ಟೈಮ್ ಪಾಸ್ ಕಡ್ಲೆ ಕಾಯ್ : ಬಾಸುಗಳು ಮತ್ತು ಡೂಸುಗಳು!

ಎಸ್.ಜಿ.ಶಿವಶಂಕರ್

‘ಹೊಟ್ಟೆಗಿಷ್ಟು ಕೂಳು, ಮೈಮುಚ್ಚಲು ಬಟ್ಟೆ, ತಲೆಯ ಮೇಲೊಂದು ಸೂರು ಮಾನವನ ಮೂಲಭೂತ ಅವಶ್ಯಕತೆ’ ಎಂಬ ಮಾತು ಇಂದು ನೆನ್ನೆಯದಲ್ಲ. ಆದರೆ ಈ ಮಾತನ್ನೀಗ ಬದಲಾಯಿಸುವ ಕಾಲ ಸನ್ನಿಹಿತವಾಗಿದೆ ಎನ್ನುವುದು ನನ್ನ ಖಚಿತವಾದ ಅಂಬೋಣ. ಏನೆಂದು ಬದಲಿಸಬೇಕು ಎಂಬ ಪ್ರಶ್ನೆ ನಿಮ್ಮ ಬಾಯ ತುದಿಯಲ್ಲಿದೆ ಎಂಬುದು ನನಗೆ ಗೊತ್ತಿದೆ (ನೀವೇನಾದರೂ ಈ ಲೇಖನ ಓದುವ ತಪ್ಪು ಮಾಡಿದ್ದರೆ!)

ಇತ್ತೀಚಿನ ದಿನಗಳಲ್ಲಿ ತಾಪೇದಾರಿ ಮಾಡುವುದು ಗಂಡಸರಿಗೇ ಏಕೆ ಹೆಂಗಸರಿಗೂ ಅನಿವಾರ್ಯವಾಗಿಬಿಟ್ಟಿದೆ. ಹೀಗೆ ಹೊಟ್ಟೆಪಾಡಿಗಾಗಿ ಕೆಲಸ ಮಾಡುವಾಗ ನಮಗೊಬ್ಬ ಮೇಲಧಿಕಾರಿ ಇದ್ದೇ ಇರುತ್ತಾನೆ. ಆತನನ್ನು ‘ಬಾಸ್’ ಎಂದು ಕರೆಯುವುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಆಗಿಬಿಟ್ಟಿದೆ. ಹತ್ತು ವರ್ಷಗಳ ಹಿಂದೆ ‘ಬಾಸ್’ಎಂದರೆ ನಮ್ಮ ಕಣ್ಮುಂದೆ ಕಾಣಿಸುತ್ತಿದ್ದುದು ಹಿಂದೀ ಸಿನಿಮಾಗಳ ಖಳರು ಮತ್ತು ಖೂಳರು! ಅಂದಿನ ಕಾಲದ ಪ್ರಾಣ್, ಫೈಟರ್ ಶೆಟ್ಟಿ ಮುಂತಾದ ನಟರು ಕಣ್ಮುಂದೆ ಸುಳಿದಾಡುತ್ತಾರೆ. ಈ ಕಾಲಕ್ಕೆ ‘ಬಾಸ್’ ಎಂಬ ಪದದ ಪರಿಕಲ್ಪನೆ ಬದಲಾಗಿದೆ. ಇಂಗ್ಲಿಷ್ ಬಾಷೆಯಿಂದ ಎರವಲು ಪಡೆದ ಪದ ಇದು. ಈಗ ಬಾಸ್ ಎಂದರೆ ನಮ್ಮ ಮೇಲಧಿಕಾರಿ ಎಂದು ತಿಳಿಯುತ್ತಾರೆ. ಇಂದಿನ ದಿನಗಳಲ್ಲಿ ಎಲ್ಲ ತಾಪೇದಾರಿ ಕೆಲಸ ಮಾಡುವವರಿಗೂ ಒಬ್ಬ ಬಾಸು ಇದ್ದೇ ಇರುತ್ತಾನೆ/ಇರುತ್ತಾಳೆ; ಈಗೀಗ ಬಾಸ್ ಸ್ಥಾನವನ್ನು ಹೆಂಗಸರೂ ತುಂಬುತ್ತಿದ್ದಾರೆ. ಹೆಂಗಳೆಯರನ್ನೂ ಬಾಸ್ ಎಂದು ಕರೆಯಬೇಕೋ ಇಲ್ಲಾ ಬಾಸಿಣಿ ಎಂದು ಕರೆಯಬೇಕೋ ಅದನ್ನು ನಾನು ನಿರ್ಧರಿಸಲಾರೆ. ಅದನ್ನು ನಮ್ಮ ಭಾಷಾ ತಜ್ಞರು ನಿರ್ಧರಿಸುತ್ತಾರೆ. ಈ ಬಾಸುಗಳ ಕೈಕೆಳಗೆ ಕೆಲಸ ಮಾಡುವವರು ಅವರ ನಿರ್ದೇಶನಗಳಿಗನುಸಾರವಾಗಿ ಕೆಲಸ ಮಾಡಬೇಕಾಗುತ್ತದೆ.

ಕೈಯಲ್ಲಿನ ಐದು ಬೆರಳುಗಳು ಹೇಗೆ ವಿವಿಧ ಎತ್ತರ, ಆಕಾರದವೋ ಹಾಗೆಯೇ ಈ ಬಾಸುಗಳೂ ಸಹ ಬೇರೆಬೇರೆ ರೀತಿಯವರಾಗಿರುತ್ತಾರೆ. ಅವರ ಎತ್ತರ, ತೂಕ, ಜೀವನ ಶೈಲಿ, ಕಾರ್ಯವೈಖರಿ, ಮಾತಾಡುವ ವಿಧಾನ, ಸುಳ್ಳು ಹೇಳುವ ಕಲೆ – ಎಲ್ಲವೂ ವೈವಿಧ್ಯಮಯವಾಗಿರುತ್ತವೆ. ಅನಾದಿ ಕಾಲದಿಂದಲೂ ಬಾಸುಗಳಿಗೂ ಸುಳ್ಳುಗಳಿಗೂ ಅವಿನಾಭಾವ ಸಂಬಂಧವಿದೆ! ಬಹುತೇಕ ಎಲ್ಲ ಬಾಸುಗಳಿಗೂ ಸುಳ್ಳು ಹೇಳುವ ಚಟವಿದ್ದು ಅವರು ಹೇಳುವ ಅಸಂಖ್ಯ ಸುಳ್ಳುಗಳನ್ನು ಕೇಳಲೇಬೇಕಾಗಿರುವುದು ಅವರ ಕೆಳಗಿನವರಿಗೆ ಅನಿವಾರ್ಯ! ಸುಳ್ಳಿಗೆ ಅನೇಕ ಪರ್ಯಾಯ ಪದಗಳಿವೆ. ಅದೇಕೋ ಏನೋ..ಗ್ರಂಥಸ್ಥವಾಗಿ ಸುಳ್ಳು ಎನ್ನುವ ಪದ ಬಳಕೆಯಲ್ಲಿದ್ದರೂ ಆಡುಬಾಷೆಯಲ್ಲಿ ಅದು ‘ಬುರುಡೆ’, ‘ಗ್ಯಾಸು’, ‘ರೀಲು’, ‘ಕಂಬಿಯಿಲ್ಲದ ರೈಲು’, ‘ಡೂಸು’ ಮುಂತಾದ ಪದ ಪ್ರಯೋಗದಿಂದ ಕಂಗೊಳಿಸುತ್ತದೆ. ಈ ಅನೇಕ ಪದಗಳಲ್ಲಿ ತುಂಬಾ ಪ್ರಚಲಿತವಾಗಿರುವ ‘ಡೂಸು’ ಎಂಬ ಪದವನ್ನು ನಾನಿಲ್ಲಿ ಪ್ರಯೋಗಿಸಿದ್ದೇನೆ.

ಮನುಷ್ಯ ಜೀವನ ಸರಳವಾಗಿದ್ದಾಗ, ಮೋಸ-ತಟವಟ ಗೊತ್ತಿಲ್ಲದ ಕಾಲದಲ್ಲಿ, ನನ್ನ ಲೇಖನದ ಮೊದಲನೆಯ ಸಾಲು ಸಲ್ಲುತ್ತಿದ್ದಿತೇನೋ..? ಆದರೆ ಈಗ ನಾವು ಇಪ್ಪತ್ತೊಂದನೆಯ ಶತಮಾನದ ಆದಿಯಲ್ಲಿರುವ ಸಮಯದಲ್ಲಿ, ನ್ಯಾಯವಾದ ಬದುಕು ಅಂದರೇನು ಎಂದೇ ತಿಳಿಯದ ಈ ಕಾಲದಲ್ಲಿ, ಅನಾದಿ ಕಾಲದಿಂದಲೂ ಒಪ್ಪಿರುವ ‘ಅನ್ನ, ಬಟ್ಟೆ ಮತ್ತು ಸೂರು ಮಾನವನ ಮೂಲಭೂತ ಅವಶ್ಯಕತೆಗಳು ಎಂಬ ಮಾತನ್ನು ರೀತಿಯಲ್ಲಿ ಬದಲಿಸಬೇಕಾದ ಸಮಯ ಸನ್ನಿಹಿತವಾಗಿದೆ. ಹೇಗೆ ಬದಲಾಯಿಸಬೆಕಾಗುತ್ತದೆ ಎಂದರೆ: ‘ಹೊಟ್ಟೆಗಿಷ್ಟು ಕೂಳು, ಮೈಮುಚ್ಚಲು ಬಟ್ಟೆ,, ತಲೆಯ ಮೇಲೆ ಸೂರು, ಕೆಲಸದಲ್ಲಿ ಒಬ್ಬ ಬಾಸು ಮನುಷ್ಯನ ಮೂಲಭೂತ ಅವಶ್ಯಕತೆ!’ ಏನು? ಇಷ್ಟಕ್ಕೇ ಆಕಳಿಕೆ ಬಂತೆ..? ಮೊದಲನೆಯ ಪ್ಯಾರಾವೇ ಇಷ್ಟು ಭಯಂಕರವಾಗಿರಬೇಕಾದರೆ ಇನ್ನು ಲೇಖನ ಯಾವ ಮಟ್ಟದಲ್ಲಿದ್ದೀತು ಎಂಬ ಆನುಮಾನ ಉಂಟಾಗಿದೆಯೆ? ಉದಾಸೀನದಿಂದ ನಿದ್ರೆ ಆವರಿಸುತ್ತಿದೆಯೆ? ಇನ್ನೂ ವಿಷಯದ ಪ್ರಸ್ತಾವನೆಯ ಅಗಿಲ್ಲ!? ಅದುದರಿಂದ ನೀವು ನಿದ್ರೆಯನ್ನು ತಡೆಯುವುದು ಅನಿವಾರ್ಯ ಎಂದು ಇಲ್ಲಿಯೇ ನಿಮಗೊಂದಿಷ್ಟು ಎಚ್ಚರಿಕೆ ಕೊಟ್ಟು ಮುಂದುವರಿಸುವೆ.

ಬಾಸುಗಳ ಬಗೆಗೆ ಹೆಚ್ಚು ಹೇಳುವ ಅವಶ್ಯಕತೆಯೇ ಇಲ್ಲ. ಏಕೆಂದರೆ ಪ್ರತಿ ಮಾನವನಿಗೂ ಒಬ್ಬ ಬಾಸು ಇರುವುದರಿಂದ ಅವರ ಪ್ರವೃತ್ತಿಗಳ ಬಗೆಗೆ ಕೆಳಗಿನವರಿಗಾಗಲೇ ತಿಳಿದಿರುತ್ತದೆ. ಬಾಸುಗಳ ಪ್ರವೃತ್ತಿಗಳ ಬಗೆಗೆ ಹೇಳುವುದೆಂದರೆ ಮರಳಿನ ರಾಶಿಯಲ್ಲಿ ಮರಳ ಕಣಗಳನ್ನು ಎಣಿಸಿದಂತೆ; ಆಕಾಶದಲ್ಲಿ ನಕ್ಷತ್ರಗಳನ್ನು ಎಣಿಸಿದಂತೆ! ಎಲ್ಲರಿಗೂ ಒಬ್ಬ ಬಾಸು ಇರುವ ಬಗೆಗೆ ನಿಮಗೊಂದಿಷ್ಟು ಅನುಮಾನ ಬಂದಿರಬಹುದು. ಅತಿ ಉನ್ನತ ಹುದ್ದೆಯಲ್ಲಿರುವವರಿಗೆ ಯಾರು ಬಾಸು? ಈ ಯೋಚನೆ ನಿಮ್ಮನ್ನು ಹಳೆ ಚರ್ಮ ರೋಗದಂತೆ ಬಾಧಿಸಬಹುದು. ಅದಕ್ಕೆ ಸಮಂಜಸವಾದ ಉತ್ತರವನ್ನು ನಾನು ಕೊಡಬಲ್ಲೆ. ನಾನು ಹುಡುಗನಾಗಿದ್ದ ಕಾಲದಲ್ಲಿ ಮಕ್ಕಳು ಆಡುತ್ತಿದ್ದ ಆಟವೊಂದರ ಬಗೆಗೆ ಹೇಳುತ್ತೇನೆ. ಈಗಿನ ಮಕ್ಕಳು ಬಿಡಿ ಮೊಬೈಲು, ಕಂಪ್ಯೂಟರಿನಲ್ಲಿ ಇಲ್ಲವೇ ವಿಡಿಯೋ ಆಟಗಳನ್ನು ಆಡುತ್ತಾರೆ. ಅವರಿಗೆ ಬುಗರಿ, ಚಿಣ್ಣಿ ಕೋಲು, ಗೋಲಿ, ಗಾಳಿಪಟ, ಮರಕೋತಿ ಮುಂತಾದ ಆಟಗಳು ಖಂಡಿತಾ ಗೊತ್ತಿಲ್ಲ. ಗೊತ್ತಿರುವುದಿರಲಿ ಕೇಳಿಯೂ ಇರುವುದಿಲ್ಲ. ಬಹುಶಃ ರಾಜಕಾರಿಣಿಗಳ ಮಕ್ಕಳು ಆಳುವ ಪಕ್ಷ-ವಿರೋಧ ಪಕ್ಷದ ಆಟ, ಸರ್ಕಾರ ಉರುಳಿಸುವ ಆಟ, ಲೋಕಯುಕ್ತ ಆಟ, ಇಲ್ಲವೇ ಎಲೆಕ್ಷನ್ ಆಟ ಆಡಬಹುದೇನೊ? ಪೋಲೀಸರಮಕ್ಕಳು, ವೀರಪ್ಪನ್-ಪೋಲೀಸ್ ಆಡಬಹುದು. ಸಿನಿಮಾ ಮಂದಿಯ ಮಕ್ಕಳು ಅಂತ್ಯಾಕ್ಷರಿ ಇಲ್ಲವೇ ಷೂಟಿಂಗ್, ಪಾರ್ಟಿ ಮುಂತಾದ ಆಟಗಳನ್ನು ಆಡಬಹುದು. ಇವೆಲ್ಲಾ ನನ್ನ ಅನಿಸಿಕೆ. ಬಹುತೇಕ ಮಕ್ಕಳನ್ನು ನಾನು ನೋಡಿರುವುದು ಕಣ್ಣು-ಬಾಯಿ ತೆರೆದು ಟಿವಿ ಮುಂದೆ ಇಲ್ಲಾ ಕಂಪ್ಯೂಟರ್ ಮುಂದೆ ಕುಳಿತಿರುವ ಇಲ್ಲಾ ಮಲಗಿರುವ ಭಂಗಿಯಲ್ಲಿಯೇ!

ಈಗ ನಾನು ಉಲ್ಲೇಖಿಸುತ್ತಿದ್ದ ಆಟದ ವಿಷಯಕ್ಕೆ ಬರೋಣ. ಆಟದ ಪ್ರಾರಂಭ ನನಗೆ ಮರೆತಿದೆ. ಆದರೆ ಆಟದ ಯಾವುದೋ ಹಂತದಲ್ಲಿ ಇಬ್ಬರು ಹುಡುಗರ ನಡುವೆ ಹಣ್ಣೊಂದನ್ನು ತಿಂದ ನಂತರ ಅದರ ಸಿಪ್ಪೆಯ ಬಗೆಗೆ ಈ ರೀತಿ ಸಂವಾದ ನಡೆಯುತ್ತದೆ: ಸಿಪ್ಪೆ ಎಲ್ಲಾ ಏನ್ಮಾಡಿದೆ..?, ಬಾಗಿಲು ಹಿಂದೆ ಹಾಕ್ದೆ, ಬಾಗಿಲು ಏನು ಕೊಡ್ತು?, ಬಾಗಿಲು ಸೌದೆ ಕೊಡ್ತು, ಸೌದೆ ಏನ್ಮಾಡ್ದೆ?, ಒಲೆಗೆ ಹಾಕ್ದೆ, ಒಲೆ ಏನು ಕೊಡ್ತು..? ಹೀಗೆ ಅಂತ್ಯವಿಲ್ಲದೆ ಆಟ ಸಾಗುತ್ತದೆ. ಯಾಕೆ ಈ ಮಾತು ಹೇಳಿದೆನೆಂದರೆ ಎಲ್ಲ ಬಾಸುಗಳಿಗೂ ಇನ್ನೊಬ್ಬ ಬಾಸು, ಆ ಇನ್ನೊಬ್ಬ ಬಾಸಿಗೂ ಮತ್ತೊಬ್ಬ ಬಾಸು ಹೀಗೆ ಮೇಲೆ ಹೇಳಿದ ಆಟದಂತೆ ಬಾಸುಗಳ ಸರಪಳಿ ಬೆಳೆಯುತ್ತದೆ. ಸರ್ಕಾರಿ ಕಚೇರಿಯಲ್ಲಾಗಲೀ, ಖಾಸಗಿ ಕಂಪೆನಿಯಲ್ಲಾಗಲೀ, ಹೋಟೆಲು, ಸಿನಿಮಾ ಥಿಯೇಟರು, ಕೇಶ ಕರ್ಮಶಾಲೆ-ಇಲ್ಲಾ ಇನ್ಯಾವುದೇ ರೀತಿಯ ವ್ಯಾಪಾರೀ ಸಂಸ್ಥೆಗಳಲ್ಲಾಗಲಿ ಬಾಸುಗಳು ಇದ್ದೇ ಇರುತ್ತರೆ; ಬ್ಯಾಕ್ಟೀರಿಯಾಗಳಂತೆ ಎಲ್ಲ ಕಡೆ ಹರಡಿಕೊಂಡಿರುತ್ತಾರೆ. ಎಲ್ಲ ಬಾಸುಗಳಿಗೂ ಡೂಸು ಬಿಡುವ ಚಟ ಕೊಂಚ ಹೆಚ್ಚಾಗಿಯೇ ಇರುತ್ತದೆ. ಹಾಗಾದರೆ ಡೂಸು ಬಿಡದ ಬಾಸುಗಳೇ ಇಲ್ಲವೆ..? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಉತ್ತರ: ಅಂತವರು ಇರಬಹುದು, ಆದರೆ ಅವರ ಸಂಖ್ಯ ಅಲ್ಪ! ಅಂತವರನ್ನು ನನ್ನ ಲೇಖನದ ವ್ಯಾಪ್ತಿಯಲ್ಲಿ ಸೇರಿಸಿಲ್ಲ.

ಬಾಸುಗಳ ಡೂಸು ಬಿಡುವ ಚಟ ನಿಮ್ಮ ಗಮನಕ್ಕೂ ಬಂದಿರಬಹುದು. ಕಾರಣ ನಿಮಗೂ ಒಬ್ಬ ಬಾಸು ಇರಬಹುದು. ಇಲ್ಲವೇ ನೀವೇ ಬಾಸಾಗಿರಬಹುದು. ನೀವೇ ಬಾಸಾಗಿದ್ದರೂ ನಿಮಗೂ ಒಬ್ಬ ಬಾಸು ಇದ್ದೇ ಇರುತ್ತಾರೆ. ಇದನ್ನು ನೀವು ಒಪ್ಪುತ್ತೀರಾ ಎಂದು ನಂಬಿದ್ದೇನೆ. ಈ ಡೂಸು ಬಿಡುವುದು ಒಂದು ರೋಗ ಎಂದೇ ನಾನು ಘೋಷಿಸುತ್ತೇನೆ. ಆದರೆ ಇದೆಂತಾ ರೋಗ ಎಂದು ವರ್ಣಿಸುವುದು ಕಷ್ಟ! ರೋಗ ಲಕ್ಷಣಗಳನ್ನು ಹೇಳಬಹುದು, ರೋಗಿ ಹೇಗೆ ವರ್ತಿಸುತ್ತಾನೆಂದು ಹೇಳಬಹುದು ಆದರೆ ರೋಗದ ಮೂಲವನ್ನು ಮತ್ತು ಅದಕ್ಕೆ ಉಪಶಮನವನ್ನು ಮಾತ್ರ ಹೇಳಲು ಸಾಧ್ಯವಾಗದಿರುವುದು ನನ್ನ ಮತಿಯ ಮಿತಿ ಎಂದು ನಮ್ರತೆಯಿಂದ ಒಪ್ಪುತ್ತೇನೆ. ಇದೆಂತಾ ರೋಗ ಎಂದು ನನಗಿನ್ನೂ ಅರ್ಥವಾಗಿಲ್ಲ. ಏಕೆಂದರೆ ನನ್ನ ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದವರೊಬ್ಬರು ಬಡ್ತಿ ಪಡೆದು ಬಾಸಾದ ಮೇಲೆ ಅದುವರೆಗೂ ಇಲ್ಲದ ಡೂಸು ಬಿಡುವ ರೋಗಕ್ಕೆ ತುತ್ತಾಗಿದ್ದರು! ಆಂದರೆ ಇದು ವಿಚಿತ್ರ ರೋಗ ಎನ್ನುವುದರಲ್ಲಿ ಅನುಮನವೇ ಬೇಡ! ಈ ಖಾಯಿಲೆಯ ಇನ್ನೊಂದು ಅಚ್ಚರಿಯ ವಿಷಯವನ್ನು ಹೇಳಲೇಬೇಕು. ಅದೆಂದರೆ ಈ ಖಾಯಿಲೆಯಿಂದ ಇದುವರೆವಿಗೂ ಯಾರಿಗೂ ಯಾವ ರೀತಿಯಿಂದಲೂ ಅಪಾಯವಾಗಿಲ್ಲ, ಯಾರ ಪ್ರಾಣವೂ ಹೋಗಿಲ್ಲ! ಈ ಮಾತನ್ನು ನೀವು ಖಂಡಿತಾ ಒಪ್ಪದಿರಲು ಸಾಧ್ಯ! ಏಕೆಂದರೆ ಕೆಲವು ಬಾಸುಗಳು ಬಿಡುವ ಡೂಸುಗಳಿಂದ ಪ್ರಾಣ ಹೋಗುವಂತಹ ಹಿಂಸೆಯಾಗಬಹುದು! ಇಲ್ಲವೇ ತಲೆ ನೋವು ಬರಬಹುದು! ಕೇಳಲಸಾಧ್ಯವಾದಾಗ ಡೂಸು ಬಿಡುವವರ ತಲೆಯ ಮೇಲೆ ಮೊಟಕಿಬಿಡುವ ಉಗ್ರ ಕೋಪವೂ ಬರಬಹುದು! ಆದರೆ ಪ್ರಾಣ ಹೋಗುವುದಿಲ್ಲ! ಇದರ ಗ್ಯಾರಂಟಿಯನ್ನು ನಾನೇ ಕೊಡುತ್ತೇನೆ!

ಬಾಸುಗಳು ಡೂಸುಗಳನ್ನು ಏಕೆ ಬಿಡುತ್ತಾರೆಂಬುದು ನನಗೇ ಏಕೆ, ನಿಮಗೂ ಸಹ ಅರ್ಥವಾಗಿರುವುದಿಲ್ಲ. ಇದಕ್ಕೆ ಸ್ಪಷ್ಟವಾದ ಕಾರಣಗಳು ಗೋಚರಿಸಿದಿದ್ದರೂ ತಮ್ಮ ಕೆಳಗಿನವರ ಮುಂದೆ ತಾನೆಷ್ಟು ಬುದ್ಧಿವಂತ, ಚಾಣಾಕ್ಷ, ಪ್ರಭಾವಶಾಲಿ, ಗಟ್ಟಿಗ, ಧೀರ-ಶೂರ ಎಂದು ತೋರಿಸಿಕ್ಕೊಳ್ಳಲಿಕ್ಕಾಗಿಯೇ ಡೂಸು ಬಿಡುವುದು ಎಂಬುದು ಸೂರ್ಯನ ಬೆಳಕಿನಂತೆ ಪ್ರಕಾಶಿಸುತ್ತದೆ. ಅದರಲ್ಲಿಯೂ ಮಹಿಳಾ ಉದ್ಯೋಗಿಗಳ ಮುಂದಂತೂ ಬಾಸುಗಳ ಡೂಸುಗಳು ಮತ್ತಷ್ಟು ವೈವಿಧ್ಯಮಯವಾಗಿ ಬಿಡುತ್ತವೆ. ಅವಿವಾಹಿತ ತರುಣಿಯರಿದ್ದರಂತೂ ಬಾಸುಗಳ ಉತ್ಸಾಹ ಹೇಳತೀರದು; ಆತ ಯಾವ ವಯಸ್ಸಿನವನಾದರೂ ಸರಿಯೇ-ಡೂಸಿನಲ್ಲಿ ಅವನನ್ನು ಸರಿಗಟ್ಟುವವರೇ ಇಲ್ಲವೆನಿಸಿಬಿಡುತ್ತಾರೆ. ಹೀಗೆ ಕೊಚ್ಚಿಕ್ಕೊಳ್ಳುವುದರಿಂದಲೂ (ಇದನ್ನು ತುತ್ತೂರಿ ಊದುವುದು, ರೈಲುಬಿಡುವುದು- ಎಂದೂ ಕರೆಯುವುದಿದೆ), ಮಾಡಿಲ್ಲದೇ ಇರುವುದನ್ನು ಮಾಡಿದೆ ಎಂದು ಜಂಭ ಕೊಚ್ಚಿಕ್ಕೊಳ್ಳೂವುದರಿಂದ ಇವರಿಗೆ ಏನು ಸಿಗುತ್ತದೆ ಎಂದು ಅನೇಕಸಲ ನಾನು ಆಶ್ಚರ್ಯಪಟ್ಟಿದ್ದೇನೆ.

ಬಾಸುಗಳ ಡೂಸುಗಳು ಯಾವ ರೀತಿಯಲ್ಲಿರುತ್ತವೆ ಎಂಬುದಕ್ಕೆ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಇದು ನಡೆದದ್ದು ಒಂದು ಸರ್ಕಾರಿ ಕಚೇರಿಯಲ್ಲಿ. ಈ ಕಚೇರಿಗೊಬ್ಬ ಬಾಸು, ಅವನ ಕೈಕೆಳಗಿಬ್ಬರು ಸಣ್ಣ ಬಾಸುಗಳು ಮತ್ತು ಹತ್ತಾರು ಉದ್ಯೋಗಿಗಳು ಇದ್ದರು. ಈ ಕಚೇರಿಯ ಬಾಸಿನ ಬಾಸು ಇರುವುದು ಬೆಂಗಳೂರಲ್ಲಿ. ಕಚೇರಿಯ ಬಾಸು ತಿಂಗಳಲ್ಲಿ ಒಂದು ಅಥವಾ ಎರಡು ಸಲ ಕಚೇರಿಯ ಕೆಲಸದ ಮೇಲೆ ಬೆಂಗಳೂರಿಗೆ ಹೋಗುವುದಿದೆ. ಪ್ರತಿಸಲ ಹೋಗಿ ಬಂದ ಮೇಲೆ ಅಲ್ಲಿ ನಡೆದುದ್ದನ್ನು ರಸವತ್ತಾಗಿ ಇಡೀ ಕಚೇರಿಯವರಿಗೆ ತಿಳಿಸಲು ಏಕಪಾತ್ರಾಭಿನಯವನ್ನೇ ಮಾಡುತ್ತಿದ್ದರು. ಸಾಮಾನ್ಯವಾಗಿ ಹೋಗುವಾಗ ರಿಪೋರ್ಟ್ ಗಳನ್ನು ತೆಗೆದುಕೊಂಡು ಹೋಗುವುದು, ವಾಪಸ್ಸು ಬಂದು ಅದನ್ನೇ ತಿದ್ದಿ ತೀಡಿ ಮತ್ತೆ ಕಳಿಸುವುದು ಇವೆಲ್ಲಾ ಮಾಮೂಲು. ಒಮ್ಮೆ ಈ ಬಾಸು, ಅವರ ಬಾಸಿನ ಕೈಯಲ್ಲಿ ಚೆನ್ನಾಗಿ ಬೈಸಿಕೊಂಡು ಬಂದಿದ್ದರಂತೆ! ಇದನ್ನು ಗುಟ್ಟಾಗಿ ಅವರ ಜೊತೆ ಹೋಗಿದ್ದ ಸೆಕ್ಷನ್ ಆಫೀಸರ್ ಶಾಮಣ್ಣ ಹೇಳಿದ್ದರು! ಆದರೆ ಬಾಸು ಹೇಳಿದ್ದೇ ಬೇರೆ! ತಾನು ಹೇಗೆ ಬಾಸನ್ನು ತನ್ನ ಬುದ್ದಿವಂತಿಕೆ ಮತ್ತು ಚಾತುರ್ಯಗಳಿಂದ ಬೆರಗಾಗಿಸಿ ಅವರ ತಪ್ಪುಗಳನ್ನೆಲ್ಲಾ ಎತ್ತಿ ತೋರಿಸಿದೆ ಮತ್ತು ಅವರು ತನ್ನನ್ನು ಹೊಗಳಿದರು ಎಂದೆಲ್ಲಾ ಹೇಳಿಕೊಂಡಿದ್ದರಂತೆ! ತಾವು ಹೇಳುತ್ತಿರುವುದನ್ನು ತಮ್ಮ ಕೆಳಗಿನವರು ನಂಬುವುದಿಲ್ಲ ಎಂಬ ಅನುಮಾನವಿದ್ದರೂ ತಾವು ಡೂಸಿಸುವುದನ್ನು ಮಾತ್ರ ಬಿಡುವುದಿಲ್ಲ! ಕೆಲವು ಬಾಸುಗಳ ಜಾಯಮಾನವೇ ಹೀಗೆ!

ತಮ್ಮ ಮೇಲಿನವರ ಬಗೆಗೇ ಇಂಥಾ ಡೂಸುಗಳನ್ನು ಬಿಟ್ಟರೆ ಇನ್ನು ತಮ್ಮ ಕೈಕೆಳಗಿನ ಉದ್ಯೋಗಿಗಳ ಬಗೆಗೆ ಏನು ಮಾತಾಡಬಹುದು? ಕೈಯಲ್ಲಿನ ಐದೂ ಬೆರಳುಗಳು ಒಂದೇ ಸಮ ಐರುವುದಿಲ್ಲ. ಹಾಗೇ ಎಲ್ಲಾ ಉದ್ಯೋಗಿಗಳೂ ಒಂದೇ ರೀತಿಯವರಾಗಿರುವುದಿಲ್ಲ. ಅದರಲ್ಲಿ ಕೆಲವರು ಬಂಡಾಯಪ್ರವೃತ್ತಿಯವರೂ ಇರುತ್ತಾರೆ. ಅವರನ್ನು ಕೆಲಸ ಮಾಡಿ ಎಂದು ಹೇಳುವಂತೆಯೇ ಇಲ್ಲ! ಕೆಲಸ ಹೇಳಿದರೆ ಕಾನೂನು ಕಟ್ಟಲೆಗಳನ್ನು ಹೇಳಿ ಬಾಸುಗಳಿಗೇ ಮಣ್ಣು ಮುಕ್ಕಿಸುವವರು ಕಡೆಮೆಯಿಲ್ಲ! ಅಂಥಹವರನ್ನೂ ಬಾಸುಗಳು ಬಿಡುವುದಿಲ್ಲ! ತಾನು ಅವರನ್ನು ಹೇಗೆ ಬಗ್ಗಿಸಿದೆ, ಹೇಗೆ ಮೆಮೋ ಇಷ್ಯೂ ಮಾಡಿದೆ, ಹೇಗೆ ಪ್ರಮೋಶನ್ನಿಗೆ ಕಲ್ಲು ಹಾಕಿದೆ, ಹೇಗೆ ಟ್ರಾನ್ಸ್ಫರ್ ಮಾಡಿದೆ, ಅವನ ಲಾ ಪಾಯಿಂಟುಗಳನ್ನು ಹೇಗೆ ಟ್ಯಾಕಲ್ ಮಾಡಿದೆ, ಹೊಡೆಯಲು ಬಂದವನನ್ನು ತಾನು ಹೇಗೆ ಹೆದರಿಸಿದೆ, ಇಲ್ಲಾ ಮಾರಾಮಾರಿಯಲ್ಲಿ ಹೇಗೆ ಅವನನ್ನು ಮಣ್ಣುಮುಕ್ಕಿಸಿದೆ-ಮುಂತಾಗಿ ಡೂಸುಗಳನ್ನು ಬಿಡುವುದು ಮಾಮೂಲು!

ತಲೆನೋವು ಕೊಡುವ ಉದ್ಯೋಗಿಗಳಲ್ಲಿ ಹೆಣ್ಣು-ಗಂಡು ಎಂಬ ಭೇದವಿಲ್ಲ. ಎಲ್ಲ ವರ್ಗಗಳಲ್ಲೂ ತರಲೆ ಉದ್ಯೋಗಿಗಳಿದ್ದೇ ಇರುತ್ತಾರೆ. ಸಾಮಾನ್ಯವಾಗಿ ಹೆಂಗಸರಲ್ಲಿ ಇಂತಾ ತರಲೆಗಳು ಕಮ್ಮಿ. ಹೆಚ್ಚೆಂದರೆ ಅವರು ತಮ್ಮ ಡೂಸುಗಳಿಂದಲೇ ಬಾಸುಗಳನ್ನು ಕಂಗಾಲು ಮಾಡಿರುವ ಅನೇಕ ಘಟನೆಗಳನ್ನು ನಾನು ಕೇಳಿದ್ದೆನೆ ಮತ್ತು ಸ್ವತಃ ನೋಡಿದ್ದೇನೆ. ಸಾಮಾನ್ಯವಾಗಿ ತಮ್ಮ ಹೆಣ್ಣು ಉದ್ಯೋಗಿಗಳಿಂದ ಬಾಸು ಬೇಸತ್ತು, ಆಕೆಯನ್ನು ಜಬರ್ದಸ್ತಾಗಿ ದಭಾಯಿಸಬೇಕೆನ್ನುವಾಗ, ತಮ್ಮ ಇಲ್ಲವೇ ತಮ್ಮ ಕುಟುಂಬದವರ ಅನಾರೋಗ್ಯದ ಬಗೆಗೆ ಡೂಸು ಬಿಟ್ಟು ಬಾಸನ್ನು ಗಿರಿಗಿಟ್ಟೆಯಂತೆ ಸುತ್ತಿಸಿ, ಕನಿಕರ ಗಿಟ್ಟಿಸಿ, ಪರ್ಮಿಷನ್ ಪಡೆದು ಮನೆಗೆ ತೆರಳಿರುವ ತರಳೆಯರ ವಿಷಯಗಳು ಸಾಮಾನ್ಯವೇ! ಇಲ್ಲಿ ಬಾಸುಗಳಿಗೆ ಡೂಸು ಬಿಡುವ ಅವಕಾಶವಿಲ್ಲದೆ ಬರೀ ಕೇಳುವುದಷ್ಟೇ ಅವರ ಪಾಲಿಗುಳಿದಿರುತ್ತದೆ.

ಉದ್ಯೋಗದಲ್ಲಿರುವವರಿಗೆ ಬಾಸುಗಳಿರುವುದೇನೋ ಸರಿ, ‘ಗೃಹಿಣೀ ಗೃಹ ಮುಚ್ಯತೇ’ ಎಂಬುದನ್ನು ನಂಬಿ ಮನೆಯಲ್ಲಿರುವ ಗೃಹಿಣಿಯರಿಗೆ ಯಾರು ಬಾಸು? ಉತ್ತರ ಸುಲಭವಲ್ಲವೆ..? ಸ್ವತಃ ಆಕೆಯ ಪತಿಯೇ ಆಕೆಗೆ ಬಾಸು! ಇದನ್ನು ಕೆಲವರು ಅಲ್ಲೆಗೆಳೆಯಬಹುದು! ಏಕೆಂದರೆ ಕೆಲವರ ದೃಷ್ಟಿಯಲ್ಲಿ ಯಾವ ಗಂಡಸೂ ತನ್ನ ಹೆಂಡತಿಗೆ ಬಾಸಾಗಲಾರ! ನಿಜವಾಗಿಯೂ ಹೆಂಡತಿಯೇ ಗಂಡನಿಗೆ ಬಾಸು ಎಂದು ವಾದಿಸುವವರಿಗೆ ಕಡಿಮೆಯೇನಿಲ್ಲ! ಕೆಲವರು ತಮ್ಮ ಮನೆಯಲ್ಲಿಯೇ ಅಲಂಕಾರಕ್ಕಾಗಿ ಹಾಕಿರುತ್ತಾರಲ್ಲ ಫಲಕ! ‘ನಾನು ಈ ಮನೆಯ ಯಜಮಾನ. ಹಾಗೆನ್ನಲು ನನ್ನ ಮಡದಿ ಅನುಮತಿ ಇತ್ತಿರುವಳು’! ಇಂಗ್ಲಿಷಿನಲ್ಲಿರುವ ಈ ಅಲಂಕಾರಿಕ ಫಲಕವನ್ನು ನಾನು ನನ್ನ ಅನೇಕ ಮಿತ್ರರ ಮನೆಯಲ್ಲಿ ನೋಡಿದ್ದೇನೆ. ನನ್ನ ಮನೆಯಲ್ಲಿ ಹಾಕಲು ಮಡದಿ ಇನ್ನೂ ಅನುಮತಿ ಕೊಟ್ಟಿಲ್ಲ!

ಒಂದು ವೇಳೆ ಗಂಡನ ಬಾಸುತನವನ್ನು ಹೆಂಡತಿ ಒಪ್ಪಿದ್ದರೆ, ಆಕೆಯ ಮುಂದೆ ಗಂಡ ಬಿಡುವ ಡೂಸುಗಳು ಅಗಣಿತ! ‘ ‘ಉತ್ತರನ ಪೌರುಷ ಹೆಂಗಳೆಯರ ಮುಂದೆ’ ಎಂಬ ಮಹಾಭಾರತದಲ್ಲಿನ ಉತ್ತರನ ಪ್ರಸಂಗವನ್ನು ಇಲ್ಲಿ ನೆನಪಿಸುತ್ತೇನೆ. ಗಂಡಸರು ತಮ್ಮ ಮಡದಿಯರ ಮುಂದೆ ಬಿಡುವ ಡೂಸುಗಳು ಅಸಂಖ್ಯ! ಅಗಣಿತ! ವೈವಿಧ್ಯಮಯ! ಸೃಜನಶೀಲ! ಆಫೀಸಿನ ಹೆಣ್ಣು ಸಹೋದ್ಯೋಗಿಯನ್ನು ಕಾಫಿಗೊಯ್ದು, ಸಿನಿಮಾ ತೋರಿಸಿ ಮನೆಗೆ ಮರಳಿದಾಗ, ಹೆಂಡತಿಯ ಗಲ್ಲ ಹಿಡಿದು ನಿನಗೊಂದು ಸರ ಕೊಡಿಸಬೇಕೆಂದಿರುವೆ, ಅದಕ್ಕೇ ಒಂದು ಪಾರ್ಟ್ ಟೈಂ ಕೆಲಸ ಹುಡುಕಲು ಹೋಗಿದ್ದೆ’ ಎಂಬ ಹಸಿಹಸಿ ಡೂಸು ಕೇಳಿಲ್ಲವೆ..? ‘ಯಾರ್ರೀ..ಅವಳು, ನೀವು ಸ್ಕೂಟರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದವಳು?’ ಎಂದು ಮಡದಿ ಹರಿಹಾಯ್ದಾಗ, ‘ಅಯ್ಯೋ..? ಆಕೇನಾ..? ನನ್ನ ಕಲೀಗ್…ಪಾಪ ಮನೆಯಿಂದ ಫೋನು ಬಂದಿತ್ತು. ಅವಳ ಮಗು ಮೆಟ್ಟಿಲ ಮೇಲಿಂದ ಬಿದ್ದಿತ್ತಂತೆ, ಅದಕ್ಕೇ ಅರ್ಜೆಂಟಾಗಿ ಮನೇಗೆ ಕರ್ಕೊಂಡು ಹೋಗ್ತಾ ಇದ್ದೆ.. ನನ್ನ ಸ್ಕೂಟರಿನಲ್ಲಿ ಹಿಂದೆ ಕೂರುವ ಅಧಿಕಾರ ನಿನ್ನನ್ನು ಬಿಟ್ಟು ಇನ್ನಾರಿಗಿದೆ’ ಎಂಬ ಸುಲಬದ ಡೂಸಿನಿಂದ ಮಡದಿಯ ಅಟ್ಯಾಕನ್ನು ತಪ್ಪಿಸಿಕ್ಕೊಳ್ಳುವ ಭೂಪರನ್ನು ನೀವು ಕಂಡಿಲ್ಲವೆ..?

ವಿದೇಶಗಳಿಗೆ ಹೋಗಿ ಬಂದ ಬಾಸುಗಳು ಅಲ್ಲಿ ತಾವು ಕಂಡ, ಕಾಣದ, ಅಲ್ಲಿನ ವರ್ಕ್ ಕಲ್ಚರುಗಳ ಬಗೆಗೆ ಗಂಟೆಗಟ್ಟಲೆ ಡೂಸು ಬಿಡುತ್ತಾ ಎಲ್ಲರನ್ನೂ ‘ಇಂಪ್ರೆಸ್’ ಮಾಡಲು ಶ್ರಮಿಸುವುದು ಸರ್ವೇ ಸಾಮಾನ್ಯ! ಇವರ ನಿರರ್ಗಳ ಡೂಸುಗಳಿಗೆ ಧೈರ್ಯವೇನೆಂದರೆ ತಮ್ಮ ಕೆಳಗಿನ ವಿದೇಶ ಕಂಡಿಲ್ಲದ ಹುಂಬರಿಗೆ ಏನು ಬೇಕಾದರೂ ಹೇಳಿ ತಮ್ಮ ಕಿರೀಟಕ್ಕೆ ಗರಿ ಸಿಕ್ಕಿಸಿಕ್ಕೊಳ್ಳಬಹುದು ಎಂದು. ಇಂಥಾ ಭಂಡ ಧೈರ್ಯ ಇರುವ ಬಾಸುಗಳು ಕಮ್ಮಿ ಇಲ್ಲ! ಇದರ ಜೊತೆಗೆ ವಿದೇಶಕ್ಕೆ ಹೋಗಿ ಬಂದಿರುವುದರಿಂದ ತಾನು ಮೇಲು ಎಂಬ ಅಹಂ ಬೇರೆ ಸೇರಿ ಅವರ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿರುತ್ತದೆ! ನಾನು ಕಂಡ ಮೇಲಧಿಕಾರಿಯೊಬ್ಬರು ವಿದೇಶದಿಂದ ವಾಪಸ್ಸು ಬಂದು ಸುಮಾರು ಹತ್ತು ವರ್ಷವಾಗಿದ್ದರೂ ಸಹ ಅಲ್ಲಿನ ಬಗೆಗೇ ಮಾತಾಡುತಾ, ಭ್ರಮಾಲೋಕಲ್ಲಿಯೇ ವಿಹರಿಸುತ್ತಾ, ನೋಡುಗರ ಕಣ್ಣಿಗೆ ಮಾನಸಿಕ ವಿಕಲ್ಪಕ್ಕೊಳಗಾದ ವ್ಯಕ್ತಿಯಂತೆ ಕಾಣುತ್ತಿದ್ದರು. ಅಲ್ಲಿ ಕೆಲಸಗಾರರು ಎಷ್ಟು ಮುತುವರ್ಜಿಯಿಂದ ಕೆಲಸ ಮಾಡುತ್ತಾರೆ, ಸಮಯಕ್ಕೆ ಎಷ್ಟೊಂದು ಮಹತ್ವ ಕೊಡುತ್ತಾರೆ, ಕೆಲಸದಲ್ಲಿ ಎಂತಾ ‘ಕಮಿಟ್ಮೆಂಟ್’ ಎಂದೆಲ್ಲಾ ಹೇಳುವ ಬಾಸುಗಳು, ಅಲ್ಲಿ ಬಾಸುಗಳು ಹೇಗಿರುತ್ತಾರೆ, ಮೇಲರಿಮೆಯಿಲ್ಲದೆ ಕೆಳಗಿನವರೊಂದಿಗೆ ಹೇಗೆ ಬೆರೆಯುತ್ತಾರೆ ಎಂದು ಹೇಳುವುದನ್ನು ಮಾತ್ರ ಮರೆಯುತ್ತಾರೆ! ಇದು ನಿಜಕ್ಕೂ ಸೋಜಿಗ! ಇಷ್ಟೆಲ್ಲಾ ಹೇಳಿದ ಮೇಲೆ ಡೂಸು ಬಿಡುವುದರಲ್ಲಿ ಕೆಲವು ಪರಿಣಿತರ ಬಗೆಗೂ ಹೇಳದಿದ್ದರೆ ಚೆನ್ನಾಗಿರುತ್ತದೆಯೇ..? ಕೆಲವರಿಗೆ ಆಕರ್ಷಕವಾಗಿ ಮಾತಾಡುವುದು ದೈವದತ್ತವಾಗಿ ಬಂದಿರುತ್ತದೆ. ಇಂತವರು ಬಾಸುಗಳಾಗಿ ಡೂಸುಭೂಪರಾದರೆ..? ಅವರ ಡೂಸುಗಳು ನಿಜ ಅನಿಸಿಬಿಡುತ್ತವೆ!! ಅಷ್ಟು ಸಹಜ ಮತ್ತು ಆಕರ್ಷಕವಾಗಿ ಡೂಸಿಸಬಲ್ಲರು! ಆದರೂ ಅವು ಸುಳ್ಳು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ! ಆದರೂ ಇವರ ಡೂಸುಗಳ ಬಗೆಗೆ ಹೆಚ್ಚು ತಿರಸ್ಕಾರ ಮೂಡುವುದಿಲ್ಲ!

ಡೂಸುಗಳ ಬಗೆಗೆ ನನ್ನದೊಂದು ಅಹವಾಲು ಇದೆ. ಡೂಸುಗಳು ಬರೀ ಬಾಸುಗಳಿಗೆ ಮಾತ್ರ ಮೀಸಲಾಗಬಾರದು. ಸಮಾಜದ ಎಲ್ಲ ವರ್ಗದ, ಸ್ತರಗಳ ಜನರೂ ಡೂಸು ಬಿಡುವುದನ್ನು ಕಲಿಯಬೇಕು! ಇದನ್ನು ಒಂದು ಸೃಜನಾತ್ಮಕವಾದ ಪ್ರತಿಭೆಯೆಂದು ಎಲ್ಲರೂ ಒಪ್ಪಿ, ಈ ಡೂಸು ಕಲೆಗೆ ಪ್ರೋತ್ಸಾಹ ಕೊಡಬೇಕು! ಈ ಕೆಲಸವನ್ನು ಕಲೆ ಮತ್ತು ಸಂಸ್ಕೃತಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಎಲ್ಲ ಸಂಘ-ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಮಾಡಬೇಕು! ಇಷ್ಟಾದರೆ ಸಾಲದು! ಸರ್ಕಾರ ಡೂಸರನ್ನು ಪ್ರೋತ್ಸಾಹಿಸಲೋಸುಗ ವರ್ಷಕ್ಕೆ ಕನಿಷ್ಠ ಹತ್ತು ಜನರಿಗೆ ‘ಡೂಸಶ್ರೀ’ ಮತ್ತು ‘ಡೂಸಸ್ತ್ರೀ’ ಪ್ರಶಸ್ತಿಗಳನ್ನು ಕೊಡಬೇಕು. ಹೆಂಗಸರಿಗೂ ಈ ಕ್ಷೇತ್ರದಲ್ಲಿ ಪ್ರೋತ್ಸಾಹ ಅವಶ್ಯಕ. ಅವರಿಗಾಗಿ ಸಮಾಜ ಕಲ್ಯಾಣ ಇಲಾಖೆಯವರು ಅಲ್ಲಲ್ಲಿ ಶಿಬಿರಗಳನ್ನು ಹಮ್ಮಿಕೊಂಡು ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕು. ಇಷ್ಟಾದರೆ ಈ ಕಲೆಗೆ ಪ್ರೋತ್ಸಾಹ ನೀಡಿದಂತಾಗುವುದು ಎಂದು ನನ್ನ ನಂಬಿಕೆ! ನೀವೇನೆನ್ನುತ್ತೀರಿ..?

 

 

 

 

 

 

‍ಲೇಖಕರು avadhi

May 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: