ಟೈಂ ಪಾಸ್ ಕಡ್ಲೆ ಕಾಯ್ : ಹುಚ್ಚರಾಯಪ್ಪನ ವಿಚಿತ್ರರೂಪಂ!

ಎಚ್. ಜಿ. ಮಳಗಿ

ಸಂಜೆ ಕರ್ನಾಟಕ ಸಂಘದಲ್ಲಿ ನನ್ನ ಸ್ನೇಹಿತನ ಪುಸ್ತಕ ಬಿಡುಗಡೆ ಸಮಾರಂಭ ಇತ್ತು. ಅದಕ್ಕೆ ಹೋಗಲು ತಡವಾಗಿದ್ದರಿಂದ ತರಾತುರಿಯಿಲ್ಲಿ ತಯಾರಾಗುತ್ತಿದ್ದೆ. ಆಗ ನನ್ನ ಮೊಬೈಲ್ ರಿಂಗಣಿಸಿತು. ಅವನೇ ಇರಬೇಕೆಂದು, ‘ಹೊಂಟೀನ್ಲೇ! ಐದು ನಿಮಿಷ್ದಾಗ ಅಲ್ಲಿರ್ತೀನಿ…’ ಅಂತ ನಾನು ಅನ್ನುತ್ತಿದ್ದಂತೆಯೇ ಮಧ್ಯದಲ್ಲಿಯೇ ನನ್ನ ಮಾತನ್ನು ತುಂಡರಿಸಿ, ‘…ಸಾ ಸಾ! ನಾ ಸಾ ಉಚ್ರಾಯಾ!’ ಅತ್ತ ಕಡೆಯಿಂದ ಬಂದ ಧ್ವನಿಯನ್ನು ಕೇಳಿ ಮೊಬೈಲನಲ್ಲಿ ನಂಬರನ್ನು ನೋಡಿದೆ.
ನಮ್ಮ ಅಡ್ಡಮನೆ ಹುಚ್ಚೂರಾಯಂದು!
‘ಏನೋ ಹುಚ್ಚಾ! ಇಷ್ಟೊತ್ನ್ಯಾಗ! ಲಗೂ ಹೇಳು! ನಂಗ ಅಜರ್ೆಂಟ್ ಕೆಲ್ಸ ಅದ!’ ಅಂತ ಅವಸರಿಸಿದೆ. ಅವನು ಯಥಾಪ್ರಕಾರ ನಾನು ಯಾವುದಕ್ಕೂ ಪ್ರಯೋಜನ ಇಲ್ಲದವನು ಅಂತ ಬೈದು,
‘ಸಾ! ಚೆಂಜೆ ಪ್ರೀ ಅದೀರಾ? ಏನಾರಾ ಪೋರ್ಗಾಮ್ ಐತ್ರಾ?’ ಅಂತ ಕೇಳಿದ. ನಾನು ಟೈಮ್ ನೋಡಿಕೊಂಡು,
‘ಈಗ ಚೆಂಜೇನೇ ಅಲ್ಲೇನೋ ಹುಚ್ಚಾ?’ ಅಂತ ಅಂದೆ. ಅವನು ಮಾಮೂಲು ಮೇಕೆಯಂತೆ ‘ಕೆ…ಕೆ’ ಅಂತ ನಕ್ಕು, ‘ಬಲ್ ತಮಾಸೆ ಮಾಡ್ತೀರಿ ಸಾ ನೀವು! ಚೆಂಜೆ ಅಂದ್ರೆ ರಾತ್ರೀ ಸಾ!’ ಅಂದ. ಅವನ ಮಾತು ನನಗೆ ತಮಾಷೆಯಾಗಿ ಕಂಡರೂ ಈಗ ಅವನ ಹತ್ರ ಮಾತೋಡೋಕೆ ಟೈಮ್ ಇರಲಿಲ್ಲ. ತರಾತುರಿಯಿಂದ,
‘ಹೂಂ ಹೂಂ! ಫ್ರೀ ಇದ್ದೀನಿ. ಅದೇನು ಅಂತ ಲಗೂನ ಹೇಳು!’ ಅಂತ ಅವಸರಿಸಿದೆ.
‘ಸಾ! ನಾನೊಂದು ಪಿಲಿಮ್ ಮಾಡಾಣಾಂತ ಅದೀನಿ ಸಾ!’ ಅತ್ಯಂತ ಸಾವಧಾನವಾಗಿ ಹೇಳಿದ. ಅವನು ಸಿನಿಮಾ ಮಾಡೋ ಸುದ್ದೀ ಕೇಳೇ ನಾನು ಅಟಂಬಾಂಬ್ ಬಿದ್ದಂತಾಗಿ ಎಗರಿ ಬಿದ್ದೆ.
‘ಆ! ಏನಂದೆ?’
ಅವನು ಮತ್ತೆ ಕೆನೆಯುತ್ತಾ, ‘ನೂಜ್ ಕೇಳಿ ಸಾಕ್ ಆತಾ ಸಾ? ಎಲ್ರೂನೂವೇ ಅಂಗೇ ಸಾಕ್ ಒಡ್ದಿದಾರೆ ಸಾ! ಔದು ಸಾ ನಾ ಪಿಲಿಮ್ ಮಾಡಾಕೆ ಸ್ಕೆಚ್ ಆಕೀನೀ! ಅದರ ಸ್ಕಿಪ್ಟ್ ರೆಡಿ ಮಾಡೀನಿ! ಆಡೂ, ಡ್ಯಾನ್ಸೂ, ಪೈಟು, ರಾಜಕೀಯ, ಮಟಗಳು, ಸ್ವಾಮಿಗಳು, ಜಾತಿ ದ್ವೇಸಾ, ಲೌವ್ವೂ, ಇಂಟಲ್ಕಾಸ್ಟ್ ಮ್ಯಾರೇಜು ಎಲ್ಲಾ ಸೀನ್ ಆಕೀನೀ ಸಾ! ಗ್ಯಾರಂಟೀ ಸುಪ್ಪರ್ ಡುಪ್ಪರ್ ಇಟ್ ಸಾ! ಆದ್ರೆ…!’ ಅಂತ ರಾಗ ಎಳೆದ. ನನಗೆ ಕುತೂಹಲ ಮರ್ಕ್ಯೂರಿಯಂತೆ ಏರುತ್ತಿತ್ತು.
‘ಆದ್ರೆ ಏನೋ?’ ಅಂತ ಕೇಳಿದೆ. ಅವನು ಮತ್ತೇ ರಾಗ ಎಳೆಯುತ್ತ, ‘ಅದೇ ಸಾ! ಪಿಲಿಮ್ ಮಾಡೋಕ್ ಮುಂಚೆ ಸಮಾಜದ ಇರಿಯರ, ಇಂಪೊಟೆಂಟ್ ಮಂದೀ ಜೆತೆ ಮಾತಾಡೋದೈತೀ ಸಾ!’ ರಾಗ ಎಳೆದ. ನಾನು ಮತ್ತೆ ಎಗರಿ ಬಿದ್ದೆ. ಇವನ ಹಾಳು ಇಂಗ್ಲೀಷ್ ವ್ಯಾಮೋಹದಲ್ಲಿ ಇಂಪಾಟರ್ೆಂಟ್ ಮಂದಿಗಳೆಲ್ಲಾ ಇಂಪೊಟೆಂಟ್ ಆದದ್ದು ಕೇಳಿ ಕಣ್ಣಿಗೆ ಕತ್ತಲು ಬಂದಂತಾಯಿತು. ಮತ್ತೆ ಅವನ ಕಂಚಿನ ಧ್ವನಿಗೆ ಎಚ್ಚರ ಬಂತು.
‘…ಅದ್ಕೇ ಎಲ್ಲಾ ಪ್ರಮುಕರನ್ನೂ ಡಿಸ್ಗಸ್ಡ್ ಮಾಡಾಕೆ ಬರೇಳೇನಿ ಸಾ! ನೀವೂ ಬಂದು ಸಜೆಸೆನ್ ಕೊಡಬೇಕು ಗುರುವೇ!’ ಅಂತ ಹೆಮ್ಮೆಯಿಂದ ಹೇಳಿದ.
ಅವನ ಮಾತು ಕೇಳಿ ನನಗೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗುವುದು ಮರೆತೇ ಹೋಯ್ತು. ಈ ಹುಚ್ರಾಯಾ ಫಿಲ್ಮ್ ಮಾಡೋಕೆ ಹೊರಡೋದಕ್ಕೂ, ಸಮಾಜದ ಪ್ರಮುಖರನ್ನು ಚಚರ್ೆಗೆ ಇನ್ವೈಟ್ ಮಾಡೋದಕ್ಕೂ ಏನೋ ಸಂಬಂಧ ಇದೆ ಅಂತ ಗುಮಾನಿ ಬಂದು. ಯಾಕೆಂದರೆ ಇವನು ದೂರುದ್ದೇಶವಿಲ್ಲದೇ ಯಾವ ಕೆಲಸವನ್ನೂ ಮಾಡುವುದಿಲ್ಲ.
‘ಎಷ್ಟೊತ್ತಿಗೋ ಡಿಸ್ಕಷ್ನ್?’ ಅಂತ ಕೇಳಿದೆ.
‘ಏಳ್ಗಂಟೆಗೆ. ಕೆರೆಏರಿ ಗೆಸ್ಟ್ ಔಸ್ನಲ್ಲಿ ಶಿವಾ!’ ಅಂದ.
‘ಮತ್ತೆ ರಾತ್ರಿ ಅಂತೀ?’ ಅಂತ ಆಕ್ಷೇಪಿಸಿದೆ. ಅವನು ಕಿಸಿಕಿಸಿ ನಕ್ಕು,
‘ಊಂ ಸಿವಾ! ಏಳ್ಗಂಟೆ ಅಂದ್ರೆ ನಮ್ಗೆ ರಾತ್ರೀನೇ ಅಲ್ಲವ್ರಾ ಸಾ!’ ಅವನ ಸಂಜೆ ರಾತ್ರಿಯ ವ್ಯಾಖ್ಯಾನವನ್ನು ಅರಗಿಸಿಕೊಳ್ಳಲಾರದೇ ತಳಮಳವನ್ನು ನಿಯಂತ್ರಿಸಿಕೊಳ್ಳುತ್ತಾ,
‘ಬರ್ತೀನಿ ಹುಚ್ಚಾ! ಆದ್ರ ನಿಮ್ಮ ರಾತ್ರಿ ಸಮಾರಂಭ.. ಆ ಹಾಳು, ಮೂಳು.. ನಂಗಾಗಿ ಬರೂದಿಲ್ಲ. ಗೊತ್ತದ ಇಲ್ಲೋ?’ ಕೇಳಿದೆ.
ಹುಚ್ರಾಯಾ ಮತ್ತೆ ಕೆನೆದು, ‘ಏಯ್ ನಂಗೊತ್ತಿಲ್ವರಾ ನಿಮ್ಮ ಈಕ್ನೆಸ್ಸು? ಏನೂ ತಿನ್ನಂಗಿಲ್ಲಾ, ಏನೂ ಕುಡಿಯಂಗಿಲ್ಲಾ! ಅಂತ ನನ್ನನ್ನು ತನ್ನ ಅದ್ಭುತವಾದ ಇಂಗ್ಲೀಷಿನಲ್ಲಿ ಹೀಯಾಳಿಸಿ, ‘ಬಯಾ ಬೀಳ್ಬೇಡಿ! ನಿಮ್ಗೇಂತ ಸೆಪಲೇಟ್ ಪೆಸಲ್ ಎಜಿಟೇರಿಯನ್ ಪುಡ್…ಅದೇ ಪುಳಿಚಾರ್…ಮಾಡ್ಸಿದ್ದೀನಿ ಸಾ! ಮರೀದೇ ಬನ್ನಿ ಸಾ!’ ಮತ್ತೊಮ್ಮೆ ಆಹ್ವಾನಿಸಿ ಫೋನ್ ಕಟ್ ಮಾಡಿದ. ಇವನ ಫಿಲಮ್ ಗುಂಗಿನಲ್ಲಿ ಪುಸ್ತಕ ಬಿಡುಗಡೆ ನನ್ನ ಮಸ್ತಕದಿಂದ ಇಳಿದು ಹೋಗಿತ್ತು.

ನಗರದ ಹೊರ ವಲಯದ ಕೆರೆಯ ದಂಡೆಯ ಮೇಲಿದೆ ಕೆರೆಏರಿ ಗೆಸ್ಟ್ ಹೌಸ್. ರಾಜಕೀಯ ‘ರಿಸಾಲ್ಟ್’ಗಳು ಹೆಚ್ಚಾಗಿ ನಡೆಯುವ ಸ್ಥಳ ಅದು. ಅದರಲ್ಲಿ ಹುಚ್ರಾಯನೂ ಬಂಡವಾಳ ತೊಡಿಸಿದ ಬಗ್ಗೆ ನನಗೆ ಗುಮಾನಿ ಇದೆ.
ನಾನು ಗೆಸ್ಟ್ಹೌಸಿಗೆ ಹೋದಾಗ ಆಗಲೇ ನನಗೆ ಪರಿಚಯದ ಒಂದಿಬ್ಬರು ರಾಜಕೀಯ ಮುಖಂಡರುಗಳು, ಹುಚ್ರಾಯಪ್ಪನ ಜಾತಿಯವರೇ ಆದ, ಪ್ರಸಿದ್ಧ ಮಠದ ಸ್ವಾಮಿಯೊಬ್ಬರೂ, ಬೇರೆ ಬೇರೆ ಧರ್ಮದ ಗುರುಗಳೂ, ಒಂದೆರಡು ಜಾತಿಗಳ ಸಂಘಟನೆಗಳ ನಾಯಕರುಗಳು, ಜಾತ್ಯತೀತರೆನಿಸಿಕೊಂಡ ಒಬ್ಬ ಲೇಖಕರೂ, ನಾಟಕಗಾರರೂ, ಒಂದು ಜಾತಿಯವರನ್ನೇ ಬೈದು ಬೆಳೆದಿರುವ ಇನ್ನೊಬ್ಬ ಮಹಾನ್ ಲೇಖಕರೂ, ಮಹಿಳಾ ಸಂಘಟನೆಯ ಪ್ರಮುಖೆಯೊಬ್ಬಳೂ ಸೇರಿದ್ದರು. ಟೇಬಲ್ ಮೇಲಿದ್ದ ಬಾಟೀ ಗ್ಲಾಸ್ಗಳಿಂದಲೇ ತಿಳಿಯಿತು ಅವರಾಗಲೇ ಅಲ್ಲಿ ಸೇರಿ ಬಹಳ ಹೊತ್ತಾಗಿತ್ತೆಂದು. ಸ್ವಾಮಿಗಳ ಮುಂದಿದ್ದ ತಟ್ಟೆಯಲ್ಲಿಯ ಹಣ್ಣುಗಳು, ಗೋಡಂಬಿ ದ್ರಾಕ್ಷಿಗಳೂ ಅರ್ಧ ಖಾಲೀ ಆಗಿದ್ದವು.
ನಾನು ಹೋಗುತ್ತಿದ್ದಂತೇ ಹುಚ್ರಾಯಾ ತಾನೇ ಎದ್ದು ಬಂದು, ಬಾಯಿಯನ್ನು ಎರಡೂ ಕಿವಿಯಾಚೆ ವಿಸ್ತರಿಸಿ ನಗುತ್ತಾ ಸ್ವಾಗತಿಸಿ, ‘ಇವ್ರು ನಮ್ ಮೇಸ್ಟ್ರು! ನನ್ನ ಇತೈಸಿಗಳು, ನನ್ನ ಗಾಡ್ ಪಾದರ್ರು! ಬಾಳಾ ಒಳ್ಲೇವ್ರು’ ಅಂತ ನನ್ನಲ್ಲಿ ಇಲ್ಲದ, ನಾನು ಒಲ್ಲದ ವಿಶೇಷಣಗಳನ್ನು ಬೆರೆಸಿ, ಎಲ್ಲರಿಗೂ ನನ್ನ ಪರಿಚಯ ಮಾಡಿಸಿದ. ಎಲ್ಲರೂ ನಕ್ಕು ಕೈಮುಗಿದರು. ನಾನೂ ಕೈ ಮುಗಿದು, ರಾಜಗಾಂಭೀರ್ಯದಿಂದ ಆಸೀನರಾಗಿದ್ದ ಸ್ವಾಮಿಗಳತ್ತ ನಡೆದು ಅವರ ಕಾಲಿಗೆ ನಮಸ್ಕರಿಸಿದೆ.
‘ಆ ಸಿವಾ ನಿನ್ನ ಬೇಸ್ಯಾಗಿಟ್ಟಿರಲಿ!’ ಅಂತ ಎಡಗೈ ಎತ್ತಿ ಆಶೀರ್ವದಿಸಿದರು!
‘ಸಾರ್ ಟೀ ಕಾಫಿ?’ ಅಂತ ಉಪಚಾರ ಮಾಡಿದ.
‘ನಂದೆಲ್ಲಾ ಆಗ್ಯದ! ನಂಗೇನೂ ಬ್ಯಾಡಾ!’ ಅಂತ ಅಂದು, ಯಾವುದಕ್ಕೂ ಇರಲೀ ಅಂತ ಒಂದು ಬಾಟಲ್ಲು ನೀರು ತಂದಿದ್ದೆ, ಅದನ್ನೇ ಸ್ವಲ್ಪ ಕುಡಿದೆ.
ಹುಚ್ರಾಯ ಎದ್ದು ನಿಂತು ಸ್ವಾಮಿಗಳಿಗೆ ಅಲ್ಲಿಂದಲೇ ಬಗ್ಗಿ ನಮಸ್ಕರಿಸಿ ನಮಗೆಲ್ಲಾ ವಂದಿಸಿ ತನ್ನ ಕಪ್ಪು ಕೆಂಪು ದಂತಗಳನ್ನು ತೋರಿಸಿ, ‘ಸಬಿಕರೇ! ಎಲ್ಲಾರ್ಗೂನೂವೆ ಅಡ್ಡಮನೆ ಉಚ್ರಾಯನ ನಮಸ್ಕಾರಾ! ನಿಮ್ಗೆಲ್ಲಾ ಈಗಾಗ್ಲೇ ತಿಳಿದಿರುವಂತೆ, ನಾ ಒಂದ್ ಪಿಲಮ್ ಮಾಡಾಕೆ ಸ್ಕಿಪ್ಟ್ ರೆಡೀ ಮಾಡಿ ಮಡಗೀನಿ! ಲೌವ್ವೂ, ಪೈಟೂ, ಐಟಮ್ ಡ್ಯಾನ್ಸು, ಪಾಲಿಟಿಕ್ಸು, ಮಟಾ, ಸ್ವಾಮಗೋಳು, ರೇಪ್ ಕೇಸು ಎಲ್ಲಾ ಆಕಿ ಬಾರೀ ಕತೆ ಎಣದೀದೀನಿ!’ ಅಂತ ಹೇಳಿ ನಮ್ಮನ್ನೆಲ್ಲಾ ಒಮ್ಮೆ ನೋಡಿ ನಕ್ಕ. ನನಗೆ ಅವನ ಈ ಮಾಮೂಲು ಫಾರ್ಮುಲಾ ಕತೆ ಕೇಳಿ ರೇಗಿತು. ಈ ಕತೆ ಕೇಳೋದುಕ್ಕೆ ನನ್ನ ಇಲ್ಲಿ ಬರಹೇಳಿದ್ದಕ್ಕೆ ಕೋಪವೂ ಬಂತು.
‘ಏನ್ ಹುಚ್ರಾಯಾ, ಈ ಮಾಮೂಲು ಫಾರ್ಮುಲಾ ಕಥೆ ಕೇಳೋಕೆ ನನ್ನ ಇಲ್ಲಿ ಬರಹೇಳಿದ್ದೀಯಾ?’
‘ಕೋಪಾ ಮಾಡ್ಕೋಬ್ಯಾಡಿ ಗುರುವೇ! ಟೋರೀ ಮಾಮೂಲೇ! ಆದ್ರೆ ಈಗ ಸಿಚುವೇಸನ್ನು ಆಲ್ಡೀನರಿ ಇಲ್ಲಾ ಸಾ! ಕಮಲಣ್ಣನ ಪಿಲಮ್ ಇಸ್ವರೂಪಮ್ಮನ್ನ ನೋಡ್ನಿಲ್ವಾ ಸಾ! ಎಂತಾ ಕಾಂಟಲ್ವೊಲ್ಸಾತು! ಆ ಯಪ್ಪಾ ಮನೆ ಮಟ ಎಲ್ಲಾ ಮಾರಿ ಪಿಲಮ್ ಮಾಡಿ, ಕಡೀಗೆ ಅದು ರಿನೀಜ್ ಆಗ್ದೆ, ಎಡ್ಡ್ ಮ್ಯಾಲೆ ಗೋಣೀ ಚೀಲಾ ಮಡಕ್ಕೊಂಡ್ ತಿರ್ಗೋವಂತಾಗೊಯ್ತಲ್ಲವ್ರಾ. ಅದ್ಕೇ ಪಿಲಮ್ ಮಾಡಿ, ಅದು ಇವಾದ ಆಗಿ, ರಿನೀಜ ಆಗದೇ ಓದ್ರೆ ಎಂತಾ ಲಾಸ್ ಅಲ್ಲವ್ರಾ? ಅದ್ಕೇ ಎಲ್ಲಾ ಮುಕಂಡರುಗಳ, ದರ್ಮಗುರುಗಳ, ಸ್ವಾಮಗೊಳ ಸಲಎ ತಗೊಂಡ್ ಮಾಡಿದ್ರೆ ಆ್ಯಂಗೆ ಅಂತ ಎಲ್ಲರ್ನೂವೆ ಸೇರ್ಸೀನಿ ಸಿವಾ! ಈಗ ಎಲ್ಲರೂ ಒಪ್ಪಿ ಬಿಟ್ರೆ ಆಮ್ಯಾಗೆ ಯಾರೂ ಕಮಕ್ ಕಿಮಕ್ ಅನ್ನಂಗಿಲ್ಲಾ!’ ಅಂತ ವಿವರಣೆ ನೀಡಿದ.
ನನಗೆ ಅವನ ವ್ಯವಹಾರ ಜ್ಞಾನ ಕಂಡು ಕಣ್ಣಿಗೆ ಕತ್ತಲು ಬಂದಂತಾಗಿ, ಬಾಯೊಣಗಿ, ಮತ್ತೊಮ್ಮೆ ನೀರು ಕುಡಿದು ಕೂತೆ.
‘ಲೌ ಸ್ಟೋರೀ ಅಂದ್ರಲ್ಲಾ ಯಾವ ಯಾವ ಜಾತಿ ಧರ್ಮದ್ದು? ಹುಡುಗ ನಮ್ಮ ಧರ್ಮದವನಾಗಿದ್ದರೆ ಸರಿ. ಒಂದು ವೇಳೆ ಹುಡುಗಿ ನಮ್ಮ ಧರ್ಮದವಳಾದರೆ ಅದಕ್ಕೆ ನಮ್ಮ ವಿರೋಧವಿದೆ. ನಾವು ಪಿಚ್ಚರ್ ರಿಲೀಜ್ ಮಾಡೋಕೆ ಬಿಡೋದಿಲ್ಲಾ!’ ಅಂತ ಒಬ್ಬ ಧರ್ಮಗುರುಗಳು ಕೂತಲ್ಲಿಂದಲೇ ಗುಡುಗಿದರು.
‘ಸೀ ಮಿಸ್ಟರ್ ಹುಚ್ರಾಯ್! ನಿನ್ನ ಫಿಲ್ಮನಲ್ಲಿ ಭಯೋತ್ಪಾದಕರ ಬಗ್ಗೆ ಒಂದಾದ್ರೂ ಸೀನ್ ಇರ್ಲೇ ಬೇಕು!’ ಅಂತ ಇನ್ನೊಬ್ಬ ಧರ್ಮಗುರುಗಳು ಹುಕುಂ ಕೊಡಿಸಿದರು. ಅವರ ಮಾತನ್ನ ಕೇಳಿ ಮತ್ತೊಬ್ಬ ಧರ್ಮಗುರುಗಳು ಕೋಪದಿಂದ ಕೆಂಡಾಮಂಡಲವಾಗಿ,
‘ಹುಚ್ರಾಯಾ ನಿನ್ನ ಫಿಲಮ್ಮನಲ್ಲಿ, ಇವರು ಹೊಗಳುವ ಆ ದರಿದ್ರ ದೇಶದವರು ನಮ್ಮ ಕಮ್ಯುನಿಟಿ ದೇಶಗಳ ಮೇಲೆ ನಡೆಸುತ್ತಿರುವ ಅತ್ಯಾಚಾರಗಳ ಬಗ್ಗೆಯೂ ಖಂಡಿತವಾಗಿಯೂ ಸಿಕ್ವೆನ್ಸ್ ಹಾಕು! ಅಂದ್ರೆ ನಾವು ನಿಂಗೆ ಸಪೋರ್ಟ ಮಾಡ್ತೀವಿ! ಇಲ್ದಿದ್ದರೆ ಅಷ್ಟೇ! ನಿನ್ನ ಫಿಲಮ್ ಮಟಾಶ್!’
‘ಸ್ವಾಮೀ! ಗುರುವೇ! ಸಾಂತಿ ಸಾಂತಿ! ನನ್ನ ಪಿಲಮ್ನಲ್ಲಿ ಅಂತಾ ಯಾವ ಸೀನ್ಗಳೂ ಇಲ್ರಣ್ಣಾ!’ ಅಂತ ಕಕ್ಕಾಬಿಕ್ಕಿಯಾಗಿ ಹೇಳಿದ. ಅವನ ಮಾತಿಗೆ ಆ ಇಬ್ಬರೂ,
‘ಇಲ್ಲಾಂದ್ರೆ ಹ್ಯಾಂಗೋ ಹುಚ್ಚಾ! ಆ ಸೀನ್ಗಳನ್ನ ಹಾಕು!’ ಅಂತ ಅಪ್ಪಣೆ ಕೊಡಿಸಿದರು.
 
‘ಉಚ್ಚಣ್ಣ ನೀ ಯಾರನ್ನಾದ್ರೂ ಬೈಕೊ ಅತವಾ ಒಗಳ್ಕೊ! ಆದ್ರೆ ನಮ್ಮ ಜಾತಿಗಳ ಬಗ್ಗೆ ಏನಾದರೂ ಟೀಕೆ ಪಿಚ್ಚರಿನಲ್ಲಿತ್ತೋ ನಾವಂತೂ ಅದಕ್ಕೆ ಬೆಂಕೀನೇ ಹಚ್ತೀವಿ!’ ಅಂತ ಒಂದು ಜಾತಿಯ ಮುಖಂಡ ಕೆಂಡಾಮಂಡಲಾಗಿ ಬೆಂಕಿಯನ್ನೇ ಉಗುಳಿದ.
ಆಗ ಬೇರೆಯವರನ್ನು ಬೈದೇ ದೊಡ್ಡವನಾದ ಲೇಖಕ ಎದ್ದು ನಿಂತು, ‘ಕರೆಕ್ಟ್! ನಮ್ಮ ದೇಶದ ಎಲ್ಲಾ ಸಮಸ್ಯೆಗಳಿಗೂ ಆ ಜಾತಿಯ ಡೊಳ್ಳು ಹೊಟ್ಟೆಯ ನನ್ಮಕ್ಕಳೇ ಕಾರಣ! ಆದ್ದರಿಂದ ಹುಚ್ಚಣ್ಣಾ ನಿನ್ನ ಸಿನಿಮಾದಾಗೆ ಆ ಜಾತಿಯವರನ್ನು ಬೈಯ್ಯುವ ಡೈಲಾಗುಗಳಿರಬೇಕು! ಅಂದ್ರೆ ನಮ್ಮ ಸಾಹಿತಿಗಳ ಗುಂಪಿನ ಸಪೋರ್ಟ ನಿಂಗೇ!’ ಅಂತ ನನ್ನನ್ನೇ ನೋಡುತ್ತಾ ಹೇಳಿ ಕೂತ.
‘ಇಲ್ನೋಡು ಉಚ್ರಾಯಾ! ನಿನ್ನ ಪಿಚ್ಚರಿನಲ್ಲಿ ನಮ್ಮ ಮಟದ ಬಗ್ಗೆ ಒಗಳಿಕೆ ಸಂಬಾಸಣೆ ಆಕು! ಆದ್ರೆ ಆ ಇನ್ನೊಂದು ಮಟಾ ಐತಲ್ಲಾ ಅದರ ಬಗ್ಗೆ ಮಾತ್ರ ಬೈಗಳಾ ಆಕಿರ್ಬೇಕು!’ ಮತ್ತೊಬ್ಬ ಸ್ವಾಮಿಗಳು ಕೂತಲ್ಲಿಂದಲೇ ಆಸನ ಬದಲಿಸಿ ಹೇಳಿದರು. ಆಗ ಅಲ್ಲೇ ಕೂತಿದ್ದ ರಾಜಕೀಯ ಮುಖಂಡ ಈ ಸ್ವಾಮಿಗಳು ತಮ್ಮ ಜಾತಿಯ ಮಠದ ಬಗ್ಗೆಯೇ ಹೇಳಿದರೆಂದು ಕೋಪದಿಂದ,
‘ಅದ್ಯಾಂಗಾಗ್ತದೆ ಸ್ವಮೇರಾ! ನಿಮ್ಮ ಮಟದಾಗೆ ಎಂತೆಂತಾ ಅಗರಣ ನಡೀತಾ ಇವೆ! ಎಂತೆಂತಾ ಕಂತ್ರೀ ಕೆಲ್ಸದಾಗೆ ಇನ್ವಾಲ್ ಆಗಿದೀರಿ! ಅಂತಾದ್ರಾಗೆ ಪಿಲಮ್ನ್ಯಾಗೆ ನಿಮ್ಮನ್ನ ಒಗಳೋದು ಹ್ಯಾಂಗೆ!’ ಪ್ರತಿಭಟಿಸಿದ. ಸರ್ವಸಂಗ ಪರಿತ್ಯಾಗಿಗಳಾಗಿದ್ದು, ರಾಗದ್ವೇಷಗಳನ್ನು ಜಯಿಸಿದ್ದಾಗಿ ಹೇಳುವ ಸ್ವಾಮಿಗಳು ಸಿರ್ರನೇ ರೇಗಿದರು,
‘ಮುಚ್ಗೊಂಡ್ ಕೂತ್ಗೋಳಯ್ಯಾ ಕಂಡಿದೀನಿ ನಿನ್ನ, ನಿಂ ಪಕ್ಷದ ಬಾನಗಡೀನೆಲ್ಲಾ!’
ಹುಚ್ರಾಯ ಮತ್ತೆ, ‘ಸ್ವಾಮೇರಾ ಸಾಂತಿ! ಅಣ್ಣಾ ಸಾಂತಿ ಸಾಂತಿ!’ ಅಂತ ಎದ್ದು ನಿಂತು ಕೈ ಮುಗಿದು ವಿನಂತಿಸಿದ. ಇಬ್ಬರೂ ಬೆಂಕಿಯುಗುಳುವ ಮುಖದಿಂದಲೇ ಒಬ್ಬರನ್ನೊಬ್ಬರು ನೋಡುತ್ತ ಸುಮ್ಮನಾದರು.
ಅಲ್ಲೇ ಕೂತಿದ್ದ ಮಹಿಳಾ ನಾಯಕಿ ವೀರಾವೇಶದಿಂದ ಎದ್ದು ನಿಂತು, ‘ನೋಡಣ್ಣಾ ನಿನ್ನ ಸಿನಿಮಾದಾಗೆ ಲೇಡೀಜು ಹೀರೋನ ಮೇಲೆ ಅತ್ಯಾಚಾರ ಮಾಡೋ ಸೀನುಗಳಿರಬೇಕು! ಎಲ್ಲಾ ಪಿಚ್ಚರ್ನಾಗೂ ನಿಮ್ಮಂತ ಗಂಡಸ್ರ ಕೈಲಿಂದ ರೇಪ್ ಮಾಡುಸ್ಗೊಂಡ್ ನಮಗೂ ಸಾಕಾಗೋಗಿದೆ! ಇದ್ರಾಗ್ ಮಾತ್ರ ನಾ ಹೇಳಿದಂತೆ ಸೀನ್ ಇರ್ಬೇಕು!’ ಅಂತ ಜೋರು ಮಾಡಿ ಮೇಕಪ್ಪನ್ನು ತಿದ್ದಿಕೊಂಡಳು. ಆಗ ಆ ಲೇಬರ್ ಸಂಘಟನೆಯ ಕಾರ್ಯದಶರ್ಿ, ‘ಸತ್ಯವನ್ನೇ ಹೇಳಿದೆ ಕಣಮ್ಮಾ!’ ಅಂತ ಕಿಸಕ್ಕನೇ ನಕ್ಕ. ಅವಳಿಗೆ ಅವಮಾನವಾಯಿತು.
ಆ ಸ್ವಾಮಿಗಳು ಆ ಮಹಿಳಾಮಣಿಯನ್ನ ಮೇಲಿನಿಂದ ಕೆಳತನಕ ಒಮ್ಮೆ ನೋಡಿ, ‘ನೀವು ಎಂಗಸ್ರು ಇಂಗೆ ಬಟ್ಟೆ ಆಕ್ತಿತಿರೋದ್ರಿಂದಲೇ ನಮ್ಮಂತ ಗಂಡಸ್ರು ರೇಪ್ ಮಾಡೋಕೆ ಪ್ರೋಸ್ತಾಅ ಸಿಗ್ತಿದೆ!’ ಅಂತ ಹಂಗಿಸಿದರು. ಆ ಮಹಿಳೆ ಗಬಕ್ಕನೇ ಬಟ್ಟೆಯನ್ನ ಸರಿಪಡಿಸಿಕೊಂಡು, ‘ನಾವು ಹೆಂಗಸರು ಎಂತಹ ಬಟ್ಟೆ ಹಾಕ್ಕೋಬೇಕಂತ ಹೇಳೋಕೆ ನಿಮಗೇನು ಹಕ್ಕಿದೆ? ನಾವು ಹೆೆಂಗಾದ್ರೂ ಇರ್ತೀವಿ!’ ಅಂತ ಕ್ಯಾಕರಿಸಿ, ‘ಏಯ್ ಹುಚ್ರಾಯಾ ನೀ ಏನಾದ್ರೂ ಆ ಪಿಚ್ಚರನ್ನ ಮಾಡು! ಅದ್ಯಾಂಗೆ ರಿಲೀಜ್ ಅಗ್ತದೆ ನಾವೂ ನೋಡ್ತೀವಿ!’ ಅಂತ ಅವಮಾನಿತಳಾದ ಆ ಮಹಿಳೆ ಧಡಕ್ಕನೇ ಎದ್ದು ಹೊರಗೆ ಹೋದಳು. ಹುಚ್ರಾಯಪ್ಪಾ ಅವಳ ಹಿಂದೆಯೇ, ‘ಅಕ್ಕಮ್ಮಾ, ಮೇಡಂ, ಸಿಸ್ಟರ್!’ ಅಂತ ಕೂಗುತ್ತಾ ಧಾವಿಸಿದ. ಅವಳು ಹಿಂದೆ ಬರಲಿಲ್ಲವೆಂಬುದು ಹುಚ್ರಾಯನ ಜೋಲು ಮುಖದಿಂದಲೇ ತಿಳಿಯಿತು.
‘ಅಣ್ಣಾ! ಸ್ವಾಮಿ! ನೀವೆಲ್ಲಾ ಇಂಗೆ ಒಬ್ಬರ್ಗೊಬ್ಬರು ಕಿತ್ತಾಡ್ತಾ ಇದ್ರೆ ನನ್ನ ಪಿಲಮ್ ಎಂಗಣ್ಣಾ ಆಗೋದು? ನಂದು ಏರೀ ಸಿಂಪಲ್ ಲೌ ಪಿಲಮ್ ಕಣಣ್ರೋಯ್’ ಅಂತ ಅಂಗಲಾಚಿದ, ಗೋಗರೆದ.
ಒಬ್ಬ ಎದ್ದು, ‘ನಂ ಪಕ್ಕದ ದೇಸದೌರು ನಂ ಇರುದ್ದ ಬಯೋತ್ಪಾದನೆ ಮಾಡ್ತೌರೆ! ನೀ ಅವ್ರ ಇರುದ್ದ ಯುದ್ದಾ ಮಾಡೋ ಸೀನ್ ಆಕು ಮತ್ತೆ!’
‘ಮುಚ್ಗೊಂಡ್ ಕೂರಯ್ಯಾ! ನಿಂ ಪಕ್ಸದೌರೇ ನಂ ದೇಸ್ದಾಗೆ ಬಯೋತ್ಪಾದನೆ ಮಾಡೋಕೆ ಪ್ರೋಸ್ತಾಅ ಕೊಡ್ತಾ ಇದ್ದೀರಂತೆ! ನಮಗೆ ಗೊತ್ತಿಲ್ವಾ!’ ಇನ್ನೊಬ್ಬನ ದಬಾವಣೆ.
‘ನೀವೆಲ್ಲಾ ಹೀಗೇಯೇ! ಇಬ್ಬರೂ ಒಬ್ಬರನ್ನೊಬ್ಬರು ಬೈದುಕೊಳ್ಳೋದು, ಆಮೇಲೆ ಇಬ್ರೂ ಸೇರ್ಕೊಂಡ್ ನಂ ಲೇಬರ್ ಕಲಾಸನ್ನ ಸೋಸಣೆ ಮಾಡೋದು ನಮಗ್ಗೊತ್ತಿಲ್ಲಾಂತ ಮಾಡೀರೋ ಹೆಂಗೆ? ಹುಚ್ರಾಯಾ ನಿನ್ನ ಪಿಚ್ಚರಿನಲ್ಲಿ ಕಾಮರ್ಿಕರನ್ನು ಸೋಸಣೆ ಮಾಡೋ ಈ ಸರಕಾರಗಳ ಇರುದ್ದ ಪ್ರತಿಬಟನೆಯ ಸೀನ್ ಆಕು!’ ಅಂತ ಕಾಮರ್ಿಕ ಸಂಘಟನೆಯ ಲೀಡರ್ ಗುಡುಗಿದ. ಇವರ ಸಲಹೆಗಳನ್ನು ಕೇಳುತ್ತಾ ಕೂತಿದ್ದ ಹುಚ್ರಾಯಪ್ಪ ಗಡಗಡ ನಡುಗಿದ. ಎಲ್ಲರೂ ತಮಗಿಷ್ಟವಾದ ಹಾಗೂ ತಮ್ಮ ವಿರೋಧಿಗಳಿಗೆ ಇಷ್ಟವಾಗದ ಸೀನುಗಳನ್ನು ಫಿಲ್ಮನಲ್ಲಿ ಸೇರಿಸಲೇಬೇಕೆಂದು ಒಬ್ಬರಿಗೊಬ್ಬರು ಜಗಳಾಡತೊಡಗಿದರು. ಬೆವೆತು ಹೋಗಿದ್ದ ಹುಚ್ರಾಯಪ್ಪನ ಮುಖ ಬರುಬರುತ್ತ ಸಿಟ್ಟಿನಿಂದ ತುಂಬಿತು. ಅವನು ಧಡಕ್ಕನೆದ್ದು ಹೊರಗೆ ಹೋದ.
ಜಗಳಾಡಿ ಸುಸ್ತಾಗಿದ್ದ ಎಲ್ಲಾ ಮುಖಂಡರುಗಳೂ ಹುಚ್ರಾಯನ ಬರವಿಗಾಗಿ ಸ್ವಲ್ಪ ಹೊತ್ತು ಕಾದು ಕೂತರು. ನನಗೆ ಅಪಾಯದ ವಾಸನೆ ಹೊಡೆಯಿತು! ಎಷ್ಟೊತ್ತಾದರೂ ಅವನು ಬರಲಿಲ್ಲ. ಆದರೆ ಗೆಸ್ಟ್ಹೌಸನ ವೇಯಟರ್ ಬಂದು ಇವರ ಮುಂದೆ ಬಿಲ್ಲಿಟ್ಟು ಹಣಕ್ಕಾಗಿ ನಿಂತ. ರಾಜಕೀಯ ಮುಖಂಡನೊಬ್ಬ ವೇಟರನನ್ನು ಕೆಕ್ಕರಿಸಿ ನೋಡಿ, ‘ಅಣಾನಾ ಆ ಉಚ್ರಾಯನತ್ರ ಈಸ್ಗೋ!’ ಅಂದ. ವೇಟರನು ಗಲಿಬಿಲಿಗೊಂಡು, ‘ಅವರು ಹೋಗಿ ಬಾಳೊತ್ತಾತು! ಹೋಗುವಾಗ ಬಿಲ್ಲಿನ ಹಣವನ್ನು ನಿಮ್ಮತ್ರಾನೇ ಈಸ್ಗೋ ಅಂತ ಹೇಳಿದರು!’ ಅಂತ ಅಂದ. ಎಲ್ಲರೂ ಗರಬಡಿದವರಂತೇ ಕೂತರು. ಸ್ವಾಮಿಗಳು ನಿಧಾನಕ್ಕೆ ಎದ್ದು, ‘ಸಿಸ್ಯರೇ! ನೀವೆಲ್ಲಾ ಇಂಗೆ ಜಗಳಾಡಬಾರದಾಗಿತ್ತು. ನನ್ನ ಸಿಸ್ಯ ಆ ಉಚ್ರಾಯನ ಮನಸ್ಸಿಗೆ ನೋವಾಗಿದೆ. ನಾ ಇಂಗೆ ಓಗಿ ಅವನನ್ನು ಸಮಾದಾನ ಮಾಡುತ್ತೇನೆ!’ ಅಂತ ಹೊರಡೋದಕ್ಕೆ ನೋಡಿದರು. ಕಾಮರ್ಿಕ ಮುಖಂಡ ಬಲು ಬುದ್ಧಿವಂತ.
‘ನಿಲ್ರೀ ಸ್ವಾಮೇರಾ! ಓಗೋರಂತೆ, ಮೊದ್ಲು ಬಿಲ್ಲೆಸ್ಟಾಗಿದೆ ನೋಡಾಣ!’ ಅಂತ ಬಿಲ್ಲನ್ನೆತ್ತಿಕೊಂಡು ಓದುತ್ತಾ,
‘ಒಂದು ಕೇಜಿ ಗೋಡಂಬಿ, ದ್ರಾಕ್ಸಿ, ಎಲ್ಡ್ ಕೆಜಿ ಸೇಬು, ಒಂದ್ಲೀಟರ್ ಆಲು….ಸ್ವಾಮೇರಾ…! ಎಲ್ಲಾ ನಿಮ್ದೇ!’ ಅಂತ ಸ್ವಾಮಿಗಳನ್ನು ಹಂಗಿಸುವಂತೆ ನೋಡಿದ. ಸ್ವಾಮಿಗಳೂ, ಧರ್ಮಗುರುಗಳೂ ಹೌಹಾರಿದರು. ಮತ್ತೆ ಓದುತ್ತಾ ಹೋದ. ‘…ಚಿಕನ್ನು, ಮಟನ್ನು, ಇಸ್ಕೀ, ವೈನೂ, ಸೋಡಾ…ಆ ಯಮ್ಮಾ ಹೋದಳು…ಬಲ್ ಚಾಲಾಕಿ..!’ ಅಂತ ಓದುತ್ತಾ ನನ್ನನ್ನು ನೋಡಿದ. ನಾನು ಮನೆಯಿಂದ ತಂದ ನೀರಿನ ಬಾಟಲಿಯನ್ನು ಅವನಿಗೆ ತೋರಿಸಿ ಬಿಲ್ಲಿನಲ್ಲಿ ನಂದೇನೂ ಇಲ್ಲ ಅನ್ನುವಂತೆ ಭುಜ ಹಾರಿಸುತ್ತಾ ನೋಡಿ, ಇನ್ನು ಈ ಬಿಲ್ಲಿನ ವಿವಾದ ನನಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಸಂಜ್ಞೆ ಮಾಡಿ, ಎಲ್ಲರನ್ನೂ ನೋಡುತ್ತಾ ಮೆಲ್ಲಗೇ ಜಾಗಾ ಖಾಲಿ ಮಾಡಿದೆ.
ಒಳಗೆ ಬಿಲ್ಲು ಯಾರು ಕೊಡಬೇಕು ಅನ್ನುವ ವಿಷಯದಲ್ಲಿ ಮತ್ತೊಂದು ಸುತ್ತಿನ ಗಲಾಟೆ ಪ್ರಾರಂಭವಾದ ಸದ್ದು ಕೇಳಿಸಿತು. ನಾನು ಹಿಂತಿರುಗಿ ನೋಡದೇ ನನ್ನ ಸ್ಕೂಟರ್ ನಿಂತ ಸ್ಥಳಕ್ಕೆ ಧಾವಿಸಿ ಬಂದೆ. ಅಲ್ಲಿ ಮುಖಕ್ಕೆ ಹಸಿರು ಟಾವೆಲ್ ಹಾಕಿ ಗಿಡದ ಕೆಳಗೆ ನಿಂತಿದ್ದ ಹುಚ್ಚರಾಯಪ್ಪನನ್ನು ಕಂಡು ದಂಗಾಯಿತು. ಅವನು ನನ್ನ ಸ್ಕೂಟರಿಗೇ ಕಾದಿದ್ದನೆಂದು ಊಹಿಸಿ, ಸ್ಕೂಟರ್ ಸ್ಟಾರ್ಟ ಮಾಡಿ, ‘ಆ ಕಮಲಹಾಸನ್ನನ ಪಿಚ್ಚರ್ ರಿಲೀಜ್ ಆದ ಮ್ಯಾಲ ವಿವಾದ ಆತು! ಇಲ್ಲಿ ನಿನ್ನ ಪಿಚ್ಚರ್ ಶೂಟಿಂಗ್ ಸುರು ಆಗೂ ಮದ್ಲ ವಿವಾದ ಆತಲ್ಲೋ ಹುಚ್ರಾಯಾ!’ ಅಂತ ಅಂದೆ.
ಪೇಲವ ನಗೆ ನಕ್ಕ ಹುಚ್ಚರಾಯಪ್ಪ, ‘ಸಿವಪ್ಪನ್ನ ಮಾಡೋಕ್ ಒಂಟ ನನಗೆ, ಗಣೇಸಪ್ಪನ್ನ ಮಾಡಿ ಮಡಗು ಅಂದಂಗಾಯ್ತಲ್ಲಾ ಸಿವನೇ ಇವ್ರ ಸಲಎ!’ ಅಂತ ಖೇದದಿಂದ ನುಡಿದು, ನನ್ನ ಸ್ಕೂಟರ್ ಹತ್ತಿ ಕೂತ!
 
 

‍ಲೇಖಕರು avadhi

February 19, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

2 ಪ್ರತಿಕ್ರಿಯೆಗಳು

  1. Gopaal Wajapeyi

    ಹಹಹಹಾ… ನಿಮ್ಮ ಹಾಸ್ಯಪ್ರಜ್ಞೆಗೆ ಒಂದು ಸಲಾಮು…

    ಪ್ರತಿಕ್ರಿಯೆ
  2. hipparagi Siddaram

    ಸಕತ್ತಾಗಿದೆ….ಬಾಳ ಚಲೋ ಬರದೀರಿ ಸರ್….ಶುಭಾಶಯಗಳು !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: