ನಾನು ನೋಡಿದ ’ಡೈರೆಕ್ಟರ್ ಸ್ಪೆಷಲ್’
ವಿಜಯ್ ಹೂಗಾರ್
ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳು ಕನ್ನಡದ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ನಿಲ್ಲಿಸಿದ ಹತಾಶ ನಿರ್ದೇಶಕ ಗಾಂಧಿನಗರದ ಮೇಲೆ ಕಥೆ ಬರೆಯುತ್ತೇನೆ ಅಂತ ಸುದ್ದಿ ಮಾಡಿ,ನಂತರ ಕಥೆಯ ದಿಕ್ಕು ಬದಲಿಸಿ ಡೈರೆಕ್ಟರ್ ಸ್ಪೆಷಲ್ ಅನ್ನೋ ಸಾಮಾನ್ಯ ಕಥೆ ನಮ್ಮ ಮುಂದಿಟ್ಟಿದ್ದಾರೆ. ಅವರ ಹಿಂದಿನ ಎರಡೂ ಚಿತ್ರ ಎಷ್ಟು ಇಷ್ಟ ಪಟ್ಟಿದ್ನೋ ಅಷ್ಟೇ ಈ ಚಿತ್ರ ಇಷ್ಟ ಆಗಲಿಲ್ಲ.ಚಿತ್ರದ ಕೊನೆಯ ದೃಶ್ಯ ಕಣ್ಣಿಗೆ ಬಿದ್ದು ಎಲ್ಲರು ಎದ್ದು ಹೊರಡುವಾಗ, ನನಗಿನ್ನೂ ಚಿತ್ರ ಹೀಗೆ ಹೇಗೆ ಮುಗಿಯಲು ಸಾಧ್ಯ ಇನ್ನು ಮುಂದೆ ಇರಬೇಕು ಅಂತ ಮನಸ್ಸು ಉಳಿದ ಕಥೆಗಾಗಿ ಅಲ್ಲೇ ಹುಡುಕುತಿತ್ತು.
ಪಾತ್ರ ವರ್ಗಕ್ಕೆ ಬಂದರೆ ರಂಗಾಯಣ ರಘು ಚಿತ್ರದ ಅಘೋಷಿತ ನಾಯಕ.ಚಿತ್ರದ ಬೆನ್ನೆಲುಬು.ಆದರೆ, ಆ ಪಾತ್ರ ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದ ಜಗ್ಗೇಶರ ಪಾತ್ರದ extended ವರ್ಷನ್ ಅಂತ ಚಿತ್ರ ಮುಂದುವರೆದಂತೆ ಗೊತ್ತಾಗುತ್ತದೆ.ಚಿತ್ರದ ಹಲವು ಸನ್ನಿವೇಶದಲ್ಲಿ (ಡೈಲಾಗ್ ಡೆಲಿವರಿ) ಜಗ್ಗೇಶರನ್ನ ನೆನಪಿಸುತ್ತದೆ. ಅದಕ್ಕೆ ಕಾರಣ ಒಂದೇ genre ಪಾತ್ರ ಸೃಷ್ಟಿಸಿದಕ್ಕೆನೋ.
ಹೊಸ ಪ್ರತಿಭೆ ನಾಯಕ ಧನಂಜಯ್ ಕನ್ನಡ ಚಿತ್ರರಂಗಕ್ಕೆ ಒಂದು ಕೊಡುಗೆ.ಚಿತ್ರದಲ್ಲಿ ಅವರ ಪ್ರತಿಭೆ ಸಂಪೂರ್ಣವಾಗಿ ತೋರಿಸುವಷ್ಟು ಇರದೇ ಹೋಗಿದ್ದರು ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.ನಾಯಕರಾಗಿ ಹೊರಹೊಮ್ಮುವ ಭರವಸೆಯ ಮೂಡಿಸುತ್ತಾರೆ.
ಇನ್ನು ಚಿತ್ರಕಥೆಗೆ ಬಂದರೆ ಮೊದಲ ದೃಶ್ಯ ನಾಯಕ “ನಾನೇನೋ ಅನ್ಕೊಂಡಿದ್ದೀನಿ , ಅದನ್ನ ಆಗುವಂತೆ ಮಾಡು” ಅಂತ ದೇವರಿಗೆ ಕೈ ಮುಗಿಯುವದರಿಂದ ಶುರುವಾಗುತ್ತದೆ. ಅಲ್ಲಿಂದ ತಂದೆ , ತಾಯಿ , ತಂಗಿ, ಅಣ್ಣ ಅಂತ ತನ್ನದೇ ಹೊಸ ಪರಿವಾರ ಕಟ್ಟುತ್ತಾನೆ. ಎಲ್ಲರ ನಾಮಕರಣದ ಜೊತೆ ತನ್ನ ನಾಮಕರನವು ಮಾಡಿಕೊಳ್ಳುತ್ತಾನೆ. ಹೀಗೆ ಬೇರೆ ಬೇರೆ ಕಡೆಯಿಂದ ಎರವಲು ತಂದ ಸಂಭದಗಳು ಒಂದೆಡೆ ಸೇರಿದಾಗ ಆಗುವ ಸಾಧ್ಯತೆಯೇ ಚಿತ್ರಕಥೆ.
ಹೀಗೆ ಒಂದೇ ಮನೆಯಲ್ಲಿ….ಸಂಭಾಷಣೆಯ ಬಲದ ಮೇಲೆ ನಡೆಯುವ ಚಿತ್ರ ಸಂಭಂದ,ನಂಬಿಕೆ,ಕೊಲೆಯ ಹೊಂಚಿನ ಸುತ್ತ ಸುತ್ತತ್ತದೆ. ಒಂದು ಮನೆಯಲ್ಲಿ ಒಬ್ಬರು ಇನ್ನೊಬ್ಬರ ಮೇಲಿನ ನಂಬಿಕೆ,ಗೌರವ ಯಾವ ಯಾವ ಸಂದರ್ಭದಲ್ಲಿ,ಯಾರ ಯಾರ ಮುಂದೆ ಹೇಗೆ ಬದಲಾಗುತ್ತದೆ, ಅದರಲ್ಲೂ ಸಂಭಂದವಿರದ ವ್ಯಕ್ತಿಗಳಿಗೆ ಕರೆತಂದು ಸಂಭಂದ ಕಲ್ಪಿಸಿ ಅವರ ಮಧ್ಯ ಆಗುವ ತಿಕಲಾಟದ ಮೇಲೆ ಚಿತ್ರ ನಿಂತಿದೆ.
ಚಿತ್ರದಲ್ಲಿ ಮನುಷ್ಯ ಎರಡು ತರಹದ ಬದುಕು ಬದುಕುತ್ತಾನೆ.ಒಂದು ಖಾಸಗಿ ಬದುಕು,ಅದು ಅವನು ತನ್ನ ಅವಶ್ಯಕತೆ,ಸ್ವಾರ್ಥದ ಸಲುವಾಗಿ ತನ್ನ ಮನಸ್ಸಿಗೆ ಮಾತಾಡುವದು,ಅದರಂತೆ ಗೌಪ್ಯವಾಗಿಯೇ ನಡೆದುಕೊಳ್ಳುವದು.ಇನ್ನೊಂದು ಬಾಹ್ಯ ಬದುಕು.ಅವನು ಬೇರೆಯವರ ಜೊತೆ ನಡೆದುಕೊಳ್ಳುವದು,ಇನ್ನೊಂದು ತೋರಿಸುತ್ತ ತನ್ನ ಸ್ವಾರ್ಥ ಸಾಧಿಸುವದು.
ಮನಸ್ಸು ಹೇಗೆ ತನ್ನ ಖಾಸಗಿ ಹಾಗು ಬಾಹ್ಯ ಬದುಕಿನ ಮಧ್ಯ ತೊಳಲಾಡುತ್ತದೆ ಅನ್ನುವದು ಹೇಳಲು ಇಲ್ಲಿ ಯತ್ನಿಸಿದ್ದಾರೆ.
ಚಿತ್ರದಲ್ಲಿ. ಮಗ(ನಾಯಕ) ಮನೆಗೆ ಬಂದರೆ ಎಲ್ಲರ ಬಾಹ್ಯ ಬದುಕು ಅನಾವರಣಗೊಳ್ಳುತ್ತದೆ. ಎಲ್ಲರು ಪ್ರೀತಿಯ ನದಿಯಲ್ಲಿ ತೇಲಿದಂತೆ ಆಪ್ತರಾಗುತ್ತಾರೆ.ಯಾಕೆಂದರೆ ನಾಯಕನೇ ಎಲ್ಲರನ್ನು ಸಾಕುತ್ತಿರುವದು.ಅವನ ಮುಂದೆ ಅನ್ಯೊನ್ಯವಾಗಿದ್ದಂತೆ ತೋರಿಸಿಕೊಳ್ಳುವದು ಅವಶ್ಯಕ. ಅದೇ ಮಗ ಇಲ್ಲದಿರುವಾಗ ಅವರವ ಖಾಸಗಿ ಬದುಕು,ಅವಶ್ಯಕತೆಗಳಿಗೆ ಮುಖ ಮಾಡಿ ನಿಲ್ಲುತ್ತಾರೆ.ಇವು ನಮ್ಮಲ್ಲೇ ಇರುವ ಎರಡು ಮುಖಗಳ ಪಾಯಿಂಟ್ ಆಫ್ ವಿವ್ (POV).ಇದು ಸ್ವಲ್ಪ ಅಸಹಜವಾಗಿ ಕಾಣುವದು ಸಹಜ.ಆದರೆ ಇದೆ ಆ ಕಥೆಯ ಮೂಲ.
ಇನ್ನು ಚಿತ್ರಕಥೆಗೆ ಬಂದರೆ. ಕೊನೆಯವರೆಗೂ ನಾಯಕ ಅನ್ಕೊಂಡಿರುವದಾದರು ಏನು ಅನ್ನುವದು ಇನ್ನು ಬಗೆಹರಿಯದ ಪ್ರಚಂಡ ಪ್ರಶ್ನೆಯಾಗಿ ಉಳಿಯುತ್ತದೆ.ಅವನ ಉದ್ದೇಶ ತಂದೆ ತಾಯಿಯ ಪ್ರೀತಿ ಪಡೆಯುವದಕ್ಕೆ ಹೀಗೆ ಮಾಡಿದ್ನಾ ಅಥವಾ ನಂಬಿಕೆಯಿಂದ ಸಂಭಂದ ಗೆಲ್ಲಬಹುದೇ ಅಥವಾ ಸಂಬಂಧದಲ್ಲಿ ನಂಬಿಕೆಯಿರಬೇಕು ಅನ್ನುವ ಆಪೆಕ್ಷೆಗಾಗಿ ಮಾಡಿದ್ದಾನೆ ಅನ್ನುವದು ತಿಳಿಯುವದಿಲ್ಲ.
ಆದರೆ ಚಿತ್ರದ ಹಲವು ಸನ್ನಿವೇಶಗಳು ನಾಯಕ ಮನೆಯ ಜನರನ್ನ ಪರೋಕ್ಷವಾಗಿ “ದಯವಿಟ್ಟು ನಂಬಿಕೆ ಉಳಿಸಿಕೊಳ್ಳಿ” ಅಂತ ಹೇಳುವ ಪ್ರಯತ್ನ ಮಾಡುತ್ತದೆ. ಮನೆ ಮಂದಿ ಎಲ್ಲರು ಇಸ್ಪಿಟ್ ಆಡುವಾಗ. ಅದನ್ನು ಗಮನಿಸಿ ನಾಯಕ ಆಡಬೇಡಿ ಅಂತ ಹೇಳುವ ಬದಲು,ಅವರ ಜೊತೆ ಆಟ ಆಡಿ ಗೆದ್ದು ಎಚ್ಚರ ನೀಡುತ್ತಾನೆ. ಹಾಗೇ ಕೊಟ್ಟ ದುಡ್ಡು ಪರತ್ ಕೊಡಲಿಲ್ಲ ಅಂತ ಗೆಳೆಯನನ್ನ ಮನೆಗೆ ಕರೆದು ಊಟ ಮಾಡಿಸಿ ನಂತರ ಹೊಡೆದು ದುಡ್ಡು ವಸೂಲಿ ಮಾಡುತ್ತಾನೆ. ಅಂದ್ರೆ ನಂಬಿಕೆಗೆ ಮೋಸ ಮಾಡಬೇಡಿ ಅಂತ ಪರೋಕ್ಷವಾಗಿ ಹೇಳಲು ಯತ್ನಿಸುತ್ತಾನೆ. ಆದರೇ ದುಡ್ಡಿನ ಮುಂದೆ ಯಾವ ಸಂಭಂದ ಏನು ಇಲ್ಲ ಅಂತ ಪಾತ್ರಗಳು ಅದನ್ನು ಲೆಕ್ಕಿಸದೆ ಮುಂದೆ ಹೋಗುತ್ತವೆ.
ಛಾಯಾಗ್ರಹಣ ಕಡೆಗೆ ಗಮನ ಹರಿಸಿದ್ರೆ ಕಡಿಮೆ ಬಜೆಟ್ ಗೆ ತಕ್ಕಂತೆ,ಕಥೆಗೆ ತಕ್ಕಂತೆ ಮೂಡಿಬಂದಿದೆ.ಆದ್ರೆ ಸಂಭಾಷಣೆ ಚಿತ್ರದ ಮಾನ ಕಾಪಾಡಿರುವದಂತು ನಿಜ.ಚಿತ್ರದಲ್ಲಿ ಹಿನ್ನಲೆ ಸಂಗೀತ ಸಮಂಜಸವಾಗಿ ಬಳಸಲಾಗಿದೆ.ಪಾತ್ರಗಳನ್ನು ಕೊನೆಯವರೆಗೂ ತೆಗೆದುಕೊಂಡು ಹೋಗದೆ ಅರ್ದಕ್ಕೆ ಕೈ ಚೆಲ್ಲಿ ನಿಲ್ಲಿಸಿದ ಹಾಗೆ ಫೀಲ್ ಬರುತ್ತದೆ.
ಕೊನೆಯಲ್ಲಿ ಉದ್ಭವಿಸುವ ಫೈಟಿಂಗ್ ಮತ್ತು ಐಟಂ ಸಾಂಗ್ ಎಷ್ಟರ ಮಟ್ಟಿಗೆ ಅವಶ್ಯಕ ಅನ್ನುವದು ಅರ್ಥವಾಗದ ವಿಷಯ. ಎದ್ದೇಳು ಮಂಜುನಾಥ ಚಿತ್ರದಲ್ಲಿ “ಪ್ರಪಂಚವೇ ದೇವರು ಮಾಡಿರುವ ಬಾರು” ಅನ್ನುವ ಐಟಂ ಸಾಂಗ್ ಚಿತ್ರಕಥೆಗೆ ಎಷ್ಟು ಪೂರಕವಾಗಿತ್ತೆಂದರೆ, ಅಲ್ಲಿ ಎಲ್ಲೂ ನಿಮಗೆ ಹಾಡು ತಂದು ತುರುಕಿರುವ ಹಾಗೆ ಅನಿಸುವ ಸಾಧ್ಯತೆಗಳೇ ಇರಲಿಲ್ಲ. ಆದರೆ ಇಲ್ಲಿ ಆ ಫೀಲ್ ಬರುತ್ತದೆ. ಹಾಗೇ ಎದ್ದೇಳು ಮಂಜುನಾಥ್ ಚಿತ್ರದಲ್ಲಿ,ಚಿತ್ರದ ಪ್ರತಿಯೊಂದು ದೃಶ್ಯ ಚಿತ್ರದ ಕ್ಲೈಮಾಕ್ಸ್ ಗಟ್ಟಿಗೊಳಿಸುವದರಲ್ಲಿ ಸಾಗುತ್ತದೆ.ಆದರೆ ಇಲ್ಲಿ ಅದು ಯಾವ ವಿಷಯವು ಲೆಕ್ಕಕ್ಕೆ ಬರದೇ ಇರುವದು ಅರಗಿಸಿಕೊಳ್ಳುವದು ಕಷ್ಟ.
ಮೂರು ವರ್ಷ ಕಾದು ನೋಡುವ ಚಿತ್ರ ಅಲ್ಲ ಆದರೆ ಇದು ಒಂದು ಪ್ರತಿಭಾವಂತ ನಿರ್ದೇಶಕನ ಸಾಧಾರಣ ಚಿತ್ರ ಅಷ್ಟೇ….ಇಷ್ಟಕ್ಕೆ ಮುಗಿಯುವದಿಲ್ಲ.ನಿರ್ದೇಶಕನ ಪ್ರತಿಭೆ ಹೊಸ ಚಿತ್ರಗಳ ಮೂಲಕ ಚಿತ್ರ ಪ್ರೇಮಿಗಳಿಗೆ ಉಣಬಡಿಸುವಂತಾಗಲಿ.
ಚಿತ್ರದ ಬಗ್ಗೆ ಇರುವ ನನ್ನ ಅಭಿಪ್ರಾಯ ವೈಯಕ್ತಿಕ . ನಿಮ್ಮ ಅನಿಸಿಕೆಗಳಿಗೂ ಸ್ವಾಗತ.





ಡೈರೆಕ್ಟರ್ ಸ್ಪೆಷಲ್ ಚಿತ್ರದ ಬಗ್ಗೆ ಒಂದೊಂದು ರೀತಿಯ ಆಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ ಸಿನಿಮಾದೊಳಗೆ ತನ್ನಂತೆಯೇ ಅನಾಥರಾದವರನ್ನು ಕರೆದುಕೊಂಡು ಬಂದು ಅವರೊಳಗೆ ಸಂಬಂಧ ಬೆಸೆದು ತಾನೂ ಒಂದು ಹೆಸರು ಸಂಬಂಧವನ್ನು ನಿಮರ್ಿಸಿಕೊಳ್ಳುವ ನಾಯಕ ಗಾಂಧೀನಗರಕ್ಕೆ ತಮ್ಮ ಪ್ರತಿಭೆಯನ್ನೋ ಅಥವಾ ಇನ್ನೇನನ್ನೂ ನಂಭಿಕೊಂಡು ಬರುವವರ ಪ್ರತಿನಿಧಿ ಎಂದೆನಿಸುತ್ತದೆ. ಸಿನಿಮಾದೊಳಗೆ ಈ ಸಂಬಂಧವನ್ನು ಕಾಣಬೇಕಾದರೆ ಗಾಂಧಿನಗರ ಎಂಬ ಮಾಯಾಬಜಾರ್ ಆನ್ನು ನೋಡಿರಬೇಕು. ಅಲ್ಲಿ ಸಿನಿಮಾದ ನಾಯಕ ಬಯಸೋ ಸಂಬಂಧ ಇದೆಯೋ ಅಥವಾ ಹಣ ಎಂಬುದು ಸಂಬಂಧ ಸೃಷ್ಟಿಸುತ್ತದೋ ಅಥವಾ ಬೇರೆ ಏನು ಎನ್ನುವುದೂ ಕೂಡ ಸಿನಿಮಾದಲ್ಲಿದೆ. ಆದರೆ ಇದು ಡೈರೆಕ್ಟರ್ ಕ್ವಾರ್ಟಸ್ ನಲ್ಲೊಮ್ಮೆ ಹೋಗಿ ಬರಬೇಕು. ಸಿನಿಮಾ ಗಾಂಧೀನಗರದ ಒಳಗನ್ನು ಬಹುದೂರದಿಂದ ತೋರಿಸುವ ಯತ್ನ ಮಾಡುತ್ತದೆ. ಆದರೆ ಗುರು ಅವರ ಹಿಂದಿನ ಎರಡು ಸಿನಿಮಾದಂತೆ ನೇರ ಮಾರ್ಗ ಬಿಟ್ಟು ಇನ್ನೆಲ್ಲೋ ನಿಂತು ಹೇಳುವ ಕೆಲಸ ಮಾಡಿದ್ದಾರೆ. ಯಾರ ಭಯವೋ ನಾ ಕಾಣೆ
In between the monotonous movies of Gandhinagar, ‘director special’ stands tall. As a common movie lover, I enjoyed movie as an entertainment with some thinking, which could be understandable to all. May be because of high expectations about GURUPRASAD, some viewers gets disappointed.