ಟಿ ಎನ್ ಸೀತಾರಾಂ ಅವರ ಕಳೆದು ಹೋದ ಚಪ್ಪಲಿ

ಟಿ ಎನ್ ಸೀತಾರಾಂ ಅವರ ಆತ್ಮಕಥನದ ಮೊದಲ ಭಾಗ ಈ ವಾರ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಪುಸ್ತಕಗಳನ್ನು ಅತ್ಯಂತ ಪ್ರೀತಿಯಿಂದ, ಮುದ್ದಾಗಿ ಪ್ರಕಟಿಸುವ ‘ಸಾವಣ್ಣ ಪ್ರಕಾಶನ’ದಿಂದ ಈ ಕೃತಿ ಪ್ರಕಟಗೊಳ್ಳುತ್ತಿದೆ.

ಈ ಭಾನುವಾರ ( ಡಿಸೆಂಬರ್ 10 ರಂದು ) ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ.

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕೃತಿ ಬಿಡುಗಡೆ ಮಾಡುತ್ತಿದ್ದಾರೆ.

ಟಿ ಎನ್ ಸೀತಾರಾಂ ಅವರ ಆತ್ಮಕಥನದ ಅನೇಕ ತುಣುಕುಗಳು ಆಗಿಂದಾಗ್ಗೆ ‘ಅವಧಿ’ಯಲ್ಲಿ ಪ್ರಕಟಗೊಂಡಿವೆ.

ಪುಸ್ತಕ ಬಿಡುಗಡೆಯ ಈ ಹೊತ್ತಲ್ಲಿ ಕೃತಿಯ ಒಂದು ಭಾಗ ಕಳೆದು ಹೋದ ಚಪ್ಪಲಿ ನೆನಪನ್ನು ಅವಧಿಯ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ.

ಟಿ ಎನ್ ಸೀತಾರಾಂ

—–

ನಾನು ಮಿಡ್ಲ್ ಸ್ಕೂಲ್‌ನಿಂದ ಹೈಸ್ಕೂಲಿಗೆ ಬಂದ ಮೇಲೆ ನಮಗೆ ಯೂನಿಫಾರ್ಮ್‌ ಎಂಬ ಕಾನ್ಸೆಪ್ಟ್ ಶುರುವಾಯಿತು. ನಮ್ಮ ಹೈಸ್ಕೂಲ್‌ ಯೂನಿಫಾರ್ಮ್‌ ಎಂದರೆ ಮಾಮೂಲಿಯ ಯಾವುದಾದರೂ ಒಂದು ಬಟ್ಟೆಯ ಜೊತೆಗೆ ತಲೆಯ ಮೇಲೆ ಒಂದು ಟೋಪಿ ಹಾಕಿಕೊಳ್ಳುವುದು ಮಾತ್ರ ಕಡ್ಡಾಯವಾಗಿತ್ತು ಅಷ್ಟೆ. ಕಾಲಿಗೆ ಶೂ ಮುಂತಾದವು ಇರಲಿಲ್ಲ. ಆಗ ನನ್ನ ಬಳಿ ಕಾಲಿಗೆ ಚಪ್ಪಲಿಯೂ ಇರಲಿಲ್ಲ. ನಮ್ಮ ಮನೆಯಲ್ಲಿ ತೆಗೆದುಕೊಡುತ್ತಿರಲೂ ಇಲ್ಲ.

ಆಗಷ್ಟೇ ಹೈಸ್ಕೂಲಿಗೆ ಸೇರಿದ್ದೆ. ನಾಲ್ಕೈದು ಜನ ಹುಡುಗರು ಮಾತ್ರ ಕಾಲಿಗೆ ಚಪ್ಪಲಿ ಹಾಕಿಕೊಂಡು ಬರುತ್ತದ್ದಿರು. ಅವರೆಲ್ಲ ಸಾಹುಕಾರರ ಮನೆಯ ಮಕ್ಕಳೆಂದು ನಾವು ಮಿಕ್ಕ ಹುಡುಗರು ಮಾತನಾಡಿಕೊಳ್ಳುತ್ತಿದ್ದೆವು. ನಮ್ಮ ಯಾರ ಬಳಿಯೂ ಚಪ್ಪಲಿ ಇರಲಿಲ್ಲ. ಮಕ್ಕಳಿಗೆ ಚಪ್ಪಲಿ ತೆಗೆದುಕೊಡುವ ಅಭ್ಯಾಸವೇ ಆಗಿನ ಕಾಲದಲ್ಲಿ ಇರಲಿಲ್ಲ.

ಆಗ ನಾಲ್ಕೈದು ರೂಪಾಯಿಗೆಲ್ಲಾ ಒಂದು ಜೊತೆ ಚಪ್ಪಲಿ ಬರುತ್ತಿತ್ತು. ಯಾರಾದರೂ ಒಂದು ಜೊತೆ ಚಪ್ಪಲಿ ತೆಗೆದುಕೊಂಡರೆ ಟೈರ್‌ನಿಂದ ರಿಸೋಲ್‌ ಮಾಡಿಸಿ ಮಿನಿಮಮ್‌ ನಾಲ್ಕು ವರ್ಷ ಬಾಳಿಕೆ ಬರುವಂತೆ ಹಾಕಿಕೊಳ್ಳುತ್ತದ್ದಿರು. ಅಂಥದ್ದರಲ್ಲಿ ಚಿಕ್ಕವರು ಚಪ್ಪಲಿ ಹಾಕಿಕೊಂಡರೆ ಅದು ದೊಡ್ಡ ಲಕ್ಷುರಿ ಎನ್ನುವ ಭಾವ ನಮ್ಮಲ್ಲೆಲ್ಲಾ ಇತ್ತು.

ಅಂಥಾ ಸಮಯದಲ್ಲಿ ಒಮ್ಮೆ ವಿಜಯಲಕ್ಷ್ಮಿ ಎನ್ನುವ ಹೆಣ್ಣುಮಗಳೊಬ್ಬಳು ಬಂದು ನಮ್ಮ ಕ್ಲಾಸಿಗೆ ಸೇರಿಕೊಂಡಳು. ಈ ವಿಜಯಲಕ್ಷ್ಮಿ ಯಾರು ಎಂದರೆ ತ್ರಿವೇಣಿಯವರ ಕೊನೆ ಕೊನೆಯ ಕಾದಂಬರಿಗಳನ್ನು ಬರೆದು ಮುಗಿಸಿದ ಒಬ್ಬರು ಬರಹಗಾರ್ತಿ ಇದ್ದರು ಎಂ.ಸಿ. ಪದ್ಮ ಎಂದು. ಅವರ ತಂಗಿ ಈಕೆ.

ಆಕೆಯ ತಂದೆ ದೊಡ್ಡಬಳ್ಳಾಪುರದಲ್ಲಿ ಸ್ಟೇಷನ್‌ ಮಾಸ್ಟರ್‌. ನಮ್ಮ ಮನೆಯ ಎಡಭಾಗದಲ್ಲಿ ಎರಡು ಕಿ.ಮೀ. ದೂರದಲ್ಲಿ ನಮ್ಮ ಸ್ಕೂಲು ಇತ್ತು. ಬಲಭಾಗದಲ್ಲಿ ಒಂದು ಕಿ.ಮೀ. ಆಚೆ ರೈಲ್ವೇ ಸ್ಟೇಷನ್‌ ಕ್ವಾರ್ಟರ್ಸ್‌ ಇತ್ತು. ನಮ್ಮ ಮನೆಯ ಬಳಿಯದ್ದಿ ಸರ್ಕಲ್‌ ದಾಟಿಯೇ ಆ ಹುಡುಗಿ ಶಾಲೆಗೆ ಹೋಗಬೇಕಿತ್ತು. ನಮ್ಮ ಶಾಲೆಯಲ್ಲಿಯೇ ಪ್ರಭು ಎಂದು ಒಬ್ಬ ಹುಡುಗನದ್ದಿ. ಅವನು ಇನ್ನೊಬ್ಬ ಸ್ಟೇಷನ್‌ ಮಾಸ್ಟರ್‌ ಅವರ ಮಗ. ಅವರಿಬ್ಬರು ಜೊತೆಯಾಗಿ ಮಾತನಾಡಿಕೊಂಡು ಶಾಲೆಗೆ ಬರುತ್ತದ್ದಿರು. ಅವರಿಬ್ಬರಿಗೂ ಮನೆಯಲ್ಲಿ ಬೆಲ್ಟ್ ಚಪ್ಪಲಿ ಕೊಡಿಸದ್ದಿರು. ಕೆಂಪು ಬಣ್ಣದ ಚಪ್ಪಲಿ.

ಆ ಚಪ್ಪಲಿಯೇ ಚೆನ್ನಾಗಿತ್ತೋ ಅಥವ ಆ ಹೆಣ್ಣುಮಗಳು ಹಾಕಿಕೊಂಡದ್ದಿರಿಂದ ಅದು ಚೆನ್ನಾಗಿ ಕಾಣಿಸುತ್ತಿತ್ತೋ ಗೊತ್ತಿಲ್ಲ. ನನಗೂ ಅಂಥ ಚಪ್ಪಲಿ ಬೇಕೇ ಬೇಕೆಂದು ಮನಸಿನಲ್ಲಿ ಆಸೆ ಶುರು ಆಯಿತು. ನಾನು ನನ್ನ ತಾಯಿಯ ಬಳಿ ಅಂಥದ್ದೊಂದು ಚಪ್ಪಲಿ ಬೇಕೇ ಬೇಕು ಎಂದು ಅಳುತ್ತಾ ಹಠ ಹಿಡಿದು ಕುಳಿತೆ.

ಪ್ರಭು ಮತ್ತು ವಿಜಯಲಕ್ಷ್ಮಿಯ ಕಾಲುಗಳನ್ನೇ ಅವರು ಬರುತ್ತಾ ಹೋಗುತ್ತಾ ನೋಡುತ್ತಿದ್ದೆ. ಪ್ರಭು ಮತ್ತು ವಿಜಯಲಕ್ಷ್ಮಿ ಇಬ್ಬರೂ ನನಗಿಂತ ಬಹಳ ಬುದ್ಧಿವಂತರು. ಪರೀಕ್ಷೆಗಳಲ್ಲಿ ನನಗಿಂತ ಹೆಚ್ಚು ಅಂಕಗಳನ್ನು ಪಡೆಯುತ್ತದ್ದಿರು. ಇಬ್ಬರೂ ಅಂಕ ಜಾಸ್ತಿ ತೆಗೆಯುತ್ತಾರೆ, ಬೆಳ್ಳಗಿದ್ದಾರೆ, ಈಗ ಚಪ್ಪಲಿಯನ್ನೂ ಧರಿಸುತ್ತಾರೆ ಎಂಬೆಲ್ಲಾ ಕಾರಣದಿಂದಾಗಿ ಅವರಿಬ್ಬರ ಮೇಲೆ ಅಪಾರ ಅಸೂಯೆ ನನಗೆ ಉಂಟಾಗಿತ್ತು. ಮೊದಲು ಪ್ರಭುವಿನ ಬಳಿ ಚಪ್ಪಲಿ ಇರಲಿಲ್ಲ. ವಿಜಯಲಕ್ಷ್ಮಿ ಬಂದ ಮೇಲೆ ಅವನೂ ಚಪ್ಪಲಿ ಹಾಕಿಕೊಂಡು ಬರತೊಡಗದ್ದಿರಿಂದ ಈ ಅಸೂಯೆ ಅಪಾರ ಹೊಟ್ಟೆಯುರಿಯಾಗಿ ರೂಪಾಂತರಗೊಂಡಿತ್ತು.

ನನಗೆ ತಡೆದುಕೊಳ್ಳಲು ಸಾಧ್ಯವಾಗಲೇ ಆಗಲಿಲ್ಲ. ನನಗೆ ಚಪ್ಪಲಿ ಬೇಕೇ ಬೇಕು ಎಂದು ಅಮ್ಮನನ್ನು ಪೀಡಿಸಲಾರಂಭಿಸಿದೆ. ಕಾಲಿಗೆ ಬೇಕೆಂದು ಮುಳ್ಳು ಚುಚ್ಚಿಸಿಕೊಂಡು ಬಂದು ಅಮ್ಮನಿಗೆ ತೋರಿಸಿ ಕರುಣೆ ಹುಟ್ಟಿಸಿದೆ. ಒಬ್ಬನಿಗೆ ಕೊಡಿಸಿದರೆ ಮಿಕ್ಕ ಮಕ್ಕಳಿಗೂ ಕೊಡಿಸಬೇಕಲ್ಲ. ಸಮಾನತೆ ಇರಬೇಕಲ್ಲ. ಆದರೆ ಎಲ್ಲರಿಗೂ ಕೊಡಿಸುವಷ್ಟು ದುಡ್ಡು ಅಮ್ಮನ ಹತ್ತಿರ ಇರಲಿಲ್ಲ.

ಗೌರಿಬಿದನೂರಿನಲ್ಲಿ ನಮ್ಮ ಪಕ್ಕದ ಮಾವಿನ ತೋಪು ಕೊಂಡದ್ದಿರಿಂದ ಅವರ ಬಳಿಯೂ ಹಣ ಇರುತ್ತಿರಲಿಲ್ಲ.

ನಾನು ಅಮ್ಮನ ಬಳಿ ತುಂಬಾ ಹಠ ಮಾಡಿದ ಮೇಲೆ ಅಮ್ಮ ಅಪ್ಪನಿಗೆ ಗೊತ್ತಾಗದಂತೆ ಒಂದು ಚಪ್ಪಲಿ ತೆಗೆದುಕೊಡುವ ನಿರ್ಧಾರ ಮಾಡಿದರು. ಅಂತದೇ ಕೆಂಪು ಬೆಲ್ಟಿನ ಚಪ್ಪಲಿ ಬೇಕೆಂದು ಅಂಗಡಿಗೆ ಹೋದಾಗ, ಅದರ ಬೆಲೆ ಹತ್ತು ರೂಪಾಯಿಯೋ ಹನ್ನೆರಡು ರೂಪಾಯಿಯೋ ಏನೋ ಬೆಲೆ ಇತ್ತು. ನಿಖರವಾಗಿ ಎಷ್ಟು ಎಂದು ಮರೆತುಹೋಗಿದೆ. ಅಮ್ಮ ನನಗೆ ಒಂದು ಜೊತೆ ಚಪ್ಪಲಿ ಕೊಡಿಸಿದರು. ತುಂಬಾ ಚೆನ್ನಾಗಿತ್ತು. ನನಗೆ ಸಂತೋಷವೋ ಸಂತೋಷ.

ನಮ್ಮ ಮನೆಯಲ್ಲಿ ಈಗ ನನಗೆ ಮಾತ್ರ ಚಪ್ಪಲಿ ಬಂದಿತ್ತು. ಬೇರೆ ಯಾರಿಗೂ ಚಪ್ಪಲಿ ಇರಲಿಲ್ಲ. ಅವರಿಗೆ ಕೊಡಿಸುವುದು ಸಾಧ್ಯವಿರಲಿಲ್ಲ. ನನಗೆ ಕೊಡಿಸಿದ್ದು ಗೊತ್ತಾದರೆ ಮಿಕ್ಕ ಮಕ್ಕಳಿಗೂ ಬೇಸರವಾಗುತ್ತಿತ್ತು. ಹಾಗಾಗಿ ಅಮ್ಮ ಒಂದು ಉಪಾಯ ಮಾಡಿದರು. ಚಪ್ಪಲಿ ಹಾಕಿಕೊಂಡು ಮನೆಗೆ ಬರುವ ಹಾಗಿಲ್ಲ, ಪುಸ್ತಕದ ಬ್ಯಾಗಿನ ಜೊತೆ ಇನ್ನೊಂದು ಬ್ಯಾಗು ಇಟ್ಟುಕೊಂದು ಅದರಲ್ಲಿ ಚಪ್ಪಲಿ ಇಟ್ಟುಕೊಂಡು ಬರಬೇಕು. ಮನೆಯಿಂದ ಕಾಂಪೌಂಡು ದಾಟಿ ರಸ್ತೆಗೆ ಹೋಗುವವರೆಗೆ ಅದು ಆ ಬ್ಯಾಗಿನಲ್ಲಿಯೇ ಇರಬೇಕು. ರಸ್ತೆಗೆ ಹೋದ ಮೇಲೆ ಯಾರೂ ನೋಡದೆ ಇರುವ ಸಮಯದಲ್ಲಿ ಅದನ್ನು ತೆಗೆದು ಧರಿಸಿಕೊಂಡು ಶಾಲೆಗೆ ಹೋಗಬೇಕು. ಒಂದೆರಡು ದಿನ ಹಾಗೇ ಮಾಡಿದೆ. ಬ್ಯಾಗಿನಲ್ಲಿ ಚಪ್ಪಲಿ ಇಟ್ಟುಕೊಳ್ಳುವುದೇನೋ ನನಗೆ ಸರಿ ಹೋಗಲಿಲ್ಲ.

ನಮ್ಮ ಬೀದಿಯ ಕೊನೆಯಲ್ಲಿ ನನ್ನ ಗೆಳೆಯ ವೆಂಕಟೇಶ (ಆಗ ಹೆಳಿದ ಗೋಲಿ ವೆಂಕಟೇಶ ಅಲ್ಲ) ಎಂದು ಒಬ್ಬ ಇದ್ದ. ಅವನು, ನಾನು ಒಂದೇ ತರಗತಿ. ಶಾಲೆಯಿಂದ ಬರುವಾಗ ಚಪ್ಪಲಿಯನ್ನು ಅವನ ಮನೆಯಲ್ಲಿ ಇಟ್ಟು ಬರುತ್ತೇನೆ, ಶಾಲೆಗೆ ಹೋಗುವಾಗ ಹಾಕಿಕೊಂಡು ಹೋಗುತ್ತೇನೆ ಎಂದು ನಿರ್ಧಾರ ಮಾಡಿ ಅವನಿಗೆ ಹೇಳಿದೆ. ಅವನು ಒಪ್ಪಿಕೊಂಡ.

ವಿಜಯಲಕ್ಷ್ಮಿ ಮತ್ತು ಪ್ರಭು ಇಬ್ಬರ ಚಪ್ಪಲಿಗಿಂತ ನನ್ನ ಚಪ್ಪಲಿ ನೋಡಲು ಚೆನ್ನಾಗಿತ್ತು. ನನಗೆ ಪರಮಾನಂದವಾಯಿತು. ಅದನ್ನು ಹಾಕಿಕೊಂಡರೆ ಮಾಯಾ ಚಪ್ಪಲಿ ಹಾಕಿಕೊಂಡು ಆಕಾಶದಲ್ಲಿ ಮೋಡಗಳ ಮೇಲೆ ಓಡಾಡುವಷ್ಟು ಸುಖ ಸಿಗುತ್ತಿತ್ತು. ಅದನ್ನು ಹಾಕಿಕೊಂಡು ಸ್ಟೈಲ್‌ ಆಗಿ ಅವರಿಬ್ಬರನ್ನು ಸೋಲಿಸುವ ಕನಸು ಕಾಣುತ್ತಿದ್ದೆ. ಮೂರ್ನಾಲ್ಕು ದಿವಸ ಆಗುವ ವೇಳೆಗೆ ಒಂದು ಆಘಾತಕಾರಿ ಸುದ್ದಿ ತಿಳಿಯಿತು. ನಾನು ಅವರ ಮನೆಯಲ್ಲಿ ಚಪ್ಪಲಿ ಇಟ್ಟಿದ್ದಾಗ ವೆಂಕಟೇಶ ಹಾಕಿಕೊಂಡು ಓಡಾಡುತ್ತಾನೆ ಎಂಬ ಮಾಹಿತಿ ಯಾರೋ ನನಗೆ ಹೇಳಿದರು.

ಹಾಗಾಗಿ ನಾನು ಅವನ ಮನೆಯಲ್ಲಿ ಚಪ್ಪಲಿ ಇಡುವ ತೀರ್ಮಾನವನ್ನು ವಾಪಸ್‌ ತೆಗೆದುಕೊಂಡೆ. ಅಲ್ಲಿಂದ ನಂತರ ಸ್ಕೂಲ್‌ ಬ್ಯಾಗ್‌ನಲ್ಲಿ ಆ ಚಪ್ಪಲಿಗಳನ್ನು ಮುಚ್ಚಿಟ್ಟುಕೊಂಡು ಹೋಗಿ ಸ್ಕೂಲ್‌ ಹತ್ತಿರ ಅವನ್ನು ಹಾಕಿಕೊಳ್ಳುವುದು ಮತ್ತು ಮನೆ ಹತ್ತಿರ ಬಂದಾಗ ಬ್ಯಾಗ್‌ನಲ್ಲಿ ಮುಚ್ಚಿಟ್ಟುಕೊಂಡು ಮನೆಗೆ ವಾಪಸ್‌ ತರುವುದು ಮಾಡುತ್ತಿದ್ದೆ.

ಆ ಚಪ್ಪಲಿ ಬಹಳ ಅಂದವಾಗಿತ್ತು. ಹೊಳಪಾಗಿತ್ತು. ದಿನವಿಡೀ ಚಪ್ಪಲಿ ಹಾಕಿಕೊಳ್ಳುವುದಕ್ಕೆ ನನಗೆ ಮನಸ್ಸೇ ಬರುತ್ತಿರಲಿಲ್ಲ. ಅದು ಹಾಳಾಗುತ್ತದೆ ಎಂಬ ಭಯ. ವಿಜಯಲಕ್ಷ್ಮಿ ಮತ್ತು ಪ್ರಭು ಓಡಾಡುವಾಗ ನಾನೂ ಅವರ ಮುಂದೆ ಚಪ್ಪಲಿ ಹಾಕಿಕೊಂಡು ನಡೆಯುತ್ತಿದ್ದೆ. ಆಮೇಲೆ ಬಹುತೇಕ ಸಮಯ ಬ್ಯಾಗಿನಲ್ಲಿಯೇ ಇಟ್ಟುಕೊಳ್ಳುತ್ತಿದ್ದೆ. ಎಲ್ಲಿ ಆ ಚಪ್ಪಲಿಯ ಹೊಳಪು ಕಳೆದುಹೋಗುತ್ತದೋ ಅನ್ನುವುದು ನನ್ನ ಆತಂಕವಾಗಿತ್ತು.

ಅಕ್ಕಂದಿರು ತಂಗಿ ತಮ್ಮ ಇವರೆಲ್ಲರಿಂದ ಎಷ್ಟೇ ಈ ಹೊಸ ಚಪ್ಪಲಿಯ ವಿಚಾರ ಮುಚ್ಚಿಟ್ಟರೂ ಒಬ್ಬ ಅಕ್ಕನಿಗೆ ಮಾತ್ರ ಈ ವಿಚಾರ ಗೊತ್ತಾಗಿ ಹೋಯಿತು. ಅಕ್ಕ ಜಯಲಕ್ಷ್ಮಿಗೆ. ಅವಳು ಮಾರನೆಯ ದಿನ ಸ್ನೇಹಿತೆಯರ ಜತೆ ಘಾಟಿ ಸುಬ್ರಹ್ಮಣ್ಯಕ್ಕೆ ಪಿಕ್ನಿಕ್‌ ಹೋಗಬೇಕಾಗಿತ್ತು. ನಮ್ಮೂರಿನಿಂದ ಘಾಟಿ ಸುಬ್ರಹ್ಮಣ್ಯ ಎಂಟು-ಹತ್ತು ಮೈಲು ದೂರವಿತ್ತು. ಅಲ್ಲಿಗೆ ಬೆಳಿಗ್ಗೆ ಹೋಗಿ ಸಂಜೆ ವಾಪಸ್‌ ಬರುವುದು. ಅಕ್ಕ ನನ್ನ ಬೆನ್ನು ಬದ್ದಿಳು. `ಅಲ್ಲಿಗೆ ಹೋಗಿ ಬರುವುದಕ್ಕೆ ಒಮ್ಮೆ ಕೊಡೋ, ಒಂದ್ಸಲ ಕೊಡೋ, ಇಲ್ಲದದ್ದಿರೆ ಚಪ್ಪಲಿ ವಿಷಯ ಎಲ್ಲರಿಗೂ ಹೇಳುತ್ತೇನೆ’ ಎಂದು ಹೆದರಿಸಿದಳು. ನಾನು ನನ್ನ ರಹಸ್ಯವನ್ನು ಉಳಿಸಿಕೊಳ್ಳಬೇಕಾದರೆ ಅವಳಿಗೆ ಚಪ್ಪಲಿ ಕೊಡುವುದು ಅವಶ್ಯವಾಗಿತ್ತು. ಚಪ್ಪಲಿಯನ್ನು ಅವಳಿಗೆ ಕೊಟ್ಟೆ. ಅವಳು ಆ ಚಪ್ಪಲಿ ಹಾಕಿಕೊಂಡು ಘಾಟಿ ಸುಬ್ರಹ್ಮಣ್ಯಕ್ಕೆ ಹೋದಳು. ಬರುವಾಗ ಮಾತ್ರ ಅವಳ ಕಾಲಲ್ಲಿ ಚಪ್ಪಲಿ ಇರಲಿಲ್ಲ. ಅಲ್ಲೇ ಮರೆತು ಬಂದದ್ದಿಳು. ನನಗೆ ಎದೆ ಒಡೆದಂತಾಯಿತು. ಮತ್ತೆ ಎಂದಿನಂತೆ ಚಪ್ಪಲಿ ಇಲ್ಲದೆ ಓಡಾಡಲು ಶುರು ಮಾಡಿದೆ.

ನಾನು ಹಣ ಸಂಪಾದಿಸಲು ಶುರುಮಾಡಿದ ಮೇಲೆ ಅವತ್ತು ವಿಜಯಲಕ್ಷ್ಮಿ, ಪ್ರಭು ಹಾಕಿಕೊಂಡದ್ದಿಂತಹ, ನಾನು ಕಳೆದುಕೊಂಡದ್ದಿಂತಹ ಚಪ್ಪಲಿ ಬೇಕು ಎಂದು ತುಂಬಾ ಹುಡುಕಾಡಿದೆ. ನೂರಾರು ಜತೆ ಚಪ್ಪಲಿ ಕೊಂಡರೂ ಅಷ್ಟು ಚಂದದ ಚಪ್ಪಲಿ ಮತ್ತೆ ಸಿಗಲೇ ಇಲ್ಲ.

ಅವತ್ತು ಹಾಗೆ ಚಪ್ಪಲಿ ಕಳೆದುಕೊಂಡ ನಂತರ ಸುಮಾರು ವರ್ಷ ನನಗೆ ಚಪ್ಪಲಿ ಹಾಕಿಕೊಳ್ಳಲು ಆಗಲೇ ಇಲ್ಲ. ದಾರಿಯಲ್ಲೆಲ್ಲಾ ಅಂಥ ಕೆಂಪು ಬೆಲ್ಟ್ನ ಚಪ್ಪಲಿ ಹಾಕಿಕೊಂಡ ಪಾದಗಳನ್ನು ಎಷ್ಟೋ ವರ್ಷ ಹುಡುಕುತ್ತಲೇ ಇದ್ದೆ.

ವೆಂಕಟೇಶ ಈಚೆಗೆ ಮೂರ್ನಾಲ್ಕು ವರ್ಷಗಳ ಹಿಂದೆಯಷ್ಟೇ ಹೋಗಿಬಿಟ್ಟ. ಧಾರವಾಡದ ಯೂನಿವರ್ಸಿಟಿಯಲ್ಲಿ ಸ್ಟಾಟಿಸ್ಟಿಕ್ಸ್ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತದ್ದಿ. ಅವನ ತಮ್ಮ ದೊಡ್ಡಬಳ್ಳಾಪುರದಲ್ಲಿ ಲಾಯರ್‌, ನನ್ನ ಸ್ನೇಹಿತ. ವೆಂಕಟೇಶ ಹೋದ ಸುದ್ದಿ ನನಗೆ ಈಚೆಯಷ್ಟೆ ತಿಳಿಸಿದ.

ಎಷ್ಟೋ ವರ್ಷಗಳ ನಂತರ ಅಂದರೆ ಸುಮಾರು ಹದಿನೈದು ವರ್ಷಗಳ ಹಿಂದೆ ಇನ್‌ಕಮ್‌ ಟ್ಯಾಕ್ಸ್ ಡಿಪಾರ್ಟ್‌ಮೆಂಟಿಗೆ ನನ್ನ ಗೆಳೆಯನೊಬ್ಬನನ್ನು ನೋಡಲು ಹೋದಾಗ ಅಕಸ್ಮಾತ್ತಾಗಿ ವಿಜಯಲಕ್ಷ್ಮಿ ಸಿಕ್ಕರು. ಅವರು ಅಲ್ಲಿಯೇ ಕೆಲಸ ಮಾಡುತ್ತದ್ದಿರು ಎಂದು ತಿಳಿಯಿತು. ಇಬ್ಬರೂ ಒಟ್ಟಿಗೆ ಕಾಫಿ ಕುಡಿದೆವು. `ಮುಕ್ತ’ ಧಾರಾವಾಹಿ ನಡೆಯುತ್ತದ್ದಿ ಕಾಲ ಅದು. ಆ ವೇಳೆಗೆ ನಾನೂ ಸ್ವಲ್ಪ ಸೆಲೆಬ್ರೆಟಿ ಆಗಿದ್ದೆ. ಆ ನಂತರ ಏನಾಯಿತೋ ಗೊತ್ತಿಲ್ಲ. ಅವರು ಫೋನಿಗೆ ಸಿಕ್ಕಲಿಲ್ಲ. ಅವರ ಫೋನ್‌ ಕೂಡ ಸರ್ವೀಸ್‌ನಲ್ಲಿಲ್ಲ.

‍ಲೇಖಕರು avadhi

December 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: