ಟೈಮ್ ಪಾಸ್ ಕಡ್ಲೆ ಕಾಯ್ : ಹುಚ್ರಾಯಪ್ಪನ ಭಯೋತ್ಪಾದಕ ಪಟ್ಟಿ!

ಎಚ್. ಜಿ. ಮಳಗಿ

ಮೊನ್ನೆ ಬೆಳಿಗ್ಗೆ ಯಥಾಪ್ರಕಾರ ಬಸ್ ಕಾಯುತ್ತಾ ರಸ್ತೆ ಬದಿಯ ಸ್ಟಾಪ್ನಲ್ಲಿ ನಿಂತಿದ್ದೆ. ಈ ಸಲ ಧಾರವಾಡದ ಮಳಿ ಚಳಿಗಾಲ ಸುರೂ ಆದ್ರೂ ಇನ್ನೂ ನಿಂತಿಲ್ಲ. ಕಣ್ಣು ಮುಚ್ಚಾಲೆ ಆಡುತ್ತಿರುವ ಕರೆಂಟಿನಂತೆ ಆಗೀಗ ಹನಿ ಉದುರಿಸಿ ಮೋಡಗಳು ಕಿಸಿಕಿಸಿ ನಗುತ್ತಾ ಓಡುತ್ತಿದ್ದವು. ಛತ್ರಿಯನ್ನು ಮರೆತು ಬಂದಿದ್ದೆ. ಹೀಗಾಗಿ ಮಳೆಗಡ್ಡವಾಗಿ ಸಂಯುಕ್ತ ಕರ್ನಾಟಕ ಪೇಪರನ್ನೇ ಹಿಡಿದು ನಿಂತಿದ್ದೆ. ರಸ್ತೆ ಆ ಬದಿಯಲ್ಲಿ ಮೊಬೈಲ್ನಲ್ಲಿ ಮಾತಾಡುತ್ತಾ ಮುಖಕ್ಕೆ ಟಾವೆಲನ್ನು ಅಡ್ಡ ಇಟ್ಟುಕೊಂಡು ಬರುತ್ತಿದ್ದ ಪರಿಚಿತ ವ್ಯಕ್ತಿ ಕಂಡ. ಭಯೋತ್ಪಾದಕನನ್ನು ಕಂಡಂತಾಗಿ ಅದುರಿ ಬಿದ್ದೆ.
ಹುಚ್ರಾಯಪ್ಪ!
ನನ್ನ ಹಳೆಯ ಶಿಷ್ಯ ಅಡ್ಡಮನಿ ಹುಚ್ಚೂರಾಯ! ಅವನಿಗೆ ಅಡ್ಡಮನಿ ಅಂತ ಅಡ್ಡ ಹೆಸರು ಯಾಕೆ ಬಂತೋ ಗೊತ್ತಿಲ್ಲ. ಆದ್ರೆ ಹುಚ್ರಾಯ ಮಾತ್ರ ಸ್ವಲ್ಪ ಅಡ್ನಾಡೀನೇ! ಇನ್ನು ಮಾತಿಗೆ ನಿಂತಾ ಅಂದ್ರೆ, ದೊಡ್ಡ ಕೊರೆತದ ಕಂಪನಿ!
.
(ಹುಚ್ರಾಯಪ್ಪ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನವ! ಧಾರವಾಡಕ್ಕೆ ಬಂದು ಹತ್ತು-ಹದಿನೈದು ವರ್ಷವಾಗಿದೆ. ತಮ್ಮ ತಂಗಿ ತಾಯಿಯೂ ಅವನ ಜತೆಯಲ್ಲಿಯೇ ವಾಸವಾಗಿದ್ದಾರೆ. ಆದರೂ ಮಾತಿನಲ್ಲಿ ಶಿವಮೊಗ್ಗ ಜಿಲ್ಲೆಯ ಸೊಬಗು, ಸೊಡರು, ಸೊಗಡು ಒಂಚೂರೂ ಮಾಸಿಲ್ಲ!)
.
ತಲೆಯ ಮೇಲಿನ ಪೇಪರು ನನ್ನ ಮುಖಕ್ಕೆ ಇಳಿಯಿತು. ಮುಖಕ್ಕಿಂತ ದೇಹ ದೊಡ್ಡದು ಎಂಬ ಸಣ್ಣ ಸತ್ಯವೂ ನನ್ನ ತಲೆಗೆ ಹೊಳೆಯಲಿಲ್ಲ. ನನ್ನ ಧಡೂತಿ ದೇಹವನ್ನು ಅಷ್ಟು ದೂರದಿಂದಲೇ ಗುರ್ತಿಸಿ ಹುಚ್ರಾಯಪ್ಪ ಮೊಬೈಲ್ನಲ್ಲಿ ಮಾತಾಡುತ್ತಲೇ ಗಡಿಬಿಡಿಯಿಂದ ರಸ್ತೆ ದಾಟಿ ನನ್ನತ್ತ ಬಂದು ಬಿಟ್ಟಾನು ಅಂತ ಆತಂಕದಿಂದ ನಾನು ಚಡಪಡಿಸುತ್ತ ಬರದಿರುವ ಬಸ್ಸಿಗೆ ಹಿಡಿಶಾಪ ಹಾಕುತ್ತ ಮುಖ ಮರೆಸಿಕೊಂಡೇ ನಿಂತಿದ್ದೆ. ಆದರೆ ಹಾಗೇ ರಸ್ತೆ ದಾಟಿ ಬಂದ ಹುಚ್ರಾಯ ನನ್ನ ಪಕ್ಕದಲ್ಲೇ ಮೊಬೈಲ್ನಲ್ಲಿ ಮಾತಾಡುತ್ತ ನಿಂತ. ನನಗೆ ಅಚ್ಚರಿ. ಹಾಗೇ ಕಳ್ಳಗಿಂಡಿಯಿಂದ ನೋಡಿದೆ. ಅವನೂ ಪೋಲಿಸರಿಂದ ತಪ್ಪಿಸಿಕೊಂಡಿರುವ ಕಳ್ಳನಂತೆ ಮುದುಡಿಕೊಂಡು ನಿಂತಿದ್ದ. ಪಕ್ಕದಲ್ಲೇ ನಿಂತಿದ್ದ ನನ್ನ ಗುರ್ತು ಹಿಡಿದಂತೆ ಕಾಣಲಿಲ್ಲ. ಯಾಕೋ ಅವನ ಮುಖ ಸಪ್ಪಗಾಗಿತ್ತು. ಮೊಬೈಲ್ನಲ್ಲಿ ಮಾತನ್ನು ಮುಗಿಸಿ ನಿಂತ ಅವನನ್ನು ನಾನೇ ಕರೆದು ಮಾತಾಡಿಸುವ ಮನಸ್ಸಾಯಿತು.
.
‘ಏಯ್ ಹುಚ್ರಾಯಾ! ಯಾಕೋ ನನ್ ಗುತರ್ು ಹತ್ಲಿಲ್ಲೇನೋ? ನಾ ನಿನ್ ಮಾಸ್ತರೋ!’ ಅಂತ ಅಂದೆ. ಪೇಲವ ದೃಷ್ಟಿಯಿಂದ ನನ್ನನ್ನು ಒಮ್ಮೆ ದಿಟ್ಟಿಸಿದ ಹುಚ್ರಾಯಾ ಒಂದೆರಡು ಕ್ಷಣ ಸುಮ್ಮನಿದ್ದು ನಂತರ, ‘ಓ ಸೇಸಣ್ಣ ಮಾಷ್ಟ್ರು ಔದಲ್ವಾ! ಸಾರೀ ಸಾ! ಯಾವ್ದೋ ಗ್ಯಾನ್ದಾಗೆ ನಿಮ್ನ ನೋಡ್ನಿಲ್ಲಾ! ಅಗರ್ಕೆ ಮಾತಾಡೀ ಸಾ ಯಾರಾದ್ರೂ ಕೇಳುಸ್ಗೊಂಡಾರು?’ ಅಂತ ಅಂದ. ಅವನ ಮುಖದಲ್ಲಿ ಎಂದಿನ ಲವಲವಿಕೆ ಇಲ್ಲ. ಮಾತಿನಲ್ಲೂ ಸಪ್ಪೆ! ನನಗೆ ಮತ್ತೆ ಆಶ್ಚರ್ಯವಾಯಿತು, ‘ಯಾಕೋ ಹುಚ್ಚಾ! ಡಲ್ ಆಗಿದ್ದೀ? ಏನ್ ಸಮಾಚಾರಾ. ಅತ್ಲಾಗ ಇಲೆಕ್ಷೆನ್ ಆದ್ಮ್ಯಾಲ ನೀ ಕಂಡೇಲ್ಲಾ?’ ಅಂತ ಕೇಳಿದೆ. ಅದಕ್ಕವನು, ‘ಊ ಸಾ!  ಅವತ್ತೇ ಏಳಿದ್ನೆಲ್ಲಾ ಸಾ, ಎಲ್ಲಾ ನಾ ಲೆಕ್ಕಾ ಆಕ್ದಾಂಗೆ ನಮ್ ಪಾಲ್ಟೀನೇ ಬಂದ್ಬುಡ್ತಲ್ಲಾ ಸಾ ಪವರ್ಗೆ!’
.
‘ಅಲ್ಲೋ ಈಗ್ ಪವರಗೆ ಬಂದಿರೋದು ನಿನ್ನ ವಿರೋಧ ಪಕ್ಷ ಅಲ್ಲೇನೋ?’ ಅಂತ ಆಶ್ಚರ್ಯದಿಂದ ಕೇಳಿದೆ. ‘ಅದೇನೋ ಔದ್ಸಾ! ಆದ್ರೆ ಅವತ್ತೇ ನಿಮ್ಗೆ ಏಳಿದ್ನೆಲ್ಲಾ ಸಾ, ಎಲ್ಲಾ ಒಟಗೇ ಬಂಡ್ವಾಳಾ ಆಕಿ ಇನೆಕ್ಸೆನ್ ಪೈಟ್ ಮಾಡಾನ ಅಂತ, ಅಂಗೆ ಎಲ್ಲಾ ಪಾಲ್ಟೀಲಿರೋ ನಮ್ ಎಷ್ಟೋ ಅಬ್ಯತರ್ಿಗಳು ನಾಏಳ್ದಾಂಗೇ ಮಾಡಿ ಗೆದ್ದ್ ಬಂದ್ರು ಸಾ! ಅಂಗೇ ಪಾಲಿಟಿಕ್ಸನಾಗೆ ಬಿಜಿ ಆಗ್ಬಿಟ್ಟಿದ್ದೆ ಸಾ! ಆಮ್ಯಾಗೆ ಎಲ್ಡ್ ವರ್ಸಾ ಎಲ್ಲಾ ಸೆಂದಾಗೇ ನಡೀತು ಸಾ! ನಾನೂ ಅದೂ ಇದೂ ಕೆಲ್ಸಾ ಮಾಡ್ಸಿ ಜನ್ರ ಸೇವೇ ಮಾಡ್ದೆ ಸಾ!’ ಅಂತ ಟಾವೇಲಿನಿಂದ ಮುಖ ಒರೆಸಿಕೊಂಡ. ಇವನ್ಯಾವ ಸೀಮೆಯ ದೇಶ ಸೇವೆ ಮಾಡಿದ್ದಾನೆ ಅಂತ ತಿಳಿಯುವ ಕುತೂಹಲ ಉಂಟಾಯಿತು. ‘ಹೂಂ! ಮುಂದ್?’ ಕೇಳಿದೆ. ‘ಎಲ್ಲಾ ಪಾಲ್ಟೀ ಒಳಿಕ್ಕೆ ಈಗೊಂದ್ ಎಲ್ಡ್ ತಿಂಗ್ಳಿಂದ್ ಎಲ್ಲಾ ಕೆಲ್ಸಾನೂ ಮಂದೀ ಆಗಿ ಬಿಟೈತೆ ಸಾ! ಯಾಪಾರಾನೇ ಇಲ್ಲಾ ಸಾ! ಎಂಗೂ ಪ್ರೀ ಐದೀನ್ ಸಾ! ಅಂಗೇ ಊರ್ನಲ್ಲಿ ನಿಮ್ಗೋಳ್ನೆಲ್ಲಾ ಮಾತಾಸ್ಗೊಂಡ್ ಓಗಾನಾಂತ್ ಬಂದೆ ಸಾ! ಬೆಂಗ್ಳೂರ್ನಿಂದಾ’ ಅಂತ ಹೇಳಿ, ಖೇದದಿಂದ, ‘ನೀವೇನೇ ಏಳಿ ಸಾ ನಮ್ ಜನ್ಗೋಳ್ಗೆ ಕ್ರಿಯೆ, ಕರ್ಮಾ, ರಿಗರೇಟ್ ಒಂದೂ ಇಲ್ಲಾ ಸಾ!’ ಅಂದ. ನನಗೆ, ಈ ಕ್ರಿಯೆ ಕರ್ಮಾ ಅರ್ಥ ಆಯ್ತು. ಈ ರಿಗರೇಟು? ಆರಿಸಿ ಕಳಿಸಿದ್ದಕ್ಕೆ ಗ್ರಾಟಿಟ್ಯೂಡ್ ಇಲ್ಲದವರ ಬಗ್ಗೆ ರಿಗ್ರೆಟ್ ಇಲ್ದೇ ಇರುತ್ತಾ? ಅಂತ ಅಂದುಕೊಂಡೆ. ಆಮೇಲೆ  ಹುಚ್ರಾಯನ ರಿಗರೇಟ್ ಶಬ್ದದ ಅರ್ಥ ಹೊಳೆದು, ‘ಓ ಗ್ರಾಟಿಟ್ಯೂಡ್!’ ಅಂತ ಅಂದೆ.
.
‘ಊ ಸಾ ಅದೇ!’
‘ಅದ್ಯಾಕ್ ಹಂಗ್ ಅಂತೀಯೋ ಏನಾತೋ?’
.
‘ಮತ್ತಿನ್ನೇನ್ಸಾ! ನಮ್ ಲೀಡರ್ಗೇಳಿ ಊರಾಗಿನ್ ಆದಿಬೀದಿ ದೇವ್ರಿಗೆ ಸ್ವಾಮ್ಗೋಳ್ಗೆಲ್ಲಾ ಪಂಡ್ ಕೊಡ್ಸಿದ್ದೆ, ನನ್ನಿಂದಾಗಿ ಎಲ್ಲಾ ದೇವ್ರೂ ದಿನಾ ಜಳಕಾ ಪೂಜೆ ಕಂಡ್ರು! ಎಲ್ಲಾ ದೇವ್ರುಗೂನೆ ನಮ್ ಪಕ್ಸದ್ ಎಸ್ಟ್ ಕಾರ್ಯಕರ್ತರು ಒಳ್ಳೊಳ್ಳೆ ಟೋಪಿ ಆಕಿದ್ರು!’
.
‘ದೇವ್ರಿಗೆ ಟೋಪಿ ಹಾಕೋದಂದ್ರ ಏನೋ ಹುಚ್ಚಾ?’ ಅಂತ ವಿಸ್ಮಯದಿಂದ ಕೇಳಿದೆ. ‘ಅದೇ ಸಾ ಕಿಲ್ಟಾ ಇಡಾದು ಸಾ ಕಿಲ್ಟಾ! ಚಿನ್ನದ್ದು, ಬೆಳ್ಳೀದು, ವಜ್ರದ್ದು. ನಾನೇ ತಲೆಮ್ಯಾಗ್ ಒತ್ಗೊಂಡ್ ಓಗಿ ಇಟ್ಬಂದೆ ಸಾ! ಎಷ್ಟ್ ದುಡ್ಡ್ ಕರ್ಚಾತು ಗೊತ್ತಾ ಸಾ!’
.
‘ಹೌದೂ! ಆದ್ರೆನೀಗ?’
‘ಆ ದೇವ್ರಿಗೂ ಕ್ರಿಯಾ ಕರ್ಮಾ ಇಲ್ಲಾ ಸಾ’
‘ಅಂದ್ರೇನೋ?’
.
‘ಮತ್ತೆ ನೋಡೀ ಸಾ! ನಮ್ಮನ್ನೆಲ್ಲಾ ಕೈಬಿಟ್ಟು ನೀರ್ನಾಗ್ ಮುಳಗಸ್ಬಿಟ್ಟಾ ಸಾ ಔನೂ! ಆಮ್ಯಾಗೆ, ನಮ್ಮೂರಿನ್ ಬೆಣ್ಣೆ ಗುಡ್ಡ ಐತಲ್ಲ ಸಾ, ಅಲ್ಲೆ ಕ್ವಾರೀ ಮಾಡೋಕೆ ಲೈಸೆನ್ಸ್ ತಗಂಡೆ, ಅಂಗೇ ನನ್ ದೋಸ್ತೀಗೂ ನನ್ ಪಕ್ದಾಗೇ ಕ್ವಾರಿ ಲೈಸನ್ಸ್ ಕೊಡುಸ್ದೆ’
‘ಮುಂದೆ?’
‘ನಮ್ಮುಡ್ರು ಏನೋ ಅರೀದೇ ಕಾಡ್ ಜಾಗಾದಾಗೆ ಕ್ವಾರಿ ಮಾಡ್ದರಂತೆ, ಅದ್ಕೆ ಆ ಅಲ್ಕಾ ನನ್ಮಗಾ ಕಂಪ್ನೇಟ್ ಕೊಟ್ಟಾ!’ ಆಕ್ರೋಶದಿಂದ ಹೇಳಿದ. ನಾನು, ‘ಯಾರ್ಗೋ?’ ಅಂತ ಕೇಳಿದೆ. ‘ಇನ್ಯಾರ್ಗೆ ಸಾ ಆ ಲೋಕಾವಿಕ್ತರ್ಗೆ!’ ಅಂತ ರೋಷದಿಂದ ಹೇಳಿ, ‘ಏನ್ಸಾ ಯಾರೂ ಮಾಡ್ದ ನಾ ಮಾಡಿದ್ನಾ? ಕ್ವಾರೀ ಮಾಡಿ ಗೋರ್ಮೆಂಟಿಗೆ ಎಷ್ಟ್ ಲಾಯಲ್ಟೀ ಕೊಟ್ಟೆ ಸಾ ನಾ! ಎಷ್ಟ್ ಜನ್ರೀಗೆ ಎಂಪ್ನಾಮೆಂಟ್ ಕೊಟ್ಟೆ. ಅದೇನೋ ಜೀನೋಪಿಕೇಸನ್ ಅಂತಾರಲ್ಲ ಸಾ’, ‘ಹೂಂ! ಡೀನೋಟೀಫಿಕೇಷನ್’ ನಾನು ತಿದ್ದಿದೆ.  ‘ಊ ಅದೇ ಸಾ ಅದ್ನ ನಮ್ ಲೀಡರ್ಗೇಳಿ ಮಾಡುಸ್ಗೊಂಡೆ ಸಾ. ಏನೋ ಒಂದೀಟ್ ಆಚೀಚೆ ಮಾಡ್ದಕ್ಕೆ ಲೋಕಾವಿಕ್ತಕ್ಕ್ ಕಂಪ್ನೇಟ್ ಮಾಡ್ಬೌದಾ ಸಾ? ಅಂಗೇ ನಮ್ ಸಂಬಂದಿಗಳಿಗೆ, ಸ್ನೇಇತ್ರಿಗೆ ಎಲ್ಲಾರ್ಗೂನೂವೆ ಸೈಟ್ ಕೊಡುಸ್ದೆ ಸಾ. ಅದ್ರಾಗೆ ನಾನೂ ಒಂದತ್ತ್ ಸೈಟು ಮಾಡ್ಕೊಂಡೆ ಸಾ!, ಅಂಗೇ ಬೀಳ್ ಬಿತ್ತು ಸಾ ಸರ್ಕಾರಿ ಜಾಗಾ, ಅಲ್ಲೆ ಲೇಔಟ್ ಮಾಡುಸ್ಕೊಟ್ಟೆ, ಏನ್ ತಪ್ಪೈತೆ ಸಾ?  ನಂ ಇರೋದಿಗಳೆಲ್ಲಾ ಇಸ್ಟ್ ವಸರ್ಾ ಏನ್ ಮಾಡಿದ್ದಾರೆ ಸಾ! ಯಾ ನನ್ಮಗಾ ಸುದ್ದ್ ಅದಾನೆ ಏಳ್ಳಿ ನೋಡಾನಾ ಸಾ! ನನ್ನ್ ಎಸರ್ನಾಗೆ ಯಾರ್ಯಾರೋ ಎಲ್ಲೆಲ್ಲೋ ಕ್ವಾರೀ ಮಾಡೀದ್ರಂತ್ ಈ ಎಲ್ಲಾ ಇರೋದ್ ಪಕ್ಸ್ದೌರು ನಮ್ ಎಲ್ಲಾ ನಾಯಕ್ರಿಂದೆ ಬಿದೌರಲ್ಲಾ, ಈ ಲೋಕಾವಿಕ್ತರು, ಐಕೋಲ್ಟ್ನೌರು, ಸೀಬಿನೌರ್ಗೆ ಗ್ಯಾನಾ ಬ್ಯಾಡ್ವಾ ಸಾ!’ ಅಂತ ಸಿಟ್ಟನ್ನೆಲ್ಲಾ ಒಟ್ಗೇ ಹೊರಹಾಕಿದ.
.
‘ಅಲ್ಲೋ ಹುಚ್ಚಾ! ನಿಂಗ್ಯಾಕೆ ಈ ಸೀಬೀನೌರ್ ಮ್ಯಾಲ ಸಿಟ್ಟು? ನೀ ಏನರ ಸಿಕ್ಕಾಕ್ಕೊಂಡೀ ಏನ್ ಮತ್ತ?’
ಹುಚ್ರಾಯಪ್ಪಾ ಹುಳ್ಳ ಹುಳ್ಳಗೆ ಮುಖ ಮಾಡಿ, ‘ಹೆ ಹೆ ಅಂಗೇನ್ ಇಲ್ಲಾ ಸಾ!’ ಅಂತ ದೇಶಾವರಿ ನಕ್ಕು, ಮತ್ತೆ ವೀರಾವೇಶದಿಂದ, ‘ನನ್ ಇಡಿಯೋ ತಾಕತ್ ಇಡೀ ವಲ್ಡ್ನಾಗೆ ಯಾ ನನ್ ಮಗಂಗ್ ಐತೆ ಸಾ!’ ಅಂದ. ‘ಆತ್ ಬಿಡು ಮತ್ಯಾಕ್ ಹೆದರ್ತೀ! ತಪ್ ಮಾಡ್ದೌರೆಲ್ಲಾ ಸಿಕ್ಕ್ ಬೀಳ್ತಾರ. ಔರಿಗೆ ಶಿಕ್ಷೆ ಆಗ್ತದ. ಕೋರ್ಟನ್ಯಾಗ ಎಲ್ಲಾ ಗೊತ್ತಾಗ್ತದ ಬಿಡು’ ಅಂದೆ. ಕೋರ್ಟ ಹೆಸರು ಕೇಳುತ್ತಿದ್ದಂತೇ ಅವನ ಮುಖ ಕೋಪದಿಂದ ಕೆಂಪಾಯಿತು. ‘ಸಾ! ಈ  ಅಮೇರಿಕಾನೌರು ಉಚ್ರಾಂಗ್ ಯಾವ್ಯಾವ್ದೋ ಸಂಗಟನೇನಾ ಟೆರಿಸ್ಟ್ ಅಂತ ಗೋಷಣೆ ಮಾಡ್ತೌರಲ್ಲಾ ನಮ್ ರಾಜ್ಯದಾಗೆ ಇರೋ ಸಂಗಟನೇಗಳ್ನ ಟೆರಿಸ್ಟ್ ಅಂತ ಯಾಕ್ಸಾ ಗೋಷ್ಣೆ ಮಾಡ್ಬಾರ್ದು?’ ಇದ್ದಕ್ಕಿದ್ದಂತೆ ಬದಲಾದ ಅವನ ಮಾತಿನ ವರಸೆ ನನಗೆ ತಿಳಿಯಲಿಲ್ಲ. ಆಶ್ಚರ್ಯದಿಂದ, ‘ಏನ್ ಹೇಳ್ತೀಲೇ ಹುಚ್ಚಾ! ನಮ್ ರಾಜ್ಯದಾಗೂ ಟೆರರಿಸ್ಟ್ ಆರ್ಗನೈಜೇಷನ್ಗಳವ ಏನೋ? ಯಾವವೋ?’
.
‘ಏಯ್ ಬಿಡಿ ಸಾ! ನೀವ್ಯಾಗ್ನೂ ಇಂಗೇಯಾ. ಏನೂ ಗೊತ್ತಿಲ್ಲಾ. ಮತ್ತಿನ್ನೇನ್ ಸಾ! ಈ ಲೋಕಾವಿಕ್ತರು, ಈ ಐಕೋಲ್ಟ, ಈ ಸೀಬಿನೌರು ಯಾವ್ ಟೆರಸ್ಟ್ನೌರಿಗಿಂತಾ ಕಮ್ಮೀ ಔರೇ ಸಾ!’ ಹುಚ್ರಾಯಪ್ಪನ ವಿಶ್ಲೇಷಣೆ ಕೇಳಿ ನಾನು ದಂಗು ಹೊಡೆದೆ. ‘ಏನೋ ಹುಚ್ಚಾ ಹಿಂಗೆಲ್ಲಾ ಮಾತಾಡ್ತೀ’ ಅಂತ ಆಚೀಚೆ ಹೆದರಿಕೆಯಿಂದ ನೋಡುತ್ತ ಗದರಿದೆ.  ‘ಅಲ್ಲವ್ರಾ ಮತ್ತೆ! ಇವ್ರೆಲ್ಲಾ ಇಂಗೆ ನಮ್ಮೈಮ್ಯಾಗೆ ಬಿದ್ದು ಪ್ರಾಂಪ್ಟ್ ಆಗಿರೋ ನಮ್ಮನ್ನ ನಂ ಪ್ರೆಂಡ್ಗಳನ್ನ ಇಂಗೆ ಜೇಲ್ಗಾಗ್ತಿದ್ರೆ ಇದಾನ್ಸೌದಾಗೆ ಆಡಳಿತಾ ಮಾಡೌರ್ಯಾರು ಸಾ. ನಾವೆಂಗ್ಸಾ ಜೀವ್ನಾ ಮಾಡೋದು.’ ಕೋಪದಿಂದ ಹೇಳಿ, ‘ಅದ್ಕೆ ಸಾ ಈ ಲೋಕಾವಿಕ್ತ, ಸೀಬೀ, ಈ ಕೋಲ್ಟ್ ಎಲ್ಲಾರ್ನೂ ಟೆರಿಸ್ಟ್ ಸಂಸ್ತೆ ಅಂತ ಡಿಕ್ನೇರ್ ಮಾಡಿ ಬ್ಯಾನ್ ಮಾಡ್ಬುಡಿ ಅಂತ ನಮ್ ಪಾಲ್ಟಿ ಲೀಡರ್ಗೆ ಏಳಿ ಅಮೇರಿಕಾ ಅದ್ಯಕ್ಸರಿಗೆ ತಿಳ್ಸಾಣಂತ್ ಮಾಡೀನೀ ಸಾ!’ ಟೆರರಿಸ್ಟ್ ಆರ್ಗನೈಜೇಷನ್ ಬಗ್ಗೆ ಹುಚ್ರಾಯಪ್ಪನ ವಿವರಣೆ ಕೇಳಿ ನನ್ನ ತಲೆ ಗಿರ್ರ ಅಂತು. ‘ಅಮೇರಿಕಾದೌರ ಯಾಕೋ ನಮ್ಮೌರೇ ಮಾಡ್ಬೌದಲ್ಲೇನೋ?’ ಛೇಡಿಸಿದೆ. ಅವನಿಗೆ ನನ್ನ ಛೇಡನೆ ಅರ್ಥವಾಗಲಿಲ್ಲ.
.
‘ಅಮೇರಿಕಾದೌರು ಬ್ಯಾನ್ ಮಾಡಿದ್ರೇನೇ ನಮ್ಮೌರಿಗೆ ಅರ್ತಾ ಆಗೋದ್ ಸಾ ಇವೆಲ್ಲಾ  ಎಂತಾ ಬಯಂಕರ ಟೆರಿಸ್ಟ್ ಸಂಸ್ತೆಗಳಂತ ಅಲ್ಲವ್ರಾ ಮತ್ತೆ. ಇಂದೆ ನಂ ನೇಬರ್ ಕಂಟ್ರೀಲಿದ್ದ ಟೆರಿಸ್ಟ್ ಸಂಗಟನೇನ ಟೆರಿಸ್ಟ್, ಟೆರಿಸ್ಟ್ ಅಂತ ನಮ್ಮೌರು ಎಸ್ಟ್ ಒಡ್ಕೊಂಡ್ರೂ ವಲ್ಡ್ನಲ್ಲಿ ಯಾರೂ ಕ್ಯಾರೆ ಅನ್ಲಿಲ್ಲಾ! ಈ ಅಮೇರಿಕಾದೌರು ಅವನ್ನೆಲ್ಲಾ ಟೆರಿಸ್ಟ್ ಅಂತ ಗೋಸ್ಣೆ ಮಾಡದ್ಮ್ಯಾಲ್ ಅಲ್ಲವ್ರಾ ವಲ್ಡ್ನಲ್ಲಿ ಎಲ್ರೂನೂವೆ ಔದೌದ್ ಅನ್ಲಿಲ್ವರಾ ಸಾ!’ ಹುಚ್ರಾಯಪ್ಪನ ರಾಜಕೀಯ ಅನುಭವ ಇಷ್ಟು ಆಳ ಅಂತ ನನಗೆ ತಿಳಿದಿರಲಿಲ್ಲ. ನನಗೆ ಹುಚ್ಚು ಹಿಡಿಯುವದೊಂದು ಬಾಕಿ. ಇನ್ನೂ ಏನೇನ್ ಹೇಳೋನಿದ್ದನೋ, ಅಷ್ಟೊತ್ತಿಗೆ ದೂರದಲ್ಲೆಲ್ಲೋ ಪೋಲೀಸ್ ಸೈರನ್ ಕೇಳಿಸ್ತು. ಬೆಚ್ಚಿಬಿದ್ದ ಹುಚ್ರಾಯಪ್ಪ ಗಡಿಬಿಡಿಯಿಂದ, ‘ನಾ ಆಮ್ಯಾಗೆ ಕಾಣ್ತೀನಿ ಸಾ!’ ಅಂತ ನನ್ನ ಉತ್ತರಕ್ಕೂ ಕಾಯದೇ ಟಾವೆಲ್ನಿಂದ ಮುಖ ಮುಚ್ಗೊಂಡು ಓಣಿಯ ಸಂದಿಯಲ್ಲಿ ಓಡಿ ಮಾಯವಾದ! ಅವನು ಹೇಳಿದ ಟೋಪಿ, ಜೀನೋಪಿಕೆಸನ್, ಲೋಕಾವಿಕ್ತ, ಕೋಲ್ಟು, ಸೀಬಿ, ಟೆರಿಸ್ಟ್ ಮುಂತಾದ ಎಲ್ಲ ಪದಗಳನ್ನು ಹೊಸದಾಗಿ ಕೇಳಿದಂತಾಗಿ ಅವುಗಳ ಅರ್ಥ ಹುಡುಕುತ್ತ ಪೆಚ್ಚಾಗಿ ನಿಂತೆ. ಅಷ್ಟರಲ್ಲಿ ಕೆಟ್ಟು ಕೆರಾ ಹಿಡಿದ ರಸ್ತೆಯಲ್ಲಿ ಧೂಳು ಹಾರಿಸುತ್ತ ಬಂತು ಡಕೋಟಾ ಸಿಟಿ ಬಸ್ಸು!
 

‍ಲೇಖಕರು avadhi-sandhyarani

February 2, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: