ಡಾ. ಅಜಿತ್ ಹರೀಶಿ
ನಗ್ನ ಸತ್ಯ
ಆರಾಧಿಸಲು ದೇವಿಯೇ
ಯಾಕೆಂದು ಕೇಳಬೇಡಿ
ಹಿಂದೆ ಆರಾಧಿಸಿದವರಿದ್ದಾರೆ
ಇರಬಹುದು ಮುಂದೆಯೂ
ಪುಷ್ಪಾರ್ಚನೆ ಹೊಗಳಿಕೆ
ಕಾವ್ಯಮಯ ಮಂತ್ರ
ಇವೂ ಒಂದು ತಂತ್ರವೋ
ಪ್ರಾಮಾಣಿಕವಾಗಿ ಗೊತ್ತಿಲ್ಲ
ಓಲೈಕೆ ಏಕೆ
ಇಷ್ಟಾರ್ಥ ಸಿದ್ಧಿಗಾಗಿ?
ಏನೊಂದೂ ಪಡೆಯದೆಯೂ
ದೇವಸ್ಥಾನ ಸುತ್ತುವ
ಭಕ್ತನನ್ನೂ ತೋರಿಸಬಹುದು
ನಿನ್ನ ತಪಸ್ಸನ್ನು ಮೆಚ್ಚಿದೆ
ಹೇಳಲೊಂದು ದಿನ
ಪ್ರತ್ಯಕ್ಷಳಾದಳು ಪರಮೇಶ್ವರಿ
ಮೂಡಿಸದಳು ಎಂಥ ಅಚ್ಚರಿ
ನಂತರದ್ದು ಯಾಂತ್ರಿಕ
ಹೂವೇರಿಸುವುದು, ಬಣ್ಣಿಸುವುದು
ಕೊನೆಯಾಗುತ್ತಿದೆ.
ಆರಾಧನೆಯ ಆವಾಹನೆಯ ಭ್ರಮೆ ಕಳಚಿ ಬೀಳುತ್ತಿದೆ
ಅವಳದ್ದೀಗ ಭಗ್ನದರ್ಶನ!

ಯಾವ ಕಾಲು ಒಳಗಿಟ್ಟು ?
ಬಂದರು ಅವರು
ಯಾವ ಕಾಲು ಒಳಗಿಟ್ಟು ?
ಅದನೆಲ್ಲ ನೋಡುತ್ತಾ ಕೂರುವಷ್ಟು
ಇರಲಿಲ್ಲ ಪುರುಸೊತ್ತು ಆ ಹೊತ್ತು
ಬಂದವರು ಎಷ್ಟೆಂದರೂ ಅವರಲ್ಲವೇ
ಒರೆಸಿಕೊಂಡೆ ಇಲ್ಲದ ಬೆವರ ಹೆದರಿ
ಗಂಟಲಲ್ಲಿ ಉಳಿಯಿತು ಉಭಯಕುಶಲೋಪರಿ
ಕುಳಿತುಕೊಳ್ಳಿ ಎನ್ನುವ ಸೌಜನ್ಯ
ಮರೆತೆ, ಅನ್ನಿಸಿರಬಹುದು ಅವರಿಗೆ
ಇದ್ಯಾವ ಪರಿ !
ಮೋಡಿ ಮಾಡಿದವರ
ಪಕ್ಕ ಧ್ಯಾನಸ್ಥನಾಗಿ ಕಣ್ಮುಚ್ಚಿ ಕುಳಿತಿರಲು
ಲೋಕಕ್ಕೆಲ್ಲಾ ಕತ್ತಲು!
ಅವರ ಉಸಿರು ಮುತ್ತಲು
ಅಮಲೇರಿದ ಹೊತ್ತಿನಲು
ಅವಸರಿಸಲಿಲ್ಲ ಅವರು!
ಸುರುಳಿಯಾಗಿ ಹೊರಳಿದರು
ಒಮ್ಮೆ ಮೈ ಜುಮ್ಮೆನಿಸಿತು
ನೋಟದಲ್ಲೇ ಹರಸಿ ಹೇಳಿದರು
ನಾವಿನ್ನು ಅಪರಿಚಿತರು
ಹಾಗೆ ಹೊರಟವರು
ಯಾವ ಕಾಲು ಹೊರಗಿಟ್ಟರು
ಕಣ್ಣು ಮಂಜಾಗಿತ್ತು ನೋಡಲು
ಯಾಕೆ ಬಂದಿದ್ದರು
ಗದ್ಗದಿತನಾಗಿದ್ದೆ ಕೇಳಲು
ಸಮಯವದು
ಅಭಾವ ವೈರಾಗ್ಯ ಮೂಡಲು
ಜನರೆಂದರು…
ಅವರು ಹೀಗೆ ಬಂದರು
ಹಾಗೆ ಹೋದರು, ಹಾಗೆಯೇ ಅವರು.
ಯಾರು ಏನೆಂದರೂ
ಎಂದೆಂದಿಗೂ ಮನದಲ್ಲಿ
ನಿಲ್ಲುವರು ಅವರು.






0 Comments