’ಪಾಠ ಹೇಳುವುದೆಂದರೆ ಒಂದೇ ಕೊಡೆಯೊಳಗೆ ಹೆಜ್ಜೆ ಹಾಕುತ್ತ..’ – ಪ್ರಜ್ಞಾ ಮತ್ತೀಹಳ್ಳಿ

ಪಾಠವೆಂಬ ಪ್ರಣತಿಗೆ ಆಸಕ್ತಿಯ ತೈಲ

ಪ್ರಜ್ಞಾ-ಮತ್ತಿಹಳ್ಳಿ-22-150x150

ಪ್ರಜ್ಞಾ ಮತ್ತೀಹಳ್ಳಿ

ಡಾ.ಎ.ಪಿ.ಜೆ.ಅಬ್ದುಲ ಕಲಾಂ ರಾಮನಾಥಪುರದಲ್ಲಿ ಶ್ವಾಟ್ರ್ಜ ಪ್ರೌಢಶಾಲೆಯಲ್ಲಿ ಕಲಿಯುವಾಗ ವಿಜ್ಞಾನ ಬೋಧಿಸಿದವರು ರೆವರೆಂಡ ಅಯ್ಯದೊರೆ ಸೊಲೊಮನ್. ಅವರು ಕಲಿಸಿದ ರೀತಿಯಿಂದಾಗಿ ನನ್ನ ಮನಸ್ಸಿನಲ್ಲಿ ಕುತೂಹಲ, ಆಸಕ್ತಿಗಳು ಜ್ವಲಿಸಿದಂತಾಯಿತು ಎನ್ನುತ್ತಾರೆ ಕಲಾಂ. ಸೊಲೊಮನ್ ಅವರು ಒಮ್ಮೆ ಭೌತವಿಜ್ಞಾನವನ್ನು ಕಲಿಸುವಾಗ ಹುಡುಗರ ತಂಡವೊಂದನ್ನು ಸಮುದ್ರ ತೀರಕ್ಕೆ ಕರೆದೊಯ್ದು ಹಕ್ಕಿಗಳ ಹಾರಾಟವನ್ನು ವಿವರಿಸುತ್ತಾರೆ. ವಾಯುಗತಿ ವಿಜ್ಞಾನದ, ಅವುಗಳ ವಿನ್ಯಾಸದ, ಜೆಟ್ ವಿಮಾನಕ್ಕೆ ತಳ್ಳು ಶಕ್ತಿಯನ್ನು ನೀಡುವ ಬಾಲದೋಪಾದಿಯ ಅನಿಲಧಾರೆಯ ಹಾಗು ಅಂತರಿಕ್ಷದಲ್ಲಿ ಗಾಳಿಯ ಪ್ರವಾಹದ ರಹಸ್ಯಗಳನ್ನೆಲ್ಲ ಹುಡುಗರ ಮುಂದೆ ಬಿಡಿಸಿಟ್ಟರು. ಕಲಾಂ ಹೇಳುತ್ತಾರೆ ಆ ದಿನದ ಪಾಠವು ನನಗೆ ವಿಜ್ಞಾನದ ನಿಗೂಢಗಳನ್ನು ತಿಳಿಸಿದ ಮೊದಲ ಪಾಠವಾಗಿತ್ತು. ಈವರೆಗೆ ಕುತೂಹಲದ ಮೂಲವಾಗಿದ್ದ ವಿಷಯಗಳು ನಿಚ್ಚಳವಾಗಿ ಮನದಲ್ಲಿ ಅಚ್ಚೊತ್ತಿದವು. ಈ ತನಕ ಮಸುಕು ಮಸುಕಾದ ಗಾಜಿನ ಕಿಟಕಿಯ ಹಿಂದಿನಿಂದಲೇ ಜಗತ್ತನ್ನು ನೋಡುತ್ತಿದ್ದವನಿಗೆ ಹಠಾತ್ತನೆ ಗಾಜನ್ನು ಸರಿಸಿದಂತೆ ಆಯಿತು.

ಹೊರ ಪ್ರಪಂಚದ ವಿಶೇಷಗಳು, ವೈಚಿತ್ರ್ಯಗಳು ಆಶ್ಚರ್ಯದಿಂದ ಅರಳಿದ ನನ್ನ ಕಣ್ಣ ಮುಂದೆ ರಂಗುರಂಗಾಗಿ ಕಾಣಿಸಿದವು. ಹೀಗೆ ನೀಲಿಯಾಕಾಶದಲ್ಲಿ ರೆಕ್ಕೆ ಬಿಡಿಸಿ ಹಾರುವ ಕುರಿತು ಹುಟ್ಟಿದ ಕಲಾಂ ಅವರ ಆಸಕ್ತಿ ಅವರನ್ನು ಮದ್ರಾಸ ಎಂ.ಐ.ಟಿ.ಯಲ್ಲಿ ಏರೊನಾಟಿಕ್ ಎಂಜಿನಿಯರಿಂಗ್ ಕಲಿಯುವಂತೆ ಪ್ರೇರೆಪಿಸಿತು. ಪೈಲಟ್ ಹುದ್ದೆಯ ಸಂದರ್ಶನಕ್ಕೂ ಎಳೆದು ತಂದಿತು. ಆಮೇಲೆ ಅವರು ರಾಕೆಟ್ ಇಂಜಿನಿಯರ್ ಆಗಿ ಮಿಸೈಲ ಮನುಷ್ಯ ಎಂದು ಖ್ಯಾತಿ ಗಳಿಸಿ ಉಪಗ್ರಹಗಳನ್ನು ಹಾರಿಸಿದ್ದು ಭಾರತದ ವಿಜ್ಞಾನ ಜಗತ್ತಿನಲ್ಲಿ ಅಚ್ಚಳಿಯದ ಇತಿಹಾಸ. ನನಗಿಲ್ಲಿ ಗಮನಾರ್ಹ ಎನಿಸುವ ಸಂಗತಿಯೆಂದರೆ ಎಳವೆಯಲ್ಲಿಯೇ ಅವರಿಗೆ ಆಸಕ್ತಿಕರವಾಗಿ ಪಾಠ ಮಾಡುವುದರ ಮೂಲಕ ಪ್ರೇರಣೆಯಾದ ಅವರ ಗುರುಗಳು. ಅದು ವಿಜ್ಞಾನವೇ ಆಗಿರಲಿ, ಗಣಿತವೇ ಆಗಿರಲಿ ಅಥವಾ ಸಾಹಿತ್ಯವೇ ಆಗಿರಲಿ ಕಲಿಸುವ ಶಿಕ್ಷಕ ತನಗೆ ಸ್ವತ: ಪ್ರೀತಿಯಿದ್ದರೆ ಮಾತ್ರ ಆ ವಿಷಯವನ್ನು ವಿದ್ಯಾಥರ್ಿಗೆ ಪ್ರೀತಿ ಹುಟ್ಟುವಂತೆ, ಆಸಕ್ತಿ ಬೆಳೆಯುವಂತೆ ಬೋಧಿಸುತ್ತಾನೆ. ಬಾಲ್ಯದ ಆ ಆಸಕ್ತಿಯೇ ಮುಂದೆ ಹೆಬ್ಬಯಕೆಯಾಗಿ ವಿದ್ಯಾಥರ್ಿಗಳ ಕೈ ಹಿಡಿದು ಮುನ್ನಡೆಸಿ ಆಯಾ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆ ಮಾಡುವಂತೆ ಪ್ರೇರೇಪಿಸುತ್ತದೆ.

ನಾನು ಹೈಸ್ಕೂಲಿನಲ್ಲಿದ್ದಾಗ ಭೌತಶಾಸ್ತ್ರ-ರಸಾಯನಶಾಸ್ತ್ರಗಳನ್ನು ಬೋಧಿಸಿದ ಗುರುಗಳು ಪುಸ್ತಕ ಕೈಯಲ್ಲಿ ಹಿಡಿದು ಓದುತ್ತಿದ್ದರು. ಪ್ರಯೋಗಶಾಲೆ ಎನ್ನುದೊಂದು ನಮ್ಮ ಶಾಲೆಯಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ. ಹೀಗಾಗಿ ನನಗೆ ಏನೇನು ಮಾಡಿದರೂ ವಿಜ್ಞಾನ ಅರ್ಥವೇ ಆಗಲಿಲ್ಲ. ಹಾಗೂ-ಹೀಗೂ ಬಾಯಿಪಾಠ ಮಾಡಿ ಅಂಕಗಳನ್ನು ಪಡೆಯುತ್ತಿದ್ದೆ. ಆದರೆ ವಿಜ್ಞಾನದಲ್ಲಿ ಆಸಕ್ತಿಯಾಗಲೀ ಪ್ರೀತಿಯಾಗಲೀ ಕಿಂಚಿತ್ತೂ ಹುಟ್ಟಲಿಲ್ಲ. ಆದ್ದರಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡರೂ ನಾನು ವಿಜ್ಞಾನದಲ್ಲಿ ಓದನ್ನು ಮುಂದುವರಿಸಲಿಲ್ಲ. ವೈದ್ಯಳಾಗಬೇಕೆಂದು ಆಸೆಯಿತ್ತು. ಆದರೆ ಭೌತಶಾಸ್ತ್ರ-ರಸಾಯನಶಾಸ್ತ್ರಗಳನ್ನೂ ಓದಲು ಆಸಕ್ತಿ ಬರಲಿಲ್ಲ. ಕಳೆದ ವರ್ಷ ಸಾಹಿತ್ಯ ಪರಿಷತ್ತಿನ ಕಾರ್ಯಗಾರವೊಂದರಲ್ಲಿ ಪರಿಸರ ಅಧ್ಯಯನದ ಭಾಗವಾಗಿ ವಿಜ್ಞಾನದ ಕೆಲವು ಪಾಠಗಳನ್ನು ಕೇಳಿದಾಗ ತುಂಬಾ ಆಸಕ್ತಿ-ಅಭಿರುಚಿ ಹುಟ್ಟಿತು. ಆದರೆ ಬದುಕು ಅದಾಗಲೇ ಮೂವತ್ತು ವರ್ಷ ಮುಂದೆ ಬಂದಿತ್ತು. ನಮಗೂ ಹೈಸ್ಕೂಲಿನಲ್ಲಿ ಆಸಕ್ತಿ ಹುಟ್ಟುವಂತೆ ವಿಜ್ಞಾನ ಕಲಿಸಿದ್ದರೆ ನಾವೂ ಅದರಲ್ಲಿಯೇ ಹೆಚ್ಚಿನ ಅಧ್ಯಯನ ಮಾಡುತ್ತಿದ್ದೆವೊ ಏನೋ ಅನ್ನಿಸಿತು.

ನಾವೆಲ್ಲ ಕನ್ನಡ ಮಾಧ್ಯಮ-ಇಂಗ್ಲೀಷ ಮಾಧ್ಯಮ ಎಂಬ ಹೊಡೆದಾಟದಲ್ಲಿಯೇ ಮೈ ಮರೆತಿದ್ದೇವೆ. ಆದರೆ ಅದಕ್ಕಿಂತ ಮುಖ್ಯವಾದ ಸಂಗತಿಯೆಂದರೆ ವಿದ್ಯಾರ್ಥಿಗಳಿಗೆ ಆಸಕ್ತಿ ಹುಟ್ಟಿಸುವಂತೆ, ಪ್ರೀತಿ ಬೆಳೆಯುವಂತೆ ವಿಷಯಗಳನ್ನು ಕಲಿಸುವುದು. ಅದು ವಿಜ್ಞಾನವಿರಲಿ, ಇತಿಹಾಸವಿರಲಿ, ಗಣಿತವಿರಲಿ ಅಥವಾ ಭಾಷೆಗಳಿರಲಿ ಸ್ವಾರಸ್ಯಕರವಾಗಿ ಪಾಠ ಮಾಡುವುದು ಬಹಳ ಮುಖ್ಯ.

ಯಾವುದೇ ಶಿಕ್ಷಕನಿಗೆ ತಾನು ಬೋಧಿಸುವ ವಿಷಯದ ಕುರಿತು ಪ್ರೀತಿ ಇರದಿದ್ದರೆ ಅದು ಸ್ವತ: ಅವನಿಗೇ ಆಸಕ್ತಿ ಹುಟ್ಟಿಸಲಾರದು. ತನಗೇ ಹುಟ್ಟದ ಆಸಕ್ತಿಯನ್ನು ಆತ ತನ್ನ ವಿದ್ಯಾಥರ್ಿಗಳಲ್ಲಿ ಹೇಗೆ ಹುಟ್ಟಿಸಲು ಸಾಧ್ಯ? ವಸ್ತುವೊಂದರಲ್ಲಿ ವಿದ್ಯುತ್ ಹುಟ್ಟಿದರೆ ಮಾತ್ರ ಅದು ತನ್ನ ಸಂಪರ್ಕದ ಇನ್ನೊಂದು ವಸ್ತುವಿಗೆ ವಿದ್ಯುತ್ ದಾಟಿಸುತ್ತದೆ. ಅಥವಾ ಮೊದಲು ತಾನೊಂದು ಉರಿಯುವ ಪ್ರಶಾಂತ ಹಣತೆಯಾದ ಶಿಕ್ಷಕ ಮಾತ್ರ ತನ್ನ ಶಿಷ್ಯರೆಂಬ ಹಣತೆಗಳನ್ನು ಬೆಳಗಿಸಬಲ್ಲ. ಆದ್ದರಿಂದ ಶಿಕ್ಷಕ ವೃತ್ತಿಗೆ ಮೊಟ್ಟ ಮೊದಲು ಬೇಕಾದುದು ಆಯಾ ವಿಷಯಗಳಲ್ಲಿ ಆಸಕ್ತಿ ಮತ್ತು ಅಪ್ಪಟ ಪ್ರೀತಿ.

ನಮ್ಮಲ್ಲಿ ಬಹುತೇಕರು ತಿಳಿದುಕೊಂಡಿರುವುದೇನೆಂದರೆ ಪಾಠ ಮಾಡಲು ಬುದ್ಧಿವಂತಿಕೆ ಬೇಕು. ಅಂದರೆ ಹೆಚ್ಚಿನ ಅಂಕಗಳನ್ನು ಪಡೆದವರಿರಬೇಕು ಎಂದು. ಆದರೆ ವಾಸ್ತವಿಕವಾಗಿ ನೋಡಿದರೆ ಪಾಠ ಮಾಡುವುದು ಒಂದು ಕಲೆ. ಅದರಲ್ಲೂ ಪ್ರಾಥಮಿಕ-ಮಾಧ್ಯಮಿಕ ಶಾಲಾ ಹಂತದ ವಿಷಯ ಬೋಧನೆಗೆ ಹೆಚ್ಚಿನ ಅಂಕ ಗಳಿಸಿದ ಬುದ್ಧಿವಂತರಿಗಿಂತಲೂ ಆ ವಿಷಯವನ್ನು ಬಹಳ ಇಷ್ಟಪಡುವ ಮತ್ತು ಇತರರಿಗೂ ಇಷ್ಟವಾಗುವಂತೆ ತಿಳಿಸಬೇಕೆಂಬ ಹಂಬಲವಿರುವವರ ಅಗತ್ಯವಿದೆ. ಇವತ್ತು ಎಲ್ಲಾ ವಿದ್ಯಾ ಸಂಸ್ಥೆಗಳೂ ಫಲಿತಾಂಶ ನಿಷ್ಠರಾಗಿದ್ದಾವೆ. ಪ್ರತಿಯೊಬ್ಬ ಶಿಕ್ಷಕನಿಗೂ ವಿದ್ಯಾಥರ್ಿಗಳಿಂದ ಒಳ್ಳೆಯ ಅಂಕ ಬರುವಂತೆ ನೋಡಿಕೊ ಎನ್ನಲಾಗುತ್ತಿದೆ. ಪರೀಕ್ಷೆ ಎಂಬ ಹಕ್ಕಿಯ ಕಣ್ಣಿಗೆ ಗುರಿಯಿಟ್ಟಿರುವ ವಿದ್ಯಾಥರ್ಿಗೆ ಮತ್ತು ಪಕ್ಕ ನಿಂತಿರುವ ಶಿಕ್ಷಕನಿಗೆ ಹಕ್ಕಿಯ ಕಣ್ಣಲ್ಲದೆ ಬೇರೇನೂ ಕಾಣುತ್ತಿಲ್ಲ. ಗ್ಯಾಲರಿಯಲ್ಲಿ ಕೂತಿರುವ ಪಾಲಕರಂತೂ ಗೆಲುವಿಗಾಗಿ ಚೀರಿ ಚೀರಿ ಮೂಚರ್ಿತರಾಗುತ್ತಿದ್ದಾರೆ. ಇನ್ನಿದು ಬರಿ ಜಯಮಾಲೆಯ ಕಾಳಗ ಮಾತ್ರ. ಹಕ್ಕಿ ಕೂತ ಮರ, ಹಸಿರೆಲೆಯ ಆಹ್ಲಾದ, ಗಾಳಿಯಾಡುವ ಲಾಳಿ, ಹೂಗೊಂಚಲ ಚೆಲುವು, ರೆಂಬೆಯ ಬಳಕು ಲಾಸ್ಯ, ಹಕ್ಕಿಯ ಪುಟ್ಟ ದೇಹ, ಮೆತ್ತನೆಯ ಮೈ, ಬಹುವರ್ಣದ ರೆಕ್ಕೆ, ಕಣ್ಣೊಳಗೆ ತುಂಬಿದ ಸಾವಿನ ಭಯ ಎಷ್ಟೆಲ್ಲ ಇದೆಯಲ್ಲ ನೋಡಬೇಕಾದದ್ದು. ಊಹೂಂ ನಾವು ಗಮನ ಕೇಂದ್ರಿತರಾಗದಿದ್ದರೆ ನಮಗೆ ನೂರಕ್ಕೆ ನೂರು ಬೀಳುವುದಿಲ್ಲ. ತೊಂಭತ್ತೊಂಭತ್ತು ಬಿದ್ದರೂ ಅದು ಸೋಲು. ಮತ್ತಿಲ್ಲಿ ಸೋಲೆಂದರೆ ಅದು ಸಾವು.

ನಾನು ವಾಣಿಜ್ಯಶಾಸ್ತ್ರದ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದೊಡನೆ ಲೆಕ್ಕಶಾಸ್ತ್ರದ ಜೊತೆಜೊತೆಗೆ ಹಲವಾರು ಉಪ ವಿಷಯಗಳನ್ನು ಕಲಿಸುವ ಸಂದರ್ಭ ಬಂದಿತು. ಅದರಲ್ಲಿ ನನಗೆ ಶೇರು ಪೇಟೆ ಇತ್ಯಾದಿಗಳಿರುವ ಹಣಕಾಸಿನ ವಿಷಯವೊಂದನ್ನು ಕಲಿಸುವ ಪರಿಸ್ಥಿತಿ ಬಂದಾಗ ಚೆನ್ನಾಗಿ ಓದಿ ನೋಟ್ಸ ಮಾಡಿಕೊಂಡು ಕಲಿಸಿದೆನಾದರೂ ಸ್ವತ: ನನಗೇ ಇಷ್ಟವಿಲ್ಲದ ವಿಷಯವಾದ್ದರಿಂದ ಮನಸ್ಸಿಗೆ ಬಹಳ ಕಸಿವಿಸಿಯಾಯಿತು. ವಿದ್ಯಾಥರ್ಿಗಳಿಗೆ ಅಂಕಗಳು ಬರುವಂತೆ ಬೋಧಿಸಿದ್ದೆ ಆದರೆ ಆಸಕ್ತಿ ಹುಟ್ಟಿಸಿದೆನಾ? ತಕ್ಷಣ ಮುಂದಿನ ಸೆಮಿಸ್ಟರಿನಿಂದ ಆ ವಿಷಯವನ್ನು ಬದಲಾಯಿಸಿಕೊಂಡೆ. ಸುಮಾರು ಇಪ್ಪತ್ತೈದಕ್ಕೂ ಹೆಚ್ಚಿನ ವಿಷಯಗಳಿರುವ ಈ ಶಾಖೆಯಲ್ಲಿ ಎಲ್ಲರೂ ಎಲ್ಲವನ್ನೂ ಕಲಿಸಲು ಎಲಿಜಿಬಲ್ (ವಿದ್ಯಾರ್ಹತೆ ಪ್ರಕಾರ) ಪಾಠದ ತಯಾರಿಯೊಂದಿಗೆ ಕಲಿಸುತ್ತೇವಾದ್ದರಿಂದ ಸಮರ್ಥರೂ ಹೌದು. ಫಲಿತಾಂಶದ ಮಾನದಂಡದೊಂದಿಗೆ ನೋಡಿದರೆ ಯಶಸ್ವಿಗಳೂ ಹೌದು. ಆದರೆ ರುಚಿ-ಅಭಿರುಚಿಯ ಪ್ರಶ್ನೆ ಬಂದಾಗ ನಾವು ಕೆಲವನ್ನು ಮಾತ್ರ ಕಲಿಸಲು ಸಾಧ್ಯ. ಮತ್ತು ಅದೇ ನಿಜವಾದ ಬೋಧನೆ. ನನಗೆ ಇಷ್ಟವಾದ ವಿಷಯ ಕಲಿಸುವಾಗ ನನ್ನ ವಿದ್ಯಾತರ್ಿಗಳ ಪ್ರತಿಕ್ರಿಯೆಯನ್ನು ಗಮನಿಸಿದ್ದೇನೆ. ಮೊದಮೊದಲು ಎಲ್ಲೆಲ್ಲೊ ನೋಡುತ್ತಿರುವವರು, ಏನೇನೊ ಮಾಡುತ್ತಿರುವವರು ನಿಧಾನವಾಗಿ ಗಮನ ಕೊಡಲಾರಂಭಿಸುತ್ತಾರೆ. ಕ್ರಮೇಣ ಅವರೂ ಆಸಕ್ತರಾಗುತ್ತ ತಲ್ಲೀನರಾಗುತ್ತಾರೆ. ಅಂತಹ ಎಷ್ಟೊ ಸಂದರ್ಭಗಳಲ್ಲಿ ಒಂದು ಘಂಟೆಯಾದದ್ದು ಇಬ್ಬರಿಗೂ ತಿಳಿಯುವುದಿಲ್ಲ. ಮುಂದಿನ ತರಗತಿಯ ಬೋಧಕ ಬಾಗಿಲಿಗೆ ಬಂದು ಎಚ್ಚರಿಸಿದಾಗ ನೀವೇ ಕಂಟಿನ್ಯು ಮಾಡ್ರಿ ಮೇಡಂ ಎಂದಿದ್ದೂ ಉಂಟು. ಇದಕ್ಕೆ ಕಾರಣ ವಿಷಯದ ಬಗೆಗಿನ ಪ್ರೀತಿ ಸಾಂಕ್ರಾಮಿಕವಾಗಿ ಹುಡಗರಿಗೂ ಹಬ್ಬಿದ್ದು.

2

ಯಾವ ಪಾಠದಿಂದ ಕೇಳುತ್ತಿರುವ ವಿದ್ಯಾಥರ್ಿ ಮತ್ತು ಕಲಿಸುತ್ತಿರುವ ಶಿಕ್ಷಕ ಇಬ್ಬರೂ ಪಾಠದಲ್ಲಿ ತಲ್ಲೀನರಾಗಿ ತಮ್ಮನ್ನು ತಾವು ಮರೆತು ಸುಖಿಸಬಲ್ಲರೊ ಅದು ನಿಜವಾದ ಪಾಠವಾಗಿರುತ್ತದೆ. ಪಾಠವೆಂದರೆ ಕೇವಲ ಒಂದು ಗಂಟೆಗಳ ಕಾಲ ಸಿಲೆಬಸ್ ನೊಳಗಿನ ಅಂಶವೊಂದನ್ನು ಮೊಸ್ಟ ಲೈಕಲಿ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗುವಂತೆ ತಿಳಿಸುವ ಕಂಠತ್ರಾಣದ ಕಸುಬಲ್ಲ. ಅದ್ಭುತ ಪಾಠವೊಂದರ ಕೊನೆಯಲ್ಲಿ ಬೋಧಕ-ವಿದ್ಯಾಥರ್ಿ ಇಬ್ಬರಲ್ಲೂ ಹೊಟ್ಟೆ ತುಂಬಿದ ತೃಪ್ತಿ, ಈಜಿ ಬಂದ ಉತ್ಸಾಹ ಹಾಗೂ ಜೊತೆಗೆ ಪ್ರಾರ್ಥನೆ ಮುಗಿಸಿ ಎದ್ದವನ ಶಾಂತಿಯ ಮಂದಹಾಸ ಇರುತ್ತದೆ. ಪಾಠವೆಂದರೆ ಅದೊಂದು ರಸಯಾತ್ರೆ. ಬೋಧಕ ತಾನು ಈಗಾಗಲೇ ನೋಡಿ ಬಂದ ತನಗೆ ತುಂಬಾ ಇಷ್ಟವಾದ ರಮಣೀಯ ಪಿಕ್ನಿಕ್ ಜಾಗಕ್ಕೆ ತನ್ನ ವಿದ್ಯಾಥರ್ಿಗಳನ್ನು ಕರೆದೊಯ್ದ ಹಾಗೆ. ಹಿತವಾದ ಮಳೆಯಲ್ಲಿ ಒಂದೇ ದೊಡ್ಡ ಕೊಡೆಯೊಳಗೆ ಹೆಜ್ಜೆ ಹಾಕುತ್ತ, ಒಂಚೂರೇ ನೆನೆಯುತ್ತ ಚಹತೋಟ ನೋಡಿ ಬಂದ ಹಾಗೆ.

ದೇಶ ಕಂಡ ಮಹಾನ್ ಶಿಕ್ಷಕ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ಕಳೆದುಕೊಂಡ ಕೆಲವೇ ದಿನಗಳಲ್ಲಿ ಬಂದಿರುವ ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಣದ ಕುರಿತಾಗಿ ಅದೆಷ್ಟು ಯೋಚಿಸಿದರೂ ಕಡಿಮೆಯೇ ಆಗಬಹುದೇನೊ ಅನ್ನಿಸುತ್ತಿದೆ.

‍ಲೇಖಕರು avadhi-sandhyarani

September 5, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: