ಟೈಮ್ ಮಾಸ್ ಕಡ್ಲೆ ಕಾಯ್ : ಹುಚ್ರಾಯಪ್ಪನ ಸ್ವಚ್ಛತಾ ಅಭಿಯಾನ

ಎಚ್  ಜಿ  ಮಳಗಿ

ಸುಭಾಷ್ ರಸ್ತೆಯಿಂದ ಜ್ಯುಬಲಿ ಸರ್ಕಲ್ಗೆ ಬರುವಷ್ಟರಲ್ಲಿ ಹೈರಾಣಾಗಿದ್ದೆ. ಕೈಯ್ಯಲ್ಲಿ ಮಣಭಾರದ ತರಕಾರಿ ಚೀಲ. ಅಲ್ಲೇ ಸಿಬಿಟಿಯಲ್ಲಿ ಬಸ್ಸು ಹತ್ತಬೇಕೆಂದಿದ್ದೆ. ಆದರೆ ಇವಳಿಗೆ ಆಮಸೋಲ್ ಬೇಕಾಗಿತ್ತು. ಹೀಗಾಗಿ ನಿವರ್ಾಹವಿಲ್ಲದೇ ಅಂಕೋಲಾ ಅಂಗಡಿಗೆ ಬಂದು ಆಮಸೋಲ ಖರೀದಿಸಿ ಜ್ಯುಬಲಿ ಸರ್ಕಲ್ ಬಸ್ಸ್ಟಾಪ್ಗೆ ಬಂದೆ. ಆಹಾ ಅದೇನು ಧೂಳು. ಈ ಚಳಿಗಾಲದಲ್ಲೂ ಅಕಾಲ ಬೇಸಗೆಯ ಶೆಖೆ. ಸುಭಾಷ್ರಸ್ತೆಯಂತೂ ಕಸದ ತೊಟ್ಟಿಯಾಗಿದೆ. ವ್ಯಾಪಾರಸ್ತರಿಗೆ ಸ್ವಚ್ಛತೆಯ ಬಗ್ಗೆ ಒಂಚೂರೂ ಕಾಳಜಿಯಿಲ್ಲದಿರುವುದು ಅವರ ಅಂಗಡಿಯ ಪ್ಯಾಕಿಂಗ್ ಸಾಮಾನು, ಹಾಳು ಮೂಳು ಎಲ್ಲವೂ ರಸ್ತೆಯ ಮಧ್ಯೆ ರಾರಾಜಿಸುತ್ತಿದೆ. ತರಕಾರಿಯವರಂತೂ ಕೇಳುವುದೇ ಬೇಡ. ಈ ಕಸವನ್ನು ಗುಡಿಸಲು ಬಹುಶಃ ದಿಲ್ಲಿಯಿಂದಲೇ ಮಹಾನುಭಾವರು ಬರಬೇಕೇನೋ ಎಂದು ಕಸವನ್ನು ಅಸಹ್ಯದಿಂದಲೂ ಅಂಗಡಿಯವರನ್ನು ಕೋಪದಿಂದಲೂ ಅಸಹಾಯಕನಾಗಿ ನೋಡುತ್ತ ಬಯ್ಯುತ್ತ ಬಂದಿದ್ದೆ. ಕಳೆದ ಕೆಲವು ದಿನಗಳಿಂದ ಎಲ್ಲ ಪೇಪರಿನಲ್ಲಿಯೂ ಕೆಲಸವಿಲ್ಲದ ಕೆಲವು ರಾಜಕಾರಣಿಗಳು ತಮ್ಮ ಹೊಲಸು ಹಲ್ಲುಗಳನ್ನು ಪ್ರದಶರ್ಿಸುತ್ತ ಟೂಥಬ್ರಶ್ನಂತಹ ಪೊರಕೆ ಹಿಡಿದು ಕಸ ಗುಡಿಸುತ್ತಿರುವ ಫೋಟೊಗಳು ಕಣ್ಮುಂದೆ ನತರ್ಿಸಿ ಬಾಯಿಂದ ಅರಿವಿಲ್ಲದಂತೆ ಥತ್ ಎಂಬ ಉದ್ಗಾರವೂ ಬಂತು. ಈಗ ಬರುವಾಗಲೂ ಬಜಾರದ ಯಾವುದೋ ಬೀದಿಯಲ್ಲಿ ಮರಿ ಪುಢಾರಿಯೊಬ್ಬ ಕಸಗುಡಿಸುವ ನಾಟಕ ಆಡುತ್ತಿದ್ದುದು ನೋಡಿ ವಾಕರಿಕೆ ಬಂದಿತ್ತು.
ಮನೆಗೆ ಬಂದಾಗ ಚಳಿಗಾಲದ ಚುಮುಚುಮು ಕತ್ತಲೆ. ವರಾಂಡಾದಲ್ಲಿ ಹರಿದು ಕೆರ ಹಿಡಿದಿದ್ದ ಕಾಲ್ಜೋಡು ಕಂಡು ಮನವು ಪ್ರಫುಲ್ಲವಾಯಿತು. ಜೋಡು ದರ್ಶನದಿಂದಲೇ ಊಹಿಸಿದೆ ಬಂದವರಾರೆಂದು.
ನಮ್ಮ ಅಡ್ಡಮನೆ ಹುಚ್ರಾಯಾ!
ಒಳಗೆ ಬರುತ್ತಲೇ ಅವನ ‘ಆ್ಯಂಟಿಕ್’ ರೂಪ ಕಂಡು ನಗುತ್ತ, ‘ಏನಪಾ ಹುಚ್ರಾಯಾ ಭಾಳ್ ದಿವ್ಸದ್ ಮ್ಯಾಲ ಬಂದಿ? ಏನ್ ಸಮಾಚಾರಾ?’ ಅಂತ ಕೇಳಿದೆ. ಅವನು ಬಂದಾಗಲೆಲ್ಲ ಏನಾದರೂ ಎಡವಟ್ಟು ಮಾಡಿಕೊಂಡ ಸುದ್ದಿಯೋ ಇನ್ನೇನಾದರೂ ಚಕಿತಗೊಳಿಸುವ ಸುದ್ದಿ ತಂದಿರುತ್ತಾನೆಂಬುದು ಅನುಭವ ಸಿದ್ಧ ಅನುಭವ! ದಂತವಕ್ರನ ನೇರ ಸಂಬಂಧಿಯಂತಿರುವ ಯಾವಾಗಲೂ ತನ್ನ ದಂತಪಙಕ್ತಿಗಳ ಹೊರಗಿನ ಬಾಯಿಯನ್ನು ಕಿವಿಯಿಂದ ಕಿವಿಯವರೆಗೂ ಅಗಲಿಸಿ ನನ್ನೊಂದಿಗೆ ಮಾತನಾಡುವವನು ಇಂದು ಯಾಕೋ ಉದಾಸೀನನಾಗಿದ್ದನು. ಬಗಲಲ್ಲಿ ಎಂದಿನ ಮಾಸಿದ ಹರಕು ಸೀರೆಯಿಂದ ತನ್ನ ಉಬ್ಬಿದ ಬಸರೆಂಗಸಿನ ಹೊಟ್ಟೆಯನ್ನು ಮುಚ್ಚಿಕೊಂಡತಿರುತ್ತಿದ್ದ ಅವನ ಬ್ಯಾಗು ಇರಲಿಲ್ಲ. ಕೈಯಲ್ಲಿ ಮಡಚಿಟ್ಟುಕೊಂಡಿದ್ದ ಅಂದಿನ ಸಾಯಂಕಾಲದ ನ್ಯೂಸ್ ಪೇಪರು! ನನಗೆ ಅದೇ ಅಸಹಜವೆನಿದ್ದು!
‘ಏನೋ ಸಾ ಇಂಗದೀನಿ!’ ಅಂತ ಅಂದು ಮತ್ತೆ ಕೂತ. ನನಗೆ ಏನೋ ವಾಸನೆ ಹೊಡೆಯಿತು. ‘ಏನೋ ಹುಚ್ರಾಯಾ ಯಾಕ ಅರಾಮಿಲ್ಲೋ? ಮಾರಿ ಯಲಗೂರ ಹನಮಪ್ಪನಾಂಗ ಸೊಟ್ಟ ಮಾಡೀ?’ ನಾನು ಅವನನ್ನು ನಗಿಸುವ ಪ್ರಯತ್ನ ಮಾಡಿದೆ. (ಯಲಗೂರೇಶ ನಮ್ಮ ಮನೆ ದೇವರು, ಶಿಕಾರಿಪುರದ ಹುಚ್ರಾಯಪ್ಪನೆಂದು ಕರೆಯಲ್ಪಡುವ ಭ್ರಾಂತೇಶ ಹುಚ್ರಾಯಪ್ಪನ ಕುಲದೇವರು)
‘ಏ ಅಂಗೇನ್ ಇಲ್ಲಾ ಸಾ!’ ಅಂತ ಪೇಲವವಾಗಿ ನಕ್ಕು, ‘ಸಾಕೋ ಸಾ ಇತ್ತಿತ್ಲಾಗೆ ಈ ಸೊಸೆಲ್ ಸವರ್ೀಸೆ ಬ್ಯಾಡಾನ್ನಿಸ್ ಬಿಟೈತೆ’ ಅಂತ ಸೊಟ್ಟ ಮೂತಿಯನ್ನು ಬಿಡಿಸದೇ ಹೇಳಿ, ‘ಸಾ ಸಾರ್ದಕ್ಕೌರಿಲ್ಲವ್ರಾ, ಅಕ್ಕೋಯ್ ಸಾರ್ದಕ್ಕಾ, ಒಂದ್ಲೋಟಾ ನೀರ್ ತತರ್ರಿ!’ ಅಂತ ಒಳಗೆ ನೋಡುತ್ತ ಕೇಳಿದ. ಶಾರದಾ ಸಂಜೆಯಿಂದ ಕೋಪಗೃಹ ಸೇರಿದ್ದು ನೆನಪಾಗಿ ನನ್ನ ನಾಲಗೆಯೂ ಚುರುಗುಟ್ಟಿತು. ಏನೂ ಸದ್ದು ಬರದ್ದರಿಂದ ಹುಚ್ರಾಯ ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡಿದ. ‘ಓಣ್ಯಾಗಿನೌರೆಲ್ಲಾ ಸೇರ್ಕೊಂಡು ನಾಳೆ ಏರಿಯಾ ಸ್ವಚ್ಛ ಮಾಡೋ ಪ್ರೋಗ್ರಾಮ್ ಇಟ್ಗೊಂಡೀವಪ್ಪಾ. ಇಕೀ ನೋಡಿದ್ರ ಕಸಾ ಬಳ್ಯೋದು ಕಾರ್ಪರೇಷನೌರ ಕೆಲ್ಸಾ, ನಾವ್ಯಾಕ ಮಾಡ್ಬೇಕು? ಔರಗೆ ಕೂಡ್ಸಿ ಪಗಾರ ಕೊಡೂಣೇನು? ಅಂತ ವಾದಾ ಮಾಡಿ ಮಕ್ಕೊಂಡಾಳ. ತಲೀನೋವು ಸುಮ್ನ ಡ್ರಾಮಾ! ಅಲ್ಲಪಾ ನೀನ ಹೇಳು, ಎಲ್ಲಾ ಕೆಲ್ಸಾ ಸರಕಾರದ ಮ್ಯಾಲ ಹಾಕೂದಂದ್ರ ಛೊಲೊ ಅನ್ನಸ್ತದೇನು? ಪ್ರಜ್ಞಾವಂತ ನಾಗರೀಕರಾಗಿ ನಮ್ದೂ ಒಂಚೂರು ಕರ್ತವ್ಯ ಇರೂದಿಲ್ಲೇನು ಅಂತ ಅಂದದ್ದಕ್ಕ, ಮದ್ಲ ಮನೀ ಸ್ವಚ್ಛ ಮಾಡ್ರಿ, ಆಮ್ಯಾಲ ಓಣಿ ಸ್ವಚ್ಛ ಮಾಡ್ಲಿಕ್ಕ ಹೋಗೀರಂತ ಅಂತ ಝಗಳಾಡ್ಯಾಳ!’ ಅಂತ ಮೆಲ್ಲಗೆ ಅಂದೆ. ಅವಳಿಗೆ ನಾನಂದದ್ದು ಕೇಳಿಸ್ತೇನೋ ಕಾಟು ಧಡಧಡ ಸದ್ದಾತು! ‘ಶಾರ್ದಾ, ನಮ್ ಹುಚ್ರಾಯಾ ಬಂದಾನ ನೀರಂತ ತಂದಕೊಡು!’ ಅಂತ ಅಂದೆ. ಊಹುಂ! ಒಳಗಿಂದ ಹಾಟ್ ರೆಸ್ಪಾನ್ಸ್. ಕಾಟು ಧಡ್ ಧಡ! ಹುಚ್ರಾಯಾ ಕಿಸಕ್ಕೆಂದು ನಕ್ಕ! ನನಗೆ ಅವಮಾನ ಆದಂತಾಗಿ
‘ಹೂಂ ಇರ್ಲಿ ಇರ್ಲಿ ಅದೇನ ಈಗ ಬಂದಿ?’ ಮತ್ತೆ ಕೇಳಿದೆ. ಅವನ ಪ್ರಸನ್ನವದನ ಮತ್ತೆ ಮಾಜಿ ಹಿಂದಿನ ಮಾಜಿ ರೈಲು ಮಂತ್ರಿಯಂತೆ ಗಂಭೀರವಾಯಿತು!
‘ಸಾ ನಿಮಗ್ಗೊತ್ತಿರೋ ಅಂಗೆ ನಮ್ಮ ಮಾನ್ಯ ಪ್ರೈಮಿಸ್ಟ್ರು ನಮ್ ಮಆನ್ ದೇಸಾನ ಕಿಲಿನ್ ಮಾಡೋ ಪಣಾ ತೊಟ್ಟೋರೆ..!’ ಅಂತ ರಾಗವಾಗಿ ರಾಜಕೀಯ ಭಾಷಣದ ಸ್ಟೈಲನಲ್ಲಿ ಸುರು ಮಾಡಿದ. ನಾನು ಅವನ ಮಾತನ್ನ ಅರ್ಧಕ್ಕೇ ತಡೆದು,

‘ಹೂಂ ಅಂತೀನೀ! ಅದ್ಕ ಅಲ್ಲೇನ್ ನಮ್ಮನ್ಯಾಗ ಝಗಳ ಸುರು ಆದದ್ದು, ಅದಕೂ ಈಗ ನೀ ಬಂದು ಈ ಕಸದ ವಿಚಾರಾ ಹೇಳೂದುಕ್ಕೂ ಏನ್ ಸಮ್ಮಂಧಾನೋ?’ ಅಂತ ಕೆಣಕಿದೆ. ಹೀಗೆ ಕೆಣಕದಿದ್ದರೆ ಅವನಿಂದ ಸತ್ಯ ಹೊರಗೆ ಬರುವುದಿಲ್ಲ ಎಂಬ ಸತ್ಯ ನನಗೆ ಗೊತ್ತಿತ್ತು.
‘ಒಂದ್ ನಿಮಿಟ ತಡ್ಕಳ್ಳಿ ಸಿವಾ! ಮೇನ್ ಸುದ್ದೀಗೇ ಬತರ್ಿದಿನಿ!
‘…’
‘ಈ ಪೇಪರನಾಗಿನ ಇಗಾ ಈ ಸುದ್ದಿ ಓದಿ ಸಿವಾ!’ ಅಂತ ವಿಷಯ ಬದಲಿಸಿ ಸಂಜೆಯ ಪೇಪರನ್ನು ಅಂದಿನ ಅವನ ಮುಖ್ಯ ಸುದ್ದಿಯನ್ನು ನೋಡಿದೆ.
‘ಹೂಂ ಹೌದು, ಅದ ನಿನ್ನ ಪೆಟ್ ಫ್ರೆಂಡ್, ನಿನ್ನ ಮಗ್ಗಲ ವಾಡರ್ಿನ ತಿಪ್ಪೇಶಿ ಫೋಟೊ. ಕಸಾ ಬಳ್ಯೋದ್ ಎಷ್ಟ್ ಛೆಂದ್ ಹಾಕ್ಯಾರ ನೋಡೊ!’ ಅಂತ ಸಹಜ ಸಂತೋಷದಿಂದ ಹೇಳಿದೆ. ಅದನ್ನು ಕೇಳಿದ ಹುಚ್ರಾಯನ ಮುಖ ಕಸಿವಿಸಿಯಿಂದ ಕೆಂಪಾಯಿತು. ನಂಗೆ ವಿಚಿತ್ರ ಅನ್ನಿಸಿ,
‘ಯಾಕೋ ಏನಾತೋ?’ ಅಂತ ಗಾಬರಿಯಿಂದ ಕೇಳಿದೆ. ಅವನು ಕೂತ ಸೋಫಾದಲ್ಲಿದ್ದ ದಿಂಬನ್ನು ಕೋಪದಿಂದ ಹೊಸಕತೊಡಗಿದ.
‘ಏನ್ ಸಾ ಪೇಪರ್ ನೋಡಾಕೆ ನೀಡಿದ್ರೆ ಆ ಅಲ್ಕಾ ನನ್ ಮಗನ್ನ ತಾರೀಪ್ ಮಾಡಾಕೆ ಒಲ್ಟೀರಲ್ಲಾ!’ ಅಂತ ಕೋಪದಿಂದ ಕುದಿಯುತ್ತ ಹೇಳಿದ.
‘ಅಲ್ಲೋ ಅದರಾಗ ಏನಾಗ್ಯದೋ? ಅಂವಾ ನಿನ್ ಫ್ರೆಂಡು, ನೀನ ಇನ್ನ ಈಗ ಸ್ವಚ್ಛತಾ ಪ್ರೋಗ್ರಾಮ್ ಬಗ್ಗೆ ಹೇಳ್ತಿದ್ದಿ? ಅಂವಾ ಅದನ್ನ ಮಾಡ್ಯಾನ. ನೀಯಾಕ್ ಸಿಟ್ಟಿಗೇಳ್ತಿ? ನೀನೂ ಈ ಪ್ರೊಗ್ರಾಮ್ ಹಾಕ್ಕೋ. ಯಾರ್ ಬ್ಯಾಡಾಂದೌರು’ ಅಂತ ನಾನೂ ಸ್ವಲ್ಪ ಏರಿದ ಧ್ವನಿಯಲ್ಲಿ ಕೇಳಿದೆ. ಅವನು ಸ್ವಲ್ಪ ಮೆತ್ತಗಾದ.
‘ಅದೇ ಸಾ ನಾನೂ ಅಂಗೇ ಕಿಲಿನ್ ಪೋಗರ್ಾಮ್ ಆಕ್ಕೊಂಡಿದ್ದೆ. ಟುಡೇ ಅರ್ಯಾಗೆದ್ದು ನಮ್ ಕಾಲನಿ ಐಕ್ಳು, ಮಂದಿ, ಅಂಗೇ ನನ್ನ ಇತೈಸಿಗಳು, ಅಬಿಮಾನಿಗಳು ಎಲ್ಲರಗೂ ಬರಾಕ್ ಏಳಿ ಟಿಪನ್ನು, ಚಾ ವಾಟರ್ರು, ಅಂಗೇ ಪ್ರೆಸ್ ಲಿಪೋಲ್ಟರ್ರು ಟಿವಿನೌರು ಎಲ್ಲಾರಗೂನೂವೆ ಇನಿಟೇಸನ್ ಕೊಟ್ಟು ಎಲ್ಲಾ ಯವಸ್ತಾ ಮಾಡಿದ್ದೆ ಸಾ!’ ಅಂತ ಸುದ್ದಿಯನ್ನು ಬಿಚ್ಚುತ್ತಾ ಹೋದ. ನಂಗೀಗ ಕುತೂಹಲ ಜಾಗ್ರತವಾಯಿತು. ಮುಖ್ಯ ಸುದ್ದಿ ಈಗ ಬತರ್ಿದೆ ಅನ್ನಿಸಿತು. ಬೆಡ್ರೂಮಿನಿಂದಲೂ ಬಳೆಗಳ ಸದ್ದು ಕೇಳಿತು. ನಾನು ನೆಟ್ಟಗೆ ಕೂತು ಕೃತಕ ಸಂತೋಷವನ್ನು ವ್ಯಕ್ತಪಡಿಸಿ,
‘ಹೌದನೋ? ಭಾಳ್ ಛೊಲೋ ಮಾಡಿದ್ದಿ ನೋಡು!’ ಅಂತ ಹೇಳಿ ಪೇಪರನ್ನು ತಿರುಗಿಸುತ್ತಾ, ‘ಎಲ್ಲೋ ನಿನ್ ಸುದ್ದೀನ ಬಂದಾಂಘಿಲ್ಲಾ?’ ಅಂತ ಕೇಳಿದೆ. ಅವನ ಮುಖ ಮತ್ತೆ ಕೋಪದಿಂದ ಕೆಂಪಾದರೂ, ಹುಳ್ಳಗೇ ಮಾಡಿಕೊಂಡು,
‘ಊಂ ಸಾ! ಅದೇ ಆ ಅಲ್ಕಾ ನನ್ ಮಗನಿಂದ ಏಲ್ಲಾ ಎಕ್ಕುಟ್ಟೋತು!’
‘…..!?’
‘ಎ…ಎ!’ ಅಂತ ಕುಂಯ್ ಕುಂಯ್ ಮಾಡುತ್ತ
‘ಅದೇ ಸಾ ಆಗ್ಲೆ ಏಳಿದ್ನೆಲ್ಲಾ ಎಲ್ಲ ತಯ್ಯಾರಿ ಮಾಡ್ಕೊಂಡಿದ್ದೇಂತಾ, ಅದ್ರಲ್ಲಿ ಎಲ್ಡು ಟ್ಯಾಟ್ರಿ ಪುಲ್ ಕಸಾನೂ ತುಂಬ್ಕೊಂಡ್ ಮನೆ ತಾವ ರಾತ್ರಿ ಆಲ್ಟಿಂಗ್ ಮಾಡ್ಸಿದ್ದೆ ಸಾ! ಒಂದೊಂದ್ ಟ್ಯಾಟ್ರಿ ಕಸಕ್ಕೂ ಒಂದೊಂದ್ ಸಾವ್ರಾ ಹಣಾ ಕೊಟ್ಟಿದ್ದೆ ಸಾ! ಒತ್ತ ಅರ್ಯೋಕ್ ಮುಂಚೆ ಕಸಾ ಎಲ್ಲಾ ನಮ್ ಕೇರಿನಾಗೆ ಅರಡಾಕೆ ಏಳಿದ್ದೆ ಸಾ….!’ ಅಂತ ಹೇಳುತ್ತ ಕಳ್ಳಗಣ್ಣಿನಿಂದ ನನ್ನನ್ನು ನೋಡಿದ. ನನ್ನ ಅಚ್ಚರಿಯು ಪಿಎಸ್ಎಲ್ವಿಯಂತೆ ಏರುತ್ತಿತ್ತು!
‘ಹೂಂ ಮುಂದ ಏನಾತು?’ ಅಂತ ಕೇಳಿದೆ. ಒಳಗಿನಿಂದ ಅವಳು ಎದ್ದು ಕೂತ ಸದ್ದು ನಿಧಾನವಾಗಿ ಕೇಳಿತು!
ಅವನು ಇದ್ದಕ್ಕಿದ್ದಂತೆ ಮತ್ತೆ ಕೋಪೋದ್ರಿಕ್ತನಾಗಿ, ‘ನೀವೇನೆ ಏಳಿ ಸಾ! ಈ ಪೆಂಡ್ರು ಸ್ನೇಆ ಗೀಆ ಎಲ್ಲಾ ಏಸ್ಟು ಸಾ! ಈಗಿನ್ ವಲ್ಡನಾಗೆ ಯಾರ್ನೂವೇ ಬಿವೀಲ್ ಮಾಡ್ಬಾದರ್ು ಸಾ!’ ಅಂತ ತನ್ನ ದರಿದ್ರ ಇಂಗ್ಲಿಷ್ ಅಭಿಮಾನದಿಂದ ಅದನ್ನು ಚೂರು ಚೂರೇ ಕೊಲ್ಲುತ್ತ ಹೇಳಿದ.
‘ಅಲ್ಲಾ ಸಾ ನಾ ಅಲ್ಲಿಂದಾ ಇಲ್ಲಿಂದಾ ಕಂಟ್ರಾಟದಾರ್ಗೆ ಪೂಸಿ ಒಡ್ದು ಅರೆಂಜ್ ಮಾಡಿ ನಮ್ ಮನೇತಾವ ನೈಟ್ ಟ್ಯಾಟ್ರಿನಾಗೆ ತುಂಬಿಟ್ಟಿದ್ದ ಕಸಾನೆಲ್ಲಾ ಆ ಅಲ್ಕಾ ನನ್ ಮಗಾ ಮಾಲ್ನಿಂಗ್ ಆಗೋದ್ರಾಗೆ ತೆಪ್ಟ್ ಮಾಡ್ಕೊಂಡೋಗಿ ತನ್ನ ಏರಿಯಾದಾಗೆ ಅಲ್ಡಿ ಇವತ್ ತಾನೇ ಸ್ವಚ್ಚತಾ ಕೆಲ್ಸಾ ಮಾಡಿ ಪೋಟೋ ಪೇಪರ್ನ್ಯಾಗೆ ಅಕ್ಕೊಂಡಿದಾನಲ್ಲಾ ಸಾ! ಒಟ್ಟೆ ಉರ್ಯಾಕಿಲ್ವಾ ಸಾ! ಇಂಗಾದ್ರೆ ನಾ ಎಂಗ್ ಸೊಸೆಲ್ ಸರ್ವೀಸ್ ಮಾಡಾದು! ನೀವೇ ಏಳಿ ನೀಯತ್ತಿರೋರು ಮಾಡ್ಬೌದಾ ಇಂತಾ ಅಲ್ಕಾ ಎಲ್ಸಾ?’ ಅಂತ ಹೇಳಿ ಉಸ್ಸೆಂದು ಬೆವರು ಒರಸ್ಗೊಂಡಾ! ಒಳಗಿಂದ ಖೊಕ್ಕೆಂದು ನನ್ನ ಪತ್ನಿ ನಕ್ಕ ಸದ್ದು! ನಾನು ನಗಲಿಕ್ಕೂ ಆಗದೇ ಯೋಚಿಸಲಿಕ್ಕೂ ಆಗದೇ ಬ್ಲ್ಯಾಂಕ್ ಆಗಿ ಕೂತಿದ್ದೆ.
ಎರಡೇ ನಿಮಿಷ ಶಾರದಾ ನಗುತ್ತಾ ಎರಡು ಕಪ್ಪು ಬಿಸಿಬಿಸಿ ಚಹಾ ತೆಗೆದುಕೊಂಡು ಬಂದಳು!
 
 

‍ಲೇಖಕರು G

January 6, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: