ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ. ಜ್ಯೋತಿ ಅವರ ಕಾಡುವ ಕಥೆ: ನಾನು ಮೀನಾಕ್ಷಿ, ಗುರುತು ಸಿಕ್ಕಿತೆ?

-ಡಾ. ಜ್ಯೋತಿ, ತುಮಕೂರು

ನನ್ನ ಹೆಸರು ಮೀನಾಕ್ಷಿ… ಕ್ಷಮಿಸಿ, ಅರ್ಥವಾಯಿತು. ಹೀಗೆ ಪರಿಚಯ ಮಾಡಿಕೊಂಡರೆ ನಿಮಗೆ ಗೊತ್ತಾಗಲಿಕ್ಕಿಲ್ಲ ಅನ್ನಿಸುತ್ತೆ. ಹೋಗಲಿ, ಮೊಂಡಾಗಿರುವ ನನ್ನ ಮೂಗು ನೋಡಿದರೆ ಏನಾದರೂ ಹೊಳೆದೀತೇ? ಪರವಾಗಿಲ್ಲ ಬಿಡಿ. ಸಾವಿರಾರು ವರ್ಷಗಳಿಂದ, ನನ್ನನ್ನು ಕುರೂಪಿ ರಾಕ್ಷಸಿಯೆಂದೇ ಹೇಳುತ್ತಾ ಬಂದಿದ್ದೀರಿ. ಹಾಗಾಗಿ, ಈ ಸಾಮಾನ್ಯ ಹೆಂಗಸಿನ ರೂಪದಲ್ಲಿ ನನ್ನ ಗುರುತು ಸಿಗಲಿಕ್ಕಿಲ್ಲ ನಿಮಗೆ.

ನಾನು ಅವಳೇ, ನೀವೆಲ್ಲ ಧೂರ್ತ ಹೆಂಗಸೆಂದು ಬಣ್ಣಿಸಿರುವ ಶೂರ್ಪನಖಿ. ಅದೇ, ಚೂಪು ಉಗುರಿನ, ದೊಡ್ಡ ಹೊಟ್ಟೆಯ, ಮೆಳ್ಳೆಗಣ್ಣಿನ, ಕರ್ಕಶ ಧ್ವನಿಯ, ವಿಕಾರ ಮುಖದ ಶೂರ್ಪನಖಿ. ಈಗ ಗೊತ್ತಾಯಿತೇ? ನನಗೆ ನನ್ನ ಹೆತ್ತವರು ಇಟ್ಟಿರುವ ಹೆಸರಿಗಿಂತ, ಈ ದರಿದ್ರ ಹೆಸರಿನಿಂದಲೇ ಗುರುತಿಸುತ್ತೀರಿ ಎಂದು ಗೊತ್ತಿತ್ತು. ಒಂದು ಕಾಲದಲ್ಲಿ ನನ್ನ ಸೌಂದರ್ಯದ ಬಗ್ಗೆ ಬಹಳ ಅಭಿಮಾನವಿತ್ತು. ನನ್ನ ರೂಪ ಕೆಡಿಸಿ ‘ಶೂರ್ಪನಖಿ’ ಮಾಡಿ, ಮುಂದೆ ಅದೇ ಹೆಸರಿಂದ ಶಾಶ್ವತವಾಗಿ ಗುರುತಿಸಿದಾಗ, ಮೊದಮೊದಲು ಬಹಳ ನೋವಾಗುತ್ತಿತ್ತು. ಆಮೇಲೆ, ಕಣ್ಣೀರು ಬತ್ತಿ ಹೋಗುತ್ತ ಬಂತು. ಲೋಕವೇ ಹೀಗೆ, ಎಲ್ಲಾ ತಪ್ಪು ಹೆಣ್ಣಿದೆಂದೇ ಬೆರಳು ತೋರಿಸುತ್ತದೆ. ಒಂದು ಗಂಡಸನ್ನು ಇಷ್ಟಪಟ್ಟಿದ್ದು ತಪ್ಪೇ..? ಗಂಡಸರು, ತಾವು ಇಷ್ಟಪಟ್ಟ ಹೆಂಗಸರನ್ನು ಯಾವ ಪಾಪಪ್ರಜ್ಞೆಯಿಲ್ಲದೆ ಭೋಗಿಸಿದ ಪ್ರಪಂಚವಿದು. ನಾನು ಇಷ್ಟಪಟ್ಟರೆ, ಲೋಕದ ನಿಯಮಕ್ಕೆ ವಿರುದ್ಧವೇ?

ಕೆಲವು ದಿನಗಳಿಂದ, ನಂಗ್ಯಾಕೋ ನನ್ನ ಕಥೆ ಪುನಃ ಹೇಳಬೇಕೆನಿಸುತ್ತಿದೆ. ವರ್ತಮಾನದ ಕಾಲಘಟ್ಟ ಸ್ತ್ರೀ ಸಬಲೀಕರಣಯುಗವೆನ್ನುತ್ತೀರಿ. ಈಗಲಾದರೂ, ನನ್ನ ಬಾಯಿಂದಲೇ ನನ್ನ ಕಥೆ ಕೇಳಿ ಕಿಂಚಿತ್ತೂ ಗೌರವ ಕೊಡುತ್ತೀರೆಂಬ ತುಸು ಆಸೆ. ಜೀವನವಿಡೀ ತುಚ್ಛಿಕಾರವಾಗಿಯೇ ಸಮಾಜ ನನ್ನ ನೋಡಿತು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯೊಬ್ಬಳು, ತನ್ನ ಮನದಿಂಗಿತ ವ್ಯಕ್ತಪಡಿಸಿದ್ದೆ ತಪ್ಪಾಯಿತೇ? ಆ ಒಂದು ತಪ್ಪಿಗಾಗಿ, ಜೀವನವಿಡೀ ನನ್ನ ಕುರೂಪಿ ಮುಖ ತೋರಿಸಲಾಗದೆ ಕತ್ತಲಲ್ಲೇ ಕಳೆದೆ.

ತೇತ್ರಾಯುಗದ ನೀನೇನು ಕಾಲಾತೀತಳೆ? ನೀವು ಅಪನಂಬಿಕೆಯಿಂದ ಪ್ರಶ್ನಿಸಬಹುದು. ತಡಿರಿ. ಒಂದು ನಿಮಿಷ ನಾನು ಅಲ್ಲಿಗೆ ಬರುತ್ತಿದ್ದೇನೆ. ಶಾಂತಿ ಸಿಗದ ಆತ್ಮಗಳು ಮುಕ್ತಿ ಸಿಗುವವರೆಗೆ ತಿರುಗಾಡುತ್ತಲೆ ಇರುತ್ತವೆ. ನನಗಿನ್ನೂ ಮುಕ್ತಿ ಸಿಕ್ಕಿಲ್ಲ. ಹುಡುಕುತ್ತಲೇ ಇದ್ದೇನೆ, ಕನಿಕರಿಸುವ ಹೃದಯಕ್ಕಾಗಿ, ಕಣ್ಣೀರು ಒರೆಸುವ ಕೈಗಾಗಿ, ಸಂತೈಸುವ ತೋಳಿನ ಅಪ್ಪುಗೆಗಾಗಿ.

ಅಯ್ಯೋ… ಹಳೆಯದೆಲ್ಲ ಈಗ್ಯಾಕೆ, ನಮ್ಮದೇ ಸಾಕಷ್ಟಿದೆ ಅನ್ನುತ್ತೀರಾ? ಅದು ಸರೀನೇ. ಈಗ ಕೊರೊನ ವೈರಾಣು ನಿಮ್ಮನ್ನೆಲ್ಲಾ ಮನೆಯಲ್ಲಿ ಕೂರಿಸಿದೆ. ತುಂಬಾ ದಿನದಿಂದ ಟಿವಿ ನೋಡಿ ನೋಡಿ ಬೋರಾಗಿರಬೇಕಲ್ಲವೇ? ಟೈಮ್ ಪಾಸಿಗೆ ಅಂದುಕೊಂಡಾದರೂ ಒಮ್ಮೆ ಕೇಳಿ.

ನಿಮಗೆ ಗೊತ್ತಿದೆಯೇ..? ನಾನಿಲ್ಲದೇ ಹೋಗಿದ್ದರೆ, ರಾಮರಾವಣರ ಯುದ್ಧವೇ ನಡೆಯುತ್ತಿರಲಿಲ್ಲ. ರಾಮನ ಹೆಸರು ಈ ತಲೆಮಾರಿನವರಿಗೆ ತಲುಪುತ್ತಿರಲಿಲ್ಲ. ಆದರೆ, ನನಗೆ ಮಾತ್ರ ಇನ್ನೂ ಮನ್ನಣೆ ಸಿಕ್ಕಿಲ್ಲ. ಎಲ್ಲಿಂದ ಆರಂಭಿಸಲಿ? ಎಲ್ಲದರ ಮೂಲ, ಹುಟ್ಟು ಅನ್ನುತ್ತಾರೆ. ಅಲ್ಲಿಂದಲೇ ಆಗಲಿ…

ನನ್ನಪ್ಪ ಋಷಿ ವಿಶ್ರವ, ಅಮ್ಮ ಸುಂದರಿ ಕೈಕೆಸಿ. ಹುಟ್ಟುವಾಗ ಮುದ್ದಾಗಿ, ಮೀನಿನಂತೆ ದೊಡ್ಡ ಕಣ್ಣುಗಳಿದ್ದವೆಂದು, ಮೀನಾಕ್ಷಿಯೆಂದು ಹೆಸರಿಟ್ಟರು. ಮೂರು ಅಣ್ಣಂದಿರಾದ, ರಾವಣ, ಕುಂಭಕರ್ಣ ಮತ್ತು ವಿಭೀಷಣರ ಒಬ್ಬಳೇ ತಂಗಿ.

ಇನ್ನು, ನನ್ನ ರೂಪದ ವಿಷಯಕ್ಕೆ ಬಂದರೆ, ನಾನು ನೋಡಲು ಹೇಗೆದ್ದೆನೆಂಬ ಕಲ್ಪನೆ ನಿಮಗೆ ಕೊಟ್ಟವರು ಯಾರು? ಈ ಪುರಾಣಗಳು ನಮ್ಮನ್ನು ಚಿತ್ರಿಸಿರುವುದೇ ಹೀಗೆ. ಆರ್ಯರನ್ನು ಶ್ರೇಷ್ಟ, ಸುಂದರ, ಸಜ್ಜನರೆಂದು ವಿಜೃಂಭಿಸಲು ಹೋಗಿ ನಮ್ಮನ್ನು ಕೆಟ್ಟವರು, ಕುರೂಪಿಗಳೆಂದರು. ಅದೆಲ್ಲಾ ಹೇಳುತ್ತಾ ಹೋದರೆ, ಇನ್ನೊಂದು ಕಥೆಯಾಗುತ್ತದೆ. ಅದೊಂದು ಬೇರೆದೇ ರಾಜಕೀಯ. ಹೋಗಲಿ, ನನ್ನ ಕಥೆ ಮುಂದುವರಿಸುತ್ತೇನೆ. ನಿಮಗೆ ಹೆಚ್ಚು ಸಮಯವಿಲ್ಲದಿರಬಹುದು.

ಎಲ್ಲಾ ವೈಭೋಗವಿದ್ದೂ, ನನಗೆ ಅರಮನೆ ಹಿತವಾಗಲಿಲ್ಲ. ನೆಮ್ಮದಿಯ ಅರಸಿ ಹೊರಟವಳಿಗೆ, ಪ್ರೀತಿಯ ಅಮೃತಧಾರೆಯಲ್ಲಿ ತೋಯಿಸಿದವನು, ದಾನವ ರಾಜಕುಮಾರ ದುಷ್ಟಬುದ್ಧಿ. ಆದರೆ, ನನ್ನಣ್ಣ ರಾವಣನಿಗೆ ದಾನವರ ಕಂಡರೆ ಯಾಕೋ ರೋಷ. ಅವನನ್ನು ಸಾಯಿಸಿ ಬಿಡುತ್ತೇನೆ ಎಂದು ಮುನ್ನುಗ್ಗಿ ಹೋದ. ಆದರೆ, ನನಗೆ ನನ್ನ ಪ್ರೀತಿ ಉಳಿಸಿಕೊಳ್ಳುವುದು ಮುಖ್ಯವಾಗಿತ್ತು. ತವರ ಮನೆ ಸಂಪೂರ್ಣ ತೊರೆದು, ಪ್ರೀತಿಸಿದವನೊಂದಿಗೆ ರಸತಳಕ್ಕೆ ಹೋದೆ. ಅಲ್ಲಿ, ಎಲ್ಲವೂ ಚೆನ್ನಾಗಿತ್ತು. ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಗಂಡ, ಮಗು ಶಂಭರಿ. ಹಿಂದೆಂದೂ, ನಾನು ಜೀವನದಲ್ಲಿ ಅಷ್ಟೊಂದು ಖುಷಿಯಾಗಿರಲಿಲ್ಲ.

ಆದರೆ… ಎಲ್ಲಾ ಸುಖ ಒಂದು ಕ್ಷಣದಲ್ಲಿ ನಾಶಮಾಡಿಬಿಟ್ಟ ನನ್ನಣ್ಣ ರಾವಣ. ದಾನವರ ನಾಶ ಮಾಡುವ ಭರದಲ್ಲಿ ದಂಡೆತ್ತಿ ಬಂದವ, ನನ್ನ ವಿಧವೆಯಾಗಿಸಿದ. ಕೇಳಿದರೆ, ಆಕಸ್ಮಿಕವೆಂದ. ಅಂತೂ, ಅವನ ಮಾತುಮೀರಿ ಮದುವೆಯಾಗಿದ್ದಕ್ಕೆ ಸೇಡು ತೀರಿಸಿಕೊಂಡ. ಈ ಕಾಲದಲ್ಲಿ ಅದಕ್ಕೆ ಮರ್ಯಾದಾ ಹತ್ಯೆಯೆನ್ನುತ್ತೀರಲ್ಲವೇ? ಸಾಯಿಸಿದರೆ, ಮನೆತನದ ಮರ್ಯಾದೆ ಉಳಿಯುತ್ತದೆಯೇ?
ನಾನು ಜಗ್ಗಲಿಲ್ಲ ನೋಡಿ. ಶಂಭರಿಯ ಕಂಕುಳಲ್ಲಿ ಹೊತ್ತು ಲಂಕೆಗೆ ಹೋದೆ, ಪ್ರತಿಭಟನೆ ಮಾಡಿದೆ, ನ್ಯಾಯ ಕೇಳಿದೆ. ರಾವಣ ಕಂಪಿಸಿದ, ಕುಳಿತಲ್ಲೇ ಬೆವರಿದ. ಬೇರೆ ದಾರಿಯಿಲ್ಲದೆ, ದಂಡಕಾರಣ್ಯ ನನಗೆ ಒಪ್ಪಿಸಿ, ನೆರವಿಗೆಂದು ಸಹೋದರರಾದ ಕರ ಮತ್ತು ದೂಷಣರನ್ನು ನೇಮಿಸಿ, ಕೈತೊಳೆದುಕೊಂಡ. ಆದರೆ, ನನ್ನ ಕೋಪ ಅಲ್ಲಿಗೆ ತಣಿಯಲಿಲ್ಲ. ಎಳೆಯ ಪ್ರಾಯದಲ್ಲಿ ನನ್ನ ಜೀವನ ಮುಗಿಸಿದವನ ಮೇಲೆ ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ. ಅವನು ಬಹಳ ಬಲಶಾಲಿ, ಸಾಮಾನ್ಯರಿಂದ ಸೋಲಿಸಲು ಸಾಧ್ಯವಿರಲಿಲ್ಲ.

ಅಂತೂ, ದಂಡಕಾರಣ್ಯಕ್ಕೆ ಕೊನೆಗೊಬ್ಬ ಸುರದ್ರೂಪಿ ಬಂದ. ಅವನ ಹಿಂಬಾಲಿಸಿ, ಇನ್ನಿಬ್ಬರು  ಬಂದಿದ್ದರು, ಒಂದು ಸಿಡುಕು ಮುಖದ ಗಂಡಸು, ಮತ್ತೊಂದು ಸುಂದರಿ. ಬಂದವ, ಅಲ್ಲೇ ಬಿಡಾರ ಹೂಡಿದ, ನನ್ನ ಅನುಮತಿ ಕೇಳದೆ. ನನಗೇನು ಸಿಟ್ಟು ಬರಲಿಲ್ಲ. ನೋಡಲು ಸುಂದರ, ಅಜಾನುಬಾಹು. ಅವನ ನೋಡಿದ ತಕ್ಷಣ, ನನ್ನಲ್ಲಿ ಸತ್ತು ಹೋಗಿದ್ದ ಹೆಣ್ತನ ಜಾಗ್ರತವಾಯಿತು. ಆದರೆ, ಪಕ್ಕದಲ್ಲಿದ್ದ ಸುಂದರಿ, ಬಹುಶಃ ಅವನ ಹೆಂಡತಿಯಿರಬೇಕು. ನಾನೇನು ಕಡಿಮೆ? ಅವಳಿಗಿಂತ ಮೈಕೈ ತುಂಬಿಕೊಂಡವಳು. ಅವಳೇನು ಸವಾಲೆನಿಸಲಿಲ್ಲ, ಅಲ್ಲದೆ, ಎರಡನೆಯ ಹೆಂಡತಿಯಾಗಲು ನಾನು ಸಿದ್ಧವಿದ್ದೇ. ಏನಾದರು ಆಗಲಿ, ಮನಸಿಗನಿಸಿದ್ದನ್ನು ಕೇಳಿ ಬಿಡಬೇಕು. ನಾವು ರಾಕ್ಷಸರು ಹಾಗೆ, ನೇರ ಮಾತು. ಅವನ ಕಣ್ಣಲ್ಲಿ ಕಣ್ಣಿಟ್ಟು ಧೈರ್ಯವಾಗಿ, ‘ನನ್ನವನಾಗು’ ಎಂದೆ. ಅವನು ಆಗುವುದಿಲ್ಲವೆಂದು ಹೇಳಿದ್ದರೆ ಸಾಕಿತ್ತು, ಆದರೆ, ಕುಹಕವಾಗಿ ನಗುತ್ತ, ‘ನನಗೆ ಬೇಡ, ಬೇಕಿದ್ದರೆ ನನ್ನ ತಮ್ಮನ ಹತ್ತಿರ ಹೋಗಿ ಬೇಡಿಕೊ’ ಎಂದ. ಇವರಿಗೆ, ನಮ್ಮ ಜನಾಂಗದ ಹೆಣ್ಣುಮಕ್ಕಳೆಂದರೆ ಗೌರವವಿಲ್ಲ. ಇವನಿಗೆ ಬೇಡವಾದರೆ, ಬೇರೊಬ್ಬನ ತೋರಿಸಲು, ಪ್ರೀತಿ ಎಲ್ಲರಲ್ಲಿ ಹುಟ್ಟಲು ಸಾಧ್ಯವೇ?

ನನಗೆ ಅವಮಾನವಾಯಿತು. ಕೋಪದಿಂದ ಅವನ ಹೆಂಡತಿಯ ಮೇಲೆ ಎರಗಲು ಧಾವಿಸಿದೆ. ಅವನು ಹೆಂಡತಿಗೆ ತಡೆಗೋಡೆಯಂತೆ ಅಡ್ಡನಿಂತು, ಕೂಡಲೇ ತಮ್ಮನ ಕರೆದು, ನನ್ನ ವಿಕಾರಗೊಳಿಸಲು ಆಜ್ಞಾಪಿಸಿದ. ಅಣ್ಣ ಏನು ಆಜ್ಞೆ ಕೊಟ್ಟರೂ ಕುರುಡಾಗಿ ಪರಿಪಾಲಿಸುವ ತಮ್ಮನವ. ನಿರ್ಭಾವುಕನಾಗಿ ನನ್ನ ಜುಟ್ಟು ಹಿಡಿದು, ತನ್ನ ಖಡ್ಗದಿಂದ ನನ್ನ ಮೂಗು, ಎಡಕಿವಿ ಕತ್ತರಿಸಿ, ನನ್ನ ಸೌಂದರ್ಯ ನಾಶಮಾಡಿ, ‘ಶೂರ್ಪನಖಿ’ ಮಾಡಿದ. ನಾನು ನೋವಿನಿಂದ ಕಿರುಚುತ್ತ ನೆಲದಲ್ಲಿ ಬಿದ್ದು ಒದ್ದಾಡುತಿದ್ದರೂ, ಅಣ್ಣತಮ್ಮಂದಿರು, ಏನು ಆಗಿಲ್ಲವೆಂಬಂತೆ ಹೊರಟು ಹೋದರು.

ನಾನು ನೋವಿನಿಂದ ಬೊಬ್ಬಿಡುತ್ತಾ, ಕರ, ದೂಷಣರ ಕರೆದು ವಿಷಯ ಹೇಳಿದೆ. ಅವರು ಕೂಡಲೇ ತಮ್ಮ ಸೈನ್ಯದೊಂದಿಗೆ ಎದುರಿಸಲು ಹೋದರು. ನನ್ನ ವಿಕಾರರೂಪ ನೋಡಿ ಮಗು ಶಂಭರಿ ಕುಸಿದು ಕುಳಿತ. ಆವೇಶದಿಂದ, ಅವರ ಹಿಂದೆ ತಾನು ಓಡಿ ಹೋಗಿ, ‘ಅಮ್ಮನ ವಿರೂಪಗೊಳಿಸಿದವರ ಮೇಲೆ ಸೇಡು ತೀರಿಸಲು’ ಸೇರಿಕೊಂಡ. ನಾನೆಷ್ಟು ತಡೆದರೂ, ಕೇಳಲಿಲ್ಲ. ಅವನು ಓಡಿಹೋದ ದೃಶ್ಯ, ಇನ್ನೂ ನನ್ನ ಕಣ್ಮುಂದೆಯಿದೆ. ಹೋದವರಾರೂ ಮರಳಿ ಬರಲೇ ಇಲ್ಲ…

ಆ ಅಣ್ಣತಮ್ಮಂದಿರು ಎಲ್ಲರನ್ನು ನಾಶ ಮಾಡಿದರು. ನಾನು ಎಲ್ಲರ ಕಳೆದುಕೊಂಡು ನಿರ್ಗತಿಕಳಾದೆ. ಅಂದಿನಿಂದ, ನನ್ನ ವಿಕಾರ ಮುಖ ನೋಡಿ ಜನ ಕಿರುಚಿ ಓಡಿ ಹೋಗುತ್ತಿದ್ದರು. ‘ಶೂರ್ಪನಖಿ’ ಎಂದು ಅಡ್ಡಹೆಸರಿಟ್ಟರು. ಇದೆಲ್ಲದಕ್ಕೂ ಮೂಲ ಕಾರಣ ರಾವಣ. ಅವನು ನನ್ನ ಗಂಡನನ್ನು ಸಾಯಿಸದಿದ್ದಿದ್ದರೆ ಹೀಗಾಗುತ್ತಿತ್ತೇ? ಕೊನೆಗೂ, ಅವನನ್ನು ಮುಗಿಸಲು ಸರಿಯಾದ ವ್ಯಕ್ತಿಗಳು ಸಿಕ್ಕಿದ್ದಾರೆಯೆಂದರಿತು, ನೋವ ನುಂಗಿಕೊಂಡೆ. ತಾಳ್ಮೆಯಿಂದ, ಶತ್ರುಗಳಿಂದಲೇ ಶತ್ರುಗಳ ನಾಶಮಾಡಬೇಕು. ಯೋಚಿಸಿ, ಯೋಚಿಸಿ, ಒಂದು ಒಳ್ಳೆಯ ಉಪಾಯ ಹೊಳೆಯಿತು.

 

ನಾನು ದಿಢೀರನೆ ಲಂಕೆಗೆ ತೆರಳಿದೆ. ಸುಂದರಿ ಹೆಣ್ಣುಗಳೆಲ್ಲ ತನ್ನ ಭೋಗದ ವಸ್ತುಗಳೆಂದು ತಿಳಿದಿದ್ದ ರಾವಣನಲ್ಲಿ ಹೋಗಿ, ನನ್ನ ವಿರೂಪಗೊಳಿಸಲು ಕಾರಣೀಕರ್ತಳಾದ ಈ ಹೆಣ್ಣುಮಗಳ ಸೌಂದರ್ಯ, ಇರುವುದಕ್ಕಿಂತ ಹೆಚ್ಚಾಗಿ ವರ್ಣಿಸಿದೆ. ನಿರೀಕ್ಷೆಯಂತೆ ಬುಟ್ಟಿಗೆ ಬಿದ್ದ. ನಾನು ಎಷ್ಟ್ಟೆಲ್ಲಾ ಪ್ರಯತ್ನಿಸಿದರೂ ಸಾಧ್ಯವಾಗದ್ದು, ಹೆಣ್ಣಿನ ವರ್ಣನೆಯಿಂದ ಆಯಿತು. ಮಾವ ಮಾರೀಚನ ಸಹಾಯ ಪಡೆದು, ಆ ಹೆಣ್ಣುಮಗಳ ಅಪಹರಿಸಿದ. ಮುಂದಿನ ಕಥೆ ನಿಮಗೆಲ್ಲ ತಿಳಿದಿದೆ. ಅಂದಿನಿಂದ ನಾನು ಲಂಕೆಯಲ್ಲಿ ಉಳಿದೆ, ನಾ ಹಚ್ಚಿದ ಬೆಂಕಿ, ರಾವಣನ ಹೇಗೆ ಸುಡುತ್ತಿದೆಯೆಂದು ನೋಡಲು, ನೋಡಿ ಮನದುಂಬಿಸಿಕೊಳ್ಳಲು. ಆ ಅಣ್ಣತಮ್ಮಂದಿರ ಶಕ್ತಿ ಗೊತ್ತಿದ್ದರಿಂದ, ರಾವಣನ ಅಂತ್ಯ ಇನ್ನು ಆರಂಭವೆಂದುಕೊಂಡೆ. ಹಾಗೆಯೇ ಆಯಿತು. ರಾವಣ ಸತ್ತ. ನಂತರ ವಿಭೀಷಣ ನನಗೆ ಆಸರೆಯಾದ. ಆದರೆ, ನನ್ನ ವಿಕಾರಗೊಳಿಸಿದ ಆ ಅಣ್ಣತಮ್ಮಂದಿರು ಇನ್ನೂ ಅಯೋಧ್ಯಯಲ್ಲಿ ಸುಖವಾಗಿದ್ದರಲ್ಲ, ನನಗೆ ಚಡಪಡಿಕೆಯಾಯಿತು…

ನಾನು ಮತ್ತು ನನ್ನ ಸಹೋದರ ಸಂಬಂಧಿ, ಅಯೋಧ್ಯೆಗೆ ತೆರಳಿ, ಅಗಸ ಮತ್ತವನ ಹೆಂಡತಿಯಂತೆ ವೇಷ ಬದಲಾಯಿಸಿ, ಸರಯೂ ನದಿತೀರದಲ್ಲಿ ಬಟ್ಟೆ ಒಗೆಯುತ್ತಾ, ಜನರಿಗೆ ಕೇಳಿಸುವಂತೆ ಆ ಹೆಂಗಸಿನ ಪಾತಿವ್ರತ್ಯವನ್ನು ಗೇಲಿ ಮಾಡಿದೆವು. ನನ್ನ ಮಾತು, ಆ ಮರ್ಯಾದಸ್ತ ಸಂಸಾರವ ಬೀದಿಗೆ ತರುತ್ತದೆಯೆಂದು ವಿಶ್ವಾಸವಿತ್ತು. ಅಂದುಕೊಂಡಂತೆಯೇ ಆಯಿತು. ಆದರೆ, ಹೊರಗೆ ತಳ್ಳಲ್ಪಟ್ಟ ಆ ಹೆಂಗಸಿನ ಮೇಲೆ ಕನಿಕರ ಹುಟ್ಟಿತು. ಅವಳನ್ನು ಆಶ್ರಮದಲ್ಲಿ ಭೇಟಿಯಾಗಿ, ಲವಕುಶರ ಮುದ್ದಾಡಿ ಬಂದೆ. ನನಗೆ, ಅವಳ ಮೇಲೇನು ಬೇಸರವಿರಲಿಲ್ಲ. ಬಹಳ ಕಷ್ಟ ಅನುಭವಿಸಿದ ಹೆಣ್ಣವಳು. ಎಲ್ಲಾ ಆಟ ಮುಗಿದು, ಲಂಕೆಗೆ ವಾಪಸ್ಸು ಬಂದೆ. ಬಂದವಳಿಗೆ ಜೀವನ ಖಾಲಿಯಾದಂತೆನಿಸಿತು. ಜೀವನವಿಡೀ ಹೋರಾಟ ಮಾಡಿ, ಕೊನೆಗೆ ಸಿಗುವುದು ಬರಿ ನಿಟ್ಟುಸಿರು. ಅತೀವ ಒಂಟಿತನ ಕಾಡತೊಡಗಿತು. ಅರಮನೆ ಖುಷಿ ಕೊಡಲಿಲ್ಲ. ಸಮುದ್ರತೀರದಲ್ಲಿ ಹೆಚ್ಚು ಕಾಲಕಳೆಯಲು ಆರಂಭಿಸಿದೆ. ಹಾಗೆಯೇ ಒಂದು ಸಂಜೆ, ಸಮುದ್ರದ ಅಲೆಗಳಲ್ಲಿ ಲೀನವಾದೆ.

ಕಾಡುವ ನೆನಪುಗಳಿಂದ ನನಗಿನ್ನೂ ಮುಕ್ತಿ ಸಿಕ್ಕಿಲ್ಲ. ಕೆಲದಿನಗಳಿಂದ ಜನರು ಪಿಸುಮಾತನಾಡುವುದು ಕೇಳಿಸಿತು, ‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತಾರೆಂದು’. ರಾಮನ ಘನತೆ ಸಾರುವ ಮಂದಿರದಲ್ಲಿ ನನಗೊಂದು ಸ್ಥಾನ ಬೇಡವೇ? ನನಗೊಂದು ಸಣ್ಣ ಆಸೆ… ಮುಂದೆ, ಅಯೋಧ್ಯೆ ಪರಿಚಯಿಸುವ ಪ್ರತಿ ಮಾರ್ಗದರ್ಶಕ ಹೇಳಬೇಕು ‘ಅಲ್ಲಿ ನೋಡಿ, ಮೀನಾಕ್ಷಿ ಮಂಟಪ. ಅವಳೇ, ರಾಮ ರಾವಣರ ಯುದ್ಧಕ್ಕೆ ಕಾರಣ. ರಾಮಾಯಣದಲ್ಲಿ, ಅವಳ ಪಾತ್ರ ಅನಿವಾರ್ಯವಾಗಿತ್ತು. ಅದಕ್ಕಾಗಿ ಮೂಗು, ಕಿವಿ ಕತ್ತರಿಸಿಕೊಂಡು ಶೂರ್ಪನಖಿಯಾದಳು.’

ಈಗ ಹೇಳಿ, ನನಗೂ ಮುಕ್ತಿ ಸಿಗಬಹುದೇ..?

‍ಲೇಖಕರು nalike

29 July, 2020

2 Comments

  1. Vasundhara k m

    ಕತೆಯನ್ನು ಉತ್ತಮವಾಗಿ ನಿರೂಪಿಸಿದ್ದೀರಿ. ಸಾಕಷ್ಟು ವಿಷಯಗಳು ತಿಳಿದು ಬಂತು. ಧನ್ಯವಾದಗಳು

  2. Prajwal kumar

    Nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading