ಡಾ ಕೆ ಎಸ್ ಚೈತ್ರಾ ಅಂಕಣ – ಹೆಜ್ಜೆ ಮೇಲೆ ಹೆಜ್ಜೆಇಟ್ಟು…

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

10

ಮಣಿಪಾಲದ ಕ್ಯಾಂಪಸ್ ನಲ್ಲಿ ಮೆಡಿಕಲ್, ಡೆಂಟಲ್, ನರ್ಸಿಂಗ್, ಫಾರ್ಮಸಿ ಹೀಗೆ ವಿವಿಧ ಶಾಖೆಗಳ ವಿದ್ಯಾರ್ಥಿ ವೃಂದವೇ ಇತ್ತು. ಬಗೆ ಬಗೆಯ ವೇಷ -ಭೂಷಣ, ಅಲಂಕಾರ ಎಲ್ಲವೂ ಕಾಣಸಿಗುತ್ತಿತ್ತು. ಕಾಲೇಜಿಗೆ ಬರುವಾಗ ಹುಡುಗಿಯರು ಕಾಟನ್ ಸೀರೆಯಿಂದ ಹಿಡಿದು ಲಂಗ-ದಾವಣಿ, ಚೂಡಿದಾರ್, ಪ್ಯಾಂಟ್, ಸ್ಕರ್ಟ್ (ಮಂಡಿಯ ತನಕ ಉದ್ದವಿರುವುದು ಕಡ್ಡಾಯವಾಗಿತ್ತು) ಎಲ್ಲವನ್ನೂ ಧರಿಸುತ್ತಿದ್ದರು.

ಮಲೇಷ್ಯಾ, ಆಫ್ರಿಕಾ ಮತ್ತು ಕೇರಳದಿಂದ ಬಂದ ಕೆಲವು ಹುಡುಗಿಯರು ಹಿಜಾಬ್‌ ಧರಿಸುತ್ತಿದ್ದರು. ಹುಡುಗರು ಪ್ಯಾಂಟ್ ಶರ್ಟ್ಧರಿಸುತ್ತಿದ್ದರು. ಆದರೆ ಮಲೆಯಾಳಿಗಳನ್ನು ಉಡುಪಿನಿಂದ ಹೇಗೆ ಸುಲಭವಾಗಿ ಗುರುತಿಸಬಹುದು ಎಂಬುದು ಅ೦ದು ಪ್ರಚಲಿತವಾಗಿದ್ದ ಮಾತು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಕಾಲೇಜು ಮುಗಿದೊಡನೆ, ಸಂಜೆ ಮುಂಡು–ಟೀ ಶರ್ಟ್ತೊಟ್ಟು ಬೈಕಿನಲ್ಲಿ ಸುತ್ತುವವರು ಮಲೆಯಾಳಿ ಹುಡುಗರು. ಅದೇ ಮಲೆಯಾಳಿ ಹುಡುಗಿಯರು ಸಂಜೆ ತಲೆ ಸ್ನಾನ ಮಾಡಿ ದಟ್ಟ ಕಪ್ಪು ಕೂದಲಿಗೆ ನೀರು ಜಡೆ ಹಾಕಿ ಸುತ್ತಾಡುತ್ತಿದ್ದರು. ಎಲ್ಲಿಂದ ಬಂದವರು ಎ೦ಬುದರ ಮೇಲೆ ಅವರ ವ್ಯಕ್ತಿತ್ವವನ್ನೂ ಹೇಳಬಹುದಿತ್ತು.

ದೆಹಲಿಯಿಂದ ಬಂದವರದ್ದು ಒ೦ಥರಾ ಬಿಗುಮಾನ, ಪಂಜಾಬಿಗಳದ್ದು ದೊಡ್ಡದನಿ-ನಗು, ಮಲೇಷ್ಯಾದವರದ್ದು ಮಾತು ಕಡಿಮೆ, ಕನ್ನಡಿಗರಾದ ನಾವು ಪಾಪದವರು ಹೀಗೆ. ಎಲ್ಲರೂ ಹೀಗೆಯೇ ಎಂದಲ್ಲ; ಆದರೆ ಬಹುಮಟ್ಟಿಗೆ ನಿಜವಾಗಿತ್ತು. ಫ್ಯಾಶನ್-ಅಲಂಕಾರದ ವಿಷಯಕ್ಕೆ ಬಂದರೆ ದಕ್ಷಿಣದ ರಾಜ್ಯಗಳವರದ್ದು ಒಂದು ಬಗೆಯಾದರೆ (ಕೇರಳ-ಗೋವಾ ಬಿಟ್ಟು) ಉತ್ತರದ್ದು ಬೇರೆಯೇ ಸ್ಟಾಂಡರ್ಡ್.

ನಮ್ಮ ನಿತ್ಯದ ಅಲ೦ಕಾರ ಸೊನ್ನೆ, ವಿಶೇಷ ದಿನಗಳಲ್ಲಿ ಒಂದು ಜಡೆ, ಮಲ್ಲಿಗೆ ಹೂವು, ಕಣ್ಣಿಗೆ ಕಾಡಿಗೆ, ಮುಖಕ್ಕೆ ಪೌಡರ್, ತುಟಿಕೆ ಕೆಂಪು ಲಿಪ್ ಸ್ಟಿಕ್, ಹಣೆಗೆತಿಲಕ, ಕಿವಿಗೆ ರಿಂಗ್/ಲೋಲಾಕು ಮತ್ತು ಸ್ವಲ್ಪ ಮಲ್ಲಿಗೆ/ರೋಸ್ ಪರಿಮಳದ ಸೆಂಟ್ ಲೇಪನ ! ಅವರದ್ದು ಹಾಗಲ್ಲ.. ಹೈ ಪೋನಿ, ಸ್ಟೆಪ್‌ಕಟ್ ಹೀಗೆ ಕೇಶ ವಿನ್ಯಾಸ, ಐ ಲೈನರ್-ಶಾಡೋ, ಮುಖಕ್ಕೆ ಕ್ರೀಂ, ಚಿತ್ರವಿಚಿತ್ರ ಡಿಸೈನ್ ಬಿಂದಿ, ಬಗೆಬಗೆಯ ಪರಿಮಳದ ಪರ್ಫ್ಯೂಮ್, ಮ್ಯಾಚಿಂಗ್‌ ಕಿವಿಯದ್ದು ಇದು ದಿನವೂ ಸಿದ್ಧವಾಗುವ ರೀತಿ. ನಿಜ ಹೇಳಬೇಕೆಂದರೆ ಸುಂದರವಾಗಿ ಶ್ರದ್ಧೆಯಿಂದ ತಯಾರಾಗಿ ಬರುತ್ತಿದ್ದಅವರನ್ನು ಕಂಡು ಖುಷಿಯಾಗುವುದರ ಜತೆ ನಮಗೆ ಸ್ವಲ್ಪ ಅಸೂಯೆಯೂ ಆಗುತ್ತಿತ್ತು. ಏಕೆಂದರೆ ನಮಗೆ ಅಷ್ಟು ಸಹನೆ- ಸಾಮಗ್ರಿ ಇರಲಿಲ್ಲ ಮತ್ತು ಅಲಂಕರಿಸಿಕೊಳ್ಳುವ ಕಲೆ ಸಿದ್ಧಿಸಿರಲಿಲ್ಲ.

ಕಾಲೇಜಿನ ಫ್ಯಾಶನ್‌ ಐಕಾನ್‌ ಮುಂಬೈನಲ್ಲಿ ನೆಲೆಸಿದ್ದ ಪಂಜಾಬಿ ಬೆಡಗಿರೀನಾ. ನೋಡಲು ಸುಂದರಿ, ಜತೆಗೆ ಅಲಂಕಾರ ಪ್ರಿಯೆ. ಮಾಡರ್ನ್ ಬಟ್ಟೆಗಳ ಜತೆ ಏನೇನೋ ಆಭರಣಗಳು. ಹುಡುಗರೇನು, ಹುಡುಗಿಯರಾದ ನಾವೂ ತಿರುತಿರುಗಿ ನೋಡುವಷ್ಟು ಸೆಳೆತ ! ನನಗೆ ಆಕೆಯ ಕಾಲಿನತ್ತಲೇ ಕಣ್ಣು. ಈ ರೀನಾ ತನ್ನ ಬಿಳಿ ಕಾಲಿಗೆ ಕಪ್ಪು ಮಣಿ ಮಣಿಯಸರದಂಥದ್ದು ಹಾಕುತ್ತಿದ್ದಳು; ಅದೂ ಒಂದೇ ಕಾಲಿಗೆ. ಕೇಳಿದ್ದಕ್ಕೆ ಅದು ಹೊಸ ಟ್ರೆಂಡ್‌ ಎ೦ದು ತಿಳಿಸಿದ್ದಳು. ಹುಡುಗರು ‘ದೃಷ್ಟಿ ಬೊಟ್ಟು’ ಎಂದಾಗ ನನಗೂ ಸರಿಯೆನಿಸಿತ್ತು. ವಿಷಯ ಅದಲ್ಲ, ಅದನ್ನು ನೋಡಿದೊಡನೆ ನನಗೆ ನನ್ನಗೆಜ್ಜೆ ನೆನಪಾಗಿತ್ತು. ಅದೇನೋ ಬುದ್ಧಿ ಬಂದಾಗಲಿ೦ದ ಗೆಜ್ಜೆಎ೦ದರೆ ಎಲ್ಲಿಲ್ಲದ ಪ್ರೀತಿ ನನಗೆ.

ಮನೆಯಲ್ಲಿ ಪುಟ್ಟತಂಗಿ ಹಾಸಿಗೆಯಲ್ಲಿ ಮಲಗಿ ಕಾಲು ಕುಣಿಸುವಾಗ ಗೆಜ್ಜೆ ಘಲ್‌ಎಂದಾಗಲೆಲ್ಲಾ ನನ್ನ ಮನಸ್ಸುಕುಣಿವ ನವಿಲು. ಚಿಕ್ಕವರು ಎಂಬ ಕಾರಣಕ್ಕೆ ದುಬಾರಿಯಾದ ಬೆಳ್ಳಿ ಗೆಜ್ಜೆ ನಿತ್ಯ ಹಾಕುವಂತಿರಲಿಲ್ಲ. ಆದರೆ ಅಪ್ಪನೊಂದಿಗೆ ಚಿನ್ನದ ಅ೦ಗಡಿಗೆ ಹೋಗಿ ನಾನೇ ಆರಿಸಿದ ಗೆಜ್ಜೆಯನ್ನುಅಮ್ಮ, ಬೀರುವಿನಲ್ಲಿ ಜೋಪಾನವಾಗಿ ಇಟ್ಟಿದ್ದಳು. ಅಪರೂಪಕ್ಕೆ ಮದುವೆ-ಮುಂಜಿಗೆ ಹೋಗುವಾಗ, ಹಬ್ಬ -ಹರಿದಿನ ಬಂದಾಗ೦ ‘ನನ್ನಗೆಜ್ಜೆಕೊಡು’ ಎಂಬ ರಾಗಇದ್ದದ್ದೇ! ನಾಲ್ಕನೇ ಕ್ಲಾಸಿನಲ್ಲಿದ್ದಾಗ ಗಣೇಶ ಹಬ್ಬದಲ್ಲಿ ಹೀಗೇ ಗಲಾಟೆ ಮಾಡಿದ್ದೆ.

ಗೆಜ್ಜೆ ಹಾಕಿಕೊಂಡು ಮನೆಯಲ್ಲಿಕುಣಿದು-ಕುಪ್ಪಳಿಸಿದ್ದಲ್ಲದೇ, ಸ೦ಜೆಯ ಸಮಯ ಸಕಲಾಲಂಕಾರ ಭೂಷಿತೆಯಾಗಿ ಊರೆಲ್ಲಾ ಸುತ್ತಿ ನೂರೆಂಟು ಗಣೇಶನನ್ನು ನೋಡಿ ಮನೆಗೆ ಬರುವಷ್ಟರಲ್ಲಿ ಒಂದು ಗೆಜ್ಜೆಯೇ ಮಾಯ.ಎಲ್ಲಿ ಬಿದ್ದಿತ್ತೋ, ಯಾರಿಗೆ ಸಿಕ್ಕಿತ್ತೋ ತಿಳಿಯದು. ಸಾಕಷ್ಟು ಹಣಕೊಟ್ಟು ಖರೀದಿಸಿದ್ದ ಬೆಳ್ಳಿ ಗೆಜ್ಜೆ ಕಳೆದುಕೊಂಡಿದ್ದಕ್ಕೆ ಅಪ್ಪಅಮ್ಮ ಸ್ವಲ್ಪ ಬೈದರೂ ಸಿಕ್ಕಾಪಟ್ಟೆ ಬೇಸರವಾಗಿದ್ದು ನನಗೇ!! ಅಂದಿನಿ೦ದ ಗೆಜ್ಜೆ ಬೇಕು ಎಂದು ಕೇಳಿರಲೇ ಇಲ್ಲ. ಅಪ್ಪಕೊಡಿಸುತ್ತೇನೆ ಎಂದರೂ ನನಗೇ ಯಾಕೋ ಹಾಕಬೇಕು ಅನಿಸಿರಲಿಲ್ಲ.

ಆದರೆ ಬೆಕ್ಕಿನ ಕಳ್ಳ ಸನ್ಯಾಸದಂತೆ ನನ್ನಗೆಜ್ಜೆ ನಿರ್ಲಿಪ್ತತೆ ಮುರಿದು ಬಿದ್ದದ್ದು ರೀನಾಳ ಈ ಮಣಿಸರ ಕಂಡಾಗ! ಆದರೆ ಆ ಮಣಿಸರ ಸಿಗುವುದು ಕಷ್ಟವಾಗಿತ್ತು (ಈಗಿನಂತೆ ಆನ್ ಲೈನ್‌ ಆರ್ಡರ್ ಮಾಡುವ ಸೌಲಭ್ಯ ಇರಲಿಲ್ಲ. ಸೀನಿಯರ್ ರೀನಾಳನ್ನು ತಂದುಕೊಡುವ೦ತೆ ಕೇಳುವ ಸಲಿಗೆಯೂ ಇರಲಿಲ್ಲ). ಹಾಗಾಗಿ ಗೆಜ್ಜೆ ಆಸೆ ಅಲ್ಲಿಗೇ ಮುಗಿದಿತ್ತು. ಆದರೆಅದೇ ಸಮಯಕ್ಕೆ ಸಮಾರಂಭವೊ೦ದರಲ್ಲಿ ಗೆಳತಿ ಬಂಗಾರ ಬಣ್ಣದ ಗೆಜ್ಜೆ ಹಾಕಿದ್ದಳು.

ಮೈಸೂರಿನಿಂದ ತ೦ದ ಸ್ಪೆಷಲ್‌ ಗೆಜ್ಜೆ, ನೀರು ಬಿದ್ದರೂ ಕಲರ್‌ ಗ್ಯಾರಂಟಿ ಅ೦ತ ಗೆಳತಿ ಭರವಸೆ ಕೊಟ್ಟಿದ್ದಳು. ಅದನ್ನು ಕಂಡಿದ್ದೇ ಆ ಗೆಜ್ಜೆಯಿಲ್ಲದೇ ಬದುಕೇ ಸಪ್ಪೆ ಎನ್ನಿಸಿತ್ತು. ಯೋಗಾಯೋಗವೆಂಬ೦ತೆ ರಜೆಯಲ್ಲಿ ಮೈಸೂರಿಗೆ ನಮ್ಮ ಪಯಣ. ನನಗೆ ಇದು ಗೆಜ್ಜೆ ಖರೀದಿಗೆ ದೈವ ಸೂಚನೆ ಎನಿಸಿತ್ತು. ಹೋದಾಗ ಎಲ್ಲರೂ ಅರಮನೆ, ಜೂ, ಕೆ.ಆರ್.ಎಸ್‌ ಎಂದು ಸುತ್ತಿದರೆ ನನ್ನ ಹೆಜ್ಜೆ, ಗೆಜ್ಜೆಅಂಗಡಿಯತ್ತ! ಅ೦ತೂ ಬೆಳಿಗ್ಗೆ ಮುಂಚೆಯೇ ಹೋಗಿ ಕಾದು ನಿಂತು, ಅ೦ಗಡಿ ತೆರೆದಾಗ ಒಳಹೊಕ್ಕರೆ ಮಾಲಿಕ ‘ಆ ಗೆಜ್ಜೆ ಖಾಲಿಯಾಗಿದೆ. ಆರ್ಡರ್‌ ಕೊಟ್ಟರೆ ಹದಿನೈದು ದಿನ ಬೇಕು’ ಎಂದಿದ್ದ. ನಿರಾಶೆಯಿಂದ ಅಳು ಬರುವಂತಾದಾಗ ಕ೦ಡಿತ್ತು, ಬೆಳ್ಳಿಯ ಬಾದಾಮಿಯಾಕಾರದ ಗುಂಡು ಪೋಣಿಸಿ ಮಾಡಿದ್ದ ವಿನೂತನ ಮಾದರಿಯ ಚೆಂದದ ಗೆಜ್ಜೆ. ಹಾಗಂತ ಮಣಿ ಇರುವ ಘಲ್‌ ಘಲ್ ಸದ್ದು ಮಾಡುವ ಗೆಜ್ಜೆಯಲ್ಲ. ಒಂದೇ ಒ೦ದು ಮಣಿ ಹಾಕಿದ ಗುಂಡಿದ್ದು ಹಿತವಾದ ನಾದ ಹೊರಡಿಸುವ ಗೆಜ್ಜೆಯದು. ಕೂಡಲೇ ಬೇರೇನನ್ನೂ ಯೋಚಿಸದೇ ಹಠ ಮಾಡಿ ಅದನ್ನೇ ಖರೀದಿಸಿ ಅಲ್ಲೇ ಹಾಕಿಯೂ ಆಗಿತ್ತು. ಹಿಂದೆ ಕಳೆದುಕೊಂಡಿದ್ದು ನೆನಪಾಗಿ ಅಂಗಡಿಯವರ ಬಳಿಯೇ ಬೀಳದಂತೆ ಅದನ್ನು ಬಿಗಿ ಮಾಡಿಸಿಕೊಂಡೂ ಬಂದಿದ್ದೆ.

ರಜೆ ಮುಗಿಸಿ ಕಾಲೇಜಿಗೆ ಬಂದಿದ್ದೇ ಮಾಡಿದ ಕೆಲಸ ಗೆಜ್ಜೆ ಪ್ರದರ್ಶನ. ಗೆಜ್ಜೆ ಕಾಣದಿದ್ದರೆ ಎಂದು ಉದ್ದದ ಚೂಡಿದಾರ್ ಬಿಟ್ಟು ಸ್ಕರ್ಟ್ ಹಾಕಿದ್ದಾಯ್ತು. ಹತ್ತು ನಿಮಿಷ ಬೇಗನೇ ಕಾಲೇಜಿಗೆ ಹೊರಟು ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆಇಟ್ಟು ನಡೆದೆ. ಅಷ್ಟು ಕಷ್ಟ ಪಟ್ಟುಗೆಜ್ಜೆತೊಟ್ಟ ಮೇಲೆ ಎಲ್ಲರೂ ನೋಡದಿದ್ದರೆ ಹೇಗೆ? ಲುಕ್ ’– ಎಂದು ಹಾಸ್ಟೆಲ್ಲಿನಲ್ಲಿ ಹುಡುಗಿಯರೆಲ್ಲಾ ಪಿಸುಗುಡುತ್ತಿದ್ದರು; ಎಲ್ಲರ ಮೆಚ್ಚುಗೆ-ಆಸೆ ಮಿಶ್ರಿತ ನೋಟ ನನ್ನತ್ತಲೇ (ಅವರೇನು ನೋಡುತ್ತಿದ್ದರೋ, ನನಗಂತೂ ನನ್ನಗೆಜ್ಜೆ ನೋಡುತ್ತಿದ್ದಾರೆ ಎಂಬ ಖಾತ್ರಿಯಿತ್ತು). ಯಾವುದನ್ನೂ ಲೆಕ್ಕಿಸದ ಹಾಗೆ ನಾನು ಮಾತ್ರ ಘನಗಂಭೀರವಾಗಿ ಮುನ್ನಡೆಯುತ್ತಿದ್ದೆ. ಮನಸ್ಸು ಮಾತ್ರಯಾ ಹೂ ಎಂದು ಭೂಮಿಯಿಂದಜಿಗಿದುಆಕಾಶದಲ್ಲಿ ಚಿಮ್ಮಿಕುಣಿಯುತ್ತಿತ್ತು.

ನನ್ನ ಕಾಲಿನಲ್ಲಿದ್ದ ಹೊಸ ಗೆಜ್ಜೆಗೆ ಆ ಗೌರವ, ಪ್ರೀತಿ ಮೆಚ್ಚುಗೆ ಎಲ್ಲವೂ ಸಿಕ್ಕರೂ ಅದರ ಒಡತಿ ನಾನಲ್ಲವೇ! ಇತರರ ಮೆಚ್ಚುಗೆ ಬಯಸುವ ವಯಸು ಮತ್ತು ಮನಸು. ಹೀಗಾಗಿ ಮನಸ್ಸು ಬಲೂನಿನಂತೆ ಉಬ್ಬಿತ್ತು. ಆಶ್ಚರ್ಯವೆ೦ದರೆ ನಮ್ಮ ರೀನಾ ಕೂಡಾ ನನ್ನ ಗೆಜ್ಜೆ ನೋಡಿ ವೆರಿ ನೈಸ್‌ ಎಂದು ಉದ್ಗಾರ ತೆಗೆದಿದ್ದಳು. ನನ್ನೊಂದಿಗಿದ್ದ ವಿದೇಶಿ ಸಹಪಾಠಿಗಳು ‘ಪ್ರೆಟ್ಟಿ, ಬ್ಯೂಟಿಪುಲ್’ ಎಂದು ಉದ್ಗಾರ ತೆಗೆದಾಗಲ೦ತೂ ಸ್ವರ್ಗಕ್ಕೆ ಮೂರೇ ಗೇಣು. ಹಾಸ್ಟೆಲ್, ಕಾಲೇಜು ಮಾತ್ರವಲ್ಲ, ಸಂಜೆ ಲೈಬ್ರರಿಗೆಓದಲು ಹೋಗುವಾಗಲೂ ಗೆಜ್ಜೆ ಧರಿಸಿಯೇ ಹೋಗಿದ್ದೆ. ಅಂತೂ ಆ ದಿನವಿಡೀ ನನ್ನ ಹೆಜ್ಜೆ ಅಲ್ಲ ಗೆಜ್ಜೆಯದ್ದೇ ಮಾತು-ಕತೆ!!

ಮಾರನೇ ದಿನ ನನ್ನ ಪ್ರೊಫೆಸರ್‌ರಿಂದ ಕರೆ. ಯಾವಾಗಲೂ ಬಹಳ ಪ್ರೀತಿಯಿಂದ ಮಾತನಾಡಿಸುವ ಹಿರಿಯರವರು. ಕುರ್ಚಿಯಲ್ಲಿ ಕೂರಿಸಿ ಕೇಳಿದ ಪ್ರಶ್ನೆ ‘ಗೆಜ್ಜೆ ಹೊಸದಾ?’ ನಾನು ಬಹಳ ಹೆಮ್ಮೆಯಿಂದ ‘ಹೌದು ಸರ್, ಮೈಸೂರಿನಿಂದ ತ೦ದದ್ದು’ ಎಂದ ಮೇಲೆ ಒಂದು ನಿಮಿಷ ಮೌನ. ಆಮೇಲೆ ನಿಧಾನವಾಗಿ ‘ಬಟ್ಟೆ, ಆಭರಣ ಎಲ್ಲಾಅವರವರ ಆಯ್ಕೆ ಮತ್ತು ಹಕ್ಕು ನಿಜ. ನೀವಂತೂ ಪ್ರಾಯ ಪ್ರಬುದ್ಧರು. ಹಾಗಾಗಿ ಹೀಗೆ ಹೇಳುವುದು ತಪ್ಪಿರಬಹುದು. ಗೆಜ್ಜೆಆಭರಣ ಹೌದು. ಆದರೆ ಇಲ್ಲಿಗೆೆ ಬೇಕೇ? ಎಲ್ಲರೂ ಕಲಿಯಲು ಬರುವ ಕ್ಲಾಸಿಗೆ, ಗಂಭೀರವಾಗಿ ಕುಳಿತು ಓದುವ ಲೈಬ್ರರಿಗೆ ನೀವು ನಿನ್ನೆಗೆಜ್ಜೆ ಹಾಕಿಕೊಂಡು ಓಡಾಡಿದಿರಿ. ಲೈಬ್ರರಿಗೆ ಬಂದಾಗ ಘಲ್‌ ಎನ್ನುವ ಸದ್ದು ಹಿತವಾಗಿ ಕೇಳಿತು. ಓದುತ್ತಿದ್ದ ನಾನೇ ತಿರುಗಿ ನೋಡಿದೆ. ಇನ್ನು ಹರೆಯದ ಮಕ್ಕಳ ಕತೆ? ಗೆಜ್ಜೆ ಸದ್ದು ಸಣ್ಣದಾದರೂ ಆ ಮೌನದಲ್ಲಿ ದೊಡ್ಡ ಬೆಲ್ ಹೊಡೆದ ಹಾಗಿರುತ್ತೆ. ಪರೀಕ್ಷೆ ಸಮಯ ಬೇರೆ, ಈ ಘಲ್‌ ಮನಸ್ಸನ್ನು ಚಂಚಲಗೊಳಿಸುತ್ತೆ. ದಯಮಾಡಿ ಕಾಲೇಜಿಗೆ, ಲೈಬ್ರರಿಗೆ ಗೆಜ್ಜೆ ಹಾಕಬೇಡಿ. ಇದು ಹೇರಿಕೆ ಅಲ್ಲ ನನ್ನ ಕೋರಿಕೆ. ಅಂದ ಹಾಗೆ ಗೆಜ್ಜೆಯ ನಾದ ನನಗೂ ಇಷ್ಟ; ಮನೆಯಲ್ಲಿ, ಸಮಾರಂಭಗಳಲ್ಲಿ ಹಾಕಿ ಓಡಾಡಿದರೆ ಚೆನ್ನ. ಇದರ ಮೇಲೆ ನಿಮ್ಮಿಷ್ಟ’ ಎಂದರು.

ಮರುದಿನ ‘ಎಲ್ಲಿಗೆಜ್ಜೆ’ ಎಂದು ಕೇಳಿದ ಗೆಳೆಯ ಗೆಳತಿಯರಿಗೆಲ್ಲಾ‘ಕಾಲಿಗೆ ಭಾರ, ಅದಕ್ಕೇ ತೆಗೆದಿಟ್ಟೆ ’ ಎನ್ನುವ ಉತ್ತರ ಸಿಕ್ಕಿತ್ತು. ಸತ್ಯಗೊತ್ತಿದ್ದದ್ದು ನನಗೆ ಮಾತ್ರ ! ಆ ದಿನದಿಂದ ಪೆಟ್ಟಿಗೆ ಸೇರಿದ ಗೆಜ್ಜೆ ಹೊರಬರುತ್ತಿದ್ದದ್ದು ಮನೆಗೆ ಬಂದಾಗ ಮಾತ್ರ!!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

May 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: