ಟೈಮ್ ಪಾಸ್ ಕಡ್ಲೆ ಕಾಯ್ : ನೋಡಿ ಸ್ವಾಮಿ ಈ ಕಥೆ

ಜೀವ ಕೈಯಲ್ಲಿ ಹಿಡಿದಿರುವವರು

ಎಸ್.ಜಿ.ಶಿವಶಂಕರ್

ಇಂತವರು ಯಾರು? ಎಲ್ಲಿದ್ದಾರೆ ? ಕ್ಷಣಕಾಲ ಯೋಚಿಸಿದರೆ ಗೊತ್ತಾಗುತ್ತದೆ! ಜೀವ ಕೈಯಲ್ಲಿ ಹಿಡಿದಿರುವವರು ಎಲ್ಲೆಲ್ಲೂ ಇದ್ದಾರೆ, ನಮ್ಮ ನಡುವೆಯೇ ಇದ್ದಾರೆ, ನಮ್ಮ ಮನೆಯಲ್ಲೇ ಇದ್ದಾರೆ! ಅಚ್ಚರಿಯೇ..? ಇಂತವರನ್ನು ನಾವು ಗುರುತಿಸಿರುವುದಿಲ್ಲ ಅಷ್ಟೆ!

ಮೊನ್ನೆ ಕಾರ್ಖಾನೆಯಲ್ಲಿ ನಡೆದ ಘಟನೆ ಇದು, ನನ್ನ ಸೀಟಿಗೆ ಬರುವ ಮುಂಚೆ ರಘುಪತಿಯ ಟೇಬಲ್ಲು ಸಿಗುತ್ತದೆ. ಅವನ ಟೇಬಲ್ಲಿನ ಮುಂದೆ ಹಾದು ಹೋಗುವಾಗ ಸುಮ್ಮನೆ ಹೋಗಲಾದೀತೆ..? ಅದರಲ್ಲಿಯೂ ಸ್ನೇಹಿತನೆಂದ ಮೇಲೆ? ಅವನ ಕಡೆಗೊಮ್ಮೆ ನೋಡಿ, ‘ಹಲೋ.?’ ಇಲ್ಲಾ ‘ಹಾಯ್?’ ಮುಂತಾದುವನ್ನು ಹೇಳುವುದು ಸಾಮನ್ಯ. ಂದು ಅವನ ಸೀಟಿನ ಮುಂದೆ ಹಾದು ಹೋಗುವಾಗ ಆತ ತನ್ನ ಕುರ್ಚಿಯಲ್ಲಿ ಕುಳಿತಿರದೆ ಪಕ್ಕ ತಿರುಗಿ ನಿಂತು ಕಿಟಿಕಿಯ ಕಡೆಗಿದ್ದ ತನ್ನ ಬೀರುವಿನಲ್ಲಿ ತಲೆ ಹುದುಗಿಸಿದ್ದ.

ನನ್ನ ಷೂಸಿನ ಶಬ್ದ ಕೇಳಿ ತಿರುಗಿ ನೋಡಿದ ನನ್ನ ಮಿತ್ರ ‘ಹಲೋ, ಒಂದ್ನಿಮಿಷ ಕೂತ್ಕೋ’ ಎಂದು ಮತ್ತೆ ಬೀರುವಿನ ಕಡೆ ತಿರುಗಿದ. ಅದೇನು ಅಷ್ಟೊಂದು ಆಸಕ್ತಿ? ಬೀರುವಿನಲ್ಲಿ ಅದೇನು ಇಟ್ಟಿದ್ದಾನೆ..? ಎಂಬ ಕೆಟ್ಟ ಕುತೂಹಲ ಕೆರಳಿ ಸೀದಾ ಅವನ ಬೀರುವಿನ ಬಳಿಗೆ ಹೋಗಿ ಅವನ ಭುಜದ ಒಂದು ಪಾರ್ಶ್ವದಿಂದ ಇಣುಕಿ ನೋಡಿದೆ. ಯಾವುದೇ ಕೆಲಸಕ್ಕೆ ಸಂಬಂಧಿಸಿದ ಕಡತವನ್ನು ತಡಕುತ್ತಿರಬಹುದು ಎಂದುಕೊಂಡರೆ, ಆಸಾಮಿ ಬೀರುವಿನ ಕಪಾಟಿನ ಮೇಲೆ ಕಾಗದವೊಂದರಲ್ಲಿ ಐದಾರು ಬೆಳ್ಳುಳ್ಳಿಯ ಇಲಕುಗಳನ್ನು ಇಟ್ಟುಕೊಂಡು ಸಣ್ಣಸಣ್ಣದಾಗಿ ಕತ್ತರಿಸುತ್ತಿದ್ದ! ‘ಎತ್ತಣ ಮಾಮರ ಎತ್ತಣ ಕೋಗಿಲೆ..?’ ಎಂಬ ಪದಗಳು ಮನಸ್ಸಿನಲ್ಲಿ ಸುಳಿದಾಡಿದವು! ಕಾರ್ಖಾನೆಯಲ್ಲಿ ಕೆಲಸ ಮಾಡುವವರಿಗೂ ಈ ಬೆಳ್ಳುಳ್ಳಿಯ ಇಲಕುಗಳಿಗೂ ಏನು ಪಲಕು? ಈ ಯೋಚನೆ ನಿಮ್ಮ ಮನಸ್ಸಿನಲ್ಲೂ ಹೊಗೆಯಾಡಿರಬಹುದು. ಈ ಬೆಳ್ಳುಳ್ಳಿಗೂ ರಘುಪತಿಗೂ ಅದೆಂತಾ ಸಂಬಂಧವಿದೆ ಎಂದು ನನಗೆ ಗೊತ್ತು. ಆದರೆ ನಿಮಗೆ ಗೊತ್ತಿರಲು ಸಾಧ್ಯವಿಲ್ಲ!

‘ಏನೋ ಇದು..? ಇದಕ್ಕಿಂತಾ ಉತ್ತಮವಾದ ಕೆಲಸವಿಲ್ಲವೆ..?’ ನಾನು ಆಕ್ಷೇಪಿಸಿದೆ. ಕಾರ್ಖಾನೆಯ ಸಮಯದಲ್ಲಿ ಈ ಕೆಲಸ ತಪ್ಪು ಎಂಬ ಭಾವನೆಯಿಂದ.

ನನ್ನ ಮೌಢ್ಯಕ್ಕೆ ಮರುಗಿ ನಸುನಕ್ಕು ಹೇಳಿದ ರಘುಪತಿ, ‘ಇದಕ್ಕಿಂತಾ ಉತ್ತಮವಾದ ಕೆಲಸ ಬೇರಾವುದಿದ್ದೀತು..? ಬೆಳ್ಳುಳ್ಳಿ ಹೃದಯಕ್ಕೆಷ್ಟು ಒಳ್ಳೆಯದು ಎಂದು ನಿನ್ನಂತವನಿಗೆಲ್ಲಿ ಗೊತ್ತಿರಲು ಸಾಧ್ಯ? ನೋಡು ಪ್ರತಿ ದಿನ ಬೆಳಿಗ್ಗೆ ಐದು ಬೆಳ್ಳುಳ್ಳಿಯ ಇಲಕುಗಳನ್ನು ತಿಂದರೆ ನಿನ್ನ ಹೃದಯ ನಗಾರಿಯಷ್ಟು ಬಲವಾಗಿರುತ್ತದೆ’

‘ಏನು..? ಹಾಳು ಬೆಳ್ಳುಳ್ಳಿ! ಅದೂ ಹಸಿಯಾಗಿ ತಿನ್ನುವುದು..? ವ್ಯಾ’ ಎಂದು ನಾನು ಅಸಹ್ಯಪಟ್ಟುಕೊಂಡೆ.

‘ಹೀಗೇ ಆಡ್ತಾ ಇರು, ಹಾಟರ್ು ಕೈಕೊಟ್ಟಾಗ ನನ್ನ ಹತ್ತಿರ ಬರಬೇಡ’ ಎಂಬ ಎಚ್ಚರಿಕೆಯನ್ನಿತ್ತ ಕಿತಾಪತಿ ಸಾರಿ ನನ್ನ ಸಹೋದ್ಯೋಗಿ ರಘುಪತಿ.

‘ಹಾರ್ಟು ಕೈಕೊಟ್ಟರೆ ಹೃದಯ ತಜ್ಞರ ಬಳಿಗೆ ಹೋಗುತ್ತೇನೆ! ನಿನ್ನಂತ ಮೆಕ್ಯಾನಿಕಲ್ ಇಂಜಿನಿಯರ್ ಹತ್ತಿರ ಬರಲು ನನಗೇನು ಹುಚ್ಚೆ..?’

ಎಂದು ಹಂಗಿಸಿ ನನ್ನ ಸೀಟಿಗೆ ತೆರಳಿದೆ. ರಘುಪತಿಯ ಜೀವನಾಸಕ್ತಿ ಬರಿಯ ಬೆಳ್ಳುಳ್ಳಿಗೆ ಮಾತ್ರ ಮೀಸಲಲ್ಲ. ಅವನು ಬೆಳಗ್ಗೆ ಎಂಟೂವರೆಗೆ ಬೆಳ್ಳುಳ್ಳಿ ತಿಂದರೆ ಮತ್ತೆ ಹತ್ತೂವರೆಗೆ ಎರಡು ಟೊಮ್ಯಾಟೋಗಳನ್ನು ಹದವಾಗಿ ಕತ್ತರಿಸಿ ಹೋಳುಗಳಿಗೆ ಜೇನುತುಪ್ಪ ಲೇಪಿಸಿಕೊಂಡು ತಿನ್ನುತ್ತಾನೆ. ಟೊಮ್ಯಾಟೊ ಮತ್ತು ಜೇನುತುಪ್ಪಕ್ಕೆ ಕ್ಯಾನ್ಸರನ್ನು ತಡೆಯುವ ಶಕ್ತಿ ಇದೆಯಂತೆ. ಹನ್ನೊಂದಕ್ಕೆ ರಘು ಕಪ್ಪು ಬಣ್ಣದ ಟೀ ಅಂದರೆ ಬ್ಲಾಕ್ ಟೀ ಕುಡಿಯುತ್ತಾನೆ. ಅದಕ್ಕೆ ಬಿಸಿ ನೀರನ್ನು ಕ್ಯಾಂಟೀನಿನಿಂದ ತರಿಸುತ್ತಾನೆ. ಮಧ್ಯಾನ್ಹ ಕ್ಯಾಂಟೀನಿನಲ್ಲಿ ಊಟ ಮಾಡುತ್ತಾನೆ. ಆದರೆ ನೀರು ಕುಡಿಯುವುದಿಲ್ಲ! ಅಶುದ್ಧ ನೀರಿನಿಂದ ಕಾಯಿಲೆ ಬರುವುದಂತೆ! ಮನೆಯಿಂದ ತಂದ ಜೀರಿಗೆಯೊಂದಿಗೆ ಕುದಿಸಿದ ‘ಜೀರಾ’ ನೀರನ್ನು ಬಾಟಲಿಯಿಂದ ಕುಡಿಯುತ್ತಾನೆ. ಅದು ಜೀರ್ಣಶಕ್ತಿಯನ್ನು ಹೆಚ್ಚಿಸುವುದಂತೆ!

ಊಟದ ನಂತರ ಕಾರ್ಖಾನೆಯ ತಪ್ಪದೆ ಉಗ್ರಾಣಕ್ಕೆ ಬರುತ್ತಾನೆ. ಅಲ್ಲಿ ವಸ್ತುಗಳನ್ನು ತೂಕ ಮಾಡುವ ಇಲೆಕ್ಟ್ರಾನಿಕ್ ಯಂತ್ರವಿದೆ. ಅದರಲ್ಲಿ ಪ್ರತಿದಿನ ತನ್ನ ತೂಕ ನೋಡಿಕ್ಕೊಳ್ಳುತ್ತಾನೆ. ಎತ್ತರ ಮತ್ತು ತೂಕ ಪ್ರಮಾನಬದ್ಧವಾಗಿರಬೇಕಂತೆ! ತೂಕದಲ್ಲಿ ಕೆಲವು ಗ್ರಾಂಗಳಷ್ಟು ಹೆಚ್ಚು ಕಮ್ಮಿಯಾದರೂ ಅದಕ್ಕೆ ಸೂಕ್ತ ಪರಿಹಾರ ಮಾಡಿಕ್ಕೊಳ್ಳುತ್ತಾನೆ. ಇಂತಹ ನೂರಾರು ಜೀವ ಪ್ರೀತಿಸುವ ಕ್ರಮಗಳನ್ನು ಅವನು ಬದುಕಿನಲ್ಲಿ ಅಳವಡಿಸಿಕೊಂಡಿರುವನು ಎಂಬುದು ನನ್ನ ಖಚಿತವಾದ ನಂಬಿಕೆ! ಅವನ ನೂರಾರು ಜೀವ ಪ್ರೀತಿಸುವ ಕ್ರಿಯಗಳಲ್ಲಿ ಹತ್ತಾರಷ್ಟೆ ನನ್ನ ಗಮನಕ್ಕೆ ಬಂದಿರುವುದು. ಇಷ್ಟೊಂದು ಜೀವವನ್ನು ಪ್ರೀತಿಸುವ ಮನುಷ್ಯನನ್ನು ನಾನು ಈವರೆಗೆ ಕಂಡಿಲ್ಲ ಬಿಡಿ! ಆದುದರಿಂದಲೇ ನಾನು ಕಂಡ ಜೀವ ಕೈಯಲ್ಲಿ ಹಿಡಿದುಕೊಂಡಿರುವವರಲ್ಲಿ ರಘುವಿಗೆ ಪ್ರಥಮ ಸ್ಥಾನ!

‘ಆರತಿ ತಗೊಂಡರೆ ಉಷ್ಣ! ತೀರ್ಥ ತಗೊಂಡರೆ ಶೀತ’ ಎನ್ನುವ ಗಾದೆ ಮಾತು ಇಲ್ಲಿ ನೆನಪಾಗುದಿಲ್ಲವೆ..?

ಜೀವ ಕೈಯಲ್ಲಿ ಹಿಡಿಯುವವರ ಗುಂಪಿಗೆ ಸೇರಿದ ತೀರಾ ಹತ್ತಿರದಿಂದ ನೋಡಿದ ವ್ಯಕ್ತಿಗಳಲ್ಲಿ ನನ್ನ ನೆನಪಿಗೆ ಬರುವವಳು ನನ್ನ ಅಕ್ಕ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಅವಳು ಚಿಕ್ಕವಳಿದ್ದಾಗ ಬಿದ್ದೋ..ಇಲ್ಲಾ ಕೈಯನ್ನು ಬ್ಲೇಡು, ಚಾಕುವಿನಿಂದ ಕೊಯ್ದುಕೊಂಡಗಲೋ ಅತ್ತು ಗೋಳಾಡುತ್ತಿದ್ದಳು. ಅದು ಆ ವಯಸ್ಸಿಗೆ ಸಹಜ ಎನ್ನಬಹುದು. ಆದರೆ ಆಕೆಯ ಈ ಪ್ರವೃತ್ತಿ ದೊಡ್ಡಾವಳಾದ ಮೇಲೂ ಮುಂದುವರಿದಿತ್ತು! ಇದಷ್ಟೇ ಅಲ್ಲದೆ ಆಕೆಯ ಶರೀರದಲ್ಲಿ ಏನಾದರೂ ಹೆಚ್ಚು ಕಮ್ಮಿಯಾದರೆ ಅದನ್ನು ದಿನದಲ್ಲಿ ಒಂದು ಹತ್ತು ಬಾರಿಯಾದರೂ ಸುತ್ತ ಇರುವವರಿಗೆ ಹೇಳಿ ಅವರ ಸಹಾನುಭೂತಿ ಗಿಟ್ಟಿಸುವುದಲ್ಲದೆ, ಅವರನ್ನೂ ಗೋಳು ಹೊಯ್ದುಕ್ಕೊಳ್ಳುತ್ತಿದ್ದಳು! ಮುಖದಲ್ಲಿ ಒಂದು ಗುಳ್ಳೆ ಕಂಡರೂ ಸಾಕು, ಏನೋ ಆಗಿಹೋಗಿದೆ, ತನ್ನ ಸೌಂದರ್ಯಕ್ಕೇ ಕುತ್ತು ಬಂದಂತೆ ಆಡುತ್ತಿದ್ದಳು. ಅದರ ನಿವಾರಣೆಗೆ ಉಪಯೋಗಿಸಬೇಕಾದ ಆಯಿಂಟ್ಮೆಂಟು ಮತ್ತು ಕ್ರೀಮುಗಳ ಸಂಶೋಧನೆಗೆ ತೊಡಗುತ್ತಿದ್ದಳು. ಅಂತ ಕ್ರೀಮು ತರದಿದ್ದರೆ ಮನೆಯಲ್ಲಿ ‘ಸ್ಕ್ರೀಮ್’ ಮಾಡುತ್ತಿದ್ದಳು, ಅಂದರೆ ಕಿರುಚಾಡುತ್ತಿದ್ದಳು. ತಲೆ ಕೂದಲು ಕೊಂಚ ಒರಟಾಗಿ ಕಾಣಿಸಿದರೆ ಶಾಂಪೂ, ಸೋಪುಗಳನ್ನೆಲ್ಲಾ ಬೈಯುತ್ತಾ, ಪಯರ್ಾಯವಾಗಿ ಯಾವ ಶಾಂಪೂ, ಸೋಪುಗಳನ್ನು ಉಪಯೋಗಿಸಬೇಕೆಂದು ಯೋಚಿಸುತ್ತಿದ್ದಳು! ತಲೆಯ ಒಂದೆರಡು ಕೂದಲು ಉದುರಿದರೂ ಸಾಕು, ತಲೆಯ ಕೂದಲೆಲ್ಲಾ ಉದುರಿ ತಾನು ಬೋಳಾಗಿ ಹೋಗುವೆ ಎಂದು ನನ್ನಪ್ಪನನ್ನು ಹೆದರಿಸುತ್ತಿದ್ದಳು! ಹತ್ತೊಂಬತ್ತು ವರ್ಷಕ್ಕೇ ಅವಳಿಗೆ ಮದುವೆ ಮಾಡಿ ಅಮೆರಿಕಾಕ್ಕೆ ಸಾಗು ಹಾಕಿ ಅಪ್ಪ-ಅಮ್ಮ ನೆಮ್ಮದಿಯ ನಿಟ್ಟುಸಿರಿಟ್ಟಾರು! ಈಗಾಕೆ ದೂರದ ಅಮೆರಿಕಾದಲ್ಲಿ ತನ್ನ ಸಂಸಾರ ಸಾಗರದಲ್ಲಿ ಮುಳುಗಿಹೋಗಿರುವುದರಿಂದ ಅವಳು ಇತ್ತೀಚೆಗೆ ಹೇಗೆ ಬದಲಗಿದ್ದಾಳೆ ಎನ್ನುವುದು ತಿಳಿದಿಲ್ಲ. ಐದಾರು ವರ್ಷಗಳಿಗೊಮ್ಮೆ ಬಂದಾಗ ಈ ವಿಷಯದಲ್ಲಿ ಅವಳನ್ನು ಗಮನಿಸುವ ಪ್ರಸಂಗಗಳು ಬಂದಿಲ್ಲ.

ಜೀವ ಕೈಯಲ್ಲಿಹಿಡಿದಿರುವವರ ಸಾಲಿಗೆ ನನ್ನ ಚಡ್ಡಿ ದೋಸ್ತ್ ಪರಮೇಶಿಯನ್ನೂ ಸೇರಿಸಲಡ್ಡಿಯಿಲ್ಲ. ಪರಮೇಶಿ ಮತ್ತು ನಾನು ಪಿ.ಯು.ಸಿವರೆಗೂ ಒಟ್ಟಿಗೇ ಓದಿದವರು. ಪಿಯುಸಿಯ ನಂತರ ನಾನು ಇಂಜಿನಿಯರಿಂಗ್ ಓದಿದೆ. ಪರಮೇಶಿ ಪರಮ ಸಾಹಸ ಮಾಡಿ ಬಿ.ಎ. ಪಾಸು ಮಾಡಿ ವಂಶಪಾರಂಪರ್ಯವಾಗಿ ಬಂದ ಬಟ್ಟೆ ವ್ಯಾಪಾರವನ್ನು ಮುಂದುವರಿಸಿದ್ದ. ನಾನು ಇಂಜಿನಿಯರಿಂಗ್ ಮುಗಿಸಿ ಜೈಲು ಸೇರಿದೆ. ತಪ್ಪು ತಿಳಿಯಬೇಡಿ, ಜೈಲು ಅಂದರೆ ನಿಜವಾದ ಜೈಲಲ್ಲ! ಜೈಲಿನೋಪಾದಿಯಲ್ಲಿರುವ ಕಾಖರ್ಾನೆ! ಇಲ್ಲಿ ಒಮ್ಮೆ ಒಳಗೆ ಬಂದರೆ ಕನಿಷ್ಟ ಎಂಟು ತಾಸು ಇರಲೇಬೇಕು! ವರ್ಷದ ಕೊನೆಯಲ್ಲಿ, ಉತ್ಪಾದನೆಯ ಒತ್ತಡ ಹೆಚ್ಚಿದಾಗೆಲ್ಲಾ ಹತ್ತರಿಂದ ಹನ್ನೆರಡು ತಾಸೂ ಕಾಖರ್ಾನೆಯ ಒಳಗೇ ಇರಬೇಕಾದದ್ದು ಅನಿವಾರ್ಯ. ಇದು ಹೆಚ್ಚೆಂದು ಎಂದೂ ನಮ್ಮ ಮೇಲಧಿಕಾರಿಗಳಿಗೆ ಅನ್ನಿಸುತ್ತಿರಲಿಲ್ಲ! ಇಪ್ಪತ್ತು ನಾಲ್ಕು ಗಂಟೆ ಕೆಲಸ ಮಾಡಿದರೂ ಅವರು ಬೇಡ ಎನ್ನುತ್ತಿರಲಿಲ್ಲ! ಇದರೊಟ್ಟಿಗೆ ಮನೆಯಲ್ಲಿ ಮಡದಿ-ಮಕ್ಕಳು ತಮ್ಮತ್ತ ಗಮನ ಹರಿಸುವುದಿಲ್ಲ, ಮನೆಗೇ ಬರುವುದಿಲ್ಲ ಎಂಬ ದೂಷಣೆ, ಘೋಷಣೆಗೆಳು ಮುಫತ್ತಾಗಿ ದೊರಕುತ್ತವೆ. ಇವು ಕಾರ್ಖಾನೆಯಲ್ಲಿ ಕೆಲಸ ಮಾಡುವವರಿಗೆ ಸಿಗುವ ವಿಶೇಷ ಸವಲತ್ತುಗಳು!!

ಓದುವ ದಿನಗಳಲ್ಲೇ ಪರಮೇಶಿ ಶಿಸ್ತಿನ ಮನುಷ್ಯ! ವಾರದ ಆರು ದಿನಗಳೂ ಶಾಲೆಯಲ್ಲಿ ಓದಿ ದಣಿದ ಕಾರಣಕ್ಕೆ ಭಾನುವಾರ ಎಣ್ಣೆ ಒತ್ತಿಕೊಂಡು ಸ್ನಾನ ಮಾಡಿ ಮಲಗಿಬಿಡುತ್ತಿದ್ದ. ದೇವರು ಪರಮೇಶಿಗೆ ವಿದ್ಯೆಯೊಂದನ್ನು ಬಿಟ್ಟು ಉಳಿದದ್ದೆಲ್ಲವನ್ನೂ ಧಾರಾಳವಾಗಿ ನೀಡಿದ್ದ. ತಿಂದುಣ್ಣಲು ಕೊರತೆಯೆಂಬುದೇ ಇರಲ್ಲ. ಶನಿವಾರ ಸಂಜೆ ಪರಮೇಶಿಯ ಕಡೆಯಿಂದ ನನಗೆ ಮತ್ತು ಇನ್ನೊಬ್ಬ ಗೆಳೆಯನಿಗೆ ಬೆಣ್ಣೆ ಮಸಾಲೆಯ ಪಾಟರ್ಿ! ಬರುವಾಗ ಹಾದಿಯಲ್ಲಿ ಚುರುಮುರಿ, ಮೆಣಸಿನಕಾಯಿ ಬೋಂಡಾ, ಮದ್ದೂರುವಡೆ-ಮುಂತಾದುವನ್ನು ತಿನ್ನುತ್ತಿದ್ದೆವು. ಹೊಟ್ಟೆ ಭಾರವಾಗಿ ಇನ್ನು ಪಚನವಾಗುವುದು ಕಷ್ಟ ಎಂದು ಬೆಣ್ಣೆ ಮತ್ತು ಗುಲ್ಕನನ್ನು ಶೆಟ್ಟರ ಅಂಗಡಿಯಲ್ಲಿ ತಿಂದು ಢರ್ರನೆ ತೇಗಿ ಮನೆ ಸೇರುತ್ತಿದ್ದೆವು.

ಶಾಲೆಯ ದಿನಗಳಲ್ಲಿ ನನಗೆ ಹಸಿವಿನ ಸಮಸ್ಯೆಯಾದರೆ ಪರಮೇಶಿಗೆ ಅಜೀರ್ಣದ ಸಮಸ್ಯೆ! ಎಂಥ ಆಹಾರ ತಿಂದರೂ ಎರಡೇ ಗಂಟೆಗಳಲ್ಲಿ ನನ್ನ ಹೊಟ್ಟೆ ಭಸ್ಮ ಮಾಡುತ್ತಿತ್ತು! ಪರಮೇಶಿ ಹಸಿವಿಲ್ಲ ಎಂದು ಡಾಕ್ಟರರ ಬಳಿ ಹೋಗುತ್ತಿದ್ದ. ಆಗಿನವರೆಲ್ಲಾ ಎಲ್.ಎಂ.ಪಿ ಡಾಕ್ಟರುಗಳು. ಬಾಟ್ಲಿ ಹಿಡಿದು ಹೋದರೆ ಔಷಧಿ! ಇಲ್ಲದಿದ್ದರೆ ಔಷಧಿಯೇ ಇಲ್ಲ! ಈಗ ಬಿಡಿ, ಬಾಟಲುಗಳಲ್ಲಿ ಬರುವುದು ಬರೀ ಬೀರ್, ಬ್ರಾಂದಿ, ವಿಸ್ಕಿ, ರಮ್ಮು, ಕೋಕಾಕೋಲಾ – ಮುಂತಾದ ನವನಾಗರೀಕ ಪೇಯಗಳು! ಈಗಿನ ಕಾಲದ ವ್ಯಾಖ್ಯಾನವೇ ವಿಭಿನ್ನ. ಮಕ್ಕಳಾಗಿರುವಾಗ ಹಾಲು, ವಯಸ್ಸಿಗೆ ಬಂದಾಗ ಅಲ್ಕೋಹಾಲು ಎನ್ನುತ್ತಾರೆ. ಆಲ್ಕೋಹಾಲು ಸೇವನೆ ಈಗ ‘ಸೋಷಿಯಲ್ ಡ್ರಿಂಕಿಂಗ್’! ನಾಗರೀಕತೆಯ ಸಂಕೇತ!

ಪರಮೇಶಿಯ ಜೀವ ಪ್ರೀತಿ ಎಷ್ಟಿತ್ತೆಂದರೆ ಅವನಿಗೆ ಎಣ್ಣೆ ಒತ್ತಲು ಆಳುಗಳಿದ್ದರು! ಕಾಯಿಲೆ ಬಂದರೆ ಡಾಕ್ಟರ್ ಬಳಿಗೆ ಆಳೊಬ್ಬ ಸೈಕಲ್ಲಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಇಲ್ಲವೇ ಟಾಂಗಾದಲ್ಲಿ ಅವನ ಸವಾರಿ ಹೋಗುತ್ತಿತ್ತು. ಈಗೀಗ ಪರಮೇಶಿಯ ಜೀವ ಪ್ರೀತಿ ಹೆಚ್ಚಾಗಿದೆ! ಏಕೆಂದರೆ ಎಲ್ಲಾ ಶ್ರೀಮಂತರ ಕಾಯಿಲೆಗಳು ಅವನಲ್ಲಿ ಖಾಯಂ ಆಗಿ ಝಾಂಡಾ ಹೂಡಿವೆ! ಅವುಗಳಿಗೆ ಮಾತ್ರೆಗಳು, ಇಂಜೆಕ್ಷನ್ನುಗಳನ್ನು ಕಾಲಕಾಲಕ್ಕೆ ಸರಿಯಾಗಿ ತೆಗೆದುಕ್ಕೊಳ್ಳುವ ಪರಮೇಶಿಯ ಜೀವಪ್ರೀತಿಯ ಪರಿಯನ್ನು ಈ ಲೇಖನದ ವ್ಯಾಪ್ತಿಯಲ್ಲಿ ಹೇಳುವುದು ಸಾಧ್ಯವೇ ಇಲ್ಲ!

ಮನೆಗೆ ಬಂದ ಅತಿಥಿಗಳು ಸತ್ಕರಿಸಲು ನೀಡಿದ ತಿನಿಸನ್ನು ತಿನ್ನಲು ಒಲ್ಲೆನೆಂದಾಗ ಮನೆ ಒಡೆಯರು ಇಲ್ಲಾ ಒಡತಿ ಬಲವಂತದ ಉಪಚಾರ ಮಾಡುವುದು ಸಾಮಾನ್ಯವಲ್ಲವೆ? ತಿಂದ ಕೆಲ ಸಮಯದ ನಂತರ ‘ನನಗದು ಒಗ್ಗೊಲ್ಲ ಎಂದರೂ ಬಲವಂತ ಮಾಡಿದಿರಿ! ಈಗ ನೋಡಿ ನನ್ನ ಪಾಡು..? ಹೊಟ್ಟೆ ನನ್ನ ಮೇಲೆ ಸೇಡು ತೀರಿಸ್ಕೋತಾ ಇದೆ’ ಎಂದು ಮುಜುಗರವನ್ನುಂಟು ಮಾಡುವ ಮಹನೀಯರು ಮತ್ತು ಮಹಿಳೆಯರು ಸಹ ಜೀವ ಕೈಯಲ್ಲಿ ಹಿಡಿದಿರುವವರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ನನ್ನ ಅಭಿಪ್ರಾಯ! ನೀವೇನೆನ್ನುತ್ತೀರಿ..?

ದೇಹಕ್ಕೆ ಸ್ವಲ್ಪ ತೊಂದರೆಯಾಗುವ ಪ್ರಸಂಗ ಬಂದಾಗ ಇಂತಾ ವ್ಯಕ್ತಿಗಳು ಏನು ಮಾಡುತ್ತಾರೆ ಎಂಬುದು ತಮ್ಮ ಗಮನಕ್ಕೂ ಬಂದಿರಬಹುದು. ಉದಾಹರಣೆಗೆ ಮೂವರು ಗೆಳೆಯರು ಬಸ್ಸು ಹತ್ತುತ್ತಾರೆ ಎನ್ನಿ. ಮುನ್ನುಗ್ಗಿ ಕಿಟಿಕಿ ಬದಿಯ ಸೀಟನ್ನು ಆಕ್ರಮಿಸುವವರು ಇಂತಾ ವ್ಯಕ್ತಿಗಳೇ! ಹಾಗೊಮ್ಮೆ ಕಿಟಿಕಿ ಬದಿಯ ಸೀಟು ಸಿಕ್ಕದಿದ್ದರೆ ಇನ್ನೊಂದು ಕಿಟಿಕಿ ಬದಿಯ ಸೀಟಿಗೇ ಹೋಗುವರು ಖಂಡಿತವಾಗಿ ಜೀವ ಕೈಯಲ್ಲಿ ಹಿಡಿದಿರುವವರೇ!

ಇಂತವರು ಇನ್ನೂ ಒಂದು ಹಂತ ಮೇಲೇರಿರುವ ಸಂದರ್ಭಗಳೂ ಇವೆ! ಅವು ಯಾವುವು ಊಹಿಸಬಲ್ಲಿರಾ..? ಜೀವ ಹೋಗುವ ಪ್ರಸಂಗಗಳು! ಯಾವುದಾದರೂ ಅಪಾಯ ಮುಂದೆ ಬರಲಿದೆ ಎಂದರೆ ಇವರೆಷ್ಟು ಹುಷಾರಾಗುವರು ಎಂಬುದನ್ನು ನೋಡಿಯೇ ತಿಳಿಯಬೇಕು!

ಇಂತವರಿಗೆ ಖಾಯಿಲೆ-ಕಸಾಲೆ ಬಂದರೆ ಹೇಗಾಡುವರೆಂಬುದನ್ನು ನೋಡಿಯೇ ತಿಳಿಯಬೇಕು! ಸಣ್ಣ ಜ್ವರ ಬಂದರೆ ಸಾಕು, ಇನ್ನೇನು ಎಲ್ಲಾ ಮುಗಿದೇಹೋಯಿತು ಎಂಬಂತೆ ಆಡುತ್ತಾ ಎದುರು ಕೂತವರ ಧೈರ್ಯವನ್ನೂ ಕೊಂದುಬಿಡುತ್ತಾರೆ! ಅವರುಗಳು ನೋವಿನಿಂದ ನರಳುವುದೇನು? ಹತಾಶರಾಗಿ ನುಡಿಯುವ ನುಡಿಗಳೇನು..? ಇವೆಲ್ಲಾ ಅನುಭವಿಸಿಯೇ ತಿಳಿಯಬೇಕು!

ಮೊನ್ನೆ ಕಾರ್ಖಾನೆಯಿಂದ ಮರಳುವಾಗ ಸ್ವಲ್ಪ ಹೊತ್ತಾಗಿತ್ತು. ದಾರಿಯಲ್ಲಿ ಒಂದು ದೊಡ್ಡ ಬಯಲು ಪ್ರದೇಶ ರಸ್ತೆಯ ಬದಿಯಲ್ಲಿ ಸಿಗುತ್ತದೆ. ಅಲ್ಲಿ ರಘುಪತಿಯ ಸ್ಕೂಟರು ನಿಂತಿದ್ದು ನೋಡಿ ಆಶ್ಚರ್ಯವಾಯಿತು. ಬಹುಶಃ ದೇಹಭಾದೆ ತೀರಿಸಿಕ್ಕೊಳ್ಳಲು ಸಭ್ಯತೆಯನ್ನು ಮರೆತು ರಸ್ತೆ ಬದಿಯಲ್ಲೇ ನಿಂತಿರಬಹುದೆಂದು ಸುತ್ತ ನೋಡಿದೆ. ರಸ್ತೆಯಿಂದ ನೂರು ಆಡಿಗಳ ದೂರದಲ್ಲಿ ಬಯಲಿನಲ್ಲಿ ರಘು ಬಾಗಿ ಏನನ್ನೋ ಕೀಳುತ್ತಿರುವುದು ಕಂಡಿತು. ನಾನೂ ಸಹ ಸ್ಕೂಟರನ್ನು ನಿಲ್ಲಿಸಿ ಅವನತ್ತ ನಡೆದೆ. ಮಾಲು ಸಮೇತ ಕಳ್ಳನನ್ನು ಹಿಡಿಯುವ ಪೋಲೀಸರಂತೆ ಅವನ ವಿಲಕ್ಷಣವಾದ ಕೆಲಸ ಪತ್ತೆ ಮಾಡಲು ಸದ್ಧಾಗದಂತೆ ಹೋಗಿ ಅವನ ಬೆನ್ನ ಹಿಂದಿಂದ ನೋಡಿದೆ. ಅಲ್ಲೇನಿತ್ತು.? ಮಣ್ಣು! ಅಲ್ಲಲ್ಲಿ ಬೆಳೆದಿದ್ದ ತುಂಬೆ ಸಸಿಗಳಿಂದ ತುಂಬೆ ಹೂವನ್ನು ಕೊಯ್ಯುತ್ತಿದ್ದ ಪುಣ್ಯಾತ್ಮ!

‘ಇದೇನೋ ಹೊಸ ಹುಚ್ಚು..?’ಹಾಸ್ಯ ಮಾಡಿದೆ.

‘ತುಂಬೆ ಹೂವುಗಳನ್ನು ಜೇನುತುಪ್ಪದಲ್ಲಿ ನೆನಸಿ ತಿಂದರೆ ಯಾವತ್ತೂ ನೆಗಡಿ ಬರೋದಿಲ್ಲವಂತೆ! ಇದರಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಸಿ’ ಇರುತ್ತದೆ’ ಅಣಿಮುತ್ತುಗಳನ್ನುದುರಿಸಿದ ರಘು!

‘ಅಂದ ಹಾಗೆ ರಘು, ನಿನಗೆ ಗೋಧಿ ಹುಲ್ಲಿನ ಬಗ್ಗೆ ಗೊತ್ತಿಲ್ಲವೆ..?’ ಎಂದು ಕೇಳಿದೆ.

‘ಏನದು ಗೋಧಿ ಹುಲ್ಲಿನ ವಿಷಯ..?’ ಅಸಡ್ಡೆಯಿಂದ ಕೇಳಿದ ರಘು.

‘ಅದೇ, ಗೋಧಿ ಹುಲ್ಲು ತಿನ್ನುವವರಿಗೆ ಇಡೀ ಜೀವನದಲ್ಲಿ ಎಂಥಾ ಖಾಯಿಲೆಯೂ ಬರೋದಿಲ್ಲವಂತೆ’

‘ಇದಕ್ಕೇನು ಆಧಾರ..?’ ರಘು ಅನುಮಾನದಿಂದ ನನ್ನತ್ತ ನೋಡಿದ! ಏಕೆಂದರೆ ಸಮಯ ಸಿಕ್ಕಾಗಲೆಲ್ಲಾ ನಾನು ಅವನನ್ನು ಲೇವಡಿ ಮಾಡುತ್ತಿದ್ದೆ!

‘ಇವತ್ತಿನ ದಿನಗಳಲ್ಲಿ ಆರೋಗ್ಯದ ಬಗೆಗೆ ಎಂತಾ ಪ್ರಜ್ಞೆ ಮೂಡಿದೆಯೆಂದರೆ, ಪ್ರತಿ ತಿಂಗಳೂ ಒಂದೊಂದು ಹೊಸ ನಿಯತಕಾಲಿಕೆಗಳು ಬರುತ್ತಿವೆ. ಅವುಗಳಲ್ಲಿ ಯಾವುದೋ ಒಂದರಲ್ಲಿ ಇದು ಪ್ರಕಟವಾಗಿದೆ. ಹೆಸರು ನೆನಪಿಗೆ ಬರುತ್ತಿಲ್ಲ’

‘ನನಗೆ ಹುಲ್ಲು ತಿನ್ನಿಸುವ ಪ್ರಯತ್ನ ಮಾಡುತ್ತಿಲ್ಲ ತಾನೆ..?’ ಅವನ ಅನುಮಾನ ಇನ್ನೂ ಹೋಗಿರಲಿಲ್ಲ.

‘ಛೆ…ಛೇ..ನಿನ್ನಂತ ಮಿತ್ರನಿಗೆ ಹೀಗೆಲ್ಲಾ ಮಾಡಿದರೆ ಭಗವಂತ ಮೆಚ್ಚಿಯಾನೆ..?’

‘ಭಗವಂತನ ವಿಷಯ ನನಗೆ ಗೊತ್ತಿಲ್ಲ! ತಮಾಷೆ ಮಾಡಿದರೆ ನಾನಂತೂ ನಿನ್ನನ್ನು ಸುಮ್ಮನೆ ಬಿಡುವವನಲ್ಲ!’ ಗದರಿಸಿದ ರಘು.

ಇಂತಹ ಮಂದಿಯನ್ನು ನೀವು ನೋಡಿಲ್ಲವೆ..? ಖಂಡಿತಾ ನೋಡೇ ಇರುತ್ತೀರಿ. ಅಂದಂತೆ ಈಗ ಜೀವ ಕೈಯಲ್ಲಿ ಹಿಡಿದಿರುವವರೆ ಬಗೆಗೆ ಒಂದು ಸಮೀಕ್ಷೆಯನ್ನು ನಡೆಸಿದ್ದೇನೆ. ಈ ಪಟ್ಟಿಗೆ ನೀವು ಸೇರುತ್ತೀರೋ..ಇಲ್ಲವೋ..? ಉತ್ತರಿಸಿದರೆ ನನ್ನ ‘ಜೀವ ಕೈಯಲ್ಲಿ ಹಿಡಿದಿರುವವರ’ ಸಮೀಕ್ಷೆಗೆ ಸಹಾಯವಾಗುತ್ತದೆ! ತಿಳಿಸುವಿರಿ ತಾನೆ..?

 

‍ಲೇಖಕರು G

December 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: