ಟೈಮ್ ಪಾಸ್ ಕಡ್ಲೆಕಾಯ್ : ಫಂಕಿ ಡೇ! ಮಂಕಿ ಡೇ!!

ಎಸ್ ಜಿ ಶಿವಶಂಕರ್

ಕ್ಯಾಂಪಸ್ಸು ಎಂದಿನಂತಿರಲಿಲ್ಲ. ವಿಚಿತ್ರವಾಗಿ ಕಾಣಿಸುತ್ತಿತ್ತು. ಏನೋ ಬದಲಾವಣೆಯಾಗಿದೆ ಎನಿಸುತ್ತಿತ್ತು ಏನೋ ಅನುಮಾನ, ಹೆದರಿಕೆ ಹುಟ್ಟಿಸುವ ವಾತಾವರಣ! ಕಾರಿನಿಂದ ಈಚ್ಚೆ ಇಳಿಯುವಾಗ ಭಿಕ್ಷುಕನೊಬ್ಬ ಎದುರಾದ! ಎಲಾ..? ಕ್ಯಾಂಪಸ್ಸಿಗೂ ಭಿಕ್ಷುಕರು ಬಂದರೇ..? ಅಚ್ಚಿರಿಯಾಯಿತು. ಅಧ್ಯಾಪಕ ವೃತ್ತಿ ಕೈಗೊಂಡ ಮೂರು ತಿಂಗಳಲ್ಲಿ ಇಪ್ಪತ್ತು ಎಕರೆಯ ವಿಶಾಲ ಕ್ಯಾಂಪಸ್ಸಿನಲ್ಲಿ ಒಬ್ಬನೇ ಒಬ್ಬ ಭಿಕ್ಷುಕ ಕಂಡಿರಲಿಲ್ಲ! ಈಗೆಲ್ಲಿಂದ ಬಂದ ಈ ಭಿಕ್ಷುಕ..? ಗೇಟಿನಲ್ಲಿ ಸೆಕ್ಯೂರಿಟಿಯವನೇನು ಕಳ್ಳೇಕಾಯಿ ತಿನ್ನುತ್ತಿದ್ದಾನಾ..? ಇಲ್ಲಾ ಇಂತವರುಉ ಒಳಗೆ ಬಿಟ್ಟು ತಾನು ಒಂದಿಷ್ಟು ಕಮಿಷನ್ ಹೊಡೆಯುತ್ತಾನಾ..? ತಲೆಯಲ್ಲಿ ಯೋಚನೆಗಳು ಹುಟ್ಟಿದುವು.
‘ನೋ ಮೀಲ್ಸ್ ಲಾಸ್ಟ್ ಟೂಡೇಸ್’ ಭಿಕ್ಷುಕ ಕೈಚಾಚಿದ. ಜೊತೆಗೆ ಇಂಗ್ಲಿಷ್ ಬೇರೆ! ಅವನ ನೋ ಮೀಲ್ಸ್ ಲಾಸ್ಟ್ ಟೂಡೇಸ್ ಮಾತ್ರ ನಂಬುವಂತಿರಲಿಲ್ಲ. ಸೀಳಿದರೆ ಮೂರು ಜನರಾಗುವಂತಿದ್ದ ಅವನು! ಎದು ಕೈಚಾಚಿ ನಿಂತಿದ್ದ. ಜೇಬಿಕೆ ಕೈಹಾಕಿದೆ ಒಂದು ರೂಪಾಯಿಯೋ ಇಲ್ಲಾ ಎರಡು ರೂಪಾಯಿಯದೋ ನಾಣ್ಯ ಕೈಗೆ ಬಂತು. ಅದರ ಮೌಲ್ಯ ತಿಳಿದುಕ್ಕೊಳ್ಳುವ ಗೋಜಿಗೆ ಹೋಗದೆ, ಚಾಚಿದ್ದ ಅವನ ಕೈಗೆ ಹಾಕಿದೆ. ಆ ನಾಣ್ಯದ ಮೌಲ್ಯ ತಿಳಿದುಕ್ಕೊಳ್ಳಬೇಕಾದರೆ ನನ್ನ ಬ್ರೀಫ್ ಕೇಸ್ ತೆಗೆದ, ಅದರೊಳಗಿದ್ದ ಕನ್ನಡಕ ಪೌಚಿನಿಂದ ತೆಗೆದು ಮೂಗಿಗೇರಿಸಿ ನೋಡಬೇಕಿತ್ತು. ಆ ಉಸಾಬರಿ ಬೇಡವೆಂದು ಕೈಗೆ ಬಂದಿದ್ದು ಬಿಕ್ಷುಕನಿಗೆ ಹಾಕಿದೆ.
ನಾಣ್ಯವನ್ನು ಹಿಂದೆ ಮುಂದೆ ತಿರಿಗಿಸಿ ನೋಡುವ ಉದ್ಧಟತನ ತೋರಿದ ಭಿಕ್ಷುಕ! ನನಗೆ ಮೈಉರಿಯಿತು. ‘ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಿಲಲ್ಲಿ ಮೊಳ ಹಾಕಿದರಂತೆ ಎಂಬ ಗಾದೆ ನೆನಪಾಯಿತು.
‘ಟೂ ರುಪೀಸ್ ನೋ ವಾಲ್ಯೂ, ಒನ್ ಇಡ್ಲಿ ಟೆನ್ ರುಪೀಸ್’ ಆ ನಾಣ್ಯವನ್ನು ವಾಪಸ್ಸು ಮಾಡಿದ!
‘ಎಲಾ ಇವನ ಕೊಬ್ಬೆ’ ಎಂದುಕೊಂಡೆ ಮನಸ್ಸಿನಲ್ಲೇ! ಇಂತಾ ಭಿಕ್ಷುಕನನ್ನು ಜೀವಮಾನದಲ್ಲೇ ನೋಡಿರಲಿಲ್ಲ! ಇಂತವರೊಂದಿಗೆ ವಾದ ಮಾಡುವುದು ನನ್ನ ಮಯರ್ಾದೆಗೇ ಭಂಗ ಎನಿಸಿತು. ಮತ್ತೆ ಜೇಬಿಗೆ ಕೈಹಾಕಿ ಹತ್ತು ರೂಪಾಯಿನ ಕಕ್ಕಿ ಡಿಪಾರ್ಟ್ಮಂಟಿನತ್ತ ನಡೆದೆ.
ದೂರದಲ್ಲಿ ಒಂದಿಷ್ಟು ಜನ ಗುಂಪಾಗಿ ನಿಂತಿದ್ದರು. ನನ್ನ ಕಡೆ ನೋಡಿ ಗೊಳ್ಳೆಂದು ನಕ್ಕರು. ಕ್ಯಾಂಪಸ್ಸಿನಲ್ಲಿ ಇವೆಲ್ಲಾ ಮಾಮೂಲು. ಅಧ್ಯಾಪಕರನ್ನು ತಮಾಷೆಯ ವಸ್ತುಗಳಂತೆ ನೋಡುವುದು, ಅಡ್ಡ ಹೆಸರಿಟ್ಟು ನಗುವುದು ಮುಂತಾದುವು. ಅದನ್ನು ಗಮನಿಸಿದೆ ಮುಂದೆ ಹೆಜ್ಜೆ ಹಾಕಿದೆ.
ಮೂರು ದಶಕಗಳು ಕಾರ್ಖಾನೆಯೊಂದರಲ್ಲಿ ಇಂಜಿನಿಯರನಾಗಿ ಕೆಲ್ಸ ಮಾಡಿ ತಲೆ ಬೆಳ್ಳಗಾಗಿ, ಕಣ್ಣು ಮೆಳ್ಳಗಾಗಿ, ಕಿವಿ ಮಂದವಾಗಿ, ಬಳಲಿ ಬೆಂಡಾಗಿ ಸ್ವಯಂ ನಿವೃತ್ತಿ ಪಡೆದು ಬಿಡುಗಡೆಯಾಗಿದ್ದೆ. ನಂತರ ಎಂ.ಬಿ.ಎ ಕಲಿಸುವ ಕಾಲೇಜೊಂದರಲ್ಲಿ ಅಧ್ಯಾಪಕ ವೃತ್ತಿ ಕೈಗೊಂಡಿದ್ದೆ. ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದೆ. ಹುಡುಗರ ಜೊತೆ ಏಗುವುದು ಕಾರ್ಖಾನೆಯಲ್ಲಿ ಉದ್ಯೋಗಿಗಳ ಜೊತೆ ಏಗುವುದಕ್ಕಿಂದ ಕಠಿಣ ಎಂದು ನಿಧಾನಕ್ಕೆ ಅರಿವಾಗುತ್ತಿತ್ತು. ಹೊಣೆಗಾರಿಕೆಯಿಲ್ಲದ ಎಡಬಿಡಂಗಿ ಹುಡುಗ-ಹುಡುಗಿಯರ ಸ್ವಭಾವ, ಶಿಸ್ತಿನ ಅಭಾವ ಅರ್ಥ ಮಾಡಿಕ್ಕೊಳ್ಳುವುದು ಅಷ್ಟು ಸುಲಭವಲ್ಲ ಅನ್ನಿಸಿತ್ತು, ಮೂರು ತಿಂಗಳಿಂದ.
ಡಿಪಾಟ್ಮಂಟ್ ಬಾಗಿಲಲ್ಲೇ ಯಾವುದೋ ವಿಮಾನ ಕಂಪೆನಿಯ ಇಬ್ಬರು ಏರ್ಹೋಸ್ಟೆಸ್ ನನಗೆ ವಂದಿಸಿದರು. ಪ್ರತಿವಂದಿಸಿದೆ.
‘ಸರ್, ನಮ್ಮ ಹೊಸ ಏಲರ್ೆನ್ಸಿನಿಂದ ಸಿಂಗಾಪುರಕ್ಕೆ ಪ್ರವಾಸ ಏರ್ಪಡಿಸಿದ್ದೇವೆ. ಇದು ನೂರಕ್ಕೆ ನೂರು ಫ್ರೀ..ಟ್ರಿಪ್ಪು. ಇದರಲ್ಲಿ ನಿಮಗೆ ಇಂಟರೆಸ್ಟ್ ಇದೆಯಾ?’ ಅವರಲ್ಲೊಬ್ಬಳು ಕೇಳಿದಳು.
ಹೀಗೆಲ್ಲಾದರೂ ಅವಕಾಶ ಸಿಕ್ಕರೆ ಇಲ್ಲ ಎನ್ನಲಾದೀತೆ..? ಅದೂ ಪುಕ್ಕಟೆಯಾಗಿ! ಸುಳ್ಳಿರಬಹುದೆನ್ನಿಸಿತು. ‘ಹೂ’ ಅಂದರೇನು ಕೊಳ್ಳೆ ಹೋಗುವುದು. ಗಾದೇನೇ ಇದೆಯಲ್ಲ..? ‘ಬಿಟ್ಟಿಯಾದರೆ ನನಗೊಂದು, ನಮ್ಮಪ್ಪನಿಗೊಂದು. ತೆರ ಕೊಡುವ ಹಾಗಿದ್ದರೆ ನಾನು ಸಣ್ಣವ ನಮ್ಮಪ್ಪ ಮುದುಕ’ ಎಂದು. ಹಿಗ್ಗಿ ಹೀರೇಕಾಯಿಯಾಗಿ ಮನೆಮಂದಿಯ ಹೆಸರನ್ನೆಲ್ಲಾ ಹೇಳಿ, ಎಲ್ಲರ ಹೆಸರನ್ನೂ ಆಕೆ ಬರೆದುಕೊಂಡ ಮೇಲೆ ದಿಪಾರ್ಟ್ಮಂಟಿನೊಳಕ್ಕೆ ಪ್ರವೇಶಿಸಿದೆ.
ಮೊದಲನೆಯ ಪೀರಿಯಡ್ಡೇ ನನಗೆ ಕ್ಲಾಸಿತ್ತು. ಅಟೆಂಡೆನ್ಸ್ ರಿಜಿಸ್ಟರ್ ಕೈಯಲ್ಲಿ ಹಿಡಿದು ಮನಡಿಯ ಮೇಲಿನ ಕ್ಲಾಸಿನತ್ತ ನಡೆದೆ.

ಮಹಡಿ ಹತ್ತಿದಾಗ ಕೆಳಗೆ ನಾಲ್ಕಾರು ನಾಯಿಗಳು ಬೊಗಳುವುದು ಬಾಲ್ಕನಿಯಿಂದ ಕಂಡಿತು. ಕ್ಯಾಂಪಸ್ಸಿನಲ್ಲಿದ್ದ ಬಿಡಾಡಿ ನಾಯಿಗಳೆಲ್ಲಾ ಒಕ್ಕೊರಲಿನಿಂದ ಬೊಗಳುತ್ತಿದ್ದವು. ನನ್ನಿಂದ ಹತ್ತು ರೂಪಾಯಿ ಪಡೆದ ಭಿಕ್ಷುಕನತ್ತ ಬೊಗಳುತ್ತಾ ಆಕ್ರಮಣ ಮಾಡಲೆತ್ನಿಸುತ್ತಿದ್ದವು. ತನ್ನ ದೊಣ್ಣೆಯಿಂದ ಅವನ್ನು ಹಿಂದಕ್ಕಟ್ಟುತ್ತಿದ್ದ ಆತ.
ಕ್ಯಾಂಪಸ್ಸಿನ ತುಂಬಾ ಅಲ್ಲಲ್ಲಿ ಜನರು ಗುಂಪುಗಾಗಿ ನಿಂತಿರುವುದು ಕಂಡಿತು. ಕೆಲವು ವಿದೇಶಿಯರೂ ಅವರಲ್ಲಿದ್ದರು. ಬಹುಶಃ ಬೇರೆ ವಿಭಾಗದವರ ಕಾನ್ಫರೆನ್ಸಿಗೋ ಇಲ್ಲಾ ಸೆಮಿನಾರಿಗೋ ಬಂದಿರಬಹುದೆನ್ನಿಸಿತು. ಕೆಲವರು ವಿಚಿತ್ರ ಉಡುಪಿನಲ್ಲಿದ್ದರು ಚಡ್ಡಿ ಹಾಕಿಕೊಂಡವರೂ ಅವರಲ್ಲಿದ್ದರು. ಕಾನ್ಫರೆನ್ಸಿಗೆ ಚಡ್ಡಿ ಹಾಕಿಕೊಂಡು ಬರಲು ಸಾಧ್ಯವೆ..? ಅನುಮಾನ ಬಂತು! ಕೆಲವರು ಗುಜರಾತಿ ಹೆಂಗಸರು, ಬುರ್ಕಾಧಾರಿಣಿಯರೂ, ನೇಪಾಳದವರೂ, ಬೀಸಣಿಗೆ ಹಿಡಿದ ಜಪಾನೀಯರೂ, ಚೀನೀಯರೂ, ಉತ್ತರ ಭಾರತೀಯರೂ, ಪೂರ್ವ, ಪಶ್ಚಿಮದವರೂ ಇದ್ದರು. ಯಾವ ಕಾರ್ಯಕ್ರಮಕ್ಕೆ ಇವರು ಬಂದಿದ್ದಾರೆ ಎನ್ನುವುದು ಮಾತ್ರ ತಿಳಿಯಲಿಲ್ಲ.
ಕ್ಲಾಸನ್ನು ಪ್ರವೇಶಿಸಿದಾಗ ಇನ್ನೊಂದು ಅಚ್ಚರಿ ಕಾದಿತ್ತು! ಇಡೀ ರೂಮು ಖಾಲಿ!! ಒಬ್ಬ ಹುಡುಗನಾಗಲೀ-ಹುಡುಗಿಯಾಗಲೀ ಇರಲಿಲ್ಲ! ಎಲ್ಲಾ ಚಕ್ಕರ್!! ನಾನು ಕಾಲೇಜು ಕಲಿಯುತ್ತಿದ್ದಾಗ ಇದನ್ನು ‘ಮಾಸ್ ಬಂಕ್’ ಎನ್ನುತ್ತಿದ್ದೆವು. ಕ್ಷುಲ್ಲಕ ಕಾರಣ ಹುಡುಕಿ ಹೀಗೆ ಒಮ್ಮೊಮ್ಮೆ ಕ್ಲಾಸ್ ಬಂಕ್ ಮಾಡಿ ಹೆಚ್.ಒ.ಡಿಯಿಂದ ಬಾಯಿತುಂಬಾ ಬೈಸಿಕ್ಕೊಳ್ಳುತ್ತಿದ್ದೆವು. ಅದರ ಪ್ರಯೋಗ ಇಲ್ಲೂ ಆಗಿದೆ ಎನ್ನುವುದು ಮನದಟ್ಟಾಯಿತು! ಖಾಲಿ ಕ್ಲಾಸ್ ರೂಮಿನಲ್ಲಿ ಮಾಡುವುದಾದರೂ ಏನು..? ಹೆಚ್.ಒ.ಡಿಗೆ ಹೇಳೋಣ ಎಂದು ಕ್ಲಾಸ್ ರೂಮಿನಿಂದ ಈಚೆ ಬಂದೆ.
ಬಾಲ್ಕಾನಿಯಲ್ಲಿ ನಿಂತು ಇನ್ನೊಮ್ಮೆ ಆಚೆ ನೋಡಿದೆ. ವಿದೇಶಿಯರೂ, ಸ್ವದೇಶೀಯರೂ ಒಂಟಿಯಾಗಿಯೂ, ಗುಂಪಾಗಿಯೂ ಫೋಟೋ ತೆಗೆಸಿಕ್ಕೊಳ್ಳುತ್ತಿದ್ದರು! ಇನ್ನೊಂದೆಡೆ ಸೆಕ್ಯೂರಿಟಿಯವನು ಭಿಕ್ಷುಕನನ್ನು ಓಡಿಸುವ ಬದಲಿಗೆ ನಾಯಿಗಳನ್ನೇ ಕ್ಯಾಂಪಸ್ಸಿನಿಂದಾಚೆ ಓಡಿಸುತ್ತಿದ್ದ. ಇದಂತೂ ನನಗೆ ಅಚ್ಚರಿಯಾಗಿ ಕಂಡಿತು. ವಿಚಿತ್ರ ಎನಿಸಿತು! ಹಗಲು ರಾತ್ರಿ ಹೆಚ್ಚಿನ ನಿರೀಕ್ಷೆಯಿಲ್ಲದೆ, ಕೆಲವೊಮ್ಮೆ ಅಧ್ಯಾಪಕರು ಇಲ್ಲವೇ ವಿದ್ಯಾರ್ಥಿಗಳು ತಾವು ತಂದಿದ್ದ ಡಬ್ಬಿಗಳಲ್ಲಿ ಎಸೆಯುವ ಕೆಲವೇ ಕೆಲವು ತುಣುಕು ಅಹಾರಕ್ಕಾಗಿ, ಇಡೀ ಕ್ಯಾಂಪಸ್ಸಿನ ರಕ್ಷಣೆ ತಮ್ಮದೆಂಬಂತೆ ರಕ್ಷಿಸುತ್ತಿದ್ದ ನಾಯಿಗಳನ್ನೇ ಆಚೆ ಓಡಿಸುತ್ತಿದ್ದುದು, ಭಿಕ್ಷುಕನನ್ನು ರಕ್ಷಿಸುತ್ತಿದ್ದುದು ನಂಬಲಸಾಧ್ಯವಾದ ಸಂಗತಿಯಾಗಿತ್ತು.
ಮಹಡಿಯ ಮೆಟ್ಟಿಲಿಳಿಯುವಾಗ ಒಬ್ಬಳು ಜಪಾನೀ ಯುವತಿ ಮತ್ತು ಕರಾವಳಿಯ ಮೀನುಗಾರ್ತಿ ಒಟ್ಟಿಗೇ ‘ಗುಡ್ ಮಾರ್ನಿಂಗ್ ಸರ್’ ಎಂದಾಗ ಸಂಶಯ ಮೂಡಿತು. ಇವರು ಯಾರು? ನನಗೇಕೆ ವಂದಿಸಿದರು..? ಗೊಂದಲದಲ್ಲೇ ಹೆಚ್.ಒ.ಡಿ ರೂಮಿಗೆ ಕಾಲಿಟ್ಟೆ. ಅಲ್ಲಾಗಲೇ ಎಲ್ಲಾ ಅಧ್ಯಾಪಕರೂ ಕುಳಿತಿದ್ದರು. ಅವರ ಜೊತೆಯಲ್ಲಿ ನಾನೂ ಕೂತೆ. ಹೆಚ್.ಒ.ಡಿ ಫೋನಿನಲ್ಲಿ ಮಾತಾಡುತ್ತಿದ್ದರು. ಅವರ ಪೋನು ಮುಗಿಯುವವರೆಗೂ ಕಾದಿದ್ದು, ನಂತರ ಕ್ಲಾಸಿನಲ್ಲಿ ಹುಡುಗರೇ ಇಲ್ಲದ್ದು ಹೇಳಿದೆ.
“ಇರೊಲ್ಲ ಬಿಡಿ, ಇವತ್ತು ಫಂಕೀ ಡೇ ಅಲ್ಲವೆ..?”
ಹೆಚ್.ಒ.ಡಿ ಅದೊಂದು ಸಾಮಾನ್ಯ ವಿಷಯ ಎಂಬಂತೆ ಹೇಳಿದರು.
“ಫಂಕೀ ಡೇ..? ಹಾಗೆಂದರೇನು” ಅರ್ಥವಾಗದೆ ಕೇಳಿದೆ.
“ಆಚೆ ನೋಡ್ಲಿಲ್ವಾ ಅವರ ಅವತಾರಗಳನ್ನ..? ಅದೇ ಫಂಕೀ ಡೇ..”
ಇನ್ನೊಬ್ಬರು ಸೀನಿಯರ್ ಅಧ್ಯಾಪಕರು ಹೇಳಿದರು.
ಇನ್ನೇನು ಹೆಚ್ಚಿಗೆ ಹೇಳದಿದ್ದರೂ ಆಚೆ ದೇಶೀಯರಂತೆ, ವಿದೇಶೀಯರಂತೆ ವೇಷ ತೊಟ್ಟು ಬಂದವರು ನಮ್ಮ ವಿದ್ಯಾರ್ಥಿಗಳೇ ಎಂಬ ಅಂದಾಜು ಬಂತು. ಮತ್ತೆ ಇದೇನು ಫಂಕೀ ಡೇ..? ಅದಿನ್ನೂ ತಿಳಿಯಲಿಲ್ಲ! ಅಲ್ಲಿದ್ದವರಿಗೆಲ್ಲಾ ಫಂಕೀ ಡೇ ಅಂದರೆ ಏನೆಂಬುದು ತಿಳಿದಿತ್ತು! ನನ್ನ ಅಜ್ಞಾನವನ್ನು ತೋರಿಸಬಾರದೆಂದು ಮೌನವಹಿಸಿದೆ.
ಎಲ್ಲರಿಗೂ ಟೀ ಬಂತು ಅದನ್ನು ಗುಟುಕರಿಸಿ, ಅದೂ ಇದೂ ಮಾತಾಡಿ ಚೇಂಬರಿನಿಂದೀಚೆ ಬರುವಾಗ ಕುತೂಹಲ ತಾಳಲಾರದೆ ಸಹ ಅಧ್ಯಾಪಕರೊಬ್ಬರನ್ನು ಕೇಳಿ ನನ್ನ ಅಜ್ಞಾನವನ್ನು ಪ್ರದರ್ಶಿಸಿಯೇಬಿಟ್ಟೆ.
“ಇದೇನು ಈ ಫಂಕೀ ಡೇ..?”
“ಓ..ಅದಾ..?” ಅವರು ರಾಗ ಎಳೆದು ನನ್ನತ್ತ ಕನಿಕರದಿಂದ ನೋಡಿ ಮುಂದುವರಿಸಿದರು. “ಪಾಪ ನೀವು ಇಂಡಷ್ಟ್ರಿಯಿಂದ ಬದವರಲ್ಲವೆ..? ಎಲ್ಲರಂತವರಲ್ಲ ನಮ್ಮ ಎಂ.ಬಿ.ಏ ವಿದ್ಯಾರ್ಥಿಗಳು! ಇವರೇ ಬೇರೆ, ಇವರ ಸ್ಟೈಲೇ ಬೇರೆ” ಯಾವಾಗಲೂ ತಮ್ಮ ಮಾತುಗಳಲ್ಲಿ ಪ್ರಾಸಕ್ಕೆ ಒತ್ತು ಕೊಡುವ ಅಧ್ಯಾಪಕ ಮಿತ್ರರು ಹೇಳಿದರು.
“ಅಂದ್ರೆ..?”
“ಇವತ್ತಿನ ಪೇರೆಂಟ್ಸು ಮಕ್ಕಳಿಗೆ ದಂಡಿಯಾಗಿ ದುಡ್ಡು ಕೊಡ್ತಾರೆ. ಖರ್ಚು ಮಾಡೋಕೆ ದಾರಿ ಬೇಕಲ್ಲ..? ಅದಕ್ಕೇ ಈ ಫಂಕೀ ಡೇ..ಮಂಕೀ ಡೇ ಎಲ್ಲಾ ಮಾಡ್ತಾವೆ! ಹಾಡ್ತಾವೆ, ಹಾರಾಡ್ತಾವೆ, ಓಡ್ತಾವೆ! ಕ್ಲಾಸಿಗೆ ಬಂದು ನಮ್ಮನ್ನ ಕಾಡ್ತಾವೆ”
ತಮ್ಮ ಮಾತಿಗೆ ತಾವೆ ಮೆಚ್ಚುಗೆ ತೋರಿಸುತ್ತಾ ನಕ್ಕರು.
“ಅರ್ಥವಾಗಲಿಲ್ಲ” ಎಂದೆ ದೈನ್ಯತೆಯಿಂದ.
“ಕ್ಲಾಸಿಂದ ತಪ್ಪಿಸಿಕೊಳ್ಳೋಕೆ ಇದೊಂದು ಉಪಾಯ ಇವಕ್ಕೆ! ನಮಗೆ ಅಪಾಯ!! ಪ್ರತೀ ಸೆಮೆಸ್ಟರ್ ಕೊನೇಲಿ ಒಂದು ವಾರ ಪೂತರ್ಿ ಚಿತ್ರವಿಚಿತವಾದ ಡ್ರೆಸ್ ಹಾಕ್ಕೊಂಡು ಬರ್ತಾರೆ. ಒಂದಿವ್ಸ ಕಲ್ಚರಲ್ ಡೇ ಅಂತೆ! ಅವತ್ತು ತಮ್ಮತಮ್ಮ ಸಂಸ್ಕೃತಿ ಬಿಂಬಿಸೋ ಡ್ರೆಸ್ಸು! ಇನ್ನೊಂದಿವ್ಸ ಎಥಿನಿಕ್ ಡೇ ಅಂತೆ! ಅವತ್ತು ಶಾಸ್ತ್ರೀಯವಾದ ಉಡುಪು! ಮತ್ತೊಂದು ದಿವ್ಸ ಫಂಕೀ ಡೇ! ಹುಚ್ಚುಚ್ಚಾಗಿ ವೇಷ ಹಾಕಿಕೊಂಡು ಬರ್ತಾರೆ! ಈ ಎಲ್ಲಾ ದಿನಾನೂ ಚಿತ್ರ ವಿಚಿತ್ರವಾಗಿ ವರ್ತನೆ! ಅಲ್ನೋಡಿ ಆ ಭಿಕ್ಷುಕ ನಮ್ಮ ಸ್ಟೂಡೆಂಟೇ..! ಅವಳು ನೋಡಿ ಜಪಾನೀ! ಅಲ್ಲಿ ನೋಡಿ ಅವನು ಸರ್ಕಸ್ ಜೋಕರ್! ಇಲ್ಲೊಬ್ಬ ನೆಹ್ರೂ ಅಂತೆ! ಗಾಂಧೀ ಡ್ರೆಸ್ಸೂ ಹಾಕ್ಕೊಂಡು ಬರೋರು! ತಲೆ ಬೋಳಿಸಬೇಕಲ್ಲ..? ಅದಕ್ಕೇ ಹಾಕಿಲ್ಲ! ಇಲ್ಲಿ ಇವೆಲ್ಲಾ ಮಾಮೂಲಿ! ಪಾಪ ನೀವು ಇಂಡಷ್ಟ್ರಿಯಿಂದ ಬಂದವರು ನಿಮಗೆ ಇವೆಲ್ಲಾ ಗೊತ್ತಾಗೊಲ್ಲ” ಎಂದು ಲೊಚಗುಟ್ಟಿದರು.
ನನ್ನಿಂದ ಹತ್ತು ರೂಪಾಯಿ ಪಡೆದ ಭಿಕ್ಷುಕ ನನ್ನತ್ತಲೇ ಬಂದ! ಇನ್ನೊಂದು ಹತ್ತು ರೂಪಾಯಿ ಕೊಡಬೇಕಾಗುತ್ತದೆ ಎಂದು ಜೇಬಿಗೆ ಕೈಹಾಕಿದೆ.
“ತ್ಯಾಂಕ್ಸ್ ಸಾರ್! ನಾನ್ಯಾರು ಗೊತ್ತಾಗಲಿಲ್ವೇ..? ರಾಹುಲ್ ಸಾರ್! ಫೈನಲ್ ಎಂಬಿಎ! ನಿಮ್ಮ ಹತ್ತು ರೂಪಾಯಿ ರಿಟರ್ನ್ಡ್ಡ ವಿತ್ ತ್ಯಾಂಕ್ಸ್!”
ಎಂದು ಸ್ವಚ್ಛ ಇಂಗ್ಲಿಷಿನಲ್ಲಿ ಮಾತಾಡಿದ.
“ಏನ್ರಪ್ಪಾ..? ಇವತ್ತು ಫಂಕೀ ಡೇ ಆಯ್ತು..ನಾಳೆ ಮಂಕೀ ಡೇನಾ..?”
ನನ್ನ ಸಹೋದ್ಯೋಗಿ ಮಿತ್ರರು ನಕ್ಕರು!
ಸೆಕ್ಯೂರಿಟಿಯವನು ಆಚೆ ಓಡಿಸಿದ್ದ ನಾಯಿಗಳೆಲ್ಲಾ ಒಟ್ಟಾಗಿ ಭಯಂಕರವಾಗಿ ಭಿಕ್ಷುಕ ರಾಹುಲ್ ಸಾರಿ ಸ್ಟೂಡೆಂಟ್ ರಾಹುಲನತ್ತ ಧಾವಿಸಿ ಬರುವಾಗ ನಾವು ಓಡಿ ಸ್ಟ್ಯಾಫ್ ರೂಮು ಸೇರಿಕೊಂಡೆವು!!
 

‍ಲೇಖಕರು G

July 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: