ಟೈಮ್ ಪಾಸ್ ಕಡ್ಲೆ ಕಾಯ್ : ಮುಯ್ಯಿಗೆ ಮುಯ್ಯಿ!

ಮುಯ್ಯಿಗೆ ಮುಯ್ಯಿ!

ಎಸ್.ಜಿ.ಶಿವಶಂಕರ್

ಸ್ಕೂಟರ್ ಸ್ಟ್ಯಾಂಡಿನಲ್ಲೇ ವಿಶ್ವ ಮಾತಾಡಿಸಲು ಪ್ರಯತ್ನಿಸಿದ್ದ. ಅವನ ಕಡೆಗೆ ನೋಡಿಯೂ ನೋಡದಂತೆ ನಟಿಸುತ್ತಾ ತಪ್ಪಿಸಿಕೊಂಡು ಬಂದಿದ್ದೆ! ಬೆಳಿಗ್ಗೆಯೇ ವಿಶ್ವನ ಕೈಗೆ ಸಿಕ್ಕಿದರೆ ದಿನದ ಕೆಲಸ ಎಡವಟ್ಟಾಗುವುದು ಗ್ಯಾರಂಟಿ! ಕಾರ್ಖಾನೆ ಪ್ರಾರಂಭದ ಒಂದು ಗಂಟೆ ನನ್ನ ಇಲಾಖೆಗೆ ತುಂಬಾ ಮುಖ್ಯ. ವರ್ಕಷಾಪಿನ ಸೂಪರ್ವೈಎಸರುಗಳಿಗೆ ಆ ದಿನದ ಕೆಲಸದ ಮಾಹಿತಿ ಕೊಟ್ಟ ನಂತರವೇ ಬೇರೆ ಕೆಲಸ ಗಮನಿಸಬಹುದು. ವಿಶ್ವನ ಸ್ಥಿತಿ ಬೇರೆ. ಅವನದು ಆಡಳಿತಾತ್ಮಕ ಕೆಲಸ. ಅವನ ಕೆಲಸ ಸ್ವಲ್ಪ ನಿಧಾನವಾದರೂ ಹೆಚ್ಚುಕಡಿಮೆಯೇನೂ ಆಗುವುದಿಲ್ಲ. ಹೀಗಿರುವಾಗ ವಿಶ್ವ ಬೆಳಿಗ್ಗೆ ಒಕ್ಕರಿಸಿದರೆ ನನ್ನ ಇಡೀ ದಿನದ ಕೆಲಸ ಹಾಳು. ಅವಾಯ್ಡ್ ಮಾಡಿದ್ದಕ್ಕೆ ವಿಶ್ವನಿಗೆ ಇದರಿಂದ ಅಸಾಧ್ಯ ಕೋಪ ಬಂದಿರುತ್ತೆ! ಆದರೂ ಇದು ನನ್ನ ಕೆಲಸದ ದೃಷ್ಟಿಯಿಂದ ಅಗತ್ಯವಾಗಿತ್ತು!

ಚೇಂಬರಿನ ಒಳಗೆ ಕಾಲಿಡುತ್ತಲೇ ಫೋನು ರಿಂಗಾಯಿತು. ಅದು ವಿಶ್ವನದೇ! ಅವನ ಸ್ವಭಾವ ಗೊತ್ತಿರುವ ನನಗೆ ಇದು ಹೊಸದೇನಲ್ಲ! ನನ್ನ ಅಸಿಸ್ಟೆಂಟ್ ಮಣಿ ಕರೆದು ಬಾಸ್ ಷಾಪ್ ರೌಂಡಲ್ಲಿದ್ದಾರೆಂದು ತಿಳಿಸುವಂತೆ ಹೇಳಿದೆ. ಐದು ನಿಮಿಷದಲ್ಲಿ ಬಂದ ಸೂಪರ್ವೈಸರುಗಳ ಜೊತೆಯಲ್ಲಿ ಕೆಲಸದ ಮಾಹಿತಿ ವಿನಿಮಯ ಮಾಡತೊಡಗಿದೆ. ಹತ್ತು ನಿಮಿಷಗಳಲ್ಲಿ ವಿಶ್ವ ಬಾಗಿಲಲ್ಲಿ ಕಾಣಿಸಿಕೊಂಡ!

ಹತ್ತು ನಿಮಿಷ ಕಾಯುವಂತೆ ತಿಳಿಸಿ ಮಣಿಗೆ ವಿಶ್ವನಿಗೆ ಕಾಫಿ ಕೊಡುವಂತೆ ತಿಳಿಸಿದೆ. ಅಲ್ಲಿಯೇ ದೂರದ ಕುರ್ಚಿಯಲ್ಲಿ ಕುಳಿತ ವಿಶ್ವ ಕಾಫಿಯನ್ನು ಒಂದೇ ಗುಟುಕಿಗೆ ಸೊರ್ರನೆ ಹೀರಿ ನನ್ನ ಮೇಲಿನ ಅಸಮಾಧಾನವನ್ನು ತೋರಿಸಿದ.

ಅದ್ಯಾವುದನ್ನೂ ಮನಸ್ಸಿಗೆ ಹೆಚ್ಚಿಕ್ಕೊಳ್ಳದೆ ಕೆಲಸದಲ್ಲಿ ಮುಳುಗಿದೆ.

ಸುಮಾರು ಹದಿನೈದು ನಿಮಿಷಗಳ ನಂತರ ಬಿಡುವಾದೆ.

“ಮುಂದೆ ಬಾ..” ವಿಶ್ವನನ್ನು ಅಹ್ವಾನಿಸಿದೆ. ಹಿಂದಿನ ಕುರ್ಚಿ ಬಿಟ್ಟು ನನ್ನೆದುರು ಕೂತ ವಿಶ್ವ ಮುಖ ಗಂಟಿಕೊಂಡಿದ್ದ.

“ಐಯಾಮ್ ಸಾರಿ! ಸ್ವಲ್ಪ ಬಿಜಿಯಾಗಿದ್ದೆ..ಈಗ ಹೇಳು ಏನು ವಿಷಯ..”

“ನಿನ್ನೊಬ್ಬನ ಮೇಲೆ ಈ ಕಾರ್ಖಾನೆ ನಿಂತಿಲ್ಲ! ನಾನೂ ಒಂದು ಡಿಪಾರ್ಟ್ಮೆಂಟಿನ ಮುಖ್ಯಸ್ಥ! ಗೊತ್ತಾಯಿತೆ!

ವಿಶ್ವ ಬೆಂಕಿಯುಗುಳಿದ!

ಅವನ ಮಾತನ್ನು ತಣ್ಣಗೆ ಸ್ವೀಕರಿಸದೆ ನನಗೆ ಬೇರೆ ದಾರಿಯಿರಲಿಲ್ಲ! ವಿಶ್ವ ನಾನೂ ಬಾಲ್ಯ ಸ್ನೇಹಿತರು. ಒಂದು ಇಂಜಿನಿಯರಿಂಗ್ ಕಾಲೇಜಿನ ಮಂತ್ರಿ ಮಹೋದಯರನ್ನು ಶ್ರೀಮಂತಗೊಳಿಸಿದವರು! ಕೆಲಸ ಮಾಡಿ ದುಡಿಯುವ ಅವಶ್ಯಕತೆ ನನಗೆ ಅನಿವಾರ್ಯವಾಗಿದ್ದರೆ, ಸ್ಥಿತಿವಂತ ವಿಶ್ವನಿಗೆ ಅದು ಟೈಂಪಾಸ್! ನನ್ನ ದಿಢೀರ್ ಅರ್ಥಿಕ ಸಂಕಷ್ಟಗಳಿಗೆ ಸ್ಪಂದಿಸುವ ವಿಶ್ವ ನನ್ನ ಇಪ್ಪತ್ನಾಲ್ಕು ಗಂಟೆಯ ಎಟಿಎಮ್! ಅವನ ಮೇಲೆ ಕೋಪ ಮಾಡಿಕ್ಕೊಳ್ಳುವುದು ಅಪಾಯಕ್ಕೆ ಎಡೆಮಾಡಿಕೊಟ್ಟಾಂತೆ! ಇದು ವಿಶ್ವನಿಗೂ ಗೊತ್ತು! ಅದಕ್ಕೇ ಸದಾ ಅವನದೇ ಮೇಲುಗೈ!

“ಸಾರಿ..ಸಾರಿ..ಆಯ್ತಾ..? ಮೂರು ಸಾರಿ ಸಾರಿ ಹೇಳಿದೀನಿ…ಇನ್ನಾದರೂ ಕೂಲಾಗು..! ಹೇಳು ಏನು ವಿಷಯ..?”

“ನನ್ನ ಬಾಸು, ಎಲೆಕೋಸು, ಆ ಬಾಲ್ಡಿ ಬಿಶ್ವಾಸ್ ಇದ್ದಕ್ಕಿದ್ದ ಹಾಗೆ ಚೇಂಜ್ ಆಗಿದಾನೆ..?”

ವಿಶ್ವ ತಣ್ಣಗಾಗಿದ್ದ.

“ನಿನಗೂ ಅವನಿಗೂ ಎಣ್ಣೆ ಸೀಗೇಕಾಯಿ ಸಂಬಂಧ! ಚೇಂಜ್ ಆಗಿದಾನೇಂತ ಹೇಗೆ ಹೇಳ್ತೀಯಾ..?”

“ನನ್ನ ಬಗ್ಗೆ ಹೆದರಿಕೆ ಹುಟ್ಟಿರಬೇಕು! ತಾಜಾ ಮಾಡೋದಕ್ಕೆ ನಾಳೆ ಮನೇಗೆ ಹೈಟೀಗೆ ಕರೆದಿದ್ದಾನೆ..?” ವಿಶ್ವನ ಮುಖ ಅರಳಿತ್ತು!

“ನಿಜವೇನೋ..?ಸರಿ ಬಿಡು, ನಿನ್ನ ಪ್ರಾಬ್ಲಮ್ ಎಲ್ಲಾ ಸಾಲ್ವ್ ಆಯ್ತು!” ನಿಟ್ಟುಸಿರುಬಿಟ್ಟೆ! ವಿಶ್ವನ ಎಲ್ಲಾ ಸಮಸ್ಯೆಗಳೂ ನನ್ನ ಸಮಸ್ಯೆಗಳೇ ಅಗಿಬಿಡುತ್ತವೆ! ಅಷ್ಟರಮಟ್ಟಿಗೆ ಚಿಕ್ಕಂದಿನಿಂದಲೂ ಅವನು ನನ್ನ ಪ್ರಾಣ ಹಿಂಡುತ್ತ, ತ್ರಾಣ ಇಂಗಿಸುತ್ತಲೇ ಬಂದಿದ್ದಾನೆ! ಮೂರು ವರ್ಷದ ಹಿಂದೆ ಬೊಂಬಾಯಿಯಿಂದ ಬಂದು ಕಾರ್ಖಾನೆ ಸೇರಿದ ಬಿಶ್ವಾಸ್ಗೂ ವಿಶ್ವನಿಗೂ ಹಾವು ಮುಂಗುಸಿಯ ಸಂಬಂಧ! ಇಬ್ಬರ ನಡುವಿನ ಜಗಳಕ್ಕೆ ನಾನೇ ಸದಾ ರೆಫರೀ! ಆದರೆ ತೀರ್ಮಾನ ಕೊಡುವಂತಿಲ್ಲ! ವಿಶ್ವ ಆತ್ಮೀಯ, ಬಿಶ್ವಾಸ್ ನನಗಿಂತ ಎರಡು ಹಂತ ಮೇಲಿನ ಅಧಿಕಾರಿ! ವಿಶ್ವನ ಪರವಾಗಿ ತೀರ್ಮಾನ ಕೊಟ್ಟರೆ ಬಿಶ್ವಾಸ್ ಬಿಸಿಯಾಗ್ತಾನೆ, ಬಿಶ್ವಾಸ್ ಪರವಾಗಿ ತೀರ್ಮಾನ ಕೊಟ್ಟರೆ ವಿಶ್ವನ ವಿಶ್ವ ರೂಪ ನೋಡಬೇಕಾಗುತ್ತದೆ! ಅತ್ತ ದರಿ ಇತ್ತ ಪುಲಿ! ಮೂರು ವರ್ಷದಿಂದ ಈ ದರ್ಮಸಂಕಟದಲ್ಲಿ ಒದ್ದಾಡುತ್ತಿದ್ದೇನೆ.

“ಸತ್ಯವಾಗಲೂ! ಗುಲ್ಡೂ ನನ್ಮಗ ಹೆದ್ರಿಬಿಟ್ಟಾಂತ ಕಾಣಿಸುತ್ತೆ..?” ವಿಶ್ವನ ಮುಖದಲ್ಲಿ ವಿಜಯದ ನಗೆ ಮಿಂಚಿತು!

“ಬಿಶ್ವಾಸ್ ಮನೇಲಿ ಏನಾದ್ರೂ ಸಮಾರಂಭನಾ..?”

“ಸಮಾರಂಭವೂ ಇಲ್ಲ ಮಣ್ಣಾಂಗಟ್ಟಿಯೂ ಇಲ್ಲ! ನನ್ನ ವಿಶ್ವಾಸ ಗಳಿಸಬೇಕು ಅದಕ್ಕೆ ಈ ನಾಟಕ..?”

ವಿಶ್ವ ಒಲಂಪಿಕ್ನಲ್ಲಿ ಚಿನ್ನದ ಪದಕ ಗೆದ್ದವನಂತೆ ಬೀಗಿದ.

“ಎಷ್ಟೊತ್ತಿಗೆ..?”

“ಅರು ಗಂಟೆಗೆ”

“ಸರಿ ಗುಡ್ ಲಕ್..ಒಳ್ಳೇದಾಗಲಿ”

“ನನಗೆ ಯಾಕೆ ಗುಡ್ಲೆಕ್‍ ಆ ಬಾಸು..ಬಾಲ್ಡಿ ಬಿಶ್ವಾಸ್ಗೆ ಗುಡ್ ಲಕ್ ಹೇಳು ಧೈರ್ಯ ಇದ್ದರೆ?”

ವಿಶ್ವ ಗಹಗಹಿಸಿ ನಕ್ಕು ಎದ್ದು ಹೋದ! ಹಳೆಯ ತಮಿಳು ಸಿನಿಮಾದ ಖಳನೊಬ್ಬನ ನೆನಪಾಯಿತು.

ಮಾರನೆಯ ದಿನ ಬಿಶ್ವಾಸ್ ಮನೆಗೆ ನಾನು ಹೋದಾಗ ವಿಶ್ವ ಅಲ್ಲಾಗಲೇ ವಿರಾಜಮಾನನಾಗಿದ್ದ! ನನ್ನನ್ನು ಕಂಡೊಡನೆ ಬಿಶ್ವಾಸ್ ಮುಖದ ತುಂಬಾ ನಗು ತುಂಬಿ ಕೈಕುಲುಕಿ ಸ್ವಾಗತಿಸಿದ. ವಿಶ್ವನಿಗೆ ನನ್ನನ್ನು ಕಂಡು ಆಶ್ಚರ್ಯವಾಗಿತ್ತು! ಜೊತೆಗೆ ಕೋಪವೂ ಬಂದಂತಿತ್ತು!

ವಿಶ್ವನ ಪಕ್ಕದಲ್ಲಿ ಕೂತಾಗ “ನೀನ್ಯಾಕೋ ಬಂದೆ ಇಲ್ಲಿ?” ಪಿಸು ಮಾತಲ್ಲಿ ಬಿಶ್ವಾಸ್ಗೆ ಕೇಳದಂತೆ ಅಕ್ಷೇಪಿಸಿದ.

“ನನ್ನನ್ನೂ ಕರೆದಿದ್ದಾರೆ” ಪಿಸುಗುಟ್ಟಿದೆ.

“ಮಾತಾಡ್ತಾ ಇರಿ ಬಂದೆ..ಮೇಕ್ ಯುವರ್ಸೆಲ್ಫ್ ಕಂಫರ್ಟಬಲ್” ಎನ್ನುತ್ತಾ ಬಿಶ್ವಾಸ್ ಡ್ರಾಯಿಂಗ್ ರೂಮಿನಿಂದ ನಿಷ್ಕ್ರಮಿಸಿದ.

“ಈ ಗುಲ್ಡೂ ನಿನ್ನನ್ನೂ ಕರ್ದಿದ್ದಾನೆ ಅನ್ನೋದು ನೆನ್ನೇನೆ ಯಾಕೆ ಬೊಗಳಲಿಲ್ಲ..?” ವಿಶ್ವ ಕೆಂಡ ಕಾರಿದ. ತನ್ನನ್ನೊಬ್ಬನನ್ನೇ ಕರೆದಿದ್ದಾನೆ ಅನ್ನುವ ವಿಶ್ವಾಸದಲ್ಲಿ ಏನೇನೋ ಲೆಕ್ಕಾಚಾರ ಹಾಕಿದ್ದ! ಬಿಶ್ವಾಸ್ ತನಗೆ ಹೆದರಿಯೇ ಮನೆಗೆ ಕರೆದಿದ್ದಾನೆ ಎಂದು ಹೆಮ್ಮೆಪಟ್ಟುಕೊಂಡಿದ್ದ! ಅದಕ್ಕೆ ಭಾರೀ ಪೆಟ್ಟು ಬಿದ್ದಿತ್ತು!

“ನೀನು ಮಹಾ ಖದೀಮ! ಮಿತ್ರದ್ರೋಹಿ! ಬಗಲ್ಮೆ ದುಷ್ಮನ್…”

ಇನ್ನೂ ಏನೇನೋ ಅನ್ನಲಿದ್ದ ವಿಶ್ವನ ಬಾಯಿಗೆ ಬ್ರೇಕ್ ಬಿದ್ದಿತು! ಬಿಶ್ವಾಸ್ ಮತ್ತವನ ಅರ್ಧಾಂಗಿ ಸುಷ್ಮ ಬಂದಿದ್ದರು.

ಸುಷ್ಮಾ ಕೈಯಲ್ಲೊಂದು ದೊಡ್ಡ ಟ್ರೇಯಿತ್ತು. ಅದರಲ್ಲಿ ನಾಲ್ಕು ಪ್ಲೇಟುಗಳು, ಅವುಗಳ ತುಂಬಾ ತಿನಿಸುಗಳಿದ್ದವು.

“ನೀವಿಬ್ಬರು ಬಂದಿದ್ದು ಬಹಳ ಸಂತೋಷ” ಅತಿಯಾದ ಸಂತೋಷ ಮತ್ತು ವಿನಯ ತೋರಿಸುತ್ತಾ ಸುಷ್ಮಾ ಹೇಳಿದರು. ಆಕೆ ಶ್ರೀಮಂತರ ಮನೆಯ ಹೆಣ್ಣು ಎನ್ನುವುದನ್ನು ಆಕೆಯ ಆಕಾರ ನೋಡಿಯೇ ಹೇಳಬಹುದಿತ್ತು. ಬಹುತೇಕ ಉತ್ತರ ಭಾರತದ ಹೆಣ್ಣುಮಕ್ಕಳಂತೆ, ಬಾಬ್ ತಲೆ, ಮೇಕಪ್ಪು ಸ್ವಲ್ಪು ಅತಿಯಾಗಿತ್ತು.

ಅವರ ಅತಿವಿನಯ ಅಪಾಯದ ಮುನ್ಸೂಚನೆಯಂತಿತ್ತು!

“ನಮ್ಮನ್ನ ಕರೆದದ್ದಕ್ಕೆ ಥ್ಯಾಂಕ್ಸ್” ಎಂದಿದ್ದಕ್ಕೆ ವಿಶ್ವ ನನ್ನತ್ತ ಗುರಾಯಿಸಿದ.

“ಮೊನ್ನೆ ನಮ್ಮ ನಾರ್ತ್ಇಂಥಡಿಯನ್ ಕ್ಲಬ್ಗೆ ಒಬ್ಬ ಫೈವ್ ಸ್ಟಾರ್ ಚೆಫ್ ಕರೆಸಿದ್ದೊ. ಅವನು ಕೆಲವು ಸ್ಪೆಷಲ್ ರೆಸಿಪಿ ಹೇಳಿಕೊಟ್ಟ. ಅದನ್ನ ಮೊನ್ನೆ ಟ್ರೈಮಾಡಿದೆ! ಟೇಸ್ಟ್ ಮಾಡಿ ಇವರು ತುಂಬಾ ಚೆನ್ನಾಗಿತ್ತು ಎಂದಿದ್ದರು. ಅದಕ್ಕೆ ನಿಮಗೆ ತುಂಬಾ ಕ್ಲೋಸ್ ಆಗಿರೋ ಕಲೀಗ್ಸ್ ಕರೀರಿ ಅವರಿಗೂ ಈ ಸ್ಪೆಷಲ್ ಮಾಡಿ ಕೊಡ್ತೀನಿ ಅಂದಿದ್ದೆ. ಅದಕ್ಕೇ ನಿಮ್ಮನ್ನ ಕರೆದಿದ್ದಾರೆ..ಐಯಾಮ್ ರಿಯಲೀ ಹ್ಯಾಪಿ..ನಿಧಾನಕ್ಕೆ ತಿನ್ನಿ, ಹೇಗಿದೆ ಹೇಳಿ” ಹರುಕು ಮುರುಕು ಕನ್ನಡದೊಂದಿಗೆ ಹಿಂದಿ ಮಿಶ್ರ ಮಾಡಿ ಹೇಳಿದರು ಬಿಶ್ವಾಸ್ ಹೋಂ ಮಿನಿಸ್ಟರ್ ಸುಷ್ಮಾಜಿ.

ತಟ್ಟೆಗಳಲ್ಲಿದ್ದ ತಿನಿಸು ನೋಡಲು ಚೆನ್ನಾಗಿತ್ತು. ಉಪ್ಪಿಟ್ಟಿನ ತರಾ ಕಾಣ್ತಿತ್ತು. ಅದಕ್ಕೆ ಅಲಂಕಾರವಾಗಿ ಸುತ್ತಲೂ ಸೌತೆಕಾಯಿ, ಕ್ಯಾರೆಟ್, ಟೊಮ್ಯಾಟೋ ಬಿಲ್ಲೆಗಳ ಜೋಡಣೆ, ನೆತ್ತಿಯ ಮೇಲೆ ಕೊತ್ತಂಬರಿ ಸೊಪ್ಪಿನ ಒಂದು ಎಸಳು. ಎರಡು ತಟ್ಟೆಗಳು ಟೀಪಾಯನ್ನು ಅಲಂಕರಿಸಿದುವು.

“ಸಾರ್.ನಿಮಗೆ..?” ಕೇಳಿದೆ ನಾನು.

“ನೊ..ನೊ..ನೆನ್ನೇನೆ ನಾನಿದನ್ನು ಟೇಸ್ಟ್ ಮಾಡಿದ್ದಲ್ದೆ ಗಡದ್ದಾಗಿ ತಿಂದೆ, ಇವತ್ತು ನಮ್ಮ ಸ್ಪೆಷಲ್ ಗೆಸ್ಟ್ಸ್ ನಿಮಗೆ ಇದು”

ಸ್ವಲ್ಪ ಗಾಬರಿ ತೋರಿದ ವಿಶ್ವಾಸ್. ಅವನ ಚರ್ಯೆ ನಮ್ಮನ್ನು ಖೆಡ್ಡಾಕ್ಕೆ ಬೀಳಿಸುವ ಪ್ರಯತ್ನ ಮಾಡ್ತಿದ್ದಾನೆ ಅನ್ನಿಸಿತು.

“ಡಾರ್ಲಿಂಗ್ ಇವರ ಜೊತೆ ನೀವೂ ಸ್ವಲ್ಪ ಟೇಸ್ಟ್ ಮಾಡಿ. ಕಂಪನಿ ಕೊಡಿ” ಮಡದಿಯ ಮಾತಿಗೆ ಬಿಶ್ವಾಸ್ ಗಾಬರಿಬಿದ್ದದು ಸ್ಪಷ್ಟವಾಗಿತ್ತು. ಆತ ಹೆದರಬೇಕಾದರೆ ಆ ತಿನಿಸಿನ ಬಗ್ಗೆ ಅನುಮಾನ ದಟ್ಟಾವಾಯಿತು.

“ಓ..ಆಗಲಿ..ಶೂರ್..ವೈನಾಟ್” ಎಂದು ತೊದಲಿದರು ಬಿಶ್ವಾಸ್.

“ಪ್ಲೀಸ್..ತಗೊಳ್ಳಿ” ಸುಷ್ಮಾ ಹೇಳಿದಾಗ ವಿಶ್ವ ನನ್ನ ಕಡೆ ನೋಡಿದ. ನಾನು ತಟ್ಟೆಯ ಕಡೆಗೆ ನೋಡಿದೆ.

“ಇದರ ಹೆಸರೇನು..?” ವಿಶ್ವ ಅನುಮಾನಿಸುತ್ತ ಕೈಯಲ್ಲಿ ಸ್ಪೂನು ಹಿಡಿದು ಕೇಳಿದ.

“ಸ್ವಲ್ಪ ತಿನ್ನಿ ಆಮೇಲೆ ಗೆಸ್ ಮಾಡಿ ಹೇಳಿ..ಇದು ಇದುವರೆಗೆ ನೀವು ತಿಂದಿರದಂತಹದು”

ಗಟ್ಟಿ ಮನಸ್ಸು ಮಾಡಿ ಸ್ಪೂನಿನಲ್ಲಿ ಸ್ವಲ್ಪ ತೆಗೆದುಕೊಂಡು ಬಾಯಲ್ಲಿಟ್ಟುಕೊಂಡೆ! ಬಹುಶಃ ಎಲ್ಲಾ ರೀತಿಯ ಮಸಾಲೆಗಳನ್ನೂ ಹಾಕಿದಂತಿತ್ತು! ಖಾರವಿತ್ತು, ಹುಳಿಯಿತ್ತು, ಉಪ್ಪು ಯತೇಚ್ಛವಾಗಿತ್ತು! ಅಂಟಂಟಾಗಿದ್ದು ಹಲ್ಲಿಗೆ ಮೆತ್ತಿಕೊಂಡಿತು. ಒಂದು ತುತ್ತಿಗೇ ಇಷ್ಟು ಸಮಸ್ಯೆಯಾದರೆ ತಟ್ಟೆ ತುಂಬಾ ಇದ್ದುದನ್ನು ಹೇಗೆ ಖಾಲಿ ಮಾಡುವುದು ಎಂದು ಗಾಬರಿಯಾಯಿತು. ನಮ್ಮ ಗಾಬರಿ ಸುಷ್ಮಾ ಕಣ್ಣಿಗೆ ಆ ತಿನಿಸಿನ ರುಚಿಗೆ ನಾವು ಆಚ್ಚರಿಗೊಂಡಂತೆ ಕಂಡಿರಬೇಕು!

ನಮ್ಮ ಪ್ರತಿಕ್ರಿಯೆಯನ್ನೇ ಗಮನಿಸುತ್ತಿದ್ದ ಸುಷ್ಮಾ ಒಲಂಪಿಕ್ನಿಲ್ಲಿ ಪದಕ ಗೆದ್ದಂತೆ ಮುಖ ಅರಳಿಸಿ “ಹೇಗಿದೆ..?” ಎಂದು ಕೇಳಿದರು.

“ಅದ್ಭುತವಾಗಿದೆ. ಇಂತದ್ದು ಇದೇ ಫಸ್ಟ್ ಟೈಮ್ ತಿಂದಿದ್ದು!”

ವಿಶ್ವ ಕನ್ನಡದಲ್ಲಿ ಹೇಳಿದ್ದು ಆಕೆಗೆ ಅರ್ಥವಾಗಲಿಲ್ಲ! ಅದು ಹೊಗಳಿಕೆ ಎಂದು ಆಕೆಯ ಮುಖ ಇನ್ನಷ್ಟು ಅರಳಿತು. ಅವನ ಆಣಕ ಬಿಶ್ವಾಸ್ಗೂ ತಿಳಿಯಲಿಲ್ಲ !

“ದಿನಾ ನಿಮ್ಮ ಯಜಮಾನ್ರಿಗೆ ಇದು ಮಾಡ್ಕೊಡಿ! ಅವರಿಗೂ ಇದು ತುಂಬಾ ಇಷ್ಟಾಂತ ಕಾಣ್ಸುತ್ತೆ” ವಿಶ್ವ ಬಿಶ್ವಾಸ್ ಮೇಲಿನ ಕೋಪ ತೀರಿಸಿಕ್ಕೊಳ್ಳಲು ಹೇಳಿದ.

“ಓ ಷೂರ್..ದಿನಾ ಈ ಇಟಾಲಿಯನ್ ಡಿಲೈಟ್ ಬೋರಾಗಬಹುದು…ಈ ತರದ್ದೇ ಬೇರೆಬೇರೆ ಮಾಡಿಕೊಡ್ತೀನಿ..ಏನು ಡಾರ್ಲಿಂಗ್..?”

“ನಾನು ಇನ್ನಷ್ಟು ದಪ್ಪ ಆಗಿಬಿಡ್ತೀನಿ…ಅದೆಲ್ಲಾ ಬೇಡ ಮಾಮೂಲಿನ ಹಾಗೆ ಕಾರ್ನ್ಫ್ಲೇ ಕ್ಸ್ ಮತ್ತು ಆರೆಂಜ್ ಜ್ಯೂಸ್ ಸಾಕು ಬೆಳಗಿನ ಉಪಹಾರಕ್ಕೆ” ಬಿಶ್ವಾಸ್ ಗಾಬರಿಯಿಂದ ಹೇಳಿದ.

ಸ್ವಲ್ಪ ಉಪ್ಪಿಟ್ಟಿನ ಥರಾ ಮತ್ತೆ ಸ್ವಲ್ಪ ಪೊಂಗಲನ್ನು ಹೋಲುವ ಆ ತಿನಿಸಿನ ಹೆಸರು ಇಟ್ಯಾಲಿಯನ್ ಡಿಲೈಟ್ ಎನ್ನುವುದು ಗೊತ್ತಾಯಿತು. ಇದನ್ನೇ ಡಿಲೈಟ್ ಎನ್ನುವುದಾದರೆ ಇಟ್ಯಾಲಿಯನ್ನರ ಮಾಮೂಲಿ ತಿನಿಸುಗಳು ಹೇಗಿರುತ್ತವೆ ಎಂದು ಅಚ್ಚರಿಯಾಯಿತು! ಎಲ್ಲಾ ತಿನಿಸುಗಳ ರುಚಿ ಮಾಡುವವರ ನೈಪುಣ್ಯತೆಯನ್ನು ಅವಲಂಬಿಸುತ್ತದೆ. ಬಿಶ್ವಾಸ್ ಮಡದಿಗೆ ಆ ನಿಪುಣತೆ ಇಲ್ಲ ಎನ್ನುವುದನ್ನು ತಟ್ಟೆಯಲ್ಲಿರುವ ಡಿಲೈಟ್ ಸಾಬೀತುಪಡಿಸುವಂತಿತ್ತು! ಬಿಶ್ವಾಸ್ ಮನೆಯಿಂದ ತಂದ ಕ್ಯಾರಿಯರ್ರನ್ನು ಬಿಟ್ಟು, ಕ್ಯಾಂಟೀನಿನಲ್ಲಿ ಊಟಮಾಡುವುದು ನೆನಪಾಯಿತು. ಜೊತೆಗೆ ಫ್ಯಾಕ್ಟರಿಯಲ್ಲಿರುವ ಎಲ್ಲಾ ನಾಯಿಗಳೂ ಬಿಶ್ವಾಸ್ ಕಂಡರೆ ಬಾಲ ಅಲ್ಲಾಡಿಸುತ್ತಾ ಹಿಂಬಾಲಿಸುವುದರ ರಹಸ್ಯ ಒಮ್ಮೆಲೇ ತಿಳಿದುಬಿಟ್ಟಿತ್ತು!

“ವಿಶ್ವನಾಥ್ ಬೈಯ್ಯಾ ಮತ್ತು ನಿಮ್ಮ ಫ಼್ರೆಂಡ್ ಇನ್ನ್ಮೇಲೆ ಪ್ರತಿ ಸೋಮವಾರ ಸಂಜೆ ನಮ್ಮ ಮನೇಗೇ ಟೀಗೆ ಬರಬೇಕು! ಬಾನುವಾರದ ಕುಕಿಂಗ್ ಕ್ಲಾಸಲ್ಲಿ ಕಲಿತದ್ದು ಮೊಟ್ಟಮೊದಲು ನಿಮಗೇ! ನೀವು ದೇವರ ಹಾಗೆ ನಿಮಗೇ ಮೊದಲ ನೈವೇದ್ಯ” ಎಂದು ಸುಷ್ಮಾ ಅರ್ಧ ತಮಾಷೆ ಮತ್ತು ಅರ್ಧ ಗಂಭೀರತೆಯಿಂದ ಹೇಳಿದ್ದಕ್ಕೆ ಗಾಬರಿಯಿಂದ ಇಬ್ಬರೂ ಮುಖಮುಖ ನೋಡಿಕೊಂಡೆವು! ಬಿಶ್ವಾಸ್ ಒಳಗೊಳಗೇ ನಗುವಂತೆ ಕಂಡಿತು!

ಕೈಯಲ್ಲಿರುವ ಇಟ್ಯಾಲಿಯನ್ ಡಿಲೈಟ್ ಖಾಲಿ ಮಾಡುವುದೇ ದೊಡ್ಡ ಹಿಂಸೆಯಾಗಿರುವುದರ ಜೊತೆಗೆ ಪ್ರತಿ ಸೋಮವಾರದ ಸಂಜೆಯ ಹೊಸ ಬಗೆಯ ತಿನಿಸು ಭಯವನ್ನೇ ಹುಟ್ಟಿಸಿತು. ಸುಷ್ಮಾ ಮತ್ತು ಬಿಶ್ವಾಸ್ ಥೇಟ್ ಭಯೋತ್ಪಾದಕರಂತೆ ಕಂಡರು! ಅವರ ಅಸ್ತ್ರ ಬಗೆಬಗೆಯ ತಿನಿಸುಗಳು! ಆ ತಿನಿಸುಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತೆ ಗೋಚರಿಸಿತು!

“ದೇಕೋಜಿ..ನನ್ನ ಅಡಿಗೆ ಚೆನ್ನಾಗಿರೊಲ್ಲ ಅಂತೀರಲ್ಲ..ನಿಮ್ಮ ಕಲೀಗ್ಸೇ ಮೆಚ್ಚಿಕೊಂಡಿದ್ದಾರೆ! ಇನ್ನು ಮೇಲೆ ನನ್ನ ಅಡಿಗೆ ಬಗ್ಗೆ ಅಡ್ಡಾ ಮಾತಾಡಿದರೆ ಸುಮ್ಮನಿರೊಲ್ಲ” ಡೈರೆಕ್ಟ್ ಆಗಿ ಬಿಶ್ವಾಸ್ ಮೇಲೆ ಗುರುಗುಟ್ಟಿದರು ಸುಷ್ಮಾ! ಬಿಶ್ವಾಸ್ ಸಪ್ಪೆ ಮುಖ ನಮಗೆ ಸ್ಪಷ್ಟಾವಾಗಿ ಕಂಡಿತು!

“ಸಂಕೋಚಪಟ್ಕೋಬೇಡಿ, ನಿಧಾನಕ್ಕೆ ತಿನ್ನಿ…! ಎಂದು ಅಷ್ಟರಲ್ಲಿ ನಾನು ಟೀ ಮಾಡಿ ತರುತ್ತೇನೆ” ಎಂದು ಆಕೆ ಒಳಗೆ ಹೋದಾಗ ನಮಗೆ ಸ್ವಲ್ಪ ರಿಲೀಫ್ ಸಿಕ್ಕಂತಯಿತು.

“ಇವನನ್ನೂ ಆಚೆಗೆ ಸಾಗ್ಹಾಕೋ..ಹೇಗಾದ್ರೂ ಬಚಾವಾಗೋಣ” ವಿಶ್ವ ನನ್ನ ಕಿವಿಯಲ್ಲಿ ಪಿಸುಗುಟ್ಟಿದ.

“ಏನೋ ಸೀಕ್ರೇಟ್ ಹೇಳ್ತಿದ್ದಾರಲ್ಲ ವಿಶ್ವ ಅವರು” ಬಿಶ್ವಾಸ್ ಅನುಮಾನಿಸಿದ.

“ಏನಿಲ್ಲ..ನೀವು ತುಂಬಾ ಲಕ್ಕೀ..ಇಂತಾ ಲೈಫ್ ಪಾರ್ಟನರ್ ಸಿಕ್ಕಿರೋದಕ್ಕೆ” ಎಂದಿದಕ್ಕೆ ಬಿಶ್ವಾಸ್ ನಿಟ್ಟುಸಿರುಬಿಟ್ಟ!

ಪರಿಸ್ಥಿತಿಯಿಂದ ಬಚಾವಾಗೋದಕ್ಕೆ ಒಂದು ಐಡಿಯಾ ಹೊಳೆಯಿತು.

“ವಿಶ್ವ ತುಂಬಾ ಸೆಕೆಯಲ್ವಾ..?” ಎಂದು ವಿಶ್ವನತ್ತ ನೋಡಿ ಕಣ್ಣುಮಿಟುಕಿಸಿದೆ.

“ಹೌದೌದು! ತುಂಬಾ ಸೆಕೆ..ಓ ಮೈ ಗಾಡ್ ಇಟ್ ಈಸ್ ಬರ್ನಿಂಗ್” ವಿಶ್ವ ಸಖತ್ತಾಗಿ ನಟಿಸಿದ.

“ಫ್ಯಾನು ಹಾಕುತ್ತೇನೆ” ಬಿಶ್ವಾಸ್ ಎದ್ದರು.

“ಬೇಡ ಆಚೆ ಗಾರ್ಡನ್ನಲ್ಲಿ ಕೂಲಾಗಿದೆ ಅಲ್ಲೇ ಕೂರೋಣ..” ಎಂದು ಬಿಶ್ವಾಸನ ಪ್ರತಿಕ್ರಿಯೆಗೂ ಕಾಯದೆ ತಟ್ಟೆ ಹಿಡಿದುಕೊಂಡು ಆಚೆ ನಡೆದೆವು.

“ನೀನು ಬಾಗಿಲಲ್ಲಿ ಅಡ್ಡ ನಿಲ್ಲು, ನಿನ್ನ ತಟ್ಟೆಯನ್ನೂ ನನ್ನ ಕೈಗೆ ಕೊಡು ಹೇಗಾದ್ರೂ ಡಿಸ್ಪೋಸ್ ಮಾಡ್ತೇನೆ” ವಿಶ್ವನಿಗೆ ಮೆಲುದನಿಯಲ್ಲಿ ಹೇಳಿದೆ.

ವಿಶ್ವ ಬಾಗಿಲಲ್ಲಿ ಆಡ್ಡ ನಿಂತ! ನಾನು ಬೇಗನೆ ಹೆಜ್ಜೆ ಹಾಕಿ ಎರಡು ತಟ್ಟೆಗಳಲ್ಲಿದ್ದನ್ನು ಕಾಂಪೌಡಿನಿಂದಾಚೆ ಸುರಿದು, ಖಾಲಿ ತಟ್ಟೆಯನ್ನು ವಿಶ್ವನ ಕೈಗೆ ಕೊಟ್ಟೆ. ಇಬ್ಬರೂ ಮಕ್ಕಳಾಟದಂತೆ ತಿನ್ನುವ ನಟನೆ ಮಾಡುತ್ತಾ ಗಾರ್ಡನ್ನಿನಲ್ಲಿ ಅಡ್ಡಾಡಿದೆವು. ಬಾಗಿಲಲ್ಲಿ ನಿಂತು ನಮ್ಮನ್ನು ಬಿಶ್ವಾಸ್ ಗಮನಿಸುತ್ತಿದ್ದರು. ಕೆಲವು ನಿಮಿಷಗಳ ನಂತರ ’ಟೀಗೆ ಬನ್ನಿ” ಎಂದು ಕರೆದದ್ದು ಕೇಳಿ ಒಳಗೆ ಬಂದೆವು.

ಟ್ರೇಯಲ್ಲಿ ಟೀ ತಂದಿದ್ದ ಸುಷ್ಮಾ ನಮ್ಮ ಖಾಲಿ ತಟ್ಟೆ ನೋಡಿ ಖುಷಿಯಾಗಿದ್ದರು.

“ನೋಡಿ ನೀವು ಎಷ್ಟು ಚೆನ್ನಾಗಿ ತಿಂದಿದ್ದೀರಿ, ಇವರಿಗೆ ನನ್ನ ಆಡಿಗೆ ಅಂದ್ರೆ ತಾತ್ಸಾರ” ಎಂದು ಗಂಡನನ್ನು ಮೂದಲಿಸಿದರು.

“ಅದಕ್ಕೇ ನಮ್ಮಲ್ಲೊಂದು ಗಾದೆಯಿದೆ ಹಿತ್ತಲಗಿಡ ಮದ್ದಲ್ಲ” ಎಂಬ ಕನ್ನಡದ ಗಾದೆಯನ್ನು ಇಂಗ್ಲಿಷ್, ಹಿಂದಿಯನ್ನು ಮಿಶ್ರಿಸಿ ವಿವರಿಸಿದೆ.

“ಇವರು ಗಾರ್ಡನ್ನಿನಲ್ಲಿ ಅಡ್ಡಾಡ್ತಾ….?” ನಮ್ಮ ಮೇಲಿನ ಅನುಮಾನದಿಂದ ಬಿಶ್ವಾಸ್ ಏನನ್ನೋ ಹೇಳಲು ಪ್ರಯತ್ನಿಸುವಂತೆ ಕಂಡಿತು.

“ನಿಮ್ಮ ಇಟ್ಯಾಲಿಯನ್ ಡಿಲೈಟ್ನತಷ್ಟೇ ನಿಮ್ಮ ಗಾರ್ಡನ್ ಕೂಡ ಚೆನ್ನಾಗಿದೆ” ಮದ್ಯ ವಿಶ್ವ ಬಾಯಿ ಹಾಕಿದ.

“ಓ..ತ್ಯಾಂಕ್ಯೂ ಸೋಮಚ್” ಸುಷ್ಮಾ ತುಂಬಾ ಖುಷಿಯಾಗಿದ್ದರು.

ಸುಮಾರಾಗಿದ್ದ ಟೀಯನ್ನು ಗುಟುಕರಿಸುತ್ತಾ ಬಿಶ್ವಾಸ್ನಾ ’ಹೈಟೀ’ಯನ್ನು ಮುಗಿಸಿ ಧನ್ಯವಾದ ಹೇಳಿ ಮನೆಯಿಂದೀಚೆ ಬಂದಾಗ ನಿಟ್ಟುಸಿರುಬಿಟ್ಟೆವು!

“ಬಡ್ಡೀಮಗ ಬಿಶ್ವಾಸ್ ಹೀಗೆ ಸೇಡು ತೀರಿಸ್ಕೋತಾನೇಂತ ನೆನಸಿರಲಿಲ್ಲ!” ವಿಶ್ವ ಫೂತ್ಕರಿಸಿದ.

“ಇವತ್ತೇನೋ ಬಚಾವಾದೊ..ಪ್ರತೀ ಸೋಮವಾರ ಹೇಗೆ ಬಚಾವಾಗೋದು..?” ಮರುಕ್ಷಣವೇ ಕಂಗಾಲಾದ.

“ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯುಸ್ಸು. ಇವತ್ತಿನ ಹಾಗೇ ಏನಾದರೊಂದು ಮಾಡೋಣ” ಎಂದು ಹೇಳಿ ವಿಶ್ವನನ್ನು ಸಮಾದಾನ ಮಾಡಿದೆ.

“ಮುಯ್ಯಿಗೆ ಮುಯ್ಯಿ ತೀರಿಸಲೇಬೇಕು! ಬಿಶ್ವಾಸ್ ಮತ್ತು ಸುಷ್ಮಾ ಇಬ್ಬರನ್ನೂ ಮನೆಗೆ ಕರೆದು ವಿಶಾಲೂ ಕೈಲಿ ಜರ್ಮನ್ ಡಿಲೈಟ್, ಫ಼್ರೆಂಚ್ ಡಿಲೈಟ್ ಇನ್ನೂ ಯಾವ್ಯಾವ ದೇಶಗಳಿದ್ದಾವೋ ಅವುಗಳ ಎಲ್ಲಾ ಡಿಲೈಟ್ ಮಾಡಿಸಿ ಬಿಶ್ವಾಸ್ಗೆ ಬಿಸಿ ಮುಟ್ಟಿಸ್ತೀನಿ” ವಿಶ್ವ ಶಪಥ ಮಾಡಿದ.

ಮಹಾಭಾರತ ಸೀರಿಯಲ್ಲಿನಲ್ಲ್ಲಿ ದುಶ್ಯಾಸನನ್ನು ವಧಿಸಿ ಅವನ ರಕ್ತ ಕುಡಿಯುವ ಪ್ರತಿಜ್ಞೆಯನ್ನು ಭೀಮ ಮಾಡಿದಾಗ ಭೂಮಿ ನಡುಗಿ, ಆಕಾಶದಲ್ಲಿ ಮಿಂಚು, ಗುಡುಗು ಆರ್ಭಟಿಸಿದಂತೆ ಇಲ್ಲೇನೂ ಆಗಲಿಲ್ಲ.

ವಿಶ್ವ ಕಾರಿನ ಡೋರ್ ಹಾಕಿದ ರಭಸ ಅವನ ಕೋಪದ ಮಟ್ಟ ತಿಳಿಸಿತು.

“ಇದು ನಿನ್ನದೇ ಕಾರು ಅದರೆ ಮೇಲೆ ಯಾಕೆ ಕೋಪ?”ಎಂದಿದಕ್ಕೆ ಪ್ರತಿಯಾಗಿ ದುರುಗುಟ್ಟಿ ನೋಡಿದ ವಿಶ್ವ!

ಕಾರನ್ನು ಸ್ಟಾರ್ಟ್ ಮಾಡಲು ಕೀಯನ್ನು ಜೇಬಿನಲ್ಲಿ ತಡಕಿದ.

“ತಥ್…ಬೆಂಕಿ ಹಾಕಬೇಕು” ಎಂದು ಗುಡುಗಿದ.

“ಯಾರಗೋ..?” ಹೆದರಿ ಕೇಳಿದೆ.

“ನನ್ನ ಮರೆವಿಗೆ…”

“ಏನಾಯ್ತು..?” ವಿಶ್ವನ ರೌದ್ರಾವತಾರ ತಾರಕಕ್ಕೇರಿತ್ತು. ಅದರಿಂದ ಕೊಂಚ ಅಧೀರತೆಯಿಂದ ಕೇಳಿದೆ.

“ಕಾರ್ ಕೀನ ಬಿಶ್ವಾಸ್ ಮನೆ ಸೋಫಾ ಮೇಲೆ ಬಿಟ್ಟು ಬಂದಿದ್ದೀನಿ” ಎಂದು ಕಾರಿಂದೀಚೆ ಇಳಿದ.

’ಉಳಿದಿರೋ ಇಟ್ಯಾಲಿಯನ್ ಡಿಲೈಟ್ನ ಖಾಲಿ ಮಾಡಿ ಬಾ’ ಎನ್ನಲು ಬಾಯಿ ತೆರೆದೆ. ಅದರ ಪರಿಣಾಮ ನೆನಸಿ ತೆರೆದ ಬಾಯನ್ನು ಮುಚ್ಚಿದೆ.

ವಿಶ್ವ ಎಲ್ಲಾ ಕೋಪವನ್ನು ಕಾರ್ ಡೋರಿನ ಮೇಲೆ ತೀರಿಸಿಕೊಂಡುಬಿಟ್ಟ! ಆ ಶಬ್ದಕ್ಕೆ ನಾನು ಕಿವಿ ಮುಚ್ಚಿಕೊಂಡೆ!

‍ಲೇಖಕರು G

November 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: