ಬೆಳ್ಳಂಬೆಳಗ್ಗೆ ನನ್ನ ಧಾರವಾಡ…

ಗುಂಜಿ ಮರದ ಗಂಜ್ನಲ್ಲಿ

ಕೃಷ್ಣ ನಾಯಕ

ಮುಂಜಾನೆ ನಿದ್ರೆಯಿಂದ್ದೆದ್ದು ಕಣ್ಣುಬಿಡದೆ ಬ್ರಷ್ ಮಾಡುತ್ತಾ ಬಾತ್ರೂಮಿನ ಕಡೆಗೆ ಹೆಜ್ಜೆ ಹಾಕುತ್ತಿದ್ದವನಿಗೆ ಮುಚ್ಚಿದ ಕಿಟಕಿಯಿಂದ ಬರುತ್ತಿದ್ದ ಸದ್ದು ತಡೆದು ನಿಲ್ಲಿಸಿತು. ಏನಿರಬಹುದು ಎಂದು ಕಿಟಕಿ ತೆರೆದವನಿಗೆ ವರ್ಷದ ಮೊದಲ ಮಳೆಯಲ್ಲಿ ಮಿಂದೇಳುತ್ತಿದ್ದ ಧಾರವಾಡವು ತನ್ನ ಬೆಳಗಿನ ಶುಭಾಶಯಗಳನ್ನು ಚಳಿಗಾಳಿಯ ಮೂಲಕ ಪಸರಿಸಿತು. ಇಂತಹ ಒಂದು ಸುಸಂಧರ್ಭವನ್ನು ತಪ್ಪಿಸಿಕೊಳ್ಳಲು ಮನಸಾಗದೆ ಮತ್ತು ತಿಂಗಳುಗಟ್ಟಲೆ ನೆಗಡಿ ಕೆಮ್ಮುಗಳಾಗದೇ ಕೆಟ್ಟು ಹೋಗಿದ್ದ ದೇಹವನ್ನು ಸರಿದಾರಿಗೆ ತರಲೆಂದೇ ಮಳೆಯಲ್ಲಿ ಜಾಗಿಂಗ್ ಎಂಬ ಹೊಸ ಅಸ್ತ್ರವನ್ನು ಹೆಗಲಿಗೇರಿಸಿಕೊಂಡು ತಯಾರಾದೆ.(ದಿನಕ್ಕೊಂದು ವೇಷ ದಿನಕ್ಕೊಂದು ತಯಾರಿಗಳಿಂದ ಕಂಗಾಲಾಗುತ್ತಿದ್ದ ನಮ್ಮ ಮಂಜಣ್ಣನು ತನಗೆ ಬೀಳುವ ಕನಸುಗಳಿಗೆ ನಾನೆಲ್ಲಿ ಕಂಟಕಪ್ರಾಯವಾಗುತ್ತೇನೆಂದು ಭಾವಿಸಿ ನಾನು ಹೋಗುವ ತನಕ ಗೋಡೆಗೆ ಮುಖ ಮಾಡಿ ಮಲಗಿದ್ದ)
ಹೊರಗಡೆ ತಯಾರಾಗಿ ಬಂದ ನಂತರ ಮಳೆಯು ನಾನು ಎಣಿಸಿದ ಮಟ್ಟಕ್ಕಿಂತ ಜಾಸ್ತಿ ಇದ್ದದ್ದು ನೋಡಿ ಸ್ವಲ್ಪ ಭಯವಾದರೂ ತೋರ್ಪಡಿಸದೆ ಮಳೆಯಲ್ಲಿಯೇ ಹುಚ್ಚು ಸವಾರಿ ಶುರು ಮಾಡಿದ್ದ ನಾನು ಯಾವ ಕಡೆ ಹೋಗಬೇಕೆಂಬ ಗೊಂದಲದಲ್ಲಿಯೇ ಓಡಲು ಶುರುವಿಟ್ಟುಕೊಂಡಿದ್ದೆ. ಮುಂದೆ ಬಂದ ಬಾಟನಿ ಗಾರ್ಡನ್ನ ಹಿಂಬಾಗಿಲಿಡಿದು ಒಳಹೋದವನಿಗೆ ಮೊದಲ ಮಳೆಗೆ ತಯಾರಿಯೆಂಬಂತೆ ವಿಶ್ವವಿದ್ಯಾಲಯದ ಕೆಲಸಗಾರರು ಮತ್ತು ಕಿಡಿಗೇಡಿಗಳು ಸುಟ್ಟು ಬೂದಿ ಮಾಡಿದ್ದ ಹುಲ್ಲಿನಿಂದ ಘಮ್ಮನೆ ವಾಸನೆ ತಲೆಗೇರತೊಡಗಿತು. ದೂರದಲ್ಲೆಲ್ಲೋ ಬರುತ್ತಿದ್ದ ಪಾರಿಜಾತ ಹೂವಿನ ಪರಿಮಳ ಹಿಡಿದು ಹೊರಟವನಿಗೆ ಜೋರಾದ ಮಳೆ ಮತ್ತು ಚಳಿ ಪೂರ್ಣ ವಿರಾಮವನ್ನಿರಿಸಿ ಅಲ್ಲೇ ನಿಲ್ಲುವಂತೆ ಮಾಡಿದವು. ಅಲ್ಲೇ ಇದ್ದ ಕೆಂಪು ಗುಂಜಿಯ ಮರಕ್ಕತ್ತಿದ್ದ ಜೇಡರಬಲೆಯು ಮಳೆಹನಿಗಳಿಂದ ಸಿಂಗಾರಗೊಂಡು ಮುತ್ತಿನ ಹನಿಗಳ ಕಿವಿಯೋಲೆ ಹಾಕಿಕೊಂಡು ಮಾಲೀಕನ ಧ್ಯಾನದಿಂದ ಕಂಪಿಸುತ್ತಿತ್ತು. ಈ ಜೇಡ ಕಟ್ಟಿರುವ ಮೂಲೆ ನೋಡುತ್ತ ನಿಂತವನಿಗೆ ಮನದ ಮೂಲೆಯಲ್ಲಿರುವ ಒಂದೊಂದು ನೆನಪುಗಳು ಸರತಿ ಸಾಲಿನಲ್ಲಿ ನಿಂತು ಮುಂದೆ ಇದ್ದವುಗಳಿಗೆ ಬೇಗ ಹೊರಹೋಗುವಂತೆ ಸೀಟಿ ಹೊಡೆಯುತ್ತಿದ್ದವು.

ಮೂಲತಃ ಬಯಲುಸೀಮೆಯ ಹುಡುಗನಾದ ನಾನು ಅಲ್ಲಿನ ಬರಡು ನೆಲಕ್ಕಿಂತಲೂ ಹಸಿರು ಗಿಡಮರಗಳಿಂದ ತುಂಬಿಕೊಂಡು ಮೈಮುರಿಯುತ್ತಿದ್ದ ಧಾರವಾಡ ಮತ್ತು ಇಲ್ಲಿನ ಜನರಿಗೆ ಮಾರು ಹೋಗಿದ್ದರಲ್ಲಿ ಆಶ್ವರ್ಯವೇನಿಲ್ಲ. ಹಾಗಂತ ನಮ್ಮ ಊರಿನ ಜನರಿಗೆ ಗಿಚಿಮರಗಳನ್ನು ಉಳಿಸುವಂತಹ ಮನಸು ಇಲ್ಲವೆಂದಲ್ಲ. ತಮ್ಮ ಹೊಲದ ಬದುವಿನಲ್ಲೋ ಹಳ್ಳದ ದಂಡೆಯಲ್ಲೋ ಬೆಳೆದಿರುವ ಜಾಲಿ ಅಥವ ಇನ್ಯಾವುದೇ ಮರದ ಉಳಿವಿಕೆಗಾಗಿ ಮತ್ತು ಅದರ ಅಧಿಪತ್ಯಕ್ಕಾಗಿ ಕೊಡಲಿ ಬಡಿಗಿಗಳ ಸಮಾವೇಶವನ್ನೇ ನಡೆಸುತ್ತಾರೆ ಅವರು. ಇದರಲ್ಲೂ ಕೂಡ ಹೆಣ್ಣು ಮಕ್ಕಳದ್ದೇ ಮೇಲುಗೈ. ಇಷ್ಟೆಲ್ಲಾ ಹೋರಾಟ ಪರಿಸರ ಸಂರಕ್ಷಣೆ ಮತ್ತು ಗ್ಲೋಬಲ್ ವಾಮರ್ಿಂಗ್ ತಡೆಗಟ್ಟುವಿಕೆಯಂತ ಯಾವುದೇ ಹುಚ್ಚು ಪರಿಕಲ್ಪನೆಗಳಿಂದಲ್ಲ. ಬದಲಾಗಿ ಈಗ ಉಳಿಸುವ ಮರಗಳು ಮುಂದೆ ಬರಲಿರುವ ಕರಿಯಮ್ಮನ ಜಾತ್ರೆಯ ಕುರಿಗೋ ಅಥವ ಮಗಳ ಮದುವೆಯಲ್ಲಿ ತಯಾರಾಗೋ ಉಪ್ಪಿಟ್ಟಿನ ಕೆಳಗೋ ಬೂದಿಯಾಗುವ ಸುದೈವದ ಕ್ಷಣಕ್ಕಾಗಿತ್ತು. ಇಷ್ಟೆಲ್ಲ ಗೊಂದಲದ ನಡುವೆಯೂ ಆ ಮರಗಳು ಹೊಲಕ್ಕೆ ಹೊಡೆದಿದ್ದ ಗೊಬ್ಬರಗಳನ್ನು ರಾಸಾಯನಿಕಗಳನ್ನು ಹೀರಿ ಸೊಂಪಾಗಿ ಬೆಳೆದು ಇವರ ಆಸೆಗೆ ಮತ್ತಷ್ಟು ರೆಕ್ಕೆ ಪುಕ್ಕಗಳು ಬೆಳೆದುಕೊಳ್ಳುವಂತೆ ಮಾಡುತ್ತಿದ್ದವು.
ಡಿಗ್ರಿಯ ನಂತರ ದೇವರ ಮಕ್ಕಳಲ್ಲೊಬ್ಬ ಎಂತಲೋ ಅಥವಾ ನಿಜವಾದ ಪ್ರತಿಭಾವಂತನೆಂತಲೋ ಭಾವಿಸಿ ಸಸ್ಯಶಾಸ್ತ್ರ ವಿಭಾಗಕ್ಕೆ ಅಡ್ಮಿಷನ್ ದೊರೆತರೂ, ಏನೋ ಬಯಸಿ, ಸೆಳೆಸಿಕೊಳ್ಳುವವರಂತೆ ಕುವೆಂಪು ವಿಶ್ವವಿದ್ಯಾಲಯವನ್ನೂ ಒಂದು ಕೈ ನೋಡಿ ನಂತರ ಪರಿಸ್ಥಿತಿಯ ಅಡಿಯಾಳಾಗಿ ಬಂದು ಬಿದ್ದದ್ದು ಧಾರವಾಡದ ದಡಕ್ಕೆ. ಹೀಗೆ ಸ್ನಾತಕೋತ್ತರ ವಿದ್ಯಾಥರ್ಿಯಾಗಿ ಎಲ್ಲವನ್ನೂ ತಿಳಿಯುವ ಎಂಬ ಅಡಿಬರಹವನ್ನು ತೂಗು ಹಾಕಿಕೊಂಡು ಬಾಟನಿ ಗಾರ್ಡನ್ ಅಲೆಯುವ ಅಬ್ಯಾಸವನ್ನು ಶುರು ಹಚ್ಚಿಕೊಂಡಿದ್ದೆ. ಹೀಗೆಯೇ ಒಂದು ದಿನ ಸಾಯಂಕಾಲ ಗಾರ್ಡನ್ನ ಒಳಹೊಕ್ಕ ನಾನು ನಮ್ಮ ಸಹಪಾಠಿಗಳಾದ ನಾರಾಯಣ ಮತ್ತು ಸರಸ್ವತಿಯರ ಏಕಾಂತಕ್ಕೆ ಭಂಗತಂದು ಅವರಿಂದ ಹಾಯ್ ಎಂದು ಬೈಸಿಕೊಂಡು ಮುಂದೆ ಹೊರಟವನಿಗೆ ಕಾಲಿನ ಬುಡದಲ್ಲಿ ಎಂತದೋ ಕೆಂಪುಗುಂಡಿಯಂತ ವಸ್ತುವಿನತ್ತ ಚಿತ್ತ ಹರಿಯಿತು. ಮೊದಲೇ ಸಸ್ಯವಿಜ್ಞಾನದಲ್ಲಿನ ತೆವಳು ಹುಳುವಾಗಿದ್ದ ನನಗೆ ಅದು ಯಾವುದೋ ಗಿಡದ ಬೀಜವಿರಬೇಕೆಂದು ತೀರ್ಮಾನಿಸುವುದಕ್ಕೆ ತಡವಾಗಲಿಲ್ಲ. ಅಲ್ಲಿಯೇ ಸಾಕಷ್ಟು ಬಿದ್ದಿರುವ ಬೀಜಗಳು ಪಕ್ಕದಲ್ಲಿರುವ ಕೆಂಪುಗುಂಜಿ ಮರದವು ಎಂದು ಮನವರಿಕೆಯಾಯಿತು. ನೋಡುವುದಕ್ಕೆ ತುಂಬಾ ಆಕರ್ಷಣೀಯವಾಗಿರುವ ಮತ್ತು ನಾನು ಹಿಂದೆಂದೂ ನೋಡಿರದ ಮರವಾದ್ದರಿಂದ ಹೆಚ್ಚು ತಿಳಿಯುವ ಎಂದು ಅದರ ಬೀಜಗಳನ್ನು ಆಯ್ದುಕೊಂಡು ಅದರ ವೈಜ್ಞಾನಿಕ ಹೆಸರನ್ನು ಕಂಠಪಾಠಮಾಡಿಕೊಂಡು ಬಂದವನಿಗೆ ಆಶ್ಚರ್ಯ ಕಾದಿತ್ತು.
ನೋಡುವುದಕ್ಕೆ ಆಕರ್ಷಣೀಯವಲ್ಲದೆ, ಈ ಬೀಜಗಳು ಒಂದೇ ಗಾತ್ರವನ್ನು ಹೊಂದಿದ್ದು ನಮ್ಮ ಮುತ್ತಜ್ಜಂದಿರ ಕಾಲದಲ್ಲಿ ಬಂಗಾರವನ್ನು ಅಳೆಯುವ ತೂಕದ ವಸ್ತುಗಳಾಗಿದ್ದವು. ಸುಮಾರು ಮೂರು ಬೀಜಗಳನ್ನು ಸೇರಿಸಿ ಒಂದು ಗ್ರಾಮ್ ಎಂದು ಲೆಕ್ಕ ಮಾಡುತ್ತಿದ್ದರಂತೆ ನಮ್ಮ ಪೂರ್ವಜರು. ಇದಲ್ಲದೆ ಚೀನಿ ಜನರು ಈ ಗಿಡವನ್ನು ಪ್ರೀತಿಯ ಸಂಕೇತವಾಗಿ ಕಾಣುತ್ತಿದ್ದರಂತೆ. ಒಂದು ವಾರದ ಹಿಂದಷ್ಟೇ ಕಳೆದುಹೋದ ಪ್ರೇಮಿಗಳ ದಿನ ನೆನಪಿಗೆ ಬಂದು ಇಂತಹ ವಿಷಯ ಮೊದಲೇ ಗೊತ್ತಿದ್ದರೆ ಯಾರನ್ನಾದರು ಈ ಗಿಡದ ಕೆಳಗೆ ನಿಲ್ಲಿಸಿ ಪ್ರಪೋಸ್ ಮಾಡಿ ಬೈಸಿಕೊಳ್ಳಬಹುದಿತ್ತಲ್ಲಾ ಅಂತ ಕೈ ಕೈ ಹಿಸುಕಿಕೊಂಡೆ. ಇಂತಹ ಮಹಾನ್ ಬೀಜಗಳನ್ನು ತಂದು ರೂಮಿನ ಕಿಟಕಿಯಲ್ಲಿಟ್ಟು ಮುಖ ತೊಳೆಯಲು ಹೋಗಿದ್ದೆ. ವಾಪಸ್ಸು ಬಂದಾಗ ಸ್ವಲ್ಪ ಸಮಯದ ಹಿಂದಷ್ಟೇ ಇಟ್ಟುಹೋದ ಬೀಜಗಳು ಕಾಣೆಯಾಗಿರುವ ವಿಷಯ ಗಮನಕ್ಕೆ ಬಂತು. ತುಂಬಾ ಸಮಯ ಹುಡುಕಿದ ನಂತರ ಹೊಳೆಯಿತು ಇದು ನಮ್ಮ ರೂಮಿನ ಖಾಯಂ ಕಳ್ಳರಾದ ಕೋತಿಗಳ ಕಿತಾಪತಿಯೆಂದು. ನಮ್ಮ ರೂಮ್ನ ಕ್ಯಾಪ್ಟನ್ ಆದಂತಹ ಪ್ರವೀಣನ ಅನುಪಸ್ತಿತಿಯನ್ನು ಅದ್ಹೇಗೋ ಅರಿತ ಕೋತಿಗಳು ಮತ್ತೆ ತಮ್ಮ ಆಟವನ್ನು ಆರಂಭಿಸಿದ್ದವು. ಮೊದಲೆಲ್ಲಾ ಕೋತಿಯು ಕಿಟಕಿ ಪಕ್ಕ ಬಂದಾಗ ಅದಕ್ಕಿಂತಲೂ ಜೋರಾಗಿ ಕಿರುಚಿ ಬೊಬ್ಬೆ ಎಬ್ಬಿಸಿ ಕೋತಿಗೂ ಒಂದು ಕ್ಷಣ ಜೀವ ಝಲ್ಲೆನ್ನಿಸುವಂತೆ ಮಾಡುತ್ತಿದ್ದ ಪ್ರವೀಣ ಊರಲ್ಲಿರಲಿಲ್ಲ. ಇದರ ಸದುಪಯೋಗ ಪಡೆದ ಕೋತಿಗಳು ರಾಜಾರೋಷವಾಗಿ ರೂಮ್ನ ಒಳಹೊಕ್ಕು ತಮಗೆ ಇಷ್ಟ ಬಂದವುಗಳನ್ನು ಹೊತ್ತುಕೊಂಡು ಹೋಗುತ್ತಿದ್ದವು. ಕೆಲವೊಮ್ಮೆ ಲ್ಯಾಬ್ ಜರ್ನಲ್ಗಳನ್ನು ಹೊತ್ತೊಯ್ದು ಅದರಲ್ಲಿರೋ ಅಸಂಬದ್ದ ಅಕ್ಷರಗಳನ್ನು ನೋಡಿಯೋ ಒಂದಕ್ಕೊಂದು ಸಂಭಂದವಿಲ್ಲದ ಅಕ್ಷರಗಳನ್ನು ನೋಡಿಯೋ ಅಥವಾ ಜರ್ನಲ್ಗಳನ್ನು ಕಳೆದುಕೊಂಡು ತಮಗಿಂತಲೂ ತಮಾಷೆಯಾಗಿ ಕುಳಿತುಕೊಂಡ ನಮ್ಮನ್ನು ನೋಡಿಯೋ ವಾಪಸ್ಸು ಕಿಟಕಿ ಬಳಿಯೇ ಇಟ್ಟು ಹೋಗುತ್ತಿದ್ದವು. ಆಗ ನಾವು ಇನ್ನೊಂದು ಜರ್ನಲ್ ಬರೆಯುವ ಅಗ್ನಿ ಪರೀಕ್ಷೆಯಿಂದ ಪಾರಾದವರಂತೆ ನುಗ್ಗಿಕೇರಿ ಹನುಮಪ್ಪನ ದೇವಸ್ತಾನದ ಪೂಜಾರಿ ಹುಡುಗಿಯರ ಹಿಂದೆ ನಿಂತ ನಮಗೆ ಗುರಾಯಿಸಿ ಹಾಕುತ್ತಿದ್ದ ಪ್ರಸಾದದ ತುಣುಕಿನಂತೆ ಜರ್ನಲ್ಗಳನ್ನು ಎತ್ತಿಕೊಂಡು ಬರುತ್ತಿದ್ದೆವು.
ಇಷ್ಟೆಲ್ಲಾ ನೆನಪುಗಳ ಸುರುಳಿಗಳೊಳಗೆ ಬಂಧಿಯಾಗಿದ್ದ ನನಗೆ ಮೊಬೈಲ್ ರಿಂಗಣಿಸಿದ್ದು ಕೇಳಿ ಎಚ್ಚರವಾಯ್ತು. ಕರೆ ಎತ್ತಿಕೊಂಡ ತಕ್ಷಣ ‘ಪೇಸ್ಟ್ ಎಲ್ಲಿಟ್ಟಿಲೇ?’ಎಂಬ ರೂಮ್ಮೇಟ್ನ ಧ್ವನಿ ಕೇಳಿ ಬಾತ್ರೂಮಿನಲ್ಲಿಯೇ ಬಿಟ್ಟು ಬಂದಿದ್ದ ಹೊಸ ಪೇಸ್ಟ್ ನೆನಪಾಗಿ ನಿಧಾನವಾಗಿ ರೂಮ್ನತ್ತ ಹೆಜ್ಜೆ ಹಾಕತೊಡಗಿದೆ.
 

‍ಲೇಖಕರು G

May 28, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. mallikarjun talwar

    dharawad andre dharawadane…. aa uru astu sulabavagi mariyo anthaddallaa….. baraha chennagide.

    ಪ್ರತಿಕ್ರಿಯೆ
  2. ಲಕ್ಷ್ಮೀಕಾಂತ ಇಟ್ನಾಳ

    ಕೃಷ್ಣಾ ನಾಯಕ, ಬರಹ ಓದ್ದೆ, ಚನ್ನಾಗನ್ನಸ್ತು…ನಿಮ್ಮ ಇನ್ನಷ್ಟು ಅನುಭವಗಳನ್ನು ಹಂಚಿಕೊಳ್ಳಿ. ಪೇಸ್ಟ್ ಸಿಕ್ಕಿತೇ?

    ಪ್ರತಿಕ್ರಿಯೆ
  3. krishna

    Thnk u laxmikant sir….
    Nam kade hostel nalli kalodigiro mobile sigbahudu adre paste matra sigalla…..hostel nalli chinnakkinta paste precious! !!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: