ಡಾ ಕೆ ಎಸ್ ಚೈತ್ರಾ ಅಂಕಣ – ಗುಮ್ಮನ ಕರೆಯದಿರೆ….??

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

14


ಎರಡು ವರ್ಷ ಪ್ರಿಕ್ಲಿನಿಕಲ್ ಲ್ಯಾಬ್ ಗಳಲ್ಲಿ ಕೆಲಸ ಮಾಡಿ ಮೂರನೇ ವರ್ಷದಲ್ಲಿ ಕ್ಲಿನಿಕಲ್ಸ್ ಗೆ ಅಂದರೆ ರೋಗಿಗಳಿಗೆ ನೇರವಾಗಿ ಚಿಕಿತ್ಸೆ ನೀಡುವ ಹಂತ ತಲುಪಿದ್ದಾಯ್ತು. ನಾವು ಏನೇ ಮಾಡಿದರೂ ಸೀನಿಯರ್ ಮತ್ತು ಪ್ರೊಫೆಸರ್ ಗಳು ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ತಪ್ಪಾದಲ್ಲಿ ಕೂಡಲೇ ಧಾವಿಸಿ ಬರುತ್ತಿದ್ದರು. ಹಾಗೊಂದು ದಿನ ನಮ್ಮ ಪೋಸ್ಟಿಂಗ್, ಮಕ್ಕಳ ಡಿಪಾರ್ಟ್ ಮೆಂಟಿನಲ್ಲಿ ಇತ್ತು. ನಮಗೆ ಇಲ್ಲಿ ಕೆಲಸ ಮಾಡಲು ಬಹಳ ಖುಷಿಯಿತ್ತು. ಮಕ್ಕಳಿಗಾಗಿ ಆಟಿಕೆ, ಬಣ್ಣ ಬಣ್ಣದ ಕತೆ ಪುಸ್ತಕ, ಅಕ್ವೇರಿಯಂ, ಬಣ್ಣದ ಪೆನ್ಸಿಲ್ ಹೀಗೆ ನೋಡಲು ಇಡೀ ಕಟ್ಟಡದಲ್ಲೇ ಆಕರ್ಷಕ ಎನ್ನಿಸುವ ಸ್ಥಳ. ಎಲ್ಲಕ್ಕಿಂತ ಮಕ್ಕಳದ್ದು ಅಂದ ಮೇಲೆ ಕೆಲಸ ಹೆಚ್ಚಿರುವುದಿಲ್ಲ ಎಂಬ ಧೈರ್ಯ. (ನನಗಂತೂ ಮಕ್ಕಳೆಂದರೆ ಆಗಲೂ- ಈಗಲೂ ನನಗೆ ಪ್ರೀತಿ .ವಯಸ್ಸಾದರೂ ಇನ್ನೂ ಹುಡುಗು ಬುದ್ಧಿ, ಹಾಗಾಗಿ ಜೊತೆ ಸರಿಯಾಗುತ್ತೆ ಎಂದು ನನ್ನನ್ನು ಬಲ್ಲ ಅನುಭವಿಗಳ ಮಾತು! ) ಒಟ್ಟಿನಲ್ಲಿ ಆರಾಮದ ಕೆಲಸ ಎಂದು ಹಲ್ಲು ಕಿರಿಯುತ್ತಾ ಖುಷಿಯಾಗಿ ಕ್ಲಿನಿಕ್ ಪ್ರವೇಶಿಸಿದ್ದಾಯ್ತು.ಪರಿಸ್ಥಿತಿ

ನಮ್ಮ ಪಾಲಿನ ಮೊದಲ ಪೇಶೆಂಟ್ ನಡೆದು ಬರಲಿಲ್ಲ; ಅಪ್ಪ-ಅಮ್ಮ ಕೈ ಕಾಲು ಹಿಡಿದು ಎಳೆದು ತಂದರು.ಮುಖ ಊದಿತ್ತು ಸಿಟ್ಟು ಮತ್ತು ಸೋಂಕಿನಿಂದ! ಸುಮಾರು ಆರೇಳು ವರ್ಷದ ಪುಟ್ಟ ಹುಡುಗಿ. ಕೆಳಗಿನ ದವಡೆಯ ಹಿಂದಿನ ಹಲ್ಲು ಹುಳುಕಾಗಿ ಸೋಂಕಾಗಿ, ಊತ ಬಂದಿತ್ತು. ಹಲ್ಲನ್ನು ಪರೀಕ್ಷಿಸಿ ಮಾತ್ರೆ ಕೊಟ್ಟು ಹುಳುಕಿನ ಮಟ್ಟ ಪರಿಶೀಲಿಸಬೇಕಿತ್ತು..ಆದರೆ ನೋಡುವ ಅವಕಾಶ ನಮಗಿರಲಿಲ್ಲ. ಏಕೆಂದರೆ ಕ್ಲಿನಿಕ್ ಒಳಗೆ ಬರುವ ತನಕ ‘ ಈಗಲೇ ಮನೆಗೆ ಹೋಗುವನಾ’ ಎಂದು ಬೊಬ್ಬೆ ಹಾಕುತ್ತಿದ್ದ ಹುಡುಗಿ ಈಗ ನಮ್ಮನ್ನು ನೋಡಿದೊಡನೆ ಬಾಯಿ ಬಿಗಿ ಹಿಡಿದು ಗೊಂಬೆಯಂತೆ ನಿಂತು ಬಿಟ್ಟಿದ್ದಳು.ಕಣ್ಣಲ್ಲಿ ನೀರು ಸುರಿಯುತ್ತಿತ್ತು. ‘ ಎಂತ ಸಾ ಮಾಡುವುದಿಲ್ಲವಾ ಅವ್ರು, ರಪ್ಪ ಬಾಯಿ ತೆರೆದು ಬಿಡು ’ ಅಪ್ಪ-ಅಮ್ಮರ ಪುಸಲಾಯಿಸುವಿಕೆ ವ್ಯರ್ಥ. ಮಕ್ಕಳ ಮೇಲೆ ಕೆಲಸ ಸುಲಭ ಎಂದು ಆರಾಮದಲ್ಲಿದ್ದ ನಮಗೆ ದಿಕ್ಕು ತೋಚದ ಪರಿಸ್ಥಿತಿ.

ನಮ್ಮನ್ನು ದುರುದುರು ನೋಡುತ್ತಾ ಉಲಿಯಿತು ಗೊಂಬೆ ‘ ನಂಗೆ ಎಲ್ಲ ಗೊತ್ತುಂಟು, ನೀವೇ ಹೇಳಿಲ್ಲವಾ…ಗಲಾಟೆ ಮಾಡಿದ್ರೆ ಈ ಹಲ್ಲಿನ ಡಾಕ್ಟರ್ ಇಕ್ಳ ತರ್ತಾರೆ, ಸೂಜಿ ಚುಚ್ತಾರೆ, ಸರೀ ನೋವು ಆಗ್ತದೆ ಅಂತ! ಶ್ಶೀ, ಇವ್ರೆಲ್ಲಾ ಗುಮ್ಮನ ಹಾಗೆ ಇದ್ದಾರೆ. ಬಾಯಿ ತೆರೆದ್ರೆ ಅಷ್ಟೇ! ಎಂತ ಬೇಡ..ಈಗಾಲೇ ಮನೆಗೆ ಹೋಗುವನಾ ’.ಈ ಚಿಕ್ಕ ಮಗುವಿನ ಕೆಲಸ ಮಾಡುವುದು ಹೇಗಪ್ಪಾ ಎಂಬ ತಲೆಬಿಸಿಯ ಜತೆ ಗುಮ್ಮನ ಹಾಗಿದ್ದೇವೆ ಎಂಬ ಪ್ರಶಂಸೆಯ ಬರೆ ಬೇರೆ ! ಆ ಕ್ಷಣಕ್ಕೆ ಪುರಂದರದಾಸರ ದೇವರನಾಮ ಹಾಡೋಣ ಅನ್ನಿಸಿತು. ಆದರೂ ಸೂಕ್ತವಲ್ಲ ಎನಿಸಿ ಹ್ಯಾಪು ಮೋರೆ ಹಾಕಿ ನಿಂತಿದ್ದಾಯ್ತು. ಪ್ರೊಫೆಸರ್ ಬಂದವರೇ ಅಪ್ಪ-ಅಮ್ಮ ಮಗುವನ್ನು ಮತ್ತೊಂದು ಕೋಣೆಗೆ ಒಯ್ದು ಕೂರಿಸಿದರು. ನಂತರ ನಮಗೆ ಮಕ್ಕಳ ವಿಭಾಗದಲ್ಲಿ ಈ ರೀತಿಯ ಪ್ರಕರಣಗಳು ಸಾಮಾನ್ಯ. ಇದನ್ನು ನಿಭಾಯಿಸುವುದರ ಜತೆ ಅದಕ್ಕೆ ಕಾರಣವನ್ನೂ ತಿಳಿದಿರಬೇಕು. ಪೋಷಕರಿಗೆ ಈ ಕುರಿತು ಅರಿವು ಮೂಡಿಸಬೇಕು ಎಂದರು.

ಸಾಮಾನ್ಯವಾಗಿ ಮನೆಯಲ್ಲಿ ಮಗು ಏನಾದರೂ ತಪ್ಪು ಮಾಡಿದಾಗ ಪೋಷಕರು ಹೆದರಿಸುವ ಮಾತು ‘ ತಡಿ, ನಿಂಗೆ ಆ ಡಾಕ್ಟ್ರ ಹತ್ತಿರ ಎಳೆದುಕೊಂಡು ಹೋದ್ರೆ ಸೂಜಿ ಚುಚ್ಚಿ , ಎಲ್ಲಾ ಹಲ್ಲು ಕಿತ್ತು ಕೊಡ್ತಾರೆ ’. ಹಾಗೇ ದಂತವೈದ್ಯರನ್ನು ಕಂಡೊಡನೆ ‘ ಇವರು ಯಾರು ಗೊತ್ತಾ? ಹಲ್ಲಿನ ಡಾಕ್ಟ್ರು! ಹೆಚ್ಚಿಗೆ ತರಲೆ ಮಾಡಿದ್ರೆ ಇವರ ಹತ್ರನೇ ಕರೆದುಕೊಂಡು ಹೋಗೋದು’ ಎಂದು ಮಗುವಿಗೆ ಪರಿಚಯ ಮಾಡಿಸುತ್ತಾರೆ. ಮಗು ಒಳ್ಳೆಯ ನಡವಳಿಕೆ ಕಲಿಯಲಿ, ಶಿಸ್ತು ರೂಢಿಸಿಕೊಳ್ಳಲಿ ಎಂಬುದು ಇದರ ಹಿಂದಿರುವ ಉದ್ದೇಶ. ಆದರೆ ಪೋಷಕರ ಇಂಥ ವರ್ತನೆಯಿಂದ ದಂತವೈದ್ಯರ ಬಗ್ಗೆ ಮಗು ತನಗೆ ನೋವು ಮಾಡುವವರು ಎಂಬ ಅಭಿಪ್ರಾಯ ರೂಪಿಸಿಕೊಳ್ಳುತ್ತದೆ. ಹಾಗಾಗಿಯೇ ಮಗುವಿನೊಂದಿಗೆ ಮಾತನಾಡುವಾಗ ನೋವು, ಕೀಳು, ಸೂಜಿ, ಇಕ್ಕಳ ಮುಂತಾದ ಶಬ್ದಗಳನ್ನು ಬಳಸಬಾರದು. ಇದನ್ನೆಲ್ಲಾ ಕೇಳುತ್ತಾ ಹೋದಂತೆ ಹೌದಲ್ಲಾ ನಾವು ರೂಢಿಸಿಕೊಂಡ ಅದೆಷ್ಟು ವರ್ತನೆಗಳು ನಮಗೇ ಅರಿವಿಲ್ಲದ ಹಾಗೆ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿ ಬಿಡುತ್ತವೆ ಎನಿಸಿತು.

ದಂತವೈದ್ಯರಾದ ನಮಗೆ ನಾವೆಂದರೆ ಹೆಮ್ಮೆ ಸಹಜವೇ. ಮುಖದ ಸೌಂದರ್ಯ, ಸ್ಪಷ್ಟ ಮಾತು, ಆಹಾರ ಅಗಿಯುವಿಕೆ, ದವಡೆಗಳ ಬೆಳವಣಿಗೆ ಈ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವ ಹಲ್ಲುಗಳ ಆರೋಗ್ಯ ಕಾಪಾಡುವ ಡಾಕ್ಟರ್ ಎಂಬ ಅಭಿಮಾನ ! ಆದರೆ ಮಗುವಿನ ದೃಷ್ಟಿಯಿಂದ ಯೋಚಿಸಿದಾಗ ಬೇರೆಯೇ ಚಿತ್ರಣ. ಅಪರಿಚಿತ ಜಾಗದಲ್ಲಿ ಕಂಡು-ಕೇಳರಿಯದ ವಸ್ತುಗಳನ್ನು ನೋಡುವುದು , ಬಿಳಿ ಕೋಟು ಧರಿಸಿ ಕೈ-ಬಾಯಿಕವಚ ಹಾಕಿದ ವ್ಯಕ್ತಿ ಬಾಯೊಳಗೆ ಏನನ್ನೋ ಮಾಡುವುದು, ತುಂಬಾ ನೋವಾಗುತ್ತದೆ ಎಂಬ ಸಂಶಯ, ಕುರ್ಚಿಯಿಂದ ಬಿದ್ದರೆ ಎಂಬ ಆತಂಕ, ಟಿವಿಯಲ್ಲಿ ನೋಡಿದ – ಇತರರಿಂದ ಕೇಳಿದ ಭಯಾನಕ ಚಿತ್ರಣ… ಇವೆಲ್ಲದರಿಂದ ಮಗುವಿಗೆ ದಂತವೈದ್ಯರ ಬಗ್ಗೆ ಗಾಬರಿ ಮೂಡಿ ಗುಮ್ಮ ಎನಿಸುವುದು ಸಹಜ.ಈ ಕಾರಣಗಳು ಮಗು ಅಗತ್ಯವಾದ ಚಿಕಿತ್ಸೆ ನಿರಾಕರಿಸಲು ಅಥವಾ ಹಠ ಮಾಡುವಂತೆ ಪ್ರಚೋದಿಸುತ್ತದೆ. ಹಾಗಾಗಿ ಯಾವುದೇ ಚಿಕಿತ್ಸೆ ಆರಂಭಿಸುವ ಮೊದಲು ಒಳಗಿನ ಹೆದರಿಕೆ ಹೋಗಲಾಡಿಸಬೇಕು, ಮಗುವಿಗೆ ಧೈರ್ಯ ಮೂಡಿಸಬೇಕು ಎಂದರು. ಡೆಂಟಲ್ ಮತ್ತು ಮೆಂಟಲ್ ಪ್ರಾಸಬದ್ಧ ಶಬ್ದಗಳಷ್ಟೇ ಅಲ್ಲ, ನಿಕಟ ಸಂಬಂಧವೂ ಇದೆ ಎಂದು ಅರಿವಾಗಿದ್ದು ಆಗಲೇ!

ಆ ದಿನ ಪ್ರೊಫೆಸರ್ ನಮ್ಮ ಹೀರೋಯಿನ್ ಗೆ ನೋವಿನ ಮಾತ್ರೆ ಬರೆದುಕೊಟ್ಟ ನಂತರ ಏನು ಮಾಡಬೇಕು ಎಂಬುದನ್ನು ತಿಳಿಸಿದರು. ನಾವು ಏಪ್ರನ್ ತೆಗೆದಿಟ್ಟು ಸುಮ್ಮನೇ ಅವಳೊಂದಿಗೆ ಕುಳಿತುಕೊಂಡು ಚಿಕಿತ್ಸೆಗೆ ಉಪಯೋಗಿಸುವ ಬಾಯಿಕನ್ನಡಿ, ಲೈಟ್, ಕವಚಗಳು ಇವೆಲ್ಲದರ ಬಗ್ಗೆ ತಿಳಿಸಿ, ಅವಳಿಗೇ ಕೈಯ್ಯಲ್ಲಿ ಹಿಡಿದು ತೋರಿಸಿದೆವು. ( ಈ ಕನ್ನಡಿ ಚೆಂದ ಉಂಟು, ಆದ್ರೆ ತಲೆ ಬಾಚಿಕೊಳ್ಳಲು ಸಣ್ಣ ಆಗ್ತದೆ.. ಅವಳ ಅಭಿಪ್ರಾಯ). ನಾವು ಬಾಯಿ ಪರೀಕ್ಷಿಸುವ ಕಾರಣ ಬರೀ ಹಲ್ಲು ಕೀಳುವುದಲ್ಲ. ಹಲ್ಲಿನಲ್ಲಿ ಏನಾದರೂ ಕೊಳಕು ವಸ್ತು, ಸಣ್ಣ ಕ್ರಿಮಿ ಇದ್ದಲ್ಲಿ ತೆಗೆದು ಹಾಕಿ ಗುಣ ಪಡಿಸುತ್ತಾರೆ ಎಂದು ಆಕೆಗೆ ಅರ್ಥವಾಗುವ ಹಾಗೆ ವಿವರಿಸಿದೆವು.. ದೊಡ್ಡ ಚಿತ್ರಗಳಿರುವ ಪುಸ್ತಕಗಳನ್ನು ಆಕೆಗೆ ತೋರಿಸಿದೆವು.( ಅದರೊಂದಿಗೇ ಮನೆಯಲ್ಲಿ ದಂತವೈದ್ಯರು ಮಾಡುವ ಹಾಗೆ ಮಗುವನ್ನು ಅರ್ಧ ಮಲಗಿಸಿ ‘ಡಾಕ್ಟರ್-ಪೇಷೆಂಟ್ ’ ಆಟ ಆಡಿಸಿ ಎಂದು ಪೋಷಕರಿಗೆ ಸೂಚನೆ ನೀಡಲಾಯಿತು. ಆಟ ಎಂದೊಡನೆ ಮಗು ಆನಂದಿಸುತ್ತದೆ. ಹಾಗೇ ಮುಂದಿನ ಭೇಟಿಗೆ ಮಾನಸಿಕವಾಗಿ ತಯಾರಾಗುತ್ತದೆ).ಅಂತೂ ಇಷ್ಟೆಲ್ಲಾ ಸಿದ್ಧತೆಯಿಂದ ವಾರದ ನಂತರ ಆ ಹುಡುಗಿಯ ಒಂದು ಫಿಲ್ಲಿಂಗ್ ಮಾಡಿ ಮುಗಿಸಿದಾಗ ವರ್ಲ್ಡ್ ಕಪ್ ಗೆದ್ದಷ್ಟೇ ಖುಷಿ!

ಮಕ್ಕಳ ವಿಭಾಗದಲ್ಲಿ ಕೆಲಸ ಮಾಡುತ್ತಾ ಅದು ಮಕ್ಕಳಾಟವಲ್ಲ ಎಂಬುದು ಅನುಭವಕ್ಕೆ ಬಂತು. ಬಾಯಿ ಸಣ್ಣ, ಹಲ್ಲೂ ಪುಟ್ಟವು ಜತೆಗೆ ಮನಸ್ಸೂ ಸೂಕ್ಷ್ಮ. ಹೀಗಾಗಿ ಮಕ್ಕಳ ಮನಸ್ಸನ್ನು ಒಲಿಸಿ ಅಳದಂತೆ ಬಾಯಿ ತೆರೆಯುವಂತೆ ಮಾಡುವುದು ದೊಡ್ಡ ಸಾಹಸ. ನಂತರ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜತೆಗೆ ಪೋಷಕರ ಆತಂಕ, ಪ್ರೀತಿ, ಕಾಳಜಿ ಎಲ್ಲವೂ ಸಹಜವಾದರೂ ಅದನ್ನೂ ನಿಭಾಯಿಸಬೇಕು ! ಮಕ್ಕಳು ಅವರ ಜತೆ ಬರುತ್ತಿದ್ದ ಪೋಷಕರ ಜತೆ ಬೆರೆಯುವ ಅವಕಾಶ ದೊರೆತಿದ್ದುದ್ದರಿಂದ ಮಾಡುತ್ತಿದ್ದ ಸಾಮಾನ್ಯ ತಪ್ಪುಗಳೂ ಅರಿವಾದವು. ಉದಾಹರಣೆಗೆ ಪೋಷಕರು ತಮ್ಮ ದಂತಾರೋಗ್ಯಕ್ಕೆ ಸಂಬಂಧಿತ ಬಾಲ್ಯದಲ್ಲಿನ ಅಥವಾ ಹಳೆಯ ನೋವಿನ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾರೆ, ಇತರರಿಗಾದ ಕೆಟ್ಟ ಅನುಭವಗಳ ಚರ್ಚೆ ನಡೆಸುತ್ತಾರೆ.ಆ ಸಂದರ್ಭದಲ್ಲಿ ಕಣ್ಣು ಬಾಯಿ ಬಿಟ್ಟು ಮಗು ಕತೆ ಕೇಳಿದರೂ ಎಳೆ ಮನಸಿಗೆ ಕ್ಲಿನಿಕ್, ಡೆಂಟಿಸ್ಟ್, ನೋವು ಸಮಾನಾರ್ಥಕ ಪದಗಳಾಗುತ್ತವೆ. ಅದರ ಬದಲು ನೋವನ್ನು ಗುಣಪಡಿಸಿದ ಅನುಭವ ಹಂಚಿಕೊಳ್ಳುವುದು ಉತ್ತಮ. ಏಕೆಂದರೆ ಮಗುವಿಗೆ ದಂತವೈದ್ಯರಲ್ಲಿ ವಿಶ್ವಾಸ ಇದ್ದಾಗ ಚಿಕಿತ್ಸೆ ನೀಡುವುದು ಸುಲಭ.

ಇದಲ್ಲದೇ ಅನೇಕ ಬಾರಿ ಮಗುವನ್ನು ದಂತವೈದ್ಯರ ಬಳಿ ಹೇಗಾದರೂ ಮಾಡಿ ಕರೆದೊಯ್ಯಲು ಪೋಷಕರು ಒಡ್ಡುವ ಆಮಿಷ ದೊಡ್ಡ ಚಾಕಲೇಟ್ ! ಕೂಡಲೇ ಮಗು ಜಾಗೃತವಾಗುತ್ತದೆ. ಅಲ್ಲಿಗೆ ಹೋದಾಗ ತನಗೆ ನೋವಾಗುವಂಥದ್ದು ಏನೋ ಮಾಡಲಾಗುತ್ತದೆ, ಅದಕ್ಕೇ ಈ ಲಂಚ ಎಂದು ಭಾವಿಸುತ್ತದೆ. ಅದೂ ಅಲ್ಲದೇ ನಮ್ಮ ಬಳಿ ಬಂದಾಗ ( ದಂತವೈದ್ಯರು) ಆದಷ್ಟೂ ಕಡಿಮೆ ಸಿಹಿ ತಿಂಡಿಯ ಬಳಕೆ ಬಗ್ಗೆ ವಿವರಿಸುವಾಗ ಪೋಷಕರಿಂದ ಈ ರೀತಿಯ ವರ್ತನೆ ಮಗುವಿಗೆ ಗೊಂದಲ ಉಂಟುಮಾಡುತ್ತದೆ. ಇದರ ಬದಲಿಗೆ ಮಗುವಿಗೆ ವೈದ್ಯರ ಭೇಟಿಯ ನಂತರ ಒಳ್ಳೆಯ ನಡತೆಗಾಗಿ, ಧೈರ್ಯವಾಗಿ ಕುಳಿತಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಬೇಕು. ಸಣ್ಣ ಆಟಿಕೆ, ಕತೆ ಪುಸ್ತಕ ಏನನ್ನಾದರೂ ಕೊಟ್ಟು ಪ್ರೋತ್ಸಾಹಿಸಬಹುದು. ಸಿಹಿಯನ್ನು ನೀಡುವುದು ಖಂಡಿತಾ ತಪ್ಪು! ಎಲ್ಲಕ್ಕಿಂತ ಮುಖ್ಯವಾಗಿ ಕೇವಲ ತೊಂದರೆ ಕಾಣಿಸಿಕೊಂಡಾಗ ಮಾತ್ರ ದಂತವೈದ್ಯರ ಭೇಟಿ ಬದಲು ನಿಯಮಿತವಾಗಿ ಮಕ್ಕಳನ್ನು ಚೆಕ್ ಅಪ್ ಗೆ ಕರೆದುಕೊಂಡು ಹೋಗಬೇಕು. ಮಗುವಿಗೆ ಒಂದು ವರ್ಷವಾದಾಗ ಅಥವಾ ಬಾಯಿಯಲ್ಲಿ ಮೊದಲ ಹಲ್ಲು ಮೂಡಿದಾಗ ಮೊದಲ ಬಾರಿ ಬಾಯಿಯ ಪರೀಕ್ಷೆ ನಡೆಯಬೇಕು. ಇದರಿಂದಾಗಿ ಚಿಕ್ಕಂದಿನಲ್ಲಿಯೇ ಮಗುವಿಗೆ ಆ ವಾತಾವರಣ ಮತ್ತು ವೈದ್ಯರ ಪರಿಚಯವಿರುತ್ತದೆ.

ಇಷ್ಟೆಲ್ಲಾ ಮಾಡಿದರೂ ಮಗು, ಚಿಕಿತ್ಸೆ ಪಡೆಯುವಾಗ ಸ್ವಲ್ಪ ಮಟ್ಟಿಗೆ ಅಳು – ಗಲಾಟೆ – ಕೊಸರಾಟ ನಿರೀಕ್ಷಿತ.ಆಗ ಪೋಷಕರು ಸ್ವಲ್ಪ ತಾಳ್ಮೆ ವಹಿಸುವುದು ಅಗತ್ಯ. ಪೋಷಕರು ತಾವೇ ತೀರಾ ಗಾಬರಿಯಾದರೆ ಮಗುವಿನ ಅಳು-ಹಠ ಇನ್ನಷ್ಟು ಹೆಚ್ಚುತ್ತದೆ.ಮಗುವನ್ನು ನಿಭಾಯಿಸಲು ದಂತವೈದ್ಯರು ಹಾಗೂ ಸಿಬ್ಬಂದಿ ತರಬೇತಿ ಪಡೆದಿದ್ದರೂ ಪೋಷಕರ ಅತಿ ಪಾಲ್ಗೊಳ್ಳುವಿಕೆ ಚಿಕಿತ್ಸೆಗೆ ಅಡ್ಡಿಯಾಗುತ್ತದೆ. ತೀರಾ ಚಿಕ್ಕ ಮಕ್ಕಳಾದರೆ ಪೋಷಕರ ತೊಡೆಯ ಮೇಲೇ ಮಗುವನ್ನು ಕೂರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ ದೊಡ್ಡ ಮಕ್ಕಳಿಗೆ ವೈದ್ಯರ ಅವರ ಸಲಹೆಯಂತೆ ಹೊರಗೆ ಕಾಯುವುದು ಅಥವಾ ಅಲ್ಲೇ ದೂರ ನಿಲ್ಲುವುದು ಒಳ್ಳೆಯದು. ಮಗುವಿಗೆ ದಂತವೈದ್ಯರ ಭೇಟಿ ತನ್ನ ಆರೋಗ್ಯ ಕಾಪಾಡಲು-ಚೆಂದ ಕಾಣಲು ಅವಶ್ಯಕ ಎಂಬುದನ್ನು ಮನದಟ್ಟು ಮಾಡಿಸುವುದು ಪೋಷಕರ ಜವಾಬ್ದಾರಿ. ಹಾಗೆಯೇ ಅದರಲ್ಲಿ ಆಯ್ಕೆಯ ಪ್ರಶ್ನೆಯಿಲ್ಲ ಎಂಬುದೂ ಮಗುವಿಗೆ ಅರಿವಾಗಬೇಕು. ದಂತವೈದ್ಯರೆಂದರೆ ನೋವು ಮಾಡುವ ಗುಮ್ಮ ಅಲ್ಲ; ನಗು ಅರಳಿಸುವವರು ಎಂಬ ಭಾವನೆ ಮಗುವಿಗೆ ಮೂಡಿದಾಗ ಭೇಟಿ ಸುಲಭ ಮತ್ತು ಚಿಕಿತ್ಸೆ ಫಲಕಾರಿ.

‍ಲೇಖಕರು Admin

June 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: