ಡಾ ಕೆ ಎಸ್ ಚೈತ್ರಾ ಅಂಕಣ – ಎರಡುಜಡೆಯ ಹುಡುಗಿ…

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

11

ಪುಟ್ಟ ನಗರದಲ್ಲಿ, ಅಪ್ಪಅಮ್ಮರಕಣ್ಣ ನೆರಳಿನಲ್ಲಿ ಕಾಲೇಜು ಮುಗಿಸಿದ್ದಾಗಿತ್ತು. ವೃತ್ತಿಪರ ಶಿಕ್ಷಣಕ್ಕಾಗಿ ಮಣಿಪಾಲಕ್ಕೆ ಕಾಲಿಟ್ಟಿದ್ದೆ. ಹೇಗೆ ಏನು ಎತ್ತ ಏನೂ ತಿಳಿಯದ ಗೊಂದಲದ ಜತರ‍್ಯಾಗಿಂಗ್ ಎಂಬ ಭೂತದ ಹಾವಳಿ ಜೋರಾಗಿದ್ದ ಕಾಲ ಅದು. ನಿಜವೋ ಸುಳ್ಳೋ ಅಂತೂ ದಿನಕ್ಕೊಂದು ಕತೆ ಧಾರಾವಾಹಿಯಂತೆ ಎಲ್ಲೆಲ್ಲಿಂದಲೋ ಬೇಡವೆಂದರೂ ಕಿವಿಗೆ ಬೀಳುತ್ತಿತ್ತು. ಕೆಲವರು ತುಂಬಾ ಹೆದರಿಕೆ ಅಂದರೆ ಮತ್ತೆ ಕೆಲವರು ಸೀನಿಯರ್ಸ್ ಕ್ಲೋಸ್‌ ಆಗೋದೇ ಹೀಗೆ ಎಂದು ಸಮರ್ಥಿಸಿಕೊಳ್ಳುತ್ತಿದ್ದರು. ನಮಗಂತೂ ಏನೂ ತಿಳಿಯದ ಸ್ಥಿತಿ .

ಹುಟ್ಟಿದೂರು ಬಿಟ್ಟುದೊಡ್ಡ ಕಟ್ಟಡಗಳ ನಗರಕ್ಕೆ ಬಂದು ಸೇರಿದಾಗ ಇಷ್ಟೊಂದ್‌ ಜನ ಇಲ್ಲಿ ಯಾರು ನನ್ನೋರು ಎಂಬ ಗಲಿಬಿಲಿ. ಸಮಾಧಾನವೆಂದರೆ ಗಲಿಬಿಲಿಗೆ ಒಳಗಾದ ನಮ್ಮಂಥವರೇ ಕ್ಲಾಸಿನ ತುಂಬಾ ಇದ್ದರು. ಹಾಗಾಗಿ ಸಮಾನಗೊಂದಲಿಗರಲ್ಲಿ ಸ್ನೇಹ ಬೆಳೆಯಲು ತಡವಾಗಲಿಲ್ಲ. ಮೊದಲ ದಿನವೇ ಅಧ್ಯಾಪಕರು ‘ ಓದಲು ಬಂದಿದ್ದೀರಿ, ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳಿ. ಆರಂಭದಲ್ಲಿ ಸ್ವಲ್ಪಕಷ್ಟ ಅನಿಸುವುದು ಸಹಜರ‍್ಯಾಗಿಂಗ್ ಬಗ್ಗೆ ಹೆದರಿಕೆಇರಬಹುದು. ಯಾರಾದರೂ ಮನಸ್ಸಿಗೆ, ದೇಹಕ್ಕೆ ನೋವಾಗುವ ರೀತಿ ಮಾಡಿದಲ್ಲಿ ನಮ್ಮ ಗಮನಕ್ಕೆ ತನ್ನಿ. ಹಾಗೆಂದು ಸ್ವಲ್ಪ ಮಟ್ಟಿಗೆ ಸೀನಿಯರ್ಸ್ ಹೇಳಿದ್ದನ್ನು ಕೇಳಿ. ಏನೋ ಹೊಸಬರು ನಮ್ಮ ಮಾತು ಕೇಳಲಿ ಎಂಬ ಆಸೆ ಅವರಿಗೆಇರುತ್ತದೆ. ಸ್ವಲ್ಪ ಮಟ್ಟಿಗಿನಚೇಷ್ಟೆ, ಹಾಸ್ಯ, ಕೀಟಲೆ ಸಹಿಸಿಕೊಳ್ಳಿ. ಅದರಿಂದ ನಿಮಗೇ ಲಾಭ.ಸಣ್ಣ ಪುಟ್ಟದ್ದಕ್ಕೆ ಮನಸ್ಸು ಕೆಡಿಸಿಕೊಳ್ಳಬೇಡಿ.

ಮನೆಯಲ್ಲಿದ್ದಂತೆ ಇಲ್ಲಿ ನಡೆಯುವುದಿಲ್ಲ. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸದಾ ಅಪ್ಪ ಅಮ್ಮಇರುವುದೂ ಇಲ್ಲ. ನೀವೇ ಸ್ವತಂತ್ರರಾಗಿ ಬದುಕಲು ಕಲಿಯಬೇಕು’ ಎಂದುಧೈರ್ಯ ಮತ್ತುಅಂಜಿಕೆ ಎರಡನ್ನೂ ಹುಟ್ಟಿಸುವ ಮಾತುಗಳನ್ನು ಆಡಿಬಿಟ್ಟರು. ಹುಡುಗಿಯರನ್ನುಕುರಿತು ಸ್ವಲ್ಪ ದಿನ ಫ್ಯಾಶನ್‌ ಅಂತ ಅತ್ಯಾಧುನಿಕ ಉಡುಪು, ಅಲಂಕಾರ ಮಾಡಿ ನಿಮ್ಮೆಡೆಗೆ ಗಮನ ಸೆಳೆಯಬೇಡಿ. ಗುಂಪಿನಲ್ಲಿ ಗೋವಿಂದ ಎಂಬಂತೆ ಇದ್ದಷ್ಟೂ ಹೆದರಿಕೆ ಕಡಿಮೆ ಎಂಬ ಕಿವಿಮಾತನ್ನೂ ಹೇಳಿದರು.

ಕರ್ನಾಟಕದ ಹುಡುಗಿಯರಿಗೆ ಇತರರ ಗಮನ ಸೆಳೆಯುವ ಯಾವ ಹೆದರಿಕೆಯೂ ಇರಲಿಲ್ಲ. ಉಡುಪು-ಅಲಂಕಾರ ಎಲ್ಲವೂ ಸಾದಾ-ಸೀದಾ. ಆದರೆ ನಾನು ಮಾತ್ರ ಇಡೀ ಕಾಲೇಜಿನಲ್ಲಿ ಗಮನ ಸೆಳೆಯುವ ರೀತಿಯಲ್ಲಿದ್ದೆ! ಸೌಂದರ್ಯ, ಅಲಂಕಾರ, ಶಿಸ್ತು, ಮಾತು, ಬುದ್ಧಿ ಉಹೂಂ…ಯಾವುದೂ ಅಲ್ಲ; ಎರಡು ಜಡೆಯಿಂದಾಗಿ. ವೃತ್ತಿಪರ ಕಾಲೇಜಿಗೆ ಬಂದುಅದೂ ಮಣಿಪಾಲದಲ್ಲಿಓದುವಾಗ ಎರಡು ಜಡೆ ಹಾಕುತ್ತಿದ್ದ ವಿದ್ಯಾರ್ಥಿನಿ ಬಹುಶಃ ನಾನೊಬ್ಬಳೇ. ಬಾಬ್‌ಕಟ್, ಸ್ಟೆಪ್‌ಕಟ್, ಪೋನಿಟೇಲ್, ಫ್ರೆಂಚ್ ಬ್ರೇಡ್‌ಗಳ ನಡುವೆ ಒಂದು ಜಡೆಯೇ ಓಲ್ಡ್ ಫ್ಯಾಶನ್‌ ಆಗಿದ್ದರೆ ಈ ನನ್ನಎರಡು ಜಡೆ ಓಬೀರಾಯನ ಕಾಲದ್ದಾಗಿತ್ತು. ಇಡೀ ಕ್ಯಾಂಪಸ್‌ನಲ್ಲಿ ಕಣ್ಣರಳಿಸಿ ನೋಡುವ ವಿಚಿತ್ರವಾಗಿತ್ತು.

ಜಡೆಯ ಹಿಂದಿನ ರಹಸ್ಯ
ಆದರೆ ನನ್ನಎರಡು ಜಡೆಗೆಕಾರಣವಿತ್ತು. ದಪ್ಪವಾದ ಗುಂಗುರು ಕೂದಲು ನನ್ನದು. ದಿನವೂ ಎಣ್ಣೆ ಹಾಕಿ ಚೆನ್ನಾಗಿ ತಿಕ್ಕಿ, ಸಿಕ್ಕು ಬಿಡಿಸಿ ಎರಡು ಜಡೆ ಹಾಕಿದರೆ ಮಾತ್ರ ಕೂದಲು ಒಪ್ಪವಾಗಿ ಕೂರುತ್ತಿತ್ತು. ಇಲ್ಲದಿದ್ದರೆ ತಲೆ ತುಂಬಾ ಸ್ಪ್ರಿಂಗ್ ಗಳೇ. ಒಂದು ಜಡೆ ಹಾಕಿದರೆ ಕೂದಲಿನ ಭಾರಕ್ಕೆ ತಲೆನೋವು! ಹೀಗಾಗಿ ದಿನವೂ ಎರಡು ಜಡೆ ಹಾಕುವುದು ನನಗೆ ಅನಿವಾರ್ಯವಾಗಿತ್ತು. ಸಿಕ್ಕಾಗುವ, ಒತ್ತಾಗಿದ್ದ ಈ ಗುಂಗುರು ಕೂದನ್ನು ಸಣ್ಣಂದಿನಿಂದಲೂ ಚೆನ್ನಾಗಿ ಬಾಚಿ ಬದನೆಕಾಯಿ ಜಡೆ ಕಟ್ಟುತ್ತಿದ್ದದ್ದುಅಮ್ಮನೇ.

ಮಣಿಪಾಲಕ್ಕೆ ಬರುವಾಗ ಸುಲಭವಾಗಲಿ ಎಂದು ಕೂದಲನ್ನುಗಿಡ್ಡವಾಗಿಕತ್ತರಿಸಿದ್ದೆವು. ಆದರೆ ಪೂರ್ಣ ಗಿಡ್ಡವಾದರೆ ತಲೆಯ ಸುತ್ತ ಪ್ರಭಾವಳಿಯಂತೆ ಹರಡಿ ಮುಖದ ಮೇಲೆಲ್ಲಾ ಕುಣಿಯುತ್ತಿತ್ತು. ಜುಟ್ಟು ಹಾಕಿದರೂ ಇದೇಕತೆ. ಚೆನ್ನಾಗಿ ಬಿಗಿದು ಎರಡು ಜಡೆ ಹಾಕಲೇಬೇಕು, ಅದು ಹೇಗೆ ಎಂಬುದು ದೊಡ್ಡ ಸಮಸ್ಯೆಯೇಆಗಿತ್ತು. ಸ್ವಾವಲಂಬನೆ ಮುಖ್ಯ ಎಂಬುದು ಅಪ್ಪ-ಅಮ್ಮರ ಮುಖ್ಯತತ್ವವಾದರೂ ಈ ಕೂದಲಿನ ವಿಷಯದಲ್ಲಿ ಅವರಿಗೂ ಸ್ವಲ್ಪಅನುಮಾನವೇ. ಆದರೆ ನನ್ನಅದೃಷ್ಟ !ಮೊದಲ ದಿನ ಕಾಲೇಜಿಗೆ ಸಿದ್ಧಳಾಗುವಾಗ ನಾನೇ ಹೆಣೆದುಕೊಂಡ ಸೊಟ್ಟ ಪಟ್ಟಜಡೆ, ಸುರಿದ ಎಣ್ಣೆ, ಸಿಕ್ಕು ಬಿಡಿಸಲು ಪಟ್ಟ ಶ್ರಮ ಕಂಡರೂ ಮೇಟ್ ಶೀಲಾ ತಾನೇ ಈ ಜವಾಬ್ದಾರಿಯನ್ನು ಹೊತ್ತು ಕೊಂಡಳು ಮತ್ತು ಶ್ರದ್ಧೆಯಿಂದ ನಿಭಾಯಿಸಿದಳು.

ಒಂದಲ್ಲಎರಡಲ್ಲ, ಐದು ವರ್ಷ ನನಗೆ ಜಡೆ ಹಾಕುವ ಕೆಲಸ ಅವಳದ್ದೇ ! ಅವಳಿಲ್ಲದಿದ್ದರೆ ಮತ್ತೊಬ್ಬ ಗೆಳತಿ ಶರ್ಮಿಳಾ. ತಮಾಷೆಯೆಂದರೆ ಆಗೀಗ ಜಗಳವಾದಾಗ ನಮ್ಮಿಬ್ಬರ ನಡುವೆ ಮಾತು ಇರುತ್ತಿರಲಿಲ್ಲ. ಪರಸ್ಪರ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಲೂ ಇರಲಿಲ್ಲ. ಆದರೆ ಎಷ್ಟೇ ಸಿಟ್ಟು ಬಂದಿದ್ದರೂ ನನಗೆ ಜಡೆ ಹಾಕಲು ಮಾತ್ರತಾನಾಗಿ ಬರುತ್ತಿದ್ದಳು! ಜಡೆ ಹಾಕುತ್ತಾ ಮುನಿಸೆಲ್ಲಾ ಮಾಯ. ಹೀಗೆ ಮಣಿಪಾಲದಲ್ಲಿ ಇದ್ದ ಐದು ವರ್ಷಗಳ ಕಾಲವೂ ‘ಎರಡುಜಡೆ ಹುಡುಗಿ’ಎಂದೇ ನನ್ನನ್ನು ಗುರುತಿಸುತ್ತಿದ್ದರು. ಈಗ ಎರಡು ಜಡೆ ಹಾಕುವಷ್ಟು ಕೂದಲು ಉಳಿದಿಲ್ಲ, ಪುಟ್ಟ ಜುಟ್ಟು ನೇತಾಡುತ್ತಿದೆ. ಆದರೆ ಗೆಳತಿಯರ ಪ್ರೀತಿ ಮಾತ್ರ ಹಾಗೆಯೇ ಉಳಿದಿದೆ. ಸ್ನೇಹದ ವಿಷಯದಲ್ಲಿ ನಾನು ಸದಾ ಶ್ರೀಮಂತೆ!

ಪುನಃ ರ‍್ಯಾಗಿಂಗ್‌ವಿಷಯಕ್ಕೆ ಬಂದರೆ ನಮಗೆ ರೂಮಿನಿಮದ ಹೊರ ಬಂದಾಗ ಕಣ್ಣು ನೆಲದ ಮೇಲೆಯೇ. ಯಾರಾದರೂ ಕರೆದರೆ ಎಂದು ಕತ್ತು ಎತ್ತಲು, ಸುತ್ತ ತಿರುಗಲೂ ಹೆದರಿಕೆ. ಜಡೆ ಬಿಗಿದು, ದುಪ್ಪಟ್ಟಾ ಗಟ್ಟಿಯಾಗಿ ಸುತ್ತಿ ಹುಲಿ-ಚಿರತೆ ಕಂಡವರಂತೆ ಹಾಸ್ಟೆಲಿಂದ ಕ್ಲಾಸಿಗೆ ಓಡುವುದೇ ಜೀವನದ ಗುರಿ. ನನಗೆ ಅವರಿವರು ಇದೇನು ಸ್ಕೂಲ್ ಹುಡುಗಿಥರಾ ಎರಡು ಜಡೆ ಎಂದು ನಕ್ಕರು, ಗೇಲಿ ಮಾಡಿದರು ಅಷ್ಟೇ. ಅದನ್ನು ಬಿಟ್ಟರೆ ಒಂದಿಷ್ಟು ಬೈಗುಳ/ಟೀಕೆ ಕೇಳಿದೆವು, ಹಾಡು, ಭಾಷಣ ಮಾಡಿದೆವು ಅಷ್ಟೇ !ಎಷ್ಟು ಹೊತ್ತಿಗೆ ತಲೆತಿರುಗಿ ಬೀಳುತ್ತೆವೇನೋ ಎಂಬಂತಿದ್ದ, ಅಳು ಮುಂಜಿಯರಂತೆ ಸದಾ ಹೆದರಿ ನಡುಗುತ್ತಿದ್ದ ನಮ್ಮನ್ನುಕಂಡು ಸೀನಿಯರ್ಸಿಗೂ ಕನಿಕರವೋ ತಾತ್ಸಾರವೋ ಗೊತ್ತಿಲ್ಲ, ಪುಣ್ಯಕ್ಕೆ ಅಷ್ಟಕ್ಕೆ ಮುಗಿದಿತ್ತು. ಆದರೆ ನಮ್ಮ ಕ್ಲಾಸಿನ ಹುಡುಗರು ಮಾತ್ರ ಅಷ್ಟು ಅದೃಷ್ಟವಂತರಾಗಿರಲಿಲ್ಲ.

ಹಾಸ್ಟೆಲಿನಲ್ಲಿ ನಾನಾ ರೀತಿ ಕೀಟಲೆಗಳು ನಡೆಯುತ್ತಿದ್ದವು. ಚಿಕ್ಕ ಸ್ಕೇಲಿನಿಂದ ಇಡೀರೂಮು ಅಳೆಯುವುದು, ನಾಯಿಯಂತೆ ಬೊಗಳಿ ಎಲ್ಲರನ್ನೂ ಸ್ವಾಗತಿಸುವುದು, ಕತ್ತೆಯಂತೆ ಕೂಗಿ ಬೆಳಿಗ್ಗೆ ಸಹಪಾಠಿಗಳನ್ನು ಎಬ್ಬಿಸುವುದು, ಹುಡುಗಿಯರಿಗೆ ಸೆಲ್ಯೂಟ್ ಮಾಡುವುದು ಇವೆಲ್ಲಾ ಹುಡುಗರಿಗೆ ಮಾಮೂಲಾಗಿತ್ತು. ಅದರಲ್ಲೂಉತ್ತರದಿಂದ ಬಂದ ಹುಡುಗರಿಗೆ ಅತೀ ಹೆಚ್ಚು ಕಾಟಕೊಡುತ್ತಿದ್ದರು.ಅವರೂ ಯಾವುದನ್ನೂಗಂಭೀರವಾಗಿ ತೆಗೆದುಕೊಳ್ಳದೇ ತಾವೂ ಮಜಾ ಮಾಡುತ್ತಿದ್ದರು.

ಪ್ರತಿ ವರ್ಷ ಹೊಸ ಹೊಸ ರೀತಿ ವಿಧಾನಗಳನ್ನು ಹುಡುಕುತ್ತಿದ್ದರು. ನಮ್ಮ ಸೀನಿಯರ್ ಕಿಶನ್‌ಕತೆಯಂತೂ ಸ್ವಾರಸ್ಯಕರ.

ಈ ಗುಲಾಬಿಯು ನಿನಗಾಗಿ
ಕಿಶನ್, ಆರಡಿ ಎತ್ತರ- ಕೆಂಪು ಬಿಳಿ ಬಣ್ಣದಕಟ್ಟು ಮಸ್ತು ಯುವಕ. ಆತನಿಗೆ ಈ ಎಲ್ಲಾ ಕೆಲಸದ ಜತೆ ಒಂದು ತಿಂಗಳು ದಿನವೂ ಕ್ಲಾಸಿಗೆ ಬರುವ ಮುನ್ನ ಮೂರು ಹುಡುಗಿಯರಿಗೆ ಮಂಡಿಯೂರಿ ಕುಳಿತು ರೆಡ್‌ರೋಸ್‌ ಅಂದರೆ ಕೆಂಪು ಗುಲಾಬಿ ಕೊಟ್ಟು‘ ದಯವಿಟ್ಟು ನನ್ನನ್ನು ಮದುವೆಯಾಗಿ ‘ ಎಂದು ಪ್ರಪೋಸ್ ಮಾಡಬೇಕಿತ್ತು. ದಿನವೂ ಪರಿಚಯವಿಲ್ಲದ ಬೇರೆ ಬೇರೆ ಹುಡುಗಿಯರಿಗೆ ಹೀಗೆ ಹೇಳಬೇಕು ಎಂಬ ಶರತ್ತು ವಿಧಿಸಿದ್ದರು. ಹಾಗಾಗಿ ಕ್ಲಾಸು ಶುರುವಾಗುವ ಮೊದಲು ಕೈಯಲ್ಲಿ ಕೆಂಪು ಗುಲಾಬಿ ಹಿಡಿದು ಕಿಶನ್ ನಿಂತಿರುತ್ತಿದ್ದ. ಕೆಲವು ಹುಡುಗಿಯರು ಈತ ಹೀಗೆ ಮಾಡಿದಾಗ ಕಕ್ಕಾಬಿಕ್ಕಿಯಾದರೆ ಮತ್ತೆ ಕೆಲವರು ಸಿಟ್ಟಿನಿಂದ ಬೈಯುತ್ತಿದ್ದರು. ಒಂದಿಬ್ಬರು ಕಣ್ಣಲ್ಲಿ ನೀರು ತುಂಬಿಕೊಂಡಿದ್ದೂಇತ್ತು. ಗೊತ್ತಿದ್ದವರು ಮಾತ್ರ ನಕ್ಕು ಸುಮ್ಮನಾಗುತ್ತಿದ್ದರು.

ಅದೊಂದು ದಿನ ಕಿಶನ್‌ಕಾಲೇಜಿಗೆ ಬರುವಾಗಲೇ ತಡವಾಗಿತ್ತು. ಹೇಗೋ ಇಬ್ಬರಿಗೆ ಹೂವು ಕೊಟ್ಟು ಮುಗಿಸಿದ್ದ. ಉಳಿದದ್ದು ಒಂದೇ ಹೂವು. ಯಾರೂ ಹೊಸ ಹುಡುಗಿಯರು ಕಣ್ಣಿಗೆ ಬೀಳಲಿಲ್ಲ. ಇನ್ನೇನು ಕ್ಲಾಸ್ ಶುರುವಾಗಲು ಐದೇ ನಿಮಿಷ ಬಾಕಿ. ತಪ್ಪಿದರೆ ಎಂಬ ಆತಂಕ; ಆದರೆ ಕೊಟ್ಟ ಕೆಲಸ ಮುಗಿಸದಿದ್ದರೆ ಸೀನಿಯರ್ಸ್ ಕೆಂಗಣ್ಣಿಗೆ ಗುರಿಯಾಗುವ ಭಯ. ಯೋಚನೆ ಮಾಡುತ್ತಿರುವಾಗ ಕಣ್ಣಿಗೆ ಬಿದ್ದದ್ದು ಚೂಡಿದಾರ್ ಧರಿಸಿ ಲಗುಬಗೆಯಿಂದ ಬರುತ್ತಿದ್ದ ಸುಂದರಿ. ಕೈಯಲ್ಲಿ ದಪ್ಪ ಪುಸ್ತಕ ಹಿಡಿದು ಅತ್ತಿತ್ತ ನೋಡದೆ ಸರಸರ ಬರುತ್ತಿದ್ದವಳನ್ನು ಕಂಡಿದ್ದೆಈತನಿಗೆ ಜೀವ ಬಂದಂತಾಯ್ತು. ಓಡಿ ಹೋಗಿ ಹಿಂದೆ ಮುಂದೆ ನೋಡದೇ ಅವಳ ಮುಂದೆ ಮಂಡಿಯೂರಿ ‘ಐ ಲವ್ ಯೂ, ದಯವಿಟ್ಟು ನನ್ನನ್ನು ಮದುವೆಯಾಗಿ‘ ಎಂದು ಕೈಗೆ ಹೂವು ಹಿಡಿಸಿದ. ಆಕೆ ಏನನ್ನೂ ಹೇಳುವ ಮುಂಚೆ ಓಡಿಹೋಗಿ ಕ್ಲಾಸಿಗೆ ಬಂದು ಕುಳಿತ. ಹೇಗೊ ಆ ದಿನದ ಕೋಟಾ ಮುಗಿಯಿತಲ್ಲ ಎಂಬ ಸಮಾಧಾನ.

ಅದಾಗಿ ಎರಡೇ ನಿಮಿಷಕ್ಕೆ ಕ್ಲಾಸಿಗೆ ಲೆಕ್ಚರರ್ ಬಂದರು. ಅವರ ಕೈಯಲ್ಲಿ ಅದೇ ರೆಡ್‌ರೋಸ್! ಬಂದವರೇ ನಗುತ್ತಾ‘ ಇದು ನಿಮ್ಮ ಬ್ಯಾಚಿಗೆ ನನ್ನ ಮೊದಲ ಕ್ಲಾಸು. ಕಾಲಿಡುವ ಮೊದಲೇ ಎಂಥಾ ವೆಲ್‌ಕಮ್ ಸಿಕ್ಕಿತು!ಯಂಗ್ ಮ್ಯಾನ್, ನೀನು ಚೆಂದ ಇದ್ದೀಯಾ, ಆದರೆ ಓದು ಮುಗಿದಿಲ್ಲ, ಕೆಲಸ ಇಲ್ಲ.

ನಮ್ಮಿಬ್ಬರಿಗೆ ವಯಸ್ಸಿನ ಅಂತರ ಇದೆ ಮತ್ತು ನನಗೆ ಮದುವೆ ಆಗಿ ಬಿಟ್ಟಿದೆ! ಏನು ಮಾಡೋದು? ಸೊ ಸಾರಿ, ನಿನ್ನ ರೋಸ್ ನಿನಗೇ ಇರಲಿ’ ಎಂದು ಮರಳಿ ಕೊಟ್ಟರು. ಕೆಂಪು ಗುಲಾಬಿ ಹೂವು ತೆಗೆದುಕೊಂಡ ಕಿಶನ್, ನಾಚಿಕೆಯಿಂದ ಅದರಷ್ಟೇ ಕೆಂಪಾಗಿದ್ದ. ಕ್ಲಾಸಿನ ನಂತರ ಓಡಿ ಹೋಗಿ ಕ್ಷಮೆ ಕೇಳಿ ತಾನು ಮಾಡಿದ್ದಕ್ಕೆ ಕಾರಣವನ್ನು ವಿವರಿಸಿದ. ಪರವಾಗಿಲ್ಲ ಎಂದರೂ ನಿಜ ವಿಷಯ ತಿಳಿದ ಅವರು ಆಂಟರ‍್ಯಾಗಿಂಗ್‌ ಕಮಿಟಿಯಲ್ಲಿ ಇದ್ದದ್ದರಿಂದ ಅಂದೇ ಈ ವಿಷಯ ಚರ್ಚಿಸಿ ಸೀನಿಯರ್ಸ್ಗೆ ಎಚ್ಚರಿಕೆ ಕೊಟ್ಟರು. ಅಂದಿನಿಂದ ಈ ರೋಸ್‌ ಕೊಡುವ ಪದ್ಧತಿತಪ್ಪಿತು. ಕಿಶನ್‌ಗೆ ಹೊಸ ನಾಮಕರಣವಾಯ್ತು; ರೆಡ್‌ರೋಸ್!

ಈ ಎಲ್ಲ ರ‍್ಯಾಗಿಂಗ್‌ ಇರುತ್ತಿದ್ದದ್ದು ಒಂದೆರಡು ತಿಂಗಳು ಮಾತ್ರ. ಅಧಿಕೃತವಾಗಿ ಫ್ರೆಂಡ್ಸ್ ಆದ ನಂತರ ಈ ಎಲ್ಲ ರ‍್ಯಾಗಿಂಗ್‌ಗೆ ತೆರೆ ಬೀಳುತ್ತಿತ್ತು ರ‍್ಯಾಗಿಂಗ್ ಕೇಳಿದಷ್ಟು ಭೀಕರವಾಗಿರಲಿಲ್ಲ ನಿಜ, ಆದರೆ ಹಿತಕರ ಅನುಭವವೂ ಅಲ್ಲ. ಅದೆಷ್ಟೋ ಮಕ್ಕಳು ರ‍್ಯಾಗಿಂಗ್‌ಗೆ ಒಳಗಾಗಿ ಶಿಕ್ಷಣ, ಜೀವನ ಎಲ್ಲದಕ್ಕೂ ಹಾನಿಯಾಗಿರುವುದನ್ನುಕಂಡಾಗ ಬೇಸರವೆನಿಸುತ್ತದೆ. ಅಪರಿಚಿತ ವಾತಾವರಣ, ಜನ ಇವುಗಳಿಗೆ ಹೊಂದಿಕೊಳ್ಳುವ ಸಂಕ್ರಮಣದ ಕಾಲದಲ್ಲಿಅದನ್ನು ನಿವಾರಿಸಿ ಧೈರ್ಯತುಂಬುವ ಕೆಲಸ ನಡೆಯಬೇಕೇ ಹೊರತು ಹೆದರಿಸುವುದಲ್ಲ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

June 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: