ಶಿವಕುಮಾರ್ ಮಾವಲಿ
ದೃಶ್ಯ ೧ – ಗಾಂಧಿ ಬಜಾರ್, ಶಿವಮೊಗ್ಗ
ಗೆಳೆಯ ಸೂರಿ ಮತ್ತು ನಾನು ಯಾವುದೇ ಒತ್ತಡವಿಲ್ಲದೆ ಒನ್ ವೇ ಟ್ರಾಫಿಕ್ ರಸ್ತೆಯಾದ ಗಾಂಧಿ ಬಜಾರಿನಲ್ಲಿ ಅಮಿರ್ ಅಹ್ಮದ್ ಸರ್ಕಲ್ ಕಡೆ ಇಬ್ಬರೂ ಪೃತ್ಯೇಕ ಬೈಕ್ ನಲ್ಲಿ ಬರುತ್ತಿದ್ದೆವು.
ಸರ್ಕಲ್ ಬಳಿ ನಿಂತಿದ್ದ ಟ್ರಾಫಿಕ್ ಪೋಲೀಸ್ ನನ್ನು ದೂರದಿಂದಲೇ ನೋಡಿದ ನಾವು ಅಲ್ಲಿಯೇ ಬೈಕ್ ಗಳನ್ನು ನಿಲ್ಲಿಸಿಕೊಂಡೆವು. ಮುಂದೆ ಹೋಗುವುದೋ ಬೇಡವೋ ಎಂಬ ಚರ್ಚೆ ನಡೆಸಿ ಕೊನೆಗೂ ಹೋಗಿಯೇ ಬಿಡೋಣ ಎಂದು ಹೊರೆಟೆವು. ಸೂರಿ ದೊಡ್ಡಪೇಟೆ ಪೋಸ್ಟ್ ಆಫೀಸ್ ಕಡೆ ಗಾಡಿ ತಿರುಗಿಸಿಕೊಂಡು ಹೋಗಿಬಿಟ್ಟ. ನಾನು ಕೆ.ಅರ್.ಪುರ ರಸ್ತೆಗೆ ಗಾಡಿ ತಿರುಗಿಸಬೇಕೆನ್ನುವಷ್ಟರಲ್ಲಿ ನಮ್ಮನ್ನೇ ಗುರಾಯಿಸುತ್ತ ನಿಂತಿದ್ದ ಟ್ರಾಫಿಕ್ ಪೋಲೀಸ್ ನನ್ನೆಡೆಗೆ ಓಡಿಬಂದು ಹಿಡಿಯಲು ಪ್ರಯತ್ನಿಸಿದ. ನಾನು ಜೋರಾಗಿ ಎಕ್ಸಲೇಟರ್ ಕೊಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಅದೃಷ್ಟ ಕೈಕೊಟ್ಟಿತು ನೋಡಿ ಗಾಡಿ ಸ್ಕಿಡ್ ಆಗಿ ಬಿದ್ದುಬಿಟ್ಟೆ.
ಅನಾಮತ್ತಾಗಿ ಪೊಲೀಸ್ ಕೈಗೆ ಸಿಕ್ಕಿಬಿದ್ದೆ. ಶುರುವಾಯಿತು ನೋಡಿ ಬೈಗುಳಪ್ರಹಾರ ; ‘ ಯಾಕ್ರೀ ಬಿದ್ದು ಸಾಯ್ತೀರ. ನಮ್ಮನ್ನು ನೋಡೀನೂ ತಪ್ಪಿಸಿಕೊಂಡು ಹೋಗೋದಿಕ್ಕೆ ನೊಡ್ತೀರಲ್ಲ. ನಾವು ನಿಮ್ಮ ಕಣ್ಣಿಗೇನು ಜೋಕರ್ ಗಳ ಥರ ಕಾಣ್ತೀವಾ? ನೀವು ಬೀಳೋದಿರ್ಲಿ ಯಾರಾದ್ರೂ ವಯಸ್ಸಾದೋರು ಅಡ್ಡ ಸಿಕ್ರೆ ಹೆದರಿ ಹಾರ್ಟ್ ಅಟ್ಯಾಕ್ ಆಗಿ ಸತ್ತೇ ಹೋಗ್ತಾರೆ ನೀವು ಮಾಡೋ ಧಿಮಾಕಿಗೆ.” ಎನ್ನುತ್ತಲೇ ಗಾಡಿಯ ಕೀ ತೆಗೆದುಕೊಂಡು ‘ಸೈಡಿಗೆ ಹಾಕ್ರಿ ಗಾಡೀನ’ ಅಂದ.
ಇಷ್ಟೆಲ್ಲ ಗೊಣಗುತ್ತಿದ್ದರೂ ನನ್ನನ್ನು ಮೇಲೆತ್ತುವುದನ್ನು ಆತ ಮರೆತಿರಲಿಲ್ಲ. ‘ ಸಾರಿ ಸರ್. ಇದು ಒನ್ ವೇ ಅಂತ ನನಗೆ ಗೊತ್ತಿರ್ಲಿಲ್ಲ. ಅದಕ್ಕೆ ನಿಲ್ಲಿಸಿಕೊಂಡ್ವಿ ಅವನು ನನ್ ಫ್ರೆಂಡ್ ಏನಾಗಲ್ಲ ಹೋಗ್ಬೋದು ಅಂದ ಅದಕ್ಕೆ ಹೊರಟ್ವಿ ಸರ್’ ಎಂದೆ. ಅದಕ್ಕಾತ ‘ ಹೌದ್ರಿ. ದಿನಾ ನೊಡ್ತೀನಿ ನಾನವರನ್ನ .ಅವರನ್ನೇ ಹಿಡಿಯೋಕೆ ಅಂತ ಬಂದೆ ತಪ್ಪಿಸಿಕೊಂಡ್ ಬಿಟ್ರು. ನೀವು ಎಜುಕೇಟೆಡ್ ಥರ ಕಾಣಸ್ತೀರ ಯಾಕ್ರಿ ಹೀಗ್ ಮಾಡ್ತೀರಿ? ” ಎಂದ.
‘ಇಲ್ಲ ಸರ್. ನಿಜವಾಗಿಯೂ ನನಗೆ ಗೊತ್ತಿರಲಿಲ್ಲ ..ಪ್ಲೀಸ್ ಬಿಟ್ಟುಬಿಡಿ ‘ ಅಂದೆ. ‘ನಮ್ ಸಾಹೇಬರ ಹತ್ರ ಬನ್ನಿ fine ಕಟ್ಟಿ ಗೊತ್ತಾಗುತ್ತೆ ‘ ಅಂದ. ‘ಅಲ್ಲೆಲ್ಲ ಹೋಗೋದ್ ಬೇಡ ಸರ್ ಇಲ್ಲೇ ಬಗೆ ಹರಿಸ್ಕೋಳ್ಳೊಣ’ ಅಂದಿದ್ದಕ್ಕೆ ಆತ ಹೇಳಿದ್ದನ್ನು ಕೇಳಿ ನನಗೆ ಆಶ್ಚರ್ಯ ಜೊತೆಗೆ ಅವಮಾನವೂ ಆಯಿತು. “ಇಲ್ಲಿ ಇಷ್ಟು ಜನ ನೋಡ್ತಾ ಇರ್ತಾರೆ. ನಾನು ನಿಮ್ಮನ್ನು ಹಿಡಿದು ನಿಲ್ಲಿಸೋಕೆ ಬರ್ತೀನಿ. ನೀವು ತಪ್ಪಿಸಿಕೊಂಡು ಹೋಗ್ತೀರ. ಇಲ್ಲಿರೋ ಜನ ಎಲ್ಲ ನನ್ನನ್ನ ನೋಡಿ ನಗ್ತಾರೆ. ಆಡ್ಕೋತ್ತಾರೆ. ಆಗ ನನಗೆಷ್ಟು ಅವಮಾನ ಆಗುತ್ತೆ ಗೊತ್ತಾ ಸರ್? ನೀವೇನೋ ತಪ್ಪಿಸಿಕೊಂಡು ಹೋದ, ಗೆದ್ದ ಖುಷಿಯಲ್ಲಿರಿರ್ತೀರಿ ಆದರೆ ನನಗೆ ಆಗುವ ಅವಮಾನ ಎಲ್ರೆದರು ನನ್ನನ್ನ ಅಣಕಿಸುತ್ತೆ. ಯಾಕಾದರೂ ಈ ಕೆಲಸಕ್ಕೆ ಸೇರಿದೆನೋ ಅಂತ ಬೇಸರ ಬರುತ್ತೆ. ನೀವೇನು ಕೆಲಸ ಮಾಡ್ತೀರಾ ಸರ್?” ಎಂದ.
ನಾನೊಬ್ಬ ಇಂಗ್ಲಿಷ್ ಲೆಕ್ಚರರ್ ಎಂದು ಕೊಂಚ ಗರ್ವದಿಂದಲೇ ಹೇಳಿದೆ. ಅದಕ್ಕಾತ, “ನೀವೇ ಹೇಳಿ. ನಿಮ್ಮ ಸ್ಟುಡೆಂಟ್ ಒಬ್ಬ, ನೀವು ಕರೀತಿರೋದನ್ನ ಲೆಕ್ಕಕ್ಕೆ ತೆಗೆದುಕೊಳ್ಳದೆ ಹಾಗೆ ಓಡಿ ಹೋದರೆ ನಿಮಗೆ ಬೇಸರ ಆಗೋದಿಲ್ವೆ?” ಎಂದು ಮರುಪ್ರಶ್ನೆ ಹಾಕಿದಾಗ ನಾನು ನಿರುತ್ತರಿಯಾದೆ.
ಇಷ್ಟೊತ್ತಿಗಾಗಲೆ ನಾವು ಅವರ ಸಾಹೇಬರ ಬಳಿ ಬಂದಿದ್ದೆವು. ಆದರೆ ಆತ ನನ್ನನ್ನು ನಿಲ್ಲಿಸಿಕೊಂಡು ಕೈಯಲ್ಲಿ ಕೀ ಇಡುತ್ತ ಹೀಗೆ ಹೇಳಿದ;’ ಪ್ರತಿ ಕೆಲಸಕ್ಕೂ ಅದರದ್ದೇ ಆದ ಡಿಗ್ನಿಟಿ ಇರುತ್ತೆ ಅಲ್ವಾ ಸರ್. ಅರ್ಜೆಂಟ್ ಲ್ಲಿ ಟ್ರಾಫಿಕ್ ರೂಲ್ಸ್ಗಳನ್ನು ಬ್ರೇಕ್ ಮಾಡಬೇಕಾದ ಅನಿವಾರ್ಯತೆ ಕೆಲವೊಮ್ಮೆ ಇರುತ್ತೆ. ಅದರೆ ನೀವು ಬಂದು ನಮ್ಮ ಬಳಿ ಅದನ್ನು ಹೇಳಿಕೊಂಡರೆ ನಾವು ಅರ್ಥ ಮಾಡಿಕೊಳ್ಳಲಾರದಷ್ಟು ಕೆಟ್ಟವರಾಗಿರುವುದಿಲ್ಲ. ಬದಲಾಗಿ ಜನ ಹೀಗೆ ನಮ್ಮನ್ನು ವಿಲನ್ ಗಳಂತೆ ನೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನೀವು ಫೈನ್ ಕಟ್ಟುವುದೇನು ಬೇಡ ಸರ್. ನಾನು ನ್ಯಾಷನಲ್ ಕಾಲೇಜಿನಲ್ಲಿ ಓದಿದ್ದು. ನಿಮ್ಮನ್ನು ಅನೇಕ ಬಾರಿ ಕುವೆಂಪು ರಂಗಮಮದಿರದ ನಾಟಕ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ನೋಡಿದ್ದೇನೆ. ನಿಮ್ಮ ಬಗ್ಗೆ ಆ ಗೌರವ ಇದೆ. ಇನ್ನೊಮ್ಮೆ ದಯವಿಟ್ಟು ಹೀಗೆ ಮಾಡಬೇಡಿ ಸರ್’
ಸರಿಯಾಗಿ ಆ ಸಮಯಕ್ಕೆ ಸೂರಿ ಕಾಲ್ ಮಾಡಿ,’ ಏನಾಯ್ತೋ? ಅವನು ಹಿಡಿದ್ನಾ? ನೀನ್ಯಾಕೆ ಸಿಗಾಕ್ಕೊಂಡೆಲೆ? ನಾನು ದಿನಾ ಅಲ್ಲೇ ಬರ್ತೀನಿ’ ಅಂದ. ಸ್ವಲ್ಪ ಹೊತ್ತಿನ ಮುಂಚೆ ನನಗೂ ಹಾಗೆ ಅನ್ನಿಸುತ್ತಿತ್ತು. ಟ್ರಾಫಿಕ್ ಪೊಲೀಸ್ ನಿಂದ ತಪ್ಪಿಸಿಕೊಂಡರೆ ಏನೋ ಗೆದ್ದ ಹಾಗೆ. ಆದರೆ ಈಗ ಆತನ ಮಾತುಗಳು ನನಗೆ ಕಪಾಳಮೋಕ್ಷ ಮಾಡಿದಂತಿದ್ದವು.
‘Of course, every job has dignity of labor and every jobber must acknowledge it ‘ ಅಂದುಕೊಳ್ಳುತ್ತ ಬೈಕ್ ಸ್ಟಾರ್ಟ್ ಮಾಡಿದೆ.
ಇದೇ ಅನುಭವವನ್ನು ಬೆಂಗಳೂರಿನಲ್ಲಿ ಇನ್ನೊಬ್ಬ ಟ್ರಾಫಿಕ್ ಪೊಲೀಸ್ ಬಳಿ ಬಳಸಲು ಹೋದಾಗ ಏನಾಯ್ತು ಅನ್ನೋದನ್ನ ದೃಶ್ಯ ೨ರಲ್ಲಿ ಹೇಳ್ತೀನಿ. ಅಲ್ಲಿಯ ತನಕ ನೀವು ಯಾವುದಕ್ಕೂ ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ತಿರಿ.






0 Comments