ಡೈಲಿಬುಕ್ : ’ನಿನ್ನ ಧ್ಯಾನದ ಹಣತೆ’

– ಸಂಗೀತ ರವಿರಾಜ್

ಅಕ್ಷರ ಲೋಕದಲೊಂದು ವಿನೂತನ ಪ್ರಯತ್ನದೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾದಂತಹ ಕವಿತೆಗಳ ಗುಚ್ಛ ‘ನಿನ್ನ ಧ್ಯಾನದ ಹಣತೆ’. ಅಪ್ಪಟ ಕವಿ ಶ್ರೀಯುತ ವಾಸುದೇವನಾಡಿಗ್ರವರ ಐದನೇ ಕವನಸಂಕಲನವಿದು. ಇದರ ವಿಶೇಷತೆಯೇನೆಂದರೆ ಯಾವ ಕವಿತೆಗಳಿಗು ಪ್ರತ್ಯೇಕ ಶೀಷರ್ಿಕೆಯಿಲ್ಲದೆ ನಿನ್ನ ಧ್ಯಾನದ ಹಣತೆ ಎಂಬ ಶಿರೋನಾಮೆಯಡಿಯಲ್ಲಿ 43 ಹಣತೆಗಳಿವೆ. ಇನ್ನೂ ವಿಶೇಷತೆಯೇನೆಂದರೆ ಇಲ್ಲಿರುವ ಎಲ್ಲಾ ಪದ್ಯಗಳು ಕೃಷ್ಣ ರಾಧೆಯರ ಕುರಿತು ವಿರಚಿತಗೊಂಡಿವೆ. ಕೃಷ್ಣ ರಾಧೆಯರ ನಡುವಿನ ಸಂಬಂಧದ ಸಂಪೂರ್ಣ ಚಿತ್ರಣವಿದೆ. ಈ ಚಿತ್ರಣದೊಳಗೆ ಪ್ರೀತಿ, ವಿರಹ, ನೋವು, ನಲಿವು, ಕಷ್ಟ, ಕಾರ್ಪಣ್ಯ, ದ್ವೇಷ ಇತ್ಯಾದಿಗಳೆಲ್ಲವು ಮಿಳಿತಗೊಂಡಿದೆ. ಒಂದೇ ವಿಷಯದ ಮೇಲೆ ನಾನಾ ರೀತಿಯ ಆಲೋಚನೆಗಳನ್ನು ಸ್ಫುರಿಸಿ ಬರೆಯುವುದೆಂದರೆ ಇದೊಂದು ತಪಸ್ಸು. ಇಲ್ಲಿ ರಚಿತಗೊಂಡಿರುವ ಹಣತೆಗಳು ಎಲ್ಲಾ ಓದುಗರಿಗೆ, ಕವಿ ಮನಸ್ಸುಗಳಿಗೆ ದೀವಿಗೆಯಾಗಿದೆ ಎಂದರು ಅತಿಶಯೋಕ್ತಿ ಅಲ್ಲ. ಇಲ್ಲಿರುವ ವಿರಹದ ಮಾತುಗಳಾಗಲಿ, ಪ್ರೀತಿಯ ನಿವೇದನೆಗಳಾಗಲಿ ಕೃಷ್ಣನೆ ಹೇಳುತ್ತಿದ್ದಾನೆ ಎನ್ನುವಷ್ಟರ ಮಟ್ಟಿಗೆ ಲೇಖಕರು ತಮ್ಮನ್ನು ತಾವೆ ಕೃಷ್ಣನನ್ನಾಗಿ ಅವಗಾಹಿಸಿಕೊಂಡಿದ್ದಾರೆ. ಎಂಬುದು ನನ್ನ ಅನಿಸಿಕೆ.

ದಣಿವಾಗಲಿಲ್ಲ
ಹೆಡೆಯ ಮೆಟ್ಟಿದಾಗ
ಬೆಟ್ಟ ಹೊತ್ತಾಗ
ಸುರರನ್ನು ಹಿಮ್ಮೆಟ್ಟಿದಾಗ
ಶತ್ರುಗಳನ್ನು ಬೆನ್ನಟ್ಟಿದಾಗ
ಸಖಿ ನಿನ್ನ ನೆನಪಿನ ಭಾರದಲ್ಲಿ ನಿಟ್ಟುಸಿರುಟ್ಟಿದ್ದೇನೆ.
ನೆನಪಿನ ಭಾರವ ಹೊರಲು ಸಾಧ್ಯವಾಗುವುದಿಲ್ಲ ಎಂಬ ನಿರೂಪಣೆಯೆ ನಮ್ಮನ್ನು ಬಹಳ ಅಪ್ಯಾಯಮಾನಗೊಳಿಸುತ್ತದೆ. ಚರಿತ್ರೆಯಲ್ಲಿ ಕೃಷ್ಣ ರಾದೆಯರ ಪ್ರೀತಿಯಷ್ಟೆ ಅವರ ವಿರಹ ವೇದನೆಯು ಗಮನಾರ್ಹ ಸಂಗತಿ. ಕೃಷ್ಣ ದೇಹಾತೀತ ಪ್ರೀತಿಗೆ ಸದಾ ಹಾತೊರೆಯುವವನು. ರಾಧೆಯ ಪಾತ್ರವೇ ವಿಚಿತ್ರ. ಇನ್ನೂ ಬರೆಯಲಾಗದ ಉತ್ತಮ ಪದ್ಯದ ಹಾಗೆ ಎಂದು ಲೇಖಕರು ಹೇಳುತ್ತಾರೆ.
ನಿನ್ನ ನೆನಪಿನ ಹೆಜ್ಜೆಗಳ ಊರಲು
ನನ್ನೆದೆಯೆ ಬೇಕಿತ್ತೇ, ತುಳಿದು ಹದ ಮಾಡಿದ
ಎದೆಯಲ್ಲಿ ಪ್ರೀತಿಯಲ್ಲದೆ ಏನು ಬಿತ್ತಲಿ ?
ತನ್ನ ತುಮುಲಗಳನ್ನು ಇಲ್ಲಿ ಕೃಷ್ಣ ಮೆಲ್ಲುಸುರುವ ಪರಿ ಅಧ್ಬುತವೆ ಸರಿ. ಕೃಷ್ಣ ರಾಧೆಯರ ಎದುರು ಯಾವ ಪ್ರೇಮಿಗಳು ಬರರು ಎಂಬುದು ವಾಸ್ತವವಾಗಿ ಇನ್ನೂ ಉಳಿದಿದೆ ಎಂಬ ಅಚ್ಚರಿಯನ್ನು ಲೇಖಕರು ನಮ್ಮೊಳಗೂ ಸಲೀಸಾಗಿ ಹಾಯಿಸಿಬಿಡುತ್ತಾರೆ.
ರಾಧೆ, ಈ ರಕ್ತ ಸಿಕ್ತ ಕೈ ಬೆರಳುಗಳೂ
ಹೂ ಮುಡಿಸಬಲ್ಲವು ನಿನ್ನ ಹೆರಳಿಗೆ
ಒಡ್ಡು ಮುಡಿಯ..!
ಬೆಣ್ಣೆ ಮೃದುವಿನ್ನಲ್ಲಾಡಿದ
ಕೈ ಬೆರಳುಗಳೂ
ಎಡತಾಕಬಲ್ಲುದು ಕ್ರೌರ್ಯದ ಬೇರುಗಳನ್ನು
ಸಖೀ, ನಿನ್ನ ಸ್ನಿಗ್ಧ ನಗುವನ್ನು
ಕಾಪಿಟ್ಟುಕೊಂಡಿದ್ದೇನೆ ಎದೆಯೊಳಗೆ
ಯಾವ ಬಿರುಗಾಳಿಯು ಬೀಳಿಸದು
ಅಂತರಂಗದ ನಿನ್ನ ಸಿಂಹಾಸನವ
ಹಾಗೆಂಬ ಕೋಟೆ ಮಾನಸವ
ನಿನ್ನ ಧ್ಯಾನದ ಹಣತೆಯಲ್ಲಿ ಕೃಷ್ಣರಾಧೆಯರ ಜೀವನದ ಒಳಹೊರಗನ್ನು ಸಮಾಜದ ವಾಸ್ತವಗಳೊಂದಿಗೆ ಸಮೀಕರಿಸಿ ಅವರೀರ್ವರ ಸಂವಾದ ನಮ್ಮ ಜೀವನದಲ್ಲು ಹಾಸುಹೊಕ್ಕಾಗಿದನ್ನು ಅವ್ಯಕ್ತವಾಗಿ ನಮಗೆ ತಿಳಿಸಿದ್ದಾರೆ. ನಮ್ಮ ನಿತ್ಯ ಜೀವನದಲ್ಲಿ ಏನೋ ಗೊಂದಲವಿದೆ, ಭಾವನೆಗಳನ್ನು ಅದುಮಿಟ್ಟುಕೊಂಡ ಬಾಳು ಇಲ್ಲೆಲ್ಲೋ ಕವನದೊಳಗಡಗಿದೆ ಎಂಬ ಭಾವನೆ ಬಲವಾಗುತ್ತದೆ. ಕೃಷ್ಣನ ಮನದಿಂಗಿತದ ಸಂದರ್ಭಕ್ಕೆ ತಕ್ಕಂತಹ ಸಾಲುಗಳು ನಮ್ಮ ನಿಲುವಾಗಿದೆ ಎಂದೆನಿಸಿಬಿಡುವಂತಹ ಸಾಲುಗಳು.
ಜಗದು ದು:ಖದ ಎದುರು ಅತೀ
ದು:ಖಾರ್ತನಾಗಿ ನಿಂತಿದ್ದೇನೆ.
ನಿನ್ನಿರುವಿಕೆಯು ನೋವು
ನಿನ್ನಗಲಿಕೆಯು ನೋವು
ಕುದಿವ ಕಡಲನ್ನು ಅದುಮಿಟ್ಟುಕೊಂಡ
ಜಗತ್ತು ನೋಡುತ್ತಿದೆ ನಮ್ಮಿಬ್ಬರನ್ನು!
ಆತ್ಮದ ತೆಕ್ಕೆಯೊಳಗೆ ಸಿಲುಕಿ ನಲುಗುವ ಮುಗ್ಧ ಜೀವಿಗಳ ಆತ್ಮಸಂವಾದ ಅವರೀರ್ವರನ್ನು ಬಿಟ್ಟರೆ ಬೇರೆಯವರಿಗೆ ತಿಳಿಯದಿರಲಿ ಎಂದು ಅವರಿಗನಿಸ್ಸಿದ್ದು ಸುಳ್ಳಲ್ಲ. ಗೊತ್ತಿಲ್ಲ ಸಖಿ, ಬೆಣ್ಣೆಯ ನಡುವೆಯು ಮುಳ್ಳೇ ಎಂಬ ಮಾತು ಮಾಮರ್ಿಕವಾಗಿ ಇದನ್ನು ಪುಷ್ಟೀಕರಿಸಿದೆ. ನನ್ನ ಕೊಳಲಿಗೆ ಅಂಟಿಕೊಂಡಿದ್ದ ನಿನ್ನ ಹೇರಳ ಎಳೆಯು ನಾದದೊಳಗೆ ಕಂಪಿಸಿದೆ ಎಂಬ ಭಾವ. ನನ್ನ ಭಾವಗೀತೆ ನೀನು ಎಂದು ಸಖಿ ರಾಧೆಗೆ ಹೇಳುವ ಕೃಷ್ಣನು, ಒಂದು ಕ್ಷಣ ಈ ಕೊಳಲು ನನ್ನ ಮಾತು ಕೇಳುತ್ತಿಲ್ಲ ಎಂದು ವಿಹ್ವಲಗೊಳ್ಳುತ್ತಾನೆ. ಭಾವನೆಗಳ ಬಯಲಲ್ಲಿ ಮಿಂದೇಳುವ ಲೇಖಕರು ಕೃಷ್ಣನ ಭಾವನೆಗಳ ಆಳ ಅಗಲವನ್ನು ವಿಸ್ತೃತಗೊಳಿಸುತ್ತಾರೆ.
ಸಖಿ, ಬೆಣ್ಣೆ ಮೆದ್ದು ಬೆಳೆದೂ
ಮೃದುವಾಗದ ನನ್ನ
ಒರಟುತನವನ್ನು
ಅದು ಹೇಗೆ ಹೂವಾಗಿಸಿದೆ!
ಆತ್ಮದ ನುಡಿಗಳು ಸಖಿಯೊಬ್ಬಳಿಗೆ ಬಿಟ್ಟರೆ ಬೇರೆ ಯಾರಿಗು ತಿಳಿಯಬಾರದೆಂಬ ಹಪಾಹಪಿಯ ನಡುವೆಯು ತನ್ನ ಮನೋಕ್ಲೇಷೆಯನ್ನು ಬಿಚ್ಚಿಡುವ ಕೃಷ್ಣ, ಒಂದು ಹಂತದಲ್ಲಿ ಬೇರೆಯವರಿಗೆ ತಿಳಿದರು ತನಗೇನು ಎಂಬುದಾಗಿ ನಿಡುಸುಯ್ಯುತಾನೆ. ತನಗೆ ಬೇಕಾದ್ದು ನನ್ನ ಇಂಗಿತ ಸಖಿಗೆ ತಲುಪುವುದಷ್ಟೆ ಎಂಬ ವಾಂಛೆಯಲ್ಲಿ ಅಂತರಂಗದ ಅಗಲಿಕೆಗೆ ಮುನ್ನುಡಿ ಬರೆದು, ನಾಂದಿ ಹಾಡುತ್ತಾನೆ.
ನಿನ್ನ ತುಟಿಯಂಚಿನ ನಗುವ ಹೂಗಳು
ಹಂಚಿಕೊಂಡಿದ್ದಾವೆ
ಎಲ್ಲಾ ಬಿದಿರುಗಳಿಗು ಕೊಳಲಾಗುವ ಕನಸು
ಆತ್ಮದ ಗೆಳತಿ ನೀನು
ಹೊರಜಗತ್ತಿನ ಆಮಿಷಗಳಿಗೆ ನಕ್ಕು ಬಿಡುತ್ತೇವೆ.
ಕೃಷ್ಣನ ಮನೋ ಇಂಗಿತ ರಾಧೆಗೆ ತಲುಪುತ್ತದೆಯೋ, ಇಲ್ಲವೋ ಅದು ಮುಖ್ಯವಲ್ಲ. ನನ್ನ ಅಹವಾಲುಗಳು, ಅವಲತ್ತುಗಳು ಭಾವನೆಗಳ ಸಖ್ಯ ಬೆಳೆಸಿ ನಾನೂ ವಿರಹಿಯಾಗಿರುವೆ ಎಂಬ ನೋವು ನನ್ನೊಳಗಿನಿಂದ ಕರಗಿ ಹೋಗಬೇಕು ಎಂಬುದು ಕೃಷ್ಣನಿಗೆ ಮುಖ್ಯ. ಹಾಗೆ ಎಲ್ಲವು ಕರಗಿ ಹೋಗುವ ಮುನ್ನ ಸಖಯ ಆತ್ಮಕ್ಕೆ ತಿಳಿಯದಿರಲು ಸಾಧ್ಯವಿಲ್ಲ ಎಂಬುದು ಕೃಷ್ಣನ ಬಲವಾದ ನಂಬಿಕೆ. ನಂಬಿಕೆಯ ಮೇಲೆ ತಾನೆ ಬದುಕು ನಿಂತಿರುವುದು?
ಸಖಿ, ಮಥುರೆಯ ದಾರಿಗಳ ಒಣಗಲು ಬಿಡಬೇಡ
ಅಂಗಳದಲ್ಲಿ ಸದಾ ತೊರೆ ಜಿನುಗುತಿರಲಿ
ಹಿಂಗಲಾರದ ದಾಹ ನನ್ನದು
ಸಲಹು ಹಸಿರುತನವನ್ನು!
ನೀ ಬರುವ ಮುಂಚೆ ಜನರ ನಡುವೆಯೆ ಇದ್ದೆ, ನೀ ಬಂದ ಮೇಲೆ ಒಂಟಿಯಾದೆ ಸಖಿ, ಎಷ್ಟೊಂದು ನೈಜ್ಯ ಸಾಲು ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಇದರಾಚೆಗೆ ಏನು ಹೇಳಲು ಸಾಧ್ಯ ? ಎಂದು ನಮ್ಮೊಳಗೆ ಅನ್ನಿಸಿಬಿಡುವಷ್ಟು! ಲೇಖಕರ ಚಿಂತನೆಗಳು ಜಗದ ಚಿಂತನೆಗಳ ಭವದ ಚಿಂತೆಗಳ ಎಲ್ಲದರ ಒಳಗುಟ್ಟಿನ ಮೂರ್ತರೂಪ.
ಸಖೀ, ಸನ್ಮಾತ್ಮ
ಕತ್ತರಿಸಿಬಿದ್ದಿಲಿ ಬಾಲ
ಇಹಕ್ಕು ಸಲ್ಲದು
ಪರವೊಲ್ಲದು!
ಕೃಷ್ಣನ ಅಂತರಂಗ ನಮಗೆಲ್ಲಾ ತಿಳಿಯಿತು ಎಂದ ಮೇಲೆ ಇನ್ನು ಶ್ರೀಕೃಷ್ಣ ನಮ್ಮ ಸಖನು ಹೌದು, ರಾಧೆ ಸಖಿಯು ಹೌದು. ಇವರ ಒಲವಿನ ಬದುಕು ನಮ್ಮ ಜೀವನಕ್ಕೆ ಅರ್ಥ ಕೊಡುತ್ತದೆ. ನೋವುನಲಿವಿನ ಹಾದಿಯಲ್ಲಿ ಗಮ್ಯ ತೋರಿಸಿದ್ದಾರೆ. ಅದನ್ನು ಹರದಾರಿ ಮಾಡುತ್ತಾ ಹೋಗುವುದು ನಮಗೆ ಬಿಟ್ಟಿದ್ದು. ಪ್ರೀತಿಯಾಚೆಗು ಇರುವ ಜೀವನದಲ್ಲಿ ಕೃಷ್ಣ ಗೆದ್ದು ನಡೆದಾಗಿದೆ. ಜವಬ್ದಾರಿಯನ್ನು ನೀತಿಯಿಂದ ಪೂರೈಸಿದ ವರ್ಚಸ್ಸು ಕೃಷ್ಣನದು. ಯುದ್ಧ ಸಾವು-ನೋವುಗಳಿಂದ ಈಚೆ ಬಂದ ಮೇಲೆ ಮತ್ತೆ ಒಲವಿನ ಬೆಳಕು ಆತನಲ್ಲಿ ಪಡಿಮೂಡಿದೆ. ಸಖೀ, ನೀನೆಂಬ ಹಣತೆ
ನೀನೆಂಬ ಕವಿತೆ
ನಾನೆಂಬ ಭ್ರಮೆಯ ಕಿತ್ತು ಹಾಕಿತು.
ಬದುಕು ನೀರ ಮೇಲಿನ ಗುಳ್ಳೆಯಂತೆ ಸ್ಥಿರವಿಲ್ಲದಾದರು ಜೀವನಪ್ರೀತಿಯ ಸೆಲೆ ಇದ್ದ ಮನುಷ್ಯ ಗುಳ್ಳೆಯಾಗಿಯೇ ಹಲವು ಗಳಿಗೆ ಜೀವಿಸಿದ್ದರಲ್ಲಿಯೆ ಬೆಳಕು ಕಾಣುತ್ತಾನೆ. ಲೇಖಕರು ಹೇಳ ಹೊರಟಿರುವ ಗೋಪ್ಯಗಳನ್ನು ಕೃಷ್ಣ ನಮಗೆ ಅರ್ಥ ಮಾಡಿಸಿದ್ದಾನೆ. ಕೃಷ್ಣನ ಹೃದಯವನ್ನು ಸದಾ ಜಾಗೃತವಾಸ್ಥೆಯಲ್ಲಿ ಇಟ್ಟುಕೊಳ್ಳುವ ರಾಧೆ ಆಮೂಲಕ ನಮ್ಮ ಹೃದಯದಲ್ಲು ಜಾಗೃತಿ ಮೂಡಿಸುವಲ್ಲಿ ಆಸ್ಥೆ ತೋರಿಸಿದಂತಾಗುತ್ತದೆ. ಸಂಬಂಧ ಕೊಂಡಿಯ ಕಳಚಲು ಬಿಡಲೊಲ್ಲಳು ರಾಧೆ.
ಸಾವಿರ ತೊರೆಗಳಿಗೆ
ದಾರಿಕೊಟ್ಟ ಅಂತರಗಂಗೆ ನೀನು
ಸಖಿ, ಕೊನೆಯ ತೊರೆ ನಾನು
ವಿರಮಿಸುತ್ತೇನೆ ನಿನ್ನಲ್ಲಿ
ತೊರೆಯದಿರು ನಿನ್ನದೇ ಎದೆ ತೊರೆಯ
ಹುಚ್ಚೆದ್ದು ಹರಿಯುವ
ನದಿಯನ್ನು ಬಂಧಿಸು
ಸಖಿ, ನಿಲುಗಡೆಗು ಬರಲಿ ಅರ್ಥ.
ನಿನ್ನ ಸಾಂಗತ್ಯದಲ್ಲಿ ಕಾಲ ಇಷ್ಟು ಕಿರಿದಾಯಿತೆ ಸಖಿ? ಎಂದು ಕೇಳುವ ಮುಗ್ಧ ಕೃಷ್ಣನಲ್ಲಿ ಮಾಗಿದ ಪ್ರಬುದ್ಧತೆಯಿದೆ. ಕವಿಯ ನೆಚ್ಚಿನ ಕೃಷ್ಣರಾಧೆಯರು ನಮ್ಮ ಸಾಂಗತ್ಯದಲ್ಲಿ ಒಡನಾಡಿ ಮನಸ್ಸಿನ ಆಳದಲ್ಲಿ ಬೇರೂರಿದ್ದಾರೆ. ಬದುಕಿನ ಹಾದಿಯಲ್ಲಿಟ್ಟ ದಿಟ್ಟ ಹೆಜ್ಜೆಗಳು ತಪ್ಪು ಹಾದಿಯ ತುಳಿದರೆ ಧುತ್ತೆಂದು ಕೃಷ್ಣನ ಭಾವನೆಗಳು ನೆನಪಾಗಿ ತಲೆತಗ್ಗಿಸುವಂತಾಗುತ್ತದೆ. ಇದು ಕವಿ ನಾಡಿಗರು ಓದುಗರಿಗೆ ಕೊಟ್ಟ ದೀಕ್ಷೆ! ಸ್ತ್ರೀಲೋಲ ಎಂದು ಕರೆಯಿಸಿಕೊಳ್ಳುವ ಕೃಷ್ಣನ ವ್ಯಕ್ತಿತ್ವವನ್ನು ಇಲ್ಲಿ ಲೇಖಕರು ಕ್ಷಣಮಾತ್ರದಲ್ಲಿ ಅಲ್ಲಗಳೆದದ್ದು ಸೂಕ್ಷ್ಮಾತೀಸೂಕ್ಷ್ಮ ಸಾಲುಗಳಲ್ಲಿ. ಕೃಷ್ಣನ ವರ್ಚಸ್ಸನ್ನು ಇನ್ನೂ ಬೆಳಗಿಸಿದ ಕೀರ್ತಿ ಇವರ ಕವಿತೆಗಳಿಗೆ ಅರ್ಪಣೆಯಾಗಲಿ. ಸಖೀ ಶಬ್ದ ಪುನೀತಗೊಳ್ಳುವ ಪುಳಕ ಹೀಗೆ! ಇವರ ಸಾಲುಗಳಲ್ಲಿ ಇರುವ ಜೀವದ್ರವ್ಯ ನಮ್ಮೊಳಹೊರಗು ತಲುಪಿ ನಾವೂ ಪುನೀತಗೊಂಡಿದ್ದೇವೆ. ಜೊತೆಗೆ ಧನ್ಯರಾಗಿದ್ದೇವೆ.
 

‍ಲೇಖಕರು G

May 28, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. smitha

    Matte Matthe odabekinnisuva bhavapoorna kavithegalu. Sogasagi niroopisiruve sangeetha. Kavi Nadig sir haagu padyada hooranavannu unabadisida sangeetha.. ibbarigoo abhinandanegalu. -smitha amrithraj.

    ಪ್ರತಿಕ್ರಿಯೆ
  2. Pavan Nadig

    ನಿನ್ನ ತುಟಿಯಂಚಿನ ನಗುವ ಹೂಗಳು, ಹಂಚಿಕೊಂಡಿದ್ದಾವೆ
    ಎಲ್ಲಾ ಬಿದಿರುಗಳಿಗು ಕೊಳಲಾಗುವ ಕನಸು ಆತ್ಮದ ಗೆಳತಿ ನೀನು
    ಹೊರಜಗತ್ತಿನ ಆಮಿಷಗಳಿಗೆ ನಕ್ಕು ಬಿಡುತ್ತೇವೆ.
    wah !! – sogasaagide Vasudev Nadig
    Inti, Ninna Tamma

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: