ಡಾ ಕೆ ಎಸ್ ಚೈತ್ರಾ ಅಂಕಣ – ಬಾಯಿ ಭಾರ, ಪರ್ಸ್ ಹಗುರ !

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

12

ಡೆಂಟಿಸ್ಟ್ ಅಂದ ಕೂಡಲೇ ಜನರ ಪ್ರತಿಕ್ರಿಯೆ  ‘ ಅಬ್ಬಾ, ಒಂದು ಸಲ ಡೆಂಟಿಸ್ಟ್ ಹತ್ರ ಹೋದರೆ ಸಾಕು ಬಾಯಿ ಭಾರ, ಪರ್ಸ್ ಹಗುರ ! ಸಾವಿರಗಟ್ಟಲೇ ದುಡ್ಡು ಖರ್ಚಾಗುತ್ತೆ. ಅದಕ್ಕೇ ಬಾಯಿ ತುಂಬಾ ಹುಳುಕು ಹಲ್ಲಿದೆ.  ತಡೆಯಲಾರದಷ್ಟು ಹಲ್ಲು ನೋವಿದೆ ನಿಜ; ಆದರೆ ಡೆಂಟಿಸ್ಟ್ ಹತ್ರ ಹೋದರೆ ಹಲ್ಲಷ್ಟೇ ಅಲ್ಲ ದುಡ್ಡೂ ಕೀಳ್ತಾರೆ. ಅದಕ್ಕೆ ಆದದ್ದಾಗಲಿ ಅಂತ ಸುಮ್ನೇ ಇದ್ದೀನಿ.’  ಜನರಲ್ಲಿರುವ ಈ  ನಂಬಿಕೆ  ನಿಜವೇ, ಒಂದೊಮ್ಮೆ ಹೌದಾಗಿದ್ದರೆ ಅದಕ್ಕೆ ಕಾರಣಗಳೇನು ಎಂದು ಯೋಚಿಸಬೇಕಾದ ವಿಷಯ.

ಅಂದ ಹಾಗೆ, ವಿದ್ಯಾರ್ಥಿಗಳಾಗಿದ್ದ ನಮಗೂ ದಂತಚಿಕಿತ್ಸೆ ಏಕೆ ದುಬಾರಿ ಎಂಬುದು ಅರಿವಾಗಲು ಒಂದೆರಡು ವರ್ಷ ಸಮಯ ಬೇಕಾಗಿತ್ತು. ಈಗಾಗಲೇ ತಿಳಿಸಿದ ಹಾಗೆ ಪ್ರಿಕ್ಲಿನಿಕಲ್ ವಿಭಾಗದಲ್ಲಿ ಪ್ರತಿಕೃತಿಗಳ ಮೇಲೆ ಕೆಲಸ ಮಾಡಿ ಕಲಿತ ನಂತರ ರೋಗಿಗಳಿಗೆ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡುವ ಅವಕಾಶ. ಲ್ಯಾಬ್ ನಲ್ಲಿ ಮಾಡಿದಂತೆ ಇಲ್ಲಿ ಸರಿಯಾಗಿಲ್ಲ ಎಂದು ಮತ್ತೆ ಮತ್ತೆ ಮಾಡುವಂತಿಲ್ಲ. ಅದರ ಜತೆ ಬಳಸುತ್ತಿದ್ದ ವಸ್ತುಗಳ ಬೆಲೆಯೂ ಹೆಚ್ಚು.ಕೆಲವು ವಸ್ತುಗಳ ಲಭ್ಯತೆಯೂ ಕಡಿಮೆ. ಆರಂಭದಲ್ಲಿ ಹಲ್ಲಿನ ಅಳತೆ ತೆಗೆಯಲು ಬೇಕಾದ ಆಲ್ಜಿನೇಟ್ ಎಂಬ ವಸ್ತುವನ್ನು ಬೇಕಾಬಿಟ್ಟಿ ಉಪಯೋಗಿಸಿ ಖಾಲಿ ಮಾಡಿದ್ದೆವು.

ಡಿಪಾರ್ಟ್ಮೆಂಟ್ ನಲ್ಲಿದ್ದ ಸಿಸ್ಟರ್ ನಮ್ಮನ್ನು ಕರೆದು ಹೊಸ ಪ್ಯಾಕ್ ಕೊಟ್ಟು ಇದರ ಬೆಲೆ ನೋಡಿ ಎಂದಿದ್ದರು. ಚಿಕ್ಕ ಪ್ಯಾಕೆಟ್ ಗೆ ಐದುನೂರು ರೂಪಾಯಿ(ಆಗಿನ ಬೆಲೆ). ‘ ಈಗ ನೀವೆಲ್ಲಾ ಸ್ಟುಡೆಂಟ್ಸ್, ಕಾಲೇಜಲ್ಲಿ ಹೇಗೆ ಬೇಕಾದ್ರೂ ಉಪಯೋಗಿಸ್ತೀರಿ. ಒಮ್ಮೆ ನಿಮ್ಮದೇ ಕ್ಲಿನಿಕ್ ಇಟ್ಟ ಮೇಲೆ ಇದೆಲ್ಲಾ ಗೊತ್ತಾಗುತ್ತೆ, ಈ ರೀತಿ ಮಾಡಿದರೆ ಒಂದು ತಿಂಗಳು ಕ್ಲಿನಿಕ್ ನಡೆಸುವುದೂ ಕಷ್ಟ . ಹಾಗಾಗಿ ಇಲ್ಲಿ ಏನೂ ವೇಸ್ಟ್ ಮಾಡದೇ ಸರಿಯಾಗಿ ಕೆಲಸ ಮಾಡುವುದನ್ನು ಕಲಿಯಿರಿ ’ ಎಂಬ ವಾರ್ನಿಂಗ್ ಸಿಕ್ಕಿತ್ತು. ಆಗ ಗೊಣಗಿದರೂ ಕ್ಲಿನಿಕ್ ನ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಾ ಬಂದಂತೆ ಅಲ್ಲಿ ನಡೆಸುವ ವಿವಿಧ ಚಿಕಿತ್ಸಾ ವಿಧಾನಗಳ ಜತೆ  ವಿಶೇಷ ಉಪಕರಣಗಳು,ಅವುಗಳ ನಿರ್ವಹಣೆ ,ತಗಲುವ ವೆಚ್ಚ ಇವೆಲ್ಲದರ ಅರಿವೂ ಮೂಡಿತು.

ದಂತ ಚಿಕಿತ್ಸೆ ನೀಡಲು ವಿಶೇಷವಾಗಿ ವಿನ್ಯಾಸವಾದ ಕುರ್ಚಿ, ಅದು ಕೆಲಸ ಮಾಡಲು ಕಂಪ್ರೆಸ್ಸರ್, ಹಲ್ಲು ಕೊರೆಯುವ ಡ್ರಿಲ್, ಹಲ್ಲು ತೆಗೆಯುವ ವಿಶೇಷ ಉಪಕರಣಗಳು, ಹಲ್ಲು ತುಂಬಲು ನಾನಾ ಬಗೆಯ ವಸ್ತುಗಳು, ಅಳತೆಯ ಸಾಧನಗಳು, ಶುದ್ಧೀಕರಿಸುವ ಆಟೋಕ್ಲೇವ್, ಹಲ್ಲಿನ ರಚನೆ ತಿಳಿಸುವ ಎಕ್ಸರೇ ಮಶೀನ್ ಹೀಗೆ ನೂರಾರು ಸಣ್ಣ ದೊಡ್ಡ ವಸ್ತುಗಳು ಇರುವ ವ್ಯವಸ್ಥಿತ ಕೋಣೆ ಅಗತ್ಯ. ಎಲ್ಲಾ ಉಪಕರಣಗಳು ಕೆಲಸ ಮಾಡಲು ವಿದ್ಯುತ್ ಮತ್ತು ನೀರು ಹೆಚ್ಚಿನ ಪ್ರಮಾಣದಲ್ಲಿ ಬೇಕು. ಹೀಗಾಗಿ ಡೆಂಟಲ್ ಕ್ಲಿನಿಕ್ ಆರಂಭಿಸಲು ಕನಿಷ್ಠ ಬಂಡವಾಳ ಮೂರರಿಂದ ನಾಲ್ಕು ಲಕ್ಷಗಳಾದರೆ, ಕೋಣೆಯ ಬಾಡಿಗೆ- ವಿದ್ಯುತ್- ನೀರು ಇವು ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ದಂತವೈದ್ಯರಿಗೆ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯಕರ ಅವಶ್ಯಕತೆಯೂ ಇರುವುದರಿಂದ ಅವರ ಸಂಬಳವೂ ಸೇರುತ್ತದೆ. ದಂತವೈದ್ಯರು ತಮ್ಮ ಜೀವನಕ್ಕಾಗಿ ಈ ವೃತ್ತಿಯನ್ನು ಅವಲಂಬಿಸಿರುವುದರಿಂದ ಖರ್ಚು ಕಳೆದು ಕೆಲಮಟ್ಟಿಗೆ ಲಾಭ ಬರುವುದು ಜೀವನನಿರ್ವಹಣೆಯ ದೃಷ್ಟಿಯಿಂದ ಅನಿವಾರ್ಯ.

ಆದರೆ ಇಷ್ಟಾಗಿಯೂ ದಂತವೈದ್ಯರ ಬಳಿ ಸಮಾಲೋಚನೆಗಾಗಿ ಹೋದಾಗ ತೆಗೆದುಕೊಳ್ಳುವ ಶುಲ್ಕ ತೀರಾ ಹೆಚ್ಚೇನಲ್ಲ (ಇನ್ನೂರು-ಮುನ್ನೂರು ರೂ).ಹಾಗೆಯೇ ಸಾಧಾರಣ ಫಿಲ್ಲಿಂಗ್, ಕ್ಲೀನಿಂಗ್, ಸಾಮಾನ್ಯ ಹಲ್ಲು ಕೀಳುವುದು ಇವೆಲ್ಲವೂ ಕಡಿಮೆಯೇ ( ಸಾವಿರದ ಒಳಗೆ). ಹಿಂದೆಲ್ಲಾ ಇದಿಷ್ಟೇ ದಂತವೈದ್ಯರು ನೀಡುವ ಪ್ರಮುಖ ಚಿಕಿತ್ಸೆಗಳಾಗಿದ್ದವು. ಹಾಗಾಗಿ ವೆಚ್ಚವೂ ಕಡಿಮೆ ಇತ್ತು. ಆದರೆ ದಂತವೈದ್ಯಕೀಯ ಕ್ಷೇತ್ರ ಕಳೆದ ಎರಡು ದಶಕಗಳಿಂದ ಸಾಧಿಸಿದ ಪ್ರಗತಿ ಗಮನಾರ್ಹ. ಆಧುನಿಕ ತಂತ್ರಜ್ಞಾನವನ್ನು ಹಲವು ಚಿಕಿತ್ಸೆಗಳಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಇದರೊಂದಿಗೆ ಸ್ವಸ್ಥಹಲ್ಲು ಮತ್ತು ಬಾಯಿ, ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯ-ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿ ಎಂಬ ಅರಿವು ಜನರಲ್ಲಿ ಮೂಡಿದೆ. ಹಲ್ಲನ್ನು ಕೀಳಿಸು ಎನ್ನುವುದರ ಬದಲಾಗಿ ಹಲ್ಲನ್ನೂ ಸಾಧ್ಯವಾದಷ್ಟೂ ಉಳಿಸು, ಕೃತಕವಾದದ್ದನ್ನೂ ನೈಜವಾಗಿ ಕಾಣುವಂತೆ ಪ್ರಯತ್ನಿಸು  ಎಂಬುದು ನಮ್ಮ ಈಗಿನ ಗುರಿ. ಇದರಿಂದಾಗಿ ದಿನವೂ ಹೊಸ ಹೊಸವಸ್ತುಗಳು ಚಿಕಿತ್ಸಾ ವಿಧಾನಗಳು ಆವಿಷ್ಕಾರವಾಗಿ, ಸೇರ್ಪಡೆಯಾಗುತ್ತಿವೆ. ಹೀಗೆ ನೀಡುವ ಸಂಕೀರ್ಣ ಚಿಕಿತ್ಸೆಗೆ ತಕ್ಕಂತೆ ಚಿಕಿತ್ಸಾ ವೆಚ್ಚವೂ ಹೆಚ್ಚುತ್ತದೆ.  

ದಂತವೈದ್ಯರ ಬಳಿ ದುಬಾರಿ ಎನ್ನಿಸುವ ಕೆಲವು ಚಿಕಿತ್ಸೆ ಮತ್ತು ಅದಕ್ಕೆ ಕಾರಣ ಹೀಗಿವೆ.(ಚಿಕಿತ್ಸೆಗೆ ತಗಲುವ ಖರ್ಚು ವ್ಯಕ್ತಿ, ಹಲ್ಲು, ವೈದ್ಯ, ವಸ್ತು, ಸ್ಥಳ ಹೀಗೆ ಹಲವು ಅಂಶಗಳನ್ನು ಅವಲಂಬಿಸಿದೆಯಾದರೂ ಇದು ಅಂದಾಜು ವೆಚ್ಚ )

ಫಿಲ್ಲಿಂಗ್; (ಸಾವಿರದಿಂದ-ಎರಡು ಸಾವಿರ) ಹಿಂದೆಲ್ಲಾ ಬೆಳ್ಳಿಯನ್ನು ಹಲ್ಲಿನಲ್ಲಿ ತುಂಬಲಾಗುತ್ತಿತ್ತು. ಈಗ ಪಾದರಸದ ಬಳಕೆ ತೀರಾ ಕಡಿಮೆಯಾಗಿದ್ದರೂ ಬೆಳ್ಳಿಯನ್ನು ಬೇರೆ ರೂಪದಲ್ಲಿ ಬಳಸಲಾಗುತ್ತದೆ. ಹೀಗೆ ಮೂಲವಸ್ತು ಬೆಳ್ಳಿ ದುಬಾರಿ. ಇದಲ್ಲದೇ ಸೌಂದರ್ಯದ ದೃಷ್ಟಿಯಿಂದ ಹಲ್ಲಿನ ಬಣ್ಣದ್ದೇ ಫಿಲ್ಲಿಂಗ್ ಮಾಡಿದರೆ ಉಪಯೋಗಿಸುವ ವಸ್ತು ಕಾಂಪೋಸಿಟ್, ಗ್ಲಾಸ್ ಐನೋಮರ್ ಮುಂತಾದ ವಸ್ತುಗಳ ಬೆಲೆ ಹೆಚ್ಚು.ಇವುಗಳನ್ನು ಬಳಸುವಾಗ ವಿಶೇಷ ಉಪಕರಣಗಳು ಬೇಕು.ಹೀಗಾಗಿ ವಸ್ತುಗಳ ಜತೆ, ಈ ಉಪಕರಣಗಳು ಮತ್ತು ಅವುಗಳ ನಿರ್ವಹಣೆಯ ವೆಚ್ಚ ಸೇರುತ್ತದೆ.

ರೂಟ್ ಕೆನಾಲ್ ಚಿಕಿತ್ಸೆ;(ಮೂರರಿಂದ ಐದು ಸಾವಿರ) ಹಲ್ಲಿನ ಹುಳುಕು ತಿರುಳನ್ನು ತಲುಪಿದಾಗ ಅದನ್ನು ಬರೀ ಫಿಲ್ಲಿಂಗ್ ಮಾಡಿ ಉಳಿಸಲು ಸಾಧ್ಯವಿಲ್ಲ. ಆಗ ಹಲ್ಲಿನ ಬೇರಿಗೆ ಚಿಕಿತ್ಸೆ ನೀಡುವ ಬೇರುನಾಳ ಚಿಕಿತ್ಸೆ ಅಗತ್ಯ. ಇದು ಬಹಳ ಸೂಕ್ಷ್ಮವಾದ ಕೆಲಸವಾಗಿದ್ದು ಸಣ್ಣ ಉಪಕರಣ ಬಳಸಿ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.ಎಕ್ಸ್ ರೇಗಳನ್ನೂ ತೆಗೆಯಲಾಗುತ್ತದೆ. ಕೆಲವು ಬಾರಿ ಚಿಕಿತ್ಸೆ ಪೂರ್ಣವಾಗಲು ಮೂರು-ನಾಲ್ಕು ಬಾರಿ ಹೋಗಬೇಕಾಗುತ್ತದೆ.

ಹಲ್ಲಿನ ಕ್ಯಾಪ್, ಕೃತಕ ಹಲ್ಲು;(ಎರಡರಿಂದ ಹನ್ನೆರಡು ಸಾವಿರ) ಇವುಗಳನ್ನು ತಯಾರಿಸಲು ಡೆಂಟಲ್ ಲ್ಯಾಬಿನ ನೆರವು ಬೇಕು. ದೀರ್ಘಕಾಲ ಬಾಳಿಕೆ ಬರಬೇಕಾದ ಇವುಗಳನ್ನು ತಯಾರಿಸುವಾಗ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಬೇಕು.ಸಾಮಗ್ರಿಗಳ ವೆಚ್ಚ, ಲ್ಯಾಬಿನ ಟೆಕ್ನಿಶಿಯನ್ನರ ವೇತನ ಇವೆಲ್ಲವೂ ಕ್ಯಾಪಿಗೆ ನೀಡುವ ಹಣದಲ್ಲಿ ಸೇರಿರುತ್ತದೆ. 

ವಕ್ರದಂತ ಚಿಕಿತ್ಸೆ;( ಇಪ್ಪತ್ತರಿಂದ ನಲವತ್ತು ಸಾವಿರ) ವಕ್ರವಾದ ಹಲ್ಲನ್ನು ತಂತಿಗಳ ಸಹಾಯದಿಂದ ನಿರ್ದಿಷ್ಟ ಒತ್ತಡ ಹಾಕಿ ಸರಿಯಾದ ಸ್ಥಳಕ್ಕೆ ತರುವುದು ಅತ್ಯಂತ ಕಷ್ಟದ ಕೆಲಸ. ಹಲ್ಲಿನ ಚಲನೆ ನಿಖರವಾಗಿ ಕಂಡುಹಿಡಿದು ಅದಕ್ಕೆ ತಕ್ಕದಾಗಿ ತಂತಿಯಲ್ಲಿ ಮಾರ್ಪಾಟು ಮಾಡಲು ನೈಪುಣ್ಯತೆ ಬೇಕು. ಸಾಕಷ್ಟು ಸಮಯ ಬೇಡುವ ಈ ಚಿಕಿತ್ಸೆಗೆ ಸುಮಾರು ಎರಡರಿಂದ ಮೂರು ವರ್ಷಗಳ ಕಾಲವೇ ಬೇಕಾಗಬಹುದು. 

ಬುದ್ಧಿಹಲ್ಲು ಕೀಳುವಿಕೆ;(ಮೂರರಿಂದ ಐದು ಸಾವಿರ) ದವಡೆಯ ಕೊನೆಯಲ್ಲಿ ಸಿಕ್ಕಿಹಾಕಿಕೊಂಡ ಬುದ್ಧಿಹಲ್ಲು ತೀವ್ರ ಸೋಂಕಿಗೊಳಗಾಗಿ ನೋವು,ಊತ ಕಾಣಿಸಿಕೊಂಡಾಗ ತೆಗೆಯುವುದೇ ಸೂಕ್ತ. ಆದರಿದು ಬೇರೆ ಹಲ್ಲನ್ನು ತೆಗೆದಷ್ಟು ಸುಲಭವಲ್ಲ. ಸುತ್ತಲಿರುವ ವಸಡಿನ ಮೂಳೆಯಿಂದ ಹಲ್ಲನ್ನು ನಿಧಾನವಾಗಿ ಬೇರ್ಪಡಿಸಿ, ಹಲ್ಲನ್ನು ತುಂಡು ಮಾಡಿ ಹೊರತೆಗೆಯಬೇಕು.ನಂತರ ಗಾಯ ಮಾಯಲು ಹೊಲಿಗೆಯನ್ನು ಹಾಕಬೇಕು. ಸೂಕ್ಷ್ಮವಾಗಿ ತಜ್ಞವೈದ್ಯರು ಮಾಡುವ ಸಣ್ಣ ಶಸ್ತ್ರಚಿಕಿತ್ಸೆ ಇದಾಗಿರುವುದರಿಂದ ಸಹಜವಾಗಿಯೇ ಖರ್ಚು ಹೆಚ್ಚು. 

ಡೆಂಟಲ್ ಟೂರಿಸಂ

ಇಷ್ಟೆಲ್ಲಾ ಇದ್ದರೂ ಅಮೆರಿಕಾ, ಇಂಗ್ಲೆಂಡ್, ಜರ್ಮನಿ ಮುಂತಾದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚಿಕಿತ್ಸೆಯ ವೆಚ್ಚ ಅತಿ ಕಡಿಮೆ; ಜತೆಗೆ ಗುಣಮಟ್ಟವೂ ಅತ್ಯುತ್ತಮವಾಗಿದೆ. ಹೀಗಾಗಿ ಅಲ್ಲಿಂದ ಪ್ರತಿ ವರ್ಷ ಇಲ್ಲಿಗೆ ದಂತವೈದ್ಯರ ಬಳಿ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಮೆರಿಕೆಯಲ್ಲಿ ಒಂದು ಕ್ಯಾಪ್ ಮಾಡಿಸುವ ದುಡ್ಡಿನಲ್ಲಿ ಅಲ್ಲಿಂದ ಇಲ್ಲಿಗೆ ಬಂದು ಚಿಕ್ಕ ಪ್ರವಾಸ ಮಾಡಿ ಒಳ್ಳೆಯ ಗುಣಮಟ್ಟದ ಕ್ಯಾಪ್ ಹಾಕಿಸಿಕೊಂಡು ನಗುನಗುತ್ತಾ ಮರಳಲು ಸಾಧ್ಯ!!

ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆಗಳನ್ನು ಪಡೆಯಲು ದಂತವೈದ್ಯಕೀಯ ಕಾಲೇಜುಗಳು ಉತ್ತಮ ಮಾರ್ಗ. ಆದರೆ ಕಾಲೇಜುಗಳ ಸೀಮಿತ ಅವಧಿ, ಇರುವ ದೂರ, ಅಲ್ಲಿ ಫಾರ್ಮ್ ತುಂಬುವ ವಿಧಾನ, ಸಂಪೂರ್ಣ ತಪಾಸಣೆಗಾಗಿ ಒಂದು ವಿಭಾಗದಿಂದ ಇನ್ನೊಂದಕ್ಕೆ ಅಲೆಯುವ ಕಷ್ಟ, ಪೂರ್ವ ನಿಗದಿತ ಭೇಟಿ, ವಿದ್ಯಾರ್ಥಿಗಳು ಕಲಿಯಲು ತಾವು ಪ್ರಯೋಗಪಶುಗಳಾದರೆ ಎಂಬ ಹೆದರಿಕೆ, ಬಳಸುವ ವಸ್ತುಗಳು ಹೇಗಿರುತ್ತದೆಯೋ ಎಂಬ ಆತಂಕ– ಇವೆಲ್ಲವೂ ಕಾಲೇಜುಗಳಿಂದ ಜನರನ್ನು ದೂರವಿಡುತ್ತವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವೆಚ್ಚ ತೀರಾ ಕಡಿಮೆ ನಿಜ. ಆದರೆ ಪರಿಣತ ದಂತವೈದ್ಯರಿದ್ದರೂ ಅನೇಕ ಬಾರಿ ಅತ್ಯಾಧುನಿಕ ಸಾಧನ ಮತ್ತು ವಸ್ತುಗಳ ಕೊರತೆ ಇರುತ್ತದೆ.

ಹಾಗಾದರೆ ಚಿಕಿತ್ಸಾ ಶುಲ್ಕವನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೇ ಎಂದರೆ ಅದು ಕೇವಲ ದಂತವೈದ್ಯರ ಮೇಲೆ ನಿರ್ಧರಿತವಾಗಿಲ್ಲ. ಬಳಸುವ ವಸ್ತು, ಉಪಯೋಗಿಸುವ ಸಾಧನ, ಅದರ ಮೇಲಿನ ತೆರಿಗೆ, ಏರುತ್ತಿರುವ ನೀರು-ವಿದ್ಯುತ್ ಬೆಲೆ, ಬಾಡಿಗೆ , ಲ್ಯಾಬ್ ವೆಚ್ಚ ಎಲ್ಲವನ್ನೂ ಪರಿಗಣಿಸಬೇಕಾಗಿರುವುದರಿಂದ ಏಕರೂಪದ ದರ ನಿಗದಿಪಡಿಸುವುದು ಕಷ್ಟ. ಆದರೂ ದಂತವೈದ್ಯರ ಸಂಘದಿಂದ ಜಿಲ್ಲಾ ಮಟ್ಟದಲ್ಲಿ ಅಂದಾಜು ಬೆಲೆ ನಿರ್ಧರಿಸಬಹುದು. ಸರ್ಕಾರಿ ಆಸ್ಪತ್ರೆ, ಕಾಲೇಜುಗಳಲ್ಲಿ ವೈದ್ಯರು-ವಸ್ತುಗಳು ಸುಲಭವಾಗಿ ಸಿಗುವಂತಾದರೆ ಜನರಿಗೆ ಅನುಕೂಲ. ಡೆಂಟಲ್ ಇನ್‌ಶ್ಯೂರೆನ್ಸ್ ಕೆಲಮಟ್ಟಿಗೆ ಸಹಾಯಕ.

ಇವೆಲ್ಲಕ್ಕಿಂತ ಸುಲಭ ಮಾರ್ಗವೆಂದರೆ ಜನರು, ಹಲ್ಲು ಮತ್ತು ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿದಲ್ಲಿ ಚಿಕಿತ್ಸೆಯ ವೆಚ್ಚ ಕಡಿಮೆಯಾಗುತ್ತದೆ. ದಿನಕ್ಕೆರಡು ಬಾರಿ ಬ್ರಶಿಂಗ್, ತಿನ್ನುವ ಆಹಾರದ ಬಗ್ಗೆ ಎಚ್ಚರಿಕೆ ವಹಿಸಿ ಕಾಲಕಾಲಕ್ಕೆ ತಪಾಸಣೆ, ಕ್ಲೀನಿಂಗ್ , ಆರಂಭಿಕ ಹಂತದಲ್ಲಿ ಹುಳುಕು ಪ್ರತಿಬಂಧಿಸುವಿಕೆ ಮಾಡಿಸಿದರೆ ಹೆಚ್ಚಿನ ಸಂಕೀರ್ಣ, ದುಬಾರಿ ಚಿಕಿತ್ಸೆಯ ಅಗತ್ಯವೇ ಇಲ್ಲ ! ಸಮಸ್ಯೆ ಸಣ್ಣದಿದ್ದಾಗ ಚಿಕಿತ್ಸೆ ಸುಲಭ ಮತ್ತು ಖರ್ಚು ಕಡಿಮೆ. ಆದ್ದರಿಂದ ಸಮಸ್ಯೆ ತೀವ್ರಗೊಂಡಾಗ ದಂತವೈದ್ಯರ ಬಳಿ ಭೇಟಿ ನೀಡಿ ದುಬಾರಿ ಎಂದು ಗೊಣಗುವ ಬದಲು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಹಲ್ಲು ಮತ್ತು ಬಾಯಿ ನಮಗೆಷ್ಟು ಮುಖ್ಯ, ದಂತವೈದ್ಯರ ಕೆಲಸವೇನು ಎಂಬುದನ್ನು ಸರಿಯಾಗಿ ಅರಿತಾಗ ಮಾತ್ರ ಚಿಕಿತ್ಸೆಯ ವೆಚ್ಚದ ಬಗ್ಗೆ ಸ್ಪಷ್ಟ ಅಭಿಪ್ರಾಯ ಸಿಗಲು ಸಾಧ್ಯ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

June 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: