ಟಿ ಎಸ್ ಶ್ರವಣ ಕುಮಾರಿ ಹೊಸ ಕಥೆ- ನಾನೆಂಬ ಪರಕೀಯ…

ಟಿ ಎಸ್ ಶ್ರವಣ ಕುಮಾರಿ

ಗಾಢ ನಿದ್ರೆಯಲ್ಲಿದ್ದವನಿಗೆ ಥಟ್ಟನೆಚ್ಚರವಾಯಿತು. ಯಾರೋ ಬಾಗಿಲು ಬಡಿಯುತ್ತಿರುವ ಸದ್ದು ಕೇಳಿಸಿತೇ! ಸ್ಪಷ್ಟವಾಗಲಿಲ್ಲ. ಮೌನವಾಗಿ ಮಲಗಿಯೇ ಮತ್ತೊಮ್ಮೆ ಕೇಳಿಸೀತೇ ಎಂದು ಕಾದೆ. ಯಾರೋ ಬಂದು ನನಗಾಗೇ ಕಾಯುತ್ತಿದ್ದಾರೆನ್ನುವ ಅನ್ನಿಸಿಕೆ ನಿದ್ರೆಮಾಡಗೊಡಲಿಲ್ಲ. ಎದ್ದು ಪಡಸಾಲೆಗೆ ಬಂದೆ. ಬೆಳಗಿನ ಜಾವವೇನೋ… ನಾಲ್ಕು ಗಂಟೆಯಿರಬಹುದೇ… ಬೀದಿ ದೀಪದ ಮಬ್ಬುಬೆಳಕು ಕಿಟಕಿಗಳ ತೆಳುಪರದೆಯೊಳಗಿಂದ ನುಸುಳಿ ಒಂದು ಮಂದ ಪ್ರಕಾಶ ಹರಡಿದೆ. ಆದರೆ ಏನೂ ಸ್ಪಷ್ಟವಾಗಿ ಕಾಣುತ್ತಿಲ್ಲ.

ಬಾಗಿಲ ಅಗುಳಿ ಹಾಕದೆಯೇ ಮಲಗಿದ್ದೆನೆ? ಚಳಿಯ ಗಾಳಿ ಸಣ್ಣಗೆ ಒಳನುಸುಳುತ್ತಿದೆ.. ಬೀದಿದೀಪದ ಬೆಳಕು ಒಂದು ಬೆಳಕಿನ ಸೀಳಿನಂತೆ ಕಾಣುತ್ತಿದೆ. ಇಷ್ಟು ಹೊತ್ತಿಗೆ ಕಣ್ಣುಗಳು ಆ ಕತ್ತಲೆಗೆ ಹೊಂದಿಕೊಂಡವು. ಏನೋ ಸದ್ದಾದಂತಾಗಿ ಹಿಂತಿರುಗಿದೆ. ಎದುರಿನ ಸೋಫಾದ ಕತ್ತಲೆಯ ಮೂಲೆಯಲ್ಲಿ ಯಾರೋ ಕುಳಿತ ಹಾಗನಿಸಿ ‘ಯಾರದು?’ ಧೈರ್ಯವನ್ನು ತಂದುಕೊಂಡು ಕೇಳಿದೆ… ಕುಳಿತದ್ದು ಯಾರೆಂದು ಅಂದಾಜಾಗಲಿಲ್ಲ … ಮತ್ತೊಮ್ಮೆ ‘ಯಾರದು?’ ಎಂದೆ…

‘ನಾನ್ಯಾರೂಂತ ಗೊತ್ತಾಗ್ಲಿಲ್ಲ…?’ ಯಾರ ಧ್ವನಿಯಿದು? ಎಂದೋ… ಎಲ್ಲೋ… ಕೇಳಿದಂತಿದೆ… ಎದ್ದು ಬಳಿಹೋಗಲು ಭಯವಾಗಿ ಸೋಫಾದ ಎದುರಿನ ಇನ್ನೊಂದು ಖುರ್ಚಿಯಲ್ಲಿ ಕುಳಿತು ಅವನ ಕಡೆಯೇ ನೋಡುತ್ತಾ ‘ಯಾರ‍್ನೀನು, ಒಳಗ್ಹೇಗ್ಬಂದೆ? ಯಾಕ್ಬಂದೆ’ ಎಂದೆ. ‘ನಾನ್ಯಾರೂಂತ ನಿಂಗಿಂತಾ ಚೆನ್ನಾಗಿ ಇನ್ಯಾರಿಗ್ಗೊತ್ತು. ಅವತ್ತು ಇಲ್ಲೇ ಕೂತು ಅಷ್ಟು ಹೊತ್ತು ನಿಂಜೊತೆ ಮಾತಾಡಿದೀನಿ. ಯಾಕ್ಬಂದೆ ಅಂತ ಕೇಳ್ತಿದ್ಯಲ್ಲ, ನಿಂಗೊತ್ತಿಲ್ವಾ? ಮಾತಾಡ್ಬೇಕಿತ್ತು ಅದಕ್ಕೇ ಬಂದೆ’ ಅಂದ ತಣ್ಣಗೆ. ‘ನಂಗೊತ್ತಾಗ್ತಿಲ್ಲ; ನೀನೇನು ಕೇಳ್ಬೇಕು, ಇಂಥಾ ಕತ್ಲಲ್ಲಿ ಹೀಗೆ ಕದ್ಬಂದು ಕೂತಿದ್ಯಾಕೆ?’ ಅಸಹನೆಯಿಂದ ಕೇಳಿದೆ. ಅವನ ಮುಖದ ಮೇಲೆ ಬೆಳಕಿರಲಿಲ್ಲ. ಕಣ್ಣು, ಮೂಗು, ಬಾಯಿ, ಮುಖಭಾವ ಏನೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಅವನು ಅಲುಗುತ್ತಿಲ್ಲ. ‘ಯಾಕೆ ಗುರ‍್ತಾಗ್ಲಿಲ್ವ?’ ಮತ್ತೊಮ್ಮೆ ಧ್ವನಿ ಕೇಳಿತು… ಓ…… ಇದು ಅವನೇ ಅಂದು ನನ್ನ ಬೆನ್ನುಹತ್ತಿದವನು…

ನಿಧಾನವಾಗಿ ಅವನ ಧ್ವನಿ ಹೊರಬಂತು. ‘ಅಷ್ಟೊಂದು ಅಸಹನೆ ಯಾಕೆ? ಅಷ್ಟೆಲ್ಲಾ ಹೇಳಿದ್ಮೇಲೂ ನೀನ್ಯಾಕೆ ನನ್ನ ಬಗ್ಗೆ ಅರ್ಧಸತ್ಯವನ್ನು ಮಾತ್ರಾ ಬರೆದೆ? ಎಷ್ಟೋ ವರ್ಷಗಳಿಂದ ಒಳಗೇ ಹುದುಗಿಟ್ಟುಕೊಂಡಿದ್ದ ನೋವು, ಹತಾಶೆ, ಭರ್ತ್ಯನೆ, ಅವಮಾನ, ಒಳತೋಟಿಗಳನ್ನೆಲ್ಲಾ ಅವತ್ತು ನೀನು ಮನಸ್ಸಿಟ್ಟು ಕೇಳಿದೇಂತ ಹೇಳ್ದೆ. ಎಷ್ಟೋ ವರ್ಷಗಳಿಂದ ಯಾರೊಂದಿಗೂ ಆಡ್ದೆ ಉಳಿದಿದ್ದ ಮಾತುಗಳನ್ನೆಲ್ಲಾ ಹೇಳ್ಕೊಬೇಕು ಅನ್ನಿಸ್ತಿತ್ತು. ಮುತ್ತಿಕೊಂಡು ಕೊಲ್ತಿರೋ ನೆನಪುಗಳಿಂದ ಬಿಡುಗಡೆ ಬೇಕಿತ್ತು. ಅವತ್ತು ನೀನೊಬ್ನೇ ಇದ್ದಾಗ ʻಹೇಳ್ಬಿಡು, ಎಲ್ಲಾ ಹೇಳ್ಬಿಡು, ಮನಸ್ಸಲ್ಲಿ ಇರೋದನ್ನೆಲ್ಲಾ ಹರಿಬಿಟ್ಟು ಹಗುರಾಗು. ಎಷ್ಟು ದಿನಾಂತ ಕೊರಗ್ತಾ ಕೂತಿರ‍್ತಿ. ನಿಂಗೂ ಬಿಡುಗಡೆ ಬೇಕಲ್ವಾʼ ಅಂತ ಕೇಳ್ದಾಗ ಎಲ್ಲಾ ನೆನಪು ಮಾಡಿಕೊಂಡು ಒಂದೊಂದನ್ನೇ ಹೇಳ್ದೆ. ನೀನು ಅದನ್ನ ತಿರುಚಿ ಎಲ್ಲಾನೂ ನಿನ್ನ ಪರವಾಗೇ ಇರೋಹಾಗೆ ಬರ‍್ದಿದೀಯಲ್ಲಾ. ಯಾಕ್ಹೀಗ್‌ ಮಾಡ್ದೆ? ಧೈರ್ಯವಾಗಿ ನಿಜ ಬರೀಬೇಕಿತ್ತು. ಯಾಕೆ, ನಿನ್ನಿಂದ ಸಾಧ್ಯ ಆಗ್ಲಿಲ್ವಾ? ಮತ್ಯಾಕೆ ಬರೀತೀನೀಂತ ಜಂಭ ಕೊಚ್ಕೊಂಡೆ?’

ಓ… ಈ ಇವನು ಎಷ್ಟೋ ದಿನದಿಂದ ಒದ್ದಾಡ್ತಿದ್ದ… ಚಡಪಡಿಸ್ತಿದ್ದ. ‘ನನ್ನಲ್ಲಿ ಏನೇನೋ ಕನಸುಗಳಿತ್ತು. ಯಾವ್ಯಾವ್ದೋ ಆದರ್ಶಗಳಿದ್ವು… ಯಾವ್ಯಾವ್ದೋ ರೀತೀಲಿ ಬದುಕ್ಬೇಕೂಂತಿದ್ದೆ… ಏನೇನೋ ಮಾಡ್ಬೇಕೂಂತಿದ್ದೆ… ಹೇಗೆಲ್ಲಾ ಬದುಕ್ದೆ ಕೂಡಾ… ಆದ್ರೂ, ಅಂದುಕೊಂಡ ಹಾಗೆ ಬದುಕಿದ್ನಾಂತ ನಂಗೆ ಗೊಂದಲವಾಗ್ತಿದೆ. ನೀನೇನು ನೋಡ್ತಿದೀಯೋ ಅದು ನಾನಲ್ಲ. ನಾನೇನೂಂತ ನಿಂಗ್ಹೇಳ್ತೀನಿ. ಹೇಳ್ಳಾ. ನೀನು ಕತೆಗಾರ ಅಲ್ವಾ, ನನ್ಬಗ್ಗೆ ಕತೆ ಬರೀತೀಯಾ? ಪ್ರಾಮಾಣಿಕವಾಗಿ ಬರ‍್ಯಕ್ಕಾಗತ್ತಾ ನಿಂಕೈಲಿ?’ ಎಂದು‌ ಸವಾಲೆಸೆದ.

ನಂಗೆ…, ಎಷ್ಟೆಲ್ಲಾ ಬರ‍್ದು ಬರ‍್ದು ಪ್ರಶಸ್ತಿಗಳನ್ನು ಬಾಚ್ಕೊಂಡು ಓದುಗರನ್ನ ನನ್ನ ಅಕ್ಷರದ ಮೇಲೆ ಕುಣಿಸ್ತಿರೋವ್ನಿಗೇ ಸವಾಲಾ? ಇವ್ನು ಯಾವ ಗಿಡದ ತೊಪ್ಪಲು! ಯಕಃಶ್ಚಿತ್ ಇವ್ನ ಕತೆ ಬರೀಲಾರ‍್ನೆ? ಏನಂದ್ಕೊಂಡಿದಾನೆ. ಅದನ್ನೇ ಕೇಳಿದ್ದೆ. ‘ನಂಗೇ ಸವಾಲೆಸೀತೀಯಾ ಪ್ರಾಮಾಣಿಕವಾಗಿ ಬರೀತೀಯಾಂತ? ನೀನು ಏನ್ಹೇಳ್ತೀಯೋ ಅದನ್ನೆಲ್ಲಾ ವಸ್ತುನಿಷ್ಠವಾಗಿ ಹಾಗಾಗೇ ಅಕ್ಷರಗಳಲ್ಲಿ ಉರುಳಿಬಿಡ್ತೀನಿ. ಆದ್ರೆ ಒಂದು ಪ್ರಶ್ನೆ ಇದೆ. ಇದನ್ಯಾಕೆ ಬರೀಬೇಕು ಅಂತ ಮೊದ್ಲು ಹೇಳು’ ಎಂದೆ. ‘ಯಾಕೇಂದ್ರೆ ಲೋಕ ತಿಳ್ಕೊಂಡಿರೋ ʻನಾನುʼ ನಾನಲ್ಲ. ನಿಜ್ವಾಗಿ ನಾನ್ಯಾರೂಂತ ಹೇಳ್ಕೋಬೇಕು, ಜಗತ್ತಿಗೆ ಸತ್ಯ ತಿಳೀಬೇಕು ಅನ್ನಿಸ್ತಿದೆ. ಪ್ರಾಮಾಣಿಕವಾಗಿ ಒಪ್ಕೋಬೇಕು ಅನ್ಸಿದೆ. ನಿಜ ಹೇಳದ ಹೊರತು ನಂಗೆ ಬಿಡುಗಡೆಯಿಲ್ಲ. ಅದಕ್ಕೆ ಕೇಳ್ತಿದೀನಿ. ಬರೀತೀಯಾ? ಬರ‍್ಯಕ್ಕಾಗತ್ತಾ ನಿಂಕೈಲಿ?’ ಮತ್ತದೇ ಮಾತು…

ಈಗ ನಿಷ್ಠುರವಾಗಿ ‘ನಂಗೇ ಸವಾಲೆಸೀಬೇಡ. ಅದೇನೇ ಇದ್ರೂ ಪ್ರಾಮಾಣಿಕವಾಗೇ ಬರೀತೀನಿ. ಎಲ್ಲಾನೂ ಜ್ಞಾಪಿಸ್ಕೊಂಡು ಹೇಳ್ತಾ ಹೋಗು. ಬರ‍್ದು ಮುಗ್ಸಿದ್ಮೇಲೆ ನಿನ್ನ ಆಕ್ಷೇಪಣೆ ಏನಿದ್ರೂ ಹೇಳು’ ಸಿಗರೇಟನ್ನು ಹಚ್ಚಿಕೊಂಡು ಅವನನ್ನೇ ನೋಡುತ್ತಾ ಕೇಳಿಸಿಕೊಳ್ಳಲು ತಯಾರಾಗಿ ಕುಳಿತೆ. ‘ಸರಿ ಹಾಗಾದ್ರೆ’ ಅಂದವನು ನನ್ನ ಕಣ್ಣೊಳಗೇ ಇಳಿಯುತ್ತಿರುವನಂತೆ ನೋಡುತ್ತಾ ತನ್ನ ಕತೆಯನ್ನು ಹೇಳತೊಡಗಿದ. ಯಾವುದೋ ಒಂದು ಘಟ್ಟಕ್ಕೆ ಬಂದಾಗ ನಿಲ್ಲಿಸಿ, ‘ಇಷ್ಟು ಬರಿ ನೋಡೋಣ, ಆಮೇಲೆ ಮತ್ತೆ ಮುಂದುವರಿಸ್ತೀನಿ’ ಅಂದ. ಕೋಪವೇ ಬಂತು. ಅದೆಷ್ಟು ಅಪನಂಬಿಕೆ!

‘ನನ್ನೇನೂಂತ ಅಂದ್ಕೊಂಡಿದೀಯಾ. ಕಂತುಕಂತಲ್ಲಿ ನಿನ್ಕತೆ ಕೇಳಕ್ಕೆ. ನೀನು ಹೇಳಿರೋ ಇಷ್ಟ್ರಲ್ಲಿ ಬರ‍್ಯೋಂತಾದ್ದು ಏನೂ ಇಲ್ಲ. ಎಲ್ರ ಜೀವ್ನಾನೂ ಹೆಚ್ಚುಕಮ್ಮಿ ಹೀಗೇ ಇರತ್ತೆ. ಪೂರಾ ಹೇಳಿ ಮುಗ್ಸಿ ಹೊರ‍್ಡು. ಅದಕ್ಕೆ ತಕ್ಕ ಹಂದರ ಕಟ್ಕೋತೀನಿ. ಪೂರಾ ಬರೆದ್ಮೇಲೆ ಹೇಳೋವಂತೆ ಹೇಗಿದೇಂತ’ ಕಿರಿಚಿದಂತೇ ಹೇಳಿದೆ. ‘ಅಷ್ಟೊಂದು ಕೋಪ ಯಾಕೆ? ಒಂದೊಂದೇ ಘಟ್ಟದಲ್ಲಿ ನಿಲ್ಲಿಸಿ ಪುನರಾವಲೋಕನ ಮಾಡ್ಕೊಂಡು ಮುಂದ್ಹೋಗೋಣ, ಎಲ್ಲಾ ಒಟ್ಗೆ ಹೇಳಿ ಮರೆತೋದ್ರೆ ಅಂತ ಹಾಗಂದೆ. ನಂಗೇನು, ಪೂರಾ ಕತೇನೇ ಕೇಳಿಸ್ಕೋ’ ಅಂದವನೇ ಮತ್ತೆ ನನ್ನ ಕಿವಿಯಲ್ಲಿಳಿಯುತ್ತಾ ಹೋದ. ಕಣ್ಣುಮುಚ್ಚಿ ಅವನು ಬಿಡಿಸುತ್ತಿದ್ದ ಚಿತ್ರವನ್ನು ಮನದೊಳಗೆ ತುಂಬಿಕೊಳ್ಳುತ್ತಾ ಹೋದೆ… ಹೀಗೇ ಮನದೊಳಗೆ ಆ ಚಿತ್ರ ಸಾಗುತ್ತಿರುವಾಗಲೇ… ಅದ್ಯಾವಾಗ ನಿಲ್ಲಿಸಿದನೋ… ಎದ್ದು ಹೋದನೋ ತಿಳಿಯಲೇ ಇಲ್ಲ…

ಅಂದಿನಿಂದ ದಿನವೂ ಅವನದೊಂದೇ ವರಾತ ‘ಕತೆ ಶುರು ಮಾಡಿದ್ಯಾ…?’ ‘ಇನ್ನೂ ಮಾಡಿಲ್ಲ, ಸಧ್ಯದಲ್ಲೇ ಮಾಡ್ತೀನಿ’ ಅಂದೆ ಒಂದೆರಡು ದಿನ. ಎಷ್ಟೋ ದಿನಗಳೇನು, ತಿಂಗಳುಗಳೇ ಕಳೆದುಹೋದವು. ಇತ್ತೀಚೆಗೆ ಅವನೂ ಕಾಡುವುದನ್ನು ಬಿಟ್ಟಿದ್ದ. ನಾನೂ ಸುಮ್ಮನಾಗಿಬಿಟ್ಟೆ. ನಿಶ್ಚಿಂತೆಯಿಂದ ಅವತ್ತು ಬೇರೇನೋ ಬರೆಯುತ್ತಾ ಕುಳಿತಿದ್ದೆ. ಇದ್ದಕ್ಕಿದ್ದಂತೆ ಬಂದು ‘ಇನ್ನೇನೇನೋ ಬರಿಯಕ್ಕೆ ಶುರು ಹಚ್ಕೊಂಡಿದಿ. ನನ್ಕತೆ ಶುರು ಮಾಡ್ಲಿಲ್ಲ ಅಲ್ವಾ. ನಂಗೊತ್ತು ಅದು ನಿನ್ನ ಕೈಯಲ್ಲಾಗಲ್ಲಾಂತ. ಸುಮ್ನೆ ಅವತ್ತು ಬಡಾಯಿ ಕೊಚ್ಕೊಂಡೆ’ ಕೊಂಕುನಗೆಯನ್ನು ಬೀರುತ್ತಾ ಅಂದ. ಕೋಪ ಬಂದು ‘ಅದೇನು ಅಷ್ಟು ಹಂಗ್ಸಿ ಮಾತಾಡೋದು. ಇಲ್ಲಾ, ತಿಳ್ಕೋ. ಈಗ್ಲೇ ಶುರು ಮಾಡ್ತಿದೀನಿ. ನಿನ್ಕತೆ ಬರೆದ್ಮೇಲೇ ಬೇರೆ ಬರ‍್ಯೋದು, ಈಗ ಸಮಾಧಾನಾನ? ದಯವಿಟ್ಟು ಇನ್ನು ಹೊರಡು’ ಅಂದೆ.

ನನ್ನನ್ನೇ ನೋಡುತ್ತಾ ತುಟಿಯಂಚಲ್ಲೇ ಅಪನಂಬಿಕೆಯನ್ನು ಸೂಸುತ್ತಾ ಅಲ್ಲಿಂದೆದ್ದು ಹೋದ. ಶುರು ಮಾಡಿದ್ದನ್ನು ಪಕ್ಕಕ್ಕಿರಿಸಿ ಹಠ ಹಿಡಿದು ಬೇರೆ ಹಾಳೆಯನ್ನು ತೆಗೆದುಕೊಂಡು ಬರೆಯತೊಡಗಿದೆ… ಹೇಳಿದಂತೆಯೇ ಬರೆದು ಮುಗಿಸುವ ತನಕ ಬೇರೆ ಯಾವ ಬರೆಹವನ್ನು ಕೈಗೆತ್ತಿಕೊಳ್ಳಲಿಲ್ಲ… ಮುಗಿಸಿದ ಮೇಲೆ ಯಾಕೋ ಮನಸ್ಸು ಯೋಚನೆ ಮಾಡುವುದನ್ನೇ ಒಂದಷ್ಟು ದಿನ ನಿಲ್ಲಿಸಿತು. ʻಬರೆದಾಯ್ತುʼ ಎನ್ನುವ ನಿರಾಳ ಭಾವ… ಆದರೆ ಬರೆದದ್ದನ್ನು ಅವನು ಒಪ್ಪಿಕೊಳ್ಳಬೇಕಲ್ಲವೇ? ಬರೆಯುವಾಗ ಅಷ್ಟೊಂದು ಕಾಡುತ್ತಿದ್ದವನು ಈಗ ಯಾಕೋ ಬಂದು ಏನನ್ನೂ ಹೇಳುತ್ತಿಲ್ಲವಲ್ಲ ಅನ್ನಿಸಿ ಪೆಚ್ಚಾಯಿತು. ಬೇಕಾದರೆ ಅವನೇ ಬಂದು ಹೇಳಲಿ, ಬರೆದಾಯ್ತು, ನಾನಿನ್ನು ಚಿಂತೆ ಮಾಡಬಾರದು ಎಂದುಕೊಂಡು ಸುಮ್ಮನಾದರೆ ಇವತ್ತು…. ಈ ಹೊತ್ತಿನಲ್ಲಿ, ಹೀಗೆ ಧುತ್ತೆಂದು ಬಂದು ಕುಳಿತಿದ್ದಾನಲ್ಲ…

‘ಸರಿ, ಈಗ ನಿನ್ನ ಆಕ್ಷೇಪಣೆಯೇನು ಒಂದೊಂದಾಗೇ ಹೇಳು’ ಸಿಗರೇಟು ಹಚ್ಚಿಕೊಳ್ಳುತ್ತಾ ಕೇಳಿದೆ. ‘ನಾನು ಹೇಳಿದ್ದ ಬಾಲ್ಯದ ವಿಷಯಗಳನ್ನೆಲ್ಲಾ ಹೆಚ್ಚುಕಡಿಮೆ ಸರಿಯಾಗೇ ಬರ‍್ದಿದೀಯಾ, ಯಾಕೇಂದ್ರೆ ಆವಾಗ ಇನ್ನೂ ಸುಳ್ಳು, ಮೋಸ, ವಂಚನೆ, ಹೊಟ್ಟೆಕಿಚ್ಚು ಇವೆಲ್ಲಾ ಗೊತ್ತಿರ‍್ಲಿಲ್ವಲ್ಲ ಅದಕ್ಕೆ. ಎಡವಟ್ಟಾಗಿರೋದೆ ಕಾಲೇಜು ಮೆಟ್ಟಿಲು ಹತ್ತಿದ ಮೇಲಿನ ಕತೆ. ಪಿ.ಯು.ಸಿ.ನಲ್ಲಿರುವಾಗ ನಂಗಿಂತಾ ಚೆನ್ನಾಗಿ ಓದ್ತಾ ಇದ್ದ ಆದರ್ಶನ್ನ ಸೋಲಿಸಕ್ಕಾಗ್ದೆ, ಎಕ್ಸಾಂ ಹತ್ರ ಬರ‍್ವಾಗ, ಅವನ ಹೆಸರಲ್ಲಿ ಧಿಮಾಕಿನ ಹುಡುಗಿ ಅಂತ ಹೆಸರಾಗಿದ್ದ ಲಾವಣ್ಯಂಗೆ ಲವ್‌ ಲೆಟರ್‌ ಟೈಪ್‌ ಮಾಡಿ ಅವನ ಸಹಿ ಫೋರ್ಜರಿ ಮಾಡಿ ಕಳಿಸಿದ್ದು; ಅವ್ಳು ಪ್ರಿನ್ಸಿಪಾಲ್‌ ಹತ್ರ ದೂರು ಕೊಟ್ಟು ಅವ್ನನ್ನ, ಅವ್ರಪ್ಪನ್ನ ಕರ‍್ಸಿ ಛೀಮಾರಿ ಹಾಕಿದ್ದು; ಅವಮಾನದಿಂದ ಆಮೇಲೆ ಅವ್ನು ಕಾಲೇಜಿಗೇ ಬರ‍್ದೇ ಇದ್ದಿದ್ದು; ಕಡೆಯ ದಿನಗಳಲ್ಲಿ ಸಿಗೋ ಇಂಪಾರ್ಟೆಂಟ್‌ ಟಿಪ್ಸೆಲ್ಲಾ ಸಿಗ್ದೆ, ಅವ್ನಿಗೆ ಕಮ್ಮಿ ಮಾರ್ಕ್ಸ್‌ ಬಂದಿದ್ದು; ಹಾಗಾಗಿ ನಾನೇ ಕಾಲೇಜಿನ ಮೊದಲ ಸ್ಥಾನದಲ್ಲಿ ನಿಂತಿದ್ದು… ಎಲ್ಲಾನೂ ನಿಂಗೆ ಹೇಳಿದ್ದೆ ಅಲ್ವಾ.

ಈಗ್ಲೂ ಆ ಪಾಪಪ್ರಜ್ಞೆ ನನ್ನ ಇರೀತಾ ಇದೆ. ಅದ್ರಿಂದ ನಾನು ಹೊರಗ್ಬರ‍್ಬೇಕು ಅಂತಾನೇ ನಿಂಗದನ್ನ ಬರ‍್ಯಕ್ಕೆ ಹೇಳಿದ್ದು. ಆದ್ರೆ ನೀನು ಅದನ್ನ ಬರೀಲೇ ಇಲ್ವಲ್ಲಾ?’ ಅವನು ದೂರಿದ. ಕ್ಷಣಕಾಲ ಯೋಚಿಸಿ ಹೇಳಿದೆ ‘ನೋಡು, ಕಾರ್ಯಕಾರಣಗಳೇನು ಅನ್ನೋದು ಮುಖ್ಯ ಆಗಲ್ಲ. ಆ ವರ್ಷ ನೀನು ಕಾಲೇಜಿಗೆ ಮೊದಲಿಗನಾಗಿದ್ದೆ ಅನ್ನೋದು ದಾಖಲೆಯಲ್ಲಿರೋ ಸತ್ಯ. ಈಗ ಆ ವಿಷ್ಯ ಹೇಳ್ದೇಂತ ಇಟ್ಕೋ, ಆ ಆದರ್ಶ ಈಗೆಲ್ಲಿದಾನೋ ಅವ್ನ ಮಾರ್ಕ್ಸ್‌ ಕಾರ್ಡ್‌ ಬದ್ಲಾಗತ್ತಾ? ಜೀವ್ನ ಏನಾದ್ರೂ ಬದಲಾಗತ್ತಾ? ಅಥ್ವಾ ಕಾಲೇಜಿನ ದಾಖಲೆಗಳಲ್ಲಿ ಏನಾದ್ರೂ ಬದಲಾವಣೆಯಾಗತ್ತಾ? ಏನೂ ಆಗ್ದಿದ್ಮೇಲೆ ನಿಜ ತಿಳಿಯೋದ್ರಿಂದ ಅವ್ನ ಮನಸ್ನಲ್ಲಿ ಕಹಿ ಹುಟ್ಟಬಹುದಷ್ಟೇ. ಅವ್ನಿಗೆ ಒಳ್ಳೇದಾಗೋ ಹಾಗಿದ್ರೆ ಅದನ್ನ ಬರೀಬಹುದಿತ್ತು. ಅಂಥವನ್ನ ಬಿಟ್ಬಿಡೋದೇ ಮೇಲಲ್ವಾ’ ಸಿಗರೇಟನ್ನು ಆಷ್‌ಟ್ರೇನಲ್ಲಿ ತಳ್ಳುತ್ತಾ ಹೇಳಿದೆ. ಅವನು ಒಪ್ಪದಂತೆ ತಲೆಯಾಡಿಸಿ ಒಂದೆರಡು ನಿಮಿಷ ಸುಮ್ಮನೇ ಕುಳಿತ…

‘ಮತ್ತೆ ಇದನ್ನೂ ನೀನು ಬರೀಲಿಲ್ಲ. ಕಾಲೇಜು ದಿನದಲ್ಲಿ ಮಾನಸಿಯನ್ನು ಇಷ್ಟಪಟ್ಟಿದ್ದು, ನಂಬಿಸಿ ಅವಳನ್ನು ಊಟಿಗೆ ಕರ‍್ಕೊಂಡು ಹೋಗಿದ್ದು, ಅವಳ ಜೊತೆ ಸಾಕಷ್ಟು ತಿರುಗಿ, ಆಕರ್ಷಣೆ ಕಡಿಮೆಯಾದ ಮೇಲೆ, ಅಮ್ಮನಿಗೆ ಇಲ್ಲದ ಕ್ಯಾನ್ಸರ್‌ ಖಾಯಿಲೆ ತರಿಸಿ, ʻಅವರ ಕಡೆಯಾಸೆಯನ್ನು ಮೀರಲಾರೆʼ ಎಂದು ಭಾವುಕನಾಗಿ, ʻಇಷ್ಟವಿಲ್ಲದಿದ್ರೂ ಅವರಣ್ಣನ ಮಗಳನ್ನು ಮದುವೆಯಾಗ್ಲೇ ಬೇಕಾಗಿದೆʼ ಎಂದು ಕಣ್ಣೀರು ಹರಿಸಿ ಜೊತೆಗೆ ʻನನ್ನ ಮರೆತ್ಬಿಟ್ಟು ಬೇರೆಯವ್ರನ್ನ ಮದ್ವೆಯಾಗಿ ಸುಖವಾಗಿರುʼ ಅಂತ ಪೋಸು ಕೊಟ್ಟಿದ್ದು… ಕಡೆಗೆ ಹೇಳಿದ ಹಾಗೇನೇ ಮಾವನ ಮಗಳನ್ನ ಮದ್ವೆ ಮಾಡ್ಕೊಂಡು, ಜೊತೆಯಲ್ಲೆ ಅವನ ಎಲ್ಲಾ ಆಸ್ತೀಗೂ ವಾರಸುದಾರನಾಗಿದ್ದು… ಎಲ್ಲಾನೂ… ಎಲ್ಲಾನೂ ಹೇಳಿದ್ದೆ. ನೀನ್ಯಾಕೆ ಅದನ್ನ ಬರೀಲಿಲ್ಲ?’ ನೇರವಾಗಿ ಎದೆಗೇ ಬಾಣ ಬಿಟ್ಟ.

‘ಈಗದು ಅಷ್ಟು ಮುಖ್ಯಾನಾ ಹೇಳು’ ಮತ್ತೊಂದು ಸಿಗರೇಟನ್ನು ಹಚ್ಚಿಕೊಳ್ಳುತ್ತಾ ಕೇಳಿದೆ ‘ಹಳೆಯದನ್ನೆಲ್ಲಾ ಮರ‍್ತು ಅವ್ಳೂ ಯಾರನ್ನೋ ಮದುವೆಯಾಗಿ ಸುಖವಾಗಿ ಇರಬಹುದು. ಈಗ ನಾನು ಅದನ್ನ ಬರೆದರೆ ಅವ್ಳ ಜೀವನದಲ್ಲಿ ಇದು ಬೇಡದ ಸಂಗತಿ ಅಲ್ವಾ. ಅವಳ ಗಂಡನಿಗೆ ಅವಳ ಚರಿತ್ರೆ ತಿಳಿದು ಅವರ ಮಧ್ಯೆ ವಿರಸ ಹುಟ್ಟಲ್ವಾ? ಅವಳ ಬದುಕು ಹಾಳಾಗಲ್ವಾ? ಅದೂ ಅಲ್ದೆ, ನಿನ್ನ ಕಣ್ಣೀರನ್ನು ನಂಬಿದ್ದಳು ಅಂದ್ಕೊಂಡಿದೀನಿ; ಅಸಲಿಯತ್ತು ಗೊತ್ತಾದ್ರೆ ಅವಳ ದೃಷ್ಟೀನಲ್ಲಿ ನೀನು ಪಾತಾಳಕ್ಕಿಳಿದು ಹೋಗ್ತೀಯ. ಬೇಕಾ ನಿಂಗದು. ಇನ್ನೊಬ್ರ ಜೀವ್ನ ಹಾಳ್ಮಾಡೋ ಯೋಚ್ನೆ ಯಾಕೆ?’

‘ನಾನು ಕೇಳಿದ ಪ್ರಶ್ನೇಗೆಲ್ಲಾ ವಿತಂಡವಾದಾನೇ ಮುಂದಿಡ್ತಿದೀಯ’ ಅವನಿಗೆ ಕೋಪ ಬಂದಿತ್ತು ‘ಕಡೆಗೆ ಕಟ್ಕೊಂಡ ಹೆಂಡ್ತೀಗಾದ್ರೂ ನಿಯತ್ತಾಗಿದ್ನ. ನನ್ನ ತೆಕ್ಕೆಗೆ ಬಂದವ್ರನ್ನೆಲ್ಲಾ ಎಳ್ಕೊಂಡಿದ್ದೆ… ಎಂಥೆಂತಾವ್ರಿಗೆ ಬಲೆ ಬೀಸಿದ್ದೆ… ನನ್ಹೆಂಡ್ತಿ ಪಾಪ, ನಿಜಕ್ಕೂ ಅಮಾಯಕಳು. ನನ್ನನ್ನ ತುಂಬಾ ಒಳ್ಳೆಯವನು ಅಂದ್ಕೊಂಡಿದ್ಲು. ಅವ್ಳ ಕಣ್ಣಿಗೇನೂ ಕಾಣದ ಹಾಗೆ, ಕಿವಿಗೇನೂ ಬೀಳದ ಹಾಗೆ ಎಷ್ಟೆಲ್ಲಾ ಆಟ ಆಡಿದ್ದೆ. ಅವ್ಳಿಗೆ ತುಂಬಾ ಮೋಸ ಮಾಡಿದೀನಿ ಅನ್ನೋ ಪಾಪಪ್ರಜ್ಞೆ ದಿನದಿನವೂ ನನ್ನನ್ನ ತಿಂತಿದೆ. ಎಲ್ಲರ ವಿಚಾರಾನೂ ನಿಂಗೆ ಹೇಳಿದ್ದೆ. ನೀನು ಬರೀಲೇ ಬೇಕಿತ್ತು ಅವ್ರೆಲ್ರ ಬಗ್ಗೆ. ಯಾಕೆ ಬರೀಲಿಲ್ಲ ನೀನು?’ ಅವನ ಧ್ವನಿ ಕೋಪದಿಂದ ಉರಿಯುತ್ತಿತ್ತು… ಮುಗಿಯುತ್ತಾ ಬಂದಿದ್ದ ಸಿಗರೇಟನ್ನು ಆಷ್‌ಟ್ರೇಯೊಳಗೆ ಹೊಸಕಿ ‘ನೀನು ನಿನ್ನ ಹೆಂಡ್ತಿಗೆ ಏನೂ ತಿಳಿದಿಲ್ಲ‌ ಅಂತ ನಿಜ್ವಾಗೂ ಅಂದ್ಕೊಂಡಿದೀಯಾ, ಅದು ನಿಜಾನಾ. ಯಾವ ಹೆಂಗಸಿಗಾದ್ರೂ ಗಂಡನ ಹೊರಚಾಳಿಯ ವಾಸನೆ ಬಡೀದೇ ಇರೋಕೆ ಸಾಧ್ಯಾನೇ ಇಲ್ಲ. ಹೂಸಿನ ನಾತ, ಹಾದರದ ಸುದ್ದಿ ಎರಡನ್ನೂ ಮುಚ್ಚಿಡೋದಕ್ಕೆ ಸಾಧ್ಯನಾ? ಅವ್ಳಿಗೆ ಖಂಡಿತವಾಗ್ಲೂ ಗೊತ್ತಿರತ್ತೆ. ಮರ‍್ಯಾದೆಗೆ ಹೆದ್ರಿ, ಸಂಸಾರದ ಗುಟ್ಟು ಬಿಟ್ಕೊಡಕ್ಕೆ ಸಾಧ್ಯ ಇಲ್ದೆ, ಮಕ್ಕಳ ಸೌಖ್ಯಕ್ಕಾಗಿ ಎಲ್ಲಾನೂ ನುಂಗಿಕೊಂಡು ಅವ್ಳು ಸುಮ್ನಿದಾಳೆ ಅಂದ್ಕೊಂಡಿದೀನಿ. ಈಗ ಅದೆಲ್ಲಾ ಮುಗಿದು ಪಾತಾಳದಲ್ಲಿ ಹುದುಗಿ ಹೋಗಿರೋ ಕತೆ. ಮೇಲೆ ಎಳೆದು ತಂದು ಯಾವ ಪುರುಷಾರ್ಥಾನ ಸಾಧಿಸಬೇಕಾಗಿದೆ ಹೇಳು. ಸಮಾಜದಲ್ಲಿ ಒಂದು ಹೆಸರು ಬಂದಮೇಲೆ, ಇಂತಹ ಸಂಗತಿಗಳೆಲ್ಲಾ ಪ್ರಾಮುಖ್ಯ ಅನ್ನಿಸಿಕೊಳ್ಳಲ್ಲ. ನಿನಗಿರೋ ಅಂತಸ್ತಲ್ಲಿ, ಪ್ರಸಿದ್ದಿಯಲ್ಲಿ ಇದೆಲ್ಲಾ ಸಹಜವಾಗಿರೋದೇ ಅಂದ್ಕೊಂಡು ಸುಮ್ನಾಗ್ತಾರೆ. ಅಂಥಾದ್ರಲ್ಲಿ ನೀನಾಗ್ನೀನೇ ನಾನು ಅವ್ಳ ಜತೆ ಮಲ್ಗಿದ್ದೆ, ಇವ್ಳನ್ನ ಅನುಭವಿಸಿದ್ದೆ, ಇವ್ಳನ್ನ ಮುದ್ದಾಡಿದ್ದೆ ಅಂತ ತೊಡೇಲಿರೋ ಹುಣ್ಣನ್ನ ಜಗತ್ತಿಗೆ ತೋರ‍್ಸೋದು ಸಭ್ಯತೇನಾ. ಇಷ್ಟಾಗಿ ಆ ಹೆಂಗಸ್ರೆಲ್ಲಾ ಯಾತಕ್ಕೆ ನಿನ್ಹಿಂದೆ ಬಿದ್ದಿದ್ರು ಹೇಳು? ನಿಂಗಿರೋ ಹೆಸರಿಗೆ, ಸ್ಥಾನಕ್ಕೆ ಮತ್ತೊಂದಕ್ಕೆ. ಅವ್ರೂ ಎಲ್ಲಾ ಸಮಾಜದಲ್ಲಿ ಗುರುತಿಸಿಕೊಂಡಿರೋರೆ. ಜಾರಿಬಿದ್ದದ್ದು ನಿಜಾನೇ ಆಗಿದ್ರೂ ಈಗ ಅದನ್ನ ಪ್ರಪಂಚಕ್ಕೆಲ್ಲಾ ಡಂಗುರ ಹೊಡ್ದು ಹೇಳಿ ಅವ್ರ ಮರ‍್ಯಾದೆ ತೆಗೆಯಕ್ಕೆ, ಅವಮಾನ ಮಾಡಕ್ಕೆ ನಿಂಗ್ಯಾವ ಹಕ್ಕಿದೆ? ಹಳೇ ಹುಣ್ಣನ್ನ ಕೆರೆಯಕ್ಕೆ ಹೋಗ್ಬಾರ‍್ದು. ಇಲ್ಲದ ರಾಡಿ ಮಾಡ್ಕೋಬಾರ‍್ದು’ ಸಂಯಮದಿಂದಲೇ ಹೇಳಿದೆ. ಆದರೆ ಅವನಿಗೆ ಸಮಾಧಾನವಾಗಲಿಲ್ಲ. ಮಬ್ಬುಬೆಳಕಿನಲ್ಲೇ ಅವನು ತಲೆಕೊಡವಿದ್ದು ಕಾಣಿಸುತ್ತಿತ್ತು.

‘ಹೋಗ್ಲಿ, ಹಾದರದ ವಿಷಯ ಹಾಳಾಗ್ಲಿ, ನಮ್ಮಪ್ಪ ಅಮ್ಮನ್ನ ಚೆನ್ನಾಗಿ ನೋಡ್ಕೊಳ್ಳಿಲ್ಲ ಅನ್ನೋ ವಿಷಯಾನೂ ನೀನು ಬರೀಲಿಲ್ವಲ್ಲ. ನಂದೇ ಪ್ರಪಂಚದಲ್ಲಿ ಮುಳುಗಿದ್ದೆ. ಓಡಾಟ, ಓದು, ಬರಹ, ಕೆಲಸ, ಸಭೆ, ಸಮಾರಂಭ, ಇಸ್ಪೀಟು, ಸಿನಿಮಾ, ನಾಟಕ, ಕ್ಲಬ್ಬು, ಸ್ನೇಹಿತರು ಮಣ್ಣು ಮಸೀಂತ ಅದ್ರಲ್ಲೇ ಮುಳುಗಿದ್ದವನು, ಅದೇ ಮನೇಲೇ ಒಂದು ಕೋಣೇಲಿದ್ದವ್ರನ್ನ ಸಹಾ ತಿಂಗ್ಳಾನುಗಟ್ಲೆ ಮಾತಾಡಿಸ್ತಿರ‍್ಲಿಲ್ಲ. ಹಬ್ಬಾನೋ ಮತ್ತೊಂದೋ ಇದ್ದ ದಿನ ಅಮ್ಮ ನನ್ನ ತಲೆಗೆ ಎಣ್ಣೆ ಒತ್ತಿ ನೀರು ಹಾಕ್ಬೇಕು ಅಂತ ಎಷ್ಟು ಆಸೆ ಪಡ್ತಿದ್ಳು. ಸೀಗೇಕಾಯಿಂದ ಕಣ್ಣುರಿಯತ್ತೆ ಅಂದು ತಪ್ಪಿಸ್ಕೊಳ್ತಿದ್ದೆ. ಅವಳು ಸೀಗೆ ತೊಗೊಂಡು ಮೈ ಉಜ್ಜಿದ್ರೆ ನಂಗೆ ಏನೋ ತಪ್ಪಿತಸ್ತ ಭಾವನೆ ಕಾಡೋದು. ʻಈ ಪ್ರೀತೀಗೆ ನಾನು ಅರ್ಹಾನಾʼ ಅನ್ನಿಸಿಬಿಡೋದು. ಸಂಭ್ರಮವಾಗಿ ಹಬ್ಬದಡುಗೆ ಮಾಡಿ ಪ್ರೀತಿಯಿಂದ ಬಡಿಸಿದ್ರೆ ʻಚೆನ್ನಾಗಿದ್ಯಮ್ಮʼ ಅಂತ ಕೂಡಾ ಹೇಳ್ದೆ ʻನಾನು ತಿಂದಿದ್ದೇ ಒಂದು ಮಹದುಪಕಾರʼ ಅಂತ ಅವಳಿಗನ್ನಿಸೋ ಹಾಗೆ ಮಾಡ್ತಿದ್ನಲ್ಲ, ನನ್ನಂತವನಿಗೆ ಕ್ಷಮೆ ಇದೆಯಾ?’

‘ಇಡೀ ಜೀವಮಾನ ʻಸತ್ಯʼ ಅನ್ನೋ ಆದರ್ಶಕ್ಕಾಗಿ ಬಾಳಿದವರು ನಮ್ಮಪ್ಪ. ಒಂದು ದಿನ, ಒಂದೇ ಒಂದಿನ ಕೂಡಾ ಒಬ್ರನ್ನ ನೋಯಿಸಿದವರಲ್ಲ. ಇಡೀ ನಮ್ಮ ಬಂಧು ಬಳಗಕ್ಕೆಲ್ಲಾ ಪರಮಾಪ್ತರು. ಸಜ್ಜನಿಕೆಗೆ ಹೆಸರಾಗಿದ್ದೋರು. ಪರೋಪಕಾರಿಗಳು. ನಿಜವಾದ ಅರ್ಥದಲ್ಲಿ ವಿದ್ಯಾವಂತರು ಅವರು. ಅಂತವರ ಜೊತೆ, ಅಂಥಾ ಅಪ್ಪನೊಂದಿಗೆ, ನನ್ನ ಬಾಳುವೆ ಶುರುಮಾಡಿದ ಮೇಲೆ ಒಂದು ದಿನವೂ ಕೂತು ಕಷ್ಟ ಸುಖ ಮಾತಾಡ್ಲಿಲ್ಲ. ಸಲಹೆ ಕೇಳ್ಳಿಲ್ಲ. ʻನೀವು ಹೇಗಿದೀರಿʼ ಅನ್ಲಿಲ್ಲ. ನಿಜಕ್ಕೂ ಹೇಳ್ಬೇಕೂಂದ್ರೆ ನಂಗೆ ಅವರನ್ನೆದುರಿಸೋ ಆತ್ಮಸ್ಥೈರ್ಯ ಇರ‍್ಲಿಲ್ಲ. ʻಅವ್ರ ಪ್ರೀತಿ, ವಿಶ್ವಾಸಕ್ಕೆ ತಕ್ಕವನಲ್ಲ ನಾನುʼ ಅನ್ನೋ ಭಾವನೆ ಸದಾ ಕಾಡ್ತಿತ್ತು.

ಸತ್ಯಾನೇ ಜೀವನ ಅಂದ್ಕೊಂಡಿರೋ ಅವ್ರು, ಸುಳ್ಳಲ್ಲೇ ಬದುಕ್ತಿರೋ ನಾನು… ಹೊಂದಾಣಿಕೆ ಎಲ್ಲಿಂದ ಸಾಧ್ಯ? ಅವರಿಂದ ತಪ್ಪಿಸಿಕೊಳ್ಳಕ್ಕೆ ಏನೋ ಕೆಲಸದ ನೆಪ, ಬಿಡುವಿಲ್ಲದ ಸೋಗು. ಅವರೋ ಹನುಮಂತನ ಹಾಗೆ ಎಲ್ಲರೆದುರು ಎದೆಬಗಿದು ತೋರಿಸುವಷ್ಟು ಪರಿಶುದ್ಧರಾಗಿದ್ದರು. ಆದ್ರೆ ನಾನು…? ಇಲ್ಲ, ನಾನು ಎಂದೂ ಅವ್ರಿಗೆ ತಕ್ಕ ಮಗನಾಗಿರ‍್ಲಿಲ್ಲ. ಅವ್ರಿಬ್ರೂ ನನ್ನಿಂದ ಏನನ್ನು ಬಯಸ್ತಿದ್ರು ಹೇಳು. ಜೊತೆಗೆ ಕೂತು ನಗ್ತಾ ನಾಲ್ಕು ಮಾತು. ಅದನ್ನಾಡೋ ಯೋಗ್ಯತೇನೂ ಉಳಿಸಿಕೊಂಡಿರ‍್ಲಿಲ್ಲ. ಹಾಗಿದ್ರೂ ಅವ್ರು ಎಂದೂ ನನ್ನನ್ನ ದೂರ‍್ಲಿಲ್ಲ. ʻಪಾಪ ಅವನಿಗೆ ಬಿಡುವಿಲ್ಲದ ಕೆಲಸʼ ಅಂತ ನನ್ನ ತಪ್ಪನ್ನೇ ಸಮರ್ಥಿಸ್ತಿದ್ರಲ್ಲ’ ಎನ್ನುತ್ತಾ ತಲೆತಗ್ಗಿಸಿ ಮೌನವಾಗಿ ಬಿಕ್ಕತೊಡಗಿದ… ನನ್ನ ಕಣ್ಣಲ್ಲೂ ನೀರಾಡಿತು.

ಕಣ್ಣೀರು ಒರೆಸಿಕೊಳ್ಳುತ್ತಾ ‘ಹೋಗ್ಲಿ ಬಿಡು. ಅವರ ಕಡೆಯ ದಿನಗಳಲ್ಲಿ ನೀನು ತುಂಬಾ ಚೆನ್ನಾಗಿ ನೋಡಿಕೊಂಡೆ. ಒಳ್ಳೆಯ ಆಸ್ಪತ್ರೆಗೆ ಸೇರಿಸ್ದೆ. ಅವ್ರನ್ನ ಉಳಿಸ್ಕೊಳಕ್ಕೆ ನಿನ್ನ ಕೈಲಾದ ಎಲ್ಲಾ ಪ್ರಯತ್ನಾನೂ ಮಾಡ್ದೆ. ವಯಸ್ಸಾಗಿತ್ತು. ನಿನ್ಕೈಲಿ ಇನ್ನೇನು ಮಾಡಕ್ಕೆ ತಾನೇ ಸಾಧ್ಯ ಇತ್ತು? ಹೋಗುವಾಗಲೂ ಅಪ್ಪ ನಿನ್ನ ಕೈಹಿಡಿದುಕೊಂಡು ಕಣ್ಣಿಗೊತ್ತಿಕೊಂಡ್ರಲ್ಲಾ. ಅದಕ್ಕಿಂತ ಇನ್ನೇನು ಬೇಕು ಹೇಳು. ತಿಥಿ, ಕರ್ಮಾಂತರಗಳಲ್ಲಿ ಯಾವ ಲೋಪಾನೂ ಇಲ್ದೆ ಧಾರಾಳವಾಗಿ ಮಾಡಿ ಬಂಧು ಬಳಗದವರೆಲ್ಲಾ ʻಇದ್ರೆ ನಿನ್ನಂಥ ಮಗ ಇರ‍್ಬೇಕು. ಅವರೆಷ್ಟು ಪುಣ್ಯವಂತರುʼ ಅಂತ ನಿನ್ನ ಹಾಡಿ ಹೊಗಳಿದರಲ್ಲ.

ಅಮ್ಮಾನೂ ಅವತ್ತು ʻಒಳ್ಳೆಯ ಮಗನಾಗಿ ಚೆನ್ನಾಗಿ, ಸಾರ್ಥಕವಾಗಿ ನಿನ್ನ ಕರ್ತವ್ಯ ಪೂರೈಸಿದ್ಯಪ್ಪʼ ಅಂತ ನಿನ್ನ ಹರಸಿದಳಲ್ವಾ. ಅದನ್ನೆಲ್ಲಾ ಒಂದಿಷ್ಟೂ ಲೋಪವಿಲ್ಲದೆ ಬರ‍್ದಿದೀನಲ್ವಾ’ ಎಂದೆ. ‘ಅವಳೇನೋ ಹಾಗಂದ್ಲು ಆದ್ರೆ ಅದು ನನ್ನ ತಪ್ಪಿತಸ್ಥ ಭಾವನೆಯನ್ನು ಇನ್ನೂ ಹೆಚ್ಚು ಮಾಡ್ತು. ಅವ್ಳು ತೃಣವನ್ನೂ ಬೃಹತ್ತಾಗಿ ಭಾವಿಸಿದ್ಲು. ಆದ್ರೆ ನಂಗೆ ನಿಜವಾಗ್ಲೂ ಆ ಮಾತನ್ನು ಅರಗಿಸಿಕೊಳ್ಳೋ ಯೋಗ್ಯತೆ ಇತ್ತಾ ಹೇಳು. ಅಪ್ಪ ಸತ್ತ ಆರು ತಿಂಗಳಿಗೇ ಅವ್ಳೂ ಹಿಂದೇನೇ ಹೋದ್ಲು. ಈಗನ್ಸತ್ತೆ ಅವ್ಳು ಸತ್ತು ಬದುಕಿಕೊಂಡ್ಳು ಅಂತ. ಅಪ್ಪನ ಸಾವಿನ ಹೊಸತು. ನನ್ನಲ್ಲಿನ್ನೂ ಮೊದಲಿನ ಉದಾಸೀನ ಬಂದಿರ‍್ಲಿಲ್ಲ. ಆಗೀಗ ಅವ್ಳನ್ನ ಮಾತಾಡಿಸ್ಕೊಂಡಿದ್ದೆ. ಯಾವುದೋ ರೋಗ ರುಜಿನ ಬಂದು, ನರಳಾಡಿ, ನನ್ನಲ್ಲಿ ಅನಾದರ ಆವರಿಸಿಕೊಳ್ಳಕ್ಕೆ ಮುಂಚೇನೇ ಮಲಗಿದ್ದ ಹಾಗೇ ದಾಟ್ಕೊಂಡ್ಬಿಟ್ಳು. ಪುಣ್ಯಾತ್ಗಿತ್ತಿ ಅವ್ಳು. ನೀನೇ ಹೇಳು ನಾನು ಅವ್ಳಿಗೆ ತಕ್ಕ ಮಗಾನಾ? ಇದನ್ನಾದ್ರೂ ಬರೀಬಹುದಿತ್ತಲ್ವಾ?’. ಸ್ವಲ್ಪ ಯೋಚನೆಗೆ ಬಿದ್ದೆ. ನಂತರ ನಿಧಾನವಾಗಿ ‘ಹ್ಞೂಂ… ಬರೀಬಹುದಿತ್ತೇನೋ. ಆದ್ರೆ ಅದ್ರಿಂದ ಯಾರಿಗೆ ಪ್ರಯೋಜನ ಇತ್ತು ಹೇಳು. ನಿನ್ನ ಪರಿಚಿತರು, ಬಂಧು ಬಾಂಧವರೆಲ್ಲಾ ಇವತ್ಗೂ ನೀನು ಅಪ್ಪ ಅಮ್ಮನ್ನ ಪ್ರೀತಿ, ಆದರಗಳಿಂದ ನೋಡ್ಕೊಂಡೆ ಅಂತಾನೇ ತಿಳ್ಕೊಂಡಿದಾರೆ. ನೀನಾಗ್ನೀನೇ ʻಅದೆಲ್ಲಾ ನಿಜ‌ ಅಲ್ಲʼ ಅಂತ ಈಗ್ಹೇಳಿ ಕಾಲ ಮೇಲೆ ಕೆಸರು ಸುರ‍್ಕೋಬೇಕಾ?’ ಅನ್ನುತ್ತಾ ಮತ್ತೆ ಸಿಗರೇಟು ಪ್ಯಾಕಿಗೆ ಕೈಹಾಕಿದೆ…

‘ನಾನು ಏನು ಕೇಳಿದ್ರೂ ಇನ್ನೊಂದೇನೋ ರೆಡಿಮೇಡ್‌ ಉತ್ತರ ಇಟ್ಕೊಂಡೇ ಕೂತಿದೀಯ. ಅವೆಲ್ಲಾ ಹುಗಿದುಹೋಗಿರೋ ಹಳೆಯ ಕತೆಗಳು ಅಂತ ನನ್ನ ಬಾಯ್ಮುಚ್ಚುಸ್ತೀಯಲ್ಲ, ನನ್ನ ಮುದ್ದಿನ ಮಗಳಿಗೆ ಹುಡುಕಿ ಹುಡುಕಿ ʻಮನೀಷೆʼ ಅಂತ ಹೆಸರಿಟ್ಟಿದ್ದೆ. ಅವ್ಳ ಬಗ್ಗೇನಾದ್ರೂ ಬರೀಬಹುದಿತ್ತಲ್ವಾ. ತುಂಬಾ ಹಚ್ಚಿಕೊಂಡುಬಿಟ್ಟಿದ್ದೆ ಅವಳನ್ನ. ಅವ್ಳೂ ಕೂಡಾ ಎಲ್ಲಾದಕ್ಕೂ ʻಅಪ್ಪಾ ಅಪ್ಪಾʼ ಅನ್ನುತ್ತಾ ನನ್ನ ಹಿಂದೇನೇ ಇರ‍್ತಿದ್ಲು. ʻಈ ಫ್ರಾಕ್‌ ನಂಗೆ ಚೆನ್ನಾಗಿ ಕಾಣ್ತಿದ್ಯಾಪ್ಪ?ʼ ʻನನ್ನ ಫ್ರೆಂಡ್‌ಮನೇಗೆ ಹೋಗ್ತಿದೀನಿʼ ʻನನ್ನ ಬರ್ಥ್‌ಡೇಗೆ ಏನು ತೆಕ್ಕೊಡ್ತೀಯಾ?ʼ ʻನಂಗೆ ಇಂಜಿನೀರಿಂಗ್‌ ಇಷ್ಟ ಇಲ್ಲ, ಲಿಟರೇಚರ್‌ ತೊಗೊಳ್ಳಾ?ʼ ಹೀಗೆ ಒಂದೊಂದನ್ನೂ ನನ್ನ ಕೇಳೇ ಮಾಡ್ತಿದ್ದೋಳು, ತನ್ನ ಗಂಡನ್ನ ಹುಡುಕಿಕೊಳ್ಳೋವಾಗ ಮಾತ್ರಾ ನಂಗೆ ಸುಳಿವೂ ಬಿಟ್ಕೊಡ್ಲಿಲ್ವಲ್ಲ.

ಸೀದಾ ಬಂದು ʻನಮ್ಮ ಲೆಕ್ಚರರ್‌ನ ಪ್ರೀತಿಸ್ತಿದೀನಿ. ನಿಂತು ಮದುವೆ ಮಾಡ್ತೀಯಲ್ವಾಪ್ಪʼ ಅಂದಳಲ್ಲ ನಂಗೆ ಮೈಯೆಲ್ಲಾ ಉರಿದುಹೋಗಿ ʻಜಾತಿಯಿಲ್ಲ, ಕುಲವಿಲ್ಲ. ಅಂತಸ್ತಿಲ್ಲ; ಏನಿದೆ ಅಂತ ಅವ್ನನ್ನ ಮಾಡ್ಕೊತಿದೀಯ?ʼ ಅಂದ್ರೆ ʻನೀನೂ ಹೀಗೆ ಯೋಚಿಸ್ತಿ ಅಂತ ಗೊತ್ತಿರ‍್ಲಿಲ್ಲಾಪ್ಪ. ಇವತ್ತಿನವರ‍್ಗೂ ನಿನ್ನನ್ನ ತುಂಬಾ ವಿಶಾಲ ಹೃದಯಿ ಅಂತ ತಿಳ್ಕೊಂಡಿದ್ದೆ. ಜಾತಿ ಮತ ಅಂತಸ್ತು ಇಂತಹ ಕ್ಷುಲ್ಲಕ ವಿಷಯಗಳು ನಿನ್ನನ್ನೂ ಕಾಡತ್ತಾಪ್ಪ. ಐ ಆಮ್‌ ಟೋಟಲಿ ಡಿಸಪಾಯಿಂಟೆಡ್‌ ವಿತ್‌ ಯುವರ್‌ ಆಟಿಟ್ಯೂಡ್‌ʼ ಅಂತ ಅಳ್ತಾ ಮನೆಯಿಂದ ಹೊರಟೇಹೋದಳು.

ನಂಗೆ ʻಜಾತಿ ಅಂತಸ್ತು ಹೆಚ್ಚಾಗಿತ್ತಾʼ ಅಥ್ವಾ ʻತನ್ನ ಪ್ರೇಮದ ಸುಳಿವನ್ನೂ ನಂಗೆ ಕೊಡ್ದೇ ತನ್ನದೇ ನಿರ್ಧಾರ ತೆಗೆದುಕೊಂಡ್ಳಲ್ವʼ ಅನ್ನೋ ಕೋಪ ಹೆಚ್ಚಾಗಿತ್ತಾ, ಅಥವಾ ಎರಡೂ ಮುಖ್ಯ ಆಗಿತ್ತಾ. ಈ ದ್ವಂದ್ವದ ಬಗ್ಗೆ ನೀನು ಬರೀಲೇ ಬೇಕಿತ್ತು. ಈಗ ನಂಗೆ ಅವ್ಳು ಬೇಕು ಅಂತ ತುಂಬಾ ಅನ್ನಿಸ್ತಿದೆ. ಅವತ್ತು ಅವಳಮ್ಮ ಮಗಳನ್ನ ದೂರ ಮಾಡ್ಕೋಬೇಡಿ ಅಂತ ಅಂಗಲಾಚಿ ಬೇಡ್ಕೊಂಡ್ಳು. ಅದ್ಯಾಕೋ ನಾನು ಹಟಹಿಡಿದ್ಬಿಟ್ಟೆ. ಇನ್ನವಳು ನಂಗೆ ಸಿಕ್ತಾಳಾ? ಇದನ್ನ ಓದಿದ್ಮೇಲಾದ್ರೂ ಅವ್ಳು ವಾಪಸ್ಸು ನನ್ನ ಹತ್ರ ಬರ‍್ಬಹುದು ಅಂದ್ಕೊಂಡಿದ್ದೆ. ನೀನು ಅಷ್ಟನ್ನೂ ಮಾಡ್ಲಿಲ್ಲ” ಮತ್ತೆ ದೂರಿದ.

‘ಸರಿ, ನಿನ್ನ ಮಗ. ನೀನು ಎಷ್ಟೋ ಜನ ವಿದ್ಯಾರ್ಥಿಗಳನ್ನ ಸಮಾಜ ಸುಧಾರಕರಾಗೋದಕ್ಕೆ ಹುರಿದುಂಬಿಸುತ್ತಾ ಇರೋದನ್ನ ನೋಡಿ ತಾನೂ ಒಂದು ಮಗು ಇರೋ ವಿಧವೇನ ಮದುವೆ ಮಾಡ್ಕೊಂತೀನಿ ಅಂತ ಹೇಳ್ದ. ಆದ್ರೆ ನಿನ್ನ ವಿಚಾರ ಏನು? ಸುಧಾರಣೆ ಏನೇ ಇದ್ರೂ ಅದನ್ನ ಕಂಡವರ ಮಕ್ಕಳು ಮಾಡ್ಬೇಕು. ನಮ್ಮ ಮಕ್ಕಳು ಮಾತ್ರಾ ನಮ್ಮ ಸಾಮಾಜಿಕ ಚೌಕಟ್ಟಿನಲ್ಲೇ ಬದುಕಬೇಕು. ಆದರ್ಶ ಹೇಳಕ್ಕೆ, ಬದ್ನೆಕಾಯಿ ತಿನ್ನಕ್ಕೆ ಅಲ್ವಾ” ಸ್ವಲ್ಪ ಖಾರವಾಗೇ ಕೇಳಿದೆ. ಸ್ವಲ್ಪ ಹೊತ್ತು ಮೌನವಾಗಿದ್ದವನು ನಿಧಾನವಾಗಿ ‘ಅದು ಹಾಗಲ್ಲ… ಮನೀಷೆ ವಿಷಯ ಹಾಗಾದ್ಮೇಲೆ ಆಕಾಶನ ವಿಷಯದಲ್ಲಿ ನಾನು ಅಷ್ಟು ಕಠಿಣನಾಗ್ತಿರ‍್ಲಿಲ್ಲ. ವಿಷಯ ಏನ್ಗೊತ್ತಾ, ಆ ಹುಡುಗಿ… ಮೇದಿನಿ… ಅವಳಮ್ಮ ಮಾಲಿನಿ ನನ್ನ ಒಂದು ಕಾಲದ ಒಬ್ಬ ಪ್ರೇಯಸಿ… … ಅವ್ಳನ್ನ ಮರ‍್ತೂಬಿಟ್ಟಿದ್ದೇನ್ನು. ಈ ವಿಷಯ ಆಕಾಶಂಗೆ ಗೊತ್ತಿಲ್ವಲ್ಲ. ಆ ಸಾಧ್ಯತೇನೂ ಇರ‍್ಲಿಲ್ಲ. ಆಕಾಶ ಮೇದಿನಿ ಬಗ್ಗೆ ಹೇಳುವಾಗ ಅವಳಮ್ಮನ ವಿಷಯಾನೂ ಸಾಂದರ್ಭಿಕವಾಗಿ ಹೇಳಿ ʻಈಗ ಅವಳಪ್ಪ, ಅಮ್ಮ ಇಬ್ರೂ ಇಲ್ಲʼ ಅಂದ ಅಷ್ಟೇ. ನಂಗೆ ಆಘಾತವಾಯ್ತು. ಹೇಗೆ ಒಪ್ಕೊಳಕ್ಕೆ ಸಾಧ್ಯ ಹೇಳು. ನಿಜ ಹೇಳಕ್ಕಾಗ್ತಿತ್ತಾ, ಅದಕ್ಕೇ ವಿರೋಧಿಸ್ದೆ. ಅವ್ನೂ ಮನೀಷೆಯ ತರಹಾನೇ ಕೋಪ ಮಾಡ್ಕೊಂಡು ಹೊರಟ್ಹೋದ. ಈ ವಿಷಯದಲ್ಲಿ ನನ್ನ ಬಗ್ಗೇನೇ ನಂಗೆ ಹೀನಾಯವಾಗ್ತಿದೆ. ಅಷ್ಟೇ ಅಲ್ಲ, ಅವತ್ತು ಇದರ ಬಗ್ಗೆ ʻಅವಳು ಮಾಲಿನಿಯ ಮಗಳುʼ ಅನ್ನೋದಷ್ಟನ್ನೇ ಯೋಚಿಸಿದ್ದೆ. ನಿನ್ನ ಹತ್ತ ಎಲ್ಲಾನೂ ಹೇಳಿ ಮುಗಿಸಿದ ಮೇಲೆ ನನ್ನ ತಲೇನಲ್ಲಿ ʻಅವಳಿಗೆ ಮದುವೆಯಾಗಿತ್ತಾ, ಬೇರೆಯವರೊಂದಿಗೂ ಸಖ್ಯವಿತ್ತಾʼ, ಅಥವಾ… ಅಥವಾ… ʻಮೇದಿನಿ ನನ್ನ ಮಗಳೇನಾʼ ಅನ್ನೋ ಅನುಮಾನಾನೂ ಕಾಡಕ್ಕೆ ಶುರುವಾಯ್ತು. ಅಕಸ್ಮಾತ್‌ ಅವ್ಳು ನನ್ನ ಮಗಳೇ ಆಗಿದ್ರೆ ಆಕಾಶ್‌ ತನ್ನ ಸ್ವಂತ ತಂಗೀನೇ ಮದ್ವೆ ಮಾಡ್ಕೊಂಡ ಹಾಗಲ್ವಾ’ ಎನ್ನುತ್ತಾ ತಲೆಯನ್ನು ಜೋರಾಗಿ ಕೊಡವಿ ಯೋಚನೆಯಲ್ಲೇ ಮುಳುಗಿಹೋದ…

ಇನ್ನೊಂದು ಸಿಗರೇಟನ್ನು ಹಚ್ಚಿಕೊಂಡು ಕಿಟಕಿಯ ಕಡೆಗೆ ನೋಡಿದೆ. ಐದು ಗಂಟೆಯಿರಬಹುದೇನೋ… ಬೆಳಕು ಸ್ವಲ್ಪ ಹೆಚ್ಚಿದೆ… ಇದನ್ನೆಲ್ಲಾ ಬರೆಯಲು ಸಾಧ್ಯವೇ? ಬರೆದು ಹಗುರಾಗುವುದು ನಿಜವೇ… ನನ್ನಲ್ಲೇ ಮಂಥನ ಆರಂಭವಾಯಿತು. ಅವನು ನನ್ನನ್ನೇ ನಿರೀಕ್ಷಿಸುತ್ತಾ ಕುಳಿತಿದ್ದ. ಬೂದಿಯನ್ನು ಟ್ರೇನಲ್ಲಿ ಕೊಡವುತ್ತಾ ‘ನೋಡು, ಇದನ್ನು ಬರೆದು ಪ್ರಯೋಜನವಿಲ್ಲ. ಮಗಳ ಸಖ್ಯ ಬೇಕಾದರೆ ಅವಳ ಹತ್ತಿರ ಹೋಗು. ಪ್ರೀತಿಯಿಂದ ಮಾತಾಡ್ಸು, ಕೈಚಾಚಿ ಕರಿ. ಅವಳಿಗೂ ಅಪ್ಪ ಬೇಕಲ್ವಾ. ಖಂಡಿತಾ ಬಂದೇ ಬರ‍್ತಾಳೆ. ಅಹಂ ಬಿಡ್ಬೇಕು ಅಷ್ಟೇ. ಇನ್ನು ಆಕಾಶ್‌ ವಿಷಯ… ನಿನ್ನ ಅನುಮಾನ ಹೇಳಿ ಅವರ ಸಂಸಾರವನ್ನ ಹಾಳ್ಮಾಡ್ಬೇಡ. ಅವರಿರೋ ಹಾಗೆಯೆ ಅವರನ್ನ ಒಪ್ಪಿಕೊಂಡು ಬರಮಾಡ್ಕೋ. ಈಗ ಮನಸ್ಸಿಂದ ಎಲ್ಲಾನೂ ಹೊರಹಾಕಿ‌ ಒಂಥರಾ ನೆಮ್ಮದಿಯಾಗಿದೆಯಲ್ವಾ?’

‘ನಿಜ, ನೀನು ಹಾಕಿದ ಸವಾಲಲ್ಲಿ ಸೋತಿದೀನಿ. ʻನನ್ನ ಜೀವನ ಏನುʼ ಅನ್ನೋದನ್ನ ಆತ್ಮರತಿಯಿಲ್ಲದೆ ನೋಡಿಕೊಳ್ಳಕ್ಕೆ ನನ್ನಿಂದ ಸಾಧ್ಯವಿಲ್ಲ, ʻಪ್ರಾಮಾಣಿಕತೆ ಇಲ್ಲʼ ಅಂತ ಒಪ್ಕೋತೀನಿ. ಮತ್ತೆ ಮತ್ತೆ ಬರಿ ಅಂತ ತಲೆತಿನ್ಬೇಡ’ ಎನ್ನುತ್ತಾ ಸಿಗರೇಟನ್ನು ಆಷ್‌ಟ್ರೇನಲ್ಲಿ ಹೊಸಕಿ ಹಾಕಿದೆ. ಬೆಳಕು ಹರಿಯುತ್ತಿತ್ತು. ಮೇಜಿನ ಡ್ರಾವರ್‌ ಎಳೆದು ಬರೆದಿಟ್ಟಿದ್ದ ಹಾಳೆಗಳನ್ನು ತೆಗೆದು ಎಲ್ಲಕ್ಕೂ ಕಾಟುಗೆರೆ ಹಾಕಿ ಕೊನೆಯಲ್ಲಿ

‘ಬರೆಯಲಾರೆ ಎಂದೂ ನನ್ನಾತ್ಮ ಚರಿತ್ರೆಯನ್ನು,
ತೆರೆದಿಡಲಾರೆ ಜಗದೆದುರು ನಿಜವಾದ ನನ್ನನ್ನು…’

ಎಂದು ಬರೆದು ಮುಗಿಸಿ ಕುರ್ಚಿಯ ಹಿಂಬಾಗಕ್ಕೆ ತಲೆಯೊರಗಿಸಿ ಕಣ್ಮುಚ್ಚಿದೆ. ಅವನ್ಯಾವಾಗ ಎದ್ದುಹೋದನೋ ತಿಳಿಯಲಿಲ್ಲ…

‍ಲೇಖಕರು Admin

October 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: