‘ಠಾಕ್ರೆ’ ಪತ್ರಕರ್ತ !

ಮಂಗಳೂರಲ್ಲಿ ನಾನು ಕಂಡ ‘ಠಾಕ್ರೆ’ ಪತ್ರಕರ್ತ !
ಚಿದಂಬರ ಬೈಕಂಪಾಡಿ
ನಾನು ಬರೆಯುತ್ತಿರುವುದು ಶ್ರೀಸಾಮಾನ್ಯ ಪತ್ರಕರ್ತನ ಬಗ್ಗೆ. ಇವರು ವಯಸ್ಸಿನಲ್ಲಿ 65ರ ಹರೆಯ. ಆದರೆ ಯುವಕರ ಮನಸ್ಸು. ಯಾರು ಎಲ್ಲೇ ಪತ್ರಿಕಾಗೋಷ್ಠಿ ನಡೆಸಿದರು ಹಾಜರು. ನೀವು ಯುವಕರೇ ಇರಲಿ, ವಯಸ್ಸಾದವರೇ ಆಗಲಿ ಬೇಸರವಿಲ್ಲ ಅಥವಾ ನಿರುತ್ಸಾಹ ತೋರಿಸುತ್ತಿರಲಿಲ್ಲ.
ಇವರ ಹೆಸರು ರಾಮಚಂದ್ರ ಶೆಟ್ಟಿ, ಆದರೆ ಮಂಗಳೂರಿನ ಪತ್ರಕರ್ತರಿಗೆ ಮಾತ್ರ ಠಾಕ್ರೆ ಎಂದೇ ಖ್ಯಾತಿ. ಠಾಕ್ರೆ ಯಾಕೆಂದರೆ ಅವರು ನೋಡಲು ಮುಂಬೈನ ಠಾಕ್ರೆಯರಂತೆಯೇ ಇದ್ದರು. ಅವರು ಡ್ರೆಸ್ ಹಾಕುವುದು ಕೂಡಾ ಠಾಕ್ರೆಯರಂತೆಯೇ. ಉದ್ದದ ಸರ, ಕನ್ನಡಕ. ಒಂದು ವೇಳೆ ಠಾಕ್ರೆಯವರು ಬರದಿದ್ದರೆ ಖಂಡಿತಾ ಠಾಕ್ರೆಯ ಸ್ಥಾನ ತುಂಬುತ್ತಿದ್ದರು, ಅಂಥಾ ಠಾಕ್ರೆ.
ಹಾಗೆಂದು ಮಾತಾಡಲು ಶುರು ಮಾಡಿದರೆ ಅವರನ್ನು ನಿಲ್ಲಿಸಲು ಹರಸಾಹಸ ಮಾಡಬೇಕಿತ್ತು. ಪ್ರಶೆಗಳ ಮೇಲೆ ಪ್ರಶ್ನೆ ಕೇಳಿ ಇರಿಸು ಮುರಿಸು ಮಾಡುತ್ತಿದ್ದರು. ಈ ಕಾರಣಕ್ಕಾಗಿಯೇ ಠಾಕ್ರೆಯರು ಪತ್ರಿಕಾಗೋಷ್ಠಿಗೆ ಬಂದಿದ್ದಾರೆ ಎಂದಾದರೆ ಆ ದಿನ ಖಂಡಿತಕ್ಕೂ ಪತ್ರಿಕಾಗೋಷ್ಠಿ ಕರೆದವನಿಗೆ ಬೆವರಿಳಿಸುತ್ತಿದ್ದರು. ಅವರು ಪತ್ರಿಕಾಗೋಷ್ಠಿಗೆ ಬಂದರೆ ಬೆಳಿಗ್ಗೆ, ಮಧ್ಯಾಹ್ನ ಲಘು ಆಹಾರ ಸೇವಿಸುತ್ತಿದ್ದರು. ರಾತ್ರಿಯಲ್ಲಿ ಒಂದು ಲೋಟೆ ಹಾಲು ಕುಡಿಯುವುದನ್ನು ಬಿಟ್ಟರೆ ಬೇರೇನೂ ಸೇವಿಸುತ್ತಿರಲಿಲ್ಲ.
ಈ ವ್ಯಕ್ತಿ ಸುಮಾರು 2005 ಇಸವಿಗೆ ಪತ್ರಿಕಾಗೋಷ್ಠಿಗಳಲ್ಲಿ ಕಾಣಿಸಿಕೊಂಡರು. ಆಗಷ್ಟೇ ಟಿವಿ ಮಾಧ್ಯಮಗಳು ಬೆಳಕಿಗೆ ಬಂದಿದ್ದವು. ಸ್ಥಳೀಯ ಕೇಬಲ್ ಚಾನೆಲ್ ಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದ ಕಾಲ. ಮುಖ್ಯವಾಗಿ ಸ್ಕಿಪ್ಟ್ ಬರೆಯುವುದು ಇವರ ಹವ್ಯಾಸ. ದಾಸ್ ಅವರು ಮಂಗಳೂರಲ್ಲಿ ಕೇಬಲ್ ಟಿವಿ ಶುರು ಮಾಡಿದ್ದರು. ಅದಕ್ಕೆ ಇವರೇ ವರದಿಗಾರರು.
ಇವರೊಂದಿಗೆ ಬರುವಾಗ ಕ್ಯಾಮರಾ ಮ್ಯಾನ್, ಅವನ ಸಹಾಯಕ ಹೀಗೆ ಮೂರು ಜನರ ತಂಡ ಬರುತ್ತಿತ್ತು. ನಾನು ‘ಕನ್ನಡಪ್ರಭ’ ವರದಿಗಾರನಾಗಿದ್ದೆ. ನನ್ನಲ್ಲಿ ವಾಹನ ಇರಲಿಲ್ಲ. ಎಲ್ಲಿಗೆ ಹೋದರೂ ರಿಕ್ಷಾ ಅಥವಾ ಬಸ್ಸಿನಲ್ಲಿ ಹೋಗುತ್ತಿದ್ದೆ. ಠಾಕ್ರೆಯವರು ತಮ್ಮದೇ ಆದ ಹಳೆಯ ಕಾರಿನಲ್ಲಿ ಬರುತ್ತಿದ್ದರು. ನನ್ನಲ್ಲಿ ವಾಹನ ಇಲ್ಲದ್ದನ್ನು ಕಂಡು ನನ್ನನ್ನೂ ಕರೆದೊಯ್ಯುತ್ತಿದ್ದರು. ಆರಂಭದಲ್ಲಿ ಕೇವಲ ನಾನು ಸಿಕ್ಕಿದರೇ ಮಾತ್ರ ಕರೆದೊಯ್ಯುತ್ತಿದ್ದವರು ಕೊನೆ ಕೊನೆಗೆ ನಿತ್ಯವೂ ಪತ್ರಿಕಾಗೋಷ್ಠಿಗೆ ನನ್ನನ್ನು ಕರೆಯುವಂತ ಸ್ನೇಹ ಬೆಳೆಯಿತು. ನಾನು ಬಸ್ಸಿನಲ್ಲಿ ಸುರತ್ಕಲ್ ನಿಂದ ಬರುತ್ತಿದ್ದರೆ ಅವರು ಮುಂಚಿತವಾಗಿ ಬಂದು ಬಸ್ಸು ನಿಲ್ಲುವಲ್ಲಿರುತ್ತಿದ್ದರು.
ಅವರಿಗೂ ನನಗೂ ಸ್ನೇಹ ಬೆಳೆಯಲು ಮುಖ್ಯ ಕಾರಣ ಪತ್ರಿಕಾಗೋಷ್ಠಿಗಳಲ್ಲಿ ನಾನು ಪ್ರಶ್ನೆ ಕೇಳುವುದು ಅವರಿಗೆ ಆಕರ್ಷಣೆಯಾಗಿತ್ತು. ನಾನು ನಗುನಗುತ್ತಾ ಪ್ರಶ್ನೆ ಕೇಳುತ್ತಿದ್ದೆ ಹೊರತು ಅವರಿಗೆ ನೋವಾಗುವ ಹಾಗೆ ಕೇಳುತ್ತಿರಲಿಲ್ಲ. ಆದರೆ ಪ್ರಶ್ನೆ ಖಡಕ್ಕಾಗಿರುತ್ತಿದ್ದವು, ಉತ್ತರ ಕೊಡುವ ತನಕ ನನ್ನ ತಿರುಗಿ ತಿರುಗಿ ಪ್ರಶ್ನೆ ಕೇಳುತ್ತಿದ್ದೆ. ನನ್ನ ಈ ಪ್ರಶ್ನೆ ಕೇಳುವುದನ್ನು ಗಮನವಿಟ್ಟು ಕೇಳುತ್ತಿದ್ದರು. ಪತ್ರಿಕಾಗೋಷ್ಠಿ ಮುಗಿದ ಬಳಿಕ ಅದರ ವಿವರ ಕೇಳುತ್ತಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳುವುದು ಒಂದು ಕಲೆ. ಈ ಕಲೆಯನ್ನು ನನಗೆ ಕಲಿಸಿದವರು ಪ.ಗೋ. ಅವರ ಪಟ್ಟುಗಳನ್ನು ನಾನೂ ಕಲಿತುಕೊಂಡಿದ್ದೆ. ಮುಖಕ್ಕೆ ಹೊಡೆದ ಹಾಗೆ ಪ್ರಶ್ನೆ ಕೇಳಬಾರದು. ಚೆನ್ನಾಗಿ ನಗುತ್ತಲೇ ಪ್ರಶ್ನೆ ಕೇಳಬೇಕು ಆದರೆ ಅದರ ಸತ್ವ ಕಡಿಮೆಯಾಗಬಾರದು. ಈ ಕಾರಣಕ್ಕೆ ಪತ್ರಿಕಾಗೋಷ್ಠಿ ಕರೆದವರು ಮೊದಲೇ ನನ್ನನ್ನು ಸಮಾಧಾನ ಪಡಿಸಿ ಪ್ರಶ್ನೆ ಹೆಚ್ಚು ಕೇಳಬೇಡಿ ಎನ್ನುತ್ತಿದ್ದರು. ಈಗ ರಾಜಕಾರಣಿಗಳಾಗಿ ಜನಮೆಚ್ಚುಗೆ ಗಳಿಸಿದವರೂ ಸೇರಿದಂತೇ ಆಗ ಕಿರಿಯರಾಗಿ ಈಗ ಬೆಳೆದವರು ಕೂಡಾ.
ಠಾಕ್ರೆಯವರಿಗೆ ಪತ್ರಿಕಾಗೋಷ್ಠಿಯನ್ನು ನಡೆಸುವವರಿಗೆ ಹೇಗೆ ಪ್ರಶ್ನೆ ಕೇಳಿ ಇರಿಸು ಮುರಿಸು ಮಾಡಬಹುದು ಎನ್ನುವುದನ್ನು ಹೇಳುತ್ತಿದ್ದೆ. ಇದೇ ಪ್ರಶ್ನೆಗಳನ್ನು ಕೇಳಿ ಮುಂದೆ ಠಾಕ್ರೆಯರು ಅದೇ ದಾರಿ ಹಿಡಿದರು. ಪತ್ರಿಕಾಗೋಷ್ಠಿಗಳಲ್ಲಿ ಅವರು ಪ್ರಶ್ನೆ ಕೇಳದಂತೆ ಹೇಳಿ ನಾನೇ ಎಷ್ಟೋ ಸಲ ಪತ್ರಿಕಾಗೋಷ್ಠಿಯನ್ನು ಬಗೆ ಹರಿಸಿದ್ದೆ ಕೂಡಾ. ನಾನು ಪ್ರಶ್ನೆ ಕೇಳಿ ಅಂದರೆ ಕೇಳುವುದು, ಸಾಕು ಬಿಡಿ ಎಂದರೆ ನಿಲ್ಲಿಸುತ್ತಿದ್ದರು.
ಮುಂದೆ ಅವರು ದಾಸ್ ಅವರ ಟಿವಿಯನ್ನು ಬಿಟ್ಟು ಮನೆಯಲ್ಲಿಯೇ ಉಳಿಯುವ ನಿರ್ಧಾರ ಮಾಡಿದರು. ಆಗ ನಾನೇ ಅವರನ್ನು ಕರೆದು ನೀವು ಟಿವಿ ಇಲ್ಲ ಅಂದುಕೊಂಡು ಮನೆಯಲ್ಲಿ ಕುಳಿತುಕೊಳ್ಳಬೇಡಿ, ನಿಮ್ಮದೇ ಚಾನೆಲ್ ಶುರು ಮಾಡಿ ಎಂದು ತಿಳಿಹೇಳಿದೆ. ಅವರು ನನ್ನ ಮಾತನ್ನು ಒಪ್ಪಿದರು. ಮುಂದೆ ಅರ್ಧ ಗಂಟೆ ಸಮಯದ ಸುದ್ದಿಯನ್ನು ತಯಾರಿಸಿ v4ಗೆ ಕೊಡಲು ಶುರು ಮಾಡಿದರು. ಅದು ಯಶಸ್ಸು ಕಂಡಿತು. ಅವರಿಗೆ ಸಮಸ್ಯೆ ಬಂದಾಗ ನನ್ನನ್ನು ಕೇಳುತ್ತಿದ್ದರು. ಅವರಿಗೆ ಹೇಳಿಕೊಡುತ್ತಿದ್ದೆ.
ನಾನು ‘ಕನ್ನಡಪ್ರಭ’ ಬಿಡುತ್ತಿರುವ ಬಗ್ಗೆ ಅವರಿಗೆ ತಿಳಿಸಿ ಮುಂದೆ ನಾನು ಏನು ಮಾಡುತ್ತೇನೆ ಎನ್ನುವುದನ್ನು ಹೇಳಿದೆ. ಆಗ ಅವರು ತುಂಬಾ ಹೊತ್ತು ಆಲೋಚಿಸಿ ‘ನೀವು ಪತ್ರಿಕೆ ಬಿಡಬೇಡಿ. ಒಂದು ವೇಳೆ ಬಿಡುತ್ತಿರಿ ಎಂದಾದರೆ ನೀವು ನನ್ನೊಂದಿಗೆ ಬನ್ನಿ’ ಎನ್ನುವ ಆಹ್ವಾನಕೊಟ್ಟರು.
ನಾನು ತೆಗೆದುಕೊಂಡಂತೆಯೇ 2008ರಲ್ಲಿ ‘ಕನ್ನಡಪ್ರಭ’ ಬಿಟ್ಟೆ. ಅವರು ತುಂಬಾ ಬೇಸರ ಪಟ್ಟುಕೊಂಡರು. ಅವರು ಚೆನ್ನಾಗಿಯೇ ಇದ್ದರು. ಆದರೆ ಸ್ವಲ್ಪ ದಿನಗಳಲ್ಲಿಯೇ ಕೊನೆಯುಸಿರೆಳೆದರು.
ಠಾಕ್ರೆಯವರು ನಾನು ಮರೆಯಲಾಗದ ವ್ಯಕ್ತಿ. ಅವರು ಮನುಷ್ಯನಾಗಿ, ಇನ್ನೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವವರಾಗಿ ನನಗೆ ಕೂಡಾ ಬದುಕುವ ಬಗ್ಗೆ ಬಹಳಷ್ಟು ಹೇಳಿಕೊಟ್ಟರು. ಈಗ ನಾನು ಕಲಿತಿದ್ದೇನೆ ಪೆನ್ನು ನಿಂತರೆ ಏನು ಬೆಲೆಯಿದೆ ಎಂದು. ಈ ಮಾತನ್ನು ಹಿರಿಯ ಪತ್ರಕರ್ತರಾಗಿದ್ದ ಎ.ವಿ.ಮಯ್ಯ, ಪ.ಗೋ, ಯು.ನರಸಿಂಹ ರಾವ್ ಅವರು ನನಗೆ ಹೇಳಿದ್ದರು. ಅವರು ಹೇಳಿದ್ದು ಎಷ್ಟು ಸತ್ಯ ಎಂಬುದು ಈಗ ನನಗೆ ಅರಿವಾಗುತ್ತಿದೆ.

‍ಲೇಖಕರು avadhi

April 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: