ಡೈಲಿ ಬುಕ್ : ಆಶಾ ರಘು ಬರೆದ ’ಆವರ್ತ’

ಹಿನ್ನುಡಿಗಳು
ಒಬ್ಬ ಯುವತಿಯ ಮಹತ್ವಾಕಾಂಕ್ಷೆಯ ಕೃತಿ ಈ ಪುಸ್ತಕ. ಅತಿ ಪ್ರಾಚೀನ ಕಾಲದ ಕಲ್ಪಿತ ಸಾಮ್ರಾಜ್ಯದಲ್ಲಿ ನಡೆಯಿತೆಂಬಂತೆ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸುಳಿಯಲ್ಲಿ ಸಿಕ್ಕಿಕೊಂಡು ಅದರಿಂದ ಹೊರಬರಲು ಪ್ರಯತ್ನಿಸುವ ಒಬ್ಬ ರಾಜನ ಕಲ್ಪಿತ ಜೀವನವೇ ಇದರ ವಸ್ತು. ತಾತ್ವಿಕ ಚಿಂತನೆಯ ಪ್ರಾಧಾನ್ಯವುಳ್ಳ ಕೃತಿ. ಬರವಣಿಗೆ ಸರಳವಾಗಿದೆ. ಈ ಕೃತಿಯು ಕನ್ನಡ ಸಾಹಿತ್ಯದ ಈ ಕಾಲದಲ್ಲಿ ರಚಿತವಾಗಿರುವುದು ಒಂದು ಆಸಕ್ತಿಯ ವಿಚಾರ. ಓದುಗರ ಪ್ರೀತಿಯನ್ನು ಸಂಪಾದಿಸಲಿ ಎಂದು ಹಾರೈಸುತ್ತೇನೆ.
ಪ್ರೊ. ಜಿ. ವೆಂಕಟಸುಬ್ಬಯ್ಯ
 
ಕಥಾನುಸಂಧಾನದ ಪ್ರಗತಿಯ ಶಿಖರವನ್ನೇರಿದ ಪ್ರಸ್ತುತ ಕಾದಂಬರಿಕಾರ್ತಿ ಆಶಾರಘುರವರ ಕಥಾಸಂವಿಧಾನ ಕೌಶಲ, ಪಾತ್ರ ಪೋಷಣೆ, ಸಂಭಾಷಣೆಯ ಸೌಷ್ಠವ, ಭಾಷಾಶೈಲಿಯ ಶ್ರೀಮಂತಿಕೆ, ವರ್ಣನಾವೈಖರಿ, ಘಟನಾವಳಿಗಳ ಸಂಯೋಜನೆಯ ಸಹಜತೆ, ನೋವು-ನಲಿವು, ರಾಗ-ದ್ವೇಷ, ರೋಷಭೀಷಣತೆ, ಶ್ಲೀಲ-ಅಶ್ಲೀಲಗಳ ವಿಶೇಷಣೆಯಿಲ್ಲದೆ ಕಾದಂಬರಿಯ ಶ್ರೀಮಂತಿಕೆಗೆ ಪೂರಕ ಪೋಷಕಗಳಾಗಿ ರಾಚನಿಕ ಪರಿಣತಿಯ ಪ್ರಭಾವಲಯವನ್ನು ನಿರ್ಮಿಸಿವೆ. ಶ್ರೀಮತಿಯವರು ತಮ್ಮ ಪ್ರಾತಿಭ ಪರಂಜ್ಯೋತಿಯ ನೆರವಿನಿಂದ, ತಮ್ಮ ಪ್ರಾಂಜಲ ಜೀವನಾನುಭವ ಕಾವ್ಯನುಭವಗಳ ಬಳಕೆಯ ರಹಸ್ಯವರಿತಿರುವುದರಿಂದ, ಇವರು ಸಂವಹನ ಪ್ರಕ್ರಿಯೆಯ ಗುಟ್ಟರಿತ ಗಾರುಡಿಗರಾಗಿದ್ದಾರೆ.
ಡಾ. ಸಾ. ಶಿ. ಮರುಳಯ್ಯ
 
‘ಆವರ್ತ’ ಆಶಾರಘು ಅವರ ಚೊಚ್ಚಲ ಕಾದಂಬರಿಯಾದರೂ ಅಸಾಧಾರಣವಾದ ಪ್ರವೇಶ. ಶಾಸ್ತ್ರೀಯ ಮತ್ತು ಆಧುನಿಕ ಎರಡನ್ನೂ ಒಳಗುಮಾಡಿಕೊಂಡ ಸೃಜನಾತ್ಮಕವಾದ ಶೈಲಿಯನ್ನು ಪ್ರಯೋಗಿಸಿದ್ದಾರೆ. ನೂರಕ್ಕೂ ಮಿಗಿಲಾದ ವಿಭಿನ್ನವಾದ ಪಾತ್ರಗಳು ಮತ್ತು ಅವು ವಾಸಿಸುವ ವಿಶಿಷ್ಟ ಪ್ರಪಂಚಗಳನ್ನು ರಸವತ್ತಾಗಿ ತುಂಬಿಕೊಂಡ ಈ ಕಥನ, ಇಲ್ಲಿನ ಪ್ರಮುಖ ಪಾತ್ರವಾದ ರಾಜ ಪ್ರತೀಪನ ಬದುಕು ಎದುರಿಸುವ ಅಡೆತಡೆಗಳ ವಿವಿಧ ಮಗ್ಗಲುಗಳನ್ನು ನಿರಂತರವಾಗಿ ಅನಾವರಣಗೊಳಿಸುತ್ತಾ ಸಾಗುತ್ತದೆ. ಉತ್ತಮ ಹಾಗೂ ಮಧ್ಯಮ ಪುರುಷ ನಿರೂಪಣೆಗಳು ಒಂದರಿಂದ ಇನ್ನೊಂದಕ್ಕೆ ಬದಲಾಗುತ್ತಾ ಸಾಗುವ ಈ ಕಥನ ಶೈಲಿಯಿಂದಾಗಿ ಪ್ರತೀಪ ನಮ್ಮ- ನಿಮ್ಮ ಪ್ರತಿರೂಪವೇ ಆಗಿಬಿಡುತ್ತಾನೆ.
ನಿಸ್ಸಂದೇಹವಾಗಿ ಈ ಕಾದಂಬರಿ ಸಮೃದ್ಧ ಕನ್ನಡ ಸಾಹಿತ್ಯಕ್ಕೆ ಒಂದು ಮಹತ್ತರವಾದ ಕೊಡುಗೆ. ಲೇಖಕಿ ಆಶಾ ಅವರಿಗೆ ಎಲ್ಲ ರೀತಿಯ ಯಶಸ್ಸು ಸಿಗಲಿ ಎಂದು ಹಾರೈಸುತ್ತಾ, ಅವರ ಮುಂದಿನ ಕೃತಿಗಳನ್ನು ಬಹಳ ಕುತೂಹಲದಿಂದ ಎದುರು ನೋಡುತ್ತೇನೆ.
ಮುಕುಂದ ರಾವ್
ಪುರಾಣ ಮತ್ತು ಇತಿಹಾಸಗಳನ್ನು ರೂಪಾಂತರಗಳಲ್ಲಿ ಮರು ಭೇಟಿಯಾಗುವುದು ಒಂದು ರೋಮಾಂಚನಕಾರಿ ಅನುಭವ. ಈ ಕೃತಿ ಅಂತಹ ರೋಮಾಂಚನಕಾರಿ ಅನುಭವ ನೀಡುತ್ತದೆ. ದೇಶಕಾಲಗಳ ಕಾಲಬದ್ಧತೆಯನ್ನೂ, ಮನುಷ್ಯ ಸ್ವಭಾವದ ಕಾಲಾತೀತತೆಯನ್ನೂ ಎದುರುಬದುರಾಗಿಸುವ ಈ ಕೃತಿ ನಿಜವಾದ ಅರ್ಥದಲ್ಲಿ ಪ್ರಯೋಗಶೀಲ ಕೃತಿ.
ಡಾ. ಎಂ.ಎಸ್.ಆಶಾದೇವಿ
 

‍ಲೇಖಕರು G

September 17, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: