ್ಟುವುದು ಮತ್ತು ಈ ಎರಡೂ ನಿಲುವುಗಳನ್ನು ಬೆಸೆಯುವುದು, ಆ ಮೂಲಕ ವಿಶಿಷ್ಟವಾದ ಅನುಭವವನ್ನು ಕಟ್ಟಿಕೊಡುವುದು ಈ ಕಥಾನಕದ ಶಕ್ತಿಯಾಗಿದೆ. ಕಥೆ ಆರಂಭವಾಗುವುದು ‘ವೀರಪ್ಪನ್’ ಹುಡುಕಾಟದಲ್ಲಿ; ವೀರಪ್ಪನ್ ‘ಹೀರೋ’ ಆಗುವ ಅಪಾಯವನ್ನು ಈ ಕಥೆಯ ನಿರೂಪಕ ಅರಿತು ಆ ಬಗ್ಗೆ ಎಚ್ಚರವಹಿಸುತ್ತಾನೆ. ದಾರಿ ಮಧ್ಯದಲ್ಲಿ ಇವರ ಕಾರು ಆಡಿನ ಮರಿಯೊಂದನ್ನು ಕೊಲ್ಲುವುದು ಕತೆಗೆ ಬೇರೊಂದು ತಿರುವನ್ನು ನೀಡುತ್ತದೆ. ಈ ‘ಕೊಲೆ’ ಕಾರಿನವರಲ್ಲಿದ್ದವರಲ್ಲಿ ಭೀತಿ, ಆತಂಕ, ತಲ್ಲಣಗಳನ್ನು ಹುಟ್ಟಿಸುತ್ತದೆ. ಆದರೆ ಈ ಹಂತವನ್ನು ದಾಟಿದ ಕೂಡಲೇ ಎಲ್ಲರಲ್ಲಿ ಕಾಣುವ ಬಿಡುಗಡೆಯ ನಿರಾತಂಕ ಭಾವ, ಸಂದರ್ಭವನ್ನು ಗೆದ್ದ ಮನಸ್ಥಿತಿ ವೀರಪ್ಪನ್ ಮನಸ್ಥಿತಿಗೆ ಹತ್ತಿರವಾಗುತ್ತದೆ. ಕ್ರೌರ್ಯವನ್ನು ಗೆಲುವಿನ ಮೆಟ್ಟಿಲಾಗಿ ಮಾಡಿಕೊಳ್ಳುವ, ಮಾಡಿದ ತಪ್ಪನ್ನೇ ಅಹಂಕಾರವನ್ನಾಗಿ ಪರಿವತರ್ಿಸಿಕೊಳ್ಳುವ ಮನೋಧರ್ಮ ಈ ಗುಂಪನಲ್ಲಿ ಬೆಳೆದು ಅದು ವೀರಪ್ಪನ್ ಗುಣಗಾನದಲ್ಲಿ ಕೊನೆಗೊಳ್ಳುತ್ತದೆ. ಇದು ಕೊಲೆಯ ಪಾಪಭೀತಿಯಿಂದ ಪಾರಾದ ದಾರಿಯೂ ಆಗಿರಬಹುದು; ಕೇಡನ್ನು ಒಪ್ಪಿಕೊಳ್ಳುವ ಮನೋಧರ್ಮವೂ ಆಗಿರಬಹುದು. ಇದು ಈ ಕಥಾನಕದ ವಿಶೇಷತೆಯಾಗಿದೆ. ಓದುಗ ಇಲ್ಲಿ ಯಾವ ನಿಲುವನ್ನು ತಳೆಯುತ್ತಾನೆ ಎಂಬುದು ಅವನಿಗೇ ಬಿಟ್ಟದ್ದು. ಹೀಗೆ ಜಿ.ಪಿ. ಓದುಗನನ್ನು ಕ್ರಿಯಾಶೀಲವಾಗಿ ಇಡುತ್ತಾರೆ.
ಇದೇ ರೀತಿ ಇಲ್ಲಿನ ‘ಹನಿಗತೆ’ಗಳೂ ಕಾರ್ಯನಿರ್ವಹಿಸುತ್ತವೆ.

* * * *

ಒಟ್ಟಿನಲ್ಲಿ ಜಿ.ಪಿ.ಯವರ ಬರವಣಿಗೆ ಈ ಕತೆಗಳಲ್ಲಿ ಭಿನ್ನ ಹಾದಿಯನ್ನು ಹಿಡಿದಿದೆ. ಮುಖ್ಯವಾಗಿ ಇವರ ಕಥೆಗಳಲ್ಲಿ ವಿರುದ್ಧ ದಿಕ್ಕಿನ ಪರಿಕಲ್ಪನೆಗಳು, ವಾಸ್ತವ – ಅವಾಸ್ತವಗಳು, ನಿಜಜೀವನ ಮತ್ತು ಕನಸುಗಳು ಮುಖಾಮುಖಿ (juxtapose) ಆಗುತ್ತವೆ. ಹಾಗೆಯೇ ಕೆಲವು ಕಥೆಗಳಲ್ಲಿ ವಾಸ್ತವ ಮತ್ತು imagination ಗಳು ಒಂದರೊಳಗೊಂದು ಬೆರೆಯುವುದನ್ನೂ ಕಾಣಬಹುದು. ವಾಸ್ತವ ಜಗತ್ತಿಗೆ ಹಿಡಿಯುವ ಕನ್ನಡಿಯಾಗಿ ಕನಸುಗಳು ಅರ್ಥಪೂರ್ಣವಾಗಿ ಬೆಳೆಯುತ್ತ, ಕಥೆಯ ಧ್ವನಿಶಕ್ತಿಯನ್ನು ಹೆಚ್ಚಿಸುತ್ತ ಹೋಗುವುದನ್ನೂ ಇಲ್ಲಿ ಗುರುತಿಸಬಹುದು. ಈ ಕಥೆಗಾರರ ಇನ್ನೊಂದು ವಿಶೇಷವೆಂದರೆ ಎಲ್ಲಿಯೂ ಇವರು ತಮ್ಮ ನಿಲುವೊಂದನ್ನು ಪ್ರಕಟಿಸಿ, ಅದಕ್ಕೇ ಓದುಗ ಬದ್ಧನಾಗಬೇಕೆಂದು ಒತ್ತಡ ಹೇರುವುದಿಲ್ಲ. ಓದುಗ ತಾನೇ ತನ್ನ ನಿಲುವುಗಳನ್ನು ನಿರ್ಧರಿಸಿಕೊಳ್ಳಬೇಕಾಗುತ್ತದೆ.
ಈ ಕಥಾನಕಗಳು ಒಂದು ಕೇಂದ್ರದ ಕಡೆಗೆ ಮಾತ್ರ ತುಡಿಯುವುದಿಲ್ಲ; ಬಹುಮುಖಿ ಕೇಂದ್ರಗಳಾಗಿ ಕೆಲಸ ನಿರ್ವಹಿಸುತ್ತವೆ. ಬೇರೆಬೇರೆ ವಾಸ್ತವಗಳು ಹೇಗೆ ನಿಲುವು ತಾಳುತ್ತವೆ ಎಂಬುದನ್ನು ಪ್ರದರ್ಶಿಸುತ್ತವೆ. ಇಲ್ಲಿ ಲೇಖಕ ಎಲ್ಲೂ ಮೌಲ್ಯಮಾಪನ ಮಾಡುವುದಿಲ್ಲ; ಈ ಕೆಲಸವನ್ನು ಓದುಗನಿಗೇ ಬಿಡುತ್ತಾನೆ.
ಈ ಕತೆಗಳಲ್ಲಿ ಬರುವ ಕೆಲವು ಪಾತ್ರಗಳು-ತತ್ವಪದಕಾರ, ಸರ್ವಜ್ಜ ಇತ್ಯಾದಿ, ಬದಲಾದ ಯುಗವನ್ನು ಅರಿಯುವ ‘ನವ ದರ್ಶನ’ವಾಗಿ ನಿರೂಪಿತವಾಗುತ್ತವೆ.
ಇಲ್ಲಿನ ಕಥಾನಕಗಳನ್ನು, ಜಾಗತೀಕರಣ-ನಗರೀಕರಣ-ಪ್ರಕೃತೀಕರಣದ ಮುಖಾಮುಖಿಯೆಂದೂ ಓದಿಕೊಳ್ಳಬಹುದು. ಒಂದು ರೀತಿಯ ಚಕ್ರೀಕರಣ ಕ್ರಿಯೆ ಇಲ್ಲಿ ನಡೆಯುತ್ತಿರುತ್ತದೆ. ಅಂದರೆ ಈ ಚಲನಶೀಲತೆ ಓದುಗನನ್ನು ಯಾವಾಗಲೂ ಕಥಾನಕದಲ್ಲಿ ಜಾಗೃತವಾಗಿರುವಂತೆ ಮಾಡುತ್ತದೆ. ಹೀಗೆ ಈ ಕಥಾನಕಗಳು ಹೊಸ ಸೌಂದರ್ಯ ಮೀಮಾಂಸೆಯನ್ನು ಸೃಷ್ಟಿಸುತ್ತವೆ. ಕಥಾನಕದ ಹೊಸ ಹಾದಿ ಕನ್ನಡ ಸಾಹಿತ್ಯಕ್ಕೆ ಕಾಲಿಡುತ್ತಿರುವುದೂ ಇಲ್ಲಿ ಕಾಣಿಸುತ್ತಿದೆ.
ಈ ಕಥೆಗಳು ಓದುವ ಕಥೆಗಳು ಮಾತ್ರವಲ್ಲ, ಓದುತ್ತೋದುತ್ತಾ ಓದುಗನ ಮನಸ್ಸನಲ್ಲೇ ಬರೆದುಕೊಳ್ಳುವ ಕಥೆಗಳು.
-ಡಾ. ಕಿಕ್ಕೇರಿ ನಾರಾಯಣ

ಬೆನ್ನುಡಿ


ಸಾವಧಾನ, ಸೂಕ್ಷ್ಮ ನಿರೀಕ್ಷಣಾ ಪ್ರವೃತ್ತಿ ಮತ್ತು ಮೆಲುದನಿ ಗೆಳೆಯ ಬಸವರಾಜು ಅವರ ವ್ಯಕ್ತಿ ವಿಶಿಷ್ಟತೆ-ಲೇಖಕರಾಗಿ ಮತ್ತು ಮನುಷ್ಯರಾಗಿ. ಮೂರು ನಾಲ್ಕು ದಶಕಗಳ ಪತ್ರಿಕೋದ್ಯಮ ಜಗತ್ತಿನ ಒಡನಾಟದ ನಂತರವೂ ಹೀಗೆ ಉಳಿದವರು ಅಪರೂಪ. ಹೀಗಾಗಿ ಅವರ ಈ ಕತೆಗಳು ಸದ್ದುಗದ್ದಲದ ಜಗತ್ತಿನಿಂದಾಚೆಗೆ, ಸುಲಭವಾಗಿ ಕಣ್ಣಿಗೆ ಕಾಣಿಸುವುದರಾಚೆಗಿನ ಬದುಕಿನ ಅನುಭವಗಳನ್ನು ಶೋಧಿಸುತ್ತವೆ; ಅನುಸಂಧಾನ ನಡೆಸುತ್ತವೆ. ಈ ಅನುಸಂಧಾನದಲ್ಲಿ ಅಬ್ಬರವಿಲ್ಲ, ಮೆಲುದನಿಯಿದೆ; ಸಾವಧಾನವಿದೆ. ತೋರಿಕೆಯ ತೀವ್ರತೆಗೆ ಬದಲಾಗಿ, ಓದುಗರನ್ನೂ ತನ್ನ ಜೊತೆ ಕೈ ಹಿಡಿದು ಕರೆದುಕೊಂಡು ಹೋಗಿ ಕಥೆಗಳನ್ನು/ ಬದುಕನ್ನು ತೋರಿಸುವ ದಾರಿಯಿದು. ಎಂತಹ ಕ್ಷೊಭೆ ಮತ್ತು ಸಂದಿಗ್ಧಗಳನ್ನು ಬಸವರಾಜು ಆಶ್ಚರ್ಯಕರವಾಗುವಷ್ಟು ಪ್ರಶಾಂತವಾಗಿ ನೋಡಬಲ್ಲರು; ತೋರಿಸಬಲ್ಲರು. ರಾಜಕೀಯವಾಗಿ ಯಾವುದು ಸಲ್ಲುತ್ತದೆ, ಯಾವುದು ಸಲ್ಲುವುದಿಲ್ಲ ಎಂಬ ನಮ್ಮ ಕಾಲದ ಸಂಕುಚಿತ ಮನೋಭಾವದಿಂದಲೂ ಈ ಕತೆಗಳು ಬಲುದೂರ. ಎಲ್ಲ ಒಳ್ಳೆಯ ಕತೆಗಾರರಂತೆ ಬಸವರಾಜು ಕೂಡಾ ತನ್ನೊಡನೆ ಬದುಕುತ್ತಿರುವ ಸಹಜೀವಿಗಳು ಹೇಗೆ ಬದುಕುತ್ತಿದ್ದಾರೆ ಎಂಬುದರ ಕಡೆಗೆ ಗಮನ ಹರಿಸುತ್ತಾರೆಯೇ ಹೊರತು, ಬದುಕಿನಲ್ಲಿ ತನ್ನ ವಿಚಾರಗಳ, ಧೋರಣೆಗಳ ಪ್ರತಿಫಲನವನ್ನು ಮಾತ್ರ ಹುಡುಕುವುದಿಲ್ಲ. ಹೀಗಾಗಿ ಇಲ್ಲಿಯ ಕಥೆಗಳು ತೆರೆಯುವ ಕಥೆಗಳು ಕೂಡಾ.
-ಕೆ ಸತ್ಯನಾರಾಯಣ

 
ಹಕ್ಕಿಗಾಗಿ ಬಲೆಬೀಸಿ
ಕಥೆ ಎನ್ನುವ ಪ್ರಕಾರವೇ ಬಹಳ ಸೂಕ್ಷ್ಮವಾದದ್ದು. ಒಂದಿಷ್ಟು ಆಚೆ ಚಾಚಿಕೊಂಡರೆ ಲಲಿತ ಪ್ರಬಂಧವಾಗುತ್ತದೆ; ಗುರಿ ತಪ್ಪಿದರೆ ಹರಟೆಯಾಗುತ್ತದೆ; ಮೈಮರೆತರೆ ಕಾದಂಬರಿಯ ಪುಟಗಳು ಮೈದಾಳಬಹುದು. ಭಾಷೆ, ಬಂಧ, ನಿರೂಪಣೆ, ಧ್ವನಿಸೂಕ್ಷ್ಮತೆ, ಗರಿಗರಿ ತಾಜಾತನ-ಎಲ್ಲದರಲ್ಲೂ ಒಂದು ಹದ ಕಾಯ್ದುಕೊಂಡು ನಿದರ್ಿಷ್ಟ ಗುರಿಯತ್ತ ಸಾಗಬೇಕಾದ ಕತೆಯ ನಡಿಗೆ ಕತೆಗಾರನ ಸಂಪೂರ್ಣ ಹತೋಟಿಯಲ್ಲಿದ್ದಾಗಲೇ ‘ಕತೆ’ ಹುಟ್ಟುವುದು. ಇಂಥ ‘ಕತೆ’ಗಾಗಿ ಕಾಯುವ ಲೇಖಕನಲ್ಲಿ ಅಪಾರ ತಾಳ್ಮೆ ಇರಬೇಕಾಗುತ್ತದೆ.
ಈ ‘ಕತೆ’ಗಳೆಂಬ ಹಕ್ಕಿಗೆ ಬಲೆಬೀಸಿ ಕುಳಿತ ನನಗೆ ಕಾಲ ಸರಿದದ್ದೇ ಗೊತ್ತಾಗಲಿಲ್ಲ. ನನ್ನ ಹಿಂದಿನ ಕಥಾ ಸಂಕಲನ, ‘ಒಂದು ಗುಲಾಬಿ’ ಪ್ರಕಟವಾಗಿ ಹದಿನಾರು ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಬಲೆಬೀಸಿ ಕಾಯುತ್ತ ಕುಳಿತದ್ದೆ ಬಂತೋ ಅಥವಾ ನಾನು ಬಯಸಿದ ಹಕ್ಕಿಗಳು ಸಿಕ್ಕಿವೆಯೋ? ಈ ಪ್ರಶ್ನೆಗೆ ಉತ್ತರ ಹೇಳಬೇಕಾದವರು ಓದುಗರು. ಅವರೊಳಗೂ ಹಕ್ಕಿಯನ್ನು ಕಾಣಬೇಕಾದ ಆಸೆ ಇರಬೇಕಾಗುತ್ತದೆ ಎಂಬುದು ಬಲ್ಲವರಿಗೆ ಗೊತ್ತಿರುವ ಸಂಗತಿಯೇ.
ಬಲೆಬೀಸಿದವನು ಧ್ಯಾನಿಸುತ್ತ ಕುಳಿತಿದ್ದರೂ ತಪ್ಪಿಸಿಕೊಳ್ಳುವ ಹಕ್ಕಿಗಳೇ ಹೆಚ್ಚು. ‘ಬೆತ್ತಲೆಯ ಬೆಳಕನುಟ್ಟು’ ಕಥಾ ಸಂಕಲನದಲ್ಲಿ ಹಕ್ಕಿಗಳು ಹೋಗಲಿ, ಅವುಗಳ ರೆಕ್ಕೆಪುಕ್ಕಗಳಾದರೂ ಇದ್ದರೆ ಕತೆಗಾರನಿಗೆ ಸಂತೋಷವಾಗುತ್ತದೆ.
ಸೃಜನಶೀಲ ಮನಸ್ಸು ಹೇಗೆ ಚಲಿಸುತ್ತದೆ ಎನ್ನುವುದು ಸರಳ ಗ್ರಹಿಕೆಗೆ ಸಿಕ್ಕುವುದಲ್ಲ. ಯಾವ ಮನಸ್ಸು ಯಾವ ಮಾಧ್ಯಮದಲ್ಲಿ ಪ್ರಖರವಾಗಿರುತ್ತದೆ ಎಂದು ಹೇಳುವುದು ಕಷ್ಟ. ಅನೇಕ ಮಾಧ್ಯಮಗಳಲ್ಲಿ ಏಕ ಕಾಲಕ್ಕೆ ಅರ್ಥಪೂರ್ಣವಾಗಿ ಬರೆಯುತ್ತ, ಹಲವು ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತ ನಿರಂತರವಾಗಿ ಕ್ರಿಯಾಶೀಲರಾಗಿರುವ ಲೇಖಕರೂ ನಮ್ಮ ನಡುವೆ ಇದ್ದಾರೆ. ಒಂದೇ ಮಾಧ್ಯಮವನ್ನು ತಮ್ಮ ಅಭಿವ್ಯಕ್ತಿಯ ದಾರಿಯನ್ನಾಗಿ ಮಾಡಿಕೊಂಡು ಅಲ್ಲೇ ತಮ್ಮ ಸಾರ್ಥಕತೆಯನ್ನು ಪಡೆದವರೂ ಇದ್ದಾರೆ. ಈ ಹದಿನಾರು ವರ್ಷಗಳ ಅವಧಿಯಲ್ಲಿ ನನ್ನ ಕಥಾಸಂಕಲನ ಪ್ರಕಟವಾಗಲಿಲ್ಲ. ಆದರೆ ಕೆಲವು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದೇನೆ; ಪ್ರವಾಸ ಕಥನಗಳೂ ಬಂದಿವೆ. ಇತರ ಬರಹಗಳ ಸಂಕಲನಗಳೂ ಪ್ರಕಟವಾಗಿವೆ. ಇವೆಲ್ಲ ನನ್ನ ಸೃಜನಶೀಲ ಚಟುವಟಿಕೆಯ ಭಾಗವೇ ಎಂಬುದು ನನ್ನ ನಂಬಿಕೆ.
ಕತೆಗಳಿಂದ ದೂರವಾಗುತ್ತ, ಮತ್ತೆ ಹತ್ತಿರವಾಗುತ್ತ, ಅದರ ಮೋಹದಿಂದ ಬಿಡಿಸಿಕೊಳ್ಳುತ್ತ, ಮತ್ತೆ ಮತ್ತೆ ಸೆಳೆತಕ್ಕೆ ಒಳಗಾಗುತ್ತ; ತೃಪ್ತಿಕೊಡದ ಕತೆಗಳನ್ನು ಹಾಗೆಯೇ ಇಟ್ಟುಕೊಂಡು ಕಾಯುತ್ತ-ಹೀಗೆಯೇ ವರ್ಷಗಳು ಸರಿದು ಹೋದದ್ದು ತಿಳಿಯಲೇ ಇಲ್ಲ. ಬರೆದ ಕತೆಗಳನ್ನೇ ಮತ್ತೆ ಮತ್ತೆ ಬರೆದಿದ್ದೇನೆ. ಮತ್ತೆ ಮತ್ತೆ ಬರೆಯುವುದು ಎಂದರೆ ನನ್ನದೇ ಕಥಾ ಜಗತ್ತನ್ನು ಹೊಕ್ಕು ಅಲ್ಲಿಯೇ ಪರದಾಡುವುದು. ಹೀಗಾದಾಗ ಕತೆಗಳ ರೂಪ-ಸ್ವರೂಪವೇ ಭಿನ್ನವಾಗುವುದುಂಟು. ಮೊದಲಿನ ಪ್ರತಿಯಲ್ಲಿ ಮೂಡಿದ ಕತೆಗೂ, ಅದರ ಅಂತಿಮ ರೂಪಕ್ಕೂ ಎಷ್ಟೊಂದು ವ್ಯತ್ಯಾಸ ಎನ್ನಿಸುವಷ್ಟು ಕೆಲವು ಕತೆಗಳು ಬದಲಾಗಿವೆ. ಸೃಜನಶೀಲ ಸೆಣಸಾಟ ನಿರಂತರವಾದದ್ದು. ಒಂದು ಬಗೆಯ ತೃಪ್ತಿ-ಅತೃಪ್ತಿಗಳ ನಡುವೆ ಸದಾ ತೂಗುಯ್ಯಾಲೆಯಾಟ. ಇದರಲ್ಲಿ ನೋವೂ ಇದೆ; ಖುಷಿಯೂ ಇರುತ್ತದೆ. ನಿಜವಾದ ಬರಹಗಾರ ಈ ತಾಕಲಾಟಗಳ ಸ್ಥಿತಿಯಿಂದ ಬಿಡುಗಡೆ ಪಡೆಯಲಾರ. ಎಲ್ಲ ಸೃಷ್ಟಿಯ ಹಿಂದೆಯೂ ಸಂಕಟ-ಸಂಭ್ರಮಗಳು ಇದ್ದೇ ಇರುತ್ತವೆ.
ಬಲೆಯಲ್ಲಿ ಸಿಕಿರುವುದೇನು? ಹಕ್ಕಿಗಳೇ, ಬರಿಯ ಪುಕ್ಕಗಳೇ? ಈ ಪ್ರಶ್ನೆ ಕತೆಗಾರನನ್ನು ಅಗ್ನಿಪರೀಕ್ಷೆಗೆ ಒಡ್ಡುವ ಪ್ರಶ್ನೆಯೂ ಹೌದು. ನನ್ನ ಅಗ್ನಿಪರೀಕ್ಷೆಯಂತೂ ನಿರಂತರವಾಗಿ ನಡೆಯುವುದು ಒಬ್ಬರೇ ನ್ಯಾಯಾಧೀಶರ ಮುಂದೆ. ನನ್ನ ಯಾವ ಬರಹವೂ ಈ ಅಗ್ನಿಪರೀಕ್ಷೆ ಇಲ್ಲದ ಪ್ರಕಟವಾಗಿರುವುದು ಕಡಿಮೆ. ಅನೇಕ ವರ್ಷಗಳಿಂದ ಈ ಪರಿಪಾಠವನ್ನು ನಾನು ತಪ್ಪದೆ ಪಾಲಿಸಿಕೊಂಡು ಬಂದಿದ್ದೇನೆ. ಈ ನ್ಯಾಯಾಧೀಶರು ಬೇರೆ ಯಾರೂ ಅಲ್ಲ: ಪ್ರೊ. ಜಿ. ಎಚ್.ನಾಯಕರು. ಇಲ್ಲಿನ ಕತೆಗಳನ್ನು ನಾಯಕರು ತುಂಬ ಪ್ರೀತಿಯಿಂದಲೇ ಕೈಗೆತ್ತಿಕೊಂಡಿದ್ದಾರೆ; ಮೆಚ್ಚಿದ್ದಾರೆ, ಟೀಕಿಸಿದ್ದಾರೆ; ಒಪ್ಪಿಗೆಯಾಗದಿದ್ದಾಗ ಪೂರ್ಣ ತಲೆ ಕೊಡವಿದ್ದಾರೆ. ಅಂತೂ ಈ ಅಗ್ನಿ ಪರಿಕ್ಷೆಯನ್ನು ದಾಟಿಬಂದ ಕತೆಗಳೇ ಇಲ್ಲಿವೆ.
ಹಾಗೆಯೇ ಇಲ್ಲಿನ ಕೆಲವು ಕತೆಗಳಿಗೆ ಓದುಗರಾದವರು-ಸಂಗೀತ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ಅಧಿಕೃತವಾಗಿ ಮತ್ತು ಹರಿತವಾಗಿ ಮಾತನಾಡಬಲ್ಲ, ಸಂವೇದನಾ ಸೂಕ್ಷ್ಮವನ್ನು ಕಾಪಾಡಿಕೊಂಡು ಬಂದಿರುವ ಪಂ.ರಾಜೀವ ತಾರಾನಾಥ್ ಅವರು. ಅವರ ಓದು ಅದ್ಭುತವಾದದ್ದು; ಅಭಿಪ್ರಾಯ ಬಹಳ ತೀಕ್ಷ್ಣವಾದದ್ದು.
ಈ ಇಬ್ಬರು ಹಿರಿಯರಿಗೆ ನನ್ನ ಪ್ರೀತಿಯ ನಮನಗಳು.
ಕಥಾ ಸಂಕಲನವನ್ನು ಪ್ರಕಟಿಸಲು ಸಿದ್ಧವಾದ ಹೊತ್ತಿನಲ್ಲಿ ಈ ಎಲ್ಲ ಕತೆಗಳನ್ನು ಸಮಗ್ರವಾಗಿ ನೋಡಿ ಭಿಡೆ ಇಲ್ಲದೆ ನಾಲ್ಕು ಮಾತುಗಳನ್ನು ಹೇಳಬಲ್ಲ ಗೆಳೆಯರಿಗೆ ಹುಡುಕಾಡಿದೆ. ಪ್ರೊ. ಕಿಕ್ಕೇರಿ ನಾರಾಯಣ, ಕೆ. ಸತ್ಯನಾರಾಯಣ ಮತ್ತು ಪ್ರೊ. ಕೃಷ್ಣಮೂರ್ತಿ ಹನೂರು ನನ್ನ ಕಣ್ಮುಂದೆ ಬಂದರು. ಇವರೆಲ್ಲ ಇಲ್ಲಿನ ಕಥೆಗಳನ್ನು ಓದಿ, ಮುಕ್ತವಾಗಿ ನನ್ನೊಂದಿಗೆ ಮಾತನಾಡಿದ್ದಾರೆ. ಕಿಕ್ಕೇರಿಯವರ ಮುನ್ನುಡಿ ಮತ್ತು ಸತ್ಯನಾರಾಯಣರ ಬೆನ್ನುಡಿ ಇಲ್ಲಿವೆ. ಈ ಮೂವರು ಮಿತ್ರರ ಸೊಲ್ಲು ನನ್ನನ್ನು ಹುರಿದುಂಬಿಸಿದೆ. ಅವರಿಗೆ ನನ್ನ ಕೃತಜ್ಞತೆಗಳು.
ಇಲ್ಲಿನ ಕೆಲವು ಕತೆಗಳು ಅನೇಕ ವರ್ಷ ತಲೆಮರೆಸಿಕೊಂಡಿದ್ದವು. ಅವುಗಳನ್ನು ಹುಡುಕಿ ತೆಗೆದು, ನೇವರಿಸಿದೆನಾದರೂ, ಅವುಗಳಿನ್ನೂ ಕಂಪ್ಯೂಟರ್ ಪರದೆಯ ಮೇಲೆ ಮುಖ ತೋರಿಸಿರಲಿಲ್ಲ. ಇದೇ ದೊಡ್ಡ ಕೆಲಸವಾಗಿ ಕಂಡಾಗ ನನ್ನ ಕಾಸರಗೋಡಿನ ಮಿತ್ರರಾದ ಡಾ.ಎನ್.ಆರ್.ಕೆ.ಪ್ರಸಾದ್ ಮತ್ತು ಕತೆಗಾತರ್ಿ ಅನುಪಮಾ ಪ್ರಸಾದ್ ತುಂಬ ಶ್ರದ್ಧೆಯಿಂದಲೇ ಈ ಕೆಲಸವನ್ನು ಮಾಡಿ ಪ್ರೀತಿ ತೋರಿದರು.
ಅಹರ್ನಿಶಿ ಪ್ರಕಾಶನವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಕವಿ ಅಕ್ಷತಾ, ನನ್ನ ಕಥಾ ಸಂಕಲನವನ್ನು ಪ್ರಕಟಿಸುವ ಉತ್ಸಾಹ ತೋರಿದ್ದರಿಂದ ಈ ಕೃತಿ ಹೆಚ್ಚು ವಿಳಂಬವಿಲ್ಲದೆ, ಮುದ್ದಾಗಿ ಪ್ರಕಟವಾಗಿದೆ.
ಇವರೆಲ್ಲರ ಪ್ರೀತಿಗೆ ಬೆರಗಾಗಿದ್ದೇನೆ.
ಈ ಕೃತಿಯನ್ನು ದಾವಣಗೆರೆಯ ‘ಪ್ರತಿಮಾ ಸಭಾ’ಕ್ಕೆ ಅಪರ್ಿಸಿದ್ದೇನೆ. ಈಗ ಪ್ರತಿಮಾ ಸಭಾ ಉಳಿದಿದೆಯೋ ಇಲ್ಲವೋ ನನಗೆ ತಿಳಿಯದು. ಆದರೆ ನನ್ನಂಥವರ ನೆನಪಿನಲ್ಲಂತೂ ಅದು ಸದಾ ಉಳಿದಿರುತ್ತದೆ. ಅದು ಚುರುಕಾಗಿದ್ದ ಕಾಲದಲ್ಲಿ ನಡೆದ ಅರ್ಥಪೂರ್ಣ ಸಾಹಿತ್ಯ ಚಚರ್ೆಗಳು, ಸಂಸ್ಕೃತಿಯ ಚಟುವಟಿಕೆಗಳು ನನ್ನ ಸೃಜನಶೀಲ ಮನಸ್ಸನ್ನು ಅರಳಿಸಿವೆ. ಪ್ರತಿಮಾ ಸಭಾದಲ್ಲಿದ್ದ ಆ ಎಲ್ಲ ಗೆಳೆಯರ ಸಂಸ್ಕೃತಿ ಪ್ರೀತಿಗೆ ನಾನು ಋಣಿಯಾಗಿದ್ದೇನೆ.
-ಜಿ.ಪಿ.ಬಸವರಾಜು
 

‍ಲೇಖಕರು G

March 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: