ಟೈಮ್ ಪಾಸ್ ಕಡ್ಲೆ ಕಾಯ್ : ಎ ಟಿ ಎಂ ಗುಮ್ಮ!

ಎ.ಟಿ.ಎಂ ಗುಮ್ಮ!

~ಎಸ್.ಜಿ.ಶಿವಶಂಕರ್

ಅಚ್ಚರಿಯಲ್ಲವೆ..? ಬ್ಯಾಂಕುಗಳ ಎ.ಟಿ.ಎಮ್ ಮೆಷಿನ್ನುಗಳು ಗುಮ್ಮಗಳಾಗಿ ಕಾಡಬಹುದು ಎಂದರೆ ಅಚ್ಚರಿಯಾಗದೆ ಇರದು! ಮಕ್ಕಳಿಗೆ ‘ಗುಮ್ಮ’ ಎಂದು ಹೆದರಿಸುವಂತೆ ವಯಸ್ಕರನ್ನು ‘ಎ.ಟಿ.ಎಂ ಗುಮ್ಮ’ ಎಂದು ಹೆದರಿಸಬಹುದೆ..? ಇಲ್ಲಾ ಈ ಲೇಖಕ ಮಾನಸಿಕ ತೊಂದರೆಯಿಂದ ಬಳಲುತ್ತಾ ಎ.ಟಿ.ಎಮ್ ನೋಡಿದರೆ ಗುಮ್ಮನನ್ನು ನೋಡಿದಂತೆ ಬೆದರಬಹುದೆ ? ಹೀಗೆಲ್ಲಾ ನಿಮ್ಮಲ್ಲಿ ಪ್ರಶ್ನೆಗಳ ಸುನಾಮಿ ಎದ್ದಿರಬಹುದು. ಅಂತ ಪ್ರಶ್ನೆಗಳ ಸರಮಾಲೆಗೆ ನನ್ನ ಕೆಳಗಿನ ವಿವರಣೆ ಉತ್ತರವಾಗಬಲ್ಲದು ಎಂಬ ಭಂಡತನ ನನ್ನದು.

ಕಣ್ಣಿಗೆ ಕಾಣದ ಗುಮ್ಮನಿಗೆ ಮಕ್ಕಳು ಹೆದರುತ್ತವೆ. ಕಾರಣ ಅವುಗಳ ಮನಸ್ಸಿನಲ್ಲಿ ಗುಮ್ಮನ ಬಗೆಗೆ ಭಯಾನಕ ಕಲ್ಪನೆಗಳಿರುತ್ತವೆ. ಮಸಿ ಮುಖ, ತಲೆಯಲ್ಲಿ ಕೋಡು, ಬಾಯಲ್ಲಿ ಕೋರೆ ಹಲ್ಲುಗಳು, ಕೊರಳಲ್ಲಿ ಮನುಷ್ಯರ ತಲೆಬುರುಡೆಯ ಮಾಲೆ, ಕೆಟ್ಟ ಉಡುಪು! ಕೈಯಲ್ಲಿ ಪ್ರಾಣಿಗಳನ್ನು ಕತ್ತರಿಸುವ ದೊಡ್ಡ ಕತ್ತಿ! ಹೀಗೇ… ಮಕ್ಕಳ ಕಲ್ಪನಾಲಹರಿಯಲ್ಲಿ ಗುಮ್ಮನ ಭಯಾನಕ ರೂಪ ಮೂಡಿರುತ್ತದೆ. ಇದೇನೋ ಸರಿ ಮತ್ತೆ ಈ ಎ.ಟಿ.ಎಮ್ ಮೆಷೀನು ಹೇಗೆ ಗುಮ್ಮನಾಗಲು ಸಾಧ್ಯ? ಅದೂ ಮಕ್ಕಳಿಗಲ್ಲ-ವಯಸ್ಕರಿಗೆ?! ಮತ್ತೆ ನಿಮ್ಮ ಮನಸ್ಸಿನಲ್ಲಿ ಈ ಪ್ರಶ್ನೆ ಉದ್ಭವಿಸಿದೆ ಎಂಬುದನ್ನು ನಾನು ಬಲ್ಲೆ! ನಿಜ, ಎ.ಟಿ.ಎಮ್ ಮೆಷೀನು ಕಲ್ಪನೆಯೇನೂ ಅಲ್ಲ! ಅದು ನಾವೆಲ್ಲಾ ನೋಡಿರುವ, ನೋಡುತ್ತಿರುವ ನಿರುಪದ್ರವಿ ಯಂತ್ರ! ಜೊತೆಗೆ ಅದು ಬಹೂಪಯೋಗಿ! ಅದರಿಂದ ಬ್ಯಾಂಕಿನ ನಮ್ಮ ಖಾತೆಯಲ್ಲಿರುವ ಹಣ ಪಡೆಯುವುದು ಬಲು ಸುಲಭ. ಬ್ಯಾಂಕಿನ ಬ್ರ್ಯಾಂಚಿಗೆ ಹೋಗಿ, ಚೆಕ್ ಬರೆದು ಇಲ್ಲವೇ ಹಣ ಹಿಂಪಡೆಯುವ ಚೀಟಿ ಬರೆದು, ಸಹಿ ಮಾಡಿ, ಟೋಕನ್ ಪಡೆದು, ನಮ್ಮ ಸರದಿಗಾಗಿ ಕಾಯಬೇಕಾದ ಅವಶ್ಯಕತೆ ಇಲ್ಲ! ಮತ್ತೆ ಅದು ಎಟಿಎಮ್ ಯಂತ್ರ ನಮ್ಮ ಮುಖವನ್ನೂ ನೋಡುವುದಿಲ್ಲ! ಮುಖ ಸಿಂಡರಿಸಿಕ್ಕೊಳ್ಳುವುದಿಲ್ಲ! ರೇಗುವುದಿಲ್ಲ! ಸ್ಲಾಟಿನಲ್ಲಿ ಕಾಡರ್ು ತೂರಿಸಿ, ಪಾಸ್ವಡರ್್ ಹಾಕಿ ಬೇಕಾದ ಹಣದ ಮೊತ್ತವನ್ನು ಕೀ ಬೋಡರ್್ ಮೂಲಕ ನಮೂದಿಸಿದರೆ ಸಾಕು, ಗರಗರ ಶಬ್ದದೊಂದಿಗೆ ಹಣ ಮೆಷಿನ್ನಿನಿಂದ ಈಚೆ ಬರುತ್ತದೆ. ಆದರೆ ಖಾತೆಯಲ್ಲಿ ಹಣ ಇರಲೇಬೇಕು! ಇಲ್ಲದಿದ್ದರೆ ಹಣ ಬರುವುದಿಲ್ಲ! ನಮ್ಮದೇ ಖಾತೆಯಲ್ಲದೆ ಬೇರೆಯವರ ಖಾತೆಯಿಂದಲೂ ಎಟಿಎಮ್ನಿಂದ ಹಣ ಪಡೆಯುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನಿಸುವುದು ಮನುಷ್ಯರ ಸ್ವಭಾವ. ಹಾಗಾಗಲು ಕನಸಿನಲ್ಲೂ ಸಾಧ್ಯವಿಲ್ಲ! ಅದು ಬೇರೆ ವಿಷಯ ಬಿಡಿ.

ಆಟೋಮ್ಯಾಟಿಕ್ ಟೆಲ್ಲರ್ ಮೆಷಿನ್ ಎಂಬ ಉದ್ದ ಹೆಸರಿನ, ಎ.ಟಿ.ಎಂ ಎಂಬ ಗಿಡ್ಡ ಹೆಸರಿನ ಯಂತ್ರವೊಂದು ಗುಮ್ಮನಾಗಿ ಹೇಗೆ ಕಾಡಲು ಸಾಧ್ಯ ಎಂಬುದು ನಿಮ್ಮ ಪ್ರಶ್ನೆಯಲ್ಲವೆ..? ಸತ್ಯವಾಗಿಯೂ ಹೇಳಿ ನಾನೀಗ ಪ್ರಸ್ತಾಪಿಸುತ್ತಿರುವ ಎ.ಟಿ.ಎಮ್ಮು ಯಾವಾಗಲೂ ಅತ್ಯಂತ ವಿಧೇಯ ಸೇವಕನಾಗಿ ನಿಮ್ಮ ಕೆಲಸ ನಿರ್ವಹಿಸಿದೆಯೆ..? ಎಂದೂ ನಿಮಗೆ ತೊಂದರೆ ಕೊಟ್ಟೇ ಇಲ್ಲವೆ..? ನೆನಪಿಸಿಕ್ಕೊಳ್ಳಿ! ಉಪಯೋಗಿಸುವಾಗ ಸಾಕಷ್ಟು ತಾಪತ್ರಯ ಆಗಿರಬಹುದಲ್ಲವೆ..? ಈಗ ನಿಮಗೆ ಒಂದೊಂದಾಗಿ ಎಟಿಎಮ್ಮಿನ ಕೆಟ್ಟ ಅನುಭವಗಳ ನೆನಪು ಬರಲು ಪ್ರಾರಂಭವಾಗಿರಬಹುದು ಅಲ್ಲವೆ..?

ನನಗೂ ಇಂತಾ ಹಲವು ಅನುಭವಗಳಾಗಿವೆ! ಈ ಅನುಭವಗಳ ನಂತರವೇ ಟಿಎಮ್ ಮೆಷಿನೆಂದರೆ ಹೆದರುತ್ತೇನೆ! ಆ ಯಂತ್ರ ಇರುವ ರೂಮಿಗೆ ಹೋಗಲು ಹಿಂಜರಿಯುತ್ತೇನೆ. ಬ್ಯಾಂಕಿನಲ್ಲಿ ಚೆಕ್ ನೀಡಿ, ಟೋಕನ್ ಪಡೆದು, ಗುರ್ರೆನ್ನುವ ಬ್ಯಾಂಕು ಸಿಬ್ಬಂದಿಯ ನೋಟಕ್ಕೆ ಗುರಿಯಾಗಿ, ನಮ್ಮ ಸರತಿಗಾಗಿ ಕಾದು ಹಣ ಪಡೆಯುವುದೇ ಅತ್ಯಂತ ಸುರಕ್ಷಿತ ವಿಧಾನ ಎಂದು ನನ್ನ ಅನುಭವ! ನಿಮ್ಮ ಅನುಭವ ನನಗೆ ಗೊತ್ತಿಲ್ಲವಾದರೂ ಇಂತ ಕೆಲವು ಅನುಭವಗಳು ಆಗಿರಲು ಸಾಧ್ಯ! ನನ್ನ ಕೆಲವು ಅನುಭವಗಳನ್ನು ಓದಿದರೆ ಖಂಡಿತವಾಗಿಯೂ ಎಟಿಎಮ್ಮನ್ನು ಗುಮ್ಮ ಎಂದು ಕರೆದ ನನ್ನನ್ನು ಪ್ರಶಂಸಿಸುತ್ತೀರ! ಆ ಭರವಸೆ ಮತ್ತು ಆತ್ಮ ವಿಶ್ವಾಸ ನನ್ನಲ್ಲಿದೆ.

ಎಲ್ಲ ನಗರಗಳ ಗಲ್ಲಿಗಲ್ಲಿಗಳಲ್ಲೀಗ ಎಟಿಎಮ್ಮುಗಳು ರಾರಾಜಿಸುತ್ತಿವೆ. ಎಲ್ಲಾ ಬ್ಯಾಂಕುಗಳು ತಮ್ಮ ಎಟಿಎಮ್ಮುಗಳನ್ನು ಸಿಕ್ಕಸಿಕ್ಕಲ್ಲಿ ಸ್ಥಾಪಿಸುವುದು ಪ್ರತಿಷ್ಠೆಯ ಸಂಗತಿಯೆಂದು ತಿಳಿದಿರಬಹುದು. ಜೊತೆಗೆ ಯಾವದೇ ಎಟಎಮ್ ಮೆಷಿನ್ನಿನಲ್ಲಿ ಯಾವುದೇ ಬ್ಯಾಂಕಿನ ಕಾರ್ಡನ್ನಾದರೂ ಉಪಯೋಗಿಸಬಹುದು. ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದಿರುವ ಈ ಎಟಿಎಮ್ಮುಗಳನ್ನು ನೋಡಿದರೆ ಎಲಾ ನಮ್ಮ ದೇಶ ಎಷ್ಟೊಂದು ಮುಂದುವರಿದುಬಿಟ್ಟಿದೆ ಎಂಬ ಭ್ರಮೆ ಹುಟ್ಟಿಬಿಡುತ್ತದೆ. ಕಾಲದ ಪರಿವೆಯೇ ಇಲ್ಲದೆ, ಬೇಕೆಂದಾಗ ಹಣ ಪಡೆಯಬಹುದಲ್ಲ! ನಮ್ಮ ಖಾತೆಯಲ್ಲಿ ಹಣ ಇರಲೇಬೇಕು ಎನ್ನುವ ಒಂದು ಎಚ್ಚರಿಕೆಯನ್ನು ಬಿಟ್ಟರೆ ಉಳಿದದ್ದೆಲ್ಲಾ ಕ್ರಾಂತಿಯೆನಿಸುತ್ತದೆ! ಜೊತೆಗೆ ಎಟಿಎಮ್ಮುಗಳ ರೂಮಿನಲ್ಲಿ ಯಾರೂ ಇರುವುದಿಲ್ಲ ಎನ್ನುವುದೂ ಒಂದು ನಮ್ಮದಿಯಲ್ಲವೆ..?

ಈ ಮೆಷಿನ್ನುಗಳನ್ನು ಮೊದಲನೆಯ ಸಲಕ್ಕೇ ಸರಿಯಾಗಿ ಬಳಸಲು ಬಹುತೇಕ ಎಲ್ಲರಿಗೂ ಇರಸುಮುರುಸಾಗುವುದು. ಯಾವುಯಾವುದೋ ಕೀಯನ್ನು ಒತ್ತಿ, ಹತ್ತಾರು ಸಲ ಕಾರ್ಡನ್ನು ಒಳಕ್ಕೆ ತೂರಿಸಿ, ಈಚೆ ತೆಗೆದು ಫಜೀತಿಯಾಗುವುದೂ ಉಂಟು. ಇಂತಾ ಹಲವು ಅನುಭವಗಳ ನಂತರ ಪರವಾಗಿಲ್ಲ ಎನ್ನುವ ವಿಶ್ವಾಸ ಮೂಡುತ್ತದೆ. ಒಂದೇ ಎಟಿಎಮ್ಮನ್ನು ಉಪಯೋಗಿಸುತ್ತಿದ್ದರೆ ಪರವಾಗಿಲ್ಲ. ಬೇರೆಬೇರೆ ಮೆಷಿನ್ನುಗಳನ್ನು ಉಪಯೋಗಿಸಬೇಕಾಗಿಬಂದಾಗ ಮತ್ತೆ ತಾಪತ್ರಯ! ಎಲ್ಲಾ ಮೆಷಿನ್ನುಗಳೂ ಒಂದೇ ರೀತಿಯಲ್ಲಿರುವುದಿಲ್ಲ. ಅಲ್ಪಸ್ವಲ್ಪ ವ್ಯತ್ಯಾಸಗಳಿರುತ್ತವೆ. ಈ ಅಲ್ಪಸ್ವಲ್ಪ ವ್ಯತ್ಯಾಸಗಳೇ ನಮ್ಮ ತಲೆ ತಿನ್ನುತ್ತವೆ! ಇದರ ಜೊತೆಗೆ ಹೊರಗೆ ಯಾರಾದರೂ ಕಾಯುತ್ತಿದ್ದರೆ, ಅವರು ನಮ್ಮನ್ನು ಗಮನಿಸುತ್ತಿದ್ದರೆ ನಮ್ಮ ತಾಪತ್ರಯ ಹೇಳತೀರದು! ಅದರಲ್ಲಿಯೂ ಅಕಸ್ಮಾತ್ ನಾವು ಉಪಯೋಗಿಸುವಾಗ ತಪ್ಪಾದರಂತೂ ಮುಗಿದೇ ಹೋಯಿತು! ಕಸಿವಿಸಿ, ಇರುಸುಮುರುಸು ಶುರುವಾಗಿ ಆಧುನಿಕ ಯುಗದ ಮ್ಯಾಜಿಕ್ ಎನ್ನುವ ಎಟಿಎಮ್ಮನ್ನು ನೀವು ಶಪಿಸದೆ ಇರಲಾರಿರಿ!

ವರ್ಷದ ಹಿಂದಿದ್ದ ಎಟಿಎಮ್ ಮೆಷಿನ್ನುಗಳು, ನೀವೇನಾದರೂ ತಪ್ಪು ಮಾಡಿದರೆ, ಅಂದರೆ ತಪ್ಪು ಪಿನ್ ನಂಬರನ್ನು ಹಾಕಿ ಒತ್ತಿದರೆ, ಇಲ್ಲಾ ಯಾವುದಾದರೂ ತಪ್ಪು ಕೀಯನ್ನು ಒತ್ತಿದರೆ ನಿಮ್ಮ ಕಾರ್ಡುಗಳನ್ನೇ ನುಂಗಿಬಿಡುತ್ತಿದ್ದವು! ಮತ್ತೆ ಮಾರನೆಯ ದಿನ ಬ್ಯಾಂಕಿನ ಸಿಬ್ಬಂದಿಗೆ ಒಂದು ಅರ್ಜಿಯನ್ನು ಕೊಟ್ಟು, ಅವರ ಪೋಲೀಸು ನೋಟಕ್ಕೆ ಗುರಿಯಾಗಿ, ಅವರ ಮಾಡುವ ಮಹದುಪಕಾರಕ್ಕೆ ಕೃತಜ್ಞತೆ ಸಲ್ಲಿಸಿ ಕಾರ್ಡನ್ನು ವಾಪಸ್ಸು ಪಡೆಯಬೇಕಾಗಿತ್ತು. ಪುಣ್ಯಕ್ಕೆ ಈಗಿನ ಮೆಷಿನ್ನುಗಳು ಕಾರ್ಡು ನುಂಗುವುದಿಲ್ಲ! ಇದನ್ನು ‘ಸ್ವೈಪ್’ ಮಾಡುವುದು ಎಂದು ಕರೆಯುತ್ತಾರೆ! ಕನ್ನಡದಲ್ಲಿ ಹೇಳಬೇಕೆಂದರೆ ಗೀಚುವುದು ಇಲ್ಲವೇ ಉಜ್ಜುವುದು ಎಂದಾಗುತ್ತದೆ. ಒಮ್ಮೆ ಕಾರ್ಡ್ ಗಾಗಿ ನಿಗದಿಪಡಿಸಿದ ಜಾಗದಲ್ಲಿ ಕಾರ್ಡನ್ನು ತೂರಿಸಿ ವಾಪಸ್ಸು ಎಳೆದುಕ್ಕೊಳ್ಳಬೇಕು! ಇದು ಸ್ವಲ್ಪ ಮಟ್ಟಿಗೆ ಸಮಾಧಾನಕರ! ಎಟಿಎಮ್ಮು ನುಂಗಿದ ಕಾರ್ಡ್ ಗಾಗಿ ಬ್ಯಾಂಕು ಸಿಬ್ಬಂದಿಯ ಮುಂದೆ ಕಳ್ಳರಂತೆ ತಲೆ ತಗ್ಗಿಸಿ ನಿಲ್ಲುವುದು ತಪ್ಪಿದೆ! ಆದರೆ ಇಲ್ಲೂ ಒಂದು ತೊಂದರೆಯಿದೆ! ಅದೆಂದರೆ ಒಂದು ಸಲ ಕಾರ್ಡನ್ನು ಸ್ವೈಪ್ ಮಾಡಿದರೆ ಅದು ಒಂದೇ ವ್ಯವಹಾರಕ್ಕೆ ಸೀಮಿತ! ಆದರೂ ಇದು ಕಾರ್ಡು ನುಂಗುವ ಮೆಷಿನ್ನುಗಳಿಗಿಂತಾ ವಾಸಿ.

ವಿದೇಶದಲ್ಲಿದ್ದ ಮಗಳು ಒಮ್ಮೆ ನನ್ನ ಸುಪರ್ದಿಯಲ್ಲಿ ತನ್ನ ಎಟಿಎಮ್ ಕಾರ್ಡು ಕೊಟ್ಟಿದ್ದಳು. ಅವಳ ಅಣತಿಯಂತೆ ಒಂದಿಷ್ಟು ಹಣ ತೆಗೆದು ಅವಳಿಗಾಗಿ ಒಂದು ವಸ್ತುವನ್ನು ಖರೀದಿಸಬೇಕಾಗಿತ್ತು. ಮೊತ್ತ ತುಸು ಹೆಚ್ಚೇ ಇತ್ತು. ಒಂದು ಸಲ ಎಟಿಎಮ್ಮಿನಲ್ಲಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿಗೆ ತೆಗೆಯುವ ಹಾಗಿಲ್ಲ. ಇದೊಂದು ಮಿತಿಯನ್ನು ಬ್ಯಾಂಕಿನವರು ವಿಧಿಸಿದ್ದಾರೆ. ಇಲ್ಲದಿದ್ದರೆ ಜನರು ಬ್ಯಾಂಕಿನ್ನೇ ದಿವಾಳಿ ಮಾಡಬಹುದು ಎಂಬ ಹೆದರಿಕೆ ಬ್ಯಾಂಕಿನವರಿಗೆ ಇರಬಹುದು! ಇದಕ್ಕೂ ಒಂದು ತಂತ್ರವಿದೆ. ಹೆಚ್ಚಿನ ಮೊತ್ತಕ್ಕೆ ಎರಡು ಸಲ ಬೇಕಾದರೆ ತೆಗೆಯಬಹುದು ಎಂದು ನನ್ನ ಮಗಳು ತಿಳಿಸಿದ್ದಳು. ಅಂತ ಪ್ರಯತ್ನ ಮಾಡಲು ಹೋಗಿ ವಿಚಿತ್ರ ಪರಿಸ್ಥಿತಿಯಲ್ಲಿ ಸಿಕ್ಕಿ ಮೂರು ದಿನ ಒದ್ದಾಡಿದ ಅನುಭವ ಇನ್ನೂ ಹಸಿಹಸಿಯಾಗಿದೆ. ಕಾರ್ಡನ್ನು ಹಾಕಿ ಇಪ್ಪತ್ತು ಸಾವಿರ ಹಣವನ್ನು ನಮೂದಿಸಿ ಮಿಷಿನ್ನಿನ ಟರ್ರಾಪರ್ರಾ ಶಬ್ದವನ್ನು ಆಲಿಸುತ್ತಾ ಹಣಕ್ಕಾಗಿ ಕಾಯುತ್ತಿದ್ದೆ. ಹಣವೇನೋ ಬಂತು, ಆದರೆ ನನ್ನ ಕೈಗಲ್ಲ! ಎಲ್ಲಾ ಐನೂರರ ನೋಟುಗಳು ಮೆಷಿನ್ನಿನ ಕರೆನ್ಸಿ ಕಿಡಿಕಿಯಲ್ಲಿ ಕಂಡವು. ತೆಗೆದುಕ್ಕೊಳ್ಳಲು ಹೋದರೆ ಒಂದಾದರೂ ನೋಟು ಕೈಗೆ ಬಾರದಂತೆ ಜಮಾಯಿಸಿದ್ದವು! ಹಣೆಯಲ್ಲಿ ಬೆವರಿಳಿಯಿತು! ಇಪ್ಪತ್ತು ಸಾವಿರ ರೂಪಾಯಿ! ಎಳೆಯಲು ಹೋದರೆ ಒಂದಾದರೂ ಕೈಗೆ ಬಂದರೆ ಕೇಳಿ! ಅದು ನನ್ನ ಕೈಗೆ ಬಾರದೆ, ನಾನು ಬಿಡದೆ ದೊಂಬರಾಟ ಮಾಡುತ್ತಿದ್ದಾಗ ಕೆಲವೇ ಕ್ಷಣಗಳಲ್ಲಿ ಎಲ್ಲ ನೋಟುಗಳನ್ನು ಟರ್ರಾಪುರ್ರಾ ಸದ್ದಿನೊಂದಿಗೆ ಮೆಷಿನ್ನೇ ನುಂಗಿಬಿಟ್ಟಿತು. ಇತ್ತ ಮುದ್ರಿಸಿದ ಚೀಟಿಯಲ್ಲಿ ಇಪ್ಪತ್ತು ಸಾವಿರ ತೆಗೆದದ್ದು ದಾಖಲಾಗಿತ್ತು! ಈ ವಿಚಿತ್ರ ಪರಿಸ್ಥಿತಿಯಲ್ಲಿ ರಿಟೈರ್ ಆಗಿ ಹೆಚ್ಚಿನ ಹಣದ ಮೂಲವಿಲ್ಲದ ವ್ಯಕ್ತಿಗೆ ಹೇಗಾಗಿರಬೇಕೋ ನನಗೂ ಹಾಗೇ ಆಯಿತು. ಜೀವ ಬಾಯಿಗೆ ಬಂದಿತ್ತು! ಪುಣ್ಯಕ್ಕೆ ಆ ಎಟಿಎಮ್ಮಿಗೆ ಒಬ್ಬ ಕಾವಲುಗಾರ ಇದ್ದ. ಅವನನ್ನು ಕರೆದು ವಿಷಯ ತಿಳಿಸಿದೆ. ನಿಮ್ಮ ಅಕೌಂಟು ಯಾವ ಬ್ರ್ಯಾಂಚಿನಲ್ಲಿದೆಯೋ ಅಲ್ಲಿಗೆ ಹೋಗಿ ನಿಮ್ಮ ತಕರಾರು ಅರ್ಜಿ ನೀಡಿ ಎಂದೊಂದು ಸುಲಭದ ಸಲಹೆ ನೀಡಿ ತನ್ನ ಸ್ವಸ್ಥಾನಕ್ಕೆ ಮರಳಿದ. ನಾನು ಇದ್ದುದ್ದು ಮೈಸೂರು, ಮಗಳ ಬ್ಯಾಂಕಿನ ಖಾತೆ ಇದ್ದುದು ಬೆಂಗಳೂರಿನಲ್ಲಿ. ಜೊತೆಗೆ ಕಾರ್ಡೂ ನನ್ನದಲ್ಲ, ಅಕೌಂಟೂ ನನ್ನದಲ್ಲ. ಏನು ಮಾಡಲೂ ತೋಚದೆ ನಿಂತಿದ್ದಾಗ ಎಟಿಎಮ್ಮಿಗೆ ಹಣ ತುಂಬುವ ವ್ಯಾನು ಬಂತು! ಸದ್ಯ ಬದುಕಿದೆಯಾ ಬಡಜೀವವೇ ಎಂದುಕೊಂಡೆ! ಇನ್ನೇನು ನನ್ನ ಸಮಸ್ಯೆ ಬಗೆಹರಿಯಿತು, ಅವರಿಗೆ ಎಲ್ಲಾ ವಿವರಿಸಿದರೆ ಹಣ ನೀಡುತ್ತಾರೆ ಎನ್ನಿಸಿತು. ನನ್ನ ಕಷ್ಟವನ್ನು ಅವರಿಗೆ ವಿವರಿಸಿದೆ. ಅವರಲ್ಲೊಬ್ಬ ಅಯ್ಯಪ್ಪನ ಮಾಲೆ ಧರಿಸಿ, ಕಪ್ಪು ಬಟ್ಟೆ ತೊಟ್ಟಿದ್ದ! ಅವನ ಮೇಲೆ ನನಗೆ ಅಪಾರ ಭರವಸೆ ಮೂಡಿತು! ಸಾಕ್ಷಾತ್ ಅಯ್ಯಪ್ಪ ಸ್ವಾಮಿಯೇ ನನ್ನ ಸಹಾಯಕ್ಕೆ ಬಂದಂತೆ ಭಾಸವಾಯಿತು! ನನ್ನ ಸಮಸ್ಯೆಗೆ ಪರಿಹಾರ ಸಿಕ್ಕೇಬಿಟ್ಟಿತು ಅಂದುಕೊಂಡೆ. ನನ್ನನ್ನು ಆಚೆ ನಿಲ್ಲಲು ಹೇಳಿ ಸಿಬ್ಬಂದಿ ತಾವು ವ್ಯಾನಿನಿಂದ ಇಳಿಸಿಕೊಂಡ ಹಣವನ್ನು ಮೆಷಿನ್ನಿನ ಒಳಗಿನ ಟ್ರೇಗಳಲ್ಲಿ ಜೋಡಿಸಿದರು. ಹಣವನ್ನು ತಾಳೆ ಮಾಡಿ ನೋಡಿದರು ಅಲ್ಲಿದ್ದುದಕ್ಕೂ, ಹಣವನ್ನು ಡ್ರಾ ಮಾಡಿರುವುದಕ್ಕೂ ಹೊಂದಿಸಿ ನೋಡಿದರು. ಅವರ ಕೆಲಸ ಮುಗಿದು ಈಚೆ ಬಂದಾಗ ನಾನು ನನ್ನ ಇಪ್ಪತ್ತು ಸಾವಿರ ಕೇಳಿದೆ. ಅವರು ಸರ್, ನಮಗೆ ಹಣದ ಲೆಕ್ಕ ನಮೂದಿಸುವ, ರಿಪೋರ್ಟ್ ಮಾಡಲು ಅಧಿಕಾರವಿದೆ ಆದರೆ ನಿಮಗೆ ಹಣ ಕೊಡಲು ಅಧಿಕಾರವಿಲ್ಲ. ಹೆಚ್ಚುವರಿ ಇಪ್ಪತ್ತು ಸಾವಿರ ಹಣ ಪಾವತಿಯಾಗದೆ ಉಳಿದಿದೆ ಎಂದು ರಿಪೋರ್ಟ್ ಮಾಡುತ್ತೇವೆ. ಉಳಿದದ್ದು ನೀವು ಬ್ರ್ಯಾಂಚಿನಲ್ಲಿ ವ್ಯವರಸಿ ಎಂದು ತಾರಮ್ಮಯ್ಯ ಆಡಿಸಿ ವ್ಯಾನಿನೊಂದಿಗೆ ಬುರ್ರೆಂದು ಹೋರಟೇ ಹೋದರು. ಕಪ್ಪು ಬಟ್ಟೆಯ ಅಯ್ಯಪ್ಪ ಭಕ್ತನೂ ನನಗೆ ನೆರವಾಗಲಿಲ್ಲ! ನಾನು ಮನೆಗೆ ಹೋಗಿ ಮಗಳಿಗೆ ಫೋನಾಯಿಸಿ, ಬ್ಯಾಂಕಿಗೆ ಇ-ಮೈಲು ಕಳಿಸುವಂತೆ ಹೇಳಿದೆ. ಆನಂತರ ಮೂರು ದಿನಗಳಲ್ಲಿ ಆ ಇಪ್ಪತ್ತು ಸಾವಿರವನ್ನು ಮಗಳ ಖಾತೆಗೆ ವರ್ಗಾಯಿಸಿದರೆನ್ನಿ! ಆದರೆ ಆ ಮೂರು ದಿನಗಳಲ್ಲಿ ನಾನು ಪಟ್ಟ ಯಾತನೆ ವರ್ಣಿಸಲಾರದು! ಅದಾದ ಮೇಲೆ ನನಗೆ ಎಟಿಎಮ್ ಮೆಷಿನ್ನೆಂದರೆ ಭೂತವನ್ನು ಕಂಡಷ್ಟೇ ಭಯವಾಗುತ್ತದೆ. ಇದರ ಬದಲಿಗೆ ಬ್ರ್ಯಾಂಚಿನಲ್ಲಿ ಸಿಡುಕು ಮುಖದ, ಕೆಲಸ ಮಾಡಲು ಆಸಕ್ತಿಯೇ ಇಲ್ಲದ ನಿರಾಸಕ್ತಿಯೋಗಿಗಳಂತ ಗಂಡು ಸಿಬ್ಬಂದಿಯ, ತಮ್ಮ ಸಂಸಾರದ ಸುದ್ದಿಯ ಸುಳಿಯಲ್ಲೇ ಸಿಲುಕಿರುವ ಮಹಿಳಾ ಸಿಬ್ಬಂದಿಯ ಜೊತೆ ವ್ಯವಹರಿಸುವುದೇ ಸುರಕ್ಷಿತವೆನಿಸುತ್ತದೆ.

ಈ ಲೇಖನ ಪ್ರಾರಂಭಿಸಿದ ದಿನವೇ ನನ್ನ ಬಡಾವಣೆಯ ಹುಚ್ಚು ಎಟಿಎಮ್ ಮೆಷಿನ್ನೊಂದು ನನ್ನನು ಕಚ್ಚಿ ಗಾಯಗೊಳಿಸಿತು ಎಂದರೆ ನಂಬಲಾರಿರಿ! ಮೆಷಿನ್ನುಗಳಿಗೆ ಹುಚ್ಚು ಹಿಡಿಯಲು ಸಾಧ್ಯವೆ, ಅವು ಬೀದಿ ನಾಯಿಗಳಂತೆ ಕಚ್ಚಲು ಸಾಧ್ಯವೆ, ಅವಕ್ಕೇನು ತಲೆಯಿದೆಯೆ-ಹುಚ್ಚು ಹಿಡಿಯಲು, ಬಾಯಿಯಿದೆಯೇ-ಕಚ್ಚಲು? ಈ ಲೇಖಕನದು ಅಸಂಬದ್ದ ಪ್ರಲಾಪ ಎಂದು ನಿಮಗನ್ನಿಸಲು ಸಾಧ್ಯ..? ನನ್ನ ಬಡಾವಣೆಯ ಆ ಎಟಿಎಮ್ ಮೆಷಿನನ್ನು ಹುಚ್ಚು ಮೆಷಿನ್ನು ಎಂದು ಕರೆಯಲು ನನ್ನಲ್ಲಿ ಸಾಕಷ್ಟು ಪುರಾವೆಯಿದೆ. ಮೊದಲಿಗೆ ಸದರಿ ಎಟಿಎಮ್ಮು ಯಾವಾಗ ಕೆಲಸ ಮಾಡುತ್ತದೆ ಎನ್ನುವ ಗ್ಯಾರಂಟಿಯಿರುವುದಿಲ್ಲ. ಅಕಸ್ಮಾತ್ ಕೆಲಸ ಮಾಡಿದರೆ, ನೂರಾರು ತಕರಾರು ಮಾಡುತ್ತದೆ. ವ್ಯವಹಾರದ ವಿವರವನ್ನು ದಾಖಲಿಸುವ ಮುದ್ರಿತ ಚೀಟಿ ಬರುವುದಿಲ್ಲ! ಬಹುತೇಕ ಸಮಯ ಅಲ್ಲಿ ಪೇಪರೇ ಇರುವುದಿಲ್ಲ. ಒಮ್ಮೊಮ್ಮೆ ಖಾತೆಯಲ್ಲಿ ಹಣ ಇದ್ದರೂ ಹಣ ತೆಗಯಲಾಗದು ಎಂದು ತೆರೆಯ ಮೇಲೆ ಮಾಹಿತಿ ಬರುತ್ತದೆ; ನಿಮ್ಮ ಪಾಸ್ವರ್ಡ್ ಸರಿ ಇಲ್ಲ ಎನ್ನುವುದು-ಹೀಗೆ ಅಸಂಬದ್ಧ ಪ್ರಲಾಪ ಮಾಡುವ ಈ ಮೆಷಿನ್ನನ್ನು ಹುಚ್ಚು ಮೆಷಿನ್ನು ಎಂದು ಕರೆಯುವುದರಲ್ಲಿ ಯಾವ ತಪ್ಪೂ ಇಲ್ಲ. ಇನ್ನು ಅದು ಹೇಗೆ ಕಚ್ಚಲು ಸಾಧ್ಯ ಎಂಬ ಪ್ರಶ್ನೆಗೆ ನನ್ನದೊಂದು ವಿನಂತಿ. ಮುಂದಿನ ಸಲ ಎಟಿಎಮ್ಮಿನಲ್ಲಿ ನೋಟುಗಳು ಬರುವ ಕಿಂಡಿಯನ್ನು ನೀವು ಪರಿಶೀಲಿಸಿ. ಅದಕ್ಕೆ ಹಲ್ಲುಗಳಿವೆಯೇ ಇಲ್ಲವೇ ನೋಡಿ! ನನ್ನ ಮಾತು ಸುಳ್ಳು ಎಂದು ಹೇಳಿದರೆ ನಾನು ಲೇಖನ ಸಂನ್ಯಾಸ ತೆಗೆದುಕೊಂಡು ಕನ್ನಡ ಓದುಗರಿಗೆ ಮಹದುಪಕಾರ ಮಾಡುವ ರಣ ಶಪಥ ಮಾಡುತ್ತೇನೆ! ಮೆಷಿನ್ನು ಹೇಗೆ ಕಚ್ಚಿತು ಎಂಬ ಪ್ರಶ್ನೆ ನಿಮ್ಮ ಮುಖದ ಮೇಲಿದೆ ಗೊತ್ತು.

ಅಂದು ಎಂದಿನಂತೆ ತುಸು ಭಯದಿಂದಲೇ ಮೆಷಿನ್ನಿನ ಮುಂದೆ ನಿಂತು ಮನಸ್ಸಿನಲ್ಲಿಯೇ ನನಗೆ ತೊಂದರೆ ಮಾಡಬೇಡ ಎಂದು ಪ್ರಾರ್ಥಿಸಿ, ಕಾರ್ಡ್ ಸ್ವೈಪ್ ಮಾಡಿ, ಪಿನ್ ನಂಬರ್, ಹಣದ ಮೊತ್ತ ನಮೂದಿಸಿ ಮೆಷಿನ್ನಿನ ಮುಂದೆ ವಿಧೇಯನಾಗಿ ನಿಂತೆ. ಹಣ ಕರೆನ್ಸಿ ಕಿಂಡಿಯಲ್ಲಿ ಕಂಡಿತು. ನಾನು ಹಣ ಕೊಡುವುದಿಲ್ಲ ಎಂದು ಮೊಂಡಾಟ ಮಾಡುವ ವ್ಯಕ್ತಿಯಂತೆ ಮೆಷಿನ್ನಿನಲ್ಲಿ, ಅದರ ಹಲ್ಲುಗಳ(ಜೈವಿಕ ಹಲ್ಲುಗಳಲ್ಲ, ಲೋಹದ ಭಾಗಗಳು) ಮಧ್ಯೆ ನೋಟುಗಳು ಬಿಡಿಸಲಾರದಂತೆ ಸಿಕ್ಕಿಕೊಂಡಿದ್ದವು! ನನ್ನ ಪುಣ್ಯಕ್ಕೆ ನೋಟುಗಳು ವಾಪಸ್ಸು ಹೋಗಲಿಲ್ಲ! ಅಲ್ಲೇ…ಹಾಗೇ… ನಿಂತಿದ್ದವು. ಇತ್ತ ನಿಮಗೆ ಹಣ ಪಾವತಿಯಾಗಿದೆ ಎಂಬ ಮುದ್ರಿತ ಚೀಟಿಯೂ ಬಂದುಬಿಟ್ಟಿತು! ಆ ಎಟಿಎಮ್ಮಿನ ಹಲ್ಲುಗಳ ಮಧ್ಯೆ ಸಿಕ್ಕಿಕೊಂಡಿದ್ದ ನೋಟುಗಳು ನನ್ನವೇ! ಆದರೆ ಮೆಷಿನ್ನು ತೆಗೆದುಕ್ಕೊಳ್ಳಲು ಸಾಧ್ಯವಾಗದಂತೆ ತನ್ನ ಹಲ್ಲುಗಳ ಮಧ್ಯೆ ಹಿಡಿದುಕೊಂಡು ಮೊಂಡಾಟ ಮಾಡುತ್ತಿತ್ತು! ಸ್ವಲ್ಪ ಸ್ವಲ್ಪ ದೂರದಲ್ಲಿ ಮೂರು ಕೆಳದವಡೆಯ ಹಲ್ಲು ಮತ್ತು ಮೇಲು ದವಡೆಯ ಹಲ್ಲುಗಳಲ್ಲಿ ನೋಟುಗಳನ್ನು ಮೆಷಿನ್ನು ಹಿಡಿದುಕೊಂಡಿತ್ತು! ಹಲ್ಲುಗಳನ್ನು ಕೈಯಿಂದ ಹಿಗ್ಗಲಿಸಲು ನೋಡಿದೆ. ಸಾಧ್ಯವಾಯಿತು. ಆದರೆ ಒಟ್ಟು ಆರೂ ಹಲ್ಲುಗಳನ್ನು ಒಮ್ಮೆಲೇ ಹಿಗ್ಗಿಸಿದರೆ ನೋಟುಗಳು ಕೈಗೆ ಬರುವ ಸಾಧ್ಯತೆಯನ್ನು ಕಂಡುಕೊಂಡೆ. ಪ್ರಯಾಸಪಟ್ಟು ಎರಡು ಹಲ್ಲುಗಳ ಹಿಡಿತವನ್ನು ಸಡಿಲಿಸಿ ಒಂದು ನೋಟು ಎಳೆದುಕೊಂಡೆ! ಎದೆ ಬೇರೆ ನಗಾರಿಯಂತೆ ಬಡಿದುಕ್ಕೊಳ್ಳುತ್ತಿತ್ತು! ಯಾವಾಗ ಈ ನೋಟುಗಳನ್ನು ಮೆಷಿನ್ನು ನುಂಗುವುದೋ ಎಂಬ ಹೆದರಿಕೆ! ಜೊತೆಗೆ ಅಲ್ಲೆಲ್ಲೋ ಇರುವ ಕ್ಯಾಮೆರಾದಲ್ಲಿ ನನ್ನ ಈ ಪ್ರಯತ್ನ ಕಳ್ಳನ ಪ್ರಯತ್ನದಂತೆ ಕಂಡರೆ ಆಶ್ಚರ್ಯವಿಲ್ಲ! ಈ ಎಲ್ಲ ಯೋಚನೆಗಳಿಂದ ಎದೆಯಲ್ಲಿ ಅವಲಕ್ಕಿ ಬತ್ತ ಕುಟ್ಟುತ್ತಿತ್ತು! ಅದರೆ ನಡುವೆಯೇ ನನ್ನ ನೋಟುಗಳನ್ನು ಬಿಡಿಸಿಕ್ಕೊಳ್ಳುವ ಪ್ರಯತ್ನ ಮುಂದುವರಿಸಿದೆ. ಐನೂರರ ಹತ್ತೊಂಬತ್ತು ನೋಟುಗಳು ಮತ್ತು ನೂರರ ಐದು ನೋಟುಗಳನ್ನು ಮೆಷಿನ್ನಿನ ಹಲ್ಲುಗಳಿಂದ ಯಶಸ್ವಿಯಾಗಿ ಬಿಡಿಸಿಕೊಂಡೆ! ಇಷ್ಟು ಮಾಡುವಲ್ಲಿ ನನ್ನ ಷರ್ಟು ಪೂರಾ ಬೆವರಿನಿಂದ ತೋಯ್ದಿತ್ತು! ಇದರ ಜೊತೆಗೆ ಆಚೆ ಎಟಿಎಮ್ ಉಪಯೋಗಿಸಲು ಇನ್ನೊಬ್ಬ ಖಾತೆದಾರ ಪುಣ್ಯಾತ್ಮ, ಗಾಜಿನ ಬಾಗಿಲಿನ ಮೂಲಕ ನನ್ನ ಸಾಹಸವನ್ನು ನೋಡುತ್ತಿದ್ದ! ನಾನು ಎಲ್ಲಾ ನೋಟುಗಳನ್ನು ತೆಗೆದುಕೊಂಡರೂ ಮೆಷಿನ್ನಿನ್ನ ಬಾಯಿ ಬಕಾಸುರನ ಬಾಯಿಯಂತೆ ತೆರೆದೇ ಇತ್ತು! ಅದು ವಾಪಸ್ಸಾಗುವ ಯಾವ ಲಕ್ಷಣಗಳೂ ಕಾಣಲಿಲ್ಲ! ಸಧ್ಯ ನನ್ನ ಹಣ ಬಂದಿತ್ತು! ಒಮ್ಮೆಲೇ ನನ್ನ ಕೈ ಬೆರೆಳುಗಳು ಚುರುಗುಟ್ಟುತ್ತಿರುವುದು ಗಮನಕ್ಕೆ ಬಂತು. ನೋಡಿದರೆ ಮೆಷಿನ್ನಿನ ಹಲ್ಲುಗಳನ್ನು ಹಿಗ್ಗಲಿಸುವಾಗ ನನ್ನ ಬೆರಳುಗಳಿಗೆ ಗಾಯಗಳಾಗಿದ್ದವು! ಬೆರಳುಗಳ ಚರ್ಮ ಕಿತ್ತು ರಕ್ತ ಅಲ್ಲಲ್ಲಿ ಕಾಣಿಸುತ್ತಿತ್ತು! ಅತಿ ಸ್ಪಷ್ಟವಾಗಿ ಎಟಿಎಮ್ಮು ಮೆಷಿನ್ನು ನನ್ನ ಕೈ ಬೆರಳುಗಳನ್ನು ಕಚ್ಚಿತ್ತು! ಇದನ್ನು ನೀವು ನಂಬದಿರಲಾರಿರಿ! ನಿಮಗೂ ಇಂತಾ ಅನುಭವಗಳು ಆಗಿಲ್ಲವೆ..? ಆಗಿರಲೇಬೇಕಲ್ಲ..? ಸತ್ಯವಾಗಿ ಹೇಳಿ! ಎಟಿಎಮ್ ಗುಮ್ಮ ನಿಮ್ಮನ್ನು ಕಾಡಿಲ್ಲವೆ..? ಕಾಡುತ್ತಿಲ್ಲವೆ..? ಈಗ ನಾನು ಈ ಲೇಖನಕ್ಕೆ ಕೊಟ್ಟಿರುವ ಶೀರ್ಷಿಕೆ ಸೂಕ್ತವಾಗಿದೆ ಎಂದು ಒಪ್ಪಿದ್ದೀರಲ್ಲವೆ..?

 

‍ಲೇಖಕರು G

December 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

2 ಪ್ರತಿಕ್ರಿಯೆಗಳು

  1. veda

    Nimma lekana atyanta sookthavagide,ATMninda eshtella shayavagideyo ashetee kirikirigalu agide annuvudu satya.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: