ಟೈಮ್‌ಪಾಸ್ ಕಡ್ಲೆಕಾಯ್ ’ಒಂದರ ತೊಂದರೆ!’

– ಎಸ್ ಜಿ ಶಿವಶಂಕರ್

ಛೀ…ಇದೆಂತಾ ಶೀರ್ಷಿಕೆ ಎಂದು ಹುಬ್ಬೇರಿರಬಹುದು! ‘ತೊಂದರೆ’ ಎಂದರೇನೋ ಸರಿ. ಈ ‘ಒಂದರ ತೊಂದರೆ’ ಅಂದರೇನು..? ಇಂತಾ ವಿಚಿತ್ರ ಶೀರ್ಷಿಕೆ ಕೊಟ್ಟು ಈ ಲೇಖಕ ನಮ್ಮ ತಲೆಯನ್ನೇಕೆ ತಿನ್ನುತ್ತಿದ್ದಾನೆ ಎಂದುಕೊಳ್ಳುತ್ತಿದ್ದೀರಾ..? ನಿಜವಾಗಿ ಹೇಳಿ, ಈ ಲೇಖನದ ಬಗೆಗೆ ಒಂದು ಅಂದಾಜು ನಿಮಗೆ ಬಂದಿಲ್ಲವೆ..?
ಹೌದು, ನಿಮ್ಮ ಮನಸ್ಸಿಗೇನು ಬಂದಿದೆಯೋ ಅದನ್ನೇ ನಾನಿಲ್ಲಿ ಬರೆಯುತ್ತಿರುವುದು! ಪುಟ್ಟ ಮಕ್ಕಳು ದೇಹದ ನೈಸರ್ಗಿಕ ವಿಸರ್ಜನೆಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆಯುವವರೆಗೆ ನಾವು ಆಗಾಗ್ಗೆ ಅವರನ್ನು ಕೇಳುತ್ತೇವೆ. ‘ಸೂಸು ಮಾಡ್ಬೇಕಾ ಪುಟ್ಟಾ/ಪುಟ್ಟಿ?’. ಅವರು ಸ್ವಲ್ಪ ದೊಡ್ಡವರಾಗುತ್ತ ಅದಕ್ಕೆ ‘ನಂಬರ್ ಒಂದು’ ಎಂದು ಹೊಸ ಪದ ಪ್ರಯೋಗ ಕಲಿಸುತ್ತೇವೆ. ಈ ಒಂದರ ತೊಂದರೆಯ ಬಗೆಗೇ ನಾನೀಗ ಕೊರೆಯುತ್ತಿರುವುದು ಕ್ಷಮಿಸಿ ಬರೆಯುತ್ತಿರುವುದು.
ಓಹೋ ಹಾಗಾದರೆ ಇದೊಂದು ವೈದ್ಯಕೀಯ ಲೇಖನ ಎಂಬ ಆತುರದ ತೀರ್ಮಾನಕ್ಕೆ ಬರಬೇಡಿ. ನಾನು ವೈದ್ಯನೂ ಅಲ್ಲ , ಮೂತ್ರಪಿಂಡ ತಜ್ಞನೂ ಅಲ್ಲ!
‘ಮತ್ತೆ ಎಂತಾದ್ದು ಪಿರಿಪಿರಿ ಮಾರಾಯ್ರೆ?’ ಎಂದು ನಮ್ಮ ಮಂಗಳೂರು ಬಂಧುಗಳ ಉದ್ಗರಿಸಬಹುದು!
ಪಿರಿಪಿರಿ ಎಂತಾದ್ದೂ ಇಲ್ಲ ಮಾರಾಯ್ರೆ. ಈ ‘ಒಂದ’ಕ್ಕೆ ಜನ ಎಂತೆಂತಾ ಪಾಡುಪಡುತ್ತಾರೆ ಎಂದು ತಿಳಿಸಲಿಕ್ಕಷ್ಟೆ ಈ ಲೇಖನ ಎಂದು ವಿನಮ್ರನಾಗಿ ಹೇಳಿ ಮುಂದುವರಿಸುವ ಬಂಡತನ ಮಾಡಿದ್ದೇನೆ.
ದೊಡ್ಡವರಾದ ನಮಗೆ ಒಂದರೆ ಒತ್ತಡ ಬಂದಾಗ ಶುರುವಾಗುತ್ತದೆ ನೋಡಿ ತೊಂದರೆ! ಮನೆಯಲ್ಲಿದ್ದರೆ ತೊಂದರೆ ಇಲ್ಲ. ನಮ್ಮದೇ ಆದ ಅನುಕೂಲಗಳನ್ನು ಮಾಡಿಕೊಂಡಿರುತ್ತೀವಿ. ಬಾಡಿಗೆ ಮನೆಯಲ್ಲೂ ತೊಂದರೆ ಇಲ್ಲ! ಆದರೆ ನೀವು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರೆ? ಬಸ್ಸು ನಿಲ್ಲುವವರೆಗೂ ಕಾಯಬೇಕು! ಜೊತೆಗೆ ಬಸ್ಸು ನಿಂತ ಕಡೆ ಶೌಚಾಲಯ ಇರಬೇಕು! ಅದೂ ಸ್ವಚ್ಛವಾಗಿರಬೇಕು!! ನಮ್ಮ ದೇಶದಲ್ಲಿ ಇದು ಕನಸಲ್ಲವೇ..? ಶೌಚಾಲಯವೇ ಇಲ್ದದಿದ್ದರೆ? ಬಯಲೇ ಗತಿ! ಅದು ಊರಾಗಿದ್ದರೆ..? ಜನ ನಿಬಿಡ ಬಯಲು ಹುಡುಕಬೇಕು! ಅಲ್ಲಿಯವರೆಗೆ ಬಸ್ಸು ಕಾಯಬೇಕಲ್ಲ..? ಅಕಸ್ಮಾತ್ ಹೊರಟುಬಿಟ್ಟರೆ..? ನೋಡಿದಿರಾ..? ಒಂದರೆ ತೊಂದರೆ ಒಂದಲ್ಲ …ಹತ್ತಲ್ಲ…ನೂರಾರು!
ಮುಂದುವರಿದ ದೇಶಗಳಲ್ಲಿ ಈ ತೊಂದರೆ ಇಲ್ಲ! ಕಾರಣ ಅಲ್ಲಿ ಎಲ್ಲಾ ಸಾರ್ವಜನಿಕ ಜಾಗಗಳಲ್ಲಿ ಸ್ವಚ್ಛವಾದ ಶೌಚಾಲಯಗಳಿರುತ್ತವೆ. ಮುಂದುವರಿಯುತ್ತಾ..ಕೆಲವೊಮ್ಮೆ ಹಿಂದೆ ಸರಿಯುತ್ತಿರುವ ನಮ್ಮ ದೇಶದಲ್ಲಿ ಶೌಚ ‘ಒಂದು’ ದೊಡ್ಡ ಸಮಸ್ಯೆಯೇ!! ಒಂದರೆ ಒತ್ತಡ ನಿವಾರಿಸಿಕ್ಕೊಳ್ಳಲು ನಾಗರೀಕ, ಸುಸಂಸ್ಕೃತ ಜನರು ಪೇಚಾಡಬೇಕಾಗುತ್ತದೆ. ಈಗಿರುವ ಪರಿಸ್ಥಿತಿಯನ್ನು ಇನ್ನೂ ಹತ್ತಾರು ವéರ್ಷಗಳವರೆಗೂ ಅನುಭವಿಸಬೇಕಾದದ್ದು ಅನಿವಾರ್ಯ!!
ಈ ‘ಒಂದ’ರ ತೊಂದರೆಯ ಒಂದು ವಿಚಿತ್ರ ಪ್ರಸಂಗವನ್ನು ಹೇಳುವುದಕ್ಕೇ ಈ ಲೇಖನ.
ಸರ್ಕಾರದ ಸೇವೆಯಲ್ಲಿರುವವರಿಗೆ ಅರವತ್ತಕ್ಕೆ ನಿವೃತ್ತಿ. ವಿಶ್ವವಿದ್ಯಾಲಯಗಳಲ್ಲಿ ಭೋದಿಸುವ ಅಧ್ಯಾಪಕರಿಗೆ 62ಕ್ಕೆ ನಿವೃತ್ತಿ. ಅರವತ್ತಕ್ಕೆ ಅರಳು ಮರಳು ಎಂಬ ಮಾತು ನಮ್ಮಲ್ಲಿ ಪ್ರಚಲಿತ. ಅಂತಾದ್ದರಲ್ಲಿ ಅರವತ್ತೆರಡರಲ್ಲಿ..? ಅರಳು ಮರಳು ಇನ್ನೂ ಕೆರಳುವ ಸಾಧ್ಯತೆಗೆಳು ಹೆಚ್ಚು ಎನ್ನುವುದನ್ನು ನೀವು ಖಂಡಿತಾ ಒಪ್ಪುತ್ತೀರಿ ಅಲ್ಲವೆ..?
ಕಾಲೇಜೊಂದರಲ್ಲಿ ಬೋಧಿಸುತ್ತಿದ್ದ ನನಗೆ 62ಕ್ಕೆ ಕಾಲೇಜಿನವರು ಮತ್ತು ವಿದ್ಯಾರ್ಥಿಗಳು ಹಾರ ಹಾಕಿ ‘ನಾಳೆಯಿಂದ ಕಾಲೇಜಿಗೆ ಬರಬೇಡಿ’ ಎಂದು ಎಚ್ಚರಿಕೆ ನೀಡಿದರೂ ನಾನು ಬೇರೊಂದು ಖಾಸಗಿ ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳನ್ನು ಗೋಳು ಹೊಯ್ದುಕ್ಕೊಳ್ಳುವ ದುಸ್ಸಾಹಸ ಮಾಡಿದೆ. ಅಲ್ಲೇ ನೋಡಿ ನನಗೆ ಒಂದರ ತೊಂದರೆ ಶುರುವಾಗಿದ್ದು!!
‘ಅದನ್ನು ಲೇಖನಿ ಹಿಡಿದು ಕೊರೆಯುವ ಬದಲಿಗೆ ವೈದ್ಯರಲ್ಲಿಗೆ ಹೋಗಬೇಕಿತ್ತು’ ಎಂಬ ಒಂದು ವಾಕ್ಯದ ಸಲಹೆ ನಿಮ್ಮ ನಾಲಿಗೆ ತುದಿಯ ಮೇಲಿದೆ ಎಂದು ನಾನು ಬಲ್ಲೆ. ಆದರೆ ತೊಂದರೆ ನನ್ನದಲ್ಲ ಬದಲಿಗೆ ಅದು ಕಾಲೇಜಿನದು ಎಂದರೆ ನಿಮಗೆ ಕುತೂಹಲ ಮೂಡುವುದೋ ಇಲ್ಲಾ ಕೋಪ ಬರುವುದೋ ಗೊತ್ತಿಲ್ಲ.
ನಮ್ಮ ದೇಶದಾದ್ಯಂತ ಇರುವ ಬಹುತೇಕ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ನಡೆಸುತ್ತಿರುವವರು ನಮ್ಮ ಶಾಸಕರು, ಮಂತ್ರಿ ಮಹೋದಯರು ಮತ್ತು ರಾಜಕೀಯದ ಜೊತೆಗೆ ತಳಕು ಹಾಕಿಕೊಂಡಿರುವವರು.
ಇಂದಿನ ಕಾಲೇಜುಗಳು ಯಾವುದೇ ಮಲ್ಟಿನ್ಯಾಶನಲ್ ಕಂಪೆನಿಗಳಿಗೇನೂ ಕಡಿಮೆಯಿಲ್ಲದಂತೆ ಬೃಹತ್ತಾಗಿರುತ್ತವೆ. ಒಂದೇ ಕಾಂಪೌಡಿನಲ್ಲಿ ಶಿಶು ವಿಹಾರದಿಂದ, ಇಂಜಿನಿಯರಿಂಗ್, ವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಮ್ಯಾನೇಜ್ಮೆಂಟು ಮುಂತಾದ ಎಲ್ಲಾ ಕೋಸರ್ುಗಳೂ ನಡೆಯುತ್ತವೆ. ಇಂತಾ ಸಂಸ್ಥೆಗಳನ್ನು ನಡೆಸಲು ಬೇಕಾದ ಹಣಕಾಸಿನ ಅಂದಾಜು ಮಾಡುವುದು ಕೂಡ ನಮ್ಮಂತವರಿಗೆ ಕಷ್ಟವಾಗುತ್ತದೆ.
ಮನೆಗೊಬ್ಬರು ಇಂಜಿನಿಯರ್ ಇರುವ ಕಾಲ ಇದು! ನಮ್ಮ ದೇಶದಲ್ಲಿ ಕಂಪ್ಯೂಟರ್ ಇಂಜಿನಿಯರುಗಳಂತೂ ಪ್ರತಿ ವರ್ಷವೂ ಲಕ್ಷಗಟ್ಟಲೆ ತಯಾರಾಗುತ್ತಿದ್ದಾರೆ. ಬಹುಶಃ ವಿಶ್ವದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಇಂಜಿನಿಯರುಗಳನ್ನು ತಯಾರಿಸಿ ರಫ್ತು ಮಾಡುವ ಏಕೈಕ ರಾಷ್ಟ್ರ ನಮ್ಮದು!
ನಾನು ನಿವೃತ್ತಿಯ ನಂತರ ಸೇರಿದ್ದು ಇಂತದ್ದೇ ಒಂದು ಕಾಲೇಜು. ಸುಮಾರು ಐವತ್ತು ಎಕರೆಗೂ ಮೀರಿದ ವಿಶಾಲ ಕ್ಯಾಂಪಸ್ಸು! ಬೃಹತ್ ಕಟ್ಟಡ! ಸಾವಿರ ಸಂಖ್ಯೆಯಲ್ಲಿ ವಿಧ್ಯಾಥರ್ಿಗಳು! ಎಲ್ಲಾ ಖಾಸಗೀ ಕಾಲೇಜುಗಳಲ್ಲಿರುವಂತೆ ಇಲ್ಲಿಯೂ ವಿದ್ಯಾರ್ಥಿಗಳಿಗೆ ಫೀಸು ಹೆಚ್ಚು, ಅಧ್ಯಾಪಕರುಗಳಿಗೆ ಸಂಬಳ ಕಡಿಮೆ!! ಇಂತಾ ಬೃಹತ್ ವ್ಯವಸ್ಥೆಗೆ ಇದು ಅನಿವಾರ್ಯ ಎಂಬ ಸಂದೇಶವನ್ನು ಆಗಾಗ್ಯೆ ನೌಕರರಿಗೆ ಮನದಟ್ಟು ಮಾಡುತ್ತಿತ್ತು ಆಡಳಿತ ಮಂಡಳಿ!
ಇಂಜಿನಿಯರ್ ಆಗಿ ಕಾಲು ಶತಮಾನ ದುಡಿದ ನಾನು ಮನೆ ಕಟ್ಟಿಸುವಾಗ ಒಂದು ಚದುರದ ಅಡಿಗೆ ಮನೆಗೆ ಗ್ರಾನೈಟು ಹಾಸು ಹಾಕಿಸಲಾಗಿರಲಿಲ್ಲ. ಅದಕ್ಕಾಗಿ ನನ್ನವಳು ಕಾಡಿ ಬೇಡಿದರೂ ಸಾಧ್ಯವಾಗಿರಲಿಲ್ಲ! ನಾನು ಕೆಲಸಕ್ಕೆ ಸೇರಿದ ಕಾಲೇಜಿನ ಮಾಲೀಕರು ಕಾಲೇಜಿನ ಸಂಪೂರ್ಣ ನೆಲಕ್ಕೆ ಗ್ರಾನೈಟು ಹಾಕಿಸಿದ್ದರು!!
ಇಷ್ಟೆಲ್ಲಾ ಐಷಾರಾಮದ ನಡವೆ ದೃಷ್ಟಿ ಬೊಟ್ಟಿನಂತೆ ಒಂದು ಕೊರತೆ ಎದ್ದು ಕಾಣುತ್ತಿತ್ತು! ಅದೇನು ಎನ್ನುತ್ತೀರಾ..? ಅದೇ ಸ್ವಾಮಿ, ಈ ಲೇಖನದ ಶೀಷರ್ಿಕೆ! ಒಂದರೆ ತೊಂದರೆ!!

ಮೂರು ಮಹಡಿಯ ಬೃಹತ್ ಕಟ್ಟಡದಲ್ಲಿ ಒಂದೊಂದು ಅಂತಸ್ತಿಗೆ ಒಂದೊಂದು ಶೌಚಾಲಯವಿತ್ತು. ಅದರೆ ಉಪಯೋಗಕ್ಕೆ ತೆರವಾಗಿದ್ದುದು ಒಂದೇ! ಕೆಳಗೆ ಒಂದೇ ಒಂದು ಶೌಚಾಲಯ!! ಹೆಚ್ಚೂ ಕಡಿಮೆ ಒಂದು ಕಿಲೋಮೀಟರು ಉದ್ದದ ಕಟ್ಟಡದ ಒಂದು ತುದಿಯಲ್ಲಿ ಒಂದು ದೊಡ್ಡ ಶೌಚಾಲಯ! ಅದನ್ನು ಉಪಯೋಗಿಸಬೇಕೆಂದರೆ ಕನಿಷ್ಟ ಅರ್ಧ ಕಿಲೋಮೀಟರಾದರೂ ನಡೆಯಲೇಬೇಕು! ಶೌಚಾಲಯದ ಸಮೀಪದ ಇಲಾಖೆಯವರೇ ಪುಣ್ಯವಂತರು!! ದೂರದವರ ಪಾಡು ಹೇಳತೀರದು! ಅದೂ ಡಯಾಬಿಟೀಸಿನವರ ಪಾಡು ಕರುಣಾಜನಕ!! ಮೂರನೆಯ ಮಹಡಿಯವರ ಪಾಡು? ನಂಬರ್ ಒಂದಕ್ಕೆ, ಎರಡು ಮಹಡಿ ಮೆಟ್ಟಿಲಿಳಿದು, ಅರ್ಧ ಕಿಲೋಮೀಟರು ನಡೆದು, ಬಸವಳಿದು ದೇಹ ಬಾಧೆ ತೀರಿಸಿಕ್ಕೊಳ್ಳಬೇಕು! ವಾಪಸ್ಸು ಡಿಪಾಟ್ಮರ್ಟ್ ಮೆಂಟಿಗೆ ಹೋಗಲು ಮತ್ತದೇ ಕ್ರಮ ಅನುಸರಿಸಬೇಕು!
ಪುಣ್ಯಕ್ಕೆ ನನ್ನ ಡಿಪಾಟ್ಮಂಟು ಮೊದಲನೆಯ ಮಹಡಿಯಲ್ಲಿತ್ತು, ಅದೂ ಕಟ್ಟಡದ ಮಧ್ಯಭಾಗದಲ್ಲಿ! ಸದ್ಯ ಶೌಚಾಲಯದ ವಿರುದ್ಧ ದಿಕ್ಕಿನ ಕೊನೆಯಲ್ಲಿ ಇಲ್ಲವಲ್ಲ ಎಂದು ಖುಷಿಪಟ್ಟಿದ್ದೆ! ಒಂದು ವೇಳೆ ನನ್ನ ಇಲಾಖೆ ಕಟ್ಟಡದ ಕೊನೆಯಲ್ಲಿದ್ದರೆ ಒಂದು ಮಹಡಿ ಇಳಿದು, ಒಂದು ಕಿಲೋಮೀಟರು ನಡೆದು….!! ಸಧ್ಯ ದೇವರು ದೊಡ್ಡವನು! ನನಗೆ ಅಂತಾ ಸ್ಥಿತಿ ಒದಗಿಸಲಿಲ್ಲ!
ಕೆಲಸದ ಮೊದಲನೆಯ ದಿವಸ, ಮಹಡಿ ಇಳಿದು, ಅರ್ಧ ಕಿಲೋಮೀಟರು ನಡೆದು, ಶೌಚಾಲಯ ಉಪಯೋಗಿಸಿ ಈಚೆ ಬಂದಾಗ ನನ್ನ ಬಾಯಿಂದ ಹಾಡು ತಾನೇತಾನಾಗಿ ಬಂದಿತ್ತು! ‘ಇದಿ ನ್ಯಾಯಮಾ..? ಶ್ರೀರಾಮಚಂದ್ರ..? ಇದಿ ನ್ಯಾಯಮಾ..?’
ಶೌಚಾಲಯ ಉಪಯೋಗಿಸಲು ಸಾಮಾನ್ಯವಾಗಿ ಎಲ್ಲ ಅಧ್ಯಾಪಕರೂ ಮುಜುಗರಪಡುತ್ತಿದ್ದರು! ಅದಕ್ಕೊಂದು ಕಾರಣವಿತ್ತು. ಎಲ್ಲಾ ಕಾಲೇಜುಗಳಲ್ಲೂ ಅಧ್ಯಾಪಕರಿಗೆಂದೇ ಬೇರೆ ಶೌಚಾಲಯ ಇರುವುದು ಸಾಮಾನ್ಯ. ಇಲ್ಲಿ ಹಾಗಿರಲಿಲ್ಲ! ವಿದ್ಯಾಥರ್ಿಗಳಿಗೂ, ಅಧ್ಯಾಪಕರಿಗೂ, ಉಳಿದ ಸಿಬ್ಬಂದಿಗೂ ಒಂದೇ ಶೌಚಾಲಯ!!
ಇದರಲ್ಲಿ ತೊಂದರೆಯೇನೆಂದು ನಿಮಗನ್ನಿಸಬಹುದು! ತುಂಬಾ ನವಿರಾದ ತೊಂದರೆ ಇಲ್ಲಿದೆ. ತರಗತಿಯಲ್ಲಿ ಪಾಠ ಮುಗಿಸಿ ಸೀಮೇಸುಣ್ಣದಿಂದಾವೃತವಾದ ತಮ್ಮ ಕೈತೊಳೆಯಲು ಶೌಚಾಲಯದ ವಾಷ್ಬೇಸ್ಸಿನ ಮಂದೆ ನಿಂತರೆೆ ಅಧ್ಯಾಪಕರಿಗೆ ಜಾಗ ಸಿಗುವುದಿಲ್ಲ! ಕಾಲೇಜು ನಗರದಿಂದ ಬಹು ದೂರವಿದ್ದು, ಬಹುತೇಕ ವಿದ್ಯಾಥರ್ಿಗಳು ತಮ್ಮ ಯಮಗಾತ್ರದ ಮೋಟಾರುಬೈಕುಗಳಲ್ಲಿ ಸಾಕ್ಷಾತ್ ಯಮಕಿಂಕರರಂತೆ ಕಾಲೇಜಿಗೆ ಬಿರುಗಾಳಿಯಲ್ಲಿ ಧಾವಿಸಿ ಬರುವುದು ಮಾಮೂಲು. ಹೀಗೆ ಬಂದಾಗ ತಮ್ಮ ಕೆದರಿದ ತಲೆಗೂದಲನ್ನೂ ತಿದ್ದಿ, ತೀಡಿ, ಎಣ್ಣೆಬಸಿಯುವ ಮುಖಗಳನ್ನು ತೊಳೆಯಲು ಸಮಯದ ಪರಿವೆ ಇಲ್ಲದೆ ನಿಲ್ಲುತ್ತಾರೆ. ಅಧ್ಯಾಪಕರು ಕೈತೊಳೆಯಲು ಅವರ ಮರ್ಜಿಗೆ ಕಾಯುತ್ತಾ ನಿಲ್ಲಬೇಕು!
ಆ ಕಾಲೇಜು ಸೇರಿದ ಎರಡನೆಯ ದಿನ ನನ್ನ ಚಾಕ್ಪೀಸಾವೃತ ಕೈಯನ್ನು ತೊಳೆಯಲು ವಾಷ್ ಬೇಸಿನ್ನಿನ ಮುಂದೆ ನಿಂತೆ. ಅಲ್ಲಿ ಆಗಲೇ ವಿದ್ಯಾಥರ್ಿಯೋರ್ವ ಮುಖ ತೊಳೆಯುತ್ತಿದ್ದ. ಅವನ ಕ್ರಿಯೆ ಹತ್ತು ನಿಮಿಷಗಳಾದರೂ ಮುಗಿಯುವಂತೆ ಕಾಣಲಿಲ್ಲ! ಅವನ ಮುಖ ತೊಳೆಯುವ ಕ್ರಿಯೆ ಮಿನಿ ಸ್ನಾನದಂತೆ ನನಗೆ ತೋರಿತು. ಕೊನೆಗೆ ಬೇಸತ್ತು ಕೇಳಿದೆ!!
‘ಮನೇಲಿ ಸ್ನಾನ ಮಾಡೋಕೆ ಟೈಮ್ ಸಿಗಲಿಲ್ಲವಾ..?’
ಪುಣ್ಯಕ್ಕೆ ಆತ ಬೇರೆ ಡಿಪಾರ್ಟಮೆಂಟಿನ ವಿದ್ಯಾರ್ಥಿಯಾಗಿದ್ದ! ಕಣ್ಣು ಕೆಕ್ಕರಿಸಿ ನನ್ನತ್ತ ನೋಡಿದ ಅಷ್ಟೆ!! ಅಧ್ಯಾಪಕ ಎನ್ನುವ ಕಾರಣಕ್ಕೆ ಸುಮ್ಮನಿದ್ದೇನೆ ಎಂಬ ಮೌನ ಸಂದೇಶ ನೀಡಿ ಮುಖ ತೊಳೆಯುವುದನ್ನು ನಿಲ್ಲಿಸಿದ.
ನನ್ನ ಡಿಪಾರ್ಟಮೆಂಟಿನ ಸ್ಟಾಫ್ ರೂಮು ಮೊದಲನೆಯ ಮಹಡಿಯಲ್ಲಿ. ಕ್ಲಾಸ್ ರೂಮುಗಳು ಮೂರನೆಯ ಮಹಡಿಯಲ್ಲಿ! ದಿನಕ್ಕೆ ಮೂರು ಪೀರಿಯಡ್ ಬೋಧನೆ ಕಡ್ಡಾಯ! ಮೂರು ಸಲ ಮಹಡಿ ಹತ್ತಿ ಇಳಿಯುವುದು ಅನಿವಾರ್ಯ! ಜೊತೆಗೆ ಎರಡು ಮೂರು ಸಲ ಜಲಬಾಧೆಗೆ ಒಂದು ಮಹಡಿ ಇಳಿದು, ಹತ್ತಿ, ಅರ್ಧ ಕಿಲೋಮೀಟರು ಅಪ್ ಅಂಡ ಡೌನ್ ಕೂಡ ಅನಿವಾರ್ಯ! ಈ ಎಲ್ಲಾ ತೊಂದರೆಗಳನ್ನು ಅಧ್ಯಾಪಕರುಗಳು ತಮ್ಮತಮ್ಮಲ್ಲೇ ತಮಾಷೆ ಮಾಡಿಕ್ಕೊಳ್ಳುವುದು ಬಿಟ್ಟರೆ ಮ್ಯಾನೇಜ್ಮೆಂಟಿಗೆ ಹೇಳುವ ಧೈರ್ಯ ಮಾಡಿರಲಿಲ್ಲ! ಬೆಂಕಿಗೆ ಗಂಟೆ ಕಟ್ಟುವವರು ಯಾರು..?
ಹೇಗೋ ಅಂತೂ ಆ ವ್ಯವಸ್ಥೆಗೇ ಹೊಂದಿಕೊಂಡುಬಿಟ್ಟೆ! ಒಮ್ಮೊಮ್ಮೆ ಈ ಪರಿಸ್ಥತಿಗೆ ನಿಟ್ಟುಸಿರುಬಿಡುತ್ತಿದ್ದೆ. ನಿವೃತ್ತಿಯ ನಂತರ ಮತ್ತೆ ಕೆಲಸಕ್ಕೆ ಮಾಡಲು ಹೊರಟಿದ್ದು ತಪ್ಪು ನಿಧರ್ಾರ ಎನಿಸುತ್ತತ್ತು! ಇರಲಿ, ಇನ್ನು ಸ್ವಲ್ಪ ದಿವಸ ಕಾದು ನೋಡೋಣ, ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಆಗಬಹುದು ಎಂದು ದ್ರಾಕ್ಷಿ ತೋಟ ಹೊಕ್ಕ ನರಿಯಂತೆ ಕಾಯತೊಡಗಿದೆ.
ಮೊನ್ನೆ ಮಾತ್ರ ಇನ್ನು ಕಾಯಲಾರೆ, ಬೇಯಲಾರೆ ಎನಿಸಿಬಿಟ್ಟಿತು! ಎರಡು ಪೀರಿಯಡ್ ಕ್ಲಾಸಿತ್ತು. ತಮಗೇನೂ ಬೇಕಿಲ್ಲದಂತೆ ವರ್ತಿಸುವ ವಿದ್ಯಾರ್ಥಿಗಳನ್ನು ಮಾತಿನಿಂದ ಆಕರ್ಷಿಸುವ ಸಲುವಾಗಿ ಇದ್ದ ತ್ರಾಣವನ್ನೆಲ್ಲಾ ಒಟ್ಟುಗೂಡಿಸಿ ಪಾಠ ಮಾಡಿ ಎರಡು ಮಹಡಿ ಇಳಿದು ಸ್ಟ್ಯಾಫ್ ರೂಮಿಗೆ ಬಂದೆ. ಮನೆಯಿಂದ ಬಾಟಲಿಯಿಂದ ಸ್ವಲ ನೀರು ಗುಟುಕರಿಸಿ, ಹತ್ತು ನಿಮಿಷ ಸುಧಾರಿಸಿಕೊಂಡೆ. ಏನು? ಕುಡಿಯುವ ನೀರು ಸಹ ಮನೆಯಿಂದ ತರಬೇಕೆ ಎಂಬ ಪ್ರಶ್ನೆಯಾಗಲೇ ನಿಮ್ಮಲ್ಲಿ ಉದ್ಭವಿಸಿದೆ ಅಲ್ಲವೆ..? ಡಿಪಾಟರ್್ಮೆಂಟಿಗೆ ಒಬ್ಬರು ಸಹಾಯಕರನ್ನು ಕೊಡಲು ಮ್ಯಾನೇಜ್ಮೆಂಟು ಉಳಿತಾಯ ಸೂತ್ರವನ್ನು ಅನುಸರಿಸಿದೆ. ಕುಡಿಯುವ ನೀರೇನೋ ಕಾಲೇಜಿನಲ್ಲಿ ಲಭ್ಯ. ಆದರೆ ಅದಕ್ಕೆ ಎರಡು ಮಹಡಿ ಇಳಿಯಬೇಕು!! ಈ ಕಾರಣಕ್ಕೇ ಮನೆಯಿಂದಲೇ ಒಂದು ಬಾಟಲಿ ನೀರು ತಂದು, ಅದನ್ನು ಕಾಲೇಜು ಮುಗಿಯುವವರೆಗೂ ಸಂಭಾಳಿಸಬೇಕಾಗಿತ್ತು!
ಕಾಲೇಜು ಶುರುವಾಗಿ ಮೂರು ಗಂಟೆಗೂ ಮೀರಿತ್ತು. ಒಂದರ ಒತ್ತಡ ಶುರುವಾಗಿತ್ತು. ದೇಹ ಹಗುರ ಮಾಡಿಕ್ಕೊಳ್ಳಲು ಪಡಬೇಕಾದ ಶ್ರಮ ನೆನಸಿಕೊಂಡು ನಿಟ್ಟುಸಿರುಬಿಟ್ಟು, ಬೇರೆ ದಾರಿ ಕಾಣದೆ ಶೌಚಾಲಯದ ದಾರಿ ಹಿಡಿದೆ.
ಒಂದು ಮಹಡಿ ಇಳಿದು, ಅರ್ಧ ಕಿಮೀ ನಡೆದು ಶೌಚಾಲಯದ ಬಳಿ ಬಂದರೆ ಅಲ್ಲೊಂದು ಅಚ್ಚರಿ ಕಾದಿತ್ತು! ಶೌಚಾಲಯದ ಬಾಗಿಲಿಗೆ ಅಡ್ಡಡ್ಡಲಾಗಿ ಕೋಲುಗಳನಿಟ್ಟಿದ್ದು ಕಂಡಿತು. ಒಳಗೆ ಸ್ವಚ್ಛತಾಕಾರ್ಯ ನಡಯುತ್ತಿದೆ ಎಂಬ ಸಾಂಕೇತಿಕ ಸಂದೇಶ ಅಲ್ಲಿತ್ತು! ಮುಗಿಯುವವರೆಗೂ ಕಾಯುವುದು ಅನಿವಾರ್ಯವಾಗಿತ್ತು! ಮತ್ತೆ ಸ್ಟ್ಯಾಫ್ ರೂಮಿಗೆ ಹೋಗುವುದು ಸಾಧ್ಯವೇ ಇರಲಿಲ್ಲ! ಅದಕ್ಕೆ ಮತ್ತೆ ಅರ್ಧ ಕಿಮೀ ನಡೆದು ಒಂದು ಮಹಡಿ ಹತ್ತಬೇಕಾಗಿತ್ತು! ಸ್ವಚ್ಛತಾಕಾರ್ಯ ಎಷ್ಟು ಹೊತ್ತು ನಡೆಯುವುದೋ ಎಂಬ ಅಂದಾಜೂ ನನಗಿರಲಿಲ್ಲ. ಹೆಚ್ಚೆಂದರೆ ಹದಿನೈದು ನಿಮಿಷ ಎನಿಸಿತು. ಅಲ್ಲಿಯವರೆಗೂ ಏನು ಮಾಡಲಿ..? ಪುಣ್ಯಕ್ಕೆ ಎದುರಿಗೆ ಲೈಬ್ರರಿ ಕಂಡಿತು. ಅಲ್ಲಿ ಸ್ವಲ್ಪ ಹೊತ್ತು ಕಳೆದರೆ ಶೌಚಾಲಯ ಉಪಯೋಗಿಸಬಹುದು ಎನಿಸಿ, ಲೈಬ್ರರಿ ಪ್ರವೇಶಿಸಿದೆ.
ನಾಲ್ಕೈದು ಪೇಪರು ತಿರುವಿ ಹಾಕಿದೆ. ರಾಜಕೀಯ, ಸಿನಿಮಾ ಸುದ್ದಿ ಬಿಟ್ಟರೆ ಬೇರಿನ್ನಾವ ಸುದ್ದಿಗಳಿಗೂ ಪತ್ರಿಕೆಯವರು ಮಹತ್ವ ನೀಡುವುದಿಲ್ಲ ಎಂದು ಅರ್ಥ ಮಾಡಿಕೊಂಡೆ. ಸುಮಾರು ಇಪ್ಪತ್ತು ನಿಮಿಷಗಳ ನಂತರ ಈಚೆ ಬಂದು ಶೌಚಾಲಯದತ್ತ ನಡೆದೆ. ಬಾಗಿಲಿಗಿಟ್ಟಿದ್ದ ಅಡ್ಡಪಟ್ಟಿಗಳು ಹಾಗೇ ಇದ್ದವು!!
ಸ್ವಚ್ಛತಾಕಾರ್ಯ ಇನ್ನೂ ಮುಗಿದಿಲ್ಲವೇ ಎಂದು ಅಚ್ಚರಿಯಾಯಿತು! ಮತ್ತೆ ಲೈಬ್ರರಿ! ಮತ್ತೆ ಹತ್ತು ನಿಮಿಷ ಕಳೆದು ಈಚೆ ಬಂದರೆ ಶೌಚಾಲಯದ ಅಡ್ಡಪಟ್ಟಿಗಳು ಇನ್ನೂ ಅಲ್ಲೇ ಇದ್ದವು!!
‘ಇವರೇನು ಕ್ಲೀನ್ ಮಾಡುತ್ತಿದ್ದಾರೋ ಇಲ್ಲಾ ಕ್ಲೀನಾಗಿ ಮಲಗಿದ್ದಾರೋ?’ ಎಂಬ ಅನುಮಾನ ಕಾಡಿತು!! ಮತ್ತೆ ಲೈಬ್ರರಿ! ಮತ್ತೆ ಹದಿನೈದು ನಿಮಿಷದ ನಂತರ ಈಚೆ ಬಂದೆ. ಈ ಬಾರಿ ಆತಂಕ ಹೆಚ್ಚಾಗಿತ್ತು! ಶರೀರದ ವಿಸರ್ಜನಾಂಗ ‘ಏಯ್, ಇನ್ನು ಕಾಯಿಸಿದರೆ ಜೋಕೆ’ ಎಂದು ಧಮಕೀ ಹಾಕುತ್ತಿತ್ತು! ಪರಿಸ್ಥಿತಿ ಬಿಗಡಾಯಿಸಿದ್ದಕ್ಕೆ ಎದೆಯಲ್ಲಿ ಅವಲಕ್ಕಿ ಬತ್ತ ಕುಟ್ಟುವ ಶಬ್ದ ಕೇಳಿಸಿದಂತೆ ಭಾಸವಾಯಿತು!! ಹಣೆಯಲ್ಲಿ ಬೆವರ ಹನಿಗಳು ಮೂಡಿದವು! ನಂಬಿರುವ ಎಲ್ಲಾ ದೇವಾನುದೇವತೆಗಳನ್ನೂ ಸ್ಮರಿಸಿ, ಮೊರೆಯಿಟ್ಟೆ!! ‘ನನ್ನ ಮಾನ ನಿಮ್ಮ ಕೈಯಲ್ಲಿ..ರಕ್ಷಿಸಿ..ರಕ್ಷಿಸಿ’ ಎಂದು ಶರಣಾದೆ.
ಭಯದಿಂದ, ಎಚ್ಚರಿಕೆಯಿಂದ ಶೌಚಾಲಯದ ಕಡೆಗೆ ಕಾಲೆಳೆದುಕೊಂಡು ಹೋದೆ.
ದೇವರು ಕರುಣಾಮಯಿ! ಎಲ್ಲ ದೇವರುಗಳಿಗೂ ನನ್ನ ಮೊರೆ ತಲುಪಿತ್ತು! ಶೌಚಾಲಯ ಪ್ರವೇಶಕ್ಕೆ ಮುಕ್ತವಾಗಿತ್ತು!! ‘ಬದುಕಿದೆಯಾ ಬಡ ಜೀವವೇ’ ಎಂದು ಶೌಚಾಲಯ ಪ್ರವೇಶಿಸಿ ಒತ್ತಡ ನಿವಾರಿಸಕೊಂಡೆ!
‘ಸಾಕು ಈ ಉಸಾಬರಿ! ಇದನ್ನೆಲ್ಲಾ ಭರಿಸುವ ವಯಸ್ಸು ನಿನ್ನದಲ್ಲ, ತೆಪ್ಪಗೆ ಮನೆಯಲ್ಲಿರು’ ಎಂದು ಅಶರೀರವಾಣಿಯೊಂದು ನುಡಿದಂತಾಯಿತು!!

‍ಲೇಖಕರು G

December 27, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

2 ಪ್ರತಿಕ್ರಿಯೆಗಳು

  1. ಕಿರಣ್

    ಸರ್, ಬಹಳ ಮಾರ್ವಿಕವಾಗಿದೆ. ಒಂದು ನೈಜ ಸಮಸ್ಯೆಯನ್ನು ಹಾಸ್ಯ ಲೇಪಿಸಿ ಹೇಳಿದರೂ, ಒಳಗೆ ಗುಳಿಗೆಯ ಕಹಿ ಭಾಸವಾಗುತ್ತದೆ.
    ನಮ್ಮಲ್ಲಿ ಇನ್ನೂ ಒಂದು ಸಮಸ್ಯೆಯಿದೆ. ಅಧ್ಯಾಪಕರ ಶೌಚಾಲಯವನ್ನು ಇತರರು ಉಪಯೋಗಿಸಬಾರದೆಂದು ಅದಕ್ಕೆ ಬೀಗ ಹಾಕಿ, ಬೀಗದ ಕೈ ಅನ್ನು staff room ನಲ್ಲಿ ಇಡಬೇಕು.
    ಆದರೆ ಕೆಲವು ಮರೆಗುಳಿ ಅಧ್ಯಾಪಕರು, ಆ ಬೀಗದ ಕೈ ಅನ್ನು ತಮ್ಮ ಜೇಬಿಗೆ ಹಾಕಿಕೊಂಡು ಮರೆತು ಬಿಡುತ್ತಾರೆ. ಒಬ್ಬ ಮಹಾಶಯರಂತೂ 15 ದಿನ ರಜೆಗೂ ಹೊರಟು ಹೋದರು!
    ಆಗ ಒತ್ತಡ ಒಂದೆಡೆ ಆದರೆ, ಶೌಚಾಲಯ occupy ಆಗಿದೆ ಎಂಬ ಭಾವ ಮತ್ತೊಂದೆಡೆ. ಅಲ್ಲಿ ಯಾರೂ ಇಲ್ಲ ಎಂದು ತಿಳಿದಾಗ, ಬೀಗದ ಕೈ ಹುಡುಕುವ ಉಸಾಬರಿ ಮತ್ತೊಂದೆಡೆ! ಈ ಪ್ರಯತ್ನ ಯಾರ ಕಣ್ಣಿಗಾದರೂ ಬಿದ್ದರೆ ಎಂಬ ಮುಜುಗರ ಇನ್ನೊಂದೆಡೆ! ತಡೆಯಲೂ ಆಗದು; ಇರಲೂ ಆಗದು.
    ಒಳ್ಳೆಯ ಬರಹಕ್ಕೆ ಧನ್ಯವಾದಗಳು!

    ಪ್ರತಿಕ್ರಿಯೆ
  2. Prof.Shivashankar s.g

    ತಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು. ಲಘುವಾಗಿ ಕಾಣುವ ಅತ್ಯಂತ ಗಂಭೀರ ಸಮಸ್ಯೆ ಇದು.
    ಶಿವಶಂಕರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: