ಟೈಮ್ ಪಾಸ್ ಕಡ್ಲೆ ಕಾಯ್ : ’ಮೀನಿಗೆ ಗಾಳ’

shiva1 (2)

ಎಸ್ ಜಿ ಶಿವಶಂಕರ್

ಮೊಬೈಲಿಗೆ ಐದು ನಿಮಿಷಕ್ಕೊಮ್ಮೆ ಹೊಡೆದುಕ್ಕೊಳ್ಳುತ್ತಿತ್ತು! ಭಾವಿಗೆ ಬಿದ್ದವನಂತೆ ವಿಶ್ವ ಫೋನಾಯಿಸುತ್ತಿದ್ದ. ಆ ಉಪಟಳ ತಾಳದೆ ಕ್ಲಬ್ಬಿನ ಬಾಗಿಲಿಗೆ ಬಂದಿದ್ದೆ. ಬಾಗಿಲಲ್ಲಿ ನನ್ನನ್ನೇ ಕಾಯುತ್ತ ನಿಂತಿದ್ದ ಕ್ಲಬ್ಬಿನ ಪರಿಚಾರಕ ವೆಂಕಟೇಶ!
“ನಿಮ್ಮನ್ನೇ ಕಾಯ್ತಿದ್ದಾರೆ ವಿಶ್ವ ಸರ್”
ಐದು ನಿಮಿಷವೂ ತಡೆಯಲಾರದಂತಾ ಅಜರ್ೆಂಟು ಏನಿರಬಹುದೆಂಬ ಅಚ್ಚರಿಯೊಂದಿಗೆ ಮಹಡಿಯಲ್ಲಿದ್ದ ಬಾರಿಗೆ ಹೋದೆ.
ವಿಶ್ವ ಯಥಾಸ್ಥಾನದಲ್ಲಿ ಆಸೀನನಾಗಿದ್ದ. ಅವನ ಕಣ್ಣುಗಳು ಆಗಲೇ ಸಾಕಷ್ಟು ದ್ರವ ಒಳಗೆ ಹೋಗಿರುವುದನ್ನು ಹೇಳುತ್ತಿದ್ದವು! ಎದುರಿನ ಕುಚರ್ಿ ತೋರಿಸಿ “ಕುಕ್ಕರಿಸು” ಎಂದ ಆತ್ಮೀಯತೆಯಿಂದ.
ಮಾತಾಡದೆ ಪ್ರಶ್ನೆಯಾಗಿ ಅವನ ಮುಂದೆ ಕೂತೆ.
ವಿಶ್ವ ನನ್ನ ಬಾಲ ಸ್ನೇಹಿತ. ಅಂದರೆ “ನಿಮಗೆ ಬಾಲ ಒಂದೇ ಕಡಿಮೆ” ಎಂದು ದೊಡ್ಡವರು ನಮ್ಮನ್ನು ಗದರಿಸುತ್ತಿದ್ದ ದಿನಗಳಿಂದ ಸ್ನೇಹ! ಅದು ಮುಂದೆ ಶಾಲೆ, ಕಾಲೇಜು, ಕೆಲಸ ಎಲ್ಲದರಲ್ಲೂ ಮುಂದುವರಿದಿದೆ. ವಿಶ್ವ ಲಕ್ಷ್ಮೀಪುತ್ರ! ಅವರಪ್ಪನ ಅಪಾರ ಆಸ್ತಿಗೆ ಏಕಮಾತ್ರ ವಾರಸುದಾರ; ನನ್ನ ಪಾಲಿನ ಕಾಮಧೇನು, ಕಲ್ಪವೃಕ್ಷ-ಎಲ್ಲಾ! ಅಗಾಗ್ಗೆ ನನಗೆ ದಿಢೀರನೆ ಎದುರಾಗುವ ಹಣದ ಅವಶ್ಯಕತೆಗೆ ಅವನೇ ಉತ್ತರ! ಹೀಗಾಗಿ ವಿಶ್ವನನ್ನು ನಾನು ಯಾವುದೇ ಕಾರಣಕ್ಕೂ ಉಪೇಕ್ಷೆ ಮಾಡುವಂತೆಯೇ ಇರಲಿಲ್ಲ!
“ಐಸ್ಕ್ರೀಂ ತಗೊಂಡೆಯಾ..?” ವಿಶ್ವ ಕೇಳಿದ. ನಾನು ಕ್ಲಬ್ಬಿಗೆ ಬಂದರೆ ಮನೆಗೆ ಐಸ್ಕ್ರೀಂ ತೆಗೆದುಕೊಂಡು ಹೋಗುವುದು ಮಾಮೂಲು. ಅದನ್ನು ಕುರಿತೇ ವಿಶ್ವ ವ್ಯಂಗ್ಯವಾಡಿದ್ದ!
“ಹೋಗೋವಾಗ ತಗೋತೀನಿ. ಈಗ್ಲೇ ತಗೊಂಡ್ರೆ ಕರಗಿಹೋಗುತ್ತೆ”
“ಹೌದು ಬಿಸಿಯಾದ್ರೆ ಐಸ್ಕ್ರೀಮ್ ಯಾಕೆ ತಲೇನೇ ಕರಗಿ ಹೋಗುತ್ತೆ”
“ಏನು? ತಲೆ ಕರಗೋದಾ..? ಏನು ವಿಷಯ..? ಮನೇಲಿ ಎಲ್ಲಾ ಚೆನ್ನಾಗಿದಾರೆ ತಾನೆ..?”
ಆತಂಕದಿಂದ ಕೇಳಿದೆ. ಮನೇಲಿ ಏನಾದ್ರೂ ಹೆಚ್ಚು ಕಮ್ಮಿಯಾದ್ರೆ ವಿಶ್ವ ಹೀಗೆ ಎಕರಪೆಕರಾಗಿ ಮಾತಾಡೋದು! ಇದು ಅವನ ಬಾಲದ ಸಾರಿ ಬಾಲ್ಯ ಸ್ನೇಹಿತನಾದ ನನಗೆ ಚೆನ್ನಾಗಿ ಗೊತ್ತಿತ್ತು.
“ಎಲ್ಲಾ ಚೆನ್ನಾಗಿದ್ದಾರೆ…ಚೆನ್ನಾಗಿಲ್ದೆ ಇರೋನು ನಾನೊಬ್ಬನೇ..!!” ವಿಶ್ವನ ಮಾತು ಗಂಟುಗಂಟಾಗುತ್ತಿತ್ತು!
ಟೀಪಾಯ್ ಮುಂದೆ ಎರಡು ಖಾಲಿ ಬೀರು ಬಾಟಲುಗಳಿದ್ದವು. ಮೂರನೆಯದರ ದ್ರವ ಗ್ಲಾಸಿನಲ್ಲಿತ್ತು! ಕಣ್ಣುಗಳಲ್ಲಿ ಅಮಲು ಕಾಣುತ್ತಿತ್ತು! ವಿಶ್ವನ ಬಾಯಲ್ಲಿ ಸಿಗರೇಟು ನಿಗಿನಿಗಿಸುತ್ತಿತ್ತು.
“ನಿನಗೆ ಕೋಸಂಬರಿ ಹೇಳಲಾ..?” ವಿಶ್ವನ ಮಾತಿನಲ್ಲಿ ವ್ಯಂಗ್ಯ ಮೊನಚಾಗಿತ್ತು! ನಾನು ಕುಡಿಯುವುದಿಲ್ಲ ಎಂದೇ ನನ್ನನ್ನು ಕುಟುಕಿದ್ದು!!
“ವಿಷಯ ಏನು ಹೇಳು, ಎದ್ದು ಹೋಗ್ತೀನಿ”
“ನಾನು ಹೇಳೋತನಕ ನೀನು ಹೋಗೋ ಹಾಗಿಲ್ಲ. ಹಾಗೇನಾದ್ರೂ ಹೋದ್ರೆ ತಲೆ ಮೇಲೆ ಮೊಟಕ್ತೀನಿ”
ವಿಶ್ವನ ಮಾತಿಗೆ ನಾನು ಎದುರಾಡುವ ಗೋಜಿಗೆ ಹೋಗಲಿಲ್ಲ. ಮಾತಾಡಿದಷ್ಟೂ ಅವನು ಕೆರಳುತ್ತಾನೆ ಎಂದು ನನಗೆ ಗೊತ್ತಿತ್ತು.
“ಮನೇ ತುಂಬಾ ಜನ. ಮನೆಯವಳಿಗೆ ನನ್ನ ಮೇಲೆ ಅನುಮಾನ”
ವಿಶ್ವನ ಒಗಟು ಮುಂದುವರಿದಿತ್ತು.
“ಮೊಸಳೆ, ನರಿ, ಕುರಿ, ಆಮೆ, ಮೀನು ಎಲ್ಲಾ ವಕ್ಕರಿಸಿದ್ದಾರೆ!”
ವಿಶ್ವ ಮತ್ತೊಂದು ಒಗಟು ನುಡಿದ. ಆದರೆ ಈ ಸಾರಿ ಅವನ ಒಗಟು ನನಗೆ ಅರ್ಥವಾಗಿತ್ತು. ಆದರೆ ಹೊಸದಾಗಿ ಪ್ರಯೋಗಿಸಿದ ಮೀನು ಯಾರೆಂದು ಗೊತ್ತಾಗಲಿಲ್ಲ!
“ಸರಿ, ಮೀನು ಯಾರು..?” ಅನುಮಾನಿಸಿದೆ.
121
“ಕೇರಳಾ ಸಮುದ್ರದ್ದು”
“ಅದು ಯಾರೋ..?” ಅನುಮಾನಿಸಿದೆ.
“ಅವರ ಕುಕ್ಕು! ನನ್ನ ಕುಕ್ಕೋದಕ್ಕೆ ಬಂದಿದಾಳೆ”
“ಅವರ ಕುಕ್ಕು ನಿನ್ನ ಕುಕ್ಕೋದು ಯಾಕೆೆ..? ”
“ವಿಶಾಲೂಗೆ ಹೆಲ್ಪ್ ಮಾಡೋಕೆ ಕಕರ್ೊಂಡು ಬಂದಿದಾರೆ!”
ವಿಶ್ವನ ಪರಿಸ್ಥಿತಿ ಸ್ವಲ್ಪಸ್ವಲ್ಪವಾಗಿ ಅರ್ಥವಾಗುತ್ತಿತ್ತು. ವಿಶ್ವ ಮೊಸಳೆ ಅಂದಿದ್ದು ಅವನ ಮಾವನನ್ನು. ನರಿ ಅವನ ಅತ್ತೆ, ಕುರಿ ಅವನ ಭಾವ ಮೈದುನ, ಆಮೆ ಅವನ ನಾದಿನಿ ಅದರೆ ಜೊತೆಗೆ ಹೊಸ ಸೇರ್ಪಡೆಯೇ ಮೀನು. ಅದೂ ಕೇರಳ ಸಮುದ್ರದ್ದು. ಅಂದರೆ ವಿಶ್ವನ ಮಾವನ ಮನೆಯಲ್ಲಿ ಅಡುಗೆ ಕೆಲಸ ಮಾಡುವವಳು-ಕೇರಳ ಮೂಲದವಳು!
“ಮನೆಯವಳಿಗೆ ನನ್ನ ಮೇಲೆ ಅನುಮಾನ ಅಂದೆಯಲ್ಲ? ಅದೇನದು ನನಗೆ ಸರಿಯಾಗಿ ಅರ್ಥವಾಗಲಿಲ್ಲ”
ವಿಶ್ವನನ್ನು ಕೇಳಿದೆ.
“ನಿನಗೆ ಯಾವತ್ತು, ಏನು ಸರಿಯಾಗಿ ಅರ್ಥವಾಗಿತ್ತು ಹೇಳು..?”
ನನ್ನನ್ನು ಹಂಗಿಸುವ, ಅಣಕಿಸುವ ಯಾವ ಅವಕಾಶವನ್ನೂ ವಿಶ್ವ ವ್ಯರ್ಥ ಮಾಡಿಕ್ಕೊಳ್ಳುವವನಲ್ಲ.
“ನಿನ್ಕೈಯಲ್ಲಿ ಅನ್ನಿಸಿಕ್ಕೊಳ್ಳೋಕೆ ನನಗೆ ಸಮಯ ಇಲ್ಲ.ನಾನು ಹೊರಟೆ” ಬೆದರಿಸಿದೆ.
“ಹೋಗ್ಬೇಡ ಪ್ಲೀಸ್..ನೀನೂ ನನ್ನ ಕೈಬಿಟ್ಟರೆ ನನ್ನ ಗತಿ ಏನು??” ದೇವದಾಸ್ ಫೋಸು ಕೊಟ್ಟ.
“ಸರಿ ಹೇಳು” ಎದ್ದಿದ್ದವನು ಮತ್ತೆ ಕೂತೆ.
“ಕುಕ್ಕೂ ಅಂದ್ನಲ್ಲಾ…?”
“ಕೇರಳ ಸಮುದ್ರದ್ದು..?”
“ಹೂ..ಅದರದ್ದೇ ಸಮಸ್ಯೆ? ನಾನು ಅವಳಿಗೆ ಲೈನ್ ಹೊಡೀತಿದ್ದೀನೀಂತ ವಿಶಾಲೂಗೆ ಅನುಮಾನ”
“ನಿಜಾನಾ..?”
“ನೀನೂ ಈ ಮಾತು ಹೇಳ್ತೀಯಾ?” ವಿಶ್ವ ಹಲುಬಿದ. ‘ಯೂ ಟೂ..ಬ್ರೂಟ್’ ಎಂಬ ಶೇಕ್ಸ್ಪಿಯರನ ನಾಟಕದ ಸೀಸರನ ಮಾತು ನೆನಪಾಯಿತು.
“ಸಾರಿ, ಮುಂದೆ..?”
“ಮುಂದೆ ಅಲ್ಲ..? ಹಿಂದೆ!”
“ಹಿಂದೆ..?” ಅರ್ಥವಾಗದೆ ವಿಶ್ವನತ್ತ ನೋಡಿದೆ. ಸಿಗರೇಟನ್ನು ಒಮ್ಮೆ ಧೀರ್ಘವಾಗಿ ಎಳೆದು ಕತ್ತೆತ್ತಿ ಧೂಮವನ್ನು ಮೇಲೆ ಬಿಟ್ಟ. ರೈಲ್ವೆ ಎಂಜಿನ್ನಿನ ನೆನಪಾಯಿತು.
“ಆ ಕೇರಳಾ ಮೀನು ನನ್ನ ಹಿಂದೇನೇ ಓಡಾಡ್ತಾ ನನಗೇ ಅನುಮಾನ ಬರೋ ಹಾಗ್ಮಾಡ್ತಿದೆ. ಇನ್ನು ವಿಶಾಲೂಗೆ ಅನುಮಾನ ಬರದೆ ಇರುತ್ತಾ..?” ವಿಶ್ವ ಕನಲಿದ.
“ಅವಳು ಯಾಕೆ ನಿನ್ನ ಹಿಂದೆ ಓಡಾಡ್ತಾಳೆ..?”
“ಅದನ್ನ ಅವಳನ್ನೇ ಕೇಳ್ಬೇಕು”
“ಸರಿ ಕೇಳು”
“ನಿನ್ನ ತಲೆ ಸರಿ ಇದೆಯಾ..? ಮೊದಲೇ ವಿಶಾಲೂಗೆ ನನ್ನ ಮೇಲೆ ಅನುಮಾನ. ಇನ್ನು ಅವಳ ಜೊತೆ ಮಾತು ಬೇರೆ ಆಡಿದ್ರೆ ನನ್ನ ಕತೆ ಮುಗಿದ ಹಾಗೇನೇ!” ವಿಶ್ವ ಕನಲಿದ.
“ಸರಿ ನನ್ನ ಕರೆದದ್ದು ಯಾಕೆ..?”
“ವಿಶಾಲೂಗೆ ನನ್ನ ಮೇಲೆ ಅನುಮಾನ ಹೋಗಬೇಕು. ಅದಕ್ಕೆ ಒಂದೈಡಿಯ ಕೊಡೋ ಪ್ಲೀಸ್”
“ಅದು ಅಷ್ಟು ಸುಲಬವಾಗಿ ಹೊಳೆದುಬಿಡುತ್ತಾ..? ಬೆಳಿಗ್ಗೆ ಹೇಳ್ತೀನಿ. ಅದಕ್ಕೆ ಮುಂಚೆ ಈ ಕೇರಳಾ ಮೀನಿನ ವಿಷಯ ಸ್ವಲ್ಪ ಡೀಟೈಲಾಗಿ ಬೇಕು”
“ಸುಮಾರು ಮೂವತ್ತು ವರ್ಷ ಹತ್ತಿರದ ಹೆಂಗಸು. ನೋಡೋಕೆ ಸ್ಮಾಟರ್್ ಅನ್ನಬಹುದು.. ಎಲ್ಲಾ ಸೋಷಿಯಲ್ ಅಂತಿದ್ದಾರೆ, ನನಗೆ ಚೆಲ್ಲು ಅನ್ನಿಸ್ತಾ ಇದೆ. ಮದ್ವೆಯಾಗಿಲ್ಲ, ಅದೇ ನನಗೆ ಇಕ್ಕಟ್ಟಾಗಿರೋದು. ಕಾಲೇಜು ಕಲಿತಿದಾಳೆ. ಆದ್ರೆ ಡಿಗ್ರಿಯಾಗಿಲ್ಲ. ಸಾಕಾ…? ಇನ್ನು ಉಳಿದದ್ದು ನಿನ್ನ ಕೆಲಸ. ಈ ಅಪವಾದದಿಂದ ತಪ್ಪಿಸಿಕ್ಕೊಳ್ಳೋಕೆ ಉಪಾಯ ಹೇಳದಿದ್ರೆ ನಿನಗೆ ಅಪಾಯ!”
“ಆಯ್ತು. ಈಗ ಹೊರಡಲಾ..?”
ಸಿನಿಮಾದ ಡಾನ್ ತರಾ ಗೆಸ್ಚರ್ ಮಾಡಿದ.
ಮನೆಗೆ ಹೋಗೋವಾಗಲೇ ವಿಶ್ವನ ಸಮಸ್ಯೆ ತಲೆಯಿಂದ ಅಳಿಸಿಹೋಗಿತ್ತು. ಬೇಸಿಗೆ ರಜಾಕ್ಕೆ ಬಂದ ಮೊಮ್ಮಕ್ಕಳ ಗಲಾಟೇಲಿ ವಿಶ್ವನ ಸಮಸ್ಯೆ ನೆನಪೂ ಬರಲಿಲ್ಲ, ಅದಕ್ಕೆ ತಲೆಯಲ್ಲಿ ಜಾಗವೂ ಇರಲಿಲ್ಲ.
ಬೆಳಿಗ್ಗೆ ಫ್ಯಾಕ್ಟ್ರೀಲಿ ಧುತ್ತನೆ ಎದುರಾದ ವಿಶ್ವನನ್ನು ನೋಡುತ್ತಲೇ ಅವನ ಮನೆಯಲ್ಲಿ ಬೀಡುಬಿಟ್ಟ ಮೀನು, ಮೊಸಳೆ, ನರಿ, ಕುರಿ, ಆಮೆ ಎಲ್ಲಾ ನೆನಪಾದವು! ಅವನ ಸಮಸ್ಯೆ ಬಗ್ಗೆ ಯೋಚನೇನೇ ಮಾಡಿರಲಿಲ್ಲ.
“ಏನು..?” ವಿಶ್ವ ಹುಬ್ಬು ಹಾರಿಸಿ ಕೇಳಿದ.
“ಕಾಫಿ ಟೈಮಿಗೆ ಹೇಳ್ತೀನಿ” ಎಂದು ಬೀಸೋ ದೊಣ್ಣೆ ತಪ್ಪಿಸಿಕೊಂಡೆ! ವಿಶ್ವನ ಜಾಯಮಾನವೇ ಹೀಗೆ! ತನ್ನ ಸಮಸ್ಯೇನೆ ನನಗೆ ವಗರ್ಾಯಿಸಿ ತಾನು ಆರಾಮವಾಗಿರುತ್ತಾನೆ. ಎಂಟಕ್ಕೆ ಶುರುವಾಗೋ ಫ್ಯಾಕ್ಟ್ರಿಯಲ್ಲಿ ಕಾಫಿ ಟೈಮ್ ಅಂದ್ರೆ ಒಂಬತ್ತೂವರೆ. ಅಲ್ಲಿಯವರೆಗೂ ಸಮಯ ಸಿಕ್ತಲ್ಲ. ಅಷ್ಟ್ರಲ್ಲಿ ಏನಾದ್ರೂ ವಿಶ್ವನ ಸಮಸ್ಯೆಗೆ ಏನಾದ್ರೂ ಐಡಿಯಾ ಸಿಕ್ಕೇಸಿಗುತ್ತೇಂತ ಉಡಾಫೇಲಿ ಕೆಲಸ ಶುರು ಮಾಡಿದ್ದೆ.
ಕೆಲಸದ ಜೊತೇಲೇ ವಿಶ್ವನ ಸಮಸ್ಯೆ ಪರಿಹಾರಕ್ಕೆ ಯೋಚಿಸುತ್ತಿದ್ದೆ. ಆದರೆ ತಲೆ ಖಾಲಿಯಾಗಿತ್ತು. ಕಾಫಿಯ ಸಮಯ ಹತ್ತಿರವಾಗುತ್ತ ಏನೂ ಹೊಳೆಯದೆ ಹಣೆಯಲ್ಲಿ ಬೆವರು ಮೂಡಿದವು! ವಿಶ್ವ ಸುಮ್ಮನೆ ಬಿಡುವ ಜಾಯಮಾನದವನಲ್ಲ: ಉಡದ ಹಿಡಿತ! ಒಂದು ಸಲ ಅವನ ಕೈಗೆ ಸಿಕ್ಕರೆ ಬಿಡುಗಡೆಯೇ ಇಲ್ಲ. ಹಣ್ಣುಗಾಯಿ ನೀರುಗಾಯಿ ಮಾಡದೆ ಬಿಡದ ನಕ್ಷತ್ರಿಕ. ಅವನನ್ನು ಹೇಗೆ ಎದುರಿಸುವುದು ಎಂದು ಭಯವಾಯಿತು. ವಿಶ್ವ ಥೇಟ್ ಭಯೋತ್ಪಾದಕ ಎನ್ನಿಸಿಬಿಟ್ಟಿತು.
ಚೇಂಬರಿನ ಗಾಜಿನ ಬಾಗಿಲಾಚೆ ಯಾರೋ ನಿಂತಂತಾಯಿತು. ಹಿಂದಿನ ದಿನ ನಿದ್ರೆ ಬಾರದವರೆಲ್ಲಾ ಮನೆಯವರೆಲ್ಲಾ ಕೂತು ಆಹಟ್ ಎಂಬ ದೆವ್ವದ ಎಪಿಸೋಡ್ ನೋಡುತ್ತಿದ್ದರು. ಅನಿವಾರ್ಯವಾಗಿ ನಾನೂ ಅದರತ್ತ ಕಣ್ಣು ಹಾಯಿಸಿದ್ದೆ. ಅಂತದ್ದೇ ಒಂದು ಆಕೃತಿ ಬಾಗಿಲಾಚೆ ನಿಂತಿರುವಂತೆ ಕಂಡಿತು. ಅರೆಬರೆ ಧೈರ್ಯದಿಂದ ನೋಡಿದರೆ… ವಿಶ್ವ!!
“ಹೇ..ಭಾ.. ಅಲ್ಲೇ ಯಾಕೆ ನಿಂತೆ?” ಬಾರದ ನಗುವನ್ನು ಮುಖದಲ್ಲಿ ಪ್ರದಶರ್ಿಸಿದೆ!
“ಏನಾದ್ರೂ ಹೊಳೀತಾ ನಿನ್ನ ಅಸಾಧಾರಣ ತಲೆಗೆ..? ಇಡೀ ಫ್ಯಾಕ್ಟ್ರಿ ನಿನ್ನ ಹೊಗಳುತ್ತೆ! ಏನೋ ಮಹಾ ಘನಂದಾರಿ ಕೆಲ್ಸ ಮಾಡ್ತೀಯಾಂತ! ನಿನ್ನ ಘನಂದಾರಿ ಐಡಿಯಾಗಳು ಎಲ್ಲಾ ತೋಪು ಆಗ್ತಾವೆ ಅನ್ನೋದು ನಂಗೆ ಮಾತ್ರ ಗೊತ್ತಿರೋದು” ಕಟಕ ರಾಶಿಯ ವಿಶ್ವ ಕುಟುಕಿದ.
“ಸಾರು, ಒರು ಪ್ರಾಬ್ಲಂ..” ವಿಶ್ವನನ್ನು ತಳ್ಳಿಕೊಂಡೇ ನನ್ನ ವಕರ್್ಷಾಪಿನ ಸೂಪವರ್ೆಸರ್ ಚಂದ್ರನ್ ಬಂದ. ಚಂದ್ರನ್ ನೋಡುತ್ತಲೇ ನನಗೆ ವಿಶ್ವನ ಕೇರಳ ಮೀನಿನ ಸಮಸ್ಯೆಗೆ ಪರಿಹಾರ ಫಕ್ಕನೆ ಹೊಳೆದುಬಿಟ್ಟಿತು!
“ಚಂದ್ರನ್, ಪ್ರಾಬ್ಲಂ ಅಜರ್ೆಂಟ್ ಇಲ್ಲದಿದ್ರೆ ಒಂದು ಹತ್ತು ನಿಮಿಷ ಬಿಟ್ಟು ಬತರ್ಿಯಾ..?”
“ಓಕೆ… ಸಾರ್..” ಚಂದ್ರನ್ ಆಚೆ ಹೋದ.
“ಹೇಳು ನನ್ನನ್ನ ವಿಶಾಲೂ ಗುಮಾನಿಯಿಂದ ತಪ್ಪಿಸಿಕೊಳ್ಳೋಕೆ ಏನು ಐಡಿಯಾ ಮಾಡಿದೀಯ?”
“ನಾಳೆ ನಿಮ್ಮ ಮನೇಗೆ ಚಂದ್ರನ್ ಬತರ್ಾನೆ.. ಅವನಿಗೆ ನಿನ್ನ ಕೇರಳಾ ಮೀನಿನ ಪರಿಚಯ ಮಾಡ್ಕೊಡು. ಆಮೇಲೆ ನೋಡು”
“ಅದರಿಂದ ಏನಾಗುತ್ತೆ..?” ವಿಶ್ವ ಕಳವಳದಿಂದ ಕೇಳಿದ. ನನ್ನ ಮಾತಲ್ಲಿ ಅವನಿಗೆ ನಂಬಿಕೆ ಬಂದಿರಲಿಲ್ಲ.
“ಕೇರಳ ಮೀನಿನ ಪ್ರಾಬ್ಲಮ್ ಸಾಲ್ವ್! ವಿಶಾಲೂಗೆ ನಿನ್ನ ಮೇಲೆ ಅನುಮಾನ ಪರಿಹಾರ! ಇನ್ನೇನು ಬೇಕು..?”
“ಇದೆಲ್ಲಾ ಹೇಗಾಗುತ್ತೋ.? ಹೆಚ್ಚು ಕಮ್ಮಿಯಾದರೆ ನಿನ್ನ ಸುಮ್ಮನೆ ಬಿಡೋದಿಲ್ಲ..ಹುಷಾರ್”
“ನನ್ನ ಐಡಿಯಾ ಯಾವತ್ತಾದ್ರೂ ಹೆಚ್ಚುಕಮ್ಮಿಯಾಗಿತ್ತಾ..?”
ವಿಶ್ವ ಗುರ್ರೆಂದು ನನ್ನತ್ತ ನೋಡುತ್ತಾ ಎದ್ದು ಹೋದ.
ನಾನು ಚಂದ್ರನ್ ಕರೆಸಿದೆ. ಚಂದ್ರನ್ ಒಬ್ಬ ಮಲೆಯಾಳಿ. ನೋಡೋಕೆ ಸ್ಮಾಟರ್್, ಸ್ವಲ್ಪ ಚೆಲ್ಲು ಕೂಡ. ಅವನಿಗೆ ಏನು ಮಾಡಬೇಕೆನ್ನುವುದನ್ನು ವಿವರಿಸಿದೆ.
ಮಾರನೆಯ ದಿನ ವಿಶ್ವ ಕಾಖರ್ಾನೆಗೆ ಬರಲಿಲ್ಲ. ಅವನ ಪಿ.ಎಗೆ ಸಿಕ್ ಲೀವ್ ಅಂತ ಫೋನಲ್ಲಿ ಹೇಳಿದ್ದನಂತೆ! ನನ್ನ ಶಾಪಿನ ಚಂದ್ರನ್ ಕೂಡ ಬಂದಿರಲಿಲ್ಲ. ಚಂದ್ರನ್ ಬಂದಿಲ್ಲದಿರುವುದು ನನಗೇನೂ ಅನುಮಾನವಿರಲಿಲ್ಲ ಆದ್ರೆ ವಿಶ್ವನ ಚಕ್ಕರ್ ಸ್ವಲ್ಪ ಅನುಮಾನ ಮೂಡಿಸಿತು. ನನ್ನ ಪ್ಲಾನಲ್ಲಿ ಏನಾದ್ರೂ ಹೆಚ್ಚುಕಮ್ಮಿಯಾಗಿರಬಹುದಾ..? ಹಾಗೇನಾದ್ರೂ ಆಗಿದ್ದರೆ ವಿಶ್ವ ನನ್ನ ಸುಮ್ಮನೆ ಬಿಡುವವನಲ್ಲ! ಅಳುಕಿನಿಂದಲೇ ದಿನ ದೂಡಿದೆ.
ಸಂಜೆ ಕ್ಲಬ್ಬಿನ ಕಡೆ ಹೋದೆ. ವಿಶ್ವ ಅಲ್ಲಿ ಆಸೀನನಾಗಿದ್ದ. ಎಂದಿನಂತೆ ಟೀಪಾಯ್ ಮೇಲೆ ಬೀರು ಬಾಟಲುಗಳು, ಬಾಯಲ್ಲಿ ಸಿಗರೇಟು, ಕಾರದ ಕಡಲೆಬೀಜ ರಾರಾಜಿಸುತ್ತಿದ್ದವು! ಧೂಮಲೀಲೆಯಲ್ಲಿ ವಿಶ್ವ ಮುಳುಗಿದ್ದ. ಮುಖದ ಭಾವನೆ ಜೀರೋ ವ್ಯಾಟಿನ ಬಲ್ಬಿನಂತಿತ್ತು!
“ಏನಾಯ್ತು..? ಚಂದ್ರನ್ ಬಂದಿದ್ದನಾ..?”
“ತೋಪಾಯ್ತು! ಎಲ್ಲಾ ಎಕ್ಕುಟ್ಟೋಯ್ತು!!” ವಿಶ್ವ ಅಳುವುದೊಂದು ಬಾಕಿಯಿತ್ತು!
ನನಗೆ ಗಾಬರಿಯಾಯ್ತು!! ಏನಾಯ್ತು ಎಂದು ಕೇಳುವುದಕ್ಕೂ ಹೆದರಿಕೆಯಾಯಿತು!! ಚಂದ್ರನ್ ಎಲ್ಲಾ ಗಬ್ಬೆಬ್ಬಿಸಿರುವಂತೆ ಕಂಡಿತು. ನಾನು ಮೌನ ವಹಿಸಿದೆ.
“ನಮ್ಮ ಮಾವ ಕತ್ತಿ ಹಿರಿದು ನನ್ನ ಕತ್ತು ಕತ್ತರಿಸೋದೊಂದು ಬಾಕಿ ಇತ್ತು”
“ಅಂತಾದ್ದೇನಾಯ್ತು..?”
“ಏನಾಯ್ತ..? ಆ ನಿನ್ನ ಅಸಿಸ್ಟೆಂಟು ಚಂದ್ರನ್ ನಮ್ಮ ಮಾವನ ಕುಕ್ಕು ಕೇರಳಾ ಮೀನನ್ನು ಪಟಾಯಿಸಿಬಿಟ್ಟ! ಮದ್ವೆಯಾಗ್ತಾನಂತೆ! ಅದಕ್ಕೆ ಅವಳೂ ಒಪ್ಪಿದಾಳೆ. ಅಡಿಗೆ ಕೆಲಸಕ್ಕೆ ನೆನ್ನೇನೇ ನನ್ನೆದುರಿಗೇ ರಾಜೀನಾಮೆ ಕೊಟ್ಟು ತಕ್ಷಣ ಲೆಕ್ಕ ಸೆಟ್ಲ್ ಮಾಡಿ ಅಂದಳು!! ಅಡಿಗೆಯವಳನ್ನ ಕಳ್ಕೊಂಡಿದ್ದಕ್ಕೆ ನಮ್ಮ ಮಾವನಿಗೆ, ಅತ್ತೆಗೆ ಬಿ.ಪಿ ಏರಿ! ನನ್ನ ಮೇಲೆ ಉರಿದುಬಿದ್ದರು! ಚಂದ್ರನ್ ಕರೆಸಿದ್ದು ನನ್ನದೇ ಪ್ಲಾನೂಂತ ಕಿರಿಚಾಡಿ, ನೆನ್ನೆ ಸಂಜೇನೇ ಊರಿಗೆ ವಾಪಸ್ಸು ಹೋದ್ರು..!”
“ಮತ್ತೆ..ಮೀನು..?”
“ಅದೂ ಹೋಯ್ತು”
“ಮತ್ತೇನು..? ನಿನ್ನ ಸಮಸ್ಯೆ ಬಗೆಹರೀತಲ್ಲಾ..? ಮೀನೂ ಇಲ್ಲಾ ಮೊಸಳೇನೂ ಇಲ್ಲ! ಅತ್ತಿಗೇಗೂ ನಿನ್ನ ಮೇಲಿನ ಅನುಮಾನ ಇಲ್ಲ! ಖುಷಿಯಾಗಿರೋ ಮತ್ತೆ..?”
“ಏನು ಖುಷಿ..? ಇವತ್ತಿಂದ ಮನೇಲಿ ನಾನೇ ಬೇಯಿಸ್ಕೋಬೇಕು..?”
“ಯಾಕೆ..? ಅತ್ತಿಗೆ..?” ಅನುಮಾನಿಸಿದೆ.
“ಅವಳೂ ಹೋದಳು!” ಅವನ ಅಳು ಮುಖ ನೋಡಿ ಗಾಬರಿಯಾಯಿತು. ವಿಶಾಲೂ ಅತ್ತಿಗೆ ಹಾಗೆ ದಿಢೀರನೆ ಗಂಡನಿಗೆ ಕೈಕೊಟ್ಟು ಓಡುವ ಹೆಂಗಸಲ್ಲ. ಅವರದ್ದು ಇಪ್ಪತ್ತು ವರ್ಷಗಳ ಅರಾಲ್ಡೈಟ್ ದಾಂಪತ್ಯ!
“ಯೂ ಮೀನ್.. ನಿನ್ನ ಬಿಟ್ಟು..?” ಅರ್ಧಕ್ಕೆ ಮಾತು ತುಂಡು ಮಾಡಿದೆ.
“ಅವರಪ್ಪನನ್ನ ಸಮಾಧಾನ ಮಾಡೋಕೆ! ಮೀನು ರಾಜೀನಾಮೆ ಕೊಟ್ಟಿದ್ದಕ್ಕೆ ಎರಡು ದಿನ ಊರಲ್ಲಿದ್ದು ಅವರಿಗೆ ಸಹಾಯ ಮಾಡೋಕೆ ಹೋದಳು. ನೀನೋ..ನಿನ್ನ ತೋಪು ಐಡಿಯಾಗಳೋ..? ದೇವರೇ ಯಾಕಿಂತ ಸ್ನೇಹಿತನ್ನ ಕೊಟ್ಟೆ?”
ವಿಶ್ವನ ಸ್ಥಿತಿಗೆ ನನ್ನ ಹಣೆಯಲ್ಲಿ ಸಣ್ಣಗೆ ಬೆವರ ಹನಿಗಳು ಮೂಡಿದವು!
ವಿಶ್ವ ಗಂಟಲಲ್ಲಿ ಬೀರು ಸುರುವಿಕೊಂಡ! ಆ ಕಹಿ ಬದುಕಿನ ಎಲ್ಲಾ ಕಹಿಯನ್ನು ಮರೆಸುತ್ತೆ ಎನ್ನುವ ಭಾವದಲ್ಲಿ!!
ನಾನು ಮೆಲ್ಲನೆ ಜಾಗ ಖಾಲಿ ಮಾಡಿದೆ!!

‍ಲೇಖಕರು avadhi-sandhyarani

September 4, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: