-ಪ್ರತಿಭಾ ನಂದಕುಮಾರ್
೧ .ಟೀಪು ಸುಲ್ತಾನನ ಕನಸು
ಆ ರಾತ್ರಿ ಕನಸಿನಲ್ಲಿ ಸುಲ್ತಾನ್ ಟೀಪು
ಆನೆಯ ಮೇಲೆ ಕೂತು ನದಿ ದಾಟುತ್ತಿದ್ದಾಗ
ಎರಡು ಆನೆಗಳು ಕಾದಾಡಬಹುದೆಂದು
ಊಹಿಸಿ ಹೌದಾದಿಂದಿಳಿದು ಬೆಟ್ಟ
ಹತ್ತಿದನಂತೆ ಸಾವಿರ ಮೆಟ್ಟಿಲು ಹರಕೆ ತೀರಿಸಲು
ಅಲ್ಲಿ ಅರಿಷಿನ ಅರೆಯುತ್ತಿದ್ದ ಘಮಲು
ಕುಂಕುಮದ ಕೆಂಪು ಕೆಂಡಸಂಪಿಗೆಯ ಅಮಲು
ಅಲ್ಲಿ ಕಾದಿತ್ತು ಕಾಡಿತ್ತು ಕನವರಿಸಿತ್ತು
ಗೆದ್ದ ಹುಮ್ಮಸ್ಸು ಕರಗಿ ಕನ್ನಡಿ ಪ್ರತಿಫಲಿಸಿ
ಅವನದೇ ತಳಮಳದ ಮನಸ್ಸು
ಯಾವ ದೇವರದೇನು ಹೋಯಿತು ಗಂಟು
ಸಿದ್ಧರಾಟದ ಹಳೆಯ ಕಿತಾಪತಿಯ ನಂಟು
ಹಾಸಿದ ಕಡೆ ತಪ್ಪದು ನಮಾಜಿನ ಹುಕುಮು
ಅಲ್ಲಿ ಹರಕೆ ತೀರಿಸಲು ಕೊಟ್ಟು ಕೊಳಗ ದೀಪದ ಕಂಬ
ಇಲ್ಲಿ ಹನುಮಂತನ ಗುಡಿಯಲ್ಲಿ ಕಟ್ಟಿಸಿ ತಾಯಿತ
ಗೆದ್ದು ಬೊಮ್ಮನ್ ಗಳ ಹೃದಯ ನಿದ್ದೆ ತಿಳಿದೆದ್ದು
ಬರೆದಿಟ್ಟ ನೆಲದ ಜನರು ಅರಿಯದ ಮಾತಿನಲ್ಲಿ
ಕರೆದು ಕಾಸು ಕೊಟ್ಟು ತರ್ಜುಮಾ ಮಾಡಿಸಿ ಹಂಚಿ
ಡಂಗುರ ಸಾರಿಸಿದ ಕನಸಿನಲ್ಲಿ ಕಂಡ ಫಕೀರನ
ಕರೆದು ತಂದು ನಿಲ್ಲಿಸಿದರೆ ಕೊಡುವೆ ಇನಾಮು
ಅದರಾಸೆಗೆ ಎದ್ದುಬಿದ್ದು ಮಾಡಿದರೆ ತಕರಾರು
ಕೊನೆಗೆ ಹಬ್ಬವಿಲ್ಲಾ ಗಬ್ಬು ಕೊಳೆತು ನಾರು.
ಟಿಪ್ಪುವಾದರೂ ಕನಸಿನಿಂದೆದ್ದ
ಎದ್ದಿಲ್ಲ ಇವರು.
೨ .ಗಂಡು ವೇಷಧಾರಿ ಹೆಣ್ಣು
ಸುಂದರ ಸೈನಿಕನೊಬ್ಬ ಬಂದಿದ್ದ
ಸುಲ್ತಾನ ಟೀಪುವಿನ ಭೇಟಿಗೆ.
ಎಂದೂ ಇಲ್ಲದೇ ಅಂದು ಸುಲ್ತಾನ ಆ
ಅಪರಿಚಿತ ತರುಣನೊಂದಿಗೆ
ನಗೆಚಾಟಿಕೆಯ ಮಾತನ್ನಾಡಿದ
ಹೆಣ್ಣುಗಳೊಂದಿಗೆ ಸರಸವಾಡಿದಂತೆ
ಮರುಕ್ಷಣ ವಿವೇಕ ಎಚ್ಚರಿಸಿತು
ತರವಲ್ಲ ಇದು ರಾಜ ಗಾಂಭೀರ್ಯವಲ್ಲ
ಚುಟುಕಾಗಿ ಮಾತು ಮುಗಿಸಿ ಕಳಿಸಿದ.
ಎರಡು ಹೆಜ್ಜೆ ಇಟ್ಟ ಯುವಕ ತಿರುಗಿ ನಿಂತ
ನಸುನಗುತ್ತಾ ತಲೆಯ ರುಮಾಲು ಕಳಚಿ
ಮಾರುದ್ದ ರೇಷ್ಮೆ ಕೂದಲು ಇಳಿಬಿಟ್ಟು
ಕವಚ ಸಡಿಲಿಸಿ ತೋರ ಮೊಲೆಯನ್ನು ತೋರಿದ
ಅರೆರೇ! ಹೆಣ್ಣಿದು, ಗಂಡುವೇಷ ಧರಿಸಿದ್ದ.
ತಕ್ಷಣ ಎದ್ದು ಸುಲ್ತಾನ ಮರ್ಯಾದೆಯಲ್ಲಿ
ಆಸನದಲ್ಲಿ ಕುಳ್ಳಿರಿಸಿ ಸೂಕ್ತ ಸಂಭಾಷಣೆಯಲ್ಲಿ
ತೊಡಗಿದ ಇರುಳು ಕಳೆದು ಹಗಲು ಮೂಡುವವರೆಗೆ.
ಕನಸು ಹರಿದು ನಿದ್ದೆ ತಿಳಿದೆದ್ದು
ಸುಲ್ತಾನ ಆ ಯುದ್ಧ ಗೆದ್ದ
ಶತ್ರುಗಳು ಹೆಣ್ಣಿಗರಂತೆ ಪಲಾಯನ
ಮಾಡಿದರೆಂದು ಬೀಗಿದ.
ಕನಸಿನಲ್ಲಿ ಕಂಡ
ಗಂಡು ವೇಷಧಾರಿ ಹೆಣ್ಣು
ಕುಪ್ಪುಸದೊಳಗೆ ಬಚ್ಚಿಟ್ಟುಕೊಂಡಿದ್ದ
ಚಿಕ್ಕ ಚಾಕು ಬಗ್ಗೆ ಸುಲ್ತಾನನಿಗೆ ತಿಳಿಯಲಿಲ್ಲ.






0 Comments