'ನನಗೆ ಕೃಷ್ಣನೆಂದರೆ….' – ರಶ್ಮಿ ಕಾಸರಗೋಡು

10997338_10153154924666057_3972767368417214766_n

ರಶ್ಮಿ ಕಾಸರಗೋಡು

ಶ್ರೀಕೃಷ್ಣಾಷ್ಟಮಿ ಬಂದಾಗಲೆಲ್ಲಾ ಹಳೆಯ ನೆನಪುಗಳು ದಾಂಗುಡಿಯಿಡಲು ಶುರುಮಾಡುತ್ತವೆ. ಬಾಲ್ಯದಲ್ಲಿ ಪ್ರತೀ ಹೆತ್ತವರಿಗೂ ತಮ್ಮ ಮಗುವಿಗೆ ಕೃಷ್ಣನ ವೇಷ ಹಾಕಬೇಕು ಎಂಬ ಆಸೆ ಇದ್ದರೂ ನಮ್ಮ ಮನೆಯಲ್ಲಿ ಅಪ್ಪ ಅಮ್ಮನಿಗೆ ಅಂಥಾ ಆಸೆ ಇರಲಿಲ್ಲ ಕಾಣುತ್ತದೆ. ಆದ್ರೆ ಚಿಕ್ಕವಳಿರುವಾಗ ಕೃಷ್ಣನ ವೇಷದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ನನಗೆ ತುಂಬಾ ಇತ್ತು. ಆಸೆ ಇದ್ದರೂ ನನಗೆ ವೇಷ ಹಾಕುವವರು ಯಾರು? ಶಾಲೆಯಲ್ಲಿ ಮುದ್ದು ಮುದ್ದಾಗಿರುವ ಬೆಳ್ ಬೆಳ್ಳಗಿರುವ ಮಕ್ಕಳನ್ನೇ ಕೃಷ್ಣನ ಪಾತ್ರಕ್ಕೆ ಆಯ್ಕೆ ಮಾಡುತ್ತಿದ್ದರು. ನಾನೇನಿದ್ದರೂ ಸೇವಕನ ಪಾತ್ರಕ್ಕಷ್ಟೇ ಸೀಮಿತ. ರಾಜ ರಾಣಿಯ ನಾಟಕದಲ್ಲಿ ಸೇವಕನ ಡೈಲಾಗ್ಸ್ ತುಂಬಾ ಸ್ಪಷ್ಟವಾಗಿ ಕೇಳುತ್ತಿತ್ತು ಎಂದು ಯಾರಾದ್ರೂ ಮೆಚ್ಚುಗೆಯ ಮಾತು ಹೇಳಿದರೆ, ರಾಜ ರಾಣಿಯ ಪಾತ್ರಗಳೆಲ್ಲಾ ನನ್ನ ಜತೆ ಮಾತು ಬಿಡುತ್ತಿದ್ದರು.
ಅದೇನೇ ಇರಲಿ ನಮ್ಮೂರ ಶಾಲಾ ವಾರ್ಷಿಕೋತ್ಸವದಲ್ಲಿ ಕೃಷ್ಣನ ಬಗ್ಗೆ ಒಂದು ನಾಟಕ ಇದ್ದೇ ಇರುತ್ತಿತ್ತು. ನಾಟಕದಲ್ಲಿ ಆಸಕ್ತಿ ಇದ್ದರೂ ಆ ನಾಟಕದಲ್ಲಿ ನಾನೇ ಕೃಷ್ಣ ಆಗ್ತೀನಿ ಅಂತ ಹೇಳುವ ಧೈರ್ಯವಂತೂ ಇರಲಿಲ್ಲ, ಹೇಳಿದರೂ ಅದನ್ಯಾರೂ ಒಪ್ಪುವಂತಿರಲಿಲ್ಲ. ಇಂತಿರುವಾಗ 2 ನೇ ಕ್ಲಾಸಿನಲ್ಲಿರುವಾಗ ಕನಕನ ಕಿಂಡಿ ನಾಟಕದಲ್ಲಿ ಕಡು ನೀಲಿ ಬಣ್ಣದ ಸೀರೆಯಿಂದ ಸುತ್ತಿದ ಕೃಷ್ಣನ ವಿಗ್ರಹವಾಗಿ 2 ನಿಮಿಷ ಕಾಣಿಸಿಕೊಂಡದ್ದೇ ನನ್ನ ದೊಡ್ಡ ಭಾಗ್ಯಗಳಲ್ಲೊಂದು. ಆವಾಗ ನನ್ನ ಓರಗೆಯ ಹುಡುಗಿಯರೆಲ್ಲಾ ನೀನು ಕಪ್ಪು ಅಲ್ವಾ , ಅದಕ್ಕೆ ನಿನ್ನ ವಿಗ್ರಹ ಮಾಡಿದ್ದಾರೆ ಎಂದು ತಮಾಷೆ ಮಾಡುತ್ತಿದ್ದರು. ಅವರ ಲೇವಡಿ, ಚುಚ್ಚುವ ಮಾತುಗಳನ್ನೆಲ್ಲಾ ಅಪ್ಪನ ಕಿವಿಗೆ ಊದುತ್ತಿದ್ದೆ. ಅದಕ್ಕೆ ಅಪ್ಪ, ಕಪ್ಪು ಅಂದ್ರೆ ಕೃಷ್ಣ. ನಿನಗೆ ಕೃಷ್ಣನ ಬಣ್ಣ, ಅಂಥಾ ಬಣ್ಣ ಇರುವುದಕ್ಕೆ ಖುಷಿ ಪಡಬೇಕು ಎಂದು ಸಮಾಧಾನ ಪಡಿಸುತ್ತಿದ್ದರು. ಅಲ್ಲಿಂದ ನನಗೆ ಕೃಷ್ಣನ ಮೇಲೆ ಭಕ್ತಿ ಹೆಚ್ಚಿತು. ನಾನು ಕಪ್ಪು ಎಂದು ತಮಾಷೆ ಮಾಡುತ್ತಿದ್ದ ಬಿಳಿ ಹುಡುಗಿಯರಿಗೆ ಅಪ್ಪ ಹೇಳಿದ ಉತ್ತರವನ್ನು ಕೊಟ್ಟು ಬಾಯಿಮುಚ್ಚಿಸುತ್ತಿದ್ದೆ.
ಆದ್ರೆ ನಾನು ಚಿತ್ರದಲ್ಲಿ ನೋಡುತ್ತಿದ್ದ ಮುದ್ದು ಕೃಷ್ಣರೆಲ್ಲಾ ಬೆಳ್ ಬೆಳ್ಳಗೆ, ಜವ್ವನಿಗ ಕೃಷ್ಣ ನೀಲಿ ಬಣ್ಣದಲ್ಲೂ ಇರುತ್ತಿದ್ದ. ಮತ್ತೆ ಅಪ್ಪನಲ್ಲಿ ಇದೇ ಸಂಶಯಕ್ಕೆ ಉತ್ತರ ಕೇಳಿದೆ. ನಿಜವಾಗಿಯೂ ಕೃಷ್ಣ ಕಪ್ಪು, ಅದು ಪ್ರಿಂಟ್ ಚೆನ್ನಾಗಿ ಬರಲಿ ಅಂತಾ ಆ ಬಣ್ಣಗಳನ್ನೆಲ್ಲಾ ಬಳಸುತ್ತಾರೆ ಅಂದ್ರು ಅಪ್ಪ. ಅಷ್ಟೊತ್ತಿಗೆ ಅಮ್ಮನ ಬಾಯಿಂದ ಕೃಷ್ಣ ಮಹಾತ್ಮೆಯನ್ನೆಲ್ಲಾ ಕೇಳಿ ಕೃಷ್ಣನ ಮೇಲೆ ಲವ್ವು ಶುರುವಾಗಿತ್ತು. ಏಳನೇ ಕ್ಲಾಸಿನಲ್ಲಿ ನಾನು ಮದ್ವೆ ಆಗುವುದಾದರೆ ಕೃಷ್ಣನನ್ನು  ಎಂದು ನನ್ನ ಆಪ್ತ ಸ್ನೇಹಿತೆಯೊಬ್ಬಳಲ್ಲಿ ಹೇಳಿದೆ. ಅವಳು, ಕೃಷ್ಣ ಹಲವಾರು ಅವತಾರದಲ್ಲಿ ಬರ್ತಾನಂತೆ. ಮದ್ವೆ ಆಗ್ಬಹುದು. ಆದ್ರೆ ಅವನು ಗೊಲ್ಲ ಗೊತ್ತಾ? ನಿಮ್ಮ ಜಾತಿ ಬೇರೆ. ಮದ್ವೆ ಆಗುವುದಾದರೂ ಹೇಗೆ ಎಂದು ದೊಡ್ಡ ಪ್ರಶ್ನೆಯನ್ನೇ ಮುಂದಿಟ್ಟಳು. ಅಲ್ಲಿಗೆ ಮದ್ವೆ ವಿಷ್ಯವನ್ನು ಬಲವಂತವಾಗಿ ದೂರ ತಳ್ಳಬೇಕಾಗಿ ಬಂತು.
1
ಹೈಸ್ಕೂಲ್ ಮೆಟ್ಟಿಲು ಹತ್ತಿದಾಗ ಮತ್ತೆ ಹುಚ್ಚು ಮನಸ್ಸಲ್ಲಿ ಏನೇನೋ ಕನಸುಗಳು. ಅದರ ನಡುವೆಯೇ ನಮ್ಮ ಹಿಂದಿ ಟೀಚರೊಬ್ಬರು ಮೀರಾ ಬಾಯಿಯ ಕಥೆಯನ್ನು ಅದೆಷ್ಟು ಸುಂದರವಾಗಿ ಹೇಳಿದ್ರು ಅಂದ್ರೆ ಮತ್ತೆ ಕೃಷ್ಣನ ಲವ್ ಚಾಪ್ಟೆರ್ ತೆರೆಯಬೇಕಾಗಿ ಬಂತು. ನವಿಲು ಗರಿ, ಕೊಳಲು ಎಲ್ಲವೂ ನನ್ನ ಇಷ್ಟವಸ್ತುಗಳಾಗಿದ್ದವು. ಗೆಳತಿಯೊಬ್ಬಳು ನೀನು ಸಚಿನ್ ತೆಂಡೂಲ್ಕರನ್ನು ಬೇಕಾದ್ರೆ ಲವ್ ಮಾಡು, ಆದ್ರೆ ದೇವರನ್ನು ಲವ್ ಮಾಡೋದಾ? ಅವನಿಗೆ ಎಷ್ಟು ಜನ ಹೆಂಡ್ತಿಯರಿದ್ದಾರೆ ಗೊತ್ತಾ? ಅವ ದೊಡ್ಡ ಪೋಕ್ರಿ ಅಂದ್ಳು. ಇನ್ಯಾರನ್ನೋ ಲವ್ ಮಾಡಿ ಬೇಜಾರಾಗುವುದಕ್ಕಿಂತ ಒನ್ ಸೈಡ್ ಲವ್ ನನಗಿಷ್ಟ ಎಂದೆ. ಅವಳು ನಿನ್ನ ತಲೆ ಎಂದು ಸುಮ್ಮನಾದಳು. ಆಮೇಲೆ ಕಾಲೇಜು ಮೆಟ್ಟಿಲು ಹತ್ತುವ ಹೊತ್ತಿಗೆ ಕೃಷ್ಣನನ್ನು ಇಷ್ಟಪಡುವ ನಾಲ್ಕೈದು ಹುಡುಗಿಯರೇ ನನಗೆ ಗೆಳತಿಯರಾಗಿದ್ದರು. ನಾವು ಮಾತಾಡಿದರೆ ಅದರಲ್ಲಿ ಕೃಷ್ಣನ ವಿಷಯ ಬರದೇ ಇರುತ್ತಿರಲಿಲ್ಲ. ಆದರೂ, ನಾವು ಇಷ್ಟ ಪಡುವ ಕೃಷ್ಣ ನಿಜವಾಗ್ಲೂ ಹೇಗಿದ್ದಾನೆ? ಎಂಬ ಕುತೂಹಲ ಎಲ್ಲರಿಗೂ.
ಕೃಷ್ಣ ಎಂದರೆ  ತಕ್ಷಣ ನೆನಪಿಗೆ ಬರುವ ಮುಖ ಮಹಾಭಾರತದ ಕೃಷ್ಣ ಪಾತ್ರದಾರಿ ನಿತೀಶ್ ಭಾರದ್ವಾಜ್‌ನದ್ದಾಗಿತ್ತು. ಕೃಷ್ಣ ಎಂದರೆ ಅವನೇ ಎಂದು ನಂಬಿದ ಬಾಲ್ಯವಾಗಿತ್ತು ಅದು. ಆದರೆ ಈಗ ಕೃಷ್ಣ ಹೇಗಿದ್ದಾನೆ ಎಂಬ ಹುಡುಕಾಟ ಸದಾ ನಮ್ಮಲಿರುತ್ತಿತ್ತು. ಹೊಳೆಯುವ ಕಣ್ಣು, ತೇಜಸ್ಸುಳ್ಳ ಮುಖ, ಕೊಳಲು ಬಾರಿಸಿ ಮೋಡಿ ಮಾಡುವ ಕೃಷ್ಣನ ಬಗ್ಗೆ ಕೇಳಿದ್ದ ನಾವು ಮನಸ್ಸಲ್ಲೇ ಒಂದು ರೂಪವನ್ನು ಕಲ್ಪಿಸಿದ್ದೆವು. ಅಷ್ಟೊತ್ತಿಗೆ ನಮ್ಮ ನಂಬಿಕೆಗಳ ಬಗ್ಗೆಯೇ ನಮಗೆ ಜ್ಞಾನೋದಯವಾದಂತೆ ಸುಮ್ ಸುಮ್ನೇ ಸಿಗದೇ ಇರುವ ಹುಡುಗನ್ನು ಲವ್ ಮಾಡೋದು ಯಾಕೆ? ಎಂಬ ಯೋಚನೆಯೂ ಬಂದು ಬಿಟ್ಟಿತು. ನಮ್ಮೂರಲ್ಲೊಂದು ನಂಬಿಕೆ ಇದೆ, ಹುಡುಗಿಯೊಬ್ಬಳು ಕೃಷ್ಣನನ್ನು ತುಂಬಾ ಇಷ್ಟ ಪಡುತ್ತಿದ್ದರೆ, ಅವಳ ಲವ್ ಸಕ್ಸೆಸ್ ಆಗೋಕೆ ಕೃಷ್ಣ ಬಿಡಲ್ಲ ಅಂತೆ. ಅಂದ್ರೆ ಕೃಷ್ಣ ತುಂಬಾ ಪೊಸೆಸ್ಸಿವ್, ಅವ ಯಾವ ಹುಡುಗಿಯನ್ನೂ ಅವನಿಂದ ದೂರ ಮಾಡುವುದೇ ಇಲ್ಲ ಎಂದು. ಇದೊಳ್ಳೆ ಕಥೆ ಆಯ್ತ ಅಲ್ಲಾ…ಕೃಷ್ಣನ ಲವ್ ಸ್ಟೋರಿಗೆ ಅಲ್ಲಿ ಬ್ರೇಕ್ ತರಲೇ ಬೇಕಾಯಿತು. ಲವ್ ಮಾಡಲು ಧೈರ್ಯವಿಲ್ಲದೇ ಇದ್ದರೂ, ಯಾರ ಮೇಲೂ ಲವ್ ಆಗದಂತೆ ಕೃಷ್ಣನೇ ಮಾಡ್ತಾ ಇದ್ದಾನೆ ಎಂದು ಅವನ ಮೇಲೆಯೇ ಗೂಬೆ ಕೂರಿಸಿ ನಾವು ಸುಮ್ಮನಾಗುತ್ತಿದ್ದೆವು.
ಇದೆಲ್ಲದರ ನಡುವೆ ನಂದನಂ ಎಂಬ ಮಲಯಾಳಂ ಚಿತ್ರ ನೋಡಿ, ಅಲ್ಲಿ ಬಾಲಾಮಣಿಯ ಕೃಷ್ಣ ಆರಾಧನೆ ಕೂಡಾ ನಮ್ಮಂತೆಯೇ ಇದೆ ಅಲ್ವಾ ಅನಿಸಿತ್ತು. ಸಿನಿಮಾದಲ್ಲಿರುವಂತೆ ಉಣ್ಣಿ ಕೃಷ್ಣನ್ ನ ರೂಪದಲ್ಲಿ ಭಗವಾನ್ ಕೃಷ್ಣ ಬರುತ್ತಾನೆ ಎಂಬ ಭರವಸೆ ಮತ್ತೆ ಚಿಗುರೊಡೆಯ ತೊಡಗಿದ್ದು ಈ ಸಿನಿಮಾ ನೋಡಿದ ನಂತರವೇ. ನಾವು ಯಾರನ್ನಾದರೂ ತುಂಬಾ ಇಷ್ಟ ಪಡುತ್ತಿದ್ದರೆ, ಅವರು ಎಷ್ಟೇ ದೂರದಲ್ಲಿರಲಿ ನಾವು ಪ್ರೀತಿಸುತ್ತಿರುವ ವಿಷ್ಯ ಹೇಳದೆಯೇ ಅವರಿಗೆ ಅದು ಗೊತ್ತಾಗುತ್ತದೆ ಎಂದು ಅಪ್ಪ ಹೇಳ್ತಾರೆ. ಆ ಮಾತುಗಳನ್ನು ನಂಬಿಕೊಂಡೇ ಬಂದ, ನಂಬುತ್ತಿರುವ ಹುಡುಗಿ ನಾನು. ವರುಷಗಳು ಉರುಳಿದಂತೆ ಅನಿಸಿಕೆಗಳು, ನಂಬಿಕೆಗಳು ಮಾರ್ಪಾಡಾಗುತ್ತಾ ಬಂದುವು. ಆದರೂ ಕೃಷ್ಣನ ಮೇಲಿನ ಆಕರ್ಷಣೆ, ಭಕ್ತಿ ಯಾವತ್ತೂ ಕಡಿಮೆಯಾಗಿಲ್ಲ. ಕೃಷ್ಣನೆಂದರೆ ನನಗೆ ಕೌತಕ ಹುಟ್ಟಿಸಿದವ, ಪ್ರೇಮದ ಅನುಭೂತಿ ನೀಡಿದವ…ಎಲ್ಲದಕ್ಕಿಂತಲೂ ಹೆಚ್ಚಾಗಿ ಕೃಷ್ಣವರ್ಣವಾಗಿ ನನ್ನಲ್ಲೇ ಬೆರೆತವ.

‍ಲೇಖಕರು avadhi-sandhyarani

September 5, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: