ಡೈಲಿಬುಕ್ : ಕಾ ಹು ಚಾನ್‌ಪಾಷಾ ಬರೆದ ’ಜನ ಮರುಳೋ..ಜಾತ್ರೆ ಮರುಳೋ’


ಕಾ ಹು ಚಾನ್‌ಪಾಷಾ ಬರೆದ ’ಜನ ಮರುಳೋ ಜಾತ್ರೆ ಮರುಳೋ’  ಕಥಾ ಸಂಕಲನಕ್ಕೆ ಸ.ರಘುನಾಥ ಅವರು ಬರೆದ ಮುನ್ನುಡಿ, ಲೇಖಕರ ಮಾತು ಮತ್ತು ಪುಸ್ತಕದ ವಿವರಗಳು ಇಲ್ಲಿವೆ.
ಪುಸ್ತಕದ ಹೆಸರು : ಜನ ಮರುಳೋ!… ಜಾತ್ರೆ ಮರುಳೋ!… (ಕಥಾ ಸಂಕಲನ)
ಲೇಖಕರು : ಕಾ.ಹು. ಚಾನ್ಪಾಷ
ಮೊ : 8553701585
ಪುಟಗಳು : 72
ಬೆಲೆ : ರೂ. 50/-
ಪೂರ್ಣದೃಷ್ಟಿ ಪ್ರಕಾಶನ
ಕಥಾ ಸಂಕಲನದಲ್ಲಿರುವ ಕತೆಗಳು
1. ಜನ ಮರುಳೋ!… ಜಾತ್ರೆ ಮರುಳೋ!…
2. ಅವಳಿಗಿನ್ನೂ ಹದಿನಾರು
3. ಜಂಗಮಕ್ಕೆ ಅಳಿವಿಲ್ಲ
4. ಕಪ್ಪು ಬಣ್ಣದ ಪರ್ಸು
5. ಬಿಡುಗಡೆ
6. ಸಂಭ್ರಮ

ಮುನ್ನುಡಿ

ಸ.ರಘುನಾಥ, ಸಾಹಿತಿಗಳು ಹಾಗೂ ಸದಸ್ಯರು, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು

ಕಥೆ ಪಾತ್ರಗಳ ಮೂಲಕ ತನ್ನನ್ನು ಕಟ್ಟಿಕೊಳ್ಳುತ್ತದೆ. ಕತೆಗಾರ ಅದಕ್ಕೆ ತಕ್ಕ ಭಾಷಾ ಸೌಕರ್ಯವನ್ನು ಕಲ್ಪಿಸುತ್ತಾನೆ. ಹೀಗೆ ಮಾಡುವಾಗ ತನ್ನ ಅನುಭವ, ಆಲೋಚನೆಗಳನ್ನು ನಿರೂಪಿಸಲು ಪ್ರಯತ್ನಿಸುತ್ತಾನೆ. ಹಾಗೆಯೆ ತನ್ನಲ್ಲಿನ ಆದರ್ಶಗಳನ್ನು ಯಾವುದಾದರು ಒಂದು ಪಾತ್ರದ ಮೂಲಕ ಚಿತ್ರಿಸುತ್ತಾನೆ. ಇದೊಂದು ಕ್ರಮ. ಪಾತ್ರಗಳೇ ನೆರೆದು ತಾವು ಹೇಗೆ ಹೇಗೆಯೋ ಹಾಗೆ ನುಡಿದು – ನಡೆದು ಕತೆಗಾರನಿಂದ ಅದನ್ನು ಹೇಳಿಸುತ್ತವೆ. ಅವು ಹೇಳಿಸುವುದನ್ನು ಹೇಳುತ್ತದೆ. ಅದನ್ನು ಕಥನ ಕಲೆಯಾಗಿಸುವುದು ಕತೆಗಾರಿಕೆಯ ಕೌಶಲ. ಇದು ಇನ್ನೊಂದು ಬಗೆಯದು. ಕತೆಗಾರ ಕವಿಯ ಪಕ್ಕದವನೆ ಆಗಿದ್ದು ಕಲ್ಪನೆಗಳ ಗರಿಗೆದರಿಸಿ ಕಥೆ ಹೇಳುವುದುಂಟು. ಈ ಪರಿಯ ಕತೆಗಾರ ತನ್ನಲ್ಲಿನ ಪ್ರತಿಭೆಯಿಂದ ಅದು ವಾಸ್ತವ ಅನ್ನಿಸುವಂತೆ ಓದುಗರಲ್ಲಿ ಕಥಾ ಬಿಂಬವನ್ನು ಮೂಡಿಸಿ ಅದನ್ನು ಆಕೃತಿಗೆ ತರುತ್ತಾನೆ.
ಈ ಕ್ರಮದ ಕಥೆಗಳನ್ನು ಕನ್ನಡ ಕಥಾ ಪರಂಪರೆಯಲ್ಲಿ ಕಾಣುತ್ತೇವೆ. ಈ ಎಲ್ಲ ಪರಿಕ್ರಮಣಗಳು ಒಬ್ಬನೇ ಕತೆಗಾರನ ಕಥೆಗಳಲ್ಲಿ ಕಾಣವುದೂ ಇದೆ. ನಮ್ಮಲ್ಲಿ ಯಾವ ವರ್ಣನೆಗೂ ಹೋಗದೆ ನೇರವಾಗಿ ಕಥೆ ಹೇಳುವುದೂ ನಡೆದಿದೆ. ಇದು ಮುಖ್ಯವಲ್ಲ. ಮುಖ್ಯ ಅನ್ನುವುದಿದ್ದರೆ ಅದು ವಿಮಶರ್ೆಗೆ ಸೇರಿದ್ದು. ಓದುಗ ಕಥೆಯನ್ನು ಕಥೆಯೆಂದೇ ಸ್ವೀಕರಿಸಿ ಓದಿ, ಅದು ತನ್ನಲ್ಲಿ ತಂದ ಭಾವನೆಯನ್ನ ಸ್ಪಂದನೆಯನ್ನ ಅದು ಕೊಟ್ಟ ಸುಖ, ಬೇಸರವನ್ನ ಅನುಭವಿಸುತ್ತಾನೆ. ಹಾಗೆಯೆ ಪ್ರತಿಕ್ರಿಯೆ ತೋರುತ್ತಾನೆ. ಕಥೆ ವಿಮಶರ್ೆಗೆ ಒಳಪಡುವ ಬಗೆ ಇದು. ವಿಮರ್ಶಕ ಮೊದಲು ಓದುಗನಾಗಿಯೆ ವಿಮಶರ್ೆಗೆ ಇಳಿಯುವುದು.
ಕಥೆ ಯಾವುದೆಂದಲ್ಲ. ಅದು ಓದುವಾಗ ಕಥೆ ಅನ್ನಿಸುತ್ತದೆಯೆ ಎಂಬುದಷ್ಟೆ ಮುಖ್ಯ. ಕಥೆ ಎಂಬ ರಚನೆ ಕಥೆಯಾಗಿದ್ದರೆ ಓದುಗ ಕಥೆಯನ್ನು ಓದಿದ ಎಂದರ್ಥ. ಲೇಖಕ ಕಥೆ ಹೇಳಿದ್ದಾನೆ ಅನ್ನುವೆವು.
ಕಥೆ ಗದ್ಯಕೃತಿ. ಗದ್ಯವೆಂದರೆ ಭಾಷೆಯ ನೆರವಿನಲ್ಲಿ ಎಷ್ಟು ಬೇಕಾದರೂ ಹೇಳಬಹುದು, ಹೀಗೆಂದರೆ ಉಚಿತತೆಯನ್ನು ಮೀರಿ ಮಾತಾಡಬಹುದು ಅನ್ನುವ ಹಾಗಿಲ್ಲ. ಕವಿತೆಯಷ್ಟು ಸಂಕ್ಷಿಪ್ತತೆ ಬೇಡವಾದರೂ ಅದನ್ನು ಬಿಟ್ಟುಕೊಟ್ಟರೆ ಕಥೆ ಅದನ್ನು ಒಗ್ಗಿಸಿಕೊಳ್ಳುವುದಿಲ್ಲ. ಪಾತ್ರವೊಂದು ಉದ್ದುದ್ದದ ಮಾತಿಗಿಳಿದರೆ ಕಥೆಯಲ್ಲಿ ಭಾಷಣದ ಛಾಯೆ ಆವರಿಸಿಕೊಳ್ಳುತ್ತದೆ. ಇದು ಉಚಿತ ಮಾತಿನ ಆಯ್ಕೆಯಲ್ಲದ ದೋಷ.
ಯುವ ಕತೆಗಾರ ಕಾ.ಹು.ಚಾನ್ಪಾಷರ ಕಥೆಗಳನ್ನು ಓದಿದಾಗ ಈ ಆಲೋಚನೆ ಮನಸ್ಸಿಗೆ ಬಂದಿತು. ಇದು ಪಾಷರ ಮೊದಲ ಕಥಾ ಸಂಕಲನ. ಕಥನ ಉತ್ಸಾಹಿಯಾದ ಇವರು ತಮ್ಮ ಯುವ ಮನಸ್ಸಿನ ಹುರುಪು, ಉದ್ವೇಗ, ಆತುರತೆ ಹಾಗೆಯೆ ಈ ವಯಸ್ಸಿಗೆ ತಕ್ಕ ಹಾಗೆ ಹುಟ್ಟಿಕೊಳ್ಳುವ ಆದರ್ಶಗಳನ್ನು ತಮ್ಮ ಕಥೆಗಳಲ್ಲಿ ನಿಚ್ಚಳವಾಗಿ ತೋರಿಸಿದ್ದಾರೆ. ತಮ್ಮ ಮುಂದಿನ ಕಥೆಗಳಲ್ಲಿ ಗಟ್ಟಿಗೊಳ್ಳುವ ಸೂಚನೆಯನ್ನೂ ಕೊಟ್ಟಿದ್ದಾರೆ. ಹೀಗೆ ಕೊಡುತ್ತಲೇ ಕೆಲವು ತೊಡಕುಗಳನ್ನು ನಿವಾರಿಸಿಕೊಳ್ಳಬೇಕು ಎಂದು ಹೇಳುವಂತೆಯೂ ಮಾಡಿದ್ದಾರೆ. ಈ ಹಂತದಲ್ಲಿ ಇದು ಅಸಹಜವೇನೂ ಅಲ್ಲ.
ಚಾನ್ಪಾಷರ ಕಥೆಗಳಲ್ಲಿ ಮುಸ್ಲಿಂ ಸಮುದಾಯದ ಒಳಗಿನ ಬದುಕಿನ ಚಿತ್ರಣಗಳದ್ದೇ ದೊಡ್ಡ ಪಾಲು. ಸಂಕಲನದ ಆರು ಕಥೆಗಳಲ್ಲಿ ‘ಜನ ಮರುಳೋ ಜಾತ್ರೆ ಮರುಳೋ’ ‘ಬಿಡುಗಡೆ’ ಎಂಬೆರಡು ಕತೆಗಳನ್ನು ಬಿಟ್ಟರೆ ಉಳಿದ ನಾಲ್ಕೂ ಕಥೆಗಳು ಮುಸ್ಲಿಂ ಸಮಾಜದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಬದುಕನ್ನು ಚಿತ್ರಿಸುತ್ತ ಒಂದು ರೀತಿಯ ವಿಮರ್ಶೆ, ವಿಶ್ಲೇಷಣೆಗೆ ತೊಡಗುತ್ತವೆ. ಬದುಕಿನ ನೆಲೆಯಲ್ಲಿ ಈ ಕಥೆಗಳೂ ಭಾರತೀಯ ಸಮಾಜದ ಒಳಗಿನದೇ ಆಗಿವೆ. ಹಿಂದೂ, ಮುಸ್ಲಿಂ, ಕ್ರೈಸ್ತ…… ಮತ ಯಾವುದಾದರೂ ಬದುಕಿನ ಕಷ್ಟಕೋಟಲೆಗಳು ಒಂದೆ. ಶೋಷಣೆಯ ಸುಡುಕೆಂಡಕ್ಕೆ ಮತ-ಧರ್ಮಗಳ ಅಡೆತಡೆಗಳಿಲ್ಲ. ಇದನ್ನು ಚಾನ್ಪಾಷ ಬಲ್ಲರು.
ಭಾರತೀಯ ಸಮಾಜ ಉದಾರೀಕರಣದ ಗರಕ್ಕೆ ಸಿಕ್ಕಿ ನರಳುವಂತಾಗುತ್ತಿರುವುದು ಈ ಕತೆಗಾರರನ್ನೂ ಕಾಡಿದೆ. ಕೈಗಾರಿಕೆಗಳಿಗೆ, ಬಜಾರು, ಮಾಲ್ಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಕೃಷಿ ಹೇಗೆ ಹಣದ ದಾಸ್ಯಕ್ಕೆ ಒಳಗಾಗುತ್ತ ತನ್ನನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕ ಯುವ ಕತೆಗಾರರನ್ನು ಕಾಡುತ್ತಿದೆ ಎಂಬುದಕ್ಕೆ ‘ಜನ ಮರುಳೋ ಜಾತ್ರೆ ಮರುಳೋ’ ಅನ್ನುವ ಕಥೆ ಉದಾಹರಣೆ. ಘಟನೆಗಳನ್ನು, ಅದರ ವಿವರಣೆಗಳನ್ನು ಹೇಳುವುದರಲ್ಲೆ ಮಗ್ನವಾಗುವುದರಿಂದ ಹೋರಾಟದ ಸಂಘರ್ಷ ಕಾಣೆಯಾಗಿದೆ. ಇಲ್ಲಿ ಬರುವ ಕನಸು ಈ ಕತೆಗಾರರ ಕಥನ ತಂತ್ರಕ್ಕೆ ಮೆಚ್ಚುಗೆಯ ಅಂಶ. ಮುನಿಯನ ಪಾತ್ರ ಹೋರಾಟದ ಸೂಚನೆಗಳಲ್ಲಿಯೆ ಗಿರಿಕಿ ಹೊಡೆಯುತ್ತದೆ. ಭೂ ಸಮಸ್ಯೆ ಪ್ರಧಾನವಾಗಿದ್ದರೂ ‘ಕಬಳಿಕೆ’ದಾರರ ಚಟುವಟಿಕೆಗಳಿಗೆ ಆದ್ಯತೆ ಸಿಕ್ಕಿರುವುದರಿಂದ ಸಂಘಟಿತ ಹೋರಾಟಕ್ಕೆ ಕಥೆ ವೇದಿಕೆಯಾಗುವ ಅವಕಾಶದಿಂದ ವಂಚಿತವಾಗುತ್ತದೆ. ಆದರೆ ಆಶಯವನ್ನು ಒಪ್ಪಬೇಕು.
‘ಜಂಗಮಕ್ಕೆ ಅಳಿವಿಲ್ಲ’ ಕಥೆಯಲ್ಲಿ ಲೇಖಕರು ಗಂಭೀರವಾದ ವಿಷಯವನ್ನು ಆಯ್ದುಕೊಂಡಿದ್ದಾರೆ. ಅವರದೇ ವೈಚಾರಿಕ ಪ್ರಜ್ಞೆ ಈ ಕಥೆ ತುಂಬ ಹರಿದಾಡುತ್ತದೆ. ‘ಜನ ಮರುಳೋ ಜಾತ್ರೆ ಮರುಳೋ’ ಕಥೆಯಂತೆಯೇ ಇಲ್ಲಿಯೂ ಬಡವರ-ಶ್ರೀಮಂತರ ನಡುವಿನ ಕಂದಕ ತೆರೆದುಕೊಳ್ಳುತ್ತದೆ. ಬಂಡಾಯದ ಧ್ವನಿ ಕೇಳಿ ಬಂದರೂ ಅದಕ್ಕೆ ಪುಷ್ಟಿ ಸಿಗುವುದಿಲ್ಲ. ಅನ್ವರನ ಸಿಟ್ಟಿಗೆ ಅರ್ಥವಿದೆ. ಆದರೆ ಅದರಲ್ಲಿ ಆ ಪಾತ್ರದ ಧ್ವನಿಗಿಂತ ಲೇಖಕರ ಧ್ವನಿಯೇ ಕೇಳಿಸುತ್ತದೆ. ಶ್ರೀಮಂತ ರಶೀದ್, ನಮಾಜಿನ ಔತಣ ನೀಡಲು ಬಂದ ನಿಯೋಗದ ಪ್ರಮುಖ ಖಲಂದರ್ ಸಾಹೇಬರ ಮುಖಕ್ಕೆ ಏಕಾಏಕಿ ಉಗಿಯುವ ಪ್ರಕರಣ ಸಹಜ ಅನ್ನಿಸದು. ಇದು ಖಲಂದರ್ರ ವ್ಯಕ್ತಿತ್ವವನ್ನು ಅತ್ಯುನ್ನತಿಗೆ ಏರಿಸುವ ಪ್ರಯತ್ನವೆನೋ ಎಂಬ ಅನುಮಾನ ತರುತ್ತದೆ. ಇದಕ್ಕೆ ‘ಉಗಿತ’ವೇ ಆಗಬೇಕಿರಲಿಲ್ಲವೇನೋ? ಹೀಗೆ ಹೇಳುವಾಗ ‘ಖಿನ್ನತೆ’ ಉಂಟುಮಾಡುವ ಮನಸ್ಥಿತಿಯೂ ನನ್ನ ಅರಿವಿನಲ್ಲಿದೆ.
‘ಕಪ್ಪು ಬಣ್ಣದ ಪರ್ಸು’ ಕಥೆ ‘ಬಡವನಿಗೆ ಇರೋದು ನಿಯತ್ತು’ ಎಂಬ ರೂಢಿಯ ಮಾತನ್ನು ದೃಢಪಡಿಸುತ್ತದೆ. ಷರೀಫಜ್ಜ ನಿಯತ್ತಿನ ಮನುಷ್ಯ. ಆತನ ಕಣ್ಣಿಗೆ ಹಣ ತುಂಬಿದ್ದ ಪಸರ್ು ಬೀಳುತ್ತದೆ. ಅದನ್ನು ತನ್ನದಾಗಿಸಿಕೊಳ್ಳುವ ಆಲೋಚನೆ ಹುಟ್ಟಿದರೂ ಅನುಭವಿ ಜೀವ ಅದನ್ನು ಬೀಳಿಸಿಕೊಂಡವರ ಸ್ಥಿತಿ-ಗತಿಗಳನ್ನು ಕುರಿತು ಚಿಂತಿಸುತ್ತದೆ. ಹಣದ ಅಗತ್ಯತೆಯ ಒತ್ತಡದ ನಡುವೆಯೂ ಪ್ರಾಮಾಣಿಕತೆ ಮೇಲಾಗಿ ಮನಸ್ಸು ತುಡಿಯುತ್ತಿರುವಾಗ ವಂಚಕನೊಬ್ಬನಿಂದ ಮೋಸಹೋಗಿ ದುಃಖಿತನಾಗುವ ಅಜ್ಜ ಓದುಗರ ಮನಸ್ಸನ್ನೂ ಕದಡುತ್ತಾನೆ. ತನ್ನದಲ್ಲದ ತಪ್ಪಿಗೆ ಮರುಗುತ್ತಾನೆ.
ಪರ್ಸಿಗಾಗಿ ಕೈಚಾಚುವ ಶರೀಫಜ್ಜನ ಮನಸ್ಸಿನಲ್ಲಿ ಉಂಟಾಗುವ ಭಾವ ತುಮುಲದ ಚಿತ್ರಣ ಚಾನ್ಪಾಷ ಮುಂದೆ ಒಳ್ಳೆಯ ಕತೆಗಾರರಾಗುವ ಸೂಚನೆಯನ್ನು ಕೊಡುತ್ತದೆ. ‘ಸಾಲಾಗಿ ನಿಂತಿದ್ದ ಮರಗಳು ತನ್ನನ್ನೇ ದಿಟ್ಟಿಸಿ ನೋಡಿದಂತೆ ಭಾಸವಾಯಿತು. ಮರದ ರೆಂಬೆ ಎಲೆಗಳು ತಂಗಾಳಿಗೆ ತೂಗಾಡುವುದನ್ನು ಮರೆತು ತನ್ನ ಕಡೆಗೆ ತಿರುಗಿ ಕಣ್ಣರಳಿಸಿ ನೋಡುತ್ತ ಸಣ್ಣಗೆ ನಕ್ಕಂತಾಯಿತು. ಹಕ್ಕಿಗಳು ತಮ್ಮ ಬಳಗವನ್ನು ಕೂಗಿ ಕರೆದು ಏನೋ ಹೇಳುತ್ತಿದ್ದಂತೆ ಅನಿಸಿತು. ಚಾಚಿದ ಕೈಯನ್ನು ಮುಂದೆ ಬೆಳೆಸಲಾಗಲಿಲ್ಲ. ಏನೋ ಕೊಂದುಕೊಳ್ಳುವ ಅನುಭವ ಕಾಡತೊಡಗಿತು. ಹೆಜ್ಜೆಗಳು ಹಿಂದಕ್ಕೆ ಮುಂದಕ್ಕೆ ಚಲಿಸತೊಡಗಿದವು. ಬಹಳ ಹೊತ್ತಿನವರೆಗೂ ಕತ್ತಲೆ-ಬೆಳಕಿನ ಹೊಯ್ದಾಟ ಗುದ್ದಾಟಗಳು ನಡೆದವು. ಫಾತೀಮ ಮುಸ್ಸಂಜೆಯ ಆ ತಂಗಾಳಿಯಲ್ಲಿ ಅಳಕುತ್ತ ಒಂಟಿಯಾಗಿ ನಡೆದು ಹೋದಂತಾಯಿತು. ಅವಳಾಡಿದ ಮಾತುಗಳು ನೆನಪಾಗಿ ಒಮ್ಮೆ ಬೆಚ್ಚಿಬಿದ್ದರು. ನನ್ ಫಾತೀಮಾ ಕಲಿಸಿಕೊಟ್ಟ ಆದರ್ಶವನ್ನ ನಾನು ಎಂದಿಗೂ ಬಿಡೋಲ್ಲಾ…….. ಎಂದುಕೊಂಡು ದೃಢಮನಸ್ಕರಾದರು’ ಮತ್ತು ‘………..ಕೆಳಗೆ ಬಿದ್ದಿದ್ದ ಪರ್ಸನ್ನು ಕೈಗೆತ್ತಿಕೊಂಡರು. ಎದೆಯಲ್ಲಿ ಉದ್ಭವಿಸಿದ ಭಾರಕ್ಕಿಂತ ನೂರುಪಟ್ಟು ಅಧಿಕ ಭಾರವನ್ನು ಹೊತ್ತಂತೆ ಭಾಸವಾಯಿತು’ ಇದು ಈ ಕತೆಗಾರನ ಕಥನ ಸಾಮಥ್ರ್ಯವನ್ನು ಹೇಳುತ್ತದೆ. ಹೀಗೆಯೆ ‘ಜಂಗಮಕ್ಕೆ ಅಳಿವಿಲ್ಲ’ ಕಥೆಯಲ್ಲಿ ಅನ್ವರನ ಆತ್ಮವಾಣಿಯಾಗಿ ಬರುವ ‘ನಮ್ಮಂಥ ಸಾವಿರಾರು ಜನ ಈ ಭೂಮಿ ಮೇಲೆ ಬದುಕುತ್ತಿದ್ದೀವಿ ಅಂತ ಪಾಪ ರಶೀದನಿಗೆ ಗೊತ್ತಿಲ್ಲ ಅನ್ಸತ್ತೆ. ನಮ್ಮ ಬದುಕು ಬವಣೆ ಹಸಿವು ಪರಿಸ್ಥಿತಿಗಳನ್ನ ಅವ್ನು ನೋಡಿದ್ದರೆ ಚೆನ್ನಾಗಿರುತ್ತಿತ್ತು. ಆದ್ರೆ ದೇವರಿಗೇ ಇದೆಲ್ಲಾ ಇಷ್ಟಯಿಲ್ಲ. ಆ ದೇವರಿಗೆ ಇಷ್ಟವಿತ್ತೋ ಇಲ್ವೊ ಆದ್ರೆ ಈ ಮನುಷ್ಯನಿಗೆ ಮಾತ್ರ ಇಷ್ಟಯಿಲ್ಲ. ಅಸಲಿಗೆ ದೇವರು ಇದಾನಾ? ಎಂದುಕೊಳ್ಳುತ್ತ ಏನೇನೋ ಪ್ರಶ್ನೆ ಹಾಕಿಕೊಳ್ಳತ್ತ ತಾನು ದಿನವೂ ಭಿಕ್ಷೆ ಬೇಡುತ್ತ ನಿಲ್ಲುವ ಜಾಗಕ್ಕೆ ಬಂದು ನಿಂತುಕೊಂಡ’ ಮಾತುಗಳು ಕಥನ ಪ್ರತಿಭೆಯಿಂದ ಬಂದವು.
ಈ ಸಂಕಲನದ ಕಥೆಗಳಲ್ಲಿ ‘ಅವಳಿಗಿನ್ನೂ ಹದಿನಾರು’ ಎಂಬುದು ಯಶಸ್ವಿ ಅನ್ನಿಸುವ ಕಥೆ. ಕಥೆಯ ಹೆಸರೇ ಧ್ವನ್ಯರ್ಥದಿಂದ ಕೂಡಿದ್ದು ಇದರಲ್ಲಿ ಜಾತಿಯ ಶೋಷಣೆಯ ಧ್ವನಿ ತೀಕ್ಷ್ಣವಾಗಿದೆ. ಚಾನ್ಪಾಷ ರಮ್ಯವಾಗಿಯೂ ಕಥೆ ಹೇಳಬಲ್ಲರು ಎಂಬುದನ್ನು ಇಲ್ಲಿನ ‘ಬಿಡುಗಡೆ’, ‘ಸಂಭ್ರಮ’ ಕಥೆಗಳು ತಿಳಿಸುತ್ತವೆ.
ಈ ಕತೆಗಾರ ಬರೆಯುತ್ತಿರುವ ಈ ಕಾಲಕ್ಕೆ ಇವರಿಗೆ ಹಿರಿಯರಾದ ಮುಸ್ಲಿಂ ಲೇಖಕರು ತಮ್ಮ ರಚನೆಗಳ ಮೂಲಕ ಇವರಿಗೆ ಧೃತಿ ಮಾರ್ಗವನ್ನು ನಿರ್ಮಿಸಿಕೊಟ್ಟಿದ್ದಾರೆ. ಇವರಿಗೆ ಆ ಬೆಳಕಿನ ಮಾರ್ಗ ಕಂಡಿದೆ. ತಮ್ಮ ಸಮಾಜವನ್ನು ಹೇಗೆ ಗ್ರಹಿಸಿ ಅಭಿವ್ಯಕ್ತಿಸಬೇಕು ಎಂಬ ಕಲಿಕೆಗೂ ಅವರ ಕೃತಿಗಳು ತೆರೆದುಕೊಂಡಿವೆ. ಇದನ್ನು ಪಾಷ ಬಳಸಿಯೂ ಇದ್ದಾರೆ.
ಚಾನ್ಪಾಷ ಅವರ ಕಥೆಗಳ ಮೂಲದ್ರವ್ಯ ಕರುಣೆ, ಪ್ರೀತಿ ಹಾಗು ಹೃದಯ ಮಿಡಿತ. ಈ ದ್ರವ್ಯಕ್ಕೆ ಇನ್ನೂ ಆಳಬೇಕಿದೆ. ಇದನ್ನು ಈ ಹಂತದಲ್ಲಿ ಅಪೇಕ್ಷಿಸುವುದು ತಪ್ಪೇ ಆಗುತ್ತದೆ. ಬೆಳೆಯುವ ಕಾಲವಿದೆ. ಬೆಳೆಯಬಲ್ಲರೆಂಬ ಭರವಸೆಗೆ ಈ ಕಥೆಗಳಿವೆ. ಮಾತು ಮುಗಿಯಿತೆಂದುಕೊಳ್ಳುವಾಗ ಒಂದು ಮಾತು ಉಳಿದಿದೆ. ಅನ್ನಿಸಿದ್ದನ್ನು ಹೇಳಿಬಿಡುವೆ. ಅವರು ತಪ್ಪು ತಿಳಿದರೂ ಚೆಂತೆಯಿಲ್ಲ. ಅದೇನೆಂದರೆ, ಇವರು ಬರೆದುದನ್ನು ಓದಿ, ‘ಏ, ಚೆನ್ನಾಗಿದೆ’ ಎಂದಷ್ಟೆ ಹೇಳಿ ಸುಮ್ಮನಾಗುವವರ ಮಾತುಗಳನ್ನು ಕೇಳಿ ಸುಮ್ಮನಾಗಿಬಿಡಬೇಕು. ತಮ್ಮಲ್ಲೆ ಒಬ್ಬ ವಿಮರ್ಶಕನನ್ನು ಕಂಡುಕೊಳ್ಳಬೇಕು. ಚೆನ್ನಾಗಿರುವುದಕ್ಕೆ ಮೆಚ್ಚುವ, ಚೆನ್ನಾಗಿರದಕ್ಕೆ ‘ಮುನಿವ’ ಒಂದಿಬ್ಬರನ್ನು ಹುಡುಕಿಕೊಳ್ಳಬೇಕು. ಈ ಮಾತಿಗೆ ಚಾನ್ಪಾಷ ಒಂದು ನೆಪವಷ್ಟೆ. ಬಹಳಷ್ಟು ಜನ ಯುವ ಲೇಖಕರು ಹಾಳಾಗುವುದು ಇಂಥ ಅಭಿಪ್ರಾಯಿಗರಿಂದ. ಇನ್ನೊಂದು ಮಾತೆಂದರೆ ಇವರು ಭಾಷೆಯ ಬಗ್ಗೆ ಇನ್ನಷ್ಟು ಎಚ್ಚರವಹಿಸಬೇಕು. ಮುಂದೆ ಮುಂದೆ ಇದೂ ಆದೀತು.
– ಸ.ರಘುನಾಥ
ಲೇಖಕರ ಮಾತು

ನಾನು ಕತೆಗಳನ್ನೇಕೆ ಬರೆದೆ? ಈ ಕತೆಗಳನ್ನೇ ಏಕೆ ಬರೆದೆ? ಎಂದು ಒಮ್ಮೊಮ್ಮೆ ಪ್ರಶ್ನಿಸಿಕೊಂಡಾಗ ಮನ ಮೂಕವಾಗಿಬಿಡುತ್ತದೆ. ನಾನು ಕಂಡ-ಕೇಳಿದ ಕೆಲವು ಘಟನೆಗಳು ನನ್ನನ್ನು ಬಹಳವಾಗಿ ಕಾಡುತ್ತಿದ್ದವು. ಅದೇಕೊ ನನ್ನಲ್ಲಿ ಹುಟ್ಟಿದ ಪ್ರಶ್ನೆಗಳಿಗೆ ಉತ್ತರ ಹುಡುಕದೆ ಸುಮ್ಮನೆ ಕೂರಲು ಆಗಲಿಲ್ಲ; ಅವು ಹಾಗೆ ಕೂರಲು ಬಿಡಲೂ ಇಲ್ಲ. ಅವುಗಳ ಬೆನ್ನುಹತ್ತಿ ಹೊರಟ ಫಲವಾಗಿ ಅವು ಕತೆಗಳಾಗಿ ರೂಪ ತಳೆದವು. ಬಹುಶಃ ಅವುಗಳಿಗೆ ಕಥಾನಕವೇ ಸೂಕ್ತ ಎನಿಸಿರಬಹುದೆನೋ? ಕತೆಯೋ, ವ್ಯಥೆಯೋ ಬರೆದಿದ್ದೇನೆ. ಇದು ನನ್ನ ಚೊಚ್ಚಲ ಕಥಾ ಸಂಕಲನ. ನಾನು ಎಂ.ಎ ವ್ಯಾಸಂಗ ಮಾಡುತ್ತಿದ್ದಾಗಿನಿಂದ ಈವರೆಗೆ ಬರೆದ ಕಥೆಗಳಲ್ಲಿ ಆರು ಕಥೆಗಳು ಈಗ ಪುಸ್ತಕ ರೂಪ ಪಡೆಯುತ್ತಿರುವುದು ಸಂತಸ ತರುತ್ತಿದೆ.
ಇನ್ನು ಈ ಕತೆಗಳ ಬಗ್ಗೆ ಹೇಳುವುದಾದರೆ; ‘ಅವಳಿಗಿನ್ನೂ ಹದಿನಾರು’ ಕತೆಯಲ್ಲಿನ ‘ಗುಲಾಬ್’ ಮತ್ತು ‘ಸಲ್ಮಾ’ ಜೀವಂತ ಪಾತ್ರಗಳು. ಗುಲಾಬ್ ನನ್ನ ತಾಯಿಯ ಬಾಲ್ಯ ಗೆಳತಿ. ಹನ್ನೆರಡು ಮಕ್ಕಳ ತಾಯಿ. ಒಮ್ಮೆ ನಾನು ಅವರ ಮನೆಗೆ ಹೋಗಿದ್ದಾಗ ಬಾಣಂತಿಯಾಗಿದ್ದ ಈಕೆ ತನ್ನ ಮಗುವಿಗೆ ಕಟ್ಟಿದ ಜೋಳಿಗೆಯ ಪಕ್ಕದಲ್ಲೇ ಅವಳ ಮಗಳೂ ಸಹ ತನ್ನ ಮಗುವಿಗೆ ಜೋಳಿಗೆ ಕಟ್ಟಿ ತೂಗುತ್ತಿದ್ದಳು. ಇವಳು ನನಗಿಂತಲೂ ತುಂಬಾ ಕಿರಿಯವಳು. ಜೋಪಡಿಯಂತಹ ಆ ಚಿಕ್ಕ ಮನೆಯಲ್ಲಿ ಈ ತಾಯಿ-ಮಗಳು ಪಕ್ಕ ಪಕ್ಕದಲ್ಲಿ ಜೋಳಿಗೆ ಕಟ್ಟಿ ತಮ್ಮ ಮಕ್ಕಳನ್ನು ತೂಗುತ್ತಿದ್ದದನ್ನು ಕಂಡು ಎದೆ ಚುರುಕ್ ಎಂದಿತು. ಕೆಲವು ದಿನಗಳ ನಂತರ ಇದು ಕತೆಯಾಗಿ ರೂಪತಾಳಿತು.
ನನ್ನ ದೊಡ್ಡಪ್ಪ ಒಮ್ಮೆ ಮನೆಗೆ ಬಂದಿದ್ದಾಗ ಬೆಂಗಳೂರಿನಲ್ಲಿ ನಡೆದ ಒಂದು ಘಟನೆಯನ್ನು ವಿವರಿಸಿದರು. ಅದು ‘ಜಂಗಮಕ್ಕೆ ಅಳಿವಿಲ್ಲ’ ಕತೆಯಾಯಿತು. ಈ ಕತೆಯಲ್ಲಿ ಬರುವ ಖಲಂದರ್ ಸಾಹೇಬರು – ರಶೀದ್ ಜೀವಂತ ಪಾತ್ರಗಳು. ನಮಾಜ಼್ ಗೆ ಔತಣ ಕೊಡಲು ಹೋಗಿದ್ದಾಗ ಅವರ ಮುಖಕ್ಕೆ ಎಂಜಲು ಉಗಿದದ್ದು, ಪಶ್ಚಾತಾಪ ಪಟ್ಟು ಮಸೀದಿಗೆ-ನಮಾಜ಼್ ಗೆ ಬಂದದ್ದು ಕೇಳಿದ ಘಳಿಗೆಯಿಂದಲೇ ಕತೆಯ ರೂಪ ತಳೆಯುತ್ತಬಂದು ಬಹಳ ದಿನ ಕಾಡಿ ಕತೆಯಾಯಿತು.
ದೇವನಹಳ್ಳಿಯ ಬಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ಸುತ್ತ ಮುತ್ತಲಿನ ಹಳ್ಳಿಗಳಲ್ಲಿನ ಜನರು ತಮ್ಮ ಜಮೀನುಗಳನ್ನು ಕೋಟಿಗಟ್ಟಲೆ ರೂಪಾಯಿಗಳಿಗೆ ಮಾರಿ ಬೀಗುತ್ತಿದ್ದುದನ್ನು ಕಂಡು ‘ಜನ ಮರುಳೋ…’ ಕತೆ ಬರೆದರೆ; ರಾತ್ರಿವೇಳೆಯ ಪ್ರಯಾಣದಲ್ಲಿ ಬೈಕ್ ಕೆಟ್ಟುಹೋಗಿ ಪಟ್ಟ ಪಾಡನ್ನು ಕಂಡು ‘ಬಿಡುಗಡೆ’ ಕತೆ ಬರೆದೆ. ‘ಸಂಭ್ರಮ’ ನಾನು ಬರೆದ ಮೊದಲ ಕತೆ. ಎಂ.ಎ ಓದುತ್ತಿರುವಾಗ ಬೆಂಗಳೂರಿನ ಸಂತ ಜೋಸೆಫ್ರ ಕಾಲೇಜಿನ ಕನ್ನಡ ಸಂಘದವರು ಏರ್ಪಡಿಸಿದ್ದ ರಾಜ್ಯ ಮಟ್ಟದ ಕಥಾಸ್ಪರ್ಧೆಗೆ ಬರೆದದ್ದು. ಈ ಕತೆ ಆಯ್ಕೆಯಾಗಿ; ಇದೇ ಕತೆಯ ಹೆಸರಿನಲ್ಲಿ ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಕಥೆಗಳ ಸಂಕಲನವನ್ನು ಅವರು ಪ್ರಕಟಿಸಿದರು.
ನನ್ನ ಬಾಲ್ಯ ಗೆಳೆಯ ರಾಜೇಂದ್ರ ತನ್ನ ಊರಿನಿಂದ ಬಂಗಾರಪೇಟೆಗೆ ಬರುತ್ತಿರುವಾಗ ದಾರಿಯಲ್ಲಿ ಕಳೆದುಕೊಂಡ ಪರ್ಸನ್ನು ಹುಡುಕಿಕೊಂಡು ಹೋಗಿ ಊರುಗಳಲ್ಲಿ ವಿಚಾರಿಸುತ್ತಿರುವಾಗ ಆ ಊರಿನ ಯುವಕನೊಬ್ಬ ತನಗೆ ಸಿಕ್ಕಿದ ಆ ಪರ್ಸನ್ನು ಹಿಂತಿರುಗಿಸಿದ. ಆ ಪರ್ಸಿನಲ್ಲಿ ಅವನ ಒಂದು ತಿಂಗಳ ಸಂಬಳ, ಮುಖ್ಯ ದಾಖಲೆಗಳಿದ್ದವು. ಸಂತೋಷದಿಂದ ಅವನಿಗೆ ಐನೂರು ರೂಪಾಯಿ ನೀಡಿದ. ಇದು ‘ಕಪ್ಪು ಬಣ್ಣದ ಪರ್ಸು’ ಕತೆಗೆ ಸ್ಪೂರ್ತಿಯಾಯಿತು.
ಈ ಕತೆಗಳು ಪುಸ್ತಕ ರೂಪ ಪಡೆಯುತ್ತಿರುವಾಗ ಕತೆಗಳನ್ನು ತಿದ್ದಿ ತೀಡಿ ಸಲಹೆ ಪ್ರೋತ್ಸಾಹಗಳನ್ನು ನೀಡಿ ಅಕ್ಕರೆಯಿಂದ ಮುನ್ನುಡಿಯನ್ನು ಬರೆದುಕೊಟ್ಟ ಶ್ರೀ ಸ. ರಘುನಾಥ ರವರಿಗೆ, ನನ್ನ ಹಿತೈಷಿಗಳಾಗಿ, ಮಾರ್ಗದರ್ಶಕರಾಗಿ ಪ್ರೋತ್ಸಾಹ ನೀಡುತ್ತ ಪ್ರೀತಿಯಿಂದ ಬೆನ್ನುಡಿ ಬರೆದುಕೊಟ್ಟ ನನ್ನ ವಿದ್ಯಾಗುರುಗಳಾದ ಶ್ರೀ ಸಿ.ಎ.ರಮೇಶ್ ರವರಿಗೆ, ನನ್ನ ಬರವಣಿಗೆಯ ಮೊದಲ ಓದುಗರಾಗಿ ಮಾರ್ಗದರ್ಶಕರಾಗಿ ಪ್ರೋತ್ಸಾಹ ನೀಡಿ ಪ್ರೀತಿಯಿಂದ ಬೆನ್ನುಡಿ ಬರೆದುಕೊಟ್ಟ ಆತ್ಮೀಯರಾದ ಶ್ರೀ ಜೆ.ಜಿ.ನಾಗರಾಜ್ ರವರಿಗೆ, ಅಂದವಾದ ಮುಖಪುಟ ಬರೆದುಕೊಟ್ಟು ಪ್ರೋತ್ಸಾಹ ನೀಡಿದ ಶ್ರೀ ಅರವಿಂದ ಕಟ್ಟಿ ರವರಿಗೆ, ನನ್ನ ಬಾಳಲ್ಲಿ ಸಾಹಿತ್ಯ ದೀವಿಗೆ ಬೆಳಗಿಸಿ ಹೊಸ ಹಾದಿ ತೋರಿಸಿಕೊಟ್ಟು ಪ್ರೋತ್ಸಾಹಿಸುತ್ತಿರುವ ನನ್ನ ವಿದ್ಯಾಗುರುಗಳಾದ ಶ್ರೀ ಹೊ.ನ.ನೀಲಕಂಠೇಗೌಡ ರವರಿಗೆ, ಡಿ.ಟಿ.ಪಿ. ಮಾಡಿಕೊಟ್ಟ ಹೆಚ್.ಎಸ್. ಗ್ರಾಫಿಕ್ಸ್ ರವರಿಗೆ, ಅಂದವಾಗಿ ಮುದ್ರಿಸಿಕೊಟ್ಟ ಗ್ರೀಷ್ಮಾ ಪ್ರಿಂಟರ್ಸ್ ರವರಿಗೆ ಹಾಗೂ ಎಲ್ಲಾ ಆತ್ಮೀಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
– ಕಾ.ಹು. ಚಾನ್ಪಾಷ
 

‍ಲೇಖಕರು G

April 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: