ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈನೋಸಾರ್ ಮತ್ತು ಮಗುವಿನ ಪಾದರಕ್ಷೆ

ಇದು ಡೈನೋಸಾರ್ ಗಳ ಕಾಲ. ‘ಅವಧಿ’ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ.

ಕವಿತೆ, ನೆನಪು, ಮೆಚ್ಚುಗೆ ಎಲ್ಲವೂ ಬರುತ್ತಿದೆ. ಹಾಗೆ ಬಂದ ಒಂದು ಕವಿತೆ ಇಲ್ಲಿದೆ.

ಡೈನೋಸಾರ್ ನಿಮಗೆ ಕಂಡಿದ್ದು ಹೇಗೆ?

ಕವಿತೆಯಾಗಿ ಇದನ್ನು ಮುಂದುವರಿಸಬಹುದೇ ನೋಡಿ..

ರಾಘವೇಂದ್ರ ಜೋಷಿ

ಪ್ರಿಯ ಮಿತ್ರರಾದ ನವೀನ್ ಮಧುಗಿರಿ ಅವರು ಅತಿಸಣ್ಣಕತೆಗಳ ಬಗ್ಗೆ ‘ಅವಧಿ’ ಅಂತರಜಾಲ ತಾಣದಲ್ಲಿ ಒಂದು ಲೇಖನ ಬರೆದಿದ್ದಾರೆ.

ಆಸಕ್ತಿಕರ ಅಂತನಿಸಿತು.

ಹಾಗೆಯೇ ಅವರು ಅರ್ನೆಸ್ಟ್ ಹೆಮ್ಮಿಂಗ್ವೆ ಬರೆದ ಅತಿಸಣ್ಣಕತೆಯಾದ ‘For sale: baby shoes, never worn.’ ಬಗ್ಗೆ ರೆಫರೆನ್ಸ್ ಕೊಡುತ್ತ ಕನ್ನಡದಲ್ಲಿ ಇದನ್ನು ಶ್ರೀಯುತ ದಿವಾಕರ್ ಅವರು ‘ಮಾರಾಟಕ್ಕಿದೆ: ಬಳಸಿಯೇ ಇಲ್ಲದ ಮಗುವಿನ ಪಾದರಕ್ಷೆ.’ ಎಂಬಂತೆ ತರ್ಜುಮೆ ಮಾಡಿದ್ದರ ಬಗ್ಗೆ ಸೂಚಿಸಿದ್ದು ನನ್ನ ಗಮನ ಸೆಳೆಯಿತು.

ನಿಜಕ್ಕೂ ಹೆಮ್ಮಿಂಗ್ವೆಯ ಈ ಒಂದು ಸಾಲಿನ ಕತೆ ಅದ್ಭುತ. ಸ್ನೇಹಿತರ ಜೊತೆ ಹೋಟೆಲೊಂದರಲ್ಲಿ ಊಟ ಮಾಡುವಾಗ ಜಗತ್ತಿನ ಅತಿಸಣ್ಣಕತೆ ಬರೆಯುವದಾಗಿ ಪಂಥ ಕಟ್ಟಿದ ಹೆಮ್ಮಿಂಗ್ವೆ, ಸದರಿ ಕತೆಯನ್ನು ಟಿಶ್ಯೂ ಪೇಪರ್ ಮೇಲೆ ಬರೆದು ಹತ್ತು ಡಾಲರನ್ನು ಜೇಬಿಗಿಳಿಸಿದರು ಅಂತನ್ನುವ ದೃಷ್ಟಾಂತವಿದೆ. ಹಿಂದೊಮ್ಮೆ ನನ್ನ ‘ಮಾಯಾಲಾಂದ್ರ’ದಲ್ಲಿ ಸಣ್ಣಕತೆಗಳ ಬಗ್ಗೆ ಬರೆಯುವಾಗ ನಾನೂ ಈ ಕತೆಯನ್ನು ರೆಫರ್ ಮಾಡಿದ್ದುಂಟು. ಆದರೆ ಆವತ್ತು ನನಗೆ ಇದನ್ನು ಕನ್ನಡದಲ್ಲಿ ತರ್ಜುಮೆ ಮಾಡಲು ಭಯವಾಗಿದ್ದು ನಿಜ. ಹಾಗಾಗಿ ನಾನು ಮೂಲದಲ್ಲಿದ್ದಂತೆಯೇ ಬಳಸಿದ್ದೆ.

ಭಯ ಯಾಕೆಂದರೆ, ತರ್ಜುಮೆ ಮಾಡಿದರೆ ಅದು ಒಂದೇ ಅರ್ಥಕ್ಕೆ ಸೀಮಿತ. ಹೇಳಿಕೇಳಿ ಅದು ಕೇವಲ ಆರು ಪದಗಳ ಕತೆ. ಅದರಲ್ಲೇ ಆರಂಭ, ಮಧ್ಯಂತರ ಮತ್ತು ಉಪಸಂಹಾರ ಬಂದುಹೋಗುತ್ತವೆ. ಹುಡುಕಿದಷ್ಟೂ ನಾನಾ ಅರ್ಥಗಳನ್ನು ಬಿಟ್ಟುಕೊಡುತ್ತ ಓದುಗನನ್ನು ನಿತ್ರಾಣ ಮಾಡುತ್ತ ಹೋಗುವ ಈ ಕತೆಯಲ್ಲಿ ಹಲವಾರು ಪ್ರಶ್ನೆಗಳಿವೆ. ಗುಮಾನಿಗಳಿವೆ. ಇಲ್ಲಿ ‘Never worn’ ಅನ್ನುವದು ಪೆನೆಟ್ರೇಟಿಂಗ್ ಪದ.

ಇಲ್ಲಿ ಮಗುವಿನ ಪಾದರಕ್ಷೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಯಾರು ಮಾರುತ್ತಿದ್ದಾರೆ? ಮಗುವಿನ ಅಪ್ಪನೇ? ಅಮ್ಮನೇ? ಯಾಕಾಗಿ ಮಾರಾಟ ಮಾಡುತ್ತಿದ್ದಾರೆ? ಇಷ್ಟಕ್ಕೂ ಮಗು ಷೂ ಹಾಕುವಷ್ಟು ದೊಡ್ಡದಾಗುವ ಮೊದಲೇ ಸತ್ತುಹೋಯಿತೇ? ಅಥವಾ ಹೊಟ್ಟೆಯೊಳಗಿದ್ದಾಗಲೇ ಸತ್ತಿತ್ತೇ? ಅರೇ, ಮಗುವಿಗಾಗಿ ಅಷ್ಟು ಪ್ರೀತಿಯಿಂದ ಖರೀದಿಸಿದವರು ಮಗು ಸತ್ತಿತು ಅಂತನ್ನುವ ಏಕೈಕ ಕಾರಣಕ್ಕಾಗಿ ಅಷ್ಟು ನಿರ್ಭಾವುಕತೆಯಿಂದ ಆ ಪುಟ್ಟ ಪಾದರಕ್ಷೆಗಳನ್ನು ಮಾರಬಹುದೇ? ಅಥವಾ ಅವರಿಗೆ ಅಷ್ಟೊಂದು ಬಡತನವಿತ್ತೇ? ಅಥವಾ ಮಗುವಿನ ಸಾವು ನೋಡಲಾಗದೇ ತಂದೆತಾಯಿಗಳೂ ಸತ್ತುಹೋಗಿ ಇನ್ಯಾರೋ ಥರ್ಡ್ ಪಾರ್ಟಿ ಇದನ್ನು ಮಾರುತ್ತಿದ್ದಾನೆಯೇ? ಈ ಥರ್ಡ್ ಪಾರ್ಟಿ ಪಕ್ಕಾ ವ್ಯವಹಾರದ ಮನುಷ್ಯನೇ ಇರಬೇಕು. ಇಲ್ಲವಾದಲ್ಲಿ, ಇಷ್ಟು ತೀಕ್ಷ್ಣವಾದ ವಿಶೇಷಣ ಬಳಸುತ್ತಿರಲಿಲ್ಲ.

ಹೋಗಲಿ, ಅಂತೂ ಕೊನೆಗೆ ಇಂಥದೊಂದು ಷೂ ಯಾರಾದರೂ ಕೊಂಡುಕೊಂಡರೇ? ಅಷ್ಟು ಪ್ರೈಸ್ ಲೆಸ್ ಪಾದರಕ್ಷೆಗೆ ಎಷ್ಟು ಧೈರ್ಯದ ಮಾನದಂಡ?

ಇಂಥವೇ ಪ್ರಶ್ನೆಗಳು. ಬಹುಶಃ ತರ್ಜುಮೆ ಮಾಡಲು ಹೋದ ನನ್ನನ್ನು ಅಧೀರನನ್ನಾಗಿಸಿದ್ದು ಭಯವಲ್ಲ, ಧೈರ್ಯ!

‍ಲೇಖಕರು sakshi

22 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading