ಡಾ ಕೆ ಎಸ್ ಚೈತ್ರಾ ಅಂಕಣ – ಮೆಸ್ ಊಟ ಮತ್ತು ಮುಂಡಪ್ಪ…

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

8


‘ದೋಸೆ ಬಿಸಿ ಇಲ್ಲ; ನಂಗೆ ಬೇಡ’
‘ಉಪ್ಪಿಟ್ಟು ವಾರಕ್ಕೊಮ್ಮೆಅಲ್ಲ, ವರ್ಷಕ್ಕೊಮ್ಮೆ ಸಾಕು’
‘ಇಡ್ಲಿ ಜತೆ ವಡೆ ಇರದಿದ್ರೆ ತಿನ್ನೋದು ಹೇಗೆ?’..

ಮನೆಯಲ್ಲಿದ್ದಾಗ ಸದಾ ಅಮ್ಮನ ಅಡುಗೆಯ ಬಗ್ಗೆ ನನ್ನ ತಕರಾರುಗಳ ಸರಮಾಲೆ ಇದ್ದೇ ಇರುತ್ತಿತ್ತು. ದೂರುಗಳಜತೆ ನಾರ್ತ್ಇಂಡಿಯನ್ ಕಲೀಬೇಕು, ಮುಂಚೆಯೇ ಪ್ಲಾನ್ ಮಾಡಬೇಕು ಎನ್ನುವ ವಯಸ್ಸಿಗೆ ಮೀರಿದ ಸಲಹೆ ಸೂಚನೆಗಳನ್ನೂ ಧಾರಾಳವಾಗಿಯೇ ನೀಡುತ್ತಿದ್ದೆ. ಏನೂ ಮಾಡದೇ ಬೇರೆಯವರು ಮಾಡಿದ್ದನ್ನು ತಿನ್ನುವಾಗ ಹೀಗೆ ಅಮೂಲ್ಯ ಮುತ್ತುದುರಿಸುವುದಕ್ಕಿಂತ ಸುಲಭದ ಕೆಲಸ ಇನ್ನಾವುದು? ಇದಕ್ಕೆಲ್ಲಾಅಮ್ಮ ಏನೂ ಮಾತನಾಡುತ್ತಿರಲಿಲ್ಲ.

ಮೂರು ಮಕ್ಕಳಿಗೆ ಡಬ್ಬಿ ತುಂಬಿ ಕಳಿಸಬೇಕಾಗಿದ್ದ ಅವಸರದಲ್ಲಿದ್ದವಳಿಗೆ ಅಷ್ಟೆಲ್ಲಾ ಸಮಯವೂ ಇರಲಿಲ್ಲ. ಆದರೆ ನಾನು ಶಾಲೆ-ಕಾಲೇಜಿಗೆ ಒಯ್ದ ಡಬ್ಬಿಯನ್ನು ಹಾಗೇ ತಂದಾಗ ಅಮ್ಮಅಪ್ಪಇಬ್ಬರೂ ಬೈಯ್ಯುತ್ತಿದ್ದರು. ಆಹಾರ ಪೋಲು ಮಾಡುವುದೆಂದರೆ ಅವರಿಬ್ಬರಿಗೆ ಸಿಟ್ಟು. ಹಾಗಾಗಿ ಮನೆಗೆ ಬಂದ ಮೇಲಾದರೂ ಅದನ್ನು ಖಾಲಿ ಮಾಡಬೇಕಿತ್ತು. ಈ ಶಿಕ್ಷೆ ತಪ್ಪಿಸಿಕೊಳ್ಳಲು ಅತಿ ಬುದ್ಧಿಯ ನಾನು ಪ್ರಾಣಿ ಪ್ರೇಮಿ ಆಗಿದ್ದೆ.

ಕಾಲೇಜಿನ ಹತ್ತಿರದ ನಾಯಿಗೆ ದಿನಾ ಚಪಾತಿ- ರೊಟ್ಟಿ ಪಲ್ಯದ ಸಮೇತ ಹಾಕಿ ಬರುತ್ತಿದ್ದೆ. ಅಂತೂ ನನ್ನಕಾಲೇಜು ಮುಗಿಯುವಷ್ಟರಲ್ಲಿ ಆಗಲೋ ಈಗಲೋ ಸಾಯುವಂತಿದ್ದ ಬಡಕಲು ನಾಯಿ ಹುಲಿಯಂತೆ ದಷ್ಟಪುಷ್ಟವಾಗಿತ್ತು. ಮನೆಯಲ್ಲಿ ಇದರ ಬಗ್ಗೆ ಅಂದಾಜಿದ್ದರೂ ಆಗಾಗ್ಗೆ ಬೈಯ್ಯುವುದು ಬಿಟ್ಟರೆ ಇನ್ನೇನೂ ಮಾಡುವಂತಿರಲಿಲ್ಲ. ಮನೆಯಲ್ಲಿರುವಾಗ ಅಮ್ಮನಒತ್ತಾಯಕ್ಕೆ, ಬಾಯಿ ರುಚಿಗೆ ಆಹಾರ ಎನ್ನುವುದನ್ನು ಬಿಟ್ಟರೆ ಅದರ ಮಹತ್ವ ಅರಿವಾಗಿರಲೇ ಇಲ್ಲ.

ಸ್ವಾತಂತ್ರ್ಯ ಸಿಕ್ಕ ಸಂತೋಷ
ಅರಿವಾಗುವ ಸಂದರ್ಭ ಬಂತು, ಹಾಸ್ಟೆಲ್ ಸೇರುವುದರೊಂದಿಗೆ! ಮನೆ ಬಿಟ್ಟು ಹೋಗಬೇಕು ಎಂಬ ಹೆದರಿಕೆ ಸಿಕ್ಕಾಪಟ್ಟೆ ಇತ್ತು, ಆದರೆಅಲ್ಲಿನ ಮೆಸ್ ಮೆನು ಕೇಳಿ ಖುಷಿಯಾಗಿತ್ತು. ದಿನಾ ಪರಾಠ, ಸಬ್ಜಿ, ವಾರಕ್ಕೊಮ್ಮೆ ಸಿಹಿತಿಂಡಿ ಎಲ್ಲಕ್ಕಿಂತ ಮಿಗಿಲಾಗಿ ತಿನ್ನಲೇಬೇಕು ಎಂದು ಒತ್ತಾಯಿಸುವ ಅಮ್ಮನ ಕಾಟವಿಲ್ಲ. ಹುಟ್ಟಿನಿ೦ದ ಬಂಧಿಯಾಗಿದ್ದ ನನಗೆ ಸ್ವಾತಂತ್ರ್ಯ ಸಿಕ್ಕ ಸಂತೋಷ ! ಕಾಲೇಜು ಸೇರಿ ಹಾಸ್ಟೆಲ್‌ ಜೀವನ ಆರಂಭವಾಗಿತ್ತು.ಮೊದಲ ಒಂದು ವಾರ ನಾವಾಗಿ ಅಲಾರಾಂ ಇಟ್ಟು ಏಳುವಷ್ಟರಲ್ಲಿ ತಡವಾಗಿತ್ತು. ಮನೆಯಲ್ಲಾದರೆ ಅಮ್ಮನಾಲ್ಕಾರು ಬಾರಿ ಕೂಗಿ ತಿಂಡಿತಿನ್ನು ಎ೦ದು ಗದರಿ ಕಾಲೇಜಿಗೆ ಓಡುವುದುದಿತ್ತು. ಇಲ್ಲಿ ಎಬ್ಬಿಸುವವರು ಯಾರು? ಸರಿ, ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿತಿಂಡಿತಿನ್ನದೇಓಡಿದ್ದಾಯ್ತು.

ಒ೦ದು ಕ್ಲಾಸಿಂದ ಇನ್ನೊಂದಕ್ಕೆಅಲೆದಾಟ, ಗಂಟೆಗಟ್ಟಲೇ ನಿಂತು ಮಾಡುವ ಪ್ರಾಕ್ಟಿಕಲ್ ಕ್ಲಾಸ್‌ಗಳು,ಗಮನವಿಟ್ಟು ಕೇಳಬೇಕಾದ ಥಿಯರಿ ಕ್ಲಾಸ್‌ಗಳು ಮಧ್ಯಾಹ್ನ ಆಗುವಷ್ಟರಲ್ಲಿ ಎಲ್ಲಿಲ್ಲದ ಸುಸ್ತು. ಕೆಲವರಂತೂ ಅನಾಟಮಿ ಹಾಲಿನಲ್ಲಿ ತಲೆತಿರುಗಿ ಬಿದ್ದದ್ದೂಇತ್ತು. ಅದಕ್ಕೆ ಫಾರ್ಮಾಲಿನ್ ವಾಸನೆ, ಭಯದಜತೆ ಖಾಲಿ ಹೊಟ್ಟೆಯೂ ಪ್ರಮುಖ ಕಾರಣ. ಇದೆಲ್ಲದರ ಜತೆ ಹೋದ ಒಂದು ತಿಂಗಳಿಡೀ ಆಗಾಗ್ಗೆ ರಾತ್ರಿ ಕಾಲಿನ ಕ್ರಾಂಪ್ಸ್ (ಸ್ನಾಯು ಸೆಳೆತ). ನಡೆಯಲಾರದಷ್ಟು ನೋವು. ಹೆದರಿ ಕುಂಟುತ್ತಲೇ ಡಾಕ್ಟರ್ ಬಳಿ ಹೋದಾಗ ‘ಈ ಬೇಸಿಗೆಯಲ್ಲಿ ನಡೆದು ದಣಿವಾಗುವುದರ ಜತೆ ಡಿಹೈಡ್ರೇಶನ್‌ ಆದರೆ ಹೀಗಾಗುತ್ತೆ. ಸಮಯಕ್ಕೆ ಸರಿಯಾಗಿ ಊಟ-ತಿಂಡಿ-ನೀರು ಸರಿಯಾಗಿ ಸೇವಿಸಬೇಕು. ಸಾಮಾನ್ಯವಾಗಿ ಡಾಕ್ಟರ್ಸ್ ಬೇರೆಯವರಿಗೆ ಇದನ್ನು ಹೇಳುತ್ತಾರೆ ಹೊರತು ಸ್ವತಃ ತಾವು ಇವೆಲ್ಲದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆಹಾರದಂತೆ ಆರೋಗ್ಯ; ಹಾಗಾಗಿ ನೀವು ಈಗಿನಿಂದಲೇ ಇವುಗಳ ಬಗ್ಗೆ ಎಚ್ಚರಿಕೆ ವಹಿಸಿ.’ ಎಂದರು. ಆಗ ಆಹಾರ ಮಾತ್ರವಲ್ಲ ಅಮ್ಮನ ಮಹತ್ವವೂ ಅರಿವಾಗಿತ್ತು !

ತಲೆಗೇರಿದ ಭಾರ!
ಮನೆಯಲ್ಲಿದ್ದಾಗ ಹಾಗೆ ಮಾಡು-ಹೀಗೆ ಮಾಡು ಎಂಬ ಬಿಟ್ಟಿ ಸಲಹೆ ಕೊಡುತ್ತಿದ್ದೆನಲ್ಲ, ಅದೆಲ್ಲಾ ನಿಂತು ಅಮ್ಮನ ಕೈರುಚಿ ಮೆಚ್ಚುವ ಕಾಲವೂ ಬಂತು. ಹಾಗೆ ನೋಡಿದರೆ ಹಾಸ್ಟೆಲ್ಲಿನಲ್ಲಿ ಥರಾವರಿ ಊಟ ಸಿಗುತ್ತಿತ್ತು ನಿಜ. ಮೊದಲೆರಡು ತಿಂಗಳು ರುಚಿ ಎನ್ನಿಸಿತು. ಆಮೇಲೆ ಪರವಾಗಿಲ್ಲ ಎಂಬ ಭಾವನೆ. ದಿನಗಳೆದಂತೆ ಮತ್ತೆಅದೇನಾ ಎಂಬ ಅಸಹನೆ. ಎಲ್ಲಕ್ಕಿಂತ ಹೆಚ್ಚಾಗಿ ತಿಂದರೂ ಬಿಟ್ಟರೂ ಕೇಳುವವರಿಲ್ಲ. ಯಾಕೆ ತಿಂದಿಲ್ಲ, ಏನು ಬೇಕು ಕೇಳಲು ಯಾರಿಗೂ ಪುರುಸೊತ್ತಿಲ್ಲ. ಕಡೆಗೆ ಈ ಮೆಸ್‌ ಜವಾಬ್ದಾರಿಯನ್ನು ಲೀಡರ್ಸ್ ಸರಿಯಾಗಿ ನಿರ್ವಹಿಸುತ್ತಿಲ್ಲಎಂದು ನಿರ್ಧರಿಸಿಬಿಟ್ಟೆವು. ಲೀಡರ್ಸ್ ಎಂದರೆ ಇಬ್ಬರು ವಿದ್ಯಾರ್ಥಿಗಳೇ ತಿಂಡಿ–ಊಟಕ್ಕೆ ಏನಿರಬೇಕು ಎ೦ದು ನಿರ್ಧರಿಸಿ ಬೇಕಾದ ಸರಂಜಾಮುಗಳ ಮೇಲ್ವಿಚಾರಣೆ ವಹಿಸುವುದು. ಬಹಳ ಉತ್ಸಾಹದಿಂದ ಈ ಕೆಲಸಕ್ಕೆ ಮುಂದಾದರೂ ಒ೦ದೇ ದಿನದಲ್ಲಿಕಷ್ಟದ ಅರಿವಾಯ್ತು.

ಬೆಳಗಿನ ತಿಂಡಿದೋಸೆ ಇದ್ದರೆ ಎಲ್ಲಾ ಮುನ್ನೂರು ಜನರಿಗೂ ಬಿಸಿ ದೋಸೆ ಪೂರೈಸಬೇಕು. ಕೆಲವರಿಗೆ ಚಟ್ನಿ ಖಾರ ಎನಿಸಿದರೆ ಮತ್ತೆ ಕೆಲವರಿಗೆ ಖಾರ ಸಾಲದು. ಎಣ್ಣೆ-ಉಪ್ಪು-ಹುಳಿ-ಖಾರವಂತೂ ಸರಿ, ಅದರೊಂದಿಗೆ ಆ ತರಕಾರಿ ಬೇಡ ಇದು ಬೇಕು ಎಂಬ ದೂರು ಬೇರೆ. ಅಷ್ಟಕ್ಕೂ ಅಡುಗೆ ಮಾಡದೇ ಬರೀ ಮೇಲುಸ್ತುವಾರಿ ಹೊತ್ತುಕೊಂಡಿದ್ದೇ ಸಾಕು ಸಾಕಾಯಿತು. ಎಷ್ಟೇ ಯೋಚಿಸಿ ರುಚಿಯಾಗಿ ಅಡುಗೆ ಮಾಡಿಸಿದರೂ ಕೆಲವರುತಟ್ಟೆಗೆ ಹಾಕಿಸಿಕೊಂಡು ಹಾಗೇ ಬಿಟ್ಟು ಹೋಗುತ್ತಿದ್ದರು. ಆಗ ಇನ್ನಿಲ್ಲದ ಸಿಟ್ಟು ಬರುತ್ತಿತ್ತು, ಸಂಕಟವಾಗುತ್ತಿತ್ತು. ಏಕೆ೦ದರೆ ತಟ್ಟೆಯಲ್ಲಿದ್ದರ ಹಿಂದಿನ ಶ್ರಮ ಸ್ವಲ್ಪ ಮಟ್ಟಿಗೆ ಅನುಭವಕ್ಕೆ ಬಂದಿತ್ತು. ಜತೆಗೇ ವರ್ಷಾನುಗಟ್ಟಲೇ ನಾನು ಊಟ ಬಿಟ್ಟು ಬರುತ್ತಿದ್ದದ್ದು ನೆನಪಿಗೆ ಬಂದು ನಾಚಿಕೆಯೂ ಆಗುತ್ತಿತ್ತು.

ಮಣಿಪಾಲದ ಮೆಸ್‌ನಲ್ಲಿ ತಿಂಡಿ-ಊಟಕ್ಕೆ ಯಾವ ಕೊರತೆಯೂ ಇರಲಿಲ್ಲ; ಆದರೂ ನಾನು ಕಂಡುಕೊ೦ಡ ಸತ್ಯಗಳು.. ಮನೆಯ ಊಟದಷ್ಟು ರುಚಿ ಮತ್ತು ಶುಚಿ ಬೇರೆಲ್ಲೂ ಇಲ್ಲ. ಪ್ರತಿಯೊಬ್ಬರೂ ಬೇಸಿಕ್ ಅಡುಗೆ ಕಲಿಯಲೇಬೇಕು; ಏಕೆಂದರೆ ಅದು ಸ್ವಾವಲಂಬಿ ಜೀವನಕ್ಕೆಅತ್ಯಗತ್ಯ. ಅಡುಗೆ ಕಲಿತಾಗ ಮಾತ್ರ ಅದರ ಹಿಂದಿನ ಶ್ರಮ–ಮಹತ್ವ ತಿಳಿಯಲು ಸಾಧ್ಯ. ತಿನ್ನುವ ಆಹಾರದ ಬಗ್ಗೆ ಮತ್ತುಅದನ್ನು ಮಾಡುವವರ/ ಬಡಿಸುವವರ ಬಗ್ಗೆ ಗೌರವ ಇರಬೇಕು. ನಾವು ತಿನ್ನುವ ಆಹಾರ ನಮ್ಮಆರೋಗ್ಯಕ್ಕೆ ಕಾರಣ!! ಐದು ವರ್ಷಗಳ ಹಾಸ್ಟೆಲ್‌ ಜೀವನ ಮುಗಿಸಿ ಬರುವಾಗ ತಟ್ಟೆಯಲ್ಲಿ ಹಾಕಿಕೊಂಡಿದ್ದನ್ನು ಮುಗಿಸುವ ಪದ್ಧತಿಯನ್ನು ಕಷ್ಟಪಟ್ಟು ರೂಢಿಸಿಕೊಂಡೆ. ಬಿಟ್ಟಿ ಸಲಹೆ ಕೊಡುವುದರ ಬದಲು ಒಂದಿಷ್ಟು ಅಡುಗೆ ಕಲಿತೆ. ಒಟ್ಟಿನಲ್ಲಿ ಬದಲಾದೆ ಎಂದರೆ ತಪ್ಪಿಲ್ಲ!

ಮು೦ಡಪ್ಪ ಎಲ್ಲಿ?
ಮಣಿಪಾಲದ ಬೇಸಿಗೆ ಎಂದರೆ ಸಾಮಾನ್ಯವಲ್ಲ. ಅಲ್ಲಿಯವೆರೆಗೆ ಆ ರೀತಿಯ ಬಿಸಿಲನ್ನೇಕಂಡಿರಲಿಲ್ಲ; ಮಧ್ಯಾಹ್ನವಂತೂ ತಲೆ ಮೇಲೆಯೇ ದೋಸೆ ಹೊಯ್ಯಬಹುದಿತ್ತು ಅಷ್ಟು ಬಿಸಿ! ಒಮ್ಮೆ ಹೊರಹೋದರೆ ಸ್ನಾನ ಮಾಡಿದಷ್ಟು ಬೆವರು ಬಸಿಯುತ್ತಿತ್ತು. ಈ ಆರ್ಭಟಕ್ಕೆ ನಾವು ಉಸ್ ಬುಸ್‌ಎಂದು ಬಸವಳಿದರೆ ಅಲ್ಲಿಯವರು ‘ಸ್ವಲ್ಪ ಸೆಕೆ ಹೆಚ್ಚುಂಟು; ಎಂತಗೊತ್ತಾ, ಹೀಗೆ ಬೆವರು ಸುರಿಯುವುದಕ್ಕೆ ನಾವೆಲ್ಲಾ ತೋರ (ದಪ್ಪ) ಆಗುವುದಿಲ್ಲ. ಮಂಡೆ ಬಿಸಿಯಾಗಿ ಬುದ್ಧಿ ಜೋರು ಓಡ್ತದೆ’ ಎಂದು ಬಿಸಿಲನ್ನೂ ಸಮರ್ಥಿಸಿಕೊಳ್ಳುತ್ತಿದ್ದರು.

ಈ ಧಗೆ ತಾಳಲಾರದೇ ಚೊಂಬುಗಟ್ಟಲೇ ನೀರು, ಡಜನ್‌ಗಳಲ್ಲಿ ಹೆಲ್ತಿ ಬೊಂಡ, ಲೀಟರ್‌ಗಳಲ್ಲಿ ಕಬ್ಬಿನ ಹಾಲು ಹೀಗೆ ಎಲ್ಲವನ್ನೂ ಸ್ವಾಹಾ ಮಾಡುತ್ತಿದ್ದೆವು. ಅದರೊಂದಿಗೇ ಬೇಸಿಗೆಯ ಮುಖ್ಯ ಆಕರ್ಷಣೆ ಮಾವಿನ ಹಣ್ಣು. ಆಗೆಲ್ಲಾ ಮಣಿಪಾಲದಲ್ಲಿ ಅಂಗಡಿಗಳಿದ್ದದ್ದು ಕಡಿಮೆ. ಏನಿದ್ದರೂ ಉಡುಪಿಗೇ ಹೋಗಬೇಕಿತ್ತು. ಆದರೆ ಹತ್ತಿರದ ಹಳ್ಳಿಯಿಂದ ವಾರಕ್ಕೆರಡು ಬಾರಿ ಬಗೆಬಗೆಯ ಮಾವಿನ ಹಣ್ಣು ಬುಟ್ಟಿಯಲ್ಲಿ ಹೊತ್ತು ಮಾರಾಟಕ್ಕೆ ಅನೇಕರು ಬರುತ್ತಿದ್ದರು. ಹಾಸ್ಟೆಲ್‌ಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿತ್ತು.

ನಾವು ಗಂಗಪ್ಪ ಮತ್ತು ಶಾಂತಮ್ಮ ಎ೦ಬುವವರ ಖಾಯ೦ ಗಿರಾಕಿಗಳಾಗಿದ್ದೆವು. ಅದುವರೆಗೆನಮಗೆ ಪರಿಚಯವಿದ್ದ ಮಾವಿನ ತಳಿಗಳು ರಸಪುರಿ, ಬಾದಾಮಿ, ಮಲಗೋವ, ನೀಲಂ ಮತ್ತುಕಾಟು ಮಾವಿನ ಹಣ್ಣು.ಇಲ್ಲಿಕರಾವಳಿ ಪ್ರದೇಶದಬೇರೆ ಬೇರೆಜಾತಿ ಹಣ್ಣುಗಳನ್ನು ಬುಟ್ಟಿಯಲ್ಲಿ ಹೊತ್ತುತರುತ್ತಿದ್ದರು.ಹಾಗೆ ಒಂದು ದಿನ ಮಾವಿನಹಣ್ಣಿನ ವಿಷಯ ಬಂದಾಗ ಕೇರಳದ ಸೀನಿಯರ್ ಹುಡುಗಿ‘ ಡುಯು ನೋ ಮುಂಡಪ್ಪ? ಮುಂಡಪ್ಪಇಸ್ ಬೆಸ್ಟ್. ನೆಕ್ಸ್ಟ್ ಟೈಮ್‌ ಯು ಆಸ್ಕ್ ಫಾರ್ ಮುಂಡಪ್ಪ (ನಿಮಗೆ ಮುಂಡಪ್ಪ ಗೊತ್ತಾ? ಮುಂಡಪ್ಪ ಬೆಸ್ಟ್. ಮುಂದಿನ ಸಲ ಮುಂಡಪ್ಪ ಕೇಳಿ)’ ಎಂದಳು. ನಮ್ಮ ಮನಸ್ಸಿನಲ್ಲಿ ಮುಂಡು ಉಟ್ಟು ಬುಟ್ಟಿ ತುಂಬಾ ರಸಭರಿತ ಮಾವಿನ ಹಣ್ಣು ಹೊತ್ತ ಹಳ್ಳಿಗನ ಚಿತ್ರ ಮೂಡಿತ್ತು. ಸರಿ, ನಾವು ಆವತ್ತೇಗಂಗಪ್ಪ ಮತ್ತು ಶಾಂತಮ್ಮರನ್ನು ಬಿಟ್ಟು ಮುಂಡಪ್ಪನಿ೦ದ ಹಣ್ಣುಖರೀದಿಸುವ ನಿರ್ಧಾರ ಮಾಡಿದೆವು.

ಮುಂಡಪ್ಪನಿಗಾಗಿ ಕಾಯತೊಡಗಿದೆವು. ಆ ವಾರ ಬಂದವರೆಲ್ಲರ ಹೆಸರು ಕೇಳಿದೆವು ಅಸ್ರಣ್ಣ, ಚಂಪಕ್ಕ ಹೀಗೆ ಬಂದರೇ ವಿನಃ ಮುಂಡಪ್ಪನ ಸುಳಿವಿಲ್ಲ. ಕಾದೂ ಕಾದೂ ಕಡೆಗೆ ನಮ್ಮಗಂಗಪ್ಪನನ್ನೇ ಮುಂಡಪ್ಪ ಬರಲಿಲ್ಲವಾ ಎಂದರೆ ಆತ ‘ಈ ವಾರ ಇಲ್ಲ ; ಮುಂದಿನವಾರ ಬರಬಹುದು’ ಎಂದ. ಮುಂಡಪ್ಪನಿ೦ದ ಒಳ್ಳೆ ಹಣ್ಣು ಖರೀದಿಸಿ ಸವಿಯುವ ನಿರೀಕ್ಷೆಯಲ್ಲಿದ್ದ ನಮಗೆ ನಿರಾಶೆಯಾಯಿತು. ಮತ್ತೆ ಮುಂದಿನ ವಾರ ಇದೇ ಕತೆ. ಮುಂಡಪ್ಪನ ಸುಳಿವಿಲ್ಲ. ಎರಡು ವಾರ ಕಾದು ಕಡೆಗೆ ಹಳೆ ಗಂಡನ ಪಾದವೇಗತಿ ಎಂದು ಶಾ೦ತಮ್ಮನ ಹತ್ತಿರ ಮಾವಿನ ಹಣ್ಣು ಖರೀದಿಸುವಾಗ ‘ ಅಕ್ಕಾ, ಮುಂಡಪ್ಪ ಉ೦ಟು ಬೇಕಾ?’ ಎಂಬ ಪ್ರಶ್ನೆ ಕೇಳಿ ಎಲ್ಲಿಎಂದು ನೋಡಿದರೆ ಬುಟ್ಟಿಯಲ್ಲಿದ್ದ ಗುಂಡು ಗು೦ಡಾದ ಮುಂಡಪ್ಪ. ನಾವಂದುಕೊ೦ಡ೦ತೆ ಮುಂಡಪ್ಪ ಮನುಷ್ಯನಲ್ಲ, ಮಾವಿನ ಹಣ್ಣಿನತಳಿ !ವಿಷಯ ಗೊತ್ತಾಗಿ ಶಾಂತಮ್ಮನಿಗ೦ತೂ ‘ಮುಂಡಪ್ಪ ಅ೦ದ್ರೆ ಎ೦ತ ಎಣಿಸಿದ್ರಿ ನೀವು’ ಎಂದು ನಗುವೋ ನಗು.

ಅಂತೂ ವಿಶಿಷ್ಟ ರುಚಿಯ ಮುಂಡಪ್ಪ ಬಿರುಬಿಸಿಲನ್ನೂ ಮರೆಸಿ, ಹೊಟ್ಟೆಗೆ ತಂಪೆರೆದಿತ್ತು. ಈಗಲೂ ಮಾವಿನ ಹಣ್ಣು ತಿನ್ನುವಾಗಲೆಲ್ಲಾ ಮುಂಡಪ್ಪ ನೆನಪಾಗುತ್ತದೆ. ದುಃಖದ ಸಂಗತಿಯೆ೦ದರೆ ಒ೦ದೆರಡು ವರ್ಷದ ಹಿಂದೆೆ ಉಡುಪಿಯಲ್ಲಿ ಮುಂಡಪ್ಪ ಕೇಳಿದಾಗ ‘ಅದೆಲ್ಲಾ ಎಲ್ಲುಂಟು ಮರ‍್ರೆ?’ ಎಂಬ ಉತ್ತರ ಸಿಕ್ಕಿತು.
ಹೀಗೆ ಮಣಿಪಾಲ ಎಂದೊಡನೆ ಮೆಸ್, ಮುಂಡಪ್ಪ ಹೀಗೆ ಮೊಗೆದಷ್ಟೂ ಮತ್ತಷ್ಟು ನೆನಪು!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

May 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: