ಡಿ ಎಸ್ ರಾಮಸ್ವಾಮಿ ಅವರ ʼಮೀನು ಬೇಟೆಗೆ ನಿಂತ ದೋಣಿ ಸಾಲುʼ

ಡಿ ವಿ ಪ್ರಹ್ಲಾದ್

ನನ್ನ ಮಿತ್ರ ಸದ್ಯ ಅರಸೀಕೆರೆಯ ವಾಸಿಯಾದ ಕವಿ ಡಿ.ಎಸ್. ರಾಮಸ್ವಾಮಿ ಅವರ ನಾಲ್ಕನೇ ಕವನ ಸಂಕಲನ ಇದು. ಕೆಲವು ತಿಂಗಳ ಕೆಳಗೆ ಅವಸರದ ಭೇಟಿಯಲ್ಲಿ ಕಾಫಿಯೊಂದಿಗೆ ಈ ಸಂಕಲನದ ಬಗ್ಗೆ ಚರ್ಚಿಸಿದ್ದರು. ಮುನ್ನುಡಿ ಬರೆಯಿರಿ ಎಂದಿದ್ದರು. ಅವರು ಪ್ರತಿ ಬಾರಿ ಕರೆ ಮಾಡಿದಾಗಲೂ ‘ನನಗಿಂತಲೂ ಉತ್ತಮರು ಈ ಕೆಲಸಕ್ಕೆ ಬೇಕಾದಷ್ಟು ಮಂದಿ ಇದ್ದಾರೆ ನೋಡಿ’ ಅಂತಲೇ ಗೋಗರೆದರೂ ಹಿಡಿದ ತಮ್ಮ ಪಟ್ಟನ್ನು ಅವರು ಸಡಿಲಿಸಲಿಲ್ಲ. ಗೌರಿಹಬ್ಬದ ಮುತ್ತೈದೆಯರು ಪರಸ್ಪರ ಬಾಗಿನ ಕೊಟ್ಟುಕೊಂಡ ಹಾಗೆ ಈಗ್ಗೆ ಎರಡು ವರ್ಷಗಳ ಹಿಂದೆ ಅವರು ನನ್ನ ಕವನ ಸಂಕಲನಕ್ಕೆ ಹಿನ್ನುಡಿ ಬರೆದರು; ನಾನು ಈಗ ಅವರ ಕವಿತಾ ಸಂಕಲನಕ್ಕೆ ಮುನ್ನುಡಿ ಬರೆಯುತ್ತಿರುವೆ. ಅಲ್ಲಿಗೆ ಮುಯ್ಯಿಗೆ ಮುಯ್ಯಿ ತೀರಿತು!

ಕವಿತೆಗಳ ವಿಷಯದಲ್ಲಿ ರಾಮಸ್ವಾಮಿಯವರದ್ದು ತೀವ್ರವಾದ ಕಾವ್ಯಪ್ರೀತಿ, ಪ್ರೀತಿಸಿದ್ದಷ್ಟೇ ಅಲ್ಲದೆ, ಹೊಸ ಕವಿಗಳನ್ನು ಓದುವುದು, ಆ ಕುರಿತು ಬರೆಯುವುದು ಹಾಗೂ ಆ ಕವಿಗಳನ್ನು ಪ್ರೋತ್ಸಾಹಿಸುವುದು ರಾಮಸ್ವಾಮಿಯವರ ಪ್ರಿಯವಾದ ಕೆಲಸ. ಕಾವ್ಯಕಾರಣದಲ್ಲಿ ನಾವಿಬ್ಬರೂ ಸಮಕಾಲೀನರು; ಒಂದೇ ವಾರಿಗೆಯವರು.

ಅರವತ್ತರದ ದಶಕದ ಉತ್ತರಾರ್ಧದಲ್ಲಿ ಅವತರಿಸಿದವರು, ಎಪ್ಪತ್ತರ ದಶಕದಲ್ಲಿ ಬಾಲ್ಯ, ಎಂಭತ್ತರದ ದಶಕದ ಸಮೃದ್ಧ ಹರಯ ಕಂಡುಂಡ, ತೊಂಭತ್ತರ ದಶಕದ ಜಾಗತೀಕರಣದ ಫಲಾನುಭವಿಗಳು; ಬಹುಬಗೆಯ ಆರ್ಥಿಕ ಸಾಮಾಜಿಕ ರಾಜಕೀಯ ಸ್ಥಿತ್ಯಂತರಗಳಿಗೆ ಸಾಕ್ಷಿಯಾದವರು. ಮನೆಗೊಂದು ಬೈಸಿಕಲ್, ಲ್ಯಾಂಡ್‌ಫೋನ್ ಲಕ್ಷುರಿ ಎನಿಸುವ ಕಾಲಘಟ್ಟದಿಂದ ಸ್ಮಾರ್ಟ್ಫೋನ್, ಎಫ್‌ಬಿ, ಯೂಟ್ಯೂಬ್, ವಾಟ್ಸಾಪ್ ಯುಗದವರೆಗೆ ಪಲ್ಲಟಗಳ ಕಂಡುಂಡವರು.

ಡಿ ಎಸ್ ರಾಮಸ್ವಾಮಿಯವರ ಮೊದಲ ಮೂರು ಸಂಕಲನಗಳ ಮುನ್ನುಡಿ-ಬೆನ್ನುಡಿಗಳನ್ನು ಬರೆದವರು ಅನೇಕ ಹಿರಿಯ ಗಟ್ಟಿ ಲೇಖಕರು, ವಿಮರ್ಶಕರು. ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೂ ಗೌರವಗಳಿಗೂ ಪಾತ್ರರಾಗಿರುವ ಅವರು ಪದ್ಯದ ಜೊತೆಗೆ ಗದ್ಯದಲ್ಲೂ ಕೃಷಿ ನಡೆಸಿ ಯಶಸ್ವಿ ಅನ್ನಿಸಿರುವ ರಾಮಸ್ವಾಮಿಯವರ ಕಾವ್ಯಸಂಕಲನಕ್ಕೆ ವಿಮರ್ಶಾತ್ಮಕ ಮುನ್ನುಡಿಗಿಂತ ಸಹಕವಿಯಾಗಿ ನಾನು ಸ್ಪಂದಿಸಬಹುದೇನೋ!?

‘ಸಂಚಯ’ ಕಾವ್ಯಸ್ಪರ್ಧೆಯ ಮೂಲಕವೇ ಪರಿಚಯವಾಗಿ ಸ್ನೇಹಕ್ಕೆ ತಿರುಗಿದ ರಾಮಸ್ವಾಮಿ  ತಮ್ಮ ಮೊದಲ ಸಂಕಲನ ಕೊಂಚ ತಡವಾಗಿಯೇ ಹೊರತಂದರು. ಅವರ ಮೊದಲ ಕವಿತೆ ೧೯೮೭ರಲ್ಲಿ ‘ಸುದ್ದಿ ಸಂಗಾತಿ’ ಪತ್ರಿಕೆಯಲ್ಲಿ ಪ್ರಕಟಗೊಂಡರೂ ಸಂಚಯವೇ ಪ್ರಕಟಿಸಿದ ಅವರ ಮೊದಲ ಸಂಕಲನ ‘ಮರೆತ ಮಾತು’ ಪ್ರಕಟವಾದದ್ದು ೨೦೦೨ರಲ್ಲಿ.  ಇವರ ಈ ಕಾವ್ಯಯಾನದ ‘ಮೀನು ಬೇಟೆಗೆ ನಿಂತ ದೋಣಿ ಸಾಲು’ ನಾಲ್ಕನೇ ಸಂಕಲನ-ಐವತ್ತಾರು ಕವಿತೆಗಳ ಗುಚ್ಛ.

ಅವರ ವಿಫುಲ ಕಾವ್ಯವನ್ನು ಅಂಕಿಸಂಖ್ಯೆಗಳಲ್ಲಿ ಅಳೆಯಲಾಗದು ಎಂಬ ಅಂಶ ಗಮನದಲ್ಲಿ ಇಟ್ಟುಕೊಂಡರೂ, ಸುಮ್ಮನೆ ಒಂದು ಕಾಲಾಂತರದಲ್ಲಿ ಕಾವ್ಯರಚನೆ ಎನ್ನುವುದರ ಏರಿಳಿತವನ್ನು ಸ್ಥೂಲವಾಗಿ ಗಮನಿಸುವುದಾದಲ್ಲಿ, ರಾಮಸ್ವಾಮಿಯವರ ೩೪ ವರ್ಷಗಳ ಕಾವ್ಯಯಾನದ ಈತನಕದ ಎಲ್ಲಾ ಕವಿತೆಗಳ ಸಂಖ್ಯೆ  ನೂರೈವತ್ತು ಮುಟ್ಟಬಹುದಷ್ಟೇ. ಇದು ಕಾವ್ಯಪ್ರಕಾರದ ಹೆಚ್ಚಳದ ಕಾಲವೋ ಅಥವಾ ಮಾಧ್ಯಮಗಳ ಅಬ್ಬರದಲ್ಲಿ ನಲುಗಿಹೋದ ಇಳಿಕೆಯ ಕಾಲವೋ ಚರ್ಚಿಸಬೇಕಿದೆ.

ಅಡಿಗರಿಗೆ ಮೊದಲ ಬ್ರೇಕ್‌ಥ್ರೂ ಅಥವಾ ಮೊದಲ ದೊಡ್ಡ ಪ್ರಶಸ್ತಿ ಅಂತ ಲಭಿಸಿದ್ದು ಐವತ್ತರ ಆಸುಪಾಸಿಗೆ. ಬೇಂದ್ರೆ ೪೯ರ ನಂತರವೇ ಕರ್ನಾಟಕದಲ್ಲಿ ಮನೆಮಾತಾಗಿದ್ದು. ಇನ್ನು ಉಳಿದವರ ಬಗ್ಗೆ ಹೋಲಿಕೆಯೇ ಉದ್ದವಾಗಬಹುದು. ಈ ಎಲ್ಲಾ ಬಗೆಯ ಲೆಕ್ಕಾಚಾರಗಳನ್ನು ಪಕ್ಕಕ್ಕೆ ಸರಿಸಿ ಬರೀ ರಾಮಸ್ವಾಮಿಯವರ ಕವಿತೆಗಳನ್ನು ಕುರಿತು ಆಲೋಚಿಸಬಹುದಾದರೆ;

ಜಾಗತೀಕರಣೋತ್ತರ ಕಾಲಘಟ್ಟದ ಕಾವ್ಯರಚನೆಯಲ್ಲಿ ಎಲ್ಲಾ ಸಾಹಿತ್ಯ ಚಳವಳಿಗೂ ತಮ್ಮ ಪ್ರಭಾವಗಳನ್ನು ಬೀರಿ ಬರೆಯುವವರಿಗೆ ಅದರಲ್ಲೂ ಅಕಾಡೆಮಿಕ್ ಆಗಿ ಸಾಹಿತ್ಯಚರಿತ್ರೆ ಇತ್ಯಾದಿ ಓದಿಕೊಳ್ಳದೆ ಬೇರೆ ಬೇರೆ ವೃತ್ತಿ ಹೊಂದಿದವರಿಗೆ ಕನ್ನಡದಲ್ಲಿ ಮಿನುಗುತ್ತಿದ್ದ ನಕ್ಷತ್ರಗಳ ಗುಂಪುಗಳ ಸಾಹಿತ್ಯ ಸಂತೆಯಲ್ಲಿ ತನ್ನ ಒಂಟಿಧ್ವನಿ ಕೇಳಬಲ್ಲುದೇ? ಎಂಬ ತಲ್ಲಣ ಇದ್ದುದು ಎದ್ದುಕಾಣುತ್ತದೆ. ತನ್ನನ್ನು ತಾನು ಸ್ಥಾಪಿಸಿಕೊಳ್ಳಬೇಕು ಎನ್ನುವ ತುಡಿತ ಕಾಣಬರುತ್ತದೆ.

ಮೊದಲ ಸಂಕಲನ ‘ಮರೆತ ಮಾತು’ ಸಂಕಲನದ ಮುನ್ನುಡಿ ಬರೆದ ದೇಶಕುಲಕರ್ಣಿಯವರು, ರಾಮಸ್ವಾಮಿ ಕವಿತೆಗಳಲ್ಲಿ ‘ಈ ಯುಗದ ಅಸ್ಪಷ್ಟ ಆಯಾಮವೊಂದು ತಡಕಾಡುತ್ತಿದೆ. ಬೇರೆ ಬೇರೆ ಭಾವಗಳನ್ನು ಅರ್ಥಗಳನ್ನು ಅವರ ಕಾವ್ಯ ಬಿಂಬಿಸಿದರೂ ನಮಗೆಲ್ಲಾ ರೂಢಿಯಾದ ಒಂದು ಬಗೆಯ ಉದ್ವಿಗ್ನತೆಯಿಂದ ಹೊರಟು ಕಿಚ್ಚು ಹೊತ್ತಿಸುವ ಪರಿಯನ್ನು ಅದು ಕಾಣಿ ಸದಿರುವುದೇ ಇಲ್ಲಿಯ ಘನಾಂಶವಾಗಿದೆ. ಸಮಾಧಾನ ಚಿತ್ತದಿಂದಲೇ ಹುಟ್ಟುತ್ತ ಸಮಾಧಾನದ ಗತಿಯಲ್ಲೇ ಸಾಗುತ್ತಾ ಸಮಾಧಾನದ ಸ್ಥಿತಿಯನ್ನು ಅದು ಮುಟುತ್ತದೆ’ ಎಂದು ಗುರುತಿಸುತ್ತಾರೆ. ಕಾವ್ಯರಚನೆಯ ಬಗೆಗೆ ಒಟ್ಟಂದದ ಒಂದು ಅಚ್ಚುಕಟ್ಟುತನದ ಹಾಗೂ ನಿರುದ್ವಿಗ್ನವಾದ ಹೇಳುವ ವಿಧಾನ ಅದರಲ್ಲಿ ಗುರುತಿಸಬಹುದಾಗಿದೆ.

ರಾಮಸ್ವಾಮಿ ಅವರ ಎರಡನೇ ಸಂಕಲನ ‘ಉಳಿದ ಪ್ರತಿಮೆಗಳು’ (೨೦೦೭) ಮುನ್ನುಡಿಯಲ್ಲಿ ಅಡಿಗ ಹಾಗೂ ಕೆ.ಎಸ್.ನ. ಅವರ ಓದಿನ ಹಾಗೂ ಅನುಕರಣೆಯ ದಟ್ಟ ಪ್ರಭಾವಳಿಯನ್ನು ಇವರ ಕಾವ್ಯದಲ್ಲಿ ಗುರುತಿಸುವ ಪ್ರೊ. ಎಚ್.ಎಸ್. ರಾಘವೇಂದ್ರರಾವ್ ಅವರು, ಆಶಯ ರಿಕ್ತತೆಯ ಬಿಕ್ಕಟ್ಟನ್ನು ಗುರುತಿಸುತ್ತಾರೆ. ‘ವಸ್ತುಲೋಕದ ಒಳಗೆ ಅಡಗಿರುವ ಕಾವ್ಯವನ್ನು ಹೊರಗೆ ತರಬೇಕಾದರೆ, ಸ್ವಕೇಂದ್ರಮುಕ್ತಿಯನ್ನು ಪಡೆದಿರುವ ಕವಿಯು ಬೇಕು ಮತ್ತು ಭಾವನಿರ್ಲಿಪ್ತವಾದ ಪರಿಭಾವನೆ ಇರಬೇಕು. ಇದನ್ನು ರಾಮಸ್ವಾಮಿಯವರು ಸಾಧಿಸಬಲ್ಲರೆಂಬ ಖಚಿತವಾದ ನಂಬಿಕೆ ನನಗಿದೆ’ ಎನ್ನುತ್ತಾರೆ, ಎಚ್ಚೆಸ್ಸಾರ್.

ಈ ಕೃತಿಯ ಮೂಲಕ ಅವರು ಸಾಧಿಸಿದ ಕಾವ್ಯದ ಗುಣಾತ್ಮಕ ಜಂಪ್ ಗಮನೀಯವಾದದ್ದು. ಮೊದಲ ಸಂಕಲನ ಹುಟ್ಟಿಸಿದ ಆತ್ಮವಿಶ್ವಾಸ ಹಾಗು ಅವರ ಪ್ರಯೋಗಶೀಲತೆ ಈ ಸಂಕಲನದ ಕವಿತೆಗಳಲ್ಲಿ ಎದ್ದುಕಾಣುತ್ತದೆ. ನವ್ಯಕಾವ್ಯದ ದಟ್ಟನೆರಳಿನ ಕವಿತೆಗಳು ಗಾಢವಾಗಿ ಸಹಜ ಓದಿಗೆ ಕೆಲವು ದಕ್ಕಿದರೆ, ಮತ್ತೆ ಕೆಲವು ಮತ್ತೆ ಮತ್ತೆ ಓದಿದಾಗ ನಿಧಾನವಾಗಿ ಬಿಡಿಸಿಕೊಳ್ಳತೊಡಗುತ್ತವೆ. ನನ್ನ ಪ್ರಕಾರ ಅವರ ಅತ್ಯುತ್ತಮ ಕಾವ್ಯ ಈ ಸಂಕಲನದಲ್ಲಿ ಕೆನೆಗಟ್ಟಿದೆ.

‘ಅರೆ ನೆರಳೀಗ ಮಾಯವಾಗಿದೆ
ಅದನ್ನೆದುರಿಸದೇ ಕತ್ತಲೆಗೆ ಓಡಿದೆ
ಅವನ ಮುಖದಲ್ಲೊಂದು ಮಂದಹಾಸ
ಮುಂದಿನ ದಾರಿ ಎಷ್ಟು ಸುಸೂತ್ರ!’

-ಎಂದೇ ಮುಗಿಯುವ ಅವನು ಮತ್ತು ನೆರಳು ಕವಿತೆ, ರಾಮಸ್ವಾಮಿಯವರ ಕಾವ್ಯಯಾನ ಮತ್ತಷ್ಟು ಮಾಗಿದ್ದರ ಸೂಚನೆಯೊಂದಿಗೇ ಶುರುವಾಗುತ್ತದೆ. ‘ತೆರೆದರಷ್ಟೇ ಬಾಗಿಲು’ (೨೦೦೭) ಮೂರನೇ ಕವನ ಸಂಕಲನ. ಮೂವತ್ತೊಂದು ಕವಿತೆಗಳ ಈ ಸಂಕಲನ ಅನೇಕ ಸಾರ್ಥಕ ಕವಿತೆಗಳನ್ನು ಹೊಂದಿದೆ. ‘ನವನೀತವಾಗುವುದಕ್ಕೆ’, ‘ಉರಿಯ ಉಯ್ಯಾಲೆಯಲ್ಲಿ’, ‘ನೆಲದ ನಡೆಯ ವಿಧಾನ’ ಮೊದಲಾದ ರಾಮಸ್ವಾಮಿ ಅವರ ಹೆಸರುಳಿಸುವ ಅನೇಕ ಕವಿತೆಗಳಿವೆ. ಅದು ‘ತೆರೆದಷ್ಟೆ ಬಾಗಿಲು’ ಅಲ್ಲ! ಬದಲಾಗಿ ‘ತೆರೆದರಷ್ಟೇ ಬಾಗಿಲು’. ‘ಬಳಕೆಗೆ ಬರಬಲ್ಲ ಉಳಿದ ಪ್ರತಿಮೆಗಳ ಬಾಗಿಲನ್ನು ಇಲ್ಲಿ ಕವಿ ವರ್ತಮಾನದ ಅನುಭವಗಳ ಕೀಲಿಕೈಯಿಂದ ತೆರೆಯುತ್ತಾರೆ’ ಎಂದು ಎಸ್.ಆರ್. ವಿಜಯಶಂಕರ್ ಅವರು ಹಿನ್ನುಡಿಯಲ್ಲಿ ಗುರುತಿಸಿದ್ದಾರೆ.

‘ಮೀನು ಬೇಟೆಗೆ ನಿಂತ ದೋಣಿ ಸಾಲು’ ಸಂಕಲನ ರಾಮಸ್ವಾಮಿಯವರ ಕಳೆದ ಹತ್ತು ವರ್ಷದ ಕಾವ್ಯಯಾನದ ದಾಖಲೆ. ಕವಿತೆ ಎನ್ನುವ ಮೀನು ಬೇಟೆಯಲ್ಲಿ ಮೊದಲಿಗನಾಗಿ ನಿಂತ ದೋಣಿಯ ಕಥೆ, ಬೇಟೆ ನೆಲದ ಮೇಲೆ ನಡೆಯುವ ಕ್ರಿಯೆ; ಮೀನು ಬಲೆಗೆ ಬೀಳುವುದು ಕಡಲ ಕರುಣೆಗೆ ಬಿಟ್ಟ ವಿಷಯ. ಹಾಗಾಗಿ ಪ್ರತಿ ಕವಿತೆಯೂ ಅಜ್ಞಾತದ ತಳಕ್ಕಿಳಿದು ಬಂದವರ ಭಾಗ್ಯವೇ. ಪ್ರತಿ ಕವನ ಸಂಕಲನವೂ ಕವಿಯು ತನ್ನ ಅಂತರಂಗದ ಹೊರೆಯಿಳಿಸಿಕೊಳ್ಳುವ ಮೈಲುಗಲ್ಲು.

ಈ ಸಂಕಲನದ ಮೊದಲ ಕವಿತೆಯೇ ಪಕ್ಕದ ಮನೆಯ ಪುಟ್ಟ ಪೋರನ ತುಂಟಾಟವನ್ನು ಕುರಿತಾಗಿದೆ. ರಾಮಸ್ವಾಮಿ ಕವಿತೆಗಳ ಈ ತನಕದ ಬರವಣಿಗೆಯಲ್ಲಿ ರೂಪುಗೊಂಡಿರುವ ಒಂದು ಹಂದರ ಎಂದರೆ, ಅಸ್ಪಷ್ಟ ವಿವರಗಳನ್ನು ಜೋಡಿಸುತ್ತಾ ಕೊನೆಯಲ್ಲಿ ಒಂದು ಹೇಳಿಕೆಯ ಮೂಲಕ ಆ ಇಡೀ ಕವಿತೆಯ ಆರ್ಥವನ್ನು ಬೇರೆ ಆವರಣದಲ್ಲಿ ಬೆಳಗಿಸುವುದು. ಆದರೆ ಈ ಕವಿತೆಯಲ್ಲಿ ಮೊದಲ ಸಾಲಿನಲ್ಲೇ ಬಿಳಿಗೋಡೆಯ ಮೇಲೆ ಬರೆದ ನವ್ಯ ಚಿತ್ರಕ್ಕೆ ಸಹಿ ಹಾಕುವುದನ್ನು ಮರೆತ ಕಲಾವಿದನ ಹೇಳಿಕೆಯಿಂದ ಮುಂದೆ ಅದರ ವಿವರಗಳನ್ನು ಬಿಡಿಸಿಕೊಳ್ಳುವ ಉಲ್ಟಾ ಕ್ರಮ ಕಾಣಬರುತ್ತದೆ.

ಅಪ್ಪ-ಮಕ್ಕಳ ಘರ್ಷಣೆ ಹಾಗೂ ಪರಸ್ಪರ ವಿಮರ್ಶಾತ್ಮಕ ಬೆಳವಣಿಗೆಯ ಪರಿಕ್ರಮ ಈ ಸಂಕಲನದ ಅನೇಕ ಕವಿತೆಗಳಲ್ಲಿವೆ. ‘ದೊಡ್ಡ ಆಕಾಶದ ಸಣ್ಣ ಪಟ’, ‘ದ್ವಂದ್ವ’, ‘ಅಪ್ಪ ಮತ್ತು ಅಲ್ಜೇಮರ್’ ‘ಅಪ್ಪ ಬದುಕಿರುತ್ತಿದ್ದರೆ’, ‘ಸೀರೆ ಮತ್ತು ಇವಳು’ ಕೂಡಾ ಇದೇ ತಲೆಮಾರುಗಳ ಸಂಘರ್ಷದ ಹಾಗೂ ಸಂಭ್ರಮದ ನಿರೂಪಣೆಯ ಚಿತ್ರವಾಗಿದೆ. ಹಾಗೆ ಈ ಕವಿತೆ ಉಳಿದ ಪ್ರತಿಮೆಗಳು ಸಂಕಲನದ ‘ಅವನು’ ಕವಿತೆಯ ರೂಪಾಂತರದ ಹಾಗೆ ತೋರುತ್ತದೆ. ‘ಅವನು’ ಕವಿತೆ ಅಪ್ಪನ ದೈನಿಕ ಕುರಿತು ಹೇಳಿದರೆ, ಇದು ‘ಅಪ್ಪನ ನೆನಪಿನ ತಬ್ಬಲಿತನ ನಿರೂಪಿಸುತ್ತದೆ. ಹಾಗೆ ‘ಪಿತ್ರಾರ್ಜಿತದ ಮನೆಯಲ್ಲಿ’ ಕೂಡಾ ‘ಹೋಗುವಾಗ ನೀನೇನು ಒಯ್ದೆಯೋ ನನ್ನ ತಂದೆ?’ ಎಂಬ ಪ್ರಶ್ನೆಯಲ್ಲಿ ಮುಕ್ತಾಯವಾಗುತ್ತದೆ.

‘ಕಳಚಿಕೊಳ್ಳಬೇಕು’, ‘ನಿನಗೆ ಹೇಳಿದ್ದು’ ಕವಿತೆಗಳು, ‘ಒಂದು ಸಂಜೆ’, ‘ಸಾವಿನ ಸನ್ನಿಧಿಯಲ್ಲಿ’ ಇವೆಲ್ಲಾ ವಯೋಸಹಜ ಆತ್ಮನಿವೇದನೆಯ ವಸ್ತು ಹೊಂದಿರುವ, ತನ್ನ ಬಗ್ಗೆ ತನಗಿರುವ ಅಪನಂಬಿಕೆಗಳ ನಿವಾರಣೆಯ ಸಾವಿನ ಬಗ್ಗೆ ವಯೋಸಹಜವಾಗಿ ಹುಟ್ಟುವ ಭಯದ ಕುರಿತು ಬರೆದ ಕವಿತೆಗಳಾಗಿವೆ.

‘ಅಕ್ಕನಿಗೆ’ ಕವಿತೆ ಅದರ ಆಶಯ ಹಾಗೂ ವಿವರಗಳಲ್ಲಿ ಪಕ್ಕಾ ಸಂಸಾರಸ್ಥರ ಮ್ಯಾನಿಫೆಸ್ಟೋ ಆಗಿದೆ. ಇಲ್ಲಿದ್ದೇ ಎದುರಿಸಬೇಕು ಎನ್ನುವ ಮಾತಿನದ್ದು ಅಕ್ಕನ ಜನಪ್ರಿಯ ವಚನದ ವಿಭಿನ್ನ ವ್ಯಾಖ್ಯಾನ ಈ ಕವಿತೆ; ಇದರ ಓಟ ಹಾಗೂ ಬದಲಾಗುತ್ತಾ ಸಾಗುವ ಪ್ರತಿಮೆಗಳು ಒಂದು ಚಲಿಸುವ ನುಡಿಚಿತ್ರದ ಹಾಗಿದೆ.

‘ಅಮಲಿನ ಕೊನೆಗೆ’, ‘ಮಧುವನದ ಪಡಸಾಲೆಯಲ್ಲಿ’ ಕವಿತೆಗಳು ಒಂದೇ ಆವರಣದ ನಿರೂಪಣೆ ಹೊಂದಿದ್ದರೂ, ಈ ಸಂಕಲನದ ಅನೇಕ ಕವಿತೆಗಳಲ್ಲಿ ಮತ್ತೆ ಮತ್ತೆ ಬರುವ ಸಂತೆಯನಡುವಿನ ಸಂತನ ಪ್ರಸ್ತಾಪದೊಂದಿಗೆ ಮುಗಿಯುತ್ತದೆ. ಸಾಮಾನ್ಯವಾಗಿ ಲೇಖಕ ಲೋಕದ ಲಹರಿಯ ಗುಂಡುಗೋಷ್ಠಿಯ ದಟ್ಟ ವಿವರಗಳು ಈ ಕವಿತೆಗಳಲ್ಲಿ ಮೇಳೈಸಿವೆ. ಆದರೆ ರಾಮಸ್ವಾಮಿ ತಮ್ಮ ಕವಿತೆಗಳಲ್ಲಿ ಬಿಡಿಸಿಕೊಳ್ಳಲಾಗದ ಸಂತೆಯೊಳಗಿನ ಸಂತತನ ಇನ್ನಷ್ಟು ಮಾಗಬೇಕಾಗಿ ತೋರುತ್ತದೆ.

ಇನ್ನು ರಾಮಸ್ವಾಮಿ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣಬರುವ ಪುರಾಣ ಪಾತ್ರಗಳ ಬಗ್ಗೆ ಹೇಳಲೇ ಬೇಕು. ಇವು ಕೊಂಚ ಸಾಮಾಜಿಕವಾದ ಘೋಷಣೆ ಅನ್ನಿಸಬಲ್ಲ ಕವಿತೆಗಳಾದರೂ ಹಳೆಯ ಪಾತ್ರಗಳನ್ನೇ, ಅವುಗಳ ಸಾಂದರ್ಭಿಕತೆಯನ್ನೇ ಹಿಡಿದು ಹೊಸ ಅರ್ಥಗಳನ್ನು ಹೊಳೆಯಿಸುವ ಪ್ರಯತ್ನ ಮಾಡುತ್ತವೆ. 

ಕೆಲವು ಕಡೆ ವಿಭಿನ್ನ ಅರ್ಥಗಳ ಸಾಧ್ಯತೆ ಶೋಭಿಸಿದರೂ, ಬಹುಸಾಲು ಇವುಗಳ ಚರ್ವಿತಚರ್ವಣಗಳ ಅರ್ಥಗಳನ್ನು ಅದು ಮುಂದುವರೆಸುತ್ತದೆ ಎಂದು ತೋರುತ್ತದೆ. ಪುರಾಣ ಪಾತ್ರಗಳಾದ ಅಹಲ್ಯೆ, ಪರಶುರಾಮ, ನಚಿಕೇತ, ಪ್ರಹ್ಲಾದ, ಇತಿಹಾಸದ ವ್ಯಕ್ತಿಗಳಾದ ಬುದ್ಧ, ಗಾಂಧಿ, ಗಾಂಧಿಯ ಮಗ ಹರಿಲಾಲ್ ಇವೆಲ್ಲವೂ ಬೇರೆ ಬೇರೆ ಸಾಂದರ್ಭಿಕ ಅಗತ್ಯಗಳಾಗಿ ಇವರ ಕವಿತೆಗಳಲ್ಲಿ ಬೆಳಗಿವೆ.

‘ಭಗವಂತನೊಂದಿಗೆ ಒಂದು ಸಂಜೆ’ ಒಂದು ವಿಭಿನ್ನವಾದ ನಿರೂಪಣೆಯ ಕವಿತೆ. ಹೇರಿಕೊಂಡ ನಾಸ್ತಿಕತೆಯ ಆಳದಲ್ಲಿ ಬೇರುಬಿಟ್ಟ ವಯೋಸಹಜ ಆಸ್ತಿಕತೆಗಳ ಸಂಘರ್ಷವಾಗಿ ನನಗಿದು ತೋರುತ್ತದೆ. ರಾಮಸ್ವಾಮಿ ಅವರಿಗೆ ಪರಂಪರೆಯ ಬಗ್ಗೆ ಅಸಮ್ಮತಿಯ ಬಂಡುಕೋರತನವೂ ಇದೆ. ಇದು ಹೇರಿಕೊಂಡ ಅಂದರೆ ಆವಾಹಿತ ಬಂಡುಕೋರತನವಾಗಿಯೇ ನನಗೆ ತೋರುತ್ತದೆ. ಏಕೆಂದರೆ  ತನ್ನ ಕಾಲದ ಸಹ ಕವಿಗಳ ಸಾಲಿಗೆ ಸಲ್ಲಬೇಕೆನ್ನುವ ಒತ್ತಾಸೆ ಇವರ ಕೆಲವು ಕವಿತೆಗಳ ಹೂರಣವಾಗಿ ನನಗೆ ಕಂಡಿದೆ. ಆದಕಾರಣ ರಾಮಸ್ವಾಮಿ ಅವರ ಒಳಗಿನ ಕವಿ ಒಂದು ಕಡೆ ಮಾಗುತ್ತಿದ್ದರೂ, ಮತ್ತೊಂದು ಕಡೆ ಅದರ ನಿರಾಕರಣೆಯ ದ್ವಂದ್ವದಲ್ಲೂ ಬಳಲಿದಂತೆ ಕಂಡುಬರುತ್ತದೆ.

ಸಾಮಾಜಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ರೂಪದ ಎರಡು ಕವಿತೆಗಳಿವೆ. ‘ಕ್ಷಮಿಸಿ, ತಾಳೆಯಾಗುವುದಿಲ್ಲ!’, ‘ಮುಖಪುಸ್ತಕ’ದಲ್ಲಿ ಈ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮನ್ನು ತಾವು ರಾಮಸ್ವಾಮಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಇವು ಕನ್ನಡ ಸಾಹಿತ್ಯದ ಮಾಹಿತಿ ತಲುಪುವ ಸುಲಭ ದಾರಿಗಳಾಗಿವೆಯೇ ಹೊರತು, ಈ ತನಕದ ಸಾಹಿತ್ಯದ ರಾಶಿಗೆ ಗುಣಾತ್ಮಕವಾದದ್ದೇನನ್ನಾದರೂ ಈ ಸಾಮಾಜಿಕ ಮಧ್ಯಮಗಳು ಸೇರಿಸಬಲ್ಲವು ಎಂಬ ವಿಶ್ವಾಸ ನನಗೆ ಹುಟ್ಟುತ್ತಿಲ್ಲ. ಏಕೆಂದರೆ ಮೂಲತಃ ಈ ಸಾಮಾಜಿಕ ಮಾಧ್ಯಮಗಳು ಒಂದು ಮಿತಿಯವರೆಗೆ ಮಾತ್ರ ಚಾಚಬಲ್ಲವು.

‘ನಮ್ಮ ನಮ್ಮ ನಡುವೆ’, ‘ದೇವ ಕಣದ ನಕ್ಷತ್ರ’ ಮೊದಲಾದ ಕವಿತೆಗಳು ಖಗೋಳ ಜ್ಞಾನದ ಹಿನ್ನೆಲೆಯುಳ್ಳ ಕವಿತೆಗಳಾದರೂ ನಕ್ಷತ್ರ ಗ್ರಹಗಳ ಲೋಕದ ವಿವರಗಳಿಂದಾಗಿ ವಿಭಿನ್ನವಾಗಿ ತಮ್ಮ ಅರ್ಥಸಾಧ್ಯತೆಗಳನ್ನು ಹೊಳೆಯಿಸುತ್ತವೆ. ಉಳಿದಂತೆ ರಾಮಸ್ವಾಮಿಯವರಿಗೂ ಅತ್ಯಂತ ಪ್ರಿಯರಾದ ಗೋಪಾಲಕೃಷ್ಣ ಅಡಿಗರ ಕವಿತೆಯ ರೂಪಾಂತರದ ‘ಪ್ರಾರ್ಥನೆ’, ‘ಅಡಿಗ ಸ್ಮರಣೆ’ ಮೊದಲಾದವು ಈ ಹಿಂದಿನ ಸಂಕಲನಗಳ ಅಡಿಗರ ಕಾವ್ಯಾತ್ಮಕ ಜೆರಾಕ್ಸಿನ ರೂಪಾಂತರಗಳು.

ಒಬ್ಬ ಕ್ರಿಕೆಟ್ ಆಟಗಾರನಿಗೆ ಒಂದು ಕ್ರಿಕೆಟ್ ವ್ಯಕ್ತಿತ್ವ ತಂದುಕೊಡುವ ಬ್ಯಾಟಿಂಗ್ ಸ್ಟ್ರೋಕಾಗಲೀ, ಪಂಡಿತ್ ಭೀಮಸೇನ ಜೋಷಿಯಂತಹ ಸಂಗೀತಗಾರರಿಗೆ ಲೀಲಾಜಾಲವಾಗಿ ಮತ್ತೆ ಮತ್ತೆ ಹರಿದುಬರುತ್ತಿದ್ದ ಕೆಲವು ನಿರ್ದಿಷ್ಟ ರಾಗ, ರಚನೆಗಳಾಗಲೀ, ಅವರ ಅತ್ಯುತ್ತಮ ಸಾಧನೆಯ ಫಲಗಳೇ. ಸಚಿನ್, ದ್ರಾವಿಡ್‌ರ ಕೆಲವು ಸ್ಟ್ರೋಕ್‌ಗಳು ಅವರ ಐಡೆಂಟಿಟಿಯ ಪ್ರತೀಕಗಳಾಗೇ ಉಳಿಯುತ್ತವೆ. ಹಾಗೆಯೇ ಪ್ರತಿಬಾರಿಯೂ ಅದು ಆಯಾಚಿತವಾಗಿ ಅವರ ಅರಿವಿಗೂ ಬಾರದೆ ಅಭ್ಯಾಸಬಲದಿಂದ ಬಂದುಬಿಡುತ್ತದೆ. ಹಾಡಿನಲ್ಲಿ ಕ್ರೀಡೆಯಲ್ಲಿ ಆದಂತೆ ಕವಿತೆಯಲ್ಲೂ ಅದು ಸಲ್ಲಬಲ್ಲುದಾದರೂ ಬಹುನಿರೀಕ್ಷೆಯ ಸೂಕ್ಷ್ಮ  ಓದುಗರಿಗೆ ಬಹಳ ಸಲ ನಿರಾಸೆಯಾಗುತ್ತದೆ. ರಾಮಸ್ವಾಮಿಯವರ ಅನೇಕ ಕವಿತೆಗಳಲ್ಲಿನ ವಸ್ತು, ನಿರೂಪಣೆ, ಪ್ರತಿಮೆಗಳು ಹಲವು ಸಲ ಈ ಹಿಂದೆ ಓದಿದ್ದರ ನೆನಪು ಹಾಗೂ ಇದು ಹಿಂದೆ ಇತ್ತಲ್ಲವಾ ಅನ್ನುವ ಪರಿಚಿತತೆ ಮುಖಾಮುಖಿ ಆಗುತ್ತದೆ.

ಮಧ್ಯಮ ವರ್ಗದ ಬ್ರಾಹ್ಮಣ ಕವಿಗಳಿಗೆ ಅವರ ಅನುಭವದ ನೆಲೆಯಲ್ಲೇ ಒಂದು ದೊಡ್ಡ ಸವಾಲಿದೆ. ಆಯಾ ಕವಿಯ ಕೌಟುಂಬಿಕ ಪರಂಪರೆಯ ಜೊತೆಗಿನ ಘರ್ಷಣೆಯ ಜೊತೆಜೊತೆಗೇ ಕಾವ್ಯಪರಂಪರೆ ಕುರಿತೂ ಅವರು ಭಿನ್ನವಾಗಿ ಬರೆಯಲಿಕ್ಕೆ ಬಲು ಸೆಣೆಸಾಡಬೇಕಿದೆ. ಪರಂಪರೆಗಳ ಪರವಾಗಿ ನಿಂತರೆ ಒಂದು ಕಷ್ಟ; ವಿರೋಧಿಸಿ ನಿಂತರೆ ಮತ್ತೊಂದು ಕಷ್ಟದ ಎರಡಲಗಿನ ಕೊಯ್ತ. ತಮ್ಮ ಹಿಂದಿನ ತಲೆಮಾರು ಬರೆದು ಎದುರಿಸಿದ ಸವಾಲುಗಳೇ ಛದ್ಮವೇಷದಲ್ಲಿ ಈಗಿನದ್ದರ ಎದುರಾಗಿದೆ.

ಎಕ್ಕುಂಡಿಯಂಥ ಅದ್ಭುತ ಕವಿಯನ್ನು ಪ್ರಗತಿಪರರೂ ಕಮ್ಯುನಿಸ್ಟರೂ ಪೂರ್ತಿ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಮಾಧ್ವರೂ ಮನಃಪೂರ್ತಿ ಸ್ವೀಕರಿಸಲಿಲ್ಲ. ಆದರೆ ಎಕ್ಕುಂಡಿಯವರು ಎಂದೂ ತಮ್ಮ ಅನುಭವ ಜಗತ್ತಿನ ಧ್ರುವಗಳಿಗೆ ಅತಿ ನಿಷ್ಠರಾಗಿದ್ದರು. ಎಲ್ಲಕ್ಕಿಂತಲೂ ಹೆಚ್ಚಾಗಿ ತಮ್ಮ ಕಾವ್ಯದ ಜಗತ್ತಿನ ಮುಗ್ಧತೆಯನ್ನು ಕೊನೆಯವರೆಗೂ ಕಾಪಿಟ್ಟುಕೊಂಡಿದ್ದರು. ವೈಯಕ್ತಿಕ ಅನುಭವವನ್ನು ಸಾಮಾಜಿಕಗೊಳಿಸುವ ಕೌಶಲ್ಯ ಸಿದ್ಧಿಸಿಕೊಂಡಿದ್ದರು.

‘ಮೀನುಬೇಟೆಗೆ ನಿಂತ ದೋಣಿ ಸಾಲು’ ಕವಿತಾ ಗುಚ್ಛದ ಪ್ರತಿ ಕವಿತೆಯೂ ತನ್ನ ಆಶಯದ ಬಲೆಯನ್ನು ನೀರಿನಾಳಕ್ಕೆ ಹರವಿದೆ. ಅದರಲ್ಲಿ ಪರಂಪರೆ, ವರ್ತಮಾನ, ವೈಯಕ್ತಿಕ, ಸಾಮಾಜಿಕ ಮುಂತಾದ ಸೆಲೆಗಳಿವೆ. ಕೆಲವು ಸಲ ಹತಾಶೆ; ಮತ್ತೆ ಕೆಲವು ಸಲ ಬರೀ ಹೇಳಿಕೆ. ಎಲ್ಲವನ್ನೂ ತಮ್ಮೊಳಗೆ ಮೊಗೆದು ತಂದಿವೆ. ಹೊಸಗಾಲದ ಬೇಟೆಯ ಹಿಂಸೆಯನ್ನು ಅನಿವಾರ್ಯವಾಗಿ ಒಪ್ಪಿ ಸಾಗುವ ತಲೆಮಾರು ನಮ್ಮದಾಗಿದೆ. ದನಿ ಎತ್ತಿದರೆ ಹಣೆಪಟ್ಟಿಯ ಸೇವೆಗಳು ಸದಾ ಸಜ್ಜಾಗಿವೆ. ಹೀಗಾಗಿ ಮಾತು-ಮೌನ ಇವೆರಡರ ನಡುವಿನ ಅನುಸಂಧಾನ ಕವಿಗಡಣಕ್ಕೆ ಬಲುಕಷ್ಟಕರವಾಗಿದೆ.

ಹತ್ತು ವರ್ಷಗಳ ನಂತರ ಮತ್ತೊಂದು ಕವನ ಸಂಕಲನ ಹೊರತರುತ್ತಿರುವ ಕವಿ ಗೆಳೆಯನಿಗೆ ಅಭಿನಂದನೆ.

‍ಲೇಖಕರು Admin

July 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: