ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾಕ್ಟರ್ ಹೇಳಿದ ಮಾತು…

ಮೂಲ: ಖುಷ್ಬೂ 


ಕನ್ನಡಕ್ಕೆ : ಮಂಜುಳ ಕಿರುಗಾವಲು

ಡಾಕ್ಟರ್ ಹೇಳಿದ
ಇನ್ನು ಮುಂದೆ ಬಗ್ಗಬೇಡಿ..

ಈಗ ನನಗೂ ಬಗ್ಗೊ
ಇರಾದೆಯೂ ಇಲ್ಲ ಬಿಡಿ..

ಬಗ್ಗಿ ಬಗ್ಗಿ ನಿಮ್ಮ ಬೆನ್ನಿನ
ಮೂಳೆಯಲ್ಲಿ ಅಂತರ (ಗ್ಯಾಪ್)
ಹೆಚ್ಚಾಗಿದೆ..

ಡಾಕ್ಟರ್ ಹೇಳಿದ ಮಾತು ಕೇಳಿ
ಅಳು ಮತ್ತು ನಗು ಒಟ್ಟಿಗೆ ಬಂದವು..

ಜೀವನದಲ್ಲಿ ಮೊದಲ ಬಾರಿ
ಯಾರದೋ ಬಾಯಿಂದ
ಬಗ್ಗಬೇಡಿ ಎಂಬ ಮಾತು ಕೇಳಿದೆ.

ಬಾಲ್ಯದಿಂದಲೂ ಮನೆಯ ಹಿರಿಯರು,
ಅಪ್ಪ, ಅಮ್ಮ
ಮತ್ತು ಸಮಾಜದಿಂದ
ತಗ್ಗಿಬಗ್ಗಿ ನಡೆ ಎಂಬುದನ್ನಷ್ಟೇ ಕೇಳಿದ್ದೆ..

ಹೆಣ್ಣು ತಗ್ಗಿ ಬಗ್ಗಿ ನಡೆಯುವುದರಿಂದಲೇ
ಸಂಬಂಧಗಳು ಉಳಿಯುತ್ತವೆ..

ಹೆಣ್ಣು ತಗ್ಗಿ ಬಗ್ಗಿ ನಡೆದರೆ ಮಾತ್ರ
ಪ್ರೀತಿ, ಪ್ರೇಮ, ಮನೆ-ಮಠ ನಡೆಯೋದು..

ಬಗ್ಗುತ್ತಲೇ ಬಂದಳು
ಬಗ್ಗುತ್ತಲೇ ಇರುವಳು
ಬಗ್ಗಿಯೂ ಇರುವಳು

ಮರೆತು ಹೋಗಿತ್ತು
ಅವಳಿಗೆ ನನಗೂ
ಬೆನ್ನು, ಬೆನ್ನಿನ ಮೂಳೆ
ಇರುವುದೆಂದು

ಇವತ್ತು ಯಾರೋ ಹೇಳುತ್ತಾ ಇದ್ದಾರೆ
ಬಗ್ಗಬೇಡವೆಂದು..!

ಆತಂಕದಿಂದ ಯೋಚಿಸುತ್ತಾಳೆ
ನಿರಂತರವಾಗಿ ಬಾಗುವುದರಿಂದ
ನಿಜಕ್ಕೂ ಬೆನ್ನಿನ ಹುರಿ ತನ್ನ
ಜಾಗದಿಂದ ಜಾರುವುದಾ..?

ಹಾಗಾದರೆ ಬೆನ್ನಿನಲ್ಲಿ ಅಂತರ
ಮತ್ತು ಶೂನ್ಯತೆಯೂ
ಬರಬಹುದಾ…!

ಯೋಚಿಸುತ್ತಾಳೆ….

ಬಾಲ್ಯದಿಂದ ಈವರೆಗೆ
ಏನೇನು ಜಾರಿ ಹೋಗಿದೆ..
ಅವಳ ಬದುಕಿನಲ್ಲಿ ಯಾವ
ಯಾವ ಸಂಬಂಧಗಳ ನಡುವೆ ಅಂತರಗಳು
ಸೃಷ್ಟಿಯಾಗಿ ಖಾಲಿತನವಾಗಿ ಮಾರ್ಪಟ್ಟವು..

ಆ ‘ಡಾಕ್ಟರ್’ಗೆ ಯಾವುದು ತಿಳಿಯದು..

ಅವಳ ಆಲೋಚನೆ,
ಕನಸು, ಆಶಯ ಎಲ್ಲವೂ
ಎಲ್ಲಿ ಜಾರಿ ಹೋದವೆಂದು…

ಅವಳ ಮನಸು
ಅವಳ ಆಸೆ
ಎಲ್ಲವೂ ಖಾಲಿಯಾಗಿದೆ ಎಂದು..

ಅವಳ ಬಯಕೆ,
ಬಯಕೆಗಳಲ್ಲದವುಗಳ
ನಡುವೆ ಅದೆಷ್ಟು ಅಂತರ ಏರ್ಪಟ್ಟಿದೆ ಎಂದು…

ಹೆಣ್ಣಿಗೆ ನಿಜಕ್ಕೂ ಬೆನ್ನು ಮೂಳೆ
ಇರುವುದಾ…

ತಿಳಿಯದು..

‍ಲೇಖಕರು Admin

29 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading